Wednesday, 23 July 2014

ಪ್ರೀತಿಯ ನಲವತ್ತು ರೀತಿಗಳು

ಜಗತ್ಪ್ರಸಿದ್ಧ ಚಿಂತಕ ಜಲಾಲ್-ಉದ್ದಿನ್ ರೂಮಿಯ ಗುರುವೇ ತಬ್ರೀಝಿ. 1185 ರಲ್ಲಿ ಇರಾನದ ತಬ್ರೀಝಿಯಲ್ಲೇ ಹುಟ್ಟಿದ ಈತ, ವೃತ್ತಿಯಿಂದ ನೇಕಾರ, ಪ್ರವೃತ್ತಿಯಿಂದ ಕವಿ ಮತ್ತು ತತ್ವಜ್ಞಾನಿ. ಎಂದೂ ಸಂತೆಯಲ್ಲಿ ನಿಂತು ಮಾತನಾಡಿದವನಲ್ಲ. ಈತನ ಶಿಷ್ಯ ಜಲಾಲ್-ಉದ್ದಿನ ರೂಮಿಯಷ್ಟೂ ಪ್ರಸಿದ್ಧನಾಗದ ಈತ 1248 ರಲ್ಲಿ ಖೋಯ್‍ದಲ್ಲಿ ನಿಧನನಾದ. 15 ನವೆಂಬರ್, 1244 ರಲ್ಲಿ ಭೇಟ್ಟಿಯಾದ ರೂಮಿ ಮತ್ತು ಈತನ ಮಧ್ಯದ ಸ್ನೇಹ ಕೇವಲ 40 ದಿನಗಳದ್ದು. ಶಾಮ್ಸ್ ತಬ್ರೀಝಿಯ ಮನಸ್ಸು ಸೂಫಿಗಳದ್ದು. ನಿರಂತರ ಅಲೆಮಾರಿಯಾಗಿದ್ದ ಈತ, ಬುಟ್ಟಿ-ಕೈಚೀಲುಗಳನ್ನು ಹೆಣೆದು ಮಾರಾಟಮಾಡುತ್ತ ಹೊಟ್ಟೆ ತುಂಬಿಸಿಕೊಂಡ. ಜಗಳಗಂಟನಾಗಿದ್ದ ತಬ್ರೀಝಿ ಯಾರನ್ನೂ, ಯಾವುದನ್ನೂ ಸರಳವಾಗಿ ಒಪ್ಪಿಕೊಳ್ಳಲಿಲ್ಲ. ತಬ್ರೀಝಿಯ ಬದುಕಿನಲ್ಲಿ ಕುತೂಹಲಕಾರಿಯಾದ ಎರಡೇ ಸಂಗತಿಗಳಿವೆ. ಒಂದು ಪ್ರೀತಿಯ ಆತನ 40 ರೀತಿಗಳು ಮತ್ತೊಂದು ಆತನ ನಿಗೂಢ ಸಾವು.

ಸಮಕಾಲೀನ ಸೂಫಿಗಳ ಪ್ರಕಾರ ನಿಗೂಢನಾಗಿದ್ದ ತಬ್ರೀಝಿ ಇದ್ದಕ್ಕಿದ್ದಂತೆ ನಿಗೂಢವಾಗಿಯೇ ಮರೆಯಾದ. ಕೆಲವರ ಪ್ರಕಾರ ತಬ್ರೀಝಿಯ ಪರಮಶಿಷ್ಯನೆಂದು ಕರೆಯಿಸಿಕೊಳ್ಳುವ ಜಲಾಲ್-ಉದ್ದಿನ ರೂಮಿಯ ಅನುಯಾಯಿಗಳಿಂದಲೇ ಕೊಲೆಯಾದ. ಏನಾದರೂ ಆಗಿರಲಿ ಇರಾನದ ಖೋಯ್‍ದಲ್ಲಿ ಆತನ ಸಮಾಧಿ ಮಾತ್ರ ಇದೆ. ರೂಮಿಯ ಮಗ ಸುಲ್ತಾನ್ ವಾಲದ್ ಈ ಸಮಾಧಿಯನ್ನು ಸುಂದರ ಕಲಾಕೃತಿಯನ್ನಾಗಿ ಅಮರಗೊಳಿಸಿದ್ದಾನೆ. 'ಮಕಾಲತ್-ಎ-ಶಾಮ್ಸ್-ಎ ತಬ್ರೀಝಿ' ಎನ್ನುವುದು ಆತನ ಏಕೈಕ ರಚನೆ. ಗದ್ಯ ರೂಪದಲ್ಲಿರುವ ಈ ಪರ್ಶಿಯನ್ ಪುಸ್ತಕ ಆತನ ವೃದ್ಧಾಪ್ಯದಲ್ಲಿ ರಚನೆಯಾಗಿದ್ದು, ಮಾಗಿದ ಮನಸ್ಸೊಂದರ ಮಹಾನ್ ಸ್ವಗತವಾಗಿದೆ. ಆತ ಹೇಳುವ ಪ್ರೀತಿಯ 40 ರೀತಿಗಳು ಹೀಗಿವೆ-
  

1. ನಾವು ದೇವರನ್ನು ಹೇಗೆ ನೋಡುತ್ತೇವೆ ಎನ್ನುವುದು ನಮ್ಮನ್ನು ನಾವು ಹೇಗೆ ನೋಡುತ್ತೇವೆ ಎನ್ನುವುದನ್ನೇ ಅವಲಂಬಿಸಿದೆ. ಆತನ ಸ್ಮರಣೆ, ಭಯ ಮತ್ತು ಆಪಾದನೆಗಳಿಂದಲೇ ತುಂಬಿರುವುದಾದರೆ ಅಷ್ಟೇ ಭಯ ಮತ್ತು ಆರೋಪಗಳು ನನ್ನೊಳಗೂ ಇವೆ ಎಂದರ್ಥ. ದೇವರು ಪ್ರೇಮಸ್ವರೂಪಿ ಹಾಗೂ ಸಹಾನುಭೂತಿಯಾಗಿ ಕಾಣುವುದಾದರೆ ನಾವೂ ಅದೇ ಆಗಿದ್ದೇವೆ ಎನ್ನುವುದು ದಿಟ.
2. ಸತ್ಯದ ದಾರಿ ಹೃದಯವನ್ನವಲಂಬಿಸಿದೆ, ಬುದ್ಧಿಯನ್ನಲ್ಲ. ಕಾರಣ ಹೃದಯವೇ ನಿಮ್ಮ ಗುರುವಾಗಿರಲಿ. ಬದುಕಿನ ಎಲ್ಲ ನಿರ್ಧಾರಗಳು ಹೃದಯದಿಂದ ನಿರ್ದೇಶಿಸಲ್ಪಡಲಿ. ಇಲ್ಲದೇ ಹೋದಲ್ಲಿ, ಅಹಂಕಾರ ನಿಮ್ಮನ್ನು ದೇವರಿಂದ ವಂಚಿತರನ್ನಾಗಿಸುತ್ತದೆ.
3. ಪ್ರಪಂಚದಲ್ಲಿ ಎಲ್ಲರಿಂದ ಎಲ್ಲವುಗಳಿಂದ ಪ್ರೇಮಸ್ವರೂಪಿ ದೇವರನ್ನು ಅರಿಯಬಹುದಾಗಿದೆ. ಇಂಥ ದೇವರು ಮಠ, ಮಸೀದೆ ಮತ್ತು ಚರ್ಚುಗಳಲ್ಲಿಲ್ಲ. ಆತÀ ಪ್ರೇಮಿಯ ಹೃನ್ಮಮಂದಿರದಲ್ಲಿ ಮುಗುಳ್ನಗುತ್ತಿದ್ದಾನೆ.
4. ಬುದ್ಧಿ ಮತ್ತು ಪ್ರೇಮ ಭಿನ್ನ ವಸ್ತುಗಳಿಂದ ಮಾಡಲ್ಪಟ್ಟಿವೆ. ಬುದ್ಧಿ ನಮ್ಮನ್ನು ಸಮಸ್ಯೆಗಳಿಗೆ ಸಿಲುಕಿಸಿ, ತೊಡಕು ಬಿಳುವಂತೆ ಮಾಡುತ್ತದೆ. ಪ್ರೇಮ ಎಲ್ಲ ತೊಡಕುಗಳಿಂದ ಅತೀತರನ್ನಾಗಿಸುತ್ತದೆ. ಬುದ್ಧಿ ಯಾವಗಲೂ ಎಚ್ಚರವಾಗಿದ್ದು ಸಲಹೆಗಳಿಗೆ ಕಿವಿಗೊಡುತ್ತದೆ. ಪ್ರೇಮ, ಭಯ ಬೇಡ ನಿಚ್ಚಿಂತನಾಗಿರು, ಧುಮುಕು ಮತ್ತು ಮುನ್ನುಗ್ಗು ಎಂದು ಪ್ರೋತ್ಸಾಹಿಸುತ್ತದೆ. ಬುದ್ಧಿ ನಿಸ್ಸೋತು ಕತ್ತರಿಸಿ ಬಿಳುತ್ತದೆ, ಪ್ರೇಮ ರಬ್ಬರಿನಂತೆ ಬಾಳುತ್ತದೆ. ಪ್ರೇಮ ಹಾಳು ಬಿದ್ದ ಸಾಮ್ರಾಜ್ಯದಂತೆ, ಹಾಳು ಬಿದ್ದರೂ ಅದು ಸಾಮ್ರಾಜ್ಯವೆ. ಭಗ್ನ ಪ್ರೇಮಿಯ ಹೃದಯ ಅನಘ್ರ್ಯ ಆಸ್ತಿ ಹುದುಗಿಸಿಕೊಂಡ ನೆಲದಂತೆ.
5. ಭಾಷಿಕ ಸಮಸ್ಯಗಳಿಂದಾಗಿಯೇ ಎಲ್ಲ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಶಾಬ್ಧಿಕವಾಗಿ ಶಬ್ಧಗಳನ್ನು ಅರ್ಥೈಸಿಕೊಳ್ಳುವುದನ್ನು ನಿಲ್ಲಿಸಿದರೆ, ಗಂಡಾಂತರಗಳನ್ನು ಗೆದ್ದಂತೆಯೆ. ಮೌನದಿಂದ ಹೀರಬಹುದಾದ ಸುಧೆಯನ್ನು ಶಬ್ಧಗಳಿಂದ ಹೀರಲಾಗದು.
6. ಒಂಟಿತನ ಮತ್ತು ಏಕಾಂಗಿತನ ಎರಡು ಭಿನ್ನ ಸ್ಥಿತಿಗಳು. ಒಂಟಿಯಾಗಿದ್ದಾಗ ನಾವು ಸರಿಯಾದ ಮಾರ್ಗದಲ್ಲಿದ್ದೇವೆ ಎನ್ನುವ ಭ್ರಮೆಯಲ್ಲಿರತ್ತೇವೆ. ಆದರೆ ಅದು ಹುಚ್ಚು ಭ್ರಮೆ. ಒಂಟಿಯಾಗಿರುವುದಕ್ಕಿಂತ ಏಕಾಂಗಿಯಾಗಿರುವುದು ಒಳಿತು. ಯಾಕೆಂದರೆ, ಅದು ಏಕಾಂಗಿತನ ಸತ್ಯ, ಆದರೆ ಒಂಟಿತನವಲ್ಲ. ಈ ಏಕಾಂಗಿತನದಲ್ಲಿ ನಿಮ್ಮತನಕ್ಕೊಂದು ಕನ್ನಡಿ ಇದೆ. ಈ ನಿಮ್ಮತನ ಆ ಭಗವಂತನ ಸ್ವರೂಪವೇ ಆಗಿದೆ.
7. ಬದುಕಿನಲ್ಲಿ ಏನೆಲ್ಲ ಘಟಿಸಲಿ, ಎಷ್ಟೇ ಗೋಳಾಡಿಸಲಿ ಹಾಗಂತ ಹತಾಶದ ನೆಲೆಯನ್ನು ನಂಬಬೇಡಿ. ಎಲ್ಲ ದಾರಿಗಳೂ ಮುಚ್ಚಿದಾಗ ನಿಮಗಾಗಿಯೇ ಒಂದು ದಾರಿಯನ್ನು ದೇವರು ಖಂಡಿತ ತೆರೆಯುತ್ತಾನೆ. ಋಣಿಯಾಗಿರಿ, ಎಲ್ಲವೂ ಒಳ್ಳೆಯದಾಗಿರುವಾಗ ಋಣಿಯಾಗಿರುವುದು ಸಹಜ. ಆದರೆ ಜ್ಞಾನಿ ಬರೀ ಒಳಿತಾದುದುಕಷ್ಟೇ ಅಲ್ಲ, ತಾನು ಯಾವುದರಿಂದ ವಂಚಿಸಲ್ಪಟ್ಟನೋ ಅದಕ್ಕಾಗಿಯೂ ದೇವರಲ್ಲಿ ಋಣಿಯಾಗಿದ್ದಾನೆ.
8. ಸಹನೆ ಎಂದರೆ ನಿರ್ವೀರ್ಯತೆ ಅಲ್ಲ. ಸಮಸ್ಯೆಯ ಕೊನೆಯ ತುದಿಯನ್ನೂ ನೋಡುವುದು ಎಂದರ್ಥ. ಅದು ಹೂವಿನೊಂದಿಗೆ ಮುಳ್ಳನ್ನೂ, ರಾತ್ರಿಯೊಂದಿಗೆ ಬೆಳಗನ್ನೂ ನಿರೀಕ್ಷಿಸುವ ಸುಖ. ಅಸಹನೆ ಇರುಳು ಗಣ್ಣಿನ ರೋಗ. ದೇವರನ್ನು ಪ್ರೀತಿಸುವವರು ಅಸಹಿಷ್ಣುಗಳಾಗಿರಲು ಸಾಧ್ಯವಿಲ್ಲ. ಯಾಕೆಂದರೆ, ಅರ್ಧ ಚಂದ್ರ ಒಂದು ದಿನ ಪೂರ್ಣಗೊಳ್ಳುತ್ತಾನೆ ಎನ್ನುವ ಸಂಪೂರ್ಣ ನಂಬಿಕೆ ಅವರಿಗಿರುತ್ತದೆ.
9. ಪೂರ್ವ-ಪಶ್ಚಿಮ, ದಕ್ಷಿಣ-ಉತ್ತರಗಳ ಮಧ್ಯ ಸಣ್ಣ ವ್ಯತ್ಯಾಸವಿದೆ. ನಿಮ್ಮ ದಿಕ್ಕಿನ ಬಗೆಗೆ ದುಃಖಿತರಾಗಬೇಡಿ. ಪ್ರವಾಸ ಪ್ರಾರಂಭವಾಗಿದೆ ಸಂತಸ ಪಡಿ. ಈ ಪಯಣ ನಿಮ್ಮೊಳಗೂ ಆಗಲು ಬಿಡಿ. ನಿಮ್ಮೊಳಗಿನ ಪಯಣ ನಿಮಗೆ ವಿಶ್ವವನ್ನೇ ಸುತ್ತುವ ಮತ್ತು ಅದನ್ನು ಮೀರಿದ ಪ್ರಪಂಚವನ್ನು ಪಯಣಿಸುವ ಅನಂತದ ಅನುಭವವನ್ನು ನೀಡುತ್ತದೆ.
10. ನೋವಿಲ್ಲದೆ, ಶಿಶುವಿಗೆ ಹುಟ್ಟಿನ ಹೊಸ ಮಾರ್ಗವಿಲ್ಲ ಎನ್ನುವುದು ಸೂಲಗಿತ್ತಿಗೆ ಗೊತ್ತು. ಹಾಗೆಯೇ ಸಂಕಷ್ಟವಿಲ್ಲದೆ ನಮಗೊಂದು ಹೊಸ ಹುಟ್ಟು ಸಾಧ್ಯವಿಲ್ಲ. ಹದ ಬೆಂಕಿ ಇಲ್ಲದೆ ಮಡಕೆಯಾಗುವುದಿಲ್ಲ. ಪ್ರೀತಿ ಯಾವಾಗಲೂ ಸಂಕಟದಂತೆ ಮತ್ತು ಹದಗೊಳಿಸುವ ಬೆಂಕಿಯಂತೆ.
11.ಪ್ರೀತಿಯನ್ನು ಹುಡುಕುವವನು ಹುಡುಕುತ್ತಲೆ ಹೊಸ ಮಾರ್ಪಾಟಕ್ಕೊಳಪಡುತ್ತಾನೆ. ಹುಡುಕುವುದನ್ನು ನಿಲ್ಲಿಸಿದವನು ಪ್ರಬುದ್ಧನಾಗಲು ಸಾಧ್ಯವಿಲ್ಲ. ನೀವು ಪ್ರೀತಿಯನ್ನು ಹುಡಕಲಾರಂಭಿಸಿದ ಮರುಕ್ಷಣವೇ, ನಿಮ್ಮೊಳಗೆ ಮತ್ತು ನಿಮ್ಮ ಹೊರಗೆ ಬದಲಾವಣೆಯ ಪರ್ವ ಪ್ರಾರಂಭವಾಯಿತು.
12. ಈ ಪ್ರಪಂಚವೆನ್ನುವುದು ಖೊಟ್ಟಿ ಗುರುಗಳ ಮತ್ತು ಸುಳ್ಳು ಶಿಕ್ಷಕರ ಒಂದು ಅಗಣಿತ ಲೋಕ. ಅಧಿಕಾರಕ್ಕಾಗಿ ಆಸೆ ಪಡುವವರು ಮತ್ತು ದುರಹಂಕಾರಿಗಳು ಗುರು ಅಲ್ಲ ಒಬ್ಬ ಸಾಮಾನ್ಯ ಗೆಳೆಯನೂ ಆಗಲು ಸಾಧ್ಯವಿಲ್ಲ. ನಿಜವಾದ ಗುರು ನಿಮ್ಮನ್ನು ತನ್ನೆಡೆಗೆ ಕೇಂದ್ರಕರಿಸಿಕೊಳ್ಳುವುದಿಲ್ಲ, ಆತ ನಿಮ್ಮನ್ನೆಂದೂ ಹೊಗಳುವುದಿಲ್ಲ, ಆತ ನಿಮ್ಮ ನಿಷ್ಠೆಯನ್ನೂ ಇಷ್ಟಪಡುವುದಿಲ್ಲ. ಬದಲಾಗಿ ನಿಮ್ಮೊಳಗನ್ನು ಆರಾಧಿಸುವ ಮಾರ್ಗ ತೋರಿಸುತ್ತಾನೆ. ಗ್ಲಾಸಿನಂತೆ ಪಾರದರ್ಶಕವಾಗಿರುತ್ತಾನೆ. ತನ್ಮೂಲಕ ದೇವರ ಬೆಳಕು ನಿಮ್ಮೆಡೆಗೆ ಹರಿಯುವಂತೆ ಮಾಡಿ, ಸದ್ಗುರುವಾಗುತ್ತಾನೆ.
13. ಬದಲಾವಣೆಯನ್ನು ತಡೆಯಬೇಡ. ಬದಲಾವಣೆಯಂತೆ ನಿನ್ನ ಬದುಕು ಬದಲಾಗಲು ಬಿಡು. ಅದರ ತಲೆ ಕೆಳಗಾಗುತ್ತಿದೆಯೊ? ಭಯ ಬೇಡ? ಯಾರಿಗೆ ಗೊತ್ತು, ಯಾವ ತುದಿಯಿಂದ ನಿನ್ನ ಉದ್ಧಾರದ ಕಥೆ ಆರಂಭವಾಗಿ ಇನ್ನ್ಯಾವ ಮಹಾ ಉದ್ಧಾರದೆಡೆಗೆ ಸಾಗುತ್ತಿದೆ ಎಂದು.
14. ನಿನ್ನ ಕೆಲಸಗಳನ್ನೇ ಪೂರ್ಣಗೊಳಿಸುವುದರಲ್ಲಿ ಭಗವಂತ ತನ್ಮಯನಾಗಿದ್ದಾನೆ. ಅವನ ಕಣ ಕಣವೂ ನೀನೆ, ಅವನ ಮಯ್ಯ ಮತ್ತೂ ನೀನೆ. ಪ್ರತಿ ಮನುಷ್ಯರನ್ನು ಸೃಷ್ಠಿಸುವುದೆಂದರೆ ಆತನಿಗೆ ಪರಿಪೂರ್ಣನೊಬ್ಬನನ್ನು ಸಿದ್ಧಪಡಿಸುವ ಹಠ. ನಾವೆಲ್ಲರೂ ಅಪೂರ್ಣರಿದ್ದು ಆತನಿಂದ ಪೂರ್ಣಗೊಳ್ಳಲು ಕಾಯ್ದುನಿಂತ ಕಲಾಕೃತಿಗಳು. ದೇವರು ನಮ್ಮೆಲ್ಲರೊಂದಿಗೆ ಪ್ರತ್ಯೇಕವಾಗಿಯೇ ವ್ಯವಹರಿಸಿದ್ದಾನೆ. ಯಾಕೆಂದರೆ ನಾವು ನಮ್ಮದೇ ಕೊರತೆಗಳಿಂದ ಬಳಲುವ ಅನನ್ಯ ರಚನೆಗಳು. ಈ ಕೊರತೆಗಳನ್ನು ನೀಗಿಸಿದಂತೆ ಆತನಿಗೊಂದು ಸಮಗ್ರ ಚಿತ್ರಣ ಸಿಗುತ್ತದೆ.
15. ಪರಿಪೂರ್ಣನಾದ ದೇವರನ್ನು ಪ್ರೀತಿ ಮಾಡುವುದು ಸಹಜ. ಆದರೆ ನ್ಯೂನ್ಯತೆಗಳಿಂದ ನರಳುವ ನಮ್ಮೊಡನಾಡಿಯನ್ನು ಪ್ರೀತಿಸುವುದು ಕಷ್ಟ. ನಮ್ಮ ಪ್ರೀತಿಯ ಸಾಮಥ್ರ್ಯದ ಪರೀಕ್ಷೆ ಇರುವುದು ಇಲ್ಲಿಯೇ. ಇಂಥ ಪ್ರೀತಿ ಇಲ್ಲದ ಜ್ಞಾನವೂ ಅಪೂರ್ಣ. ದೇವರ ಇಂಥ ಅಪೂರ್ಣ ಸೃಷ್ಠಿಗಳನ್ನು ಅಪ್ಪಿಕೊಳ್ಳದವನು ದೇವರನ್ನು ಬಿಡಿ, ತನ್ನನ್ನೂ ತಾನು ಒಪ್ಪಿಕೊಳ್ಳಲಾರ.
16. ಒಂದೆಡೆ ಇರುವುದೇ ನಿಜವಾದ ವಿಶ್ವಾಸ. ಉಳಿದಿದೆಲ್ಲವೂ ಹೊಳೆಯೊಳಗಿನ ಹುಣಸೆ. ಶುದ್ಧ ನೀರಿನಿಂದಲೂ ಸ್ವಚ್ಚಗೊಳಿಸಲಾಗದ ಪಾಪ ಕೃತ್ಯ ಮೋಸ. ಉಪವಾಸ ಮತ್ತು ವೃತಗಳಿಂದ ಶರೀರವನ್ನು ಶುದ್ಧೀಕರಿಸಬಹುದು ಆದರೆ ಹೃದಯವ ಶುದ್ಧಿ ಮಾತ್ರ ಕೇವಲ ಪ್ರೇಮದಿಂದ.
17. ಇಡೀ ವಿಶ್ವವನ್ನು ವ್ಯಾಪಿಸಿದ ವ್ಯಕ್ತಿ ನಿನೊಬ್ಬನೆ. ನಿನ್ನ ಸುತ್ತಲೂ ನೀನು ನೋಡುತ್ತಿರುವುದೆಲ್ಲವೂ ನಿನ್ನೊಳಗೇ ಇದೆ, ನಿನ್ನಿಂದಲೇ ಹುಟ್ಟಿಕೊಂಡಿದೆ. ಹೀಗಾಗಿ ರಾಕ್ಷಸನನ್ನೂ ಹೊರಗೆ ಹುಡುಕಬೇಡ, ಅದು ನಿನ್ನೊಳಗಿನ ಧ್ವನಿಯೆ. ನಿನ್ನಷ್ಟಕ್ಕೇ ನೀನು ಪ್ರಾಮಾಣಿಕನಾಗಿ, ಕಟುವಾಗಿ ವಿಮರ್ಶಿಸಿಕೊಳ್ಳಬಲ್ಲವನಾದರೆ ಅದು ನಿನಗೆ ಗೊತ್ತಾಗುತ್ತದೆ.
18. ನಿನ್ನನ್ನು ನೋಡಬೇಕಾದ ಅನ್ಯರ ದಾರಿಗಳು ಬದಲಾಗಬೇಕು ಎಂದು ನೀನು ಬಯಸುವುದಾದರೆ, ನಿನ್ನ ನೋಡುವ ನಿನ್ನ ರೀತಿಗಳೇ ಮೊದಲು ಬದಲಾಗಬೇಕು. ಆಗ ಅನ್ಯರು ನಿನ್ನೆಡೆಗೆ ಎಸೆಯುವ ಮುಳ್ಳುಗಳಿಗಾಗಿಯೂ ನೀನು ವಿಧೆಯನಾಗಿರುತ್ತಿ. ಇದು ಮುಂದೊಮ್ಮೆ ಹೂ-ಮಳೆಯಾಗುವುದರ ಸಂಕೇತ.
19. ಕರೆದುಕೊಂಡು ಹೋಗುವ ದಾರಿಯ ಬಗೆಗೆ ಚಿಂತೆ ಬೇಡ. ಇಡುವ ಮೊದಲ ಹೆಜ್ಜೆಯ ಬಗೆಗೆ ಚಿಂತಿಸು. ಅದು ಅತ್ಯಂತ ಕಷ್ಟಕರ ಮತ್ತು ಜವಾಬ್ದಾರಿಯ ಕೆಲಸ. ನಿನ್ನ ಮೊದಲ ಹೆಜ್ಜೆ ಸರಿ ಇದ್ದರೆ ಉಳಿದಿದ್ದೆಲ್ಲವೂ ತಾನಾಗಿಯೇ ಅನುಸರಿಸುತ್ತದೆ. ಪ್ರವಾಹದಲ್ಲಿ ಕೊಚ್ಚಿಹೋಗಬೇಡ, ಪ್ರವಾಹವೇ ಆಗು.
20. ನಾವೆಲ್ಲ ಆತನ ಕಲ್ಪನೆಯ ಕೂಸುಗಳು, ಆದಾಗ್ಯೂ ಭಿನ್ನ ಮತ್ತು ಅನನ್ಯ. ಒಬ್ಬರಿನ್ನೊಬ್ಬರಂತಿಲ್ಲ, ಪ್ರತಿ ಹೃದಯದ ಸಂಗೀತವೂ ಭಿನ್ನ. ಆತ ಬಯಸಿದ್ದರೆ ನಮ್ಮನ್ನೆಲ್ಲ ಒಂದೇತೆರನಾಗಿಸಬಹುದಿತ್ತು, ಅಂತೆಯೇ, ಅನ್ಯರನ್ನು ಅಗೌರವಿಸುವುದು ಮತ್ತು ಅವರ ಮೇಲೆ ನಮ್ಮ ವಿಚಾರವನ್ನು ಹೇರುವುದು ಸಮಾನತೆಯ ನಮ್ಮ ಸೃಷ್ಠಿಕರ್ತನಿಗೆ ಅಪಮಾನ ಮಾಡಿದಂತೆಯೆ.

21. ದೇವರಲ್ಲಿ ಅನುರಕ್ತನಾದವ ಮದಿರಾ ಕೋಣೆಗೆ ಕಾಲಿಟ್ಟರೂ ಮಂದಿರವಾಗಿ ಮಾರ್ಪಡುತ್ತದೆ, ಮಂದಿರಕ್ಕೆ ಕಾಲಿಟ್ಟರೂ ಕುಡುಕನಿಗೆ ಅದು ಮದಿರಾ ಕೋಣೆಯಾಗಿ ಕಾಣುತ್ತದೆ. ಇದೆಲ್ಲವೂ ನಮ್ಮ ಅಂತರಾತ್ಮವನ್ನು ಅವಲಂಬಿಸಿದೆ. ಜ್ಞಾನಿ ಜನರು ಹೇಗೆ ಕಾಣುತ್ತಾರೆ ಮತ್ತು ಅವರು ಯಾರು ಎನ್ನುವುದನ್ನು ನಿರ್ಧರಿಸಲು ಹೋಗಲಾರ. ಆತ ಯಾರನ್ನೇ ಕಂಡರೂ ಬಾಹ್ಯದ ತನ್ನೆರಡೂ ಕಣ್ಣುಗಳನ್ನು ಮುಚ್ಚಿಕೊಂಡು, ಮೂರನೆಯ ತನ್ನ ಒಳಗಣ್ಣನ್ನು ತೆರೆದುಕೊಳ್ಳುತ್ತಾನೆ, ತನ್ನೊಳಗೇ ಇಳಿಯುತ್ತಾನೆ.
22. ಬದುಕು ಒಂದು ತಾತ್ಕಾಲಿಕ ಸಾಲ. ಪ್ರಪಂಚ ಒಂದು ವಾಸ್ತವ. ಮಕ್ಕಳು ಇಲ್ಲಿ ಆಟಿಕೆಯ ವಸ್ತುಗಳನ್ನೇ ಸತ್ಯದ ವಸ್ತಗಳೆಂದು ತಪ್ಪಾಗಿ ಗ್ರಹಿಸುತ್ತಾರೆ. ಹೀಗಾಗಿ ಈ ಸುಳ್ಳು ವಸ್ತುಗಳೊಂದಿಗೆ ಕೆಲಕಾಲ ಮೋಹದಿಂದ ಆಟವಾಡಿ, ಹಠ ಬಂದಾಗ ಮುರಿದು, ಬೇಸರ ಬಂದಾಗ ಎತ್ತಿ ಎಸೆಯುತ್ತಾರೆ. ಈ ಅತಿರೇಕಗಳಿಂದ ದೂರಿರುವುದೇ ಬದುಕು. ಅತಿರೇಕಗಳು ನಿಮ್ಮ ಒಳ ಉಧ್ಯಾನದ ಅಂದಗೆಡಿಸುತ್ತವೆ. ಜಾಣ ಯಾವಾಗಲೂ ಮೃದುವಾಗಿರುತ್ತಾನೆ ಮತ್ತು ಮಧ್ಯದ ದಾರಿಯವನಾಗಿರುತ್ತಾನೆ.
23. ದೇವರ ಸೃಷ್ಠಿಯಲ್ಲಿ ಮನುಷ್ಯನಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅವನೊಳಗೆ 'ನಾನು ಚೈತನ್ಯದ ಉಸಿರು ಹಾಕಿದ್ದೇನೆ' ಎನ್ನುತ್ತಾನೆ ದೇವರು. ಸೃಷ್ಠಿಯಾದ ನಾವೆಲ್ಲರೂ ಅವನ ಸಂದೇಶಗಳೆ. ಆದರೆ ಆತನ ಸಂದೇಶ ಸಾರುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡಿರುವೆನೇ? ಎಂದು ನಾವೆಂದಾದರೂ ಕೇಳಿಕೊಂಡಿರುವೆವೊ? ನಮ್ಮೊಳಗಿನ ಆ ಚಿತ್‍ಶಕ್ತಿಯನ್ನು ಕಾಣುವುದೇ ನಮ್ಮ ಗುರಿಯಾಗಬೇಕು.
24. ನರಕ ಈ ಕ್ಷಣ ಇಲ್ಲೇ ಇದೆ. ಹಾಗೆಯೆ ಸ್ವರ್ಗವೂ. ನಾವು ಪ್ರೀತಿ ಮಾಡಿದ ಪ್ರತಿ ಕ್ಷಣವೂ ಸ್ವರ್ಗದಲ್ಲಿ ಕಾಲಿಟ್ಟಿದ್ದೇವೆ, ದ್ವೇಷಿಸಿದ ಮರುಕ್ಷಣ ನರಕದ ದಳ್ಳುರಿಗೆ ಬಿದ್ದು ಒದ್ದಾಡಿದ್ದೇವೆ.
25. ಎಲ್ಲ ಧರ್ಮ ಗ್ರಂಥಗಳನ್ನು ನಮ್ಮ ಶಕ್ತಿಯನುಸಾರ ಗ್ರಹಿಸಿದ್ದೇವೆ. ಒಟ್ಟು ನಾಲ್ಕು ದೃಷ್ಠಿಕೋನಗಳಿವೆ. ಒಂದು ಅರ್ಥ ಇನ್ನೊಂದು ಒಳಾರ್ಥ ಮತ್ತೊಂದು ಮತಿತಾರ್ಥ ಹುಡುಕುವುದು. ನಾಲ್ಕನೇಯದು ಇವೆಲ್ಲಕ್ಕೂ ಮೀರಿ ಹೋಗಿ ಹಂಚಿಕೊಳ್ಳಲಾಗದÀ ಅನುಭೂತಿಗೆ ಮೌನಿಯಾಗುವುದು.
26. ಪ್ರಪಂಚ ಒಂದೇ ಆಗಿರುವುದರಿಂದ ನಮ್ಮೆಲ್ಲರ ಕಥೆಗಳು ಒಂದು ಇನ್ನೊಂದರಲ್ಲಿ ಹಾಸುಹೊಕ್ಕಿವೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೊ ಒಂದೇ ಕಥೆಯನ್ನು ಪಿಸುಗುಡುತ್ತಿದ್ದೇವೆ. ತೊಂದರೆ ಇಲ್ಲ, ಪರಸ್ಪರ ಕಥೆ ಹೇಳುವುದರಲ್ಲಿ, ಕೇಳುವುದರಲ್ಲಿ ಮಾತ್ರ ಸಹಾನುಭೂತಿ ಇರಲಿ. ತಪ್ಪಿಯೂ ಅನ್ಯರ ಕುರಿತು ಅವರಿಲ್ಲದಾಗ ಮಾತನಾಡಬೇಡ. ಯಾಕೆಂದರೆ ನೀನಾಡಿದ ಮಾತುಗಳು ನಶಿಸಿಹೋಗುವುದಿಲ್ಲ. ಈ ಬಯಲೊಳಗೇ ಬಚ್ಚಿಟ್ಟುಕೊಂಡ ಅವುಗಳು ಒಂದು ದಿನ ಶಾಪಗಳಾಗಿ ನಿನಗೇ ಮರಳುತ್ತವೆ. ಒಬ್ಬನ ನೋವು ನಾವೆಲ್ಲರೂ ನರಳುವಂತೆ ಮಾಡುವ ಹಾಗೆಯೇ ಒಬ್ಬನ ಸಂತೋಷವೂ ನಾವೆಲ್ಲರೂ ನಗುವಂತೆ ಮಾಡುತ್ತದೆ.
27. ನೀನಾಡುವ ಪ್ರತಿ ಒಳ್ಳೆಯ ಮತ್ತು ಕೆಟ್ಟ ಪದಗಳು ನಿನಗೇ ಮರಳುತ್ತವೆ. ಕೆಡುಕಾಡುವವರನ್ನು ದುಷ್ಟತನದ ಮೂಟೆಹೊತ್ತ ಹಡುಗಿನಂತೆ ತೇಲಲು ಬಿಡು. ಪ್ರತಿಯಾಡಿದರೆ ನೀನೂ ಅದೇ ಆಗುತ್ತಿಯ. ಬದಲಾಗಿ ನಲವತ್ತು ದಿನ ಮತ್ತು ನಲವತ್ತು ರಾತ್ರಿ ಆ ಪಾಪಿಯ ಕುರಿತು ಒಳಿತನ್ನೇ ನುಡಿ, ಆಲೋಚಿಸು. ನಲವತ್ತು ದಿನಗಳ ನಂತರ ಎಲ್ಲವೂ ಭಿನ್ನವಾಗಿರುತ್ತದೆ, ಯಾಕೆಂದರೆ ನಿನ್ನೊಳಗಿನದೇ ಭಿನ್ನವಾಗಿಬಿಟ್ಟಿರುತ್ತದೆ.
28. ಭೂತಕಾಲ ಒಂದು ಅರ್ಥೈಸುವಿಕೆ ಅಷ್ಟೆ. ಭವಿಷ್ಯ ಮತ್ತೊಂದು ಭ್ರಮೆ. ಸಮಯದಂತೆ ಸರಳವಾಗಿ ಪ್ರಪಂಚ ಸಾಗುವುದಿಲ್ಲ. ಪ್ರಪಂಚದ ಮೂಲಕ, ನಿನ್ನ ಮೂಲಕ, ಸಾಗಿಹೋಗುವ ಸಮಯವೂ ಸೀಮಾತೀತ. ಹೀಗಾಗಿ, ಭೂತ ಮತ್ತು ಭವಿಷ್ಯದ ಹಂಗು ಹರಿದುಕೊಂಡು ವರ್ತಮಾನದ ಒಳಿತಿನಲ್ಲಿ ಇಳಿಯುವುದನ್ನು ಕಲಿ.
29. ದೈವವೆಂದರೆ ಬದುಕು ಪೂರ್ವ ನಿರ್ಧಾರಿತ ಎಂದರ್ಥವಲ್ಲ. ಎಲ್ಲವನ್ನು ದೈವಕ್ಕೆ ಹೊರಸಿ ಜಗದ ಸಂಗೀತವನ್ನೇ ಆಲಿಸದೆ ಹೋಗುವುದು ಅಜ್ಞಾನವಲ್ಲದೆ ಮತ್ತೇನು? ಮಧುರ ಸಂಗೀತ ವಿಶ್ವವನ್ನೆಲ್ಲ ವ್ಯಾಪಿಸಿದೆ ಮತ್ತು ಇದಕ್ಕೆ ನಲವತ್ತು ಭಿನ್ನ ಸ್ಥರಗಳಿವೆ. ನಿನ್ನ ದೈವವೆನ್ನುವುದು ಇವುಗಳಲ್ಲಿ ಯಾವುದೊ ಒಂದು ಸ್ಥರ. ಇಲ್ಲಿ ನಿನಗೆ ನಿನ್ನ ವಾದ್ಯವನ್ನು ಬದಲಾಯಿಸುವ ಸ್ವಾತಂತ್ರ್ಯವಿಲ್ಲ. ಆದರೆ ಇರುವ ವಾದ್ಯವನ್ನು ಎಷ್ಟು ಚನ್ನಾಗಿ ನುಡಿಸಿದೆ ಎನ್ನುವುದು ನಿನ್ನ ದೈವವನ್ನು ನಿರ್ಧರಿಸುತ್ತದೆ.
30. ಅನಾವಶ್ಯಕವಾಗಿ ಆಪಾದನೆಗೊಳಗಾಗಿ, ಹಲ್ಲೆಗೊಳಗಾಗಿ ಮತ್ತು ದಿಕ್ಕರಿಸಲ್ಪಟ್ಟವನಾಗಿ ಬದುಕಿಯೂ ಸುಮ್ಮನಿದ್ದವನೇ ಸಂತ. ಆತ ಪ್ರತಿ ನುಡಿಯುವುದಿಲ್ಲ, ಏಕೆಂದರೆ ಆತನಲ್ಲಿ ತಾನು ಮತ್ತು ಅನ್ಯ ಎನ್ನುವುದೇ ಇಲ್ಲ.

31. ನಿನ್ನ ವಿಶ್ವಾಸವನ್ನು ದೃಢಗೊಳಿಸಿಕೊಳ್ಳಬೇಕೆನ್ನುವ ನೀನು, ನಿನ್ನೊಳಗನ್ನು ಮೃದುವಾಗಿಸಿಕೊಳ್ಳಬೇಕು. ಆತ್ಮ ಬೆಟ್ಟದಂತಾಗಬೇಕೆನ್ನುವವರು ಮನಸ್ಸನ್ನು ಹಂಸತೌಲಿಕೆಯಾಗಿಸಿಕೊಳ್ಳಬೇಕು. ರೋಗವಿರಲಿ, ಅನಾಹುತಗಳಿರಲಿ, ದುರಂತಗಳಾಗಲಿ ಅವುಗಳೆಲ್ಲ ಘಟಿಸುವುದು ನಮ್ಮನ್ನು ಮೃದುವಾಗಿಸಲು, ಉದಾರಿಯಾಗಿಸಲು ಮತ್ತು ಅನುಕಂಪಶೀಲರನ್ನಾಗಿಸಲು. ಆದರೆ ಕೆಲವರು ಮಾತ್ರ ಈ ಮಾರ್ಪಾಟಕ್ಕೊಳಗಾಗುತ್ತಾರೆ. ಉಳಿದವರು ಇದ್ದುದರಕ್ಕಿಂತಲು ಭಯಾನಕವಾಗಿ ಮಾರ್ಪಟ್ಟು ಹಾಳಾಗುತ್ತಾರೆ.
32. ದೇವರು ಮತ್ತು ನಿನ್ನ ಮಧ್ಯ ಯಾರೂ ನಿಲ್ಲಲು ಸಾಧ್ಯವಿಲ್ಲ. ಇಮಾಮ್, ಪೂಜಾರಿ ಅಥವಾ ಸ್ವಾಮಿಗಳಿಗೆ ಯಾರೂ ಧರ್ಮದ ನಾಯಕತ್ವವನ್ನು ಕೊಡಲಿಲ್ಲ. ಯಾವ ಆಧ್ಯಾತ್ಮಿಕ ಗುರುವೂ ನಿಮ್ಮಿಬ್ಬರ ಮಧ್ಯದ ಮಧ್ಯವರ್ತಿಯಲ್ಲ. ನಿನ್ನ ಸ್ವನಿಯಮ, ಮೌಲ್ಯಗಳೇ ಪ್ರೇಮಸ್ವರೂಪಿ ದೇವರೆಡೆಗಿನ ಸೂತ್ರಗಳು. ಹೃದಯಗಳನ್ನು ಭಗ್ನಗೊಳಿಸುವ ಕುಕೃತ್ಯದಲ್ಲಿ ತೊಡಗಿರುವ ನೀನು ಎಷ್ಟೇ ಧಾರ್ಮಿಕನಾಗಿದ್ದರೂ ಅರ್ಥಹೀನ. ಎಲ್ಲ ದುಷ್ಟತನಗಳಿಂದ ದೂರವಿರು, ಇಲ್ಲದಿದ್ದಲ್ಲಿ ಅವು ನಿನ್ನ ಬುದ್ಧಿಗೆ ಮಂಕೆರಚುತ್ತವೆ. ದೇವರೊಬ್ಬನೇ ನಿನ್ನ ಮಾರ್ಗದರ್ಶಿಯಾಗಿರಲಿ. ಗೊತ್ತಿರಲಿ ಗೆಳೆಯನೆ, ಈ ಬದುಕಿಗೆ ಸತ್ಯ ಬೇಕು. ಆದರೆ ನಿನ್ನ ಸತ್ಯಕ್ಕೆ ವಂಚನೆಯ ಲೇಪನವಿರಬಾರದು.
33. ನಾವೆಲ್ಲರೂ ಏನನ್ನೋ, ಯಾರನ್ನೋ ಪಡೆಯುವ ಹುಚ್ಚಿನಲ್ಲಿದ್ದೇವೆ, ನಿಧನಾನಂತರ ಅವರೆಲ್ಲರನ್ನು ಹೀಗೆಯೇ ಬಿಟ್ಟು ಹೋಗುತ್ತೇವೆ. ನಿನ್ನ ಗುರಿ ಶೂನ್ಯದೆಡೆಗಿರಲಿ. ಬೆಳಕಿನಂತೆ, ಖಾಲಿತನದಂತೆ ನಿರಾಳನಾಗಿರು, ಶೂನ್ಯನಾಗಿರು. ಮಡಕೆಯ ಬಾಹ್ಯ ಅದನ್ನು ಒಪ್ಪಗೊಳಿಸಿದಷ್ಟೇ ಅದರೊಳಗಿನ ಖಾಲಿತನವು ಅದಕ್ಕೊಂದು ಅರ್ಥ ತುಂಬಿದೆ. ನಾವು ಏನನ್ನು ಸಾಧಿಸಲು ಹಂಬಲಿಸುತ್ತೇವೆ ಎನ್ನುವಷ್ಟೇ ಮುಖ್ಯ, ಶೂನ್ಯದ ಪ್ರಜ್ಞೆ. ಯಾಕೆಂದರೆ ಅದೇ ನಮ್ಮನ್ನು ನಿರಂತರ ಚಲನಶೀಲರನ್ನಾಗಿರಿಸಿದ್ದು.
34. ಸಮರ್ಪಣೆ ಎನ್ನುವುದು ದೌರ್ಬಲ್ಯದ ಲಕಣ್ಷವಲ್ಲ, ದುರ್ವಿಧಿಯ ಮಾತಲ್ಲ. ಈ ಸಮರ್ಪಣೆಯೇ ನಿಜವಾದ ಶಕ್ತಿ. ಅದು ನಮ್ಮ ಎದುರಾಳಿಗೆ ನಮ್ಮ ಅಂತರಂಗದ ಸೌಂದರ್ಯವನ್ನು ತೋರಿಸುತ್ತದೆ. ಬದುಕಿನ ದೈವಶಕ್ತಿಗೆ ತಲೆಬಾಗಿದವರು ಚಾಂಚಲ್ಯಗಳಿಂದ ಮುಕ್ತರಾಗಿ, ಶಾಂತಿಯಲ್ಲಿ ಸಾಮ್ರಾಜ್ಯ ಕಟ್ಟುತ್ತಾರೆ. ಇಡೀ ಪ್ರಪಂಚವೇ ಗಲಿಬಿಲಿಗೊಂಡಾಗಲೂ ಅವರು ದೃಢ ಚಿತ್ತಾಗಿರುತ್ತಾರೆ.
35. ವೈರುದ್ಯಗಳೆನ್ನುವವವು ನಮ್ಮೊಳಗೇ ಇವೆ. ನನ್ನೊಳಗಿನ ವೈರುದ್ಯಕ್ಕಾಗಿ ಅನ್ಯರನ್ನು ಆಪಾದಿಸುವ ಬದಲು, ವಿರೋಧಿಯೇ ಆಗಿರಲಿ ಆತನನ್ನು ಬಲವಾಗಿ ನಂಬು, ಅಪನಂಬಿಕೆಯೇ ನಮ್ಮ ಮೊದಲ ವೈರಿ.
36. ಈ ಪ್ರಪಂಚ ಕೊಡುಕೊಳ್ಳುವಿಕೆಯ ಸಿದ್ಧಾಂತದ ಮೇಲೆ ಸೃಷ್ಠಿಯಾಗಿದೆ. ಒಂದು ತೊಟ್ಟು ನೀರೇ ಆಗಲಿ, ಮಣ್ಣಿನ ಒಂದೊಂದು ಕಣವೇ ಆಗಿರಲಿ ಎಲ್ಲವೂ ಹಂಚಿಕೆಯೇ. ಇದನ್ನು ತಪ್ಪಿಸಲು ದುಷ್ಟವ್ಯೂಹಗಳನ್ನು, ಆಲೋಚನೆಗಳನ್ನು ರಚಿಸಬೇಡ. ನೀನು ಕುತಂತ್ರಿಯಾಗುವುದಾದರೆ ನಿನ್ನ ಸೃಷ್ಠಿಸಿದ ಭಗವಂತ ನಿನ್ನಗಿಂತಲೂ ಮಹಾ ತಂತ್ರಗಾರನೆನ್ನುವುದನ್ನು ಮರೆತು ಮುರ್ಖನಾಗುತ್ತೀಯ. ಆತನ ಅರಿವಿಗೆ ಬಾರದೆ ಒಂದು ಎಲೆಯೂ ಉದುರದು. ಇದನ್ನು ನಂಬು. ಆತನು ಏನು ಮಾಡುತ್ತಿರುವನೋ ಅದೆಲ್ಲವೂ ಸರಿಯಾಗಿಯೇ ಇದೆ ಎಂದು ಒಪ್ಪಿಕೊ.
37. ದೇವರ ಗಡಿಯಾರವೇ ವಿಚಿತ್ರ. ಪ್ರಪಂಚದಲ್ಲಿ ಯಾವುದು? ಯಾವಾಗ? ಘಟಿಸಬೇಕೆನ್ನುವುದನ್ನೆಲ್ಲ ಆತ ಈ ಗಡಿಯಾರದೊಂದಿಗೆ ಹೊಂದಿಸಿಬಿಟ್ಟಿದ್ದಾನೆ. ಒಂದು ಕ್ಷಣವೂ ಈ ನಿಯಮ ತಪ್ಪುವುದಿಲ್ಲ. ಪ್ರಪಂಚದ ಪ್ರತಿ ಜೀವಿಗಾಗಿಯೂ ಅದು ಅಷ್ಟೇ ಕರಾರುವಕ್ಕಾಗಿ ಕ್ರಿಯಾಶೀಲವಾಗಿದೆ. ಹೀಗಾಗಿಯೇ ಪ್ರತಿಯೊಬ್ಬನ ಪ್ರೀತಿಗೆ ಮತ್ತು ಸಾವಿಗೆ ಇದೇ ಗಡಿಯಾರ ಘಂಟೆ ಬಾರಿಸುತ್ತದೆ.
38. ನಾನು ಬದುಕುವ ಈ ಬದುಕನ್ನು ಬದಲಾಯಿಸಿಕೊಳ್ಳಲು ಸಿದ್ಧನಿರುವೆನೇ? ನನ್ನೊಳಗಿನ ನೀಚತನವನ್ನು ನಾನು ಬದಲಿಸಿಕೊಳ್ಳಬಲ್ಲೆನೇ? ಎಂದು ಪರೀಕ್ಷಿಸಿಕೊಳ್ಳಲು ಬಹಳ ತಡವಾಯಿತು ಎಂದು ಯಾವ ಕಾಲಕ್ಕೂ ಅಂದುಕೊಳ್ಳಬೇಡ. ಯಾವ ದಿನವೂ ಈ ಕಾರ್ಯಕ್ಕಾಗಿ ನಿನ್ನ ಹುಟ್ಟಿನ ದಿನದಷ್ಟೆ ಮುಖ್ಯ. ಪ್ರತಿ ಕ್ಷಣದೊಂದಿಗೆ ಮತ್ತು ಉಸಿರಿನೊಂದಿಗೆ ಹೊಸ ಹುಟ್ಟು ಪಡೆಯಲು ಸಾಧ್ಯವಿರುವ ವಿವೇಕದ ಏಕೈಕ ಪ್ರಾಣಿ ನೀನು. ಸಾವಿಗೂ ಮುಂಚೆ ಮರುಹುಟ್ಟುವ, ಅಮರನಾಗುವ ಭಾಗ್ಯ ನಿನಗೊಬ್ಬನಿಗೇ ಇದೆ.
39. ಒಂದು ಭಾಗ ಬದಲಾಗುತ್ತದೆ ಅಷ್ಟೆ. ಇರುವುದೆಲ್ಲವೂ ಅಖಂಡವಾಗಿ ಯಥಾ ಪ್ರಕಾರವೇ ಉಳಿದುಕೊಳ್ಳುತ್ತದೆ. ಹಳೆಯ ಕಳ್ಳ ಹೋಗುತ್ತಾನೆ ಹೊಸಬ ಆಗಲೇ ಸಿದ್ಧನಾಗಿದ್ದಾನೆ. ಈತ ಆತನ ಬದಲಿ ವ್ಯವಸ್ಥೆ ಅಷ್ಟೆ. ಅಂತೆಯೇ ಹೇಳುವುದು, ಇಲ್ಲಿ ಯಾವುದೂ ಉಳಿಯುವುದೂ ಇಲ್ಲ, ಬದಲಾಗುವುದೂ ಇಲ್ಲ. ಜ್ಞಾನಿಯೊಬ್ಬ ಸಾಯುತ್ತಾನೆ, ಮತ್ತೊಬ್ಬ ಜ್ಞಾನಿ ಮರುಹುಟ್ಟುತ್ತಾನಷ್ಟೆ.
40. ಪ್ರೀತಿ ಇಲ್ಲದ ಬದುಕು ಒಂದು ಖಾಲಿ ರಶೀದಿ. ನಿನಗೆ ಬೇಕಾಗಿರುವ ಪ್ರೀತಿ ಭೌತಿಕವಾದುದೊ? ಆಧ್ಯಾತ್ಮಿಕವಾದುದೊ? ಪೂರ್ವದ್ದೊ? ಪಶ್ಚಿಮದ್ದೊ? ಪ್ರಶ್ನಿಸಿಕೊಳ್ಳಲೇಬೇಡ. ಈ ಪ್ರಶ್ನೆಗಳು ಮತ್ತಷ್ಟು ಪ್ರಶ್ನೆಗಳನ್ನೇ ಹುಟ್ಟಿಸುತ್ತವೆ. ನೆನಪಿಡು, ಪ್ರೀತಿಗೆ ಯಾವುದೇ ಶೀರ್ಷಿಕೆ ಇಲ್ಲ, ವ್ಯಾಖ್ಯಾನವಿಲ್ಲ. ಅದು ಅತ್ಯಂತ ಸರಳ, ಶುದ್ಧ ಮತ್ತು ಮಾತೃಮಯಿ. ಅದು ಜೀವಜಲ, ಪ್ರೇಮ ಆತ್ಮದ ಕಿಚ್ಚು, ಈ ಕಿಚ್ಚು ನೀರನ್ನು ಪ್ರೀತಿಸಿದಾಗ ಪ್ರಪಂಚವೇ ಭಿನ್ನವಾಗಿಬಿಡುತ್ತದೆ.



Saturday, 5 July 2014

ಅಂಕಣದ ಆಸರೆಯಲ್ಲಿ. . .


          ಅಂಕಣ ಸಾಹಿತ್ಯದೊಂದಿಗಿನ ನನ್ನ ಸಂಬಂಧ, ಒಂದೂವರೆ ದಶಕಗಳಷ್ಟು ಹಳೆಯದ್ದು. ಸರಿಸುಮಾರು 2002 ರಿಂದ ಬೆಳಗಾವಿಯ 'ಹಸಿರು ಕ್ರಾಂತಿ' ಎಂಬ ಸಣ್ಣ ಪತ್ರಿಕೆಗೆ ಅಂಕಣ ಬರೆಯಲಾರಂಭಿಸಿದ ನಾನು, ನಂತರದ ದಿನಗಳಲ್ಲಿ 'ಈ ಭಾನುವಾರ', 'ಪುಷ್ಪದೀಪಿಕಾ', 'ಸಿಹಿ ಗಾಳಿ', 'ಜನತಾ ಮಾಧ್ಯಮ', 'ಅಡ್ವೈಜರ್' ಹಾಗೂ ಇತ್ತೀಚೆಗೆ ಸಂಯುಕ್ತ ಕರ್ನಾಟಕಕ್ಕೆ ಬರೆಯುತ್ತಲೇ ಬಂದೆ. ಇಂಥ ಬರಹ ನನಗೊಂದು ಕುತೂಹಲ ಮತ್ತು ಶಕ್ಯತೆಯ ಪ್ರಶ್ನೆಯಾಗಿಯೆ ಎದುರಾಯಿತು. ಈ ನಿಟ್ಟಿನಲ್ಲಿ ಇಂಗ್ಲೀಷ್‍ನಲ್ಲಿ 'ಲಾಸ್ಟ್ ಪೇಜ್'ನ ಕೆ.ಎ.ಅಬ್ಬಾಸ, ಕನ್ನಡದ ಪಾಪು, ಲಿಂಗದೇವರು ಹಳೆಮನೆ ಹಾಗೂ ಹಾಮಾನ ನನ್ನ ಮುಂದಿದ್ದ ಆದರ್ಶ ಮತ್ತು ಪರಂಪರೆಯಾಗಿದ್ದರು. ಹೀಗಾಗ ಒಂದು ಹೆಜ್ಜೆ ಈ ನಿಟ್ಟಿನಲ್ಲಿ ಯಾಕೆ ಇಟ್ಟು ನೋಡಬಾರದು ಎಂಬ ಕುತೂಹಲ ನನ್ನ ಹಲವಾರು ಮಹತ್ವದ ರಚನೆಗಳಿಗೆ ಕಾರಣವಾಗಿದೆ. ಪ್ರಸ್ತುತ "ಕಾವ್ಯಕ್ಕೆ ಉರುಳು" ಕೃತಿಯೂ ಇಂಥದೇ ಒಂದು ಫಲಶೃತಿ.
          ಅಖಂಡ ಸಂವೇದನೆಯೊಂದರ ಸೆಳಕಿನಂತೆ ಅನಾವರಣಗೊಂಡ ಈ ನನ್ನ ಅಂಕಣಗಳು, ಸಾಹಿತ್ಯದ ನನ್ನ ಅನ್ಯ ಪ್ರಕಾರಗಳ ರಚನೆಗಳಷ್ಟೇ ನನಗೆ ಮಹತ್ವದ್ದೆನ್ನಿಸಿವೆ. ಕಾವ್ಯದ ತೀವ್ರತೆಯನ್ನು, ಗದ್ಯದ ಗಟ್ಟಿತನ ಮತ್ತು ಶಿಸ್ತನ್ನು, ಮಹಾ ಕಾವ್ಯದ ದರ್ಶನವನ್ನು ಅನುಭೂತಿಗೆ ತರುವ ಯಾವುದೇ ಬರಹವಿರಲಿ, ಅದಕ್ಕೆ ಪ್ರಕಾರದ ಪ್ರಶ್ನೆ ಉದ್ಭವಿಸಲೇ ಬಾರದು ಎನ್ನುವುದು ನನ್ನ ವಾದ. ನೀರು ಆರೋಗ್ಯ ಪೂರಕವಾಗಿದ್ದರೆ ಸಾಕು ಅದು ಹಳ್ಳದ್ದೊ, ಹೊಳೆಯದ್ದೊ. ಕೊಳ-ಬಾವಿಯದ್ದೊ ಪ್ರಶ್ನೆಯಾಗಬಾರದು.
          ಪ್ರಸ್ತುತ ಈ ಸಂಕಲನದ ಮೂಲ ಶೀರ್ಷಿಕೆ "ಕಾವ್ಯಕ್ಕೆ ಕತ್ತು ನೀಡಿ". ಆದರೆ ಅದನ್ನು "ಕಾವ್ಯಕ್ಕೆ ಉರುಳು" ಎಂದು ಬದಲಾಯಿಸಿದವರು ಸಂಪಾದಕ ಗೆಳೆಯ ರಾಜು ಮಳವಳ್ಳಿ. ಸಾಹಿತ್ಯವನ್ನು ಅಥವಾ ಇನ್ನೂ ವಿಸ್ತøತವಾಗಿ ಹೇಳುವುದಾದರೆ ಬರಹವನ್ನು ತಬ್ಬಿಕೊಂಡ ಮಾತ್ರಕ್ಕಾಗಿಯೇ ದೇಶಬ್ರಷ್ಟಗೊಂಡು, ಗಡಿಪಾರುಗೊಂಡು, ಕೆಲವೊಮ್ಮೆ ಶಿರಚ್ಚೇದ, ಗಲ್ಲು, ಜೀವಾವಧಿ ಶಿಕ್ಷೆಗೊಳಗಾಗಿ ಸತ್ತು ಹೋದ ಚೇತನಗಳ ಪುನರ್ ಚಿಂತನೆ ಹೇಗಿರಬಹುದು? ಎಂದು ಆಲೋಚಿಸುವಾಗಲೇ, ಈ ಆಲೋಚನೆಯೇ ಕಾರ್ಯರೂಪಕ್ಕೆ ಬರಲಿ, ಅದು ಸಂಯುಕ್ತ ಕರ್ನಾಟಕದ ಸಾಪ್ತಾಹಿಕಕ್ಕೆ ಇರಲಿ ಎಂದು ಒತ್ತಯಿಸಿದವರು ಗೆಳೆಯ ಮಳವಳ್ಳಿ ರಾಜು. ಹೀಗಾಗಿ ಪ್ರಸ್ತುತ ಈ ಸಂಕಲನ ಸಂಯುಕ್ತ ಕರ್ನಾಟಕ ಸಮಗ್ರ ಪತ್ರಿಕಾ ಬಳಗ, ಓದುಗ ಸಮುದಾಯಗಳ ಪ್ರೇರಣೆಯ ಫಲಶೃತಿಯಾಗಿ ನಿಮ್ಮ ಕೈಯಲ್ಲಿದೆ.
          ಯಾವುದೇ ಯೋಜನೆಯ ಕನಸು ಕಾಣುವುದು ಸುಲಭ. ಆದರೆ ಅದನ್ನು ಸಾಧ್ಯವಾಗಿಸುವುದು ಕನಸು ಕಂಡಷ್ಟು ಸರಳವಲ್ಲ. ಕನಸಿನ ಹಿಂದೆ ಕೆಲಸಕ್ಕಾಗಿ ಕಾಡುವ ಮನಸ್ಸುಗಳಿರಬೇಕು. ಹೀಗೆ ಕಾಡಿದವರು ಪದ್ದು, ಗೌರಿ, ನಿರಂತರ ಓದುಗರು. ಇವರು ನನ್ನ ಈ ಹುಡುಕಾಟಕ್ಕೆ, ಸಂಗ್ರಹಕ್ಕೆ ಕಾರಣರಾದವರು. ಹಾಗೆಯೇ, ಬರಹವೆನ್ನುವ ಕನಸಿನ ಖಾಲಿ ದೋಣಿಗೆ ಏನೆಲ್ಲ ಸರುಕು ತುಂಬಿ ಸುಂದರವಾಗಿಸಿ ನಿಮ್ಮ ಕೈಗೆ ನೀಡಿದವರು ಪ್ರಕಾಶಕ ಮಿತ್ರ ಎಂ.ಆರ್.ಗಿರಿರಾಜು ಹಾಗೂ ಕಣ್ವದ ಸಮಗ್ರ ಬಳಗ. ಮರೆಯಬಾರದ ಮನುಷ್ಯ, ಕಲಾವಿದ ಶ್ರೀ ಬಿ.ಎಸ್.ದೇಸಾಯಿ. ಸದಾ ನನ್ನ ಬರಹಗಳನ್ನು ಓದುತ್ತ, ಕೃತಿಯ ಆಲೋಚನೆಯನ್ನು ಮುಖಪುಟದಲ್ಲಿ ಪ್ರತಿಫಲಿಸಲು ಯತ್ನಿಸಿದವರವರು. ಇದಕ್ಕೆ ಪೂರಕವಾಗಿ ಸಹಾಯ ಮಾಡಿದವರು ಅವರ ಮಗ ಶಶಿಕಿರಣ ದೇಸಾಯಿ ಮತ್ತು ಕುಟುಂಬ. ಹೀಗಾಗಿ ಇದು ರಾಗಂ ಎಂಬ ಲೇಖಕನೊಬ್ಬನ ಕೃತಿಗಳ ಸಂಖ್ಯೆಗೆ ಸೇರುವುದೇನೊ ಸತ್ಯ, ಆದರೆ ಅದಕ್ಕೂ ಪ್ರಾಮಾಣಿವಾದ ವಿಚಾರ ಇದು ಇವರೆಲ್ಲರ ಕೃತಿ ಎನ್ನುವುದೂ ಕೂಡ.
   'ಶೋ ಮಸ್ಟ್ ಗೋ ಆನ್' ಎನ್ನುವಂತೆ "ಕಾವ್ಯಕ್ಕೆ ಉರುಳು" ಯಥಾ ಪ್ರಕಾರ ಸಂಯುಕ್ತ ಕರ್ನಾಟಕದಲ್ಲಿ ಮುಂದುವರೆಯುತ್ತದೆ. ಮೊದಲ ಸಂಗ್ರಹವಾಗಿ ಮಾತ್ರ ಈ ಕೃತಿ ನಿಮ್ಮ ಕೈಯಲ್ಲಿದೆ.



                                                                                                

Friday, 27 June 2014

ಈ ಸಾವೂ ಒಂದು ಸುಂದರ ಪಯಣ

   ಅಥೇನ್ಸ್‍ನಲ್ಲಿ ಹುಟ್ಟಿದ ಸಾಕ್ರೆಟೀಸ್ ಶ್ರೇಷ್ಠ ತತ್ವಜ್ಞಾನಿ. ತನ್ನ ಜೀವನಾವಧಿಯ ಕೊನೆಯ ಮೂವತ್ತು ವರ್ಷಗಳನ್ನು ಅಥೇನ್ಸ್‍ದ ಪ್ರಜೆಗಳಿಗೆ ಕೆಲವು ಸತ್ಯಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಕಳೆದಿದ್ದಾನೆ. ಪ್ರಪಂಚ ಕಂಡ ಅದ್ಭುತ ಚಿಂತಕ ಸಾಕ್ರೆಟಿಸ್. ತನ್ನ ಜನರ ಅಜ್ಞಾನದಿಂದಾಗಿ ವಿಷಪ್ರಾಶಾಣಕ್ಕೊಳಗಾಗಿ ಮರಣ ಹೊಂದಿದ. ಆದರೆ ಸಾವಿನ ಕೊನೆಯ ಕ್ಷಣದವರೆಗೂ ಸತ್ಯದೊಳಗಿನ ಆಸಕ್ತಿಯನ್ನು ಎಂದೂ ಕಳೆದುಕೊಳ್ಳಲಿಲ್ಲ. ಬದುಕನ್ನು ಪಣಕ್ಕೊಡ್ಡಿ ಸತ್ಯವನ್ನೇ ಸ್ಥಾಪಿಸಲು ಹೆಣಗಾಡಿದ. ಇನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಸಾಯಲಿದ್ದ ಸಾಕ್ರಟಿಸ್, ಕೊನೆಗೆ ಸಾವನ್ನೂ ಕುರಿತು ತನ್ನ ಜನರಿಗೆ ತಿಳುವಳಿಕೆ ನೀಡಲು ಯತ್ನಿಸಿದ. 
   ಈತ ಯುವಕನಾಗಿದ್ದಾಗ, ಯಾವುದನ್ನು ನಾವು ನಿಸರ್ಗದ ಪರಿಶೋಧ ಎಂದು ಕರೆಯುತ್ತೇವೆಯೋ ಆ ಕುರಿತು ಅತ್ಯಂತ ಕುತೂಹಲಭರಿತನಾಗಿದ್ದ. ಪ್ರಪಂಚದ ಎಲ್ಲ ವಸ್ತುಗಳ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳುವುದು ಮಹತ್ವದ ಸಾಧನೆಯೆಂದು ಆತನ ನಂಬಿಕೆಯಾಗಿತ್ತು. ಈ ಜೀವ ಜಗತ್ತಿನಲ್ಲಿ ಯಾಕೆ ಪ್ರತಿಯೊಂದು ವಸ್ತು ಅಸ್ತಿತ್ವವನ್ನು ಪಡೆದುಕೊಳ್ಳುತ್ತದೆ? ಯಾಕೆ ನಶಿಸುತ್ತದೆ? ಮತ್ತೇ ಯಾಕೆ ಬಾಳುತ್ತದೆ? ಎನ್ನುವ ಪ್ರಶ್ನೆಗಳು ಆತನನ್ನು ಬಳಲಿಸಿದ್ದವು.
  ಸಾಕ್ರೆಟಿಸ್‍ನನ್ನು ಸಂತೃಪ್ತಪಡಿಸಬಲ್ಲ ಗುರುವೊಬ್ಬ ಸಿಗಲಾರದಕ್ಕಾಗಿ ಆತ ತನ್ನದೇ ಆದ ರೀತಿಗಳನ್ನು ಹುಡುಕುವಲ್ಲಿ ತಲ್ಲೀನನಾಗಿದ್ದ. ಹಾಗಂತ ಆತನಿಗೆ ಯಾರದೋ ಗುರುವಾಗಬೇಕೆನ್ನುವ ಹಂಬಲವೂ ಇರಲಿಲ್ಲ. ಕೇಳಲು ಸಿದ್ಧನಿರುವ ಯಾರೊಂದಿಗೂ ಆತ ಸಂವಾದಿಸಲು ಸಿದ್ಧನಿದ್ದ. ತನ್ನಷ್ಟಕ್ಕೆ ತಾನು ಜಾಣ ಎಂದು ಎಂದೂ ಪರಿಗಣಿಸದ ಸಾಕ್ರಟಿಸ್ ತನಗಿಂತಲೂ ಜಾಣರು ಯಾರಾದರೂ ಇದ್ದಾರೆಯೆ? ಎಂದು ತಿಳಿದುಕೊಳ್ಳುವಲ್ಲಿ ಕುತೂಹಲಬರಿತನಾಗಿದ್ದ. ಹೀಗಾಗಿ ಯಾರು ಜಾಣರೆಂದು ಘೋಷಿಸಿಕೊಂಡಿದ್ದರೋ ಅಂಥವರ  ಮುಂದೆ ಸಾಕ್ರಟಿಸ್ ಪ್ರಶ್ನೆಯಿಡುತ್ತಲೇ ಹೋದ. ದೇವವಾಣಿಯಿಂದ ಧಿಕ್ಕರಿಸಲ್ಪಟ್ಟ ಆತನ ಈ ಶೋಧ ನಿಲ್ಲಲಿಲ್ಲ. ಜ್ಞಾನಿಗಳು ಯಾರೂ ಸಿಗದ ಕಾರಣ ತನ್ನ ಶೋಧವನ್ನು ಮುಂದುವರಿಸಿದ ಸಾಕ್ರೆಟಿಸ್, ಅದನ್ನು ಪ್ರಪಂಚದಲ್ಲಿ ಅತ್ಯಂತ ಪವಿತ್ರಕಾರ್ಯ ಎಂದು ಪರಿಗಣಿಸಿದ. ಹೀಗಾಗಿ ಜ್ಞಾನದ ಅನ್ವೇಷಣೆಗೆ ಸಾಕ್ರೆಟಿಸ್ ಕೊರಳೊಡ್ಡಿದ.
      ವಿಷ ಸೇವಿಸುವ ಮುಂಚೆ ಆತ ಹೇಳುತ್ತಾನೆ- "ಬಂಧುಗಳೇ, ನೀವೀಗ ಚರಿತ್ರೆಯನ್ನು ದುಷ್ಪ್ರೇರಿತ ಜನಗಳ ಕೈಯಲ್ಲಿ ಕೊಡುತ್ತಿದ್ದೀರಿ. ನಾನು ಜಾಣನಲ್ಲನೆಂದು ನಾನೇ ಘೋಷಿಸಿಕೊಂಡಾಗಿಯೂ 'ಜಾಣತನದ ದುರಹಂಕಾರದಲ್ಲಿ ಮೆರೆಯುತ್ತಿದ್ದಾನೆ ಸಾಕ್ರೆಟಿಸ್' ಎಂದು ಸುಳ್ಳಾಡಿದವರ ಕೈಗೆ ನೀಡುತ್ತಿದ್ದೀರಿ. ಈಗ ಯಾವುದನ್ನೂ ತಡೆಯದಷ್ಟು ಪರಿಸ್ಥಿತಿ ಮುಂದುವರೆದಿದೆ. ಆದರೆ ನಮ್ಮ ಮುಂದುವರಿಕೆ ಬದುಕಿನೆಡೆಗೆ ಅಲ್ಲ, ಸಾವಿನೆಡೆಗೆ. ನೋಡಿ ಜೀವನದಲ್ಲಿ ಎಷ್ಟೊಂದು ಮುಂದೆ ಬಂದು ಬಿಟ್ಟಿದ್ದೇವೆ. ಅದೂ ಬದುಕಿನೆಡೆಗೆ ಅಲ್ಲ ಸಾವಿನೆಡೆಗೆ.
     ನನ್ನ ಭಾಂದವರೇ, ವಾದಕ್ಕೆ ನನ್ನನ್ನೇ ನಾನು ಅರ್ಪಿಸಿಕೊಂಡಿದ್ದೇನೆ. ಅದೇ ನನಗೆ ಈ ಜೀವನದ ಶಿಕ್ಷೆಯಿಂದ ಮುಕ್ತಿಯೆನಿಸಿದ್ದು. ಅದು ಉದ್ಧಟತನವೆಂದು ನಾನೆಂದೂ ಅಂದುಕೊಂಡಿಲ್ಲ. ಆದರೆ ಸತ್ಯದ ನನ್ನ ಮಾತುಗಳು ನಿಮ್ಮ ಕಿವಿಗಳಿಗೆ, ಮನಸ್ಸಿಗೆ ಮುದನೀಡುವುದು ಸಾಧ್ಯವಿಲ್ಲ.
ನಾನು ಬದುಕುವುದಕ್ಕಿಂತಲೂ ಈ ಸಾವನ್ನು ಪ್ರೀತಿಸಿದ್ದೇನೆ. ಸತ್ವ ಪರೀಕ್ಷೆಯಲ್ಲಾಗಲೀ, ಯುದ್ಧದಲ್ಲಾಗಲಿ: ನಾನಾಗಲಿ, ಇನ್ನಾವುದೇ ಯೋಧನಾಗಲಿ ಸಾವನ್ನು ಧಿಕ್ಕರಿಸುವ, ಅದರಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಬಹುದೆ? ಯುದ್ಧ ಭೂಮಿಯಲ್ಲಿ ರಕ್ಷಿಸಿಕೊಳ್ಳಬೇಕೆನ್ನುವವ ಆಯುಧಗಳನ್ನು ಬದಿಗಿಟ್ಟು ತನ್ನ ಜೀವದ ಬೆನ್ನಟ್ಟಿದವನಿಗೆ ಮೊರೆಹೋಗಬೇಕಷ್ಟೆ. ಗಂಡಾಂತರಗಳಲ್ಲಿ ಅನೇಕ ಬಗೆಗಳಿವೆ. ಸತ್ಯವನ್ನು ಹೇಳಬೇಕೆನ್ನುವವ ಅದರ ಒಂದಿಲ್ಲ ಒಂದು ಪ್ರಕಾರವನ್ನು ಎದುರಿಸಲೇಬೇಕು.
      ಸಾವಿನಿಂದ ಪಾರಾಗುವುದು ಕಷ್ಟದ ಕೆಲಸವೇನಲ್ಲ ಗೆಳೆಯರೆ. ಆದರೆ ಎದೆಗುಂದುವಿಕೆಯಿಂದ ಪಾರಾಗುವುದು ಅತ್ಯಂತ ಕಷ್ಟಕರ.  ಹಿಂಜರಿಕೆ ಸಾವಿಗಿಂತ ವೇಗವಾಗಿ ಆವರಿಸಿಕೊಳ್ಳುತ್ತದೆ. ನಾನು ನಿಮ್ಮಿಂದ ಮರಣದಂಡನೆಗೆ ಒಳಗಾಗಿರುವುದರಿಂದ ಸತ್ಯದಿಂದ ದೂರವಾಗುತ್ತಿದ್ದೇನೆ ಮತ್ತು ಅನ್ಯಾಯದ ಬಾಹುಗಳಲ್ಲಿದ್ದೇನೆ. ಯಾರು ನನ್ನ ಈ ಶಿಕ್ಷೆಗೆ ಕಾರಣರಾದರೋ ಅವರಿಗೆ ಭವಿಷ್ಯ ಏನಾಗಬಹುದು ಎಂದು ಹೇಳಲಿಚ್ಚಿಸುತ್ತೇನೆ. ನನ್ನ ಸಾವಿನ ಮರುಕ್ಷಣವೇ ಇಂತಹದೇ ಪರಿಸ್ಥಿತಿ ನಿಮ್ಮದೂ ಆಗಲಿದೆ. ಹಾಗೇ ನೋಡಿದರೆ ಇದಕ್ಕಿಂತಲೂ ಗಂಭೀರವಾಗಲೂಬಹುದು.
     ನನ್ನ ಮೇಲೆ ಹೊರಿಸಿದ ಆಪಾದನೆಯೆಲ್ಲವೂ ನಿಮ್ಮ ಮೇಲಿನವೂ. ನೀವು ಇಂದು ಈ ಕ್ರಿಯೆಯನ್ನು ಮಾಡುತ್ತಿದ್ದೀರಿ, ಯಾಕೆಂದರೆ ಇಂದು ನೀವು ವಿವರಣೆಗಳನ್ನು ಕೊಡಬೇಕಿಲ್ಲ. ಆದರೆ ಮುಂದೊಂದು ದಿನ ನೀವು ಇದರಿಂದ ಓಡಿಹೋಗುವಂತಿಲ್ಲ. ನಿಮ್ಮನ್ನು ಆಪಾದಿಸುವರ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಅವರಿನ್ನೂ ಭಯಾನಕರಾಗುತ್ತಾರೆ. ನನ್ನನ್ನು ಸಾವಿಗೆ ದೂಡುವುದರ ಮೂಲಕ ಇವರನ್ನು ನೀವು ತಡೆದು ನಿಲ್ಲಿಸಬಹುದು ಅಂದುಕೊಂಡಿದ್ದರೆ ಅದೂ ನಿಮ್ಮ ತಪ್ಪು ಕಲ್ಪನೆ. ಈ ತರಹದ ಪಲಾಯನ ಅಸಾಧ್ಯವಾಗಿದೆ, ಅಗೌರವದಿಂದ ತುಂಬಿಕೊಂಡಿದೆ. ಹೀಗಾಗಿ ಈ ಸಾವು ಅದೆಷ್ಟೋ ಗೌರವಾನ್ವಿತವಾಗಿದೆ. ನಿಮ್ಮ ಕರ್ತವ್ಯ ಇನ್ನೊಬ್ಬರ ಮೇಲೆ ನಿಗಾಯಿಡುವುದಲ್ಲ, ಬದಲಾಗಿ ನಿಮ್ಮೊಳಗೇ ನೀವು ಇಳಿಯುವುದು. ಈ ಭವಿಷ್ಯವಾಣಿಯನ್ನು ನಿಮ್ಮ ಮುಂದೆ ಇಡುವುದರ ಮೂಲಕ ವಿದಾಯವನ್ನು ಬಯಸುತ್ತೇನೆ.


 ಸಾಕ್ರೆಟಸ್ ಚರ್ಚಿಸಿರುವಂತೆ ಮನುಷ್ಯನ ಸಾವಿನಲ್ಲಿ ಎರಡು ಸಾಧ್ಯತೆಗಳಿವೆ. ಒಂದು ಸತ್ತ ವ್ಯಕ್ತಿ ಈ ಪ್ರಪಂಚದ ಲೆಕ್ಕಾಚಾರದಿಂದ ಹೊರತಾಗುತ್ತಾನೆ, ಪ್ರತ್ಯೇಕಿಸಲ್ಪಡುತ್ತಾನೆ ಅಥವಾ ಆತ್ಮಕ್ಕೊಂದು ದಾರಿ ತೆರೆದುಕೊಳ್ಳುತ್ತಾನೆ. ಅದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ, ದೇಹದಿಂದ  ಮತ್ತೊಂದು ದೇಹಕ್ಕೆ, ಆತ್ಮಕ್ಕೆ ದಾರಿಯಾಗುತ್ತದೆ. ಆತನ ಪ್ರಕಾರ "ಎಲ್ಲ ಅನುಭೂತಿಗಳಿಂದ ಸಾವು ಒಂದು ಪ್ರತ್ಯೇಕತೆಯ ಮಾರ್ಗ ಎನ್ನುವದಾದರೆ ಅದೊಂದು ನಿದ್ರೆ. ಅಲ್ಲಿ ನಿದ್ರಿಸುವವನಿಗೆ ಕನಸುಗಳಿಲ್ಲ. ಕನಸು ಕಾಣುವವನೊಬ್ಬ ಬೇರೆಯೇ. ಇಲ್ಲಿ ಸಾವು ಒಂದು ಅದ್ಭುತ ಗಳಿಕೆ. ನಾನು ಅಂದುಕೊಳ್ಳುತ್ತೇನೆ, ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಕನಸುಗಳಿಲ್ಲದೇ ಅತ್ಯಂತ ಸುಖವಾಗಿ ಎಷ್ಟು ರಾತ್ರಿಗಳು ನಿದ್ರಿಸಿದ? ಹಾಗೂ ಉಳಿದ ರಾತ್ರಿ ಮತ್ತು ಹಗಲುಗಳಿಗಿಂತಲೂ ಅದೆಷ್ಟು ಉತ್ತಮವಾಗಿತ್ತು ಎನ್ನುವುದನ್ನು ಲೆಕ್ಕಕ್ಕಿಡುವುದಾದರೆ ಆತ ಈ ಗಳಿಕೆಯನ್ನು ಕೂಡ (ಸಾವಿನ) ಲೆಕ್ಕಕ್ಕೆ ತೆಗೆದುಕೊಳ್ಳಲೇಬೇಕು. ಇದು ನಾನು ಸಾಮಾನ್ಯ ಪ್ರಜೆಗಳಿಗಷ್ಟೇ ಸೂಚಿಸುತ್ತಿಲ್ಲ. ಅರಸನಿಗೂ ಕೂಡ. ಸಾವು ಇಂತಹ ಒಂದು ಲೆಕ್ಕಾಚಾರದ ವಸ್ತು. ನಿಜಕ್ಕೂ ಅದೊಂದು ಲಾಭವೇ. ಅದರ ಮುಂದೆ ಭವಿಷ್ಯದ ಯಾವ ದಿನಗಳೂ ನನಗೆ ಅದ್ಭುತವೆನಿಸುತ್ತಿಲ್ಲ. ಆದರೆ ಸಾವನ್ನು ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಯಣ ಎನ್ನುವುದಾದರೆ ಎಲ್ಲ ತೀರಿಹೋದವರು ಬದುಕಿದ್ದಾರೆ ಎಂದೇ ಅರ್ಥ. ಹೀಗೆಂದ ಮೇಲೆ ಇದಕ್ಕಿಂತಲೂ ದೊಡ್ಡ ಲಾಭ ಇನ್ನೇನು ಬೇಕು ಹೇಳಿ? ಈ ಸಾವು ಸತ್ತ, ಅಗಣಿತ, ಸಾಯದ ಪ್ರತಿಭೆಗಳ ಲೆಕ್ಕಕ್ಕೆ ನನ್ನನ್ನು ಸೇರಿಸುವುದಾದರೆ ನಾನು ಮತ್ತೆ ಮತ್ತೆ ಸಾಯಲು ಇಚ್ಛಿಸುತ್ತೇನೆ." ಸಾಕ್ರೆಟಿಸ್ ಹೇಳುತ್ತಾನೆ, "ನಮ್ಮ ಅನ್ಯಾಯದ ಲೆಕ್ಕಾಚಾರಕ್ಕೆ ಬಲಿಯಾದ ಅನೇಕ ಚಿಂತಕರ ಜೊತೆ ತಾನಿರಲು ಬಯಸುತ್ತೇನೆ" ಎಂದು. ಆತ ಹೇಳುತ್ತಾನೆ, "ನನ್ನ ಬದುಕಿನ ಅತ್ಯಂತ ಶ್ರೀಮಂತ ಗಳಿಗೆ ಯಾವುದಾಗಿತ್ತು ಎಂದು ನೀವು ಪ್ರಶ್ನಿಸುವುದಾದರೆ ನಿಮ್ಮೊಂದಿಗೆ ವಾದಿಸುವ ಘಳಿಗೆಯೇ ಆಗಿತ್ತು"’ಎಂದು. 
ಜನರನ್ನು ಪ್ರಶ್ನಿಸುವುದು, ಪರೀಕ್ಷಿಸುವುದು, ಅತ್ಯಂತ ಜಾಣನಾದವನನ್ನು ಹುಡುಕುವುದು ಎಲ್ಲವೂ ತನಗೆ ಪ್ರಿಯವಾದವುಗಳೇ. ಆದರೆ ಯಾವ ಬೆಲೆಯನ್ನು ತೆತ್ತು? ಅದೇನೆಯಾಗಿರಲಿ, ಅದೊಂದು ಖುಷಿಯ ಕೆಲಸ ಸಾಕ್ರೆಟಿಸನಿಗೆ. ಹೀಗಾಗಿ ಸಾವೂ ಶಿಕ್ಷೆ ಎನ್ನಿಸಲಿಲ್ಲ ಆತನಿಗೆ. ಆತನ ಪ್ರಕಾರ ತನ್ನ ಸುತ್ತಲೂ ಸಾವಿನ ಮೋಜನ್ನು ನೋಡಲು ಸೇರಿದವರಿಗಿಂತಲೂ ಸಾವಿನಲ್ಲಿ ಬದುಕುತ್ತಿರುವವರು ಹೆಚ್ಚು ನಿಶ್ಚಿಂತರಾಗಿದ್ದಾರೆ, ಸುಖವಾಗಿದ್ದಾರೆ ಮತ್ತು ಅಮೃತ ಪುತ್ರರಾಗಿದ್ದಾರೆ. ಆ ಕಾರಣಕ್ಕಾಗಿ ಅವರು ಶಾಶ್ವತವೂ ಮತ್ತು ಸತ್ಯವೂ ಆಗಿದ್ದಾರೆ.
ಆದ್ದರಿಂದ ಸಾವಿನ ಕೆಲವು ಕ್ಷಣಗಳ ಮುನ್ನ ತನ್ನ ಜನರನ್ನು, "ಓ ನನ್ನ ನ್ಯಾಯಾಧೀಶರೆ, ನೀವೆಲ್ಲರೂ ಸಾವಿನೊಂದಿಗಿನ ಆ ನಿರೀಕ್ಷೆಗಳನ್ನು ಆನಂದಿಸಬೇಕು. ಒಬ್ಬ ಒಳ್ಳೆಯ ಮನುಷ್ಯನಿಗೆ ಕೆಟ್ಟದ್ದೆನ್ನುವುದು ಯಾವುದೂ ಇಲ್ಲ. ಅದು ಆತನ ಬದುಕಿನ ಜೀವಿತಾವಧಿಯಲ್ಲಿರಬಹುದು ಅಥವಾ ಆತನ ಸಾವಿನ ನಂತರದಾಗಿರಬಹುದು. ದೇವರೊಂದಿಗಿನ ಆತನ ಕಾಳಜಿಗಳನ್ನು ನೀವು ಪ್ರಶ್ನಿಸಲಾಗದು. ನನಗೆ ಗೊತ್ತಿದೆ. ಇಂದು ನನ್ನೊಂದಿಗೆ ನಡೆದಿರುವುದೆಲ್ಲವೂ ಆಕಸ್ಮಿಕವಲ್ಲ. ಎಲ್ಲವೂ ನನಗೆ ಸ್ಪಷ್ಟವಾಗಿದೆ. ಈ ಸಾವು ನನ್ನನ್ನು ಕಾಳಜಿಗಳಿಂದ ಮುಕ್ತಗೊಳಿಸುತ್ತದೆ ಅಷ್ಟೇ. ನಿಮ್ಮ ಯಾವ ಆಪಾದನೆಗಳು ನನ್ನೆಡೆಗೆ ಗುರಿಮಾಡಿದವು ಅಲ್ಲ. ನನ್ನನ್ನು ಆಪಾದಿಸಿದವರ ವಿರುದ್ಧ ನಾನು ಯಾವುದೇ ತಿರಸ್ಕಾರ ಭಾವ ತಾಳಿಲ್ಲ. ನನ್ನನ್ನು ಭಗ್ನಗೊಳಿಸುವುದಕ್ಕೋಸ್ಕರ ಅವರು ಎಷ್ಟೇ ಉದ್ದೇಶಪೂರಿತವಾಗಿ ವರ್ತಿಸಿದ್ದರೂ ಅವರು ನನ್ನನ್ನು ನಾಶಪಡಿಸಲಾಗಿಲ"್ಲ’ಎಂದು ಸ್ಪಷ್ಟಿಕರಿಸುತ್ತಾನೆ.

ಗುಡಿಸಲಲ್ಲಿ, ದೇವಾಲಯದಲ್ಲಿ ದೀಪ ಹಚ್ಚಿಟ್ಟಂತೆ ಮಾತನಾಡಿದ ಸಾಕ್ರೆಟಿಸನಿಗೆ, ಮಾತು ವ್ಯಸನವಾಗಿರಲಿಲ್ಲ. ಹೀಗಾಗಿ ಸಾವೂ ಆತನನ್ನು ಸಾಯಿಸಲಾಗಲಿಲ್ಲ. ಬದಲಾಗಿ ಸಾಕ್ರೆಟಿಸನಿಂದ ಚರ್ಚಿಸಲ್ಪಟ್ಟ ಸಾವೂ ಕೂಡ ಹೊಸ ಅರ್ಥ ಸಾಧ್ಯತೆಯೊಂದಿಗೆ ಮರು ಹುಟ್ಟು ಪಡೆದಿದೆ. ಆತನ ಸಾವು ಚರಿತ್ರೆಯ ಪುಟವಾಗಿದೆ.

Saturday, 14 June 2014

ವರ್ತಮಾನದ ಬಿಕ್ಕಟ್ಟುಗಳು

ದಿನಾಂಕ: 14/06/2014    ಸ್ಥಳ: ಶ್ರೀರಂಗ ಸಭಾಂಗಣ, ರಂಗಾಯಣ

ಹಸಿವೆಗೆ ನಾನು ಮೈ ಮಾರಿಕೊಂಡೆ
ಆದರೆ ನಿನಗೆ ಆತ್ಮ ಮಾರಿಕೊಳ್ಳುವಂಥದ್ದೇನಾಗಿತ್ತು?

ಬಿಕ್ಕಟ್ಟು 1: ನೋಬೆಲ್ ಪ್ರಶಸ್ತಿಯನ್ನು ಪಡೆಯುತ್ತ ಕೆಲವು ಮಹತ್ವದ ಮಾತುಗಳನ್ನಾಡಿದ ವಿಲಿಯಂ ಫಾಕ್‍ನರ್ ಅಕ್ಷರ ಲೋಕದ ನಮ್ಮಗಳಿಗೆ ಮಹತ್ವದ ಪ್ರಶ್ನೆಯೊಂದನ್ನು ಕೇಳುತ್ತ ಸೃಜನಲೋಕದ ಬಿಕ್ಕಟ್ಟಿಗೆ ಸಮಾಧಾನ ನೀಡಿದ್ದಾನೆ. ಬರಹಗಾರರು ಬಳಲುತ್ತಿರುವ ಉಭಯ ಭ್ರಷ್ಟತೆಯ ಬಿಕ್ಕಟ್ಟಿಗೆ ದಾರಿ ತೋರಿಸಿದ್ದಾರೆ. .
    ಇಂದು ನಮ್ಮೆಲ್ಲರ ದುರಂತವೂ ಸಾಮಾನ್ಯವಾದದು ಹಾಗೂ ಸಾರ್ವತ್ರಿಕವಾದದು. ಶಾರೀರಕವೂ, ಸಾರ್ವತ್ರಿಕವೂ ಆದ ಈ ದುರಂತವನ್ನು ನಾವು ಸಹಿಸಿಕೊಳ್ಳುತ್ತಾ ಬಂದಿದ್ದೇವೆ, ಮುಂದೆಯೂ ಸಹಿಸಿಕೊಳ್ಳಬಹುದೇನೊ. ಆತ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳೇ ಇಲ್ಲವೇನೊ ಎನ್ನುವಷ್ಟು ಭೌತಿಕ ಜಗತ್ತಿನಲ್ಲಿ ನಾವು ಮುಳುಗಿ ಹೋಗಿದ್ದೇವೆ. ಈಗ ನಿತ್ಯವೂ ನಮ್ಮ ಮುಂದಿನ ಸಮಸ್ಯೆಯೊಂದೆ - ನಾವು ಯಾವ ಕ್ಷಣದಲ್ಲಿ ಸ್ಪೋಟಗೊಳ್ಳುತ್ತೇವೆ? ಈ ಸಮಸ್ಯೆಯನ್ನು ಮುಂದಿರಿಸಿಕೊಂಡು ಈ ಬಾಹ್ಯ ಒತ್ತಡದ ಅಡಿಯಲ್ಲಿ ಸಾಹಿತ್ಯವನ್ನು ರಚಿಸುತ್ತಿರುವ ಬಹುಪಾಲು ಯುವ ಬರಹಗಾರರು ಮನುಷ್ಯ ಹೃದಯದೊಳಗಿನ ಆಂತರಿಕ ತುಮುಲವನ್ನು ಮರೆತೇ ಬಿಟ್ಟಿದ್ದಾರೆ. ಆದರೆ ಚಿರಕಾಲವೂ ಉಳಿಯಬಹುದಾದ, ಬಾಳಬಹುದಾದ, ದಾಖಲೆಗೆ ಅರ್ಹವಾದ ಸಾಹಿತ್ಯ ಆಂತರಿಕ ತುಮುಲದಿಂದ ಮಾತ್ರ ಹುಟ್ಟುತ್ತದೆ. ವರ್ತಮಾನದ ಬರಹಗಾರ ಇದನ್ನು ಚೆನ್ನಾಗಿ ತಿಳಿಯಬೇಕಾಗಿದೆ. ಭಯದಲ್ಲಿರುವುದೇ ಎಲ್ಲ ಬರಹಗಳ ಬುನಾದಿ. ಲೇಖಕನಾಗುವವನು ಇದನ್ನು ಅರಿಯಬೇಕಾದದು ಅವಶ್ಯ. ಹೃದಯ ಸಂಬಂಧಿ ಪುರಾತನ ಮೌಲ್ಯಗಳಾದ ಪ್ರೀತಿ, ಗೌರವ, ದುಃಖ, ದುರಹಂಕಾರ, ಸಹಾನುಭೂತಿ ಹಾಗೂ ತ್ಯಾಗಗಳಂಥ ಅಂಶಗಳಿಲ್ಲದ ಯಾವ ಸಾಹಿತ್ಯವೂ ತಾತ್ಕಾಲಿಕವಾಗಿರುತ್ತದೆ ಹಾಗೂ ಹುಟ್ಟುತ್ತಲೇ ಅವಸಾನದ ಹಂತದಲ್ಲಿರುತ್ತದೆ. ಇವುಗಳನ್ನು ಚರ್ಚಿಸದ ಲೇಖಕ ಶಾಪಗ್ರಸ್ಥನಂತೆ. ಇವುಗಳ ಹೊರತಾಗಿ ಸಾಹಿತ್ಯವನ್ನು ರಚಿಸಲು ಹೊರಟ ಸಾಹಿತಿ ದೇಹವನ್ನು ಕುರಿತು ಮಾತ್ರ ಬರೆಯುತ್ತಾನೆ. ಅಂತಯೇ ಅಂತಿಮವಾಗಿ ಬದುಕಿನಲ್ಲಿ ಸಹಾನುಭೂತಿ ಹಾಗೂ ಸುಜೀವನದ ಆಶಾಕಿರಣವನ್ನು ಕಾಣದೇ ಹೊರಗುಳಿಯುತ್ತಾನೆ. ಇಂತಹ ಸಾಹಿತಿ ಪ್ರಪಂಚದ ಎಲ್ಲ ಜನರನ್ನು ಭಾದಿಸಿದ ಯಾವ ನೋವನ್ನು ಕುರಿತು ಬರೆಯಲಾರ, ಅಂತೆಯೇ ಯಾವ ನೆನಪನ್ನು ಉಳಿಸಿ ಹೋಗಲಾರ. ಇವನ ಬರಹದಲ್ಲಿ ಹೃದಯ ಕುರಿತಾದ ಸಾಲುಗಳಿರುವುದಿಲ್ಲ. ಬರೀ ಗ್ರಂಥಗಳ ಕುರಿತು ಚರ್ಚೆಯಿರುತ್ತದೆ.

ಬಿಕ್ಕಟ್ಟು 2: ನಾಲ್ಕು ನೂರು ವರ್ಷಗಳ ಗುಲಾಮಿ ಇತಿಹಾಸ ಈ ದೇಶದಲ್ಲಿ ಏನೆಲ್ಲ ಆಗಿದ್ದರೂ ಅನ್ನ, ಶಿಕ್ಷಣ ಮತ್ತು ಧರ್ಮದ ಮಾರಾಟವಾಗಿರಲಿಲ್ಲ. ಆದರೆ ಕೊಳ್ಳುಬಾಕ ಸಂಸ್ಕøತಿಯ ಈ ದಿನಗಳಲ್ಲಿ ಈಗ ಇದೆಲ್ಲವೂ ಜರುಗಿದೆ. ನಯವಂಚಕರನ್ನು, ಜೊಳ್ಳುಗಳನ್ನು ಸೃಷ್ಠಿಸುತ್ತಿರುವ ನಮ್ಮ ಶಿಕ್ಷಣ ನಮ್ಮ ಯುವಕರನ್ನು ಎತ್ತ ನಡೆಯಿಸಿಕೊಂಡು ಹೊರಟಿದೆ ಎನ್ನುವುದನ್ನು ಜೆ.ಕೃಷ್ನಮೂರ್ತಿ ಈ ತೆರನಾಗಿ ವಿವರಿಸುತ್ತಾರೆ.
      ಆಧುನಿಕ ಶಿಕ್ಷಣ ನಮ್ಮನ್ನು ವಿಚಾರಹೀನರನ್ನಾಗಿಸುತ್ತಿದೆ. ನಾವು ನಾವಾಗುವುದರ ಬಗೆಗೆ ಅಲ್ಲಿ ದಾರಿಗಳಿಲ್ಲ. ಕೆಲವು ಪರೀಕ್ಷೆಗಳನ್ನು ಪಾಸಾಗುತ್ತೇವೆ. ದೈವಲೀಲೆಯಿಂದಾಗಿ ಒಂದು ನೌಕರಿ ಸಿಗುತ್ತದೆ. ಅದು ನಮ್ಮ ನಿತ್ಯದ ಯಥಾವತ್ತಾದ ಜೀವನವಾಗುತ್ತದೆ. ನಾನು ನೌಕರಿಯನ್ನು ಇಷ್ಟಪಡದೇ ಇರುತ್ತಿರಬಹುದು, ಆದರೆ ಹೊಟ್ಟೆಪಾಡಿಗೆ ಬೇರೆ ದಾರಿ ಕಾಣದೆ ಅದನ್ನೇ ಮುಂದುವರೆಸಿಕೊಂಡು ಹೋಗುವ ಒತ್ತಡಕ್ಕೆ ಸಿಲುಕುತ್ತೇನೆ. ನನಗೇನೋ ಸಂಪೂರ್ಣ ಹೊಸದಾಗಿರುವದನ್ನು ಮಾಡಬೇಕೆಂಬ ಹಂಬಲವಿರಬಹುದು.  ಆದರೆ ಜವಾಬ್ದಾರಿ ಮತ್ತು ಬದ್ಧತೆಗಳು ಅದರಿಂದ ಮುಕ್ತಗೊಳಿಸುತ್ತಿಲ್ಲ. ಹೋಗುತ್ತೇನೆ ನಿರಾಶಗೊಂಡ ನಾನು ಕಾಮದಲ್ಲಿ, ಕುಡಿತದಲ್ಲಿ, ರಾಜಕೀಯದಲ್ಲಿ, ಆಡಂಬರದ ಧರ್ಮಾಚರಣೆಯಲ್ಲಿ ಪಲಾಯನಗೈಯುತ್ತೇನೆ.

ಬಿಕ್ಕಟ್ಟು 3: ಮೇಲ್ನೊಟಕ್ಕೆ ಪ್ರಜಾಪ್ರಭುತ್ವದಂತೆ ತೋರಿಸಿಕೊಳ್ಳುವ, ಆದರೆ ಇನ್ನೊಂದು ರೀತಿಯಲ್ಲಿ ಇಡೀ ರಾಷ್ಟ್ರವನ್ನು ಒಂದು ಕೋಮಿನ, ಒಂದು ಆಲೋಚನಾ ಕ್ರಮದ, ಅಧಿಕಾರ ಶಾಹಿಯ ಈ ದೇಶದಲ್ಲಿ ಪ್ರಜಾಪ್ರಭುತ್ವವೂ ಆತಂಕದಲ್ಲಿದೆ. ಯಾವು ಅತಿಕ್ರಮಣದ ರಾಜಕೀಯ ವಿಚಾರಧಾರೆ ಅಲ್ಲ ಎಂದು ಇ ರಾಷ್ಟ್ರ ಒಪ್ಪಿಕೊಂಡಿತೊ ಅದು ಈಗ ಎಲ್ಲ ಮೇರೆಗಳನ್ನು ಮೀರಿದೆ, ಚುನಾವಣೆ ಎನ್ನುವುದು ಒಂದು ವ್ಯಂಗ್ಯವಾಗಿದೆ. ಈ ಕುರಿತು ಹೆರಾಲ್ಡ ಮ್ಯಾಕ್‍ಮಿಲನ್ ಹೇಳುತ್ತಾನೆ-
      ಎಲ್ಲ ರಾಷ್ಟ್ರಗಳು ಒಂದು ಇನ್ನೊಂದನ್ನು ಆಧರಿಸಿವೆ ಮತ್ತು ಇದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಾವೆಲ್ಲರೂ ಮನಗಂಡ ಮಾತಾಗಿದೆ. ಯಾರು ಇಂದು ಪ್ರಜಾಸತ್ತಾತ್ಮಕವಾಗಿ ಅಥವಾ ಪ್ರಜಾಸತ್ತ್ಯೆಯ ದಯೆಯಿಂದ ಅಧಿಕಾರದಲ್ಲಿರುವರೋ ಅವರು ತಾತ್ಕಾಲಿಕವಾಗಿ ನಮ್ಮನ್ನು ಆಳುತ್ತಿರುತ್ತಾರೆ. ಅದು ನಿಮ್ಮ ದೇಶದಲ್ಲಿ ಇರಬಹುದು ಅಥವಾ ನಮ್ಮ ದೇಶದಲ್ಲಿ ಇರಬಹುದು. ಆದರೆ ಇತಿಹಾಸದ ಯಾವುದೇ ಪ್ರಮುಖ ಹಂತದಲ್ಲಿ ತಾತ್ಕಾಲಿಕವಾಗಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಒಂದೇ ಒಂದು ಕಾರಣಕ್ಕಾಗಿ ಯಾರು ಯಾರನ್ನೂ ಅತಿಕ್ರಮಿಸುವಂತಿಲ್ಲ, ನಾವು ಇಷ್ಟಪಟ್ಟಿರುವುದೆಂದ ಮಾತ್ರಕ್ಕೆ ನಮ್ಮಿಚ್ಛೆಯಂತೆ ನಾವು ಏನನ್ನೂ ಚಲಾಯಿಸುವಂತಿಲ್ಲ. ಈ ಪ್ರಪಂಚ ಬದುಕಿದವರ ಪಾಲಿಗೆ ಎಷ್ಟು ಅವಶ್ಯ ಮತ್ತು ಅನಿವಾರ್ಯವೋ ಅಷ್ಟೇ ಪ್ರಮಾಣದಲ್ಲಿ ಸತ್ತವರಿಗಾಗಿ ಮತ್ತು ಹುಟ್ಟಿ ಬರುವವರಿಗೂ ಕೂಡಾ.

ಬಿಕ್ಕಟ್ಟು 4: ಜಾಗತೀಕರಣ ಆರ್ಥಿಕತೆಯ ಒಂದು ವಿಚಿತ್ರ ಮನೋರೋಗಕ್ಕೆ ಹುಟ್ಟುಹಾಕಿತು, ಹಣಗಳಿಸುವುದು ಬದುಕಿನ ಅತಿ ಮುಖ್ಯ ಗುರಿಯಾಯಿತು. ಕಾರ್ಪೊರೇಟ್ ವ್ಯವಸ್ಥೆಗಳು ಯುವಕರನ್ನು ಆತ್ಮವಂಚನೆಯ ದಾರಿಗೆಳೆದು ಅವರಲ್ಲೊಂದು ಭಯವನ್ನು ಸೃಷ್ಠಿ ಮಾಡಿತು. ಅದನ್ನು ಪ್ರಗತಿ, ಸಾಧನೆ ಮತ್ತು ಸಮೃದ್ಧಿ ಎಂದು ಬಿಂಬಿಸಿತು. ಆದರೆ ಪಶ್ಚಿಮ ಪ್ರಣೀತ ಈ ಆಲೋಚನೆ ಎಷ್ಟರಮಟ್ಟಿಗೆ ಈ ದೇಶಕ್ಕೆ ಸೂಕ್ತ ಎನ್ನುವುದನ್ನು ಆಲೋಚಿಸುತ್ತ ಬಹಳ ಹಿಂದೆಯೇ ರವೀಂದ್ರನಾಥ ಟ್ಯಾಗೋರ ಒಂದು ಮಹತ್ವದ ವಿಚಾರ ಹೇಳಿದ್ದಾರೆ.
    ನಾವು ಕಳೆದ ಒಂದು ಶತಮಾನದಿಂದ ಪಶ್ಚಿಮದ ‘ಸಮೃದ್ಧಿ’ ಎಂಬ ರಥದ ಸೆಳೆತಕ್ಕೊಳಗಾಗಿದ್ದೇವೆ. ಅದರ ಧೂಳಿಗೆ ಬೆರಗಾಗಿದ್ದೇವೆ. ಅದರ ಶಬ್ಧಕ್ಕೆ ಮರುಳಾಗಿದ್ದೇವೆ. ನಮ್ಮ ವಿವಶತೆಗೆ ಪಾಮರರಾಗಿದ್ದೇವೆ. ಅದರ ರಭಸದಿಂದ ಪುಳಕಿತರಾಗಿದ್ದೇವೆ. ಈ ರಥದೊಳಗಿನ ಪಯಣವನ್ನು ನಾವು ಪ್ರಗತಿ ಎಂದು ಗುರ್ತಿಸಿದ್ದೇವೆ. ಈ ಪ್ರಗತಿಯನ್ನು ‘ನಾಗರಿಕತೆ’ (ಅiviಟizಚಿಣioಟಿ) ಎಂದಿದ್ದೇವೆ. ಈಗೊಂದು ವೇಳೆ ಪ್ರಗತಿ ಎಂದರೇನು? ಯಾರ ಪ್ರಗತಿ? ಎಂದು ಪ್ರಶ್ನಿಸಿಕೊಂಡರೆ ಈ ನಮ್ಮ ಪ್ರಗತಿಯ ಬುಡವೇ ಅಲ್ಲಾಡಿ ಬಿಡುತ್ತದೆ. ಬಹಳ ತಡವಾಗಿ ನಮಗೊಂದು ತಿಳುವಳಿಕೆ ಬಂದಿದೆ, ಅದರ ಪ್ರಕಾರ ನಮಗೆ ಪ್ರಗತಿ ಎಂದರೆ ರಥದ ವೈಜ್ಞಾನಿಕ ಪರಿಪೂರ್ಣತೆ ಅಷ್ಟೇ ಅಲ್ಲ ಬದಲಾಗಿ ಅದು ಸಾಗುವ ದಾರಿಯಲ್ಲಿಯ ತಗ್ಗು ದಿಣ್ಣೆಗಳನ್ನು ಗಮನಿಸುವುದಾಗಿದೆ. ಪ್ರಗತಿ ಬರೀ ರಥಕ್ಕಲ್ಲ, ದಾರಿಗೂ ಅನ್ವಯಿಸುತ್ತದೆ.


     ಗುರುಕುಲಗಳಾಗಿದ್ದ, ಮಠಗಳಾಗಿದ್ದ ದಿಕ್ಕೆಟ್ಟವರ ಪಾಲಿನ ದ್ವಂದಿಗಳಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಈಗ ಮಹಾ ಮೌನಕ್ಕೆ ಶರಣಾಗಿವೆ. ತ್ಯಾಗದ ಕೇಂದ್ರಗಳೆಲ್ಲ ಭೋಗ ವಿಲಾಸದ ಕೇಂದ್ರಗಳಾಗಿವೆ. ಸರ್ವಧರ್ಮ ಸಮಾನತೆಯ ಕೇಂದ್ರಗಳು ಸರ್ವ ರೀತಿಯ ವಿಭಜನೆಯ ಸ್ಥಳಗಳಾಗಿವೆ. ಆತ್ಮ ಗೌರವವಿಲ್ಲದ, ಅಂತರ್ ದೃಷ್ಟಿ ಇಲ್ಲದ ಮಾಧ್ಯಮಗಳ ಹೊಣಗೇಡಿತನ ಸಮಾಜವನ್ನು ನಗ್ನಗೊಳಿಸುವುದಲ್ಲದೆ ನಗ್ನತೆಯ ಮುಗ್ಧತೆಯನ್ನೂ ಹಾಳು ಮಾಡಿದೆ. ಬೆಳಗಾದರೆ ನಾವು ಮಾಧ್ಯಗಳ ಮೂಲಕ ಕುಡಿಯುವ ರಕ್ತ ನಿತ್ಯ ಬಳಕೆಯ ನೀರಿಗಿಂತಲು ಅಧಿಕವಾಗಿದೆ, ಅಧಮವಾಗಿದೆ.
        ನಮ್ಮ ಸುತ್ತಲಿನ ಸತ್ಯವನ್ನು ದೂರಿಕರಿಸಿ ದೂರದ ಅವಾಸ್ತವವನ್ನು ನಂಬುವ ವರ್ತಮಾನದ ಯುವ ಜನಾಂಗ, ಕಾರ್ಪೊರೇಟ್ ವಲಯದ ಬಳಸಿ ಬಿಸಾಡುವ ಸಿದ್ಧಾಂತಕ್ಕೆ ಮರುಳಾಗಿದ್ದಾರೆ. ಅವಕಾಶಗಳ ಭ್ರಮೆಯನ್ನು ಹುಟ್ಟಿಸುವ ಈ ಬಿಕ್ಕಟ್ಟು, ಅದೇ ಕಾರ್ಪೊರೇಟ್ ವಲಯದಿಂದ, ಮತ್ತೆ ಅದೇ ಸಿದ್ಧಾಂತದಿಂದ ಮೋಸಕ್ಕೆ ಹೋಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ. ಓಡಿಹೋಗಲಾಗದ, ನಿಂತು ಬದುಕಲಾಗದ ಆದರೆ ನಿರಂತರ ಹುಚ್ಚು ಹುಡುಕಾಟಕ್ಕೆ ಹಚ್ಚುವ ಈ ಹವ್ಯಾಸ, ಎಲೆಕ್ಟ್ರಾನಿಕ್ ಮಾದ್ಯಮಗಳನ್ನು ನಂಬಿಕೊಂಡಿರುವವರಿಗೆ ಹುಡುಗಾಟವೆನ್ನಿಸಿದೆ. ಕಣ್ಣು ಕೋರೈಸುವ ಟ್ಯಾಬ್, ಮೋಬೈಲ್, ಕಂಪ್ಯೂಟರ್‍ಗಳು ಕಣ್ಣೀರೊರೆಸುವುದಿಲ್ಲ. ಫ್ಯಾಶನ್‍ನನ್ನು ಕುರಿತು ಮಾತಾಡುವ ಈ ಲೋಕ ಪ್ಯಾಶೆನ್ ಕುರಿತು ಮನುಷ್ಯನನ್ನು ಕೇಂದ್ರಿಕರಿಸುವುದಿಲ್ಲ. ಸಹನೆಯಂತೂ ಸತ್ತುಹೋದ ವಿಚಾರ. ಸಾಮಾಜಿಕ ತಾಣಗಳೆಂದು ಗುರುತಿಸಲ್ಪಡುವ ಈ ಅಂತರ್‍ಜಾಲ ತಾಣಗಳು ನಿಜವಾದ ಸಾಮಾಜಿಕತೆಯ ಮನುಷ್ಯ ಸೌಂದರ್ಯವನ್ನು ಕೊಂದು ಇರುವ ಮನೆಯಲ್ಲಿಯೇ ಒಬ್ಬ ಇನ್ನೊಬ್ಬನೊಂದಿಗೆ ಮಾತನಾಡದಂತೆ ಮಾಡಿ ಆತನನ್ನು ಭ್ರಮೆಗಳಿಂದ ತುಂಬುತ್ತದೆ. ನಾವು ಹೇಗೆ ಕಾಣಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಈ ಮಾರ್ಗ ನಾನು ಏನಾಗಬೇಕು ಎನ್ನುವುದಕ್ಕೆ ಕನ್ನಡಿ ಹಿಡಿಯುವುದಿಲ್ಲ. ಎಲೆಕ್ಟ್ರಾನಿಕ್ ಜಗತ್ತು ನಮ್ಮಲ್ಲಿ ಧೈರ್ಯವನ್ನು ಬೆಳೆಸಲಿಲ್ಲ, ಹೇಸಿ ಧೈರ್ಯವನ್ನ, ಭಂಡ ಧೈರ್ಯವನ್ನ ಬೆಳೆಸಿತು. ಆಳ ಅಧ್ಯಯನದ ಅವಶ್ಯಕತೆಯನ್ನು ದೂರಿಕರಿಸಿ ಮುಂಜಾನೆ ಕುಡಿಯುವ ಚಹಾ ಕುರಿತಾದ ತಿಳುವಳಿಕೆಗೂ ತನ್ನನ್ನು ಮೊರೆ ಹೋಗುವಂತೆ ಮಾಡಿತು. ದುಡ್ಡು, ಅವಕಾಶ ಎನ್ನುವ ಪದಗಳ ಬೆನ್ನು ಹತ್ತಿ ಆತ್ಮವನ್ನು ಧಿಕ್ಕರಿಸಿ ಅನ್ಯರ ಭಾವನೆಗಳನ್ನು ಅವಹೇಳಿಸಿ ಓಡಿಹೋಗುವ ನಿರ್ಲಜ್ಜತೆಯನ್ನು ಬೆಳೆಸಿತು. ಮುಂದಿನ ಮರೀಚಿಕೆಯನ್ನು ಮೆಚ್ಚಿಕೊಂಡವರು ಹಿಂದಣ ಅನಂತವನ್ನು ಅಸಹ್ಯಗೊಳಿಸುವ ಆತ್ಮ ಭ್ರಷ್ಟತೆಯನ್ನು ಬೆಳೆಸಿತು. ಈ ರೀತಿ ಬುಡವಿಲ್ಲವಾಗಿರುವ ಈ ನನ್ನ ಎಳೆಯ ಜಗತ್ತನ್ನು ನಾನು ವಾಟೆವರ್ ಜನರೇಶನ್ ಎನ್ನುತ್ತೇನೆ, ಎನ್ನುತ್ತಾರೆ ನನ್ನೊಂದಿಗಿದ್ದ ಗೆಳೆಯ ನವೀನ್. ಇದೊಂದು ಶೇಮ್‍ಲೆಸ್ ಸೋಸಾಯಿಟಿ ಎನ್ನುತ್ತಾರೆ ಹಿರಿಯ ಚಿಂತಕಿ ಡಾ.ಇಂದಿರಾ. ಈ ಬಿಕ್ಕಟ್ಟೆ ನಮ್ಮ ಮೂಲ. ಏಕೆಂದರೆ ವರ್ತಮಾನದ ಹೂಗಳನ್ನು ಧಿಕ್ಕರಿಸಿ ಭವಿಷ್ಯದ ಹಣ್ಣುಗಳ ಕನಸು ಕಾಣಲಾಗುವುದಿಲ್ಲ ಹಾಗೆಯೇ ನಮ್ಮ ಮುಂದೆಯೇ ನಾಶವಾಗುವ ಯುವಜನಾಂಗವನ್ನು ನಿರ್ಲಕ್ಷಿಸಿ ಭವಿಷ್ಯದ ಭವ್ಯ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.

Wednesday, 11 June 2014

ಕಾಫರ್‍ನ ಕೊನೆಯ ಪತ್ರಗಳು(Khawaja Ahemad Abbas)


K A Abbas with Jahana Ara
          1948 ರಲ್ಲಿ India Weekly ಯಲ್ಲಿ ಕೆ.ಎ.ಅಬ್ಬಾಸರು  ಕವಿ “ಸಾಹೀರ್‍ಗೊಂದು ಜಾಹೀರ್ ಪತ್ರ” ಎಂಬ ಶೀರ್ಷಿಕೆ ಅಡಿಯಲ್ಲಿ ಪತ್ರ ಬರೆದರು. ಆ ಪತ್ರದ ಒಕ್ಕಣಿಕೆ ಹೀಗಿತ್ತು.

ಪ್ರೀತಿಯ ಸಾಹೀರ್,
        ನೀನು ಯಾವ ಕಾಲಕ್ಕೂ ಭಾರತವನ್ನು ಬಿಟ್ಟು ಬಂದೆ ಎಂದುಕೊಳ್ಳಲಾಗದು. ಭಾರತದ ಪಂಚನದಿಗಳ ಪಂಜಾಬದ ಮಣ್ಣಿನ ವಾಸನೆಯ ನಿನ್ನ ಕವಿತೆ ಇಂದಿಗೂ ಅವಿಶ್ರಾಂತಿ ಆತ್ಮದಂತೆ ಇಲ್ಲಿಯೇ ಸುತ್ತುತ್ತಿದೆ. ನೀನು ಯಾವ ಕಾಲಕ್ಕೂ ಪಾಕಿಸ್ಥಾನಿಯನಾಗಲು ಸಾಧ್ಯವೇ ಇಲ್ಲ. ಕನಿಷ್ಟ ನಿನ್ನ ಹೆಸರಿನೊಂದಿಗೆ ಅಂಟಿಕೊಂಡ ಆ “ಲುಧಿಯಾನಾ” ಎಂಬ ಪದ ಇರುವವರೆಗೂ ಆದರು. ನೀನು ಪ್ರಪಂಚದ ಯಾವುದೇ ಮೂಲೆಯಲ್ಲಿರು, ನಿನ್ನ ಹೆಸರು ನೀನು ಬದಲಾಯಿಸಿಕೊಳ್ಳುವವರೆಗೂ ನೀನು ಭಾರತೀಯನೆ. ‘ಭಾರತದ ಕವಿಯೆ’ ಎಂಬುದನ್ನು ಮರೆಯಬೇಡ. ಒಂದು ವೇಳೆ ನೀನು ಪಾಕಿಸ್ಥಾನಿಯನೇ ಆಗಬೇಕಾದರೆ ನಿನ್ನ ಪಾಕಿಸ್ಥಾನ ಭಾರತದ ಲುದಿಯಾನಾವನ್ನು ಗೆಲ್ಲಬೇಕಷ್ಟೆ. ಅದು ಪಾಕಿಸ್ಥಾನಕ್ಕೆ ಈ ಜನ್ಮದಲ್ಲಿ ಸಾಧ್ಯವಾಗದ ಮಾತು. ಪ್ರೀತಿಯಿಂದ ಕರೆಯುತ್ತೇನೆ. ನೀನು ಮರಳಿ ಬಂದುಬಿಡು.
                                                                                  ಇಂತಿ ನಿನ್ನ
                                                                                   ಖ್ವಾಜಾ
       ಹಿಂದಿ, ಇಂಗ್ಲೀಷ್ ಹಾಗೂ ಉರ್ದು ಭಾಷೆಗಳಲ್ಲಿ ಎಪ್ಪತ್ತಕ್ಕು ಹೆಚ್ಚು ಕೃತಿಗಳನ್ನು ರಚಿಸಿ, ‘ಸನ್ ಆಫ್ ಇಂಡಿಯಾ’ ಕೃತಿ ಬರೆದು ರಷ್ಯಾದಲ್ಲಿ ಎಂಬತ್ತು ಸಾವಿರ ಪ್ರತಿಗಳ ಮಾರಾಟದ ದಾಖಲೆಯನ್ನು ನಿರ್ಮಿಸಿ, ತಮ್ಮ ಅನೇಕ ಕೃತಿಗಳನ್ನು ಜಗತ್ತಿನ ಒಂಬತ್ತು ಭಾಷೆಗಳಲ್ಲಿ ಪ್ರಕಟಿಸಿ, ಪದ್ಮಭೂಷಣದಂಥ ಪ್ರಶಸ್ತಿಯನ್ನು ಪಡೆದೂ ಬದುಕಿನ ಕೊನೆಯ ದಿನಗಳಲ್ಲಿ ತಮ್ಮ ಅಕೌಂಟಿನಲ್ಲಿ ಕೆಲವು ಸಾವಿರ ಹಣವನ್ನು ಹೊಂದಿರದ ಈ ಅಬ್ಬಾಸ್ ಎಂಥ ವಾಸ್ತವವಾದಿಯಾಗಿದ್ದ ಮತ್ತು ಈ ನೆಲವ ನಂಬಿದ ಮಹಾನ್ ವ್ಯಕ್ತಿಯಾಗಿದ್ದ ಎನ್ನುವುದಕ್ಕೆ ಈ ಮೇಲಿನ ಪತ್ರ ಒಂದು ಅದ್ಭುತ ನಿದರ್ಶನ. ಹಲವು ಭ್ರಮೆಗಳ ಬೆನ್ನೇರಿ ದೇಶ ಬಿಟ್ಟು ಹೋಗಿದ್ದ ಶ್ರೇಷ್ಠ ಸಾಹಿತಿ ಸಾಹಿರ್ ಲುಧಿಯಾನ್ವಿಗೆ ಬರೆದ ಅಬ್ಬಾಸರ ಈ ಪತ್ರ ಇಂದಿಗೂ ದೇಶ ತೊರೆಯುವವರಿಗೆ ಒಂದು ಮಾನವೀಯ ಕರೆಯೇ.
Abbas with his Adapted Daughter

1903 ಜೂನ್ 7 ರಂದು ಪಾಣೀಪತ್ತದಲ್ಲಿ ಜನಿಸಿದ ಖ್ವಾಜಾ ಅಹಮ್ಮದ್ ಅಬ್ಬಾಸರ ತಂದೆ, ಆಯುರ್ವೇದ ಔಷಧಿಗಳ ವ್ಯಾಪಾರಿ. ಇಸ್ಲಾಂನ ಸರಳ ಜೀವನ ಹಾಗೂ ಸಿದ್ಧಾಂತಗಳಲ್ಲಿ ಅಪಾರ ವಿಶ್ವಾಸ ಇರಿಸಿಕೊಂಡವರು. ಒಡೆಯ, ಆಳುಮಗ ಎನ್ನುವ ವ್ಯತ್ಯಾಸದ ಕಾರಣ ಯಾರನ್ನೇ ಕೀಳಾಗಿ ಕರೆಯುವುದನ್ನು, ಮದುವೆ ಮುಂಜಿವೆಗಳಲ್ಲಿ ಧರ್ಮದ ಹೆಸರಿನಲ್ಲಿ ಮಾಡುವ ದುಂದುವೆಚ್ಚವನ್ನು ಮತ್ತು ಅಂದಿನ ದಿನಗಳಲ್ಲಿ ಸಂಪ್ರದಾಯಸ್ಥ ಮುಸ್ಲಿಂರಲ್ಲಿ ಹಾಗೂ ರಜಪೂತರಲ್ಲಿ ರೂಢಿಯಲ್ಲಿದ್ದ ಪರದಾ ಪದ್ಧತಿಯನ್ನು ಉಗ್ರವಾಗಿ ಖಂಡಿಸಿದ ಪ್ರಗತಿಪರ ವಿಚಾರವಾದಿ ಅಬ್ಬಾಸರ ತಂದೆ. ಮೆಟ್ರಿಕ್ಯುಲೇಶನ್‍ವರೆಗೆ ಪಾಣಿಪತ್‍ನಲ್ಲೇ ಓದಿದ ಅಬ್ಬಾಸನಿಗೆ ನಗುನಗುತ್ತಲೇ ನೇಣುಗಂಬ ಏರಿದ ಭಗತ್‍ಸಿಂಗ್ ಹಾಗೂ ಹಿರಿಯ ಮಿತ್ರ ಬಾಲ್ಯಸ್ನೇಹಿತರು.
1935 ರಲ್ಲಿ ಅಲೀಘಡ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರಾಗಿ ಹೊರಬಂದ ಅಬ್ಬಾಸರು ಇಂಗ್ಲಿಷ್ ಸಾಹಿತ್ಯವನ್ನು ತೆಗೆದುಕೊಂಡು ಎಂ.ಎ.ಓದಲು ಮುಂದುವರಿಸಿದರಾದರೂ ಅಲೀಘಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಕಟ್ಟಡದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ ಆಪಾದನೆಯ ಮೇಲೆ ಹೊರಹಾಕಲ್ಪಟ್ಟರು. ವಿದ್ಯಾರ್ಥಿ ಜೀವನದಲ್ಲಿ ಅವರ ಈ ತರಹದ ಕಾರ್ಯಗಳು ಹಲವಾರು. ದೇಶಭಕ್ತಿಯ ದೊಡ್ಡ ಸಂಪ್ರದಾಯದ ಹಿನ್ನಲೆಯಲ್ಲಿ ಬೆಳೆದ ಅಬ್ಬಾಸರ ಹೆಜ್ಜೆಗಳು, ನಡೆ-ನುಡಿಗಳು ಸ್ಪಷ್ಟ ಹಾಗೂ ನೇರ. ಅವರ ಬಾಲ್ಯದ ಇನ್ನೊಂದು ಘಟನೆ ಹೀಗಿದೆ : ಪ್ರಾಥಮಿಕ ಶಾಲಾ ಮೇಲ್ವಿಚಾರಣೆಗೆ ಬಂದ ಆಂಗ್ಲ ಅಧಿಕಾರಿಯೊಬ್ಬ ಕೇಳಿದ ‘ಭಾರತಕ್ಕೆ ಬ್ರಿಟೀಷ್ ಸಾಮ್ರಾಜ್ಯ ನೀಡಿದ ವರಗಳೇನು?’ ಎಂದು. ರೈಲ್ವೇ, ಸಡಕೇಂ, ಢಾಕಖಾನೇಂ, ದವಾಖಾನೇಂ....ಎಂದು, ಮುಂದಿನ ಇನ್ನೊಂದು ಖಾನೇಂ ಹೇಳದೆ ಕುಳಿತ ಇನ್ನೊಬ್ಬ ಹುಡುಗ. ತಕ್ಷಣ ಅಬ್ಬಾಸ್ ಎದ್ದು ನಿಂತು ಉತ್ತರಿಸಿದ ‘ಬಂಧೀಖಾನೆ’ ಎಂದು.
ಶಿಕ್ಷಣದ ನಂತರ ಅಬ್ಬಾಸ್ ಆಯ್ದುಕೊಂಡ ವೃತ್ತಿ ಪತ್ರಿಕೋದ್ಯಮ. ಪತ್ರಕರ್ತನೋರ್ವ ಆ ಅನಿಶ್ಚಿತ ಬದುಕನ್ನು ಎಷ್ಟೊಂದು ಪ್ರೀತಿಸಿರುತ್ತಾನೆ ಎನ್ನಲು ಅಬ್ಬಾಸರ ಜೀವನ ಒಂದು ಶ್ರೇಷ್ಠ ನಿದರ್ಶನ. 50 ರೂ. ಸಂಬಳದೊಂದಿಗೆ ಪ್ರಾರಂಭವಾದ ಅವರ ಪತ್ರಿಕೋದ್ಯಮದ 61 ವರ್ಷದ ದೀರ್ಘ ಜೀವನದಲ್ಲಿ ಮಾಡಿದ ಸಾಹಸಗಳು, ಇಂದು ಕೋಟ್ಯಾಂತರ ರೂಪಾಯಿಗಳಿರುವ ವ್ಯಕ್ತಿಗೂ ಸಾಧ್ಯವಿಲ್ಲ. ತಮಗೆ ಸಿಗುತ್ತಿದ್ದ 50 ರೂ.ದೊಂದಿಗೆ ಮಾನವ ಹೃದಯಗಳ ವೈಶಾಲ್ಯವನ್ನು ನಂಬಿಕೊಂಡಿದ್ದ ಅಬ್ಬಾಸರಿಗೆ ಯಾವ ಸಾಹಸಗಳೂ ಸಮಸ್ಯೆಯಾಗಲಿಲ್ಲ. ಅವರು ಜೇಬಿನಲ್ಲಿ ದುಡ್ಡಿರದಿದ್ದರೂ ವಿಶ್ವವಿಹಾರದ ಕನಸಿನ ನಕ್ಷೆ ಹಾಕುತ್ತಿದ್ದರು. ತಮಗೆ ಊಟಕ್ಕೆ ಇಲ್ಲದ ಸಮಯದಲ್ಲಿಯೂ ಅತಿಥಿಗಳಿಗೆ ಭಾರೀ ಭೋಜನದ ಆಮಂತ್ರಣ ಪತ್ರ ನೀಡುತ್ತಿದ್ದರು. ತಮಗೇ ನೆಲ ಇಲ್ಲದ ಅನಿಶ್ಚಿತ ಕಾಲದಲ್ಲಿಯೂ ರಷ್ಯಾದೊಂದಿಗೆ ಜಂಟಿ ಚಿತ್ರ ನಿರ್ಮಾಣಕ್ಕೆ ಸಹಿ ಹಾಕುತ್ತಿದ್ದರು. ಯಾಕೆಂದರೆ ‘ದಾರಿ ಸಾವಿರ ಉಂಟು ಬೆಳಕಿನರಮನೆಗೆ’ ಎಂಬುದು ಅವರ ವಾದ.
          ರೈಲ್ವೆ ಸ್ಟೇಶನ್‍ಗಳಲ್ಲಿ, ಬಸ್‍ಸ್ಟ್ಯಾಂಡ್‍ಗಳಲ್ಲಿ, ವಿಮಾನಯಾನದಲ್ಲಿ, ಕಿಕ್ಕಿರಿದ ಫುಟ್‍ಪಾತ್ ಬೆಂಚುಗಳ ಮೇಲೆ, ಉಳಿದುಕೊಂಡ ಲಾಡ್ಜಗಳಲ್ಲಿ ಎಲ್ಲೆಂದರಲ್ಲಿ ಕುಳಿತು ಸಾಹಿತ್ಯ ರಚಿಸುತ್ತ ಹೋದ ಅಬ್ಬಾಸ್ ನಮ್ಮಂತೆ ಪಂಚತಾರಾ ಹೋಟೆಲುಗಳಲ್ಲಿ ಸೃಷ್ಠಿಯಾಗುವ ಕೂದಲು ಸೀಳುವ ಸಾಹಿತ್ಯವನ್ನು ರಚಿಸಲಿಲ್ಲ. ಸಾಮಾನ್ಯರ ಮಧ್ಯ, ಸಾಮಾನ್ಯರಂತೆ, ಸಾಮಾನ್ಯನ ಸಮಸ್ಯೆಗಳನ್ನು ಕುರಿತು ಬರೆದರು.
          ವೃತ್ತಿ ಭರವಸೆ ಇಲ್ಲದೆ ಕೆಲವೊಮ್ಮೆ ಪತ್ರಕರ್ತ, ಕೆಲವೊಮ್ಮೆ ಚಿತ್ರ ನಿರ್ದೇಶಕ, ನಿರ್ಮಾಪಕ, ಕೆಲವೊಮ್ಮೆ ರಾಜಕೀಯ ಸಲಹೆಗಾರ, ಕೆಲವೊಮ್ಮೆ ಸಾಹಿತಿ ಹೀಗೆ ಅಬ್ಬಾಸರದು ಬಹುರೂಪಿಯ ಬದುಕು. ದೇಶ ವಿಭಜನೆಯ ನಂತರ ಕುಲಬಾಂಧವರೆಲ್ಲ ಪಾಕಿಸ್ತಾನಕ್ಕೆ ಹೋದರು. ಇನ್ನೂ ಮೂವತ್ತು ವರ್ಷಗಳ ಬದುಕು ಬಾಕಿ ಇರುವಾಗ ಪ್ರೀತಿಯ ಹೆಂಡತಿ ಮುಜ್ಜಿ ತೀರಿಹೋದರು. ಅಬ್ಬಾಸರಿಗೆ ಮಕ್ಕಳಂತೂ ಆಗಲೇ ಇಲ್ಲ. ಪಾಣಿಪತ್ತಿನಿಂದ ದೆಹಲಿ, ದೆಹಲಿಯಿಂದ ಮುಂಬೈ ಎಂದು ಅಲೆದಾಡಿಕೊಂಡಿದ್ದ ಅಬ್ಬಾಸರಿಗೆ ಒಂದು ನೆಲೆ ಎಂಬುದೂ ಇರಲಿಲ್ಲ. ಅಬ್ಬಾಸ್ ಕಮ್ಯುನಿಸ್ಟರಲ್ಲಿ ಕಾಂಗ್ರೆಸಿಗನಂತೆ, ಕಾಂಗ್ರೆಸಿಗರಲ್ಲಿ ಕಮ್ಯುನಿಸ್ಟರಂತೆ ಕಂಡರು. ಸಾಹಿತಿಗಳಲ್ಲಿ ಸಿನಿಮಾದವರಂತೆ, ಸಿನಿಮಾದವರಿಗೆ ಸಾಹಿತಿಯಂತೆ ದೂರ ಉಳಿದವರಾದರು. ಎಂಷ್ಟೆ ವಿಶಾಲ, ಮಾನವೀಯ ಬದುಕನ್ನು ಬದುಕಿದರೂ ಅಬ್ಬಾಸ್ ಹಿಂದೂಗಳಿಗೆ ಮುಸ್ಲಿಂರಂತೆ, ಮುಸ್ಲಿಂರಿಗೆ ಕಾಫಿರ್‍ನಂತೆ ಕಂಡರು. ಆದರೆ ಅಂತರಂಗದಲ್ಲಿ ಇವೆರಡೂ ಅಲ್ಲದ ಅಬ್ಬಾಸ್ ಒಬ್ಬ ಫಕೀರನಾಗಿದ್ದ, ಸೂಪಿಯಾಗಿದ್ದ ಲೋಕದ ಸಂತೆಯಲ್ಲಿ ನಿಂತ ಸಂತರಾಗಿದ್ದರು.
       ಕಾಲನ ಕೈ ಯಾರನ್ನೂ ಬಿಡುವುದಿಲ್ಲ. ಅದು ಅಬ್ಬಾಸರನ್ನೂ ಬಿಡಲಿಲ್ಲ. ಬೊಂಬಾಯಿಯ ಭೀಷಣ ಬದುಕಿನಲ್ಲಿ ಪ್ರೀತಿಯ ಹೂ ಆಗಿದ್ದ ಅಬ್ಬಾಸ್ ಕೊನೆಕೊನೆಗೆ ಪಾಶ್ರ್ವವಾಯುವಿನಿಂದ ಬಳಲಿದರು. ಮುಪ್ಪಾವಸ್ಥೆಯ ಮಂದವಾದ ಕಣ್ಣಿನ ಬೆಳಕಿನಿಂದಾಗಿ ಕನಲಿದರು. ಅಬ್ಬಾಸರ ದೇಹಕ್ಕೆ ಮುಪ್ಪು ಬಂತು. ಆದರೆ ಮನಸ್ಸಿಗೆ ಯೌವ್ವನವೇ ಇತ್ತು. ಭಾರತ ಎನ್ನುವ ‘ವೇಸ್ಟ್‍ಲ್ಯಾಂಡ್’ ನಲ್ಲಿ ‘ಥೈರಾಸಸ್’ನಂತೆ ಉಳಿದುಕೊಡಿದ್ದ ಅಬ್ಬಾಸರು ಬೊಂಬಾಯಿಯ ಜುಹುದ ದಂಡೆಯ ಮೇಲೆ ಕುಳಿತು ಮಾನವ ಮನಸ್ಸುಗಳ ಬಿಸುಪಿಗಾಗಿ ಕಾತರಿಸುತ್ತಿದ್ದರು. ಯಾಕೆಂದರೆ ಮಾನವ ಸಂಬಂಧಗಳಿಲ್ಲದ ಒಂದು ದಿನದ ಬದುಕೂ ಅಬ್ಬಾಸರಿಗೆ ಬಂಜರು ಎನ್ನಿಸುತ್ತಿತ್ತು.
       ಹೀಗೆ ದೇಶಪ್ರೇಮ, ಮಾನವ ಪ್ರೇಮ, ಪತ್ರಿಕಾ ಪ್ರೇಮದ ಪೂಜಾರಿಯಾಗಿದ್ದ ಅಬ್ಬಾಸ್ ಹಲವಾರು ರಂಗಗಳಲ್ಲಿ ತಾವೇ ‘ಮೊದಲ ಪುಟ’ವಾಗಿ ಆರಂಭಿಸಿದರು. ಮತ್ತು ತಾವೇ ‘ಕೊನೆಯ ಪುಟ’ವಾಗಿ ಹೋದರು. ಮರೆವಿನ ಮಾಯೆ ಅನಂತರ ಎಲ್ಲವನ್ನೂ ಮುಚ್ಚಿ ಹಾಕಿದಳು. ಆದರೆ ಅವರ ಕೊನೆಯ ಈ ಪುಟವನ್ನು ಮಾತ್ರ ಮರೆಸುವಲ್ಲಿ ಸೋತು ಹೋದಳು. ಅಬ್ಬಾಸ್ ತಮ್ಮ ಮರಣೋತ್ತರ ಪತ್ರದಲ್ಲಿ ಹೀಗೆ ಬರೆಯುತ್ತಾರೆ:
        “ನನ್ನ ಶವಯಾತ್ರೆಯ ಮುಂದೆ ನನ್ನ ಮೆಚ್ಚಿನ ಮಹಾರಾಷ್ಟ್ರದ ಲೇಝಿಮ್ ಯುವಕರ ಗುಂಪಿರಲಿ, ಅದರ ಸದ್ದು ನನ್ನ ಆದರ್ಶ ಮಹಾತ್ಮ ಗಾಂಧಿಯ ಮೂರ್ತಿಯ ಸಮೀಪ ಬರುವವರೆಗೆ ಮಾತ್ರ ಕೇಳುತ್ತಿರಲಿ. ಬದುಕೆಲ್ಲ ಸಮಯದ ಕೊರತೆಯಿಂದ ನಾನು ಪೂರ್ತಿ ಪ್ರೀತಿ ಕೊಡಲಾಗದ ನನ್ನ ಹೆಂಡತಿ ‘ಮುಜ್ಜಿ’ಯ ಪಕ್ಕದ ಗೋರಿಯೇ ನನ್ನದಾಗಿರಲಿ. ಜೀವನವಿಡೀ ನಿರೀಶ್ವರವಾದಿಯಾಗಿದ್ದ ನನ್ನ ಸಾವಿನ ದಿನಕ್ಕೆ ಒಬ್ಬ ಪಾದ್ರಿ, ಬೌದ್ಧಗುರು, ಇನ್ನೊಬ್ಬ ಜೈನಗುರು ಉಪಸ್ಥಿತರಿರಲಿ. ಪತ್ರಿಕಾ ಜೀವನದ 47 ವರ್ಷದ ನನ್ನ ಪ್ರೀತಿಯ ‘ಕೊನೆಯ ಪುಟ’ದ ಎಲ್ಲ ಲೇಖನಗಳೂ ನನ್ನ ಸಮಾಧಿಯೊಳಗಿನ ಹಾಸಿಗೆಯಾಗಿರಲಿ, ನನ್ನ ದೇಹದ ಮೇಲೆ ಹೆಣದ ಬಟ್ಟೆಯಾಗಿರಲಿ, ಇಲ್ಲಿ ಮರುಜನ್ಮ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ನಿಮ್ಮನ್ನೆಲ್ಲ ಮರಳಿ ಕಾಣುವ ಭರವಸೆಯಿಲ್ಲ. ಹಾಗೇನಾದರೂ ನನ್ನನ್ನು ಕಾಣುವ ಆಶೆ ನಿಮಗಾದರೆ ನನ್ನ ಎಪ್ಪತ್ತು ಪುಸ್ತಕಗಳನ್ನು ಓದಿ ಆನಂದಿಸಿ ನನ್ನ ಮೂವತ್ತು ಚಿತ್ರಗಳನ್ನು ನೋಡಿ ಸಂತೋಷ ಪಡಿ. ಅಲ್ಲಿದೆ ನನ್ನ ಚೇತನ.
                                                                    ಇಂತು                                                                                         ಕೆ.ಎ.ಎ.

Monday, 5 May 2014

ಸಫ್ದರ್ ಹಸ್ಮಿ: ಧ್ವನಿ ಇದ್ದರೆ ಪ್ರತಿಧ್ವನಿ (Safdar Hashmi)



     “ಪ್ರಪಂಚವೇ ನಮ್ಮ ದೇಶವೆನ್ನುವುದಾದರೆ ಆದ್ಯತೆಯ ದೃಷ್ಟಿಯಿಂದ ಭಾರತದ ಹಿಡಿ ಮಣ್ಣಿಗೆ ನನ್ನ ಮೊದಲ ನಮನ. ಜಗತ್ತಿನ ಮನುಕುಲವೆಲ್ಲವೂ ನಮ್ಮ ಸಹೋದರರೆನ್ನುವುದಾದರೆ ಭಾರತದ ನನ್ನ ಸಹೋದರರಿಗೆ ಮೊದಲ ಸ್ಥಾನ.” ಇವು ಮಕ್ಕಾದಿಂದ ಭಾರತಕ್ಕೆ ಬಂದು, ತಮ್ಮ ಇಡೀ ಬದುಕನ್ನು ಭಾರತೀಯ ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪಕ್ಕಾಗಿ ಕಳೆದ ಮೌಲಾನಾ ಅಬ್ದುಲ್ ಕಲಾಂರ ಸಾಲುಗಳು. ಹೀಗೆ ಈ ದೇಶ ಜಾತಿ-ಮತ ಪಂಥಗಳ ಭೇದವಿಲ್ಲದೇ ಹರಿದು ಬಂದ ಇಂಥ ಹಲವಾರು ಕನಸುಗಾರರಿಂದ ಕೈ ಗೂಡಿದ ಸಾಧನೆ.  ಮುಸ್ಲಿಂ ಎಂದರೆ ‘ಭಯೋತ್ಪಾದಕ' ಎನ್ನುವ ಅರ್ಥದ ಸಂಕುಚಿತತೆಯಲ್ಲಿ ಬದುಕುವ ನಮಗೆ ‘ಮುಸ್ಲಿಂ' ಎಂದರೆ ಅಲಿ ಸಹೋದರರು, ಆಜಾದರುಗಳು, ಗಫ್‍ರ್ ಖಾನ್, ಅಬ್ಬಾಸ್, ಕೈಫಿ ಹಾಗೂ ಸಾವಿರ ಸಾವಿರ ಸೂಫಿಗಳು, ದರವೇಶಿಗಳು ಎನ್ನುವುದೂ ಹೊಳೆಯಬೇಕು. ಮತಾಂಧರಿಂದ ಯಾವ ಮತವೂ ಮುಕ್ತವಾಗಿಲ್ಲ. ಮಧ್ಯಯುಗೀನ ಸಂದರ್ಭದಲ್ಲಿ ಬರುವ ಈ ಮುಸ್ಲಿಮರಕ್ಕಿಂತಲೂ ಮುಂಚೆ ದೇಶವೇನು ಬರೀ ಶಾಂತಿಯ ಬೀಡೆ ಆಗಿರಲಿಲ್ಲ. ಮನುಷ್ಯ ಮತ ಅಂಥವರ್ಯಾರಿಗೂ ಬೇಕಾಗಿಲ್ಲ. ಅಂದಹಾಗೆ ಸಾಲು ಸಾಲು ರಾಷ್ಟ್ರನಿಷ್ಠ ಮುಸ್ಲಿಂರಲ್ಲಿ ಈ ಒಬ್ಬನನ್ನು ನೀವು ಓದಲೇಬೇಕು.

 ಸಫ್ದರ್ ಹಸ್ಮಿ(Safdar Hashmi)
ಸಫ್ದರ್ ಹಸ್ಮಿ(Safdar Hashmi)
            ಈತನ ವಯಸ್ಸು ಕೇವಲ ಮುವತ್ತ್ನಾಲ್ಕು. ಅದು ನಮ್ಮ ವೈರಿಯೂ ಸಾಯಬಾರದ ವಯಸ್ಸಲ್ಲವೆ? ಕೊಲೆಯಂತಹ ಬರ್ಬರ ಶಿಕ್ಷೆಯನ್ನು ಎದುರಿಸಲು ಈತ ಮಾಡಿದ ಅಪರಾಧವೇನು? ಉತ್ತರ, ಈತ ಸತ್ತು ಹೋದ ಸಾಮಾನ್ಯರಲ್ಲಿ ಆತ್ಮಾಭಿಮಾನದ ಕಿಚ್ಚು ಹಚ್ಚಿದ್ದ, ಗುಡಿಸಲುಗಳಲ್ಲಿ ಬೆಳಕಿನ ಬುಡ್ಡಿ ದೀಪ ಬೆಳಗಿಸಿದ. ‘ಗಾಂವೊಸೆ ಶಹರ್ ತಕ್' ಎಂದು ಜನರನ್ನು ಬಾಚಿ ತಬ್ಬಿ ‘ಹಲ್ಲಾ ಬೊಲ್’(Halla Bol) ಎಂದು ಮೂಲಭೂತವಾದಿಗಳ, ಬಂಡವಾಳಶಾಹಿಗಳ, ಪಟ್ಟಭದ್ರ ರಾಜಕಾರಣಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದ. ಅಂದಹಾಗೆ, ಈತನ ಹೆಸರು ಹಸ್ಮಿ, ಸಫ್ದರ್ ಹಸ್ಮಿ(Safdar Hashmi). ರಂಗಭೂಮಿಗೆ ಈತನೇ ಒಂದು ಪರ್ಯಾಯ. 
ಹಾಡು ಹಗಲೇ ದೆಹಲಿಯ ಜನಸಾಮಾನ್ಯರಿಂದ ತುಂಬಿದ್ದ ಪ್ರದೇಶದಲ್ಲಿ ಈತನ ಕೊಲೆಯಾಯಿತು. ಕೊನೆಯುಸಿರೆಳೆದ ಕ್ಷಣದಲ್ಲಿ
            12 ಎಪ್ರಿಲ್ 1954 ರಲ್ಲಿ ದೆಹಲಿಯಲ್ಲಿ ಹುಟ್ಟಿ, 2 ಜನೆವರಿ 1989 ರಲ್ಲಿ ಕೊಲೆಯಾದ ಈತ ಹನಿಫ್ ಮತ್ತು ಖಮರ್ ಆಜಾದ್ ಹಸ್ಮಿಯವರ ಮಗ. ಶೈಕ್ಷಣಿಕ ಸಾಧನೆ ಅಲಿಘಡ್ ಮತ್ತು ದೆಹಲಿಗಳಲ್ಲಿ. ಮನೆ ತುಂಬ ಉದಾರವಾದಿ ಮಾರ್ಕ್ಸ್ ಚಿಂತನೆಯ ವಾತಾವರಣ. ದೆಹಲಿಯ ಸೇಂಟ್ ಸ್ಟಿಫನ್ಸ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಸೇರಿಕೊಂಡ ಹಸ್ಮಿ ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿಯೇ ಸ್ನಾತಕ ಪದವಿಯನ್ನ ಪೂರೈಸಿದ. ಕಾಲೇಜು ದಿನಗಳಲ್ಲಿಯೇ ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ, ಸ್ಟುಡೆಂಟ್ ವಿಂಗ್ ಆಫ್ ಸಿಪಿಐ-ಎಮ್, ಕಿಸಾನ್ ಸಭಾ ಮತ್ತು ಇಪ್ಟಾ ಗಳೊಂದಿಗೆ ಬೆಳೆದು ಭಾರತದ ಈ ನೆಲದಲ್ಲಿ ಸಮಾನತೆಯ ಕನಸು ಕಂಡಿದ್ದ ಹಸ್ಮಿ, ತನ್ನದೇ ಆದ ಜಾತ್ಯಾತೀತ, ರಾಷ್ಟ್ರನಿಷ್ಠ ಗೆಳೆಯರ ವೇದಿಕೆಯನ್ನು ರೂಪಿಸುವ ದೊಡ್ಡ ಕನಸನ್ನು ಕಂಡಿದ್ದ. ಇದನ್ನು ಸಾಧಿಸಲು ಆತ ತೆಗೆದುಕೊಂಡ ಅವಧಿ ಕೇವಲ 21 ವರ್ಷ! ಅಂದರೆ, 1973 ರಲ್ಲಿ ‘ಜನ ನಾಟ್ಯ ಮಂಚ್'(ಜನಮ್) ಎನ್ನುವ ಜನಸಾಮಾನ್ಯರ ರಂಗ ವೇದಿಕೆಯನ್ನು ದೆಹಲಿಯಲ್ಲಿ ಹುಟ್ಟು ಹಾಕಿ ಹಸ್ಮಿ ಕಹಳೆ ಊದಿದ.
  
       ಇಂದಿರಾ ಗಾಂಧಿಯ ವಿರುದ್ಧ ಏಳು ದಿನಗಳವರೆಗೆ ನವದೆಹಲಿಯ ಬೋಟ್ ಕ್ಲಬ್ಬಿನ ಬಯಲಿನಲ್ಲಿ ‘ಕುರ್ಸಿ, ಕುರ್ಸಿ, ಕುರ್ಸಿ’
Halla Bol by Safdar Hashmi
Halla Bol by Safdar Hashmi
ಎನ್ನುವ ಬೀದಿ ನಾಟಕವನ್ನು ಪ್ರದರ್ಶಿಸಿದ, 1975ರ ತುರ್ತು ಪರಸ್ಥಿತಿಯ ಸಂದರ್ಭದಲ್ಲಿ ಘರ್‍ವಾಲ್, ಕಾಶ್ಮೀರ್ ಮತ್ತು ದೆಹಲಿ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಕೆಲಸ ಮಾಡುತ್ತ ಯುವಕರಲ್ಲಿ ವಿಚಾರ ಕ್ರಾಂತಿಗೆ ಆವ್ಹಾನ ನೀಡಿದ. 1979 ರಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸದಸ್ಯನಾದ, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಮತ್ತು ದ ಎಕನಾಮಿಕ್ ಟೈಮ್ಸ್‍ಗಳಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ, ವೆಸ್ಟ್ ಬೆಂಗಾಲ್ ಸರ್ಕಾರದ ಇನ್‍ಫರ್ಮೇಶನ್ ಅಧಿಕಾರಿಯಾಗಿ ದೆಹಲಿಯಲ್ಲಿ ಕಾರ್ಯ ನಿರ್ವಹಿಸಿದ, 1988 ರಲ್ಲಿ ರಷ್ಯಾದ ಕಾದಂಬರಿಕಾರ ಮ್ಯಾಕ್ಸಿಮ್ ಗಾರ್ಕಿಯ ‘ಎನೆಮಿಸ್’ ಮತ್ತು ಸಮಾಕಾಲೀನ ರಂಗಕರ್ಮಿ ಹಬೀಬ್ ತನ್ವಿರರೊಂದಿಗೆ ಸೇರಿಕೊಂಡು ‘ಮೊತೆರಮ್ ಕಾ ಸತ್ಯಾಗ್ರಹ’ ಎನ್ನುವ ನಾಟಕಗಳನ್ನು ಪ್ರದರ್ಶಿಸಿದ. 1978 ರಲ್ಲಿ ‘ಜನಮ್’ದ ಮೂಲಕ ಎರಡು ಲಕ್ಷ ಕಾರ್ಮಿಕರನ್ನು ಒಂದೆಡೆ ಒಗ್ಗೂಡಿಸಿ ‘ಮಷಿನ್’ ಮತ್ತು ‘ಗಾಂವೊಸೆ ಶಹರ್ ತಕ್’ ಎನ್ನುವ ಬೀದಿ ನಾಟಕಗಳ ಮೂಲಕ ಅವರನ್ನು ಬಡಿದೆಬ್ಬಿಸಿದ. ಸರ್ಕಾದಲ್ಲಿರುವ ಜಾಡ್ಯವನ್ನು ಅವಹೇಳಿಸುತ್ತ ‘ಹತ್ಯಾರೆ’ ಮತ್ತು ‘ಅಪಹರಣ ಬೇಚಾರೆ ಕೆ’ ಎನ್ನುವ ಪ್ರದರ್ಶನಗಳನ್ನು ನೀಡಿದ. ಮಹಿಳಾ ದೌರ್ಜನ್ಯವನ್ನು ಖಂಡಿಸಿ ‘ಔರತ್’ ಹೀಗೆ ಒಟ್ಟು 1973 ರಿಂದ ಈತನ ಕೊಲೆಯ ದಿನವಾದ 2 ಜನೆವರಿ 1989 ವರೆಗೆ 4024 ನಾಟಕಗಳನ್ನು ಪ್ರದರ್ಶಿಸಿ ದಾಖಲೆ ಸೃಷ್ಠಿಸಿದ. ಇವುಗಳಲ್ಲಿ ಇಪ್ಪನಾಲ್ಕು ಬೀದಿ ನಾಟಕಗಳು. ಇಂಥವನೊಬ್ಬ ನಮ್ಮೊಂದಿಗೆ ಇದ್ದನೆಂದು ಈಗಲೂ ನಂಬಲಾಗುತ್ತಿಲ್ಲವಲ್ಲ!
               
       ಹಸ್ಮಿಯ ಹೋರಾಟದ ಬದುಕನ್ನು ಗಮನಿಸಿದಾಗ ನನ್ನನ್ನು ಕಾಡಿದ ಪ್ರಶ್ನೆ ಈತನಿಗೊಂದು ವ್ಯಯಕ್ತಿಕ ಬಾಳು ಎನ್ನುವುದಿತ್ತೆ? ಈತ ಎಂದಾದರೂ ನಿದ್ರಿಸಿದನೇ? ಇವುಗಳಿಗೊಂದು ಉತ್ತರ ಸಾಕ್ಷಿ ಸಮೇತವಾಗಿ ದೊರೆತದ್ದು 2002 ರಲ್ಲಿ. ಭಾರತೀಯ ಭಾಷಾ ಅಧ್ಯಯನ ಸಂಸ್ಥೆ ಮೈಸೂರಿನಲ್ಲಿ ಸಹಾಯಕ ಸಂಶೋಧಕನಾಗಿ ಭಾರತೀಯ ಮಹಿಳಾ ರಂಗಭೂಮಿಗಾಗಿ ಆಗ ಕೆಲಸ ಮಾಡುತ್ತಿದ್ದ ನಾನು ರಂಗಭೂಮಿಗೆ ಸಂಭಂದಪಟ್ಟ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದೆ. ಪಕ್ಕದಲ್ಲಿ ಬಾಚದ ತಲೆಯ, ಬಿಳಿ ಸಮವಸ್ತ್ರದ , ಎತ್ತರ ಕಾಯದ ಮಹಿಳೆಯೊಬ್ಬರು ಕುಳಿತ್ತಿದ್ದರು. ಕೆಲವು ಕ್ಷಣಗಳ ನಂತರ ಗೊತ್ತಾಯಿತು ಅವರೇ ಮಾಲಾ ಹಸ್ಮಿ, ಪೂರ್ಣ ಹೆಸರು ಮಲಯಶ್ರೀ ಹಸ್ಮಿ. ಹುತಾತ್ಮ ಸಫ್ದರ್ ಹಸ್ಮಿಯ ರಂಗ ಸಂಗಾತಿ, ಬಾಳ ಸಂಗಾತಿಯೂ ಕೂಡ. ಇಂಡಿಯನ್ ನ್ಯಾಶ್‍ನಲ್ ಕಾಂಗ್ರೆಸ್ಸಿನ ಗೂಂಡಾಗಳಿಂದ 1 ಜನೆವರಿ 1989 ರಲ್ಲಿ ‘ಹಲ್ಲಾ ಬೋಲ್’ ಬೀದಿ ನಾಟಕದ ಪ್ರದರ್ಶನ ವೇಳೆ, ಗಂಡ ಸಫ್ದ್‍ರ್ ಹಸ್ಮಿ ದಾಳಿಗೊಳಗಾಗಿ, ಜನೆವರಿ 2 ರಂದು ಕೊನೆಯುಸಿರೆಳೆದರೂ ಮತ್ತೆ ಜನೆವರಿ 4 ರಂದು ಅದೇ ಭೀಕರ ಸ್ಥಳದಲ್ಲಿ ‘ಜನಮ್’ನ ಕಲಾವಿದರುಗಳೊಂದಿಗೆ ನಾಟಕವನ್ನು ಮುಂದುವರೆಸಿದ, ಆ ಮೂಲಕ ಸಫ್ದರ್ ಹಸ್ಮಿಯನ್ನು ದಂತ ಕಥೆಯಾಗಿಸಿದ ದಿಟ್ಟ ಮಹಿಳೆ ಮಲಯಶ್ರೀ ಹಸ್ಮಿ. ಆತನ ಅವಸಾನವಾದ 15 ವರ್ಷಗಳವರೆಗೂ ಕೋರ್ಟಿಗೆ ಅಲೆದಾಡಿ ತಪ್ಪಿತಸ್ಥರನ್ನು ಬಯಲಿಗೆಳದಾಕೆ. ಆತನ ಕನಸಿನ ಮುಂದುವರಿಕೆಯಾಗಿ ನಮ್ಮೊಂದಿಗೆ ಉಳಿದುಕೊಂಡಾಕೆ.
 
Safdar and Malayashri Hashmi
Safdar and Malayashri Hashmi
         ‘ಹಲ್ಲಾ ಬೋಲ್’ ಆಧರಿಸಿ 2008 ರಲ್ಲಿ ಸಿನಿಮಾ ಮಾಡಿದ. 1998 ರಿಂದ ಕೇರಳದಲ್ಲಿ ಸಫ್ದ್‍ರ್ ಹಸ್ಮಿ ನಾಟ್ಯ ಸಂಘಮ್ ಎನ್ನುವ ಸಂಸ್ಥೆಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಲಾ ತರಬೇತಿಯನ್ನು ನೀಡಲಾಗುತ್ತಿದೆ. ಲಖನೌನಲ್ಲಿ ಸಫ್ದರ್ ಹಸ್ಮಿ ಅವಾರ್ಡ್ ಫಾರ್ ಹ್ಯುಮನ್ ರೈಟ್ಸ್ ನೀಡಲಾಗುತ್ತಿದೆ. ಭಾರತದ ಮತ್ತೋರ್ವ ರಂಗಕರ್ಮಿ ಭಿಶಮ್ ಸಹಾನಿ ಸಫ್ದರ್ ಹಸ್ಮಿ ಮೆಮೋರಿಯಲ್ ಟ್ರಸ್ಟ್ (ಸಹಮತ್) ಸ್ಥಾಪಿಸಿದ್ದಾರೆ. ಹೀಗೆ ನೀರಿದ್ದರೆ ರಿಂಗಣ, ಧ್ವನಿ ಇದ್ದರೆ ಪ್ರತಿಧ್ವನಿ.
ಹಸ್ಮಿ ಹದ್ದಿನಂತೆ ನೂರಾರು ವರ್ಷ ಬದುಕಲಿಲ್ಲ. ಆದರೆ, ರಣಹದ್ದಿನಂತೆ ಪಟ್ಟಭದ್ರರ ಮೇಲೆ ಆಕ್ರಮಣ ಮಾಡಿದ. ಬಾಳುವ ಸಣ್ಣ ಲಕ್ಷಣವೂ ಇಲ್ಲದ ಅಂಥ ಬದುಕು ನಿರರ್ಥಕವೆಂದು ತಿಳಿದಿತ್ತೇನೊ. ಕೇವಲ 34 ವರ್ಷ ಬದುಕಿ ಅಗ್ನಿ ಪರ್ವತದಂತೆ ಸದಾ ನಿಗಿ ನಿಗಿಯಾಗಿದ್ದ ಸಫ್ದರ್ ಹಸ್ಮಿಯ ಪ್ರಭಾವ ಎಷ್ಟೊಂದು ತೀವ್ರವಾಗಿತ್ತು ಎನ್ನಲು ಕೆಲವು ನಿದರ್ಶನಗಳು. ಹೆಚ್ಚು ಕಡಿಮೆ ಈತನಂತೆಯೆ ನಿರಂತರ ಅಲೆಮಾರಿಯಾಗಿದ್ದ ಕಲಾವಿದ ಎಮ್.ಎಫ್ ಹುಸೇನ್. ಹಸ್ಮಿಯನ್ನು ಆಧರಿಸಿ ತೆಗೆದ ಒಂದು ಪೇಂಟಿಂಗ್ ಒಂದು ಮಿಲಿಯನ್ ಡಾಲರ್‍ಗೆ ಮಾರಾಟವಾಯಿತು ಎಂದರೆ ಹುಬ್ಬೆರಿಸಬೇಕಾಗಿಲ್ಲ. ಹಾಗೆಯೆ ಭಾರತದ ಶ್ರೇಷ್ಠ ಚಿತ್ರ ನಿರ್ದೇಶಕ ರಾಜಕುಮಾರ ಸಂತೋಷಿ ಹಸ್ಮಿಯ ಕೊನೆಯ ನಾಟಕ
 
              ಕಲಾಂರು ಜೀವನದುದ್ದಕ್ಕೂ ತಮ್ಮ ಭಾಷಣದಲ್ಲಿ ಒಂದು ಮಾತನ್ನು ಪದೇ ಪದೇ ಹೇಳುತ್ತಿದ್ದರು. "ನಾನೊಬ್ಬ ಭಾರತೀಯನಾಗಿ ಭಾರತವನ್ನು ಇಬ್ಬಾಗಿಸುವ ಭಾವನೆಯನ್ನೂ ತಿರಸ್ಕರಿಸುತ್ತೇನೆ. ಮುಸ್ಲಿಂನಾಗಿ ಪ್ರತ್ಯೇಕತಾ ವಾದವನ್ನು ಎಲ್ಲ ಕಾಲಕ್ಕೂ ಧಿಕ್ಕರಿಸುತ್ತೇನೆ. ಭಾರತವೇ ನನ್ನ ಮನೆ ಎಂದು ಸಾರಿಕೊಳ್ಳುವ ಹಕ್ಕನ್ನು ನಿರಂತರವಾಗಿ ಆನಂದಿಸುತ್ತೇನೆ." ಆದರೆ ಈ ಮಾತನ್ನು ಅಕ್ಷರಶಹ ಅನುಸರಿಸಿ ತೋರಿಸಿದಾತ ಸಫ್ದರ್ ಹಸ್ಮಿ. ರಂಗದಿಂದ ಆತ ನಿರ್ಗಮಿಸಿದ್ದಾನೆ ಆದರೆ ಆತನ ರಂಗರಿಂಗಣವಾದ ‘ಹಲ್ಲಾ ಬೋಲ್’ ಈಗಲೂ ಕೇಳಿಸುತ್ತಿದೆ.

Saturday, 26 April 2014

ಉರುಳಿನ ಕೊರಳಿಗೆ ವಿಜಯದ ಮಾಲೆ....


                         
ಕಿಮ್ ಡೆ ಜಂಗ್
ಕಿಮ್ ಡೆ ಜಂಗ್
ಈತನೊಬ್ಬ ವಿಚಿತ್ರ ಪುಸ್ತಕ ಪ್ರೇಮಿ.ಈತನ ಬದುಕಿನ ಎಲ್ಲಾ ಕಾಲದ ಸಂಗಾತಿಗಳು ತತ್ವಜ್ಞಾನ, ರಾಜಕಾರಣ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳು, ದೇಶದಿಂದ ಉಚ್ಛಾಟನೆಗೊಂಡಾಗ, ತಲೆಮರೆಸಿಕೊಂಡಾಗ , ಅಪಹರಣಕ್ಕೊಳಗಾದಾಗ, ಗಲ್ಲುಗಂಬದ ಮುಂದೆ ನಿಂತಾಗ, ಹೀಗೆ ಈ ಎಲ್ಲ ತಲ್ಲಣದ ಕ್ಷಣಗಳಲ್ಲಿ ಆತ ಸಮಾಧಾನ ಕಂಡಿದ್ದೇ ಪುಸ್ತಕಗಳಲ್ಲಿ. ಕೋರಿಯಾದ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ, ಜಪಾನಿನ ಹಡಗು ಕಂಪನಿಯಲ್ಲಿ ಗುಮಾಸ್ತನಾಗಿ ಸೇರಿ, ಆನಂತರ ಬೆಳೆಯುತ್ತಾ ಅಲ್ಲಿಯ 15 ನೇ ರಾಷ್ಟ್ರಾಧ್ಯಕ್ಷ, ಶಾಂತಿಗಾಗಿ 2000 ನೇ ಇಸ್ವಿಯಲ್ಲಿ ನೊಬೆಲ್ ಪ್ರಶಸ್ತಿ ಪಡೆದಾತ, `ಏಷಿಯಾದ ನೆಲ್ಸನ್ ಮಂಡೆಲಾ’ ಎಂದು ಹೆಸರುವಾಸಿ. ಅಂದಹಾಗೆ ಈತನ ಹೆಸರು ಕಿಮ್ ಡೆ ಜಂಗ್. ‘ಹಂಗುಲ್’ ಈತನ ಕಾವ್ಯನಾಮ.
 ಜಂಗ್‍ನ ಪ್ರಗತಿಪರ ಆಲೋಚನೆಗಳ ಜಂಗ್(ಯುದ್ಧ)ನಲ್ಲಿ ಕಂಗಾಲಾದ ರಾಜಕೀಯ ವಿರೋಧಿಗಳು ಈತನನ್ನು 1954 ರಿಂದ 76 ರವರೆಗೆ 22 ವರ್ಷ ಬಂಧನದಲ್ಲಿಟ್ಟರು. 1978 ರಿಂದ 79ರವರೆಗೆ ಗೃಹ ಬಂಧನದಲ್ಲಿರಿಸಿದರು. ಇಲ್ಲಿಯ ಈ ಅನುಭವಗಳನ್ನು ಕುರಿತು `ಪ್ರಿಜನ್ ರೈಟಿಂಗ್ಸ್’ ಎನ್ನುವ ಕೃತಿ  ಬರೆದಿದ್ದಕ್ಕಾಗಿ 1989ರಲ್ಲಿ ಗಲ್ಲುಶಿಕ್ಷೆ ವಿಧಿಸಿದರು. ಆದರೆ ಭಿನ್ನವಾಗಿದ್ದ ದೈವದ ದಾರಿ ಉರುಳಿನ ಕೊರಳಿಗೆ ವಿಜಯದ ಮಾಲೆ ಹಾಕಿತು, ವಿಶ್ವದ ಶ್ರೇಷ್ಠ  ಮಾನವೀಯ ಚಿಂತಕರಲ್ಲಿ ಒಬ್ಬನನ್ನಾಗಿಸಿತು. ನಿಲ್ಲದ ಈತನ ಲೇಖನಿ ‘ಮಾಸ್ ಪಾರ್ಟಿಸಿಪೇಟರಿ’, ‘ಪಿಸ್‍ಫುಲ್ ರಿಯುನಿಫಿಕೇಷನ್’ ಮತ್ತು ‘ಫಾರ್ ಎ ನ್ಯೂ ಬಿಗಿನಿಂಗ್’ ಕೃತಿಗಳನ್ನು ಬರೆಯುತ್ತಲೇ ಹೋಯಿತು. ಆತ್ಮಶಕ್ತಿಯ ಮುಂದೆ ಇದು ಸಾವೂ ಸೋಲುವ ಪರಿ!!

ನೇಣುಗಂಬದ ಮುಂದೆ ನಿಂತು, ಏಷಿಯಾದ ಸೌಂದರ್ಯವನ್ನು ಪ್ರಪಂಚಕ್ಕೆ ಸಾರಿ ಹೇಳುವ ಅವನ ಮಾತುಗಳನ್ನು ಕೇಳಿ, “ದಶಕಗಳ ಬದುಕನ್ನು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಕಳೆದಿದ್ದೇನೆ, ಪಾಶ್ಚಿಮಾತ್ಯ ಶೈಲಿಯ ಪ್ರಜಾಪ್ರಭುತ್ವ ಏಷಿಯಾಕ್ಕೆ ಹೊಂದುವುದಿಲ್ಲವೆಂದು ಕೇಳಿದ್ದೇನೆ. ಪಾಶ್ಚಾತ್ಯರ ಪ್ರಕಾರ ಅದಕ್ಕೆ ಏಷಿಯಾದಲ್ಲಿ ಬೇರುಗಳಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತಲೂ ನೂರಾರು ವರ್ಷಗಳ ಮುಂಚೆಯೇ ಏಷಿಯಾದಲ್ಲಿ ಜನರ ಬೌದ್ಧಿಕ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ಮಾನವ ಘನತೆಯ ಅನೇಕ ವಿಚಾರಗಳನ್ನು ಸ್ಪಷ್ಟಪಡಿಸಲಾಗಿದೆ. ಉದಾಹರಣೆಗೆ“The people are in heaven, the will of the people is the will of the heaven. Revere the people as you would heaven.” ಎಂದು. ಚೈನಾದ ರಾಜಕೀಯ ವಿಚಾರದ ಕೇಂದ್ರ ಅಂಶವೇ ಇದು. ಇದು 3000 ವರ್ಷಗಳ ಹಿಂದಿನಿಂದ ಕೋರಿಯಾಕ್ಕೂ ಗೊತ್ತಿದೆ. 5000 ವರ್ಷಗಳಿಂದ ಭಾರತ ಇದನ್ನು ಅನುಸರಿಸಿಕೊಂಡು ಬಂದಿದೆ. ಇಲ್ಲಿ ಹುಟ್ಟಿದ ‘ಬೌದ್ಧಿಸಂ’ ಎಲ್ಲ ಕಾಲಕ್ಕೂ ಮಾನವ ಘನತೆ ಮತ್ತು ಹಕ್ಕುಗಳನ್ನು ಜಗತ್ತಿಗೆ ಸಂದೇಶವಾಗಿ ನೀಡಿದೆ.
ಇವುಗಳನ್ನು ಹೊರತುಪಡಿಸಿಯೂ ಇಲ್ಲಿಯೇ ಕೆಲವು ಸಂಸ್ಥೆಗಳೂ, ಸಿದ್ಧಾಂತಗಳು ಮನುಷ್ಯನನ್ನು ಯಾವಾಗಲೂ ಅತ್ಯಂತ ಗೌರವದಿಂದ ನೋಡುತ್ತ ಬಂದಿವೆ. ಕನ್‍ಪ್ಯೂಶಿಯಸ್‍ನ ವಿದ್ಯಾರ್ಥಿಯಾದ ಮೆನಷಿಯಸ್ ಬರೆಯುತ್ತಾನೆ, “The king is son of heaven. Heaven sent him to serve the People with just rule. If he fails and oppresses the people, the people have the right, on behalf of heaven, to dispose of him.”ಇವುಗಳನ್ನು ಆಧರಿಸಿಯೇ ಎರಡು ಸಾವಿರ ವರ್ಷಗಳ ಮುಂಚೆ ಜಾನ್‍ಲಾಕ್ ತನ್ನThe Theory of the Social Contract and Civic Sovereignty  ಎನ್ನುವದನ್ನು ರೂಪಿಸಿದ. ಸ್ನೇಹಿತರೇ, ಪ್ರಜಾಪ್ರಭುತ್ವದ ತೊಟ್ಟಿಲು ಏಷಿಯಾ. ಇದಕ್ಕೆ ಯಾವುದೂ ಹೊಸತಲ್ಲ. 
ಚೈನಾ ಮತ್ತು ಕೋರಿಯಾಗಳಲ್ಲಿ ಬಂಡವಾಳಶಾಹಿತನ ಮತ್ತು ಊಳಿಗಮಾನ್ಯವನ್ನು ಜೀಸಸ್ ಹುಟ್ಟುವ ಮುಂಚಿನಿಂದಲೂ ವಿರೋಧಿಸಲಾಗಿದೆ. ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಿವಿಲ್ ಸರ್ವೀಸ್ ಮುಖಾಂತರವೇ ಆಯ್ಕೆ ಮಾಡುವುದು ಸಾವಿರಾರು ವರ್ಷಗಳಷ್ಟು ಹಳೆಯ ವಿಷಯ. ರಾಜನ ಅಧಿಕಾರವನ್ನು ಕೂಡ Auditing System  ಮೂಲಕವೇ ನಿಯಂತ್ರಿಸಲಾಗಿದೆ. ಪಶ್ಚಿಮವು ಡೆಮಾಕ್ರಸಿಗೆ ಒಂದು ಸಾಂಘಿಕ ಸ್ವರೂಪವನ್ನು ಕೊಡುವದರ ಮೂಲಕ ಭಿನ್ನವಾಗಿ, ಅದನ್ನೊಂದು ಸೌಹಾರ್ದದ, ಮಾನವ ಇತಿಹಾಸದ ಸಾರ್ವಕಾಲಿಕ ಪಥವನ್ನಾಗಿ ಮಾರ್ಪಡಿಸಿತಷ್ಟೇ.
ಏಷಿಯಾದಲ್ಲಿಯೇ ಹುಟ್ಟಿಕೊಂಡಿದ್ದ  ಪ್ರಜಾತಂತ್ರವನ್ನು ವ್ಯವಸ್ಥಿತವಾಗಿ ಮತ್ತು ಪ್ರಶಂಶನೀಯವಾಗಿ ಅನುಸರಣೆಗೆ ತರುವ ಎಲ್ಲ ವ್ಯವಸ್ಥೆಯನ್ನು ಪಾಶ್ಚಾತ್ಯರು ಮಾಡಿಕೊಂಡರು. ಯಾವತ್ತೋ ಥೈಲ್ಯಾಂಡ್, ಇಂಡಿಯಾ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕ, ಇಂಡೋನೇಷಿಯಾ, ಫಿಲಿಪೈನ್ಸ್, ಜಪಾನ್ ಮತ್ತು ಕೋರಿಯಾಗಳಲ್ಲಿ ಪ್ರಜಾಸತ್ತೆ ಅಸ್ತಿತ್ವದಲ್ಲಿದೆ. ಪಾಶ್ಚಾತ್ಯರು ಹೇಳುವ ಹಾಗೆ ಪ್ರಜಾಸತ್ತೆ ಇಲ್ಲಿ ಸಾಧ್ಯವಿಲ್ಲ ಎನ್ನುವುದಾಗಿದ್ದರೆ ಇಷ್ಟೊಂದು ರಾಷ್ಟ್ರಗಳಲ್ಲಿ ಹೇಗೆ ಸಾಧ್ಯವಾಯಿತು? ಗೊತ್ತಿರಲಿ, ತೈಮೂರನ ದಾಳಿಗಳನ್ನು ಲೆಕ್ಕಿಸದೇ ಜನರು ಇಲ್ಲಿ ಮತ ಚಲಾಯಿಸಿದ್ದಾರೆ. ಮಯನ್ಮಾರದಲ್ಲಿ ಆಂಗ್ ಸಾನ್ ಸುಕೈಡಾ ಬಂಧನದಲಿದ್ದೂ ಡೆಮಾಕ್ರಸಿಗಾಗಿ ಬಡಿದಾಡುತ್ತಿದ್ದಾಳೆ. ನನಗೆ ವಿಶ್ವಾಸವಿದೆ ಪ್ರಜಾತಂತ್ರ ನಮ್ಮ ದೀಕ್ಷೆ. 
ಕಿಮ್ ಡೆ ಜಂಗ್‍ನನ್ನು ಸಾವಿನ ಬಾಗಿಲಿಗೊಯ್ದು ನಿಲ್ಲಿಸಿದ ಕೃತಿ `ಪ್ರೀಜನ್ ರೈಟಿಂಗ್ಸ್’ .ಪ್ರತಿಯೊಬ್ಬ ಹೋರಾಟಗಾರನು ಓದಲೇಬೇಕಾದ ಕೃತಿ. ಅದು ಕಥೆಯಲ್ಲ, ಆತನ ಬದುಕು.

ಕಿಮ್ ಡೆ ಜಂಗ್
ಕಿಮ್ ಡೆ ಜಂಗ್

ಈ ಸಾಲುಗಳನ್ನು ಗಮನಿಸಿ, “ನನ್ನ ವೈಯಕ್ತಿಕವಾದ ಕೆಲವು ವಿಚಾರಗಳನ್ನು, ಸಂಕಷ್ಟದ ನೆನಪುಗಳನ್ನು ವ್ಯಕ್ತಪಡಿಸಲು ಒಂದಿಷ್ಟು ಅವಕಾಶ ಕೊಡಿ. ಕ್ರೂರವಾದ ಸರ್ವಾಧಿಕಾರಿಗಳ ಕೈಯಲ್ಲಿ ಐದು ಬಾರಿ ಸಾವಿಗೆ ಮುಖಾಮುಖಿಯಾಗಿ ನಿಂತಿದ್ದೇನೆ. ಜೈಲುಗಳಲ್ಲಿ  ಬದುಕಿನ ಆರು ವರ್ಷಗಳನ್ನು ಬಂಧಿಯಾಗಿ ಕಳೆದಿದ್ದೇನೆ. ನಲವತ್ತು ವರ್ಷಗಳವರೆಗೆ ನನನ್ನು ಗೃಹಬಂಧನದಲ್ಲಿ ಇಡಲಾಗಿದೆ. ಅನೇಕ ವರ್ಷ ಗಡಿಪಾರುಗೊಂಡಿದ್ದೇನೆ. ಆದಾಗ್ಯೂ ನಿಮ್ಮ ಬೆಂಬಲವಿgದೇ ಹೋಗಿದ್ದರೆ, ಈ ಹೋರಾಟ ಸಾಧ್ಯವಾಗುತ್ತಿರಲಿಲ್ಲ. ನಾನು ಶಕ್ತಿಯಾದದ್ದು ನಿಮ್ಮೆಲ್ಲರಿಂದ, ನನ್ನೊಳಗಿನ ಶಕ್ತಿಯ ಮೇಲಿನ ನಂಬಿಕೆಯಿಂದ.
ನಾನು ಬದುಕಿದ್ದೇನೆ, ಬದುಕುತ್ತೇನೆ, ದೇವರ ಕಾರುಣ್ಯ ನನ್ನೊಂದಿಗಿದೆ ಎಂದು ನಂಬುತ್ತೇನೆ. ಇದು ನನ್ನ ಅನುಭವದ ಮಾತಾಗಿದೆ. ಬಂಧುಗಳೇ, 1973ರ ಆಗಸ್ಟ್‍ನಲ್ಲಿ ಜಪಾನಿಗೆ ನಾನು ಗಡಿಪಾರುಗೊಂಡಾಗ, ಟೋಕಿಯೋದ ಹೋಟೆಲನಿಂದ ನನ್ನನ್ನು ಅಪಹರಿಸಲಾಯಿತು. Government of South Koriaದಿಂದ ನನ್ನನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ಸುದ್ಧಿ ಜಗತ್ತನ್ನು ಬೆಚ್ಚಿಬೀಳಿಸಿತು. ನನ್ನನ್ನು ಒಂದು ಬೋಟಿನಲ್ಲಿ ಸಮುದ್ರದ ಯಾವುದೋ ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು. ಕೈಗಳನ್ನು ಕಟ್ಟಿ, ಕಣ್ಣುಗಳಿಗೆ ಕಪ್ಪು ಬಟ್ಟೆ ಬಿಗಿದು, ಬಾಯಿಯನ್ನು ಮುಚ್ಚಿಸಲಾಯಿತು. ಇನ್ನೇನು ಅವರು  ನನ್ನನ್ನು ಎತ್ತಿ  ಸಮುದ್ರಕ್ಕೆ ಎಸೆಯಬೇಕು ಅಷ್ಟೆ, ಆಗ ನನ್ನೆದುರು ಬಂದು ನಿಂತವ ಜೀಸಸ್. ನಾನು ಆತನನ್ನು ಎಷ್ಟೊಂದು ಸ್ಪಷ್ಟವಾಗಿ ಕಂಡೆ. ಆತನ ಹೆಗಲಿಗೆ ಬಿದ್ದು ರಕ್ಷಣೆಗಾಗಿ ಗೋಗರೆದೆ. ಆ ಕ್ಷಣದಲ್ಲಿ ಆಕಾಶದಿಂದ ಬಂದ ಏರೋಪ್ಲೇನ್‍ವೊಂದು ನನ್ನನ್ನು ಹೊತ್ತೊಯ್ದು, ಸಾವಿನಿಂದ ರಕ್ಷಿಸಿತು.
ನನ್ನ ಇನ್ನೊಂದು ಮುಖ್ಯವಾದ ನಂಬಿಕೆ ಇತಿಹಾಸದ ನ್ಯಾಯಕ್ಕೆ ಸಂಬಂಧಿಸಿದ್ದು. 1980ರಲ್ಲಿ ಮಿಲಿಟರಿ ಸರಕಾರ ನನಗೆ ಮರಣದಂಡನೆಯನ್ನು ವಿಧಿಸಿತು. ಅದಕ್ಕೂ ಮುಂಚೆ ಆರು ತಿಂಗಳು ಜೈಲಿನಲ್ಲಿದ್ದೆ. ಪ್ರತಿದಿನವೂ ನಾನು ಸಾವಿನ ದಾರಿ ಕಾಯುತ್ತಿದ್ದೆ. ಅನೇಕ ದಿನ ರಾತ್ರಿಯಾದರೆ ಭಯಗೊಳ್ಳುತ್ತಿದ್ದೆ. ಸಾವು ನನ್ನನ್ನು ಸುತ್ತುವರಿಯುತ್ತಿತ್ತು. ಆದರೆ ನನಗೆಲ್ಲೊ ಭಯ ಆದಾಗ್ಯೂ ಅಂತಿಮವಾಗಿ ನ್ಯಾಯಕ್ಕೆ ಜಯ ಸಿಗುತ್ತದೆ ನಂಬಿಕೆ. ಇದನ್ನು ಇತಿಹಾಸದಲ್ಲಿ ಓದಿದ್ದೆ. ಹೀಗಾಗಿ ಆಗಲೂ ಈಗಲೂ ನಾನು ಇತಿಹಾಸದ ಪ್ರೇಮಿ, ಎಲ್ಲ ಕಾಲದಲ್ಲಿ, ಎಲ್ಲ ಸ್ಥಳಗಳಲ್ಲಿ ಯಾವ ವ್ಯಕ್ತಿ ಮಾನವತೆಗೆ ಮತ್ತು ಜನತೆಗೆ ತನ್ನ ಬದುಕನ್ನು ಧಾರೆ ಎರೆದು ಪ್ರಾಮಾಣಿಕನಾಗಿ ಬದುಕಿರುವನೋ, ಅಂತಹ ವ್ಯಕ್ತಿ ದೊಡ್ಡ ವಿಜಯವನ್ನು ಸಾಧಿಸಲಿಕ್ಕಿಲ್ಲ, ಜೀವನದಲ್ಲಿ ಒಂದಿಷ್ಟು ಎಡರು ತೊಡರುಗಳನ್ನೂ ಎದುರಿಸಬಹುದು, ಆದರೆ ಅಂತಿಮ ಜಯ ಅವನದೇ. ಇತಿಹಾಸದಲ್ಲಿ ಅವನಿಗೊಂದು ಗೌರವದ ಸ್ಥಾನ ಇದ್ದೇ ಇರುತ್ತದೆಂದು ನನ್ನ ಬಲವಾದ ನಂಬಿಕೆ. He who wins by injustice may dominate the present day but History will always judge him to be a shameful looser. Their can be no exception.
ರಾಜಕಾರಣಿಯಾಗಿಯೂ ತತ್ವಜ್ಞಾನಿಯಂತೆ ಮಾತನಾಡುವ ಕಿಮ್ ಡೆ ಜಂಗ್‍ನ ಈ ಸಾಲುಗಳು ಆತ್ಮದ ಅನುರಣನವಾಗಿರುವುದರಿಂದ ಅವು ಪ್ರತಿ ಬರಹಗಾರನಲ್ಲಿಯೂ ಹೋರಾಟದ ಕಿಚ್ಚು ಹೊತ್ತಿಸುತ್ತವೆ ಎನ್ನುವುದನ್ನು ಸಂಶಯಿಸಬಹುದೇ?