Thursday 6 June 2013

ಸೆರೆಗೂ ಸಾಯದ ಸಾಕಿ:ಮೀನಾ ಕುಮಾರಿ(Meena Kumari)




“ನಾನು, ನೋವಿನ ನೀಲಿ ಕೆನ್ನೆಯ ಮೇಲೆ
ಕಣ್ಣೀರಿನ ಒಂದು ಮುತ್ತು”
                                                                              - ಅಲಿ ಸರ್ದಾರ್ ಜಾಫ್ರಿ
---------------------------------------------------------------------------------------





 “I, mad lover, spend my nights in such a way
Sorrow is my enemy and yet my heart longs for sorrow
Whenever there is some happiness in my life”
Sorrow is my enemy and yet my heart longs for sorrow Whenever there is some happiness in my life”

    “ಹುಚ್ಚು ಪ್ರೇಯಸಿ ನಾನು ರಾತ್ರಿ ಕಳೆಯುತ್ತೇನೆ

    ದುಃಖ ನನ್ನ ವೈರಿ, ದುಃಖವೇ ಹಂಬಲ ಈ ಹೃದಯಕೆ 

   ಮತ್ತೆಅಗಲುವಿಕೆಯ ಅರೆಕ್ಷಣದಲ್ಲೂ ಅದರದೇ ಹುಡುಕಾಟ”                                                                                             

                                                    -ಮೀನಾ ಕುಮಾರಿ(Meenakumari)            


ದುಖಃದ ಆಳಸಾಗರದಿಂದ ಮೇಲೆದ್ದ ಮಾತಿಗೆ ಮನಸ್ಸು ಈ ಮೀನಾ ಕುಮಾರಿ ಹೀಗಾಗಿ ಈ ಮೇಲಿನ ಅಕ್ಷರ ಸಹ ಸತ್ಯವಾದ ಪದ್ಯ ಅವಳಿಗೇ ಅನ್ವಯ ಮತ್ತು ಅವಳಿಂದಲೇ ರಚಿತ. ಕೇಳಿ, ಖಾಲಿಖಾಲಿಯಾಗಿ ಬಿದ್ದ ಶೆರೆಯ ಬಾಟಲಿಗಳನ್ನು ನೋಡಿದಾಗಲೆಲ್ಲಾ ನನಗೆ ನೆನಪಾಗುವುದು ಈ ಮೀನಾ ಕುಮಾರಿ. ಸಿನಿಮಾ, ಶೆರೆ ಮತ್ತು ಅವಳೇ ಹೊಸೆದ ಸಾವಿನ ಸಾಲುಗಳನ್ನು ಒಟ್ಟುಗೂಡಿಸಿದರೆ ಮನದಲ್ಲಿ ಈಕೆಯ ಚಿತ್ರ ತಟ್ಟನೆ ಗಟ್ಟಿಗೊಳ್ಳುತ್ತದೆ. ಶೆರೆ ಕುಡಿದೂ ಏನೆಲ್ಲಾ ಸಾಧಿಸಿ, ಸಾವಿಗಾಗಿ ಹಂಬಲಿಸಿದ ಮೀನಾಕುಮಾರಿಯ ಬದುಕು  ಅವಳ ಸಾವಿನ ನಂತರ ಖಾಲಿ ಬಾಟಲಿಯಂತೆ ಸ್ವಚ್ಛ ಎನಿಸುತ್ತದೆ. ಇತ್ತ ಸೆರೆ ಕುಡಿದೂ ಸಾಯದ, ಬದುಕಿಯೂ ಜೀವಂತಿಕೆಯಿರದ ನಾವು, ನಮ್ಮ ಜೀವ(?)ನ ಸಂಗಾತಿಗಳು ಮುಪ್ಪಿಗಾಗಿ ಮಲಗುತ್ತಿರುತ್ತೇವೆ ಎನಿಸುತ್ತದೆ. ಮೀನಾ ಕುಮಾರಿ(Meena kumari) ಎಂಬ ಈ ಸಾಕಿಯೊಂದಿಗೆ ಸಾಗುವ ಮುಂಚೆ ನಿಮ್ಮೊಂದಿಗೊಂದಿಷ್ಟು.

ಒಂದು ದಶಕದ ಮದಿರೆಯೊಂದಿಗಿನ ನನ್ನ ಸಂಬಂಧದಲ್ಲಿ ನಾನು ಅದರೊಂದಿಗೆ ಏನೆಲ್ಲವೂ ಆಗಿದ್ದೇನೆ. ಅದರೊಳಗೇ ಮುಳುಗಿದ್ದೇನೆ, ಮರೆತಿದ್ದೇನೆ, ಜಗಳ, ಮಾತು-ಹಾಡಾಗಿದ್ದೇನೆ. ಹೀಗಾಗಿ ಮದಿರೆಯೊಂದಿಗೆ ಮೀನಾ ಕುಮಾರಿ(Meena kumari) ಯಾವ ಸು;ಖದಿಂದ ಇರಬಹುದು ಎನ್ನುವುದನ್ನು ನಾನು ಸರಿಯಾಗಿಯೇ ಗ್ರಹಿಸಿದ್ದೇನೆ ಎಂದುಕೊಂಡಿದ್ದೇನೆ. ಯಾಕೆಂದರೆ ಈ ಮದಿರೆಯೊಂದಿಗಿನ ಸ್ನೇಹವೆಂದರೆ ನನ್ನ ಪಾಲಿಗೆ-

“ ಮದಿರೆಯ ಮೊದಲ ಗುಟುಕು
ನಿನ್ನ ಮೊಲೆ ತೊಟ್ಟಿನಿಂದ ಜಿನುಗಿ
ಮಗುವಿಗಮೃತವಾದ
ಮಾತೃಭಾಷೆ
ಮದಿರೆಯ ಮುಂದಿನ ಮಾತು.....!
ತುಟಿಯಂಚಲಿ ಸುಳಿದು
ನಿನ್ನ ಕನಸಿನ ಮನೆಗೆ
ಕಟ್ಟಿದ ಬೆವರ ಹನಿಗಳ ತೋರಣ
ಮದಿರೆಯ ನಂತರದ ನಲ್ಮೆ
ನಿನ್ನ ಬೆನ್ನ ಹುರಿಯಿಳಿದು
ಸೊಂಟ ಸುತ್ತಿ ನನ್ನ ಕವಿತೆಯಲ್ಲಿ
ಪನ್ನೀರಾಗುವ ಪ್ರೀತಿ
ಮದಿರೆಯ ಕೊನೆಯ ಮಾತು
ನಿನ್ನ ತೊಡೆ ಸಂದಿಯಲಿ ಬತ್ತಿ
 ಗರ್ಭದಿ ಮಗುವಾಗಿ
ಮೊಗವೆತ್ತಿ ನನ್ನ ಎದೆ ತಣಿಸುವ
ರೂಹು-ಕುರುಹು
ಮದಿರೆಯ ಮಸಣದ ಮಾತು
ಬರೀ ನಿನ್ನ ಬೆರಳೊಳಗೆ ಬತ್ತಿ
ನಿನ್ನ ಉಸಿರಲಿ ಪ್ರೀತಿ ಸಾವನು ಕೆತ್ತಿ
ನೀನಲ್ಲದ ನಿನ್ನನ್ನು ಸುತ್ತಿ ಸುತ್ತಿ
ಸಾಯದ ಪಿಶಾಚಿ
       ಬರೀ ಪಿಶಾಚಿ. . . .”
   
     ಈಕೆ ತೀರುವ ಒಂದು ವರ್ಷ ಮೊದಲು ಹುಟ್ಟಿರಬಹುದು ನಾನು. 12 ಸೆಪ್ಟೆಂಬರ 1971 ರಲ್ಲಿ ನಾನು ಹುಟ್ಟಿದ್ದು. 30 ಮಾರ್ಚ್ 1972 ಅವಳು ತೀರಿದ್ದು. ವರ್ಷದ ಒಳಾಂಗಣದಲ್ಲಿ ಸುತ್ತಿ ಮಾತಾಡುವುದಾದರೆ ನನ್ನ ಹುಟ್ಟು ಅವಳ ಸಾವಿನ ಮಧ್ಯದ ಲೆಕ್ಕ ಏಳು ತಿಂಗಳಿಗೆ ಸರಿದೂಗುತ್ತದೆ. ಬೊಂಬಾಯಿಯ ಮಲಬಾರ್ ಹಿಲ್‍ನ ನರ್ಸಿಂಗ್‍ಹೋಮ್ ಒಂದರಲ್ಲಿ ಈಕೆ ಭಗ್ನ ಹೃದಯಿಯಾಗಿ ಕೊನೆಯುಸಿರೆಳೆಯುವಾಗ ಈಕೆಗೆ ಕೇವಲ ಮೂವತ್ತೊಂಬತ್ತು ವರ್ಷ. ಅಲೆಗ್ಝಾಂಡರ್‍ನಷ್ಟೇ ಆಯುಷ್ಯ ರೇಖೆಯ ಹುಡುಗಿ. ಇಬ್ಬರದ್ದೂ ಪ್ರಪಂಚ ಗೆಲ್ಲುವ ಹುಮ್ಮಸ್ಸು. ಅಲೆಗ್ಝಾಂಡರ್ ನಮ್ಮ ಎದೆಯುಬ್ಬಿನ ಮಾತಾದರೆ ಮೀನಾ ಕುಮಾರಿ ನಮ್ಮ ಎದೆ ಮೀಟುವ ಹಾಡಾಗುತ್ತಾಳೆ. ನಮ್ಮ ನೋವಿನ ಆಲಾಪಗಳಿಗೆ ವೀಣೆಯಾಗುತ್ತಾಳೆ. ಆದರೆ ವಿಚಿತ್ರ ನೋಡಿ, ಈಕೆಯನ್ನು ಕುರಿತು ಗೊತ್ತಿರಲಿ, ಬರೀ ಮಾತಾಡುತ್ತಿರುವ ನನಗೆ ಈಗ ನಲವತ್ತು ವರ್ಷ. ಅಂಕಿ-ಸಂಖ್ಯೆಗಳಷ್ಟು ನಿರ್ಮೊಹಿಯಲ್ಲ ಬದುಕು. ಮೀನಾ ಕುಮಾರಿ ಸಾಯುವಾಗ ಆಕೆಯ ಮೈತುಂಬಾ ರಕ್ತಕ್ಕಿಂತಲೂ ಶೆರೆಯ ಪ್ರಮಾಣವೇ ಹೆಚ್ಚಿತ್ತು. ಆಕೆಗೆ ಶೆರೆಯ ಹುಚ್ಚಿತ್ತು.    ಕುಡಿತದ ಕುರಿತು ಓದುವಾಗ ಅಥವಾ ಬರೆಯುವಾಗಲೆಲ್ಲಾ ಕನ್ನಡದ ಚಿಗಳಿ ಕವಿಯೊಬ್ಬರು ನೆನಪಾಗುತ್ತಾರೆ. ಜನ ಅವರನ್ನು ಚಿಗಳಿ ಕವಿಯೆಂದೇ ಕರೆಯುತ್ತಾರೆ. ಕಾರಣವಿಷ್ಟೇ, ಅವರು ಕವಿತೆ ಬರೆದುದಕ್ಕಿಂತ ಕುಡಿದಿದ್ದೇ ಬಹಳಾಯಿತು. ಹೀಗಾಗಿ ಕಾವ್ಯದ ಹಾಗೂ ಅವರ ಬಾಳು ಹಾಳಾಯಿತು. ಅಂದಹಾಗೆ ಒಂದು ವಿಚಿತ್ರ ಕೇಳಿ, ಅದೊಂದು ದಿನ ನಾನು ಈ ಕವಿಗಾಗಿ ಹುಡುಕಿಕೊಂಡು ಊರಲ್ಲಿ ಅಲೆಯುತ್ತಿರುವಾಗ ಈ ಕವಿ ಕುಡಿದು ಸರೂ-ಮುಂಜಾನೆ ಕಾಲೇಜಿನ ಗೇಟಿಗೆ ಅಡ್ಡಲಾಗಿ ಅಂಗಾತ ಮಲಗಿದ್ದರು. ಸಮೀಪ ಹೋಗಿ, “ ಇದೇನು? ಹಾಡು-ಹಗಲು ರಸ್ತೆಯ ಮೇಲೆ, ಅದೂ ಈ ಸುಡು ಬಿಸಿಲಲ್ಲಿ ಈ ಕುಂಭಕರ್ಣನ ಅವತಾರ?” ಎಂದು ಕೇಳಿದಕ್ಕೆ ಅವರು ಹೇಳಿದ್ದರು, “ ಇದು ಅವತಾರ ಅಲ್ಲ ಗುರು, ಪ್ರತಿಕಾರ, ಅಲ್ಲಲ್ಲ ಪ್ರತಿರೋಧ. ಅಣ್ಣಾವ್ರನ್ನ ವೀರಪ್ಪನ್ನನಿಂದ ಬಿಡಿಸಿಕೊಂಡು ಬರುವಲ್ಲಿ ನಮ್ಮ ಸರ್ಕಾರ ಸೋತಿದೆ. ಅದಕ್ಕೆ ಇದು ನನ್ನ ವಿನೂತನ ಧಿಕ್ಕಾರ”. ಇದೇ ಕವಿಯ ಕವಿತೆಯ ಕೆಲವು ಸಾಲುಗಳು ಹೀಗಿವೆ-
“ ಸುಟ್ಟ ಆಶೆಗಳ
ಆತ್ಮಗಳ ಕಟ್ಟಿ
ಹಾಕುತ್ತೇನೆ ಕವಿತೆಗಳ ಹೊಸ ಅಚ್ಚ
ನನ್ನ ಬದುಕು
ಮಾತ್ರ ನೆನಪಿಡಿ
ಕುಡಿದೊಗೆದ ಬಾಟಲಿಯಷ್ಟೇ ಸ್ವಚ್ಛ”
    
   ಗೊತ್ತಿದೆ ನನಗೆ, ಮೀನಾ ಕುಮಾರಿಯತ್ತ ಸುಳಿದಾಡಬೇಕಿದ್ದ ನನ್ನ ಬರಹ ನಿಮ್ಮನ್ನು ಸುಂಟರಗಾಳಿಯಂತೆ ಅದೆಲ್ಲೆಲ್ಲೋ ತೆಗೆದುಕೊಂಡು ಹೊರಟಿದೆ .ಅಂದಹಾಗೆ ಭಾರತೀಯ ಚಿತ್ರರಂಗವನ್ನು ಇಪ್ಪತ್ತು ವರ್ಷ ಶಬ್ದಶಃ ಇಪ್ಪತ್ತು ವರ್ಷ ಅನಭಿಷಕ್ತ ರಾಣಿಯಂತೆ ಆಳಿದ ಇವಳು ನನ್ನಪ್ಪಂದಿರ ಜಮಾನಾದ ಅನೇಕ ಯುವಕರ ನಿದ್ರೆಯನ್ನು ಹಾಳುಗೆಡವಿದ್ದಳು. ಅಂಥವರಲ್ಲಿ ನನ್ನ ಪೈಲವಾನ ತಂದೆಯೂ ಒಬ್ಬ. ಸಿನಿಮಾ ಜ್ಞಾನದ ತನ್ನ ಸೀಮಿತ ವ್ಯಾಪ್ತಿಯಲ್ಲಿ ನನ್ನ ತಂದೆ ಮಾತ್ರ ನನಗೆ ಸತ್ವಯುತರಾದವರನ್ನೇ ಪರಿಚಯಿಸಿದ. ಆತನ ಕುಡಿ ಮೀಸೆಯ ತವಕಕ್ಕೆ ಒಡಮೂಡುತ್ತಿದ್ದ ನಟಿ ಸಾಧನಾ, ಮಾತಿಗೆ ಕುಳಿತರೆ ನೂತನ್, ಸಂಜೆ ರಂಗೇರಿ ಆತನ ಒಡೆದ ಕಪ್ಪಿನಲ್ಲಿ ಒಂದಿಷ್ಟು ಸೆರೆ ಸುರಿದುಕೊಂಡು, ಬೆವರಿಳಿಸುತ್ತಾ  ಆಲೋಚನಾ ಮಗ್ನನಾದರೆ ಗಝಲ್ ಗಾಳಿ ತೀಡುತ್ತಾ ಬರುತ್ತಿದ್ದಳು ಈ ಮೀನಾ ಕುಮಾರಿ. ನೂತನ್, ವೈಜಯಂತಿಮಾಲಾ, ಸಾಧನಾ, ಲೀನಾ ಚಟ್ನಿಸರಿಗೆ ಹೋಲಿಸಿದರೆ ಮೀನಾ ಕುಮಾರಿ(Meenakumari) ಒಬ್ಬ ಹೆಂಗಸು, ಆಡಂಬರವಿಲ್ಲದ ಅತ್ಯಂತ ಸರಳ ಈ ಘರೆಲು ಹೆಂಗಸು. ದೊಡ್ಡ ಕುಂಕುಮ, ಮೊಂಡ ಮೂಗು’(ಮಮ್ತಾಜಳಷ್ಟೇನೂ ಮೊಂಡ ಅಲ್ಲ) ಪೂರ್ಣಗೊಂಡ ಮೈಮಾಟದ ಇವಳು ನನ್ನಂತಹ ಹುಡುಗನನ್ನು ಕಾಡುವ ಪಾತ್ರವಾಗಿ ಎಂದೂ ಆವರಿಸಿಕೊಳ್ಳಲಿಲ್ಲ. ಅದರೆ ಅಪ್ಪನ ಹಾಗೂ ಆತನ ಗೆಳೆಯರೂ ಆದ ನನ್ನ ಇಂಗ್ಲಿಷ್ ಗುರುಗಳೊಬ್ಬರ ಒತ್ತಾಸೆಗೆ ಬಿದ್ದು ನಾನು ಈಕೆಯನ್ನು ಮತ್ತೆ ಮತ್ತೆ ಓದಲಾರಂಭಿಸಿದೆ, ನೋಡಲಾರಂಭಿಸಿದೆ, ಚಿಂತಿಸಲಾರಂಭಿಸಿದೆ. ಈಗನಿಸುತ್ತದೆ, ಖಂಡಿತವಾಗಿಯೂ ಇಂತಹ ಒಂದು ಹೆಣ್ಣು ಭಾರತೀಯ ಚಿತ್ರರಂಗಕ್ಕೆ ಮತ್ತಿನ್ನೆಂದೂ ಸಾಧ್ಯವಿಲ್ಲ. ಸಾಧ್ಯವಿದ್ದರೂ ಅವಳು ಮೀನಾ ಕುಮಾರಿ ಆಗಿರುವುದಿಲ್ಲ. ದುರಂತವೆಂದರೆ ಭಾರತೀಯ ಚಿತ್ರರಂಗದ ಅನೇಕ `ಕುಮಾರಿಯರೂ’ ಅವಳ ಸಮ ಹೋಗಲಿ ಅವಳ ನಂತರದ ಸ್ಥಾನವನ್ನೂ ಗಿಟ್ಟಿಸಿಕೊಳ್ಳಲಿಲ್ಲ.

    ಗಾಬರಿಯಾಗಬೇಡಿ, ಮೂವತ್ತೊಂಬತ್ತು ವರ್ಷದ ಬದುಕಿನಲ್ಲಿ ಈಕೆ ನಟಿಸಿದ್ದು 70 ಚಿತ್ರಗಳಲ್ಲಿ! ವೃತ್ತಿ ಜೀವನದ ಈ ಇಪ್ಪತ್ತು ವರ್ಷಗಳಲ್ಲಿ ಆಕೆಗೆ ಸೆರೆ, ಸಿನಿಮಾ ಮತ್ತು ಗಂಡಸರ ಹೊರತುಪಡಿಸಿ ಬೇರೆ ಲೋಕವಿಲ್ಲ. ಒಂದರ್ಥದಲ್ಲಿ ಆಕೆ ಬದುಕಿದ್ದೇ ಈ ಇಪ್ಪತ್ತು ವರ್ಷ. ಹಾಗೆಯೇ ತೊಟ್ಟು ತೊಟ್ಟಾಗಿ ಸಾವನ್ನು ಸೆರೆಯಂತೆ ಕುಡಿದಿದ್ದು ಇದೇ ಇಪ್ಪತ್ತು ವರ್ಷ. ಸುಮ್ಮನಿದ್ದೂ ಸಾಯುತ್ತಾರೆ ಜನ, ಸೆರೆ ಕುಡಿದೂ ಸಾಯುತ್ತಾರೆ. ಆದರೆ ಮೀನಾ ಕುಮಾರಿ 39 ವರ್ಷಗಳಲ್ಲಿ ಸುಮ್ಮನೆ ಇರಲೂ ಇಲ್ಲ, ಇನ್ನೊಂದು ಅರ್ಥದಲ್ಲಿ ಸೆರೆ ಕುಡಿದೂ ಸಾಧಿಸಬೇಕಾದುದನ್ನು ಸಾಧಿಸದೇ ಸಾಯಲೂ ಇಲ್ಲ. ಇಪ್ಪತ್ತು ವರ್ಷಗಳಲ್ಲಿ ಕಮಲ್ ಅಮ್ರೋಹಿ(Kamal Amrohi) ನಿರ್ದೇಶನದ `ಬಿಜುಭಾವಾರಾ(Beju bawara-1954), `ಪರಿಣಿತಾ’(Parineeta-1953), ಗುರುದತ್ತ್(Gurudutt) ನಿರ್ದೇಶನದ `ಸಾಹೀಬ್ ಬೀಬಿ ಔರ್ ಗುಲಾಮ್’(Sahib bibi our Gulam-1963), ಹಾಗೂ ಕಾಜಲ್(Kajal-1966), ಹೀಗೆ ನಾಲ್ಕು ಫಿಲಂಫೇರ್ ಪ್ರಶಸ್ತಿಗಳು. ಅವಳ ನಿಧನದ ನಂತರ ಬಂದ ‘ಪಾಕೀಜಾ’ವನ್ನು ಲೆಕ್ಕಕ್ಕಿಡುವುದಾದರೆ ಒಟ್ಟು ಐದು ಫಿಲಂಫೇರ್ ಪ್ರಶಸ್ತಿಗಳು. ಈಕೆಯ ಹಿಂದೆ ಕುತೂಹಲದಿಂದ ಹೊರಟಿದ್ದ ನಾನು ಅವಳನ್ನು ಮಾನವ ಸಂಬಂಧಗಳ ಭಿಷ್ಮ ಕೆ.ಎ ಅಬ್ಬಾಸ(K A Abbas)ರ ಮೂಲಕ ಓದಿದ್ದು ಹೀಗೆ-

Meena kumari in her childhood
 “ಗೊಂಬೆಯೊಳಗೊಂದು ಗೊಂಬೆಗೊಂಬೆಯೊಳಗೊಂದು ಗೊಂಬೆಗೊಂಬೆಯೊಳಗೊಂದು ಗೊಂಬೆಗೊಂಬೆಯೊಳಗೂ ಒಂದು ಗೊಂಬೆ”
  

ಹೀಗಿದ್ದ ಗೊಂಬೆಯೊಂದನ್ನು, ಅವಳ ವ್ಯಕ್ತಿತ್ವದ ಒಳ ಆವರಣ, ಅನಾವರಣಗಳನ್ನು ಸೂಚಿಸುವುದಕ್ಕಾಗಿ ರಷಿಯಾದಿಂದ ಬರುವಾಗ ಕೆ.ಎ.ಅಬ್ಬಾಸ್(K A Abbas) ಈ ಮುನ್ನಿ ಅಂದರೆ ಮೀನಾ ಕುಮಾರಿಗಾಗಿ ತಂದರು. ಮಜಹಬೀನ್ ಅಲಿಯಾಸ್ ಮೀನಾ ಕುಮಾರಿಗೆ ಗೊಂಬೆಗಳೆಂದರೆ ಪಂಚಪ್ರಾಣ. ಅವಳ ಬೊಂಬಾಯಿಯ ಅಲಿಷಾನ್ ಮನೆ, ಗೊಂಬೆಗಳ ದೊಡ್ಡ ಮ್ಯೂಸಿಯಂ ಆಗಿತ್ತು. ಆದರೆ ಅಬ್ಬಾಸರ ಈ ಗೊಂಬೆ ಮಾತ್ರ ಅವಳಿಗೆ ಬಹಳ ಪ್ರೀತಿಯದಾಗಿತ್ತು. ರಷಿಯನ್ ಗೊಂಬೆ ಕೊಟ್ಟ ಆ ಕ್ಷಣದಲ್ಲಿ ಅಬ್ಬಾಸರಿಗೆ ಆಕೆ ಕೇಳಿದ್ದಳು: “Did You know why I collect dolls? It is because as a child, I never had an opportunity to play with dolls. I began working in films from the age of seven”.ಮೀನಾ ತನ್ನ ತಂದೆ-ತಾಯಿಗಳಿಗೆ ಎಂದೂ ಮಣ್ಣಾಡುವ, ಕಣ್ಣು ಮಿಟುಕಿಸಿ, ಕಾಡಿ-ಬೇಡುವ, ನಗುವ ಮಗುವಾಗಲೇ ಇಲ್ಲ. ಯಾಕೆಂದರೆ ಆ ಎಳೆ ವಯಸ್ಸಿನಲ್ಲಿಯೇ ಅವಳು ಅವರ ಪಾಲಿಗೆ ಹಣ ಮಾಡುವ ಮಶಿನ್ ಆಗಿದ್ದಳು. ಮುಂಬಯಿಯ ರೂಪತಾರಾ ಸ್ಟುಡಿಯೋದ ಎದುರು ಮನೆಯಿಂದ ಹೊರಟ ಮುನ್ನಿ ಎಂಬ ಈ ಬಾಲೆ ಬಣ್ಣ ಎಂದರೇನು ಎಂದು ತಿಳಿಯುವದರೊಳಗಾಗಿ `ಲೆದರ್ ಫೇಸ್’(Leather Face), ` ಅಧೂರಿ ಕಹಾನಿ’(adhuri Kahani), `ಪೂಜಾ’(Pooja), `ನಯೀ ರೋಷನಿ’(Nayi Roshani), `ಬಹನ್’(Bahan), `ಕಸೌಟಿ’(Kasouti), `ಗರೀಬ್’(Garib) ಚಿತ್ರಗಳಲ್ಲಿ ನಟಿಸಿಬಿಟ್ಟಿದ್ದಳು.      ಆದರೆ ಅದೇನೋ `ಸುಖ ಎನ್ನುವುದು ಮರೀಚಿಕೆಯಾಗಿಯೇ ಉಳಿಯಿತು ಮೀನಾಕುಮಾರಿಯ ಪಾಲಿಗೆ’ ಎನ್ನುತ್ತಾರೆ ಕೆ.ಎ.ಅಬ್ಬಾಸ್(K A Abbas). ಹೀಗಾಗಿ ಹಿಂದಿ ಫಿಲ್ಮಿ ದುನಿಯಾದ ಅಬ್ಬಾಸರ, ದುರಂತ ಕಂಡ ಗೆಳೆಯರಾದ ಮಜಾಝ್ ಹಾಗೂ ಶೈಲೇಂದ್ರರ ಹಾಗೆ ಆ ಸುಖವನ್ನು ಕುಡಿತದಲ್ಲಿ ಕಾಣಲು ಹೋಗಿ ದುರಂತ ನಾಯಕಿಯಾದಳು ಮೀನಾ ಎನ್ನುವುದು ಅವರ ವಾದ. “ಪ್ರೀತಿಯ ತೀವ್ರ ತಹತಹಿಕೆಯಲ್ಲಿ ಇದ್ದ ಆಕೆಗೆ ಅದು ಹಿಂಗದ ಹಸಿವಾಗಿತ್ತು, ಇಂಗದ ಕೊರತೆಯಾಗಿತ್ತು. ಆದರೆ ಆ ಒರತೆಯ ನೀರನ್ನು ಕುಡಿದು ಸತ್ತವರ ಸಂಖ್ಯೆ ಹೆಚ್ಚಾಯಿತೇ ಸಹ ಮರು ಜೀವನ ಪಡೆದವರದ್ದಲ್ಲ. “Many loved Meena kumari, and she loved many. But her love was a pure flame that illuminated many people’s lives and it burnt her from within.”ಕುಡಿತದ ಮೀನಾ ಒಂದರ್ಥದಲ್ಲಿ ‘ಕುಮಾರಿ’ಯಾಗಿಯೇ ಉಳಿದಳೇ ವಿನಃ ಸಂಸಾರದ ದೀಪ ಬೆಳಗಿಸುವ ಭಾಗ್ಯ ಅವಳಿಗೆ ದೊರೆಯಲೇ ಇಲ್ಲ” ಎನ್ನುತ್ತಾರೆ ಅಬ್ಬಾಸ್.      ವಾಯುವ್ಯ ಪಂಜಾಬಿನಿಂದ ಬಂದ ಹಾರ್ಮೊನಿಯಂ ವಾದಕ ಅಲ್ಲಾಭಕ್ಷನಿಗೆ ಮೂರು ಜನ ಹೆಣ್ಣುಮಕ್ಕಳು. ಮೊದಲನೆಯವಳು ಖುರ್ಷಿದ್, ಎರಡನೆಯವಳು ಮಜಹಬಿನ್, ಮೂರನೇಯವಳು ಮಾಧವಿ. ಮೂರು ಮಕ್ಕಳನ್ನು ಪಂಜಾಬಿನಲ್ಲಿ ಬಿಟ್ಟು ಬೊಂಬಾಯಿಗೆ  ಬಂದ ಅಲ್ಲಾಭಕ್ಷ,  ಬೆಂಗಾಲಿ ನೃತ್ಯಪಟು ಇಕ್ಬಾಲ್‍ಬೇಗಂಳನ್ನು ಮದುವೆಯಾದ. ಇಕ್ಬಾಲ್‍ಬೇಗಂ ಮೂಲತಃ  ಟ್ಯಾಗೋರ್ ಮನೆತನದವಳು. ರಂಗಪಟು ಅಲ್ಲಾಭಕ್ಷನ ಪ್ರೀತಿಯ ಬೆನ್ನುಹತ್ತಿ ಧರ್ಮ ತೊರೆದ ಗಟ್ಟಿಗಿತ್ತಿ. ಇಕ್ಬಾಲ್ ಬೇಗಂಳು ಮಜಹಬಿನ್ ಅಂದರೆ ಮೀನಾ ಕುಮಾರಿಯನ್ನು ವಿಜಯಭಟ್ ಎನ್ನುವ ನಿರ್ದೇಶಕನಿಗೆ ಮುಟ್ಟಿಸುವಲ್ಲಿ ಸೇತುವೆಯಾದಳು. ಅಂದಿನ ಸುಪ್ರಸಿದ್ಧ ಪ್ರಕಾಶ್ ಸ್ಟುಡಿಯೋದ ಒಡೆಯನಾದ ಭಟ್ ನಿರ್ದೇಶನದಂತೆ ಬೆಳೆದ ಮೀನಾ ಕುಮಾರಿಯ ಆನಂತರದ ಬದುಕನ್ನು ಕುರಿತು ನಾನು ನಿಮಗೆ ಹೇಳಬೇಕೆ?
     ಅವಳು, ಬದುಕಿನ ಭೀಷಣ ಸುಡುಗಾಳಿಗೆ ತಾಗಿ ಹಣ್ಣಾದ ಹೆಣ್ಣು. ಈ ಮಾಗುವಿಕೆ ಮೀನಾ ಕುಮಾರಿಗೆ ಸಹಜವಾಗಿರಲಿಲ್ಲ. ಅವಳ ಈ ವೇದನೆಯನ್ನು ಅವಳ ಸಾಲುಗಳಲ್ಲಿಯೇ ಓದಿ-
Meena kumari in "Sahib bibi our Gulam"


Puchhate ho to suno kaise basar hotee hai Raat Khairaat kee sadqe kee sahar hotii hai Saans bharane ko to jeena nahin kahate yaa rab Dil hee dukhataa hai na ab aasteen tar hotee hai Jaise jaagii huii aankhon

ನಾ ಹೇಗೆ ಬದುಕುವೆ? ಎಂದಲ್ಲವೇ ಪ್ರಶ್ನೆ ನಿನಗೆ
ರಾತ್ರಿ ಉರುಳುತ್ತವೆ ಭಿಕಾರಿಯಂತೆ, ಬೆಳಗು ಬರೀ ಬೇಡಿಕೊಳ್ಳುವುದರಲ್ಲಿ
ದೇವರೇ, ಬದುಕುವುದೆಂದರೆ ಉಸಿರಾಟವೇ, ಅಲ್ಲ
ಈಗ   ಹೃದಯಕ್ಕೆ ನೋವಿನ ಭಾಧೆಯಿಲ್ಲ
                                                          ಕಣ್ಣಾಲಿಗಳಲ್ಲಿ ಮತ್ತಷ್ಟು ಕಣ್ಣೀರಿಗೆ ಸ್ಥಳವಿಲ್ಲ
                                                                   ಭಗ್ನ ಕನಸುಗಳು ಮಾತ್ರ ನಿದ್ರಾಹೀನ ರಾತ್ರಿಗಳ
                                                ಇರಿಯುತ್ತಲೇ ಇರುತ್ತವೆ ನನ್ನನ್ನು ಮುಳ್ಳುಗಳಂತೆ                                                                                                         
                                                                                                                   -ಮೀನಾಕುಮಾರಿ  



         ಆದರೆ ಅಬ್ಬಾಸ್ ಹೇಳುವ ಕಥೆಯೇ ಬೇರೆ. ಆಕೆಯ ತಂದೆ ಓರ್ವ ವಿಫಲ ಸಂಗೀತ ನಿರ್ದೇಶಕ, ತಾಯಿ ಡಾನ್ಸರ್. ಕಲೆ ಏನೋ ಅವಳಿಗೆ ಅವಳ ತಂದೆ-ತಾಯಿಗಳಿಂದಲೇ ಬಂತು. ಆದರೆ ಭರಿಸಲಾಗದ ಬಡತನವೂ ಅವಳಿಗೆ ಅವರಿಂದಲೇ ಬಂತು. ಅಬ್ಬಾಸ್ ಹೇಳುತ್ತಾರೆ: “ಏಳೇ ಏಳು ವರ್ಷದ ಬಾಲಕಿ ಮುನ್ನಿ, ಅಲಿಯಾಸ್ ಮಜಹಬೀನ್, ಅಲಿಯಾಸ್ ಮೀನಾ ಕುಮಾರಿ ಕೆಲಸ ಅರಸುತ್ತ ಬೊಂಬಾಯಿಯ ಸಿನಿಮಾದ ಸ್ಟುಡಿಯೋಗಳ ಕದ ತಟ್ಟುತ್ತ ಅಲೆಯಬೇಕಿತ್ತು. ಹಾಗೆ ಅಲೆದಾಡಿದಾಗ ಸಿಕ್ಕ ಪಾತ್ರಗಳಿಗೆ ದೊರೆಯುತ್ತಿದ್ದ ಸಂಭಾವನೆ ದಿನ ಒಂದಕ್ಕೆ ಕೇವಲ ಇಪ್ಪತ್ತರಿಂದ ಮೂವತ್ತು ರೂಪಾಯಿಗಳಂತೆ. ಆಕೆ ಚಿತ್ರನಟಿಯಾದುದು ಆಸೆ ಪಟ್ಟು ಅಲ್ಲ, ಅನಿವಾರ್ಯಕ್ಕೆ. ಅಲ್ಲಿ ಅವಳು ಕಾವ್ಯದ ಮೂಲಕ ನಡೆಸಿದ ಆತ್ಮದ ಶೋಧ, ಅಂತರಂಗದ ಕೂಗು ಯಾರಿಗೂ ಗಮನಕ್ಕೆ ಬರಲಿಲ್ಲ. ಜಗತ್ತು ಗುರ್ತಿಸಿದ್ದು ಮಾತ್ರ-
The Meenekumari of ‘Parineetha’
The Meenakumari of ‘Biju Bawara’
The black Meenakumari of ‘Char dil Char Raahen’
The tragic Meenekumari of ‘Sharada’
The beautiful Meenakumari of ‘Pakeeza’
In each of her roles she revealed a new dignity, a new beauty, a new talent. She lived each role and all the while, she lived her own role that was life!
ಎಂದು ಸ್ಮರಿಸಿಕೊಳ್ಳುತ್ತಾರೆ ಅಬ್ಬಾಸ್.      ಈ ಮುದ್ದು-ಮುದ್ದಾದ ಮುಸ್ಲಿಂ ಮಜಹಬೀನ್ ಹಿಂದೂ ಮೀನಾ ಕುಮಾರಿಯಾಗಿ ಬದಲಾದುದರ ಹಿಂದೆಯೂ ಒಂದು ವಿಶೇಷ ರೋಚಕ ಕತೆ ಇದೆ. ಅದು ಚಿತ್ರ ಜಗತ್ತಿನ ಪ್ರತಿಷ್ಠಿತ ಬಸಂತ್ ಸ್ಟುಡಿಯೋದವರು `ಲಕ್ಷ್ಮಿ ನಾರಾಯಣ’ ಎಂಬ ಭಕ್ತಿ ಪ್ರಧಾನ ಚಿತ್ರ ನಿರ್ಮಾಣ ಮಾಡುತ್ತಿದ್ದ ಸಂದರ್ಭ. ಆಗ ಅವರ ಪಾಲಿಗೆ ಲಕ್ಷ್ಮಿಯಾಗಿ ಸಿಕ್ಕವಳು ಈ ಮಜಹಬೀನ್ ಆಗ ಕಡಿಮೆ ಮೊತ್ತಕ್ಕ ಸಿಗುವ ನಟನೆ ಮತ್ತು ಸಿನಿಮಾ ಹಿನ್ನಲೆಯ ನಟಿ. ಆದರೆ ಈ ಸುನ್ನಿ ಮುಸ್ಲಿಂ ಹುಡುಗಿಯನ್ನು ಹಿಂದೂ ದೇವತೆಯ ಪಾತ್ರಕ್ಕೆ ಹಾಕಿಕೊಂಡು ವಿವಾದಗಳಿಲ್ಲದೆ ಸಿನಿಮಾಗೆಲ್ಲಿಸುವುದು ಹೇಗೆ? ಹೀಗಾಗಿ ಈ ನಿರ್ಮಾಣ ಹಂತದ ಚಿತ್ರದ ಈ ನಾಯಕಿಯನ್ನು `ಮೀನಾ ಕುಮಾರಿ’ ಎಂದು ಪರಿಚಯಿಸಿ ಅದಕ್ಕೆ ವ್ಯಾಪಕ ಪ್ರಚಾರವನ್ನು ಕೊಡಲಾಯಿತು.ದುರಂತ ನಾಯಕಿಯಾಗಿ ಹಿಂದಿ ಚಲನಚಿತ್ರ ಜಗತ್ತನ್ನು ತನ್ನ ಜೀವಿತಾವಧಿಯಲ್ಲಿ ಎರಡು-ಮೂರು ದಶಕಗಳ ಕಾಲ ಆಳಿದ್ದ ಮೀನಾ, ಮುಂದೊಂದು ಒಂದೊಂದು ದಿನ ಈಕೆ ಚಿತ್ರಕ್ಕೆ ಲಕ್ಷ ಲಕ್ಷ ಪಡೆದಳು. ಅತ್ಯಂತ ಶ್ರೀಮಂತ, ಅಲಿಷಾನ್ ಬಂಗಲೆ ಕಟ್ಟಿಸಿದಳು. ಐಶಾರಾಮಿ ವಾಹನದಲ್ಲಿ ಪ್ರವಾಸ ಮಾಡಿದಳು. ಹಾಗಂತ ಇಂದಿನ ತಾರೆಗಳಿಗಾದಂತೆ ಹಣವೇ ಎಲ್ಲವೂ ಆಗಿರಲಿಲ್ಲ ಮೀನಾಕುಮಾರಿಗೆ. ಅವಳು ಅಪ್ಪಟ ನಟಿಯಾಗಿದ್ದಳು. ಅಂತಲೆ ತನ್ನ ಗ್ಲಾಮರಸ್ ಲೋಕದ ಅತ್ಯಂತ ಯಶಸ್ವೀ ದಿನಗಳಲ್ಲಿಯೂ ಅಬ್ಬಾಸರ `ಚಾರ್ ದಿಲ್, ಚಾರ್ ರಾಹೆ’ ಚಿತ್ರದಲ್ಲಿ ತನ್ನ ಸುಂದರವಾದ ಮುಖಕ್ಕೆ ಮಸಿ ಬಳಿದುಕೊಂಡು ಸಾಮಾನ್ಯ ಪಾತ್ರ ಮಾಡಿದಳು. ಚಂದ್ರಮುಖಿ (ಮಜಹಬೀನ್)ಯಾದ, ಮೀನಾಕುಮಾರಿ ಎಂಬ ಸುಂದರಿ ಅಮಾವಾಸ್ಯೆಯೊಂದಿಗೆ ಹೋಲಿಸಿಕೊಳ್ಳುವುದೆಂದರೇನು!
ಆಕೆಯ ಕಲಾ ತಪಸ್ಸಿಗೆ ಇದೊಂದೇ ಉದಾಹರಣೆ ಸಾಲದು. ಎಲ್ಲವನ್ನೂ ಮೀನಾಕುಮಾರಿ ಬರೀ ಹಣಕ್ಕಾಗಿ ಕೆಲಸ ಮಾಡುತ್ತಿರಲಿಲ್ಲ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಆಕೆ ಬರೆದ ಶಾಯರಿಗಳು. ಸದಾ ಸೌಮ್ಯ, ಶಾಂತ ಪಾತ್ರಗಳಲ್ಲಿ ಕಾಣಿಸಿಕೊಂಡ ಮೀನಾ ಕುಮಾರಿ ತನ್ನೊಳಗಿನ ಭಯಾನಕ ಕೋಲಾಹಲವನ್ನು ಮಾತ್ರ ತನ್ನ ಕವಿತೆಗಳಲ್ಲಿ ಅಭಿವ್ಯಕ್ತಿಸಿದ್ದಾಳೆ. ದಿನಚರಿಯನ್ನು ಬರೆಯುವ ಆರೋಗ್ಯಕರ ಹವ್ಯಾಸವನ್ನು ಇರಿಸಿಕೊಂಡಿದ್ದ ಮೀನಾ ಕುಮಾರಿ ತನ್ನ ಈ ಕವಿತೆಗಳನ್ನು ದಾಖಲಿಸಿದ್ದು ತನ್ನ ದಿನಚರಿಯಲ್ಲಿಯೇ. ಕವಿತೆಯನ್ನು ಬರೆಯುತ್ತಿದ್ದ ಮೀನಾಕುಮಾರಿ ಇಲ್ಲಿ `ನಾಜ್’ ಆಗಿದ್ದಳು. ಇದು ಅವಳ ಕಾವ್ಯನಾಮ ಈ ನಿಟ್ಟಿನಲ್ಲಿ ಮೀನಾ ಕುಮಾರಿಯ ಮತ್ತೊಬ್ಬ ಆತ್ಮೀಯ ಸ್ನೇಹಿತ ಗುಲ್ಜಾರ್. ಮುಂದೊಂದು ಕಾಲಕ್ಕೆ ಇದೇ ಗುಲ್ಜಾರ್ ಮೀನಾ ಕುಮಾರಿಯನ್ನು ಹಾಕಿಕೊಂಡು `ಮೇರೆ ಅಪ್ನೆ’ ಎಂಬ ದಾಖಲಾರ್ಹ ಚಿತ್ರವನ್ನೂ ಮಾಡಿದರು.
ನಲವತ್ತು ವರ್ಷಗಳ, ಮೀನಾ ಕುಮಾರಿಯ ಹೋರಾಟದ, ದುರಂತಗಳ ಸರಮಾಲೆಯ ಜೀವನವನ್ನು ನೋಡಿ ಅಬ್ಬಾಸ್ ಬರೆಯುತ್ತಾರೆ- “ತನ್ನವರೆಲ್ಲರಿಗೂ ಹಣ, ಜೀವನ ಭದ್ರತೆ, ಮಾರ್ಗದರ್ಶನ, ತಿಳುವಳಿಕೆ, ಸಹಾನುಭೂತಿ, ಪ್ರೀತಿ ಎಲ್ಲವನ್ನೂ ಕೊಟ್ಟ ಮೀನಾಕುಮಾರಿ ಸ್ವಯಂ ಕಣ್ಣೀರುಗರೆಯಲು ಮಾನವತೆಯ ಒಂದು ಹೆಗಲಿನ ನಿರೀಕ್ಷೆಯಲ್ಲಿದ್ದಳು. ಮದುವೆ ಎಂಬ ಬಂಧನದೊಳಗೂ ಅಥವಾ ಅದರ ಹೊರಗೂ ಅವಳಿಗೇನೂ ದೊರೆಯಲೇ ಇಲ್ಲ. ಮುದ್ದುಮುದ್ದಾಗಿದ್ದ ಆಕೆಯ ತುಟಿಗಳಿಗೆ ಹಾಗೂ ಮುಗ್ಧವಾಗಿದ್ದ ಆಕೆಯ ಕೆನ್ನೆಗಳಿಗೆ ಸಮಯ ಎಂಥ ಮುತ್ತಿಟ್ಟಿತ್ತು ಎಂದರೆ ಮನುಷ್ಯರಾರು ಅವುಗಳನ್ನು ಮುದ್ದಿಸಲು ಬಯಸಲಿಲ್ಲ”. ಹೀಗಾಗಿ ಸಾವಿನಲ್ಲಿ ಸಖನ ಕಂಡ ಆಕೆ ಒಂದು ನೆಮ್ಮದಿಯನ್ನು ಸಾವು ಕರೆಯುವ ರೀತಿಯಲ್ಲಿ ಕಂಡುಕೊಂಡಿದ್ದಾಳೆ. ಅವಳು ಬರೆಯುತ್ತಾಳೆ-
“ ಹೃದಯದಲಿ ಮತ್ತೆ ನೋವಿನುಬ್ಬರ
ಮತ್ಯಾವುದೋ ಮರೆತು ಹೋದ ನೆನಪು
ಉರಿಯೆಬ್ಬಿಸುವ ಹಳೆಯ ಪಿಸುಮಾತು
ಎಲ್ಲ ಸೇರಿಸಿ ಕುಟುಕುತ್ತದೆ ಕಳೆದ ಧೂರ್ತ ರಾತ್ರಿ
ಹೃದಯದಲಿ ಮತ್ತೆ ನೋವಿನುಬ್ಬರ
ಮತ್ಯಾವುದೋ ಮರೆತು ಹೋದ ನೆನಪು
ಭರವಸೆಯ ಬಣ್ಣ ಇಳಿಯುತ್ತವೆ ಹೀಗೆ
ಸಾವು ನನ್ನ ಹೆಸರನ್ನೇ ಹಿಡಿದು ಕರೆದ ಹಾಗೆ”
                                                                                        -ಮೀನಾಕುಮಾರಿ     
Meenakumari and Kamal Amrohi


ಹುಟ್ಟುತ್ತಲೇ ಬಾಲನಟಿಯಾಗಿ ಸಿನಿಮಾರಂಗ ಪ್ರವೇಶ ಮಾಡಿ, ಗೊಂಬೆಗಳನ್ನು ನೋಡಿ ಆನಂದಿಸಬೇಕಾದ ಕಣ್ಣುಗಳು ಗ್ಲಿಸರಿನ್ ಹಚ್ಚಿಕೊಂಡು ಅಳುವ ಅಳುಮುಂಜಿಯ ಪಾತ್ರ ಮಾಡಬೇಕಾಯಿತು. ಇಪ್ಪತ್ತನೆಯ ವಯಸ್ಸಿಗೆ ಆಕ್ಸಿಡೆಂಟ್ ಒಂದರಲ್ಲಿ ಕೈ ಬೆರಳುಗಳ ಸಹಜತೆಯನ್ನು ಕಳೆದುಕೊಂಡು, ಸಾವು-ಬದುಕಿನ ಮಧ್ಯ ಹೋರಾಡಿದಳು. ಟೈಫಾಯ್ಡಿನಿಂದ ಒದ್ದಾಡಿದಳು. ಏಳು ವರ್ಷಗಳವರೆಗೆ ಗುಣಮುಖವಾಗದ ವಿಚಿತ್ರ ರೋಗ ಒಂದನ್ನು ಹೊತ್ತು ಅಲೆದಾಡಿದಳು.
ಮೀನಾ ಕುಮಾರಿ ಮದುವೆಯಾಗಿದ್ದು ತನ್ನ ಹದಿನೆಂಟನೇ ವಯಸ್ಸಿನಲ್ಲಿ. ಈಕೆಯ ಮದುವೆಯಾಗಲು ಹೊರಟ ಕಮಲ್ ಅಮ್ರೋಹಿ ಈಗಾಗಲೇ ಸಂಸಾರವಂದಿಗ. ಆದರೆ ಯವ್ವೌನದ ತೀವ್ರತೆಯಲ್ಲಿದ್ದ ಮೀನಾಕುಮಾರಿಗೆ ಇದ್ಯಾವುದು ಲೆಕ್ಕಕ್ಕಿಲ್ಲ. ಅಮ್ರೋಹಿಗೆ ಚಿತ್ರ ಒಂದರಲ್ಲಿ ಮಧುಬಾಲಾಳನ್ನು ಪಕ್ಕಕ್ಕಿಟ್ಟು ಇವಳನ್ನು ನಾಯಕಿಯಾಗಿ ಒಪ್ಪಿಕೊಳ್ಳಬೇಕಾಗಿತ್ತಷ್ಟೇ. ಈ ಬದುಕು ಒಂದು ಚದುರಂಗ ಎನ್ನುವುದಾದರೆ ಈಗ ಮೀನಾಕುಮಾರಿ ಗೆದ್ದಿದ್ದಳು. ‘ಅನಾರ್ಕಲಿ’ ಚಿತ್ರದ ಮೂಲಕ ಪಡ್ಡೆ ಹುಡುಗರ ನಿದ್ರೆಗೆಡಿಸಲಾರಂಬಿಸಿದ ಇವಳು ‘ಬಿಝು ಬಾವರಾ’, ಫುಟ್‍ಪಾತ್’, ‘ಅಮರ್‍ಬಾನಿ’, `ಬಂದೀಶ್’, ‘ಸತರಂಗ್’, ‘ರುಕ್ಸಾನಾ’, ‘ಮೆಮ್‍ಸಾಹೇಬ್’, ಹೀಗೆ ಬೆಳೆಯುತ್ತಲೇ ಹೋದಳು. 1952ರಲ್ಲಿ‘ಬಿಝು ಬಾವರಾ’ ಚಿತ್ರದ ಬಿಡುಗಡೆಯ ನಂತರ ಕಮಲ್ ಅಮ್ರೋಹಿ, ಮೀನಾ ಕುಮಾರಿ ಒಂದು ಮನೆಯನ್ನು ಕೊಂಡುಕೊಂಡರು. ಅದರ ಹೆಸರು ‘Alishan’ ಆನಂತರದ ಹನ್ನೆರಡು ವರ್ಷದ ಸಂಸಾರ ಪ್ರಶ್ನಾತೀತ. ವಿನಾಶದ ಘಳಿಗೆ ಪ್ರಾರಂಭವಾಗಿದ್ದು ‘ಮೆಮ್‍ಸಾಹೇಬ’ ಚಿತ್ರದ ನಂತರ. ಸಂಸಾರದ ಹೆಂಡ ಹುಳಿಯಾಗಿತ್ತು. ವಿಘಟನೆಗೆ ಒಂದು ನೆಪ ಸಾಕಿತ್ತು. ಆನಂತರ ಸುಮಾರು ಏಳು ವರ್ಷಗಳವರೆಗೆ ಮೀನಾ ಕುಮಾರಿ ಅಮರೋಹಿಯನ್ನು ದೂರವಿಟ್ಟೇ ಬದುಕಿದಳು. ಮನೆಯಲ್ಲಿ ಎರಡು ಲಕ್ಷ ರೂಪಾಯಿ ಕಳುವಾಯಿತು ಎನ್ನುವ ನೆಪಕ್ಕೆ ಗಂಡ ಹೆಂಡಿರ ಮಧ್ಯ ಜಗಳವಾಯಿತು. ಮೀನಾ ಪತ್ರ ಬರೆದಿಟ್ಟು ಮನೆ ಬಿಟ್ಟಳು. ಬಾಳು ಹೋಳಾಯಿತು. ಆಕೆಯ ಸಂಸಾರದ ವಿಘಟನೆಯ ಕಾರಣವನ್ನು ಅಬ್ಬಾಸ್ ದಾಖಲಿಸುತ್ತಾರೆ-“Artists seldom make stable partner. They are quick to fall in love and as unpredictably fall out of it. The heart of an artist is more delicate than the glass of the bottle. When the two clink and clash, there is tragedy.”
  ಈಗ ಆಕೆ ಗುರುದತ್‍ನ ‘ಸಾಹೀಬ್ ಬೀಬಿ ಔರ್ ಗುಲಾಮ’ದಲ್ಲಿ ಛೋಟಿ ಬಹು. ಮತ್ತೆ ಫಿಲಂಫೇರ್ ಪ್ರಶಸ್ತಿ, ಪ್ರಸಿದ್ಧಿಯ ಉತ್ತುಂಗದಲ್ಲಿದ್ದಳು ಮೀನಾ ಕುಮಾರಿ. ಅವಳು ಮದುವೆಯಾಗುವಾಗ ಕಮಲ್ ಅಮರೋಹಿಯ ಪತ್ನಿ ಆದರೆ ಈಗ ಅಮರೋಹಿ ಮೀನಾ ಕುಮಾರಿಯ ಗಂಡ. ವ್ಯಾಕರಣ ಸರಿಯಾಗಿದೆ, ಅರ್ಥ ಭಿನ್ನವಾಗಿದೆ. ಅಹಂಕಾರವಾಗಿದೆ. ಮೃತ್ಯು ಆಗುತ್ತದೆ.
Gulzar

            ಮುಂದೆ ಗುರುದತ್ತರಿಂದ ಪ್ರಾರಂಭವಾಗಿ ಗಂಡುಗಳ ಒಂದು ದೊಡ್ದ ದಂಡೇ ಮೀನಾಕುಮಾರಿ ಎಂಬ ಈ ಪುಟದ ಮೇಲೆ ತಮ್ಮ ಮುದ್ರೆಯೊತ್ತಿ ಒತ್ತಿ ಹೋದರು. ಧರ್ಮೇಂದರ್, ರಾಹುಲ್ ಹೀಗೆ ಹಲವರನ್ನು ಹೆಸರಿಸಬಹುದು. ಈ ದಿನಗಳಲ್ಲಿ ವಿಪರೀತವಾಗಿ ಕುಡಿಯುತ್ತಿದ್ದ ಮೀನಾ ಕುಮಾರಿ ರಾಹುಲ್ ಎಂಬ ಎಳೆಯನೊಂದಿಗೆ ಮದುವೆಯಾಗುವಾಗ `ಆರ್ಯ ಸಮಾಜ’ ದ ರೀತಿಯನ್ನು ಅನುಸರಿಸಿದಳು. ಚಿತ್ರಗಳು, ತೆಕ್ಕೆಯೊಳಗಿನ ಈ ಗಂಡಸರು, ಕುಡಿತ ಬಾಟಲಿಗಳು ಬರಿದಾಗುತ್ತಾ, ಬರಿದಾಗುತ್ತಾ ಹೋದವು. ಆದರೆ ಮೀನಾಕುಮಾರಿಯ ಮನಸ್ಥಿಯಲ್ಲ. ಅದು ಸುರಿಯದ ಮೋಡದಂತೆ ಘನವಾಗಿಯೇ ಇತ್ತು. ಈ ಕಾರಣಕ್ಕಾಗಿಯೇ ಇರಬಹುದೇನೋ, ಮೀನಾಕುಮಾರಿಯ ನಿಧನದ ನಂತರ ಅವಳ ಕಾವ್ಯ ತುಂಬಿದ ಇಪ್ಪತೆಂಟು ದಿನಚರಿಗಳ ವಾರಸುದಾರಿಕೆ ಗುಲ್ಜಾರರಿಗೆ ಹೋಯಿತು. ಈ ಕವಿತೆಗಳು ಮಾತ್ರ ಇವರಿಗೇ ಸೇರಬೇಕೆಂದು ಮೀನಾ ಕುಮಾರಿ ತನ್ನ ಮರಣ  ಪತ್ರದಲ್ಲಿ ಮೀನಾ ಕುಮಾರಿ ದಾಖಲಿಸಿದ್ದಳು. ಅವಳ ಕವಿತೆಗಳನೆಲ್ಲ ಒಂದು ಸಂಕಲನದಲ್ಲಿ ಸೇರಿಸಿ ಪ್ರಕಟಿಸಿದ ಗುಲ್ಜಾರ್ ಈ ಕಾರ್ಯದಲ್ಲಿ ತಾನೇನು, ತನ್ನ ಪಾತ್ರ ಎಷ್ಟು ಎಂಬುದನ್ನು ಬಹಳ ನಮ್ರವಾಗಿ ಹೀಗೆ ದಾಖಲಿಸಿದ್ದಾರೆ-“ಮೈ, ಇಸ್ `ಮೈ' ಸೆ ಬಹುತ್ ಢರತಾ ಹೂಂ.ಶಾಯರಿ ಮೀನಾಜಿ ಕೀ ಹೈ, ತೊ ಫಿರ್ ಮೈ ಕೌನ್? ಮೈ ಕ್ಯೂಂಮೀನಾಜಿ ಕೀ ವಸೀಯತ್ ಮೇಂ ಪಡಾ ಕಿ ಅಪನಿ ರಚನಾವೊಂ, ಅಪನಿ ಡೈರಿಯೊಂ ಕೆ ಸರ್ವಾಧಿಕಾರ್ ಮುಝೆ ದೇ ಗಯಿ ಹೈ. ಹಾಲಾಂಕಿ ಉನ್ ಪರ್ ಅಧಿಕಾರ್ ಉನಕಾ ಭಿ ನಹಿ ಥಾ, ಶಾಯರ್ ಕಾ ಹಕ್ಕ್ ಅಪನಾ ಶೆರ್ ಪರ್ ಸೋಚ್ ಲೇನೆ ತಕ್ ತೊ ಹೈ, ಕಹ ಲೆನೆ ಕೇ ಬಾದ್ ಉಸ್ ಪರ್ ಹಕ್ಕ್ ಲೋಗೊಂ ಕಾ ಹೋ ಜಾತಾ ಹೈ. ಮೀನಾಜಿ ಕೀ ಶಾಯರಿ ಪರ್ ವಾಸ್ತವಿಕ್ ಅಧಿಕಾರ್ ತೊ ಉನಕೆ ಚಾಹನೆವಾಲೊಂ ಕಾ ಹೈ.ಔರ್ ವಹ ಮುಝೆ ಅಪನೆ ಚಾಹನೆವಾಲೊಂ ಕೆ ಅಧಿಕಾರೊಂ ಕಿ ರಕ್ಷಾ ಕಾ ಭಾರ್ ಸೌಂಪ್ ಗಯಿ ಹೈ.”                                                                                                                                                                                -ಗುಲ್ಜಾರ್
     ನಟಿ ಮೀನಾ ಕುಮಾರಿಯನ್ನು ಬೆಳ್ಳಿ ಪರದೆಯ ಮೇಲೆ ನೋಡಿ ಆನಂದಿಸಿರುವ, ಕಣ್ಣೀರುಗರೆದಿರುವ, ಹೊಗಳಿರುವ ಮತ್ತು ಆರಾಧಿಸಿರುವ ನಿಮಗೆ ಆಕೆಯ ಕಾವ್ಯದ ರಸವನ್ನುಣಿಸಬೇಕೆಂಬ ಹಂಬಲ ನನಗೆ. ಹೀಗಾಗಿ ಅಲ್ಲಲ್ಲಿ ಈಕೆಯ ಕುರಿತು ಬರೆಯುತ್ತಾ ನಾನು ಕವಿಯತ್ರಿ ಮೀನಾ ಕುಮಾರಿಯನ್ನೂ ನಿಮ್ಮೆದುರು ನಿಲ್ಲಿಸಿದ್ದೇನೆ. ನಿಮಗಾಗಿ ಅವಳ ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದೇನೆ. ಇಡೀ ಈ ಲೇಖನದ ತುಂಬಾ ಸಾಂದರ್ಭಿಕವಾಗಿ ನನ್ನ ಈ ಭಾಷಾಂತರಗಳನ್ನು ಬಳಸಿಕೊಂಡಿದ್ದೇನೆ. ಅವಳ ಕವಿತೆಯಲ್ಲಿ ನೀವು, ನಿಮ್ಮಲ್ಲಿ ಅವಳು ಇದು ನಿಲ್ಲುವ ಕತೆಯಲ್ಲ ಅಥವಾ ಮುಗಿದುಬಿಡುವ ಕುತೂಹಲವೂ ಅಲ್ಲ. ಮೊಗೆದಷ್ಟೂ ಮಾತನಾಡುತ್ತಾಳೆ ಈ ಮೀನಾ ಕುಮಾರಿ-
 “Chaand tanhaa hai aasmaan tanhaa.
Dil milaa hai kahaan kahaan tanhaa.
Bujh gaii aas chhup gayaa taaraa.
Tharatharaataa rahaa dhuaan tanhaa.
Zindagii kyaa isii ko kahate hain.
Jism tanhaa hai aur jaan tanhaa.
Hamasafar koii gar mile bhii kahiin.
Dono chalate rahe tanhaa tanhaa.
Jalatii bujhatii sii raushanii ke pare
Simataa simataa saa ek makaan tanhaa.
Raah dekhaa karegaa sadiyon tak.
Chhod jaayenge ye jahaan tanhaa”

Dil milaa hai kahaan kahaan tanhaa.
Bujh gaii aas chhup gayaa taaraa.
Tharatharaataa rahaa dhuaan tanhaa.
Zindagii kyaa isii ko kahate hain.
Jism tanhaa hai aur jaan tanhaa.
Hamasafar koii gar mile bhii kahiin.
Dono chalate rahe tanhaa tanhaa.
Jalatii bujhatii sii raushanii ke pare
Simataa simataa saa ek makaan tanhaa.
Raah dekhaa karegaa sadiyon tak.
Chhod jaayenge ye jahaan tanhaa”

“ಸುಮ್ಮನಿದೆ ಆಕಾಶ, ಚಂದಿರನೂ ಸುಮ್ಮನೆ
ಹೃದಯ ಸೇರಿದಡಲೆಲ್ಲ ಬರೀ ಸುಮ್ಮಾನ
    ಸುಮ್ಮನೆ ಸಾಗಿದೆ ನನ್ನ ಹೃದಯದ ಪಯಣ
ದಿನವೇನೋ ಬೆಳಗಿದೆ ಆದರೆ ಆಶೆ ಕೈ ಚೆಲ್ಲಿದೆ
ಹೃದಯ-ಆತ್ಮಗಳು ಸಾಗುತ್ತಿವೆ ಭಿನ್ನವಾಗಿ
ಇದು ಬದುಕೇ?
ಪ್ರಶ್ನಿಸುವ ಮನ ಕಳವಳಗೊಳ್ಳುತ್ತದೆ ಖಿನ್ನವಾಗಿ
ಈ ಪಯಣದಲ್ಲಿ ನನ್ನೊಂದಿಗೆ ಸಖನಿದ್ದರೂ
ನಮ್ಮದು ಕವಲುದಾರಿ
ಮಿಣುಕು ಬೆಳಕಿನ ದೂರದ ಆ ದಡದಲ್ಲಿ
ಮಿತ, ಮೌನದ ಹೃದಯದ ಕನವರಿಕೆಯ ಸಾರಿ
ನಂಬುತ್ತೇನೆ, ನನ್ನ ನಿರ್ಗಮನದ ನಂತರವೂ
ಜನ್ಮಾಂತರಕ್ಕೂ ನನಗಾಗಿಯೇ ಕಾಯುವುದೆಂದು”

                                                                                      -ಮೀನಾ ಕುಮಾರಿ

ಅವಳದೇ ಇನ್ನೊಂದು ಪದ್ಯ ಹೀಗಿದೆ-
ಅಯ್ಯಾ ಯಾತ್ರಿಕನೇ, ಯಾರೋ ನನ್ನ ಮಂಚವ ಸವರಿಹೋಗಿರಬಹುದು
ಇಲ್ಲದಿರೇ  ಈ ಬಿರುಗಾಳಿಯಲಿ  ದೀಪ ಹೊತ್ತಲುಂಟೇ?
                                                                                        -ಮೀನಾ ಕುಮಾರಿ



ಹೀಗೆ ಕವಿತೆ, ತಾನೇ ಒಂದು ಜೀವಂತ ಕವಿತೆಯಾಗಿದ್ದ ಮೀನಾ ಕುಮಾರಿ ಪ್ರೀತಿಯ ಕುರಿತು ಎಷ್ಟೊಂದು ಕವಿತೆಗಳನ್ನು ಬರೆದಳು. ಕವಯತ್ರಿಯಾದಳು. ಉರ್ದು ಕಾವ್ಯವನ್ನು ಹಾಲಿ, ಸಾದ್, ಮಿರ್ಜಾ ಗಾಲಿಬ್, ಉಮರ್ ಖಯ್ಯಾಮ್, ಮಜರೂಂ    ಸುಲ್ತಾನಪುರಿ, ಹೀಗೆ ಒಬ್ಬೊಬ್ಬ ಕವಿಯ ಕಾವ್ಯವನ್ನೂ ಕುಡಿದಳು. ಕವಿತೆಯನ್ನೇ ಕನಸಿದಳು, ಕೊನೆಗೆ ಕವಿತೆಯಂತೆಯೇ ಬದುಕು ಮುಗಿಸಿದಳು. ಹೀಗೆ ಕುಡಿದು, ಕುಡಿದು ಕೊನೆಯುಸಿರೆಳೆದಾಗ ಮೀನಾಕುಮಾರಿಗೆ ವಯಸ್ಸು ಕೇವಲ ನಲವತ್ತು ವರ್ಷ. ಇದು ಬರೀ, ಬರೀ ಮೀನಾ ಕುಮಾರಿ ಎಂಬ ನಟಿಯ ಸಾವಾಗಿದ್ದರೆ ಈ ಸಾವು ಚರ್ಚೆಗೊಳಗಾಗಬೇಕಾಗಿರಲಿಲ್ಲ. ಆದರೆ ಅಬ್ಬಾಸ್ ಹೇಳುತ್ತಾರೆ –“Is the death of many artist and histrionic creations that would have given aesthetic delight and emotional satisfaction to  millions of cinegoers”.

ಬದುಕಿರುವಾಗ ಎಂದೂ ಶಾಂತಿ ಸಿಗದೆ ನರಳಿದ ಮೀನಾ ಕುಮಾರಿ ಈಗ ಈ ಹೃದಯಹೀನ ಜಗತ್ತಿನಿಂದ ಮುಕ್ತಳಾಗಿದ್ದಳು. ಪ್ರಪಂಚ ಅವಳನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿತೇನೊ? ಬದುಕಿರುವಾಗ ಅವಳನ್ನೊಬ್ಬ ಚಿತ್ರನಟಿಯಾಗಿ ಆರಾಧಿಸಿದ ಜಗತ್ತು ಅವಳು ತೀರಿದ ಮೇಲೂ ಓರ್ವ ದುರಂತ ನಾಯಕಿಯಾಗಿ ಕಂಡಿತಷ್ಟೆ. ಆದರೆ ಅಬ್ಬಾಸ್ ನೆನಪಿಸಿಕೊಂಡಂತೆ, ಅವರು ಆಕೆಗಾಗಿ ರಷಿಯಾದಿಂದ ತಂದ ಗೊಂಬೆಯೊಳಗೆ ಹೇಗೆ ಅನೇಕ ಗೊಂಬೆಗಳಿದ್ದವೊ, ಮತ್ತು ಕೊನೆಗೊಂದು ಅತ್ಯಂತ ಸಣ್ಣ ಗೊಂಬೆಯಿತ್ತೊ, ಹಾಗೆಯೆ ಇದ್ದಳು ಮೀನಾ ಕುಮಾರಿ ಎನ್ನುತ್ತಾರೆ. “ಕಲಾವಿದೆ ಮೀನಾ ಕುಮಾರಿಯೊಳಗೊರ್ವ ಕವಯಿತ್ರಿ ಮೀನಾ ಕುಮಾರಿ, ಪ್ರೀತಿಯ ಆರಾಧಕಿ ಮೀನಾ ಕುಮಾರಿ ಅಡಗಿಕೊಂಡಿದ್ದಳು. ದುರ್ದೈವದ ಸಂಗತಿ ಎಂದರೆ ಯಾರು, ಯಾರೂ ಅದನ್ನು ಬಿಚ್ಚಿ ನೋಡುವ ಪ್ರಯತ್ನವನ್ನೇ ಮಾಡಲಿಲ್ಲ. ನಿಜವಾದ ಮೀನಾ ಕುಮಾರಿ ಜಗತ್ತಿಗೆ ಪರಿಚಯವಾಗಲೇ ಇಲ್ಲ” ಎನ್ನುತ್ತಾರೆ ಆಕೆಯ ಪ್ರೀತಿಯ ಗೆಳೆಯ ಅಬ್ಬಾಸ್.
  ಈಗ ಈ ಮೀನಾ ಕುಮಾರಿ ಎಂದ ತಕ್ಷಣ ನನಗೆ ನೆನಪಾಗುವ ಇನ್ನೊಂದು ವಿಷಯ ಹೈದರಾಬಾದಿನ ಮೀನಾ ಬಾಝಾರ್. ನೀವು ಅಲ್ಲಿನ ಲಾಕೆಟ್ ತಾಲಾಬ್‍ಗೆ ಹೊಗದಿದ್ದರೂ ಚಿಂತೆಯಿಲ್ಲ, ಹೈದರಾಬಾದಿಗೆ ಹೋದರೆ ಈ ಮೀನಾಬಾಝಾರನ್ನು ಮಾತ್ರ ಮರೆಯಬೇಡಿ. ಹಾಳು-ಮೂಳು, ಹೊಸ-ಹಳೆಯ, ಬೇಕಾದ-ಬೇಡಾದ ಪುಸ್ತಕಗಳ ಒಂದು ದೊಡ್ಡ ಲೋಕ ಅದು. ಇಲ್ಲಿ ಯಾರೂ ಬಂದು, ಯಾವುದನ್ನೂ ಎತ್ತಿಕೊಂಡು, ತನಗಿಷ್ಟವಾದ ಲೆಕ್ಕಕ್ಕೆ ಕೇಳಿ ಕೊಂಡೊಯ್ಯಬಹುದು. ದಕ್ಕಿದರೆ ನಿಮ್ಮದು, ದಕ್ಕದಿದ್ದರೆ ಇನ್ನೊಬ್ಬರದು. ವಸ್ತು ಬೀಳುವುದಿಲ್ಲ, ಉಳಿಯುವುದಿಲ್ಲ, ಅದು ಉಳಿದಿದ್ದರೆ ಈ ಮೀನಾಬಾಝಾರಿಗೆ ಬರುತ್ತಿರಲಿಲ್ಲ. ಹೀಗಾಗಿತ್ತು ಮೀನಾ ಕುಮಾರಿಯ ಬದುಕು. ಹೆಣ್ಣಿನ ಋತುಚಕ್ರವು ಕ್ಷೀಣಿಸಿ ಮಾತೃಭೂಮಿಕೆ ನಿರ್ಮಾಣವಾಗುವ ಕಾಲಘಟ್ಟದಲ್ಲಿ ಅವಳು ಪ್ರಸಿದ್ಧಿಯ ಉತ್ತುಂಗದಲ್ಲಿದ್ದಳು. ಚಟಗಳ ದಾಸಿಯಾಗಿದ್ದಳು, ಅಳಿದುಳಿದ ಕಾಮದ ಹಸಿವಿಗೆ ಗಂಡನೂ ದಕ್ಕಿರಲಿಲ್ಲ. ಕೆಲವರು ಬರೆಯುವಂತೆ-“She was a woman- an extraordinarily passionate woman. Many names are fancied around her. They need no memorial.”
 ‘ಪಾಕೀಜಾ’ ಆಕೆಯ ಕೊನೆಯ ಅದ್ಬುತ ಚಿತ್ರ. ಪ್ರಾರಂಭವಾದುದು 1961 ರಲ್ಲಿ. ನಿರಂತರ ಹತ್ತು ವರ್ಷಗಳವರೆಗೆ ಈ ಚಿತ್ರ ನಿರ್ಮಾಣವಾಯಿತು. ಅಂದರೆ ‘ಪಾಕೀಜಾ’ ಮುಗಿದಿದ್ದು 1971ರಲ್ಲಿ. ಚಿತ್ರದ ನಿರ್ದೇಶಕ ಕಮಲ್ ಅಮ್ರೋಹಿ. ಈಗ ಆಕೆಯ ಗಂಡನಲ್ಲದಿರಬಹುದು, ಅದರೆ ಆತನೊಬ್ಬ ದೃಷ್ಟಾರ. ತನ್ನ ಉದ್ದೇಶವನ್ನು ಸಾಧಿಸದೇ ಯಾವುದನ್ನೂ ಸುಮ್ಮನೆ ಬಿಡುವವನಲ್ಲ. ಮೌಲ್ಯದ ಲೆಕ್ಕಾಚಾರದಲ್ಲಿ, ಸಹನೆಯ ಸಂದೇಶದಲ್ಲಿ ಇಲ್ಲೆಲ್ಲೊ ಕಮಲ್ ಅಮ್ರೋಹಿ ಮೀನಾ ಕುಮಾರಿಯನ್ನು ಮರೆಸಿಬಿಡುತ್ತಾನೆ. ತನ್ನೆಲ್ಲಾ ತಲ್ಲಣಗಳನ್ನು ಬದಿಗಿಟ್ಟು, ಮಜಹಬೀನಳಲ್ಲಿ ಹುದುಗಿದ ಮೀನಾ ಕುಮಾರಿಯನ್ನು ಸಶಕ್ತವಾಗಿ ಈ ಚಿತ್ರದ ಮೂಲಕ ಹೊರಗೆ ತಂದವನು ಅವನು. 1972ರಲ್ಲಿ ಮೀನಾ ಸಾಯುತ್ತಾಳೆ. ಚಿತ್ರದ ಯಾವ ಯಶಸ್ಸಿನ ಘಳಿಗೆಯನ್ನೂ ಅನುಭವಿಸದ ಲೋಕಕ್ಕೆ ಅವಳು ಹೋಗಿಬಿಟ್ಟಿದ್ದಾಳೆ. ಆಕೆಯ ಕೋಟ್ಯಂತರ ಅಭಿಮಾನಿಗಳ ತಿಂಗಳುಗಳವರೆಗಿನ ಅವಧಿ ‘ಪಾಕೀಜಾ’ಗಾಗಿ ಬಂದು ಟಿಕೆಟ್ ಪಡೆಯುವಲ್ಲಿ ಕಳೆದುಹೋಗಿದೆ. ಖ್ವಾಜಾ ಅಹಮ್ಮದ್ ಅಬ್ಬಾಸ, ಬನ್ನಿರೂಬೇನ್, ದೀಲಿಪ್‍ಕುಮಾರ್(Deelip Kumar), ರಾಜ್‍ಕಪೂರ(Raj Kapoor), ನರ್ಗೀಸ್(Nargis) ಹೀಗೆ ಯಾರೆಲ್ಲರೂ ಆಕೆಯನ್ನು ಕುರಿತು ಮಾತಾಡಿದ್ದಾರೆ. ಆಕೆಯ ಸಾವಿಗಾಗಿ ರೋಧಿಸಿದ್ದಾರೆ. ಆದರೆ ಪ್ರಪಂಚ ಮಾತ್ರ ಕಮಲ್ ಅಮ್ರೋಹಿ ಏನು ಹೇಳುತ್ತಾನೆ ಎಂದು ಕಾಯುತ್ತಿದೆ. ನೀವು ಕಲ್ಪಿಸಲೂ ಸಾಧ್ಯವಿಲ್ಲ, ದೃಷ್ಟಾರನಲ್ಲದ ಯಾವ ಗಂಡನೂ ತನ್ನ ಹೆಂಡತಿಯ ಅವಸಾನದ ನಂತರ ಈ ಸಾಲುಗಳನ್ನು ಬರೆಯಲು ಸಾಧ್ಯವಿಲ್ಲ. ಆತ ಬರೆದಿದ್ದಾನೆ-“A notch girl is born to other, such is her destiny. For her to fall in love, was forbidden. It was a sin, she was told. But she preferred to die a thousand deaths than to live as a body without a soul. And yet when she restless soul, could not suppress this surging desire to love and be loved, she took birth as Kamal Amrohi’s ‘ Pakeeza’.
ಅಮ್ರೋಹಿಯ ಈ ಸಾಲುಗಳಿಂದ ನಿಮ್ಮ ಕಣ್ಣುಗಳು ಒದ್ದೆಯಾಗಿ, ಆಕೆಗೊಂದು ಸಾಂಪ್ರದಾಯಿಕ ಅಶ್ರ್ರುತರ್ಪಣವಾಗಿ, ಆಕೆಯ ಬಗೆಗಿನ ಒಂದು ಕುತೂಹಲದ ಯಾತ್ರೆ ಮುಗಿಯಿತೇನೋ. ನನ್ನ ಕಥೆ ಹಾಗಿಲ್ಲ. ಎಪ್ಪತ್ತು ಚಿತ್ರಗಳಲ್ಲಿ ಕಳೆದುಹೋದ ಮೀನಾ ಕುಮಾರಿಯೊಳಗಿದ್ದ ಮಜಹಬೀನಳ ಕವಿತೆಗಳಿಗಾಗಿ ನಾನು ಈಗಲೂ ತಡಕಾಡುತ್ತಿದ್ದೇನೆ. ಆಕೆಯನ್ನು ರೂಪಿಸಿದ ಪಂಜಾಬಿನಲ್ಲಿ ಸುತ್ತಾಡಿಯೂ ಅವಳ ಊರನ್ನೇ ನೋಡಲಿಲ್ಲ ಎಂದು ಮರುಗುತ್ತೇನೆ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಆಕೆಯ ಬಗೆಗೆ ಸಾಕಷ್ಟು ಮಾಹಿತಿ ಇದೆ ಎಂದು ಕೇಳಿಯೇ ರೋಮಾಂಚಿತಗೊಳ್ಳುತ್ತೇನೆ. ಲಕ್ನೌದ ಗೆಳೆಯ ಜುಬೈರ್ ಹರುಕು ಮುರುಕಾಗಿ ಆಕೆಯ ಶಾಯರಿಗಳನ್ನು ಹೇಳುವಾಗ ನನ್ನೊಳಗೆ ಒಂದು ಮಶಾಯಿರಾದ ಲೋಕ ಕಟ್ಟಿಕೊಳ್ಳುತ್ತೇನೆ. ಕುಡಿದು, ಬೋರಲಾಗಿಟ್ಟ ಪ್ಯಾಲಾದಲ್ಲಿ ಮೀನಾ ಕುಮಾರಿಯ ಬದುಕನ್ನು ಮತ್ತೆ ಮತ್ತೆ ನೆನಪಿಸಿಕೊಂಡೇ ಮೌನವಾಗುತ್ತೇನೆ. ಎಲ್ಲ ನುಡಿದು, ಎಲ್ಲ ಕುಡಿದೂ ಮೀನಾ ಕುಮಾರಿ ಹೇಳುವುದೇನು? ಎಂದು ಪ್ರಶ್ನಿಸಿಕೊಂಡರೆ ನೆನಪಾಗುವುದು ಅವಳದೇ ಪದ್ಯ-

“Aagaaz to hotaa hai anjaam nahiin hotaa.
Jab merii kahaanii mein vo naam nahiin hotaa.
Jab zulf kii kaalik mein ghul jaaye koii rahii.
Badanaam sahii lekin gumanaam nahiin hotaa.
Hans hans ke javaan dil ke ham kyon na chune tukare.
Har shakhs kii qismat men inaam nahiin hotaa”

 “ಗಂತವ್ಯವಿಲ್ಲದೆ, ಅಂತ್ಯವಿಲ್ಲದೆ ಶುರುವಾಗುತ್ತದೆ
 ಕಥೆ ಆತನ ಹೆಸರಿಲ್ಲದೆ
ದಾರಿಹೋಕನೊಂದಿಗೆ ಪ್ರೀತಿ ಧಾರೆಯಾಗಿಸಿದಾಗ
ದಾರಿ ತಪ್ಪಿದವಳೇನೋ ಆಗುತ್ತೇನೆ, ದಿಕ್ಕೆಟ್ಟವಳಾಗುವುದಿಲ್ಲ
ಪ್ರೀತಿಗೊಂದು ಪಾರಿತೋಷಕ ಇಲ್ಲಾ ಎಂದಾಗ
ಚೂರಾದ ಹೃದಯದ ತುಣುಕುಗಳಲ್ಲಿ
ಮೂಡಿದ ಮುಗುಳ್ನಗೆಯ ನಾನೇಕೇ ಕಲೆಹಾಕಬಾರದು?”
                                                                                         -ಮೀನಾ ಕುಮಾರಿ