Sunday 28 April 2013

ಸಾವೇ ನೀ ಗೆಲ್ಲಲಿಲ್ಲ?!




“Oh! lightly, lightly tread!
 A holy thing is sleep,
on the worm spirit shed
And eyes that wake to weep.’’
                                      - Mrs Hemans

ಕವಿ ಇ. ಬಿ. ಬ್ರೌನಿಂಗ್ ಬರೆದ ಪದ್ಯವೊಂದನ್ನೂ ನಾನು ಬಹಳ ಹಿಂದೆ ಕನ್ನಡಿಸಿದ್ದೆ. ಪ್ರಿಯ ಗೆಳತಿಯನ್ನು ಮುಂದೆ ಕೂಡ್ರಿಸಿಕೊಂಡು, ಕಣ್ಣಲ್ಲಿ ಕಣ್ಣಿಟ್ಟು, ತನ್ನ ಬಿಸಿಯುಸಿರ ಆಕೆಯ ಕೆನ್ನೆ ತಾಗಿಸುತ್ತ, ಆಕೆಯ ಕಿವಿಗಳಲ್ಲಿ ಪಿಸುಗುಡುತ್ತಾನೆ-
ನಾ ಹೇಗೆ ಪ್ರೀತಿಸಲಿ ನಿನ್ನ
ಎಣಿಸಬಿಡು ದಾರಿಗಳ ಚಿನ್ನ............
ನಾ ನಿನ್ನ ಪ್ರೀತಿಸುವೆ
ನನ್ನ ಮುಪ್ಪಿನ ಅಳಲು, ಬಾಲ್ಯದ ಬಳಲು
ಯೌವ್ವನದ ಹುಚ್ಚು ಕನಸುಗಳೊಂದಿಗೆ,
ನಾ ನಿನ್ನ ಪ್ರೀತಿಸುವ ಪ್ರೀತಿಯೊಂದಿಗೆ
ಬಿಡುವ ನನ್ನ ಆತ್ಮದ ಕೊನೆಯುಸಿರಿನೊಂದಿಗೆ
ನಾ ನಿನ್ನ ಪ್ರೀತಿಸುವೆ ಸಾವಿನಾಚೆಯೂ ಚಿನ್ನ
ಬದುಕಲ್ಲಿ ಪ್ರೀತಿಸಿದಕ್ಕಿಂತ ನಿನ್ನ.............
K A Abbas
ಈ ಮೇಲಿನ ಪದ್ಯ ಓದಿದಂತೆ, Earnest Hemingway  ಯ Farewell to Arms ಕಾದಂಬರಿ ಹಾಗೂ ಅದರೊಳಗಿನ ನಾಯಕ ಮತ್ತು ನಾಯಕಿಯ ಅನನ್ಯ ಪ್ರೀತಿಯ ಕುರಿತು ಓದಿದಾಗಲೆಲ್ಲ ನನಗೆ ನೆನಪಾದುದು ಅಬ್ಬಾಸರ ದಾಂಪತ್ಯದ ಪುಟಗಳು. ಈ ಫಕೀರ ಬೆಳ್ಳಿ ಪರದೆಯ ಮೇಲೆ ಬೆಳಕು ಹೊತ್ತಿಸುವಂತೆ ಮಾಡಿದವಳೆ ಅವರ ಪ್ರೀತಿಯ ಪತ್ನಿ ಮುಜ್ಜಿ, ಅಲಿಯಾಸ್ ಮುಜತಾಬಾಯಿ ಖಾತೂನ್. ಮುಜ್ಜಿಯ ಬಗೆಗೆ ಬರೆಯದೇ ಹೋದಲ್ಲಿ ಅಬ್ಬಾಸರ ಸಿನಿಮಾ ಗಾಥೆ ಅಪೂರ್ಣ ಎನ್ನಿಸಿದೆ ನನಗೆ. ಯಾಕೆಂದರೆ ಈ ಮುಜ್ಜಿಯೇ ಅಬ್ಬಾಸರಿಗೆ “ಡಾಕ್ಟರ್ ಕೊಟ್ನಿಸ್ ಕಿ ಅಮರ್ ಕಹಾನಿ” ಚಿತ್ರಕ್ಕೆ ಕಥೆ ಆಯ್ದುಕೊಟ್ಟವಳು.
Dr.Kotnis ki amar Kahani

 ಅಬ್ಬಾಸ್ ಬಹುಪಾಲು ಚಿತ್ರಗಳ ಚಿತ್ರೀಕರಣ ಸಂದರ್ಭದಲ್ಲಿ ಸೆಟ್ ಮೇಲಿನ ಕಲಾವಿದರಿಗೆಲ್ಲ ಊಟ ಬಡಿಸಿ ಅನ್ನಪೂರ್ಣೆಯಾದವಳು. “ನೀವೆಂದಿಗೂ ಸ್ಟಾರ್‌ಗಳನ್ನು ಹಾಕಿಕೊಂಡು ಸಿನಿಮಾ ಮಾಡಬಾರದು, ಬದಲಾಗಿ ನಿಮ್ಮಿಂದ ಸ್ಟಾರ್‌ಗಳು ಹುಟ್ಟಬೇಕು” ಎಂದು ಅಬ್ಬಾಸರನ್ನೇ ನಿರ್ದೇಶಿಸಿದವಳು ಈ ಮುಜ್ಜಿ. ಈಕೆ ದಾಸಿಯಾಗಿ ಬಂದಳು. ದಾಸಿಯಂತೆಯೇ ಬದುಕಿದಳು ಆದರೂ ಅಬ್ಬಾಸರ ಜೀವನ ಪುಟಗಳಲ್ಲಿ ಮಾತ್ರ ದೇವತೆಯಂತೆ, ತಾಯಿಯಂತೆ, ಕತ್ತಲಲ್ಲಿ ದಾರಿ ತೋರಿದ ಬೆಳಕಿನಂತೆ ಚಿತ್ರಿಸಲ್ಪಟ್ಟ್ಟಿದ್ದಾಳೆ.ಹಾಗಂತ ಇವಳೇನು ಬಹಳ ದೊಡ್ಡ ಹಿನ್ನೆಲೆಯಿಂದ ಬಂದವಳು ಎಂದುಕೊಳ್ಳಬೇಡಿ. ಆಕೆಯ ಹಿನ್ನಲೆ ಮಾನವ ಮೌಲ್ಯಗಳ ಓದಿನ ಸಹನೆಯ ಸಂಸ್ಕಾರವಷ್ಟೆ. ಸಾಧಾರಣ ಸುಂದರಿ, ಅತೀ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಬಂದಿತ್ತು. ಈಕೆಯ ಅಕ್ಕನನ್ನು ನೋಡಿ ಹುಚ್ಚರಾಗಿದ್ದ ಅಬ್ಬಾಸ ಅವಳನ್ನು ಮದುವೆಯಾಗಬೇಕು ಅಂದುಕೊಂಡವರು. ಅವಳ ಮದುವೆಯಾಯಿತು ಎಂದು ಕೇಳಿದಾಗ ಅಬ್ಬಾಸ್ ಒಳಗೊಳಗೇ ಕಣ್ಣೀರು ಸುರಿಸಿದ್ದರು. ಮುಜ್ಜಿಯ ತಂದೆ ಪೋಲೀಸ್ ಅಧಿಕಾರಿ. ಆದರೆ ಹೆಸರಿಗಷ್ಟೆ. ನಡು ಯೌವ್ವನದಲ್ಲಿಯೇ ಈ ಎರಡು ಹೆಣ್ಣು ಮಕ್ಕಳ ಜನನದ ನಂತರ ಹೆಂಡತಿಯನ್ನು ಕಳೆದುಕೊಂಡು ವಿಧುರನಾದ ಈ ಮನುಷ್ಯ ಸದಾ ಸೂಫಿ ಹಾಗೂ ಹಿಂದೂ ಯೋಗಿಗಳ ಸಂಪರ್ಕದಲ್ಲಿದ್ದ. ಇಡೀ ಬದುಕನ್ನು ಯೋಗ ರಹಸ್ಯವನ್ನು ಅರಿಯುವಲ್ಲಿ ಕಳೆದುಬಿಟ್ಟ.
ಸೇವೆ ಮುಜತಾಬಾಯಿಯ ಭಾಷೆಯಾಗಿತ್ತು. ಈ ಸೇವೆಯ ಅಬ್ಬಾಸರು ಈಕೆಯತ್ತ ಆಕರ್ಷಣೆಗೊಳ್ಳಲು ಕಾರಣವಾಗಿತ್ತು. ಅಬ್ಬಾಸರ ತಂದೆ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಾಗ ಸೇವೆ ಮಾಡಿ ಮೌನ ಕ್ರಾಂತಿಯನ್ನೇ ಮಾಡಿದಳು. ಈಗಷ್ಟೇ ಆಕೆ ಅಲಿಘರ್ ಗರ್ಲ್ಸ್ ಕಾಲೇಜಿನ ಪಿ.ಯು.ಸಿ.ಯ ಷೋಡಶಿ ಈಕೆಯೊಂದಿಗೆ ಮದುವೆಯಾದಾಗ ಅಬ್ಬಾಸರಿಗೆ ೨೮ ವರ್ಷ. ಮುಜ್ಜಿಗೆ ೧೮ ವರ್ಷಗಳಷ್ಟೆ. ಮುಜ್ಜಿ ಅಲೀಘರ್ ವಿಶ್ವವಿದ್ಯಾಲಯದಿಂದ ಬಿ.ಎ. ಪಡೆದ ಪ್ರಗತಿಶೀಲ ಮುಸ್ಲಿಂ ಮಹಿಳೆ. ಆಗಲೇ ಹೇಳಿದೆನಲ್ಲ ಮುಜ್ಜಿ ಶ್ವೇತ ಸುಂದರಿಯಾಗಿರಲಿಲ್ಲ. ಸದಾ ಕನ್ನಡಕ, ಕೈ ಮೇಲೊಂದು ಕಪ್ಪು ಕಲೆ, ಕೃಷದೇಹ. ಆದರೆ ಶಿಕ್ಷಣವೇ ಅವಳ ಸೌಂದರ್ಯವಾಗಿತ್ತು. ಇಂಥ ಹುಡುಗಿಗೆ ಅಬ್ಬಾಸ್ ಮದುವೆಗೂ ಮುಂಚೆ ಪತ್ರ ಬರೆದು ಹೀಗೆ ಹೇಳಿದ್ದರು- “ಆದಾಗ್ಯೂ ನಾನು ನಿನ್ನನ್ನು ಈ ಬದುಕಿನಲ್ಲಿ ನನ್ನ ಸಾಹಸಗಳ, ಸೋಲು-ಗೆಲುವುಗಳ, ಸುಖ-ದುಃಖಗಳ ಸಂಗಾತಿಯಾಗಿ ಬರುವಿಯಾದರೆ ಬಂದುಬಿಡು ಎಂದು ಆಮಂತ್ರಿಸುತ್ತೇನೆ” ಎಂದು ಬರೆದಿದ್ದರು. ವಾರದ ನಂತರ ಉತ್ತರ ಬಂದಿತು- “ಒಪ್ಪಿದ್ದೇನೆ, ಇದೇ ತಾನೆ ಜೀವನ, ಇದೇ ಇದೇ ಅಲ್ಲವೆ ನಾನು ಬಯಸಿದ್ದು. ಆದರೆ ನಾನು ಸ್ವಾವಲಂಭಿ ಹಾಗೂ ಸಮಾನಳಾಗಿರಬೇಕೆಂಬ ನನ್ನ ಹಕ್ಕನ್ನು ನಾನು ಪ್ರತಿಪಾದಿಸುತ್ತೇನೆ” ಎಂದು ಬರೆದಳು. ಮದುವೆಯಾಗಿ ಮುಜ್ಜಿ ದೆಹಲಿಯಿಂದ ಬೊಂಬಾಯಿಗೆಬರುತ್ತ ಟ್ರೇನಿನಲ್ಲಿ ಬುರ್ಖಾ ಕಿತ್ತಿಸೆದವಳು ಇನ್ನೆಂದೂ ತೊಡಲಿಲ್ಲ. ಬೊಂಬಾಯಿಯ ವಿಕ್ಟೋರಿಯಾ ಗಾರ್ಡನ್ ಬಳಿಯ ಅಬ್ಬಾಸರು ಆನಂತರ ಎಂಬತ್ತು ರೂಪಾಯಿಯ ಬಾಡಿಗೆ ನೀಡಿ ಶಿವಾಜಿ ಪಾರ್ಕ್ ಬಳಿ ದೊಡ್ಡಮನೆ ಮಾಡಿದರು. ಬಾಡಿಗೆ ಬಹಳವಾಯಿತು ಎಂದು ಅಬ್ಬಾಸ್ ಚಿಂತಿತರಾದಾಗ ಮುಸಿನಕ್ಕು ಮುಜ್ಜಿ ಹೇಳಿದರು “ನಾನಿದ್ದೇನೆ, ಸಾಧ್ಯವಾದರೆ ಯಾವುದಾದರೂ ನೌಕರಿ ಮಾಡುತ್ತೇನೆ, ಚಿಂತೆ ಮಾತ್ರ ಬೇಡ” ಎಂದಳು. ಈಗ ಅಬ್ಬಾಸ್ Indian Peoples  Theatre Association ಗಾಗಿ “ಜುಬೈದಾ” ನಾಟಕ ಬರೆಯುತ್ತಿದ್ದರು. ಪದೇ ಪದೇ ಚಹ ಕುಡಿದರೆ ಪಿತ್ತವಾದೀತು ಎಂದು ಮುಜ್ಜಿ ಲೆಮನ್ ಚಹಾದ ಮಗ್ಗ್ ಹಿಡಿದುಕೊಂಡೇ ಕುಳಿತಿರುತ್ತಿದ್ದರು.
ಹೀಗಿತ್ತು ಅಬ್ಬಾಸರ ಸಂಸಾರ. ಅವರಿಗೆ ಮಕ್ಕಳಾಗಿರಲಿಲ್ಲ. ಆದರೆ ಅವರಂತೆ ಉದ್ಯೋಗ ಅರಸುತ್ತ ಬಂದ ದೇವಾನಂದ, ಇಂದರ್ ರಾಜ್ ಆನಂದ ಹಾಗೂ ಇತರರಿಗೆ ಅದೇ ಮನೆಯಲ್ಲಿ ಇಟ್ಟುಕೊಂಡು ಬೆಳೆಸು ಭಾಗ್ಯ ಮುಜ್ಜಿಯ ಹಣೆಬರಹದಲ್ಲಿ ಇತ್ತಲ್ಲ. ಹೀಗೆ ಮುಜ್ಜಿ ಎಂದರೆ ಪ್ರೀತಿ, ಸಾಯಂಕಾಲದ ವಾಯು ವಿಹಾರ, ಸಿನಿಮಾ, ಮಾತು ಮತ್ತು ಕಾಡುವ ಮೌನ, ಸುಮ್ಮಾನ.
K A Abbas- Pardesi

ಅಬ್ಬಾಸರ “ಪರದೇಶಿ” ಮುಗಿಯುವುದರೊಳಗಾಗಿ ಮುಜ್ಜಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯೊಂದು ಉಲ್ಭಣಿಸಿತು. ಹೀಗಾಗಿ ಅಬ್ಬಾಸ್ ಆಕೆಯ ಆರೈಕೆ ಮಾಡುತ್ತ ನಾಲ್ಕು ತಿಂಗಳು ಮಾಸ್ಕೋದಲ್ಲಿ ಉಳಿಯಬೇಕಾಗಿದ್ದರೂ ಅವಳೊಬ್ಬಳನ್ನೇ ಬಿಟ್ಟು ಭಾರತಕ್ಕೆ ಬಂದರು. ಪ್ರತಿಕ್ಷಣವೂ ವಿರಹದ ದೀರ್ಘ ಪ್ರವಾಸ. ನಾಲ್ಕು ತಿಂಗಳ ನಂತರ ಅವಳಿಗಾಗಿ ಕಾಯುತ್ತ ಗಾಲಿ ಖುರ್ಚಿಯನ್ನು ಹಿಡಿದುಕೊಂಡು ಅಬ್ಬಾಸ್ ಬಾಂಬೆ ಏರ್‌ಪೋರ್ಟ್‌ನಲ್ಲಿ ನಿಂತರು. ಮುಜ್ಜಿ ಬಂದಳು. ಆದರೆ ಪ್ರೇತಕಳೆ ಆಗಲೇ ಆಕೆಯ ಮುಖವನ್ನು ಆವರಿಸಿತ್ತು. ಜೋರಾಗಿ ನಗಲು ಯತ್ನಿಸಿದಳು. ಆದರೆ ಅಬ್ಬಾಸ್‌ರನ್ನು ತಬ್ಬಿ ಮೌನವಾದಳು. ಅಬ್ಬಾಸ್ ಮಾತ್ರ ಕಣ್ಣೀರ ಹೊಳೆಯಲ್ಲಿ ಕೈ ತಪ್ಪಿದ ಕೂಸಾದರು. ಮುಜ್ಜಿ ಅಬ್ಬಾಸ್‌ರನ್ನು ಸಮಾಧಾನಿಸುತ್ತ, ಗಾಲಿಖುರ್ಚಿಯನ್ನು ಧಿಕ್ಕರಿಸಿ ನಡೆಯುತ್ತ ಹೊರಬಂದರು.ಮುಜ್ಜಿಯ ಹೃದಯಕ್ಕೆ ರಕ್ತ ಪೂರೈಸುವ ಒಂದು ಮುಖ್ಯ ರಕ್ತನಾಳ ದಿನೆ ದಿನೆ ಸಂಕುಚಿತವಾಗುತ್ತ ಹೊರಟಿತ್ತು. ಸರಿಯಾಗಿ ರಕ್ತ ಸಂಚಲನವಾಗದೆ ಮುಜ್ಜಿ ದಿನೇ ದಿನೇ ಕರಗಿದ ಹಿಮಗಡ್ಡೆಯಾಗಲಾರಂಭಿಸಿದ್ದಳು. ಮಾತೂ ಬೇಸರವಾಗಲಾರಂಭಿಸಿತ್ತು ಆಕೆಗೆ. ಈಗ ಆಕೆಯ ವಯಸ್ಸು ಮೂವತ್ತೈದರ ಆಸುಪಾಸು ಅಷ್ಟೆ. ಮುಜ್ಜಿ ಪ್ರಯಾಸದೊಂದಿಗೆ ಮಾತಿಗಿಳಿದರು-
K A Abbas- Char dil Char Rahen
ಅಬ್ಬಾಸ್ ಸಾಹೇಬ, ನಾನಿಲ್ಲದ ಈ ನಾಲ್ಕು ತಿಂಗಳಲ್ಲಿ ಏನು ಮಾಡಿದಿರಿ?ಚಾರ್‌ದಿಲ್ ಚಾರ್ ರಾಹೇಂ ಕಾದಂಬರಿ ಬರೆದಿದ್ದೇನೆ”
ಹಾಗಿದ್ದರೆ ಅದನ್ನು ನೀವು ಇಲ್ಲಿ ನನಗೆ ಓದಲು ಕೊಟ್ಟು ಹೊರಗೆ ಹೋಗುವಿರಾ?ಅಂಥ ಸ್ಥಿತಿಯನ್ನು ಆಕೆ ೨೦೦ ಪುಟಗಳ ಆ ಕಾದಂಬರಿಯನ್ನು ಸಾಯಂಕಾಲವಾಗುತ್ತಲೇ ಓದಿ ಮುಗಿಸಿ, ಮೀನಾಕುಮಾರಿಯನ್ನು ಮುಖ್ಯ ಭೂಮಿಕೆಯಲ್ಲಿಟ್ಟು ಸಿನಿಮಾ ಮಾಡಲು ಸೂಚಿಸುತ್ತಾಳೆ. ಹೀಗೆ ಶಿಮ್ಮಿ, ಮೀನಾ, ರಾಜ್‌ಕಪೂರ್, ಕುಂಕುಂ ಹಾಗೂ ಅನ್ವರ್ ಹುಸೇನ್‌ರನ್ನು ಒಳಗೊಂಡ ಚಿತ್ರದ ಶೂಟಿಂಗ್ ಪ್ರಾರಂಭವಾಗುತ್ತದೆ. ಇತ್ತ ಮುಜ್ಜಿಯ ದೇಹ ಕಿದ್ವಾಯಿ ಆಸ್ಪತ್ರೆಯಿಂದ ಬಾಳಿಗಾ ಆಸ್ಪತ್ರೆ, ಕೊನೆಗೆ ಬಾಳಿಗಾ ದಿಂದ ಕೆಮ್ಮ ನಿರಂತರವಾಗಿ ಎತ್ತೊಯ್ಯಲ್ಪಡುತ್ತಿರುತ್ತದೆ.
 ಚಿತ್ರದ ಕೊನೆಯ ಭಾಗ. ರಾಜಕಪೂರ್ ಎತ್ತಿನ ಬಂಡಿಯಲ್ಲಿ ಹಾಡುತ್ತ ಸಾಗುವ ಒಂದು ದೃಶ್ಯ. ಈಗ ಷೂಟಿಂಗ್ ಬಾಂಬೆಯಿಂದ ಎಪ್ಪತ್ತು ಕಿಲೋಮೀಟರ್ ದೂರದ ಇಗತಾಪುರಿ ಎಂಬ ಹಳ್ಳಿಯಲ್ಲಿ. ಮುಜ್ಜಿ ಕೆಮ್ಮ ಆಸ್ಪತ್ರೆಯಲ್ಲಿ. ಅಬ್ಬಾಸ್ ನಿತ್ಯವೂ ಷೂಟಿಂಗ್ ಸ್ಪಾಟ್‌ದಿಂದ ಬಂದು ಮುಜ್ಜಿಗೆ ವರದಿ ಒಪ್ಪಿಸಬೇಕು. ಇಂದರ್ ಹಾಗೂ ಟೀನೂ ಆನಂದ, ಶ್ಯಾಂ ಹಾಗೂ ವ್ಹಿ. ಪಿ. ಸಾಠೆ ದಿನಾಲು ಆಕೆಯೊಂದಿಗೆ ಮಾತಾಡಲೇಬೇಕು. ಇದು ಒತ್ತಾಯವಲ್ಲ ಅನುರೋಧ. ಅಬ್ಬಾಸ್ ಪ್ರತಿ ಸಾಯಂಕಾಲವೂ ಹೇಳಬೇಕು- ನೀನು ಮಗುವಂತೆ ಮಲಗು”
ಮುಜ್ಜಿ ಹೇಳುತ್ತಾಳೆ-”ಅದೆಲ್ಲ ಅಬ್ಬಾಸ್ ಸಾಹೇಬ ಇಲ್ಲದಾಗ, ನಾನೀಗ ನಿಮ್ಮ ಹೆಂಡತಿ”ಬೊಂಬಾಯಿಯ ಕೆಮ್ ಆಸ್ಪತ್ರೆಯ ಡಾ||ಸೆನ್ ಮುಜ್ಜಿಯ ಆಪರೇಶನ್‌ಗೆ ಒಪ್ಪಿಕೊಂಡರು. ಇಂದರ್ ರಾಜ್ ಆನಂದ, ರಾಜಕಪೂರ್, ಮೀನಾಕುಮಾರಿ ಆರ್ಥಿಕ  ಸಹಾಯ ಮಾಡಿದರು. ಆಪರೇಶನ್‌ದ ದಿನ ಮುಜ್ಜಿಗೆ ಒಂದೇ ಒಂದು ಆಸೆ. ಆಕೆಯ ಪ್ರೀತಿಯ ಲೇಖಕ ರೋಮಾನ್ ರೋಲಾಂನ “ಜೀನ್ ಕ್ರಿಸ್ಟೋಪ್” ಕೃತಿ ಹಾಗೂ ಸ್ವಯಂ ಅಬ್ಬಾಸರ “ಔಟ್‌ಸೈಡ್‌ಇಂಡಿಯಾ” ಕೃತಿಗಳು ತನ್ನೊಂದಿಗಿರಬೇಕು ಎಂದು. ಆದರೆ ಕೃಶವಾದ ಮುಜ್ಜಿ ಸಾವಿರಾರು ಪುಟಗಳ “ಜೀನ್ ಕ್ರಿಸ್ಟೋಪ್” ಎತ್ತಿ ಓದುವುದು ಹೇಗೆ? ಅಬ್ಬಾಸ್ ಅದನ್ನು ಹರಿದು ಹತ್ತು ಚಿಕ್ಕ ಚಿಕ್ಕ ಪುಸ್ತಕಗಳಾಗಿ ಕಟ್ಟಿಸಿ ತಂದರು. ಬಂಧುಮಿತ್ರರು ಚಿತ್ರರಂಗದ ದಿಗ್ಗಜರು ಬರುವುದು ಹೋಗುವುದು ನಿರಂತರವಾಗಿತ್ತು. ಮುಜ್ಜಿ ಮನ ಮುರಿದ ಅಬ್ಬಾಸರನ್ನು ಮಾತಿಗೆಳೆದಳು-ಅಬ್ಬಾಸ್ ಸಾಹೇಬ, ಅಂತಿಮವಾಗಿ ನನಗೀ ಪುಸ್ತಕಗಳು ಓದಬೇಕಿದೆ. ನಿಮಗೂ ಗೊತ್ತಿರುವಂತೆ ಅನಂತರದ್ದು ದೀರ್ಘ, ಬಹುದೀರ್ಘ ಪ್ರಯಾಣ ಅಲ್ವೆ?ಅಬ್ಬಾಸ್ ಹೇಳಿದರು- ಪರೇಲದಲ್ಲಿಯ ನಮ್ಮ ಈ ಆಸ್ಪತ್ರೆಗೂ, ಜುಹೂದೊಳಗಿನ ನಮ್ಮ ಮನೆಗೂ ಹತ್ತೇ ಕಿಲೋಮೀಟರ್‌ಗಳ ದಾರಿ. ಇದರಲ್ಲಿ ದೀರ್ಘ ಏನು ಬಂತು?ಆಕೆ ಮುಗುಳ್ನಕ್ಕು ಇಷ್ಟೇ ಹೇಳಿದಳು"You know what I mean" ಅಬ್ಬಾಸ್ ಕಕ್ಕಬೇಕಿದ್ದ ಕಣ್ಣಿರಿಗೆ ಕರವಸ್ತ್ರದ ಸಹಾಯ ನೀಡಿದರು.
ಅತ್ಯಂತ ಸೂಕ್ಷ್ಮವಾಗಿದ್ದರೂ ಕೂಡಾ ಆಪರೇಷನ್ ಯಶಸ್ವಿಯಾಯಿತು. ಈ ಮಧ್ಯೆ ತಾನು ಆಪರೇಶನ್ ಬೆಡ್ ಮೇಲಿರುವಾಗ ತನಗಾಗಿ ಒಂದು ಪತ್ರ ಬರೆದುಕೊಂಡು ಬರಲು ಮುಜ್ಜಿ ಅಬ್ಬಾಸರಿಗೆ ಅನುರೋಧಿಸಿದ್ದಳು. ಬದುಕುಳಿದರೆ ಮೊದಲಿಗೆ ಅದನ್ನೇ ಓದುವ ಆಸೆ ಆಕೆಗೆ. ಅಬ್ಬಾಸ್ ಬರೆದಿದ್ದರು. “ಮುಜ್ಜಿ ನನ್ನ ಮಗುವೆ ನೀನು ಬದುಕಲೇ ಬೇಕು." You must live, live, LIVE!" ಅಬ್ಬಾಸ್ ಪತ್ರದೊಂದಿಗೆ ಓಡೋಡಿ ಬಂದರು. ಮುಜ್ಜಿಯನ್ನು ಬಿಗಿದಪ್ಪಿದರು. ಮತ್ತೆ ಆ ಬಾಹುಬಂಧನ ಸಡಿಲಾಗುವವರೆಗೆ. ಮುಜ್ಜಿ ಪತ್ರ ಓದಿ ಹೇಳಿದಳು. “Thank you for telling such beautiful lies, But I needed them.”
ನಾಲ್ಕನೆಯ ದಿನಕ್ಕೆ ಮುಜ್ಜಿ ಜನರಲ್ ವಾರ್ಡಿಗೆ ಸ್ಥಳಾಂತರ. ಆರನೆಯ ದಿನಕ್ಕೆ ಮೆಲ್ಲಗೆ ನಡೆದಾಡುವಿಕೆ. ಮರುಜನ್ಮದ ಅನುಭವ. ಎಲ್ಲವೂ ರಸಯಾತ್ರೆ ಮರುಜನ್ಮ ಎಂದ ಮೇಲೆ ಮರುನಾಮಕರಣವೂ ಬೇಕಲ್ಲ? ಅಬ್ಬಾಸ್ ಮುಜ್ಜಿಗೆ “Sonya” ಎಂದು ಪ್ರೀತಿಯ ಹೆಸರಿಟ್ಟರು. ಮುಜ್ಜಿಯ ಪ್ರೀತಿಯ ಗೆಳತಿ ಯಾರು- ಸುಲ್ತಾನಾ, ಶಕೀಲಾ ಮತ್ತು ಶ್ಯಾಂ. ಅಂತೆಯೆ ಅಬ್ಬಾಸ್ ಮುಜ್ಜಿಗೆ “Sonya ಎಂದು ಹೆಸರಿಟ್ಟು “Four Asses ಎಂದು ಛೇಡಿಸುತ್ತಿದ್ದರು.
ಮುಜ್ಜಿ ಎಂದರೆ ಮಾತು, ಮಾತು, ಮತ್ತೂ ಮಾತು. ಆಕೆ ಒಂದು ವಾರದಲ್ಲಿ ಇಡೀ ಆಸ್ಪತ್ರೆ ಜೀವ ಚೈತನ್ಯದಿಂದ ಪುಟಿಯುವಂತೆ ಮಾಡಿದಳು. ಕುಳಿತಲ್ಲಿ ನಿಂತಲ್ಲಿ ಜನರ, ಸಿಬ್ಬಂದಿಯವರ, ಎಳೆಯ ವೈದ್ಯರ ಸಮಸ್ಯೆಗಳನ್ನು ಆಲಿಸಿದಳು. ಸಲಹೆಗಳನ್ನು ನೀಡಿ ಹೋರಾಡುವ ಸ್ಫೂರ್ತಿ ನೀಡಿದಳು. ಮತ್ತೂ ಬಿಡುವಾದಾಗ ಛೌಲ್ ಗ್ಯಾಲಿಕೋಸ್‌ನ Snow Goose ಓದಿ ಕಥೆ ಮಾಡಿ ಹೇಳಿದಳು. ಆದರೆ ಬೆಂಕಿಯ ಸುತ್ತ ಹಾರಾಡುವ ಪತಂಗದ ಬದುಕು ಅದೆಷ್ಟು ಸುರಕ್ಷಿತ? ಬೇಲಿ ಮುಳ್ಳಿನ ಮೇಲಿನ ಹೂವಿನಂತಿತ್ತು ಮುಜ್ಜ್ಚಿಯ ಬದುಕು.
ಹೃದಯ ಚಿಕಿತ್ಸೆಯ ನಂತರ ಆಕೆಗೆ ಯಾವುದೇ ಕಾರಣಕ್ಕೂ ಜಿಟeತಿ ಆಗಬಾರದು ಎಂಬುದೇ ಅಲ್ಲಿಯ ವೈದ್ಯರ ಆತಂಕವಾಗಿತ್ತು. ಆದರೆ ಮುಜ್ಜಿಗೆ ಇದ್ದಕ್ಕಿದ್ದಂತೆ ಜ್ವರ, ಆನಂತರ ಪ್ಲೀವ್ಹ್ ಹಾಗೆಯೇ ರೋಗಗಳ ಸರಮಾಲೆ. ಆಕೆಗೆ ತಕ್ಷಣ Cortizone ಬೇಕಾಗಿತ್ತು. ಅದೊಂದೇ ಬದುಕುಳಿಸುವ ಔಷಧಿ. ಅಬ್ಬಾಸ ಅದನ್ನು ಹುಡುಕಾಡುತ್ತ ಬೊಂಬಾಯಿ ಸುತ್ತುವಾಗ ಮುಜ್ಜಿ ಮರಣದ ಮೌನ ಮನೆಯ ಕದ ತಟ್ಟಿದಳು. ಅಬ್ಬಾಸ ಮರಳಿ ಬರುವಷ್ಟರಲ್ಲಿ ಕೈ ಕೈ ಹಿಡಿದು ನೋವಲ್ಲಿ ನಲಿವಲ್ಲಿ ಜೊತೆ ಜೊತೆಯಾಗಿ ಮುವತ್ತೆರಡು ವರ್ಷ ಬದುಕಿದ್ದ ಮುಜ್ಜಿ ಮತ್ತೆ ಬಾರದ ಲೋಕಕ್ಕೆ ತೆರಳಿದ್ದಳು. ಮುಜ್ಜಿ ಬದುಕಿದ್ದ ೩೨ ವರ್ಷ ಅದರಲ್ಲಿ ಸಂಸಾರ ಕೇವಲ ೧೪ ವರ್ಷ.ಮುಜ್ಜಿಯನ್ನು ಮಣ್ಣಿಗಿಟ್ಟು ಬಂದ ಮರುದಿನ ಎಲ್ಲವೂ ಖಾಲಿ ಖಾಲಿಯಾಗಿತ್ತು. ಟೇಬಲ್ ಮೇಲೆ ಪೆನ್ನು ಒಂಟಿಯಾಗಿ ಬಿದ್ದುಕೊಂಡಿತ್ತು. ಸೋಮವಾರ ಹೊರಬರುವ Blitz ಪತ್ರಿಕೆಯ Last Page ಅಬ್ಬಾಸರಿಗಾಗಿ ಕಾಯುತ್ತಿತ್ತು. ಎದೆಯಲ್ಲಿ ಮಡುಗಟ್ಟಿದ್ದ ದುಃಖ ಹರಿಬಿಟ್ಟ ಅಬ್ಬಾಸ ಬರೆಯಲಾರಂಭಿಸಿದರು. Death, Be not Proud of Your victory “ಆರು ಅಡಿ ಆಳದಲ್ಲಿ, ನೆಲದಾಳದಲ್ಲಿ ಮುಜ್ಜಿ ಈಗ ಚಿರನಿದ್ರೆಯಲ್ಲಿ. ಒಪ್ಪುತ್ತೇನೆ. ಆದರೆ ಅದೇ ಅವಳ ಬದುಕಿನ ಅಂತ್ಯವೆ? ಅವಂ ಅದಮ್ಯ ಪ್ರೀತಿಗೆ, ಅವಳು ಬದುಕಿದ ಆ ಚೇತೋಹಾರಿ ಬದುಕಿಗೆ, ತಂಗಾಳಿಯಂತೆ ನನ್ನ ಬದುಕಿನಲ್ಲಿ ಜೋಲಾಡಿದ ರೀತಿಗೆ ಕಟ್ಟಿಟ್ಟ ಕನಸುಗಳಿಗೆ, ಇದೇ ಅಂತ್ಯವೆ? ಇದು, ಇದು ಬದುಕಿನ ಮೇಲೆ ಸಾವಿನ ವಿಜಯವೆ? “Was this the end of her, of all she was, of all she wanted to do and to be?’’ನನಗೆ ಪೂರ್ವಾಪರಗಳೆಂದರೆ ಏನು ಎಂದು ಗೊತ್ತಿಲ್ಲ. ಆತ್ಮ ಎಂದರೆ ಎಂಥದ್ದು, ಅದು ಅಮರವೆ? ಮರಣಾಧಿನವೆ? ಮರು ಜನ್ಮ ಎಂಬುದುಂಟೊ? ಇಲ್ಲವೊ ಅದೂ ನನಗೆ ತಿಳಿಯದು. ಆದರೆ ಒಂದು ಜೀವ ಅವಾ ಜೀವನ ಎಂದರೇನೇ ಅದು ಬದುಕಿದ ರೀತಿ, ಅದರ ಪರೋಪಕಾರದ ಬದುಕು ಹಾಗೂ ಬುದ್ಧಿವಂತಿಕೆ. ನಾನು ಈಗಲೂ ಹೇಳುತ್ತೇನೆ - ಪ್ರಪಂಚದಲ್ಲಿ ನಮಗೆ ನಮ್ಮ ದೇಹ, ಮನಸ್ಸು ಹಾಗೂ ಭಾವನೆಗಳನ್ನು ಬಿಟ್ಟು ಎಲ್ಲ ಗೊತ್ತಿದೆ. ನಮಗೆ ಎಲ್ಲ ಗೊತ್ತಿದೆ, ಆದರೆ ನಮ್ಮ ಮೆದುಳು ಕಾರ್ಯ ಮಾಡುವ ರೀತಿ, ಈ ನಮ್ಮ ಜೀವನವನ್ನೇ ಚೈತ್ರವಾಗಿಸುವ ನಮ್ಮ ಭಾವನೆಗಳು, ಕೈಹಿಡಿದು ದಡ ಸೇರಿಸುವ ಆಶೆಗಳು, ಹಠಗಳು, ನಮ್ಮ ದೇಹದ ಕಾರ್ಯ ವೈಖರಿ ಅದು ಮಾತ್ರ ನಮಗೆ ಗೊತ್ತಿಲ್ಲ.ಈ ಮೇಲಿನ ಅಂಶಗಳು ಗೊತ್ತಿರುವುದಾದರೆ ಇತಿಹಾಸ ಎನ್ನುವುದು ಬರೀ ದಾಳಿಕಾರರ, ಆಕ್ರಮಣಕಾರರ, ಸಂತರ, ದಾರ್ಶನಿಕರ, ಸಾಧಿಸಿದವರ ಸಂಗ್ರಹವಾಗುತ್ತಿರಲಿಲ್ಲ. ಅದು ಜಗದೊಂದಿಗೆ ಯಾವ ತಕರಾರೂ ಇಲ್ಲದೇ ದುಡಿಯುವ ರೈತನ, ನಿಮಗೆ ವಿಧೆಯಳಾಗಿ ಬಾಳಿನ ನೊಗವನ್ನು ಸಮ ಸಮನಾಗಿ ಹೊತ್ತು ಸಾಗುವ ನಿಮ್ಮ ಹೆಂಡತಿಯ ಅಮರ ಕಹಾನಿಯಾ ಆಗಿರುತ್ತಿತ್ತು. ಈ ಭೂಮಿ ಎನ್ನುವುದು ಬರೀ ಜಲಪಾತ, ಪ್ರಪಾತ, ಗಿರಿಶಿಖರ ಅಷ್ಟೇ ಅಲ್ಲ. ಇದು ಹುಡಿಹುಡಿಯಾದ ಹಿಡಿ ಮಣ್ಣು, ಮುಂಜಾನೆ ಕಣ್ಣರಳಿಸಿ ಮಧ್ಯಾನ್ಹ ಮುರುಟುವ ಹೂ, ಛೇಡಿಸುವ ಮುಳ್ಳು, ಮೈ ನವಿರೇಳಿಸುವ ಇಬ್ಬನಿ, ಹುಟ್ಟಿ ಸಾಯುವ ಹುಲ್ಲು. ಈ ಬದುಕು ಬರೀ ಅಬ್ಬಾಸರ ಕಥೆಯಲ್ಲ ಮುಜ್ಜಿಯ ಸವಿನೆನಪೂ ಕೂಡಾ. ನೀವು ಈ ಸಾಲುಗಳನ್ನು ಒಪ್ಪುವುದಾದರೆ-Mujji lives in the love of all those who lived her, in the lives that were influenced and even moulded by the gentle impact of her goodness, in the literary work that she did herself or that she inspired me to create, she lives in the minds of the students she taught, in the heart of hundereds of the needy and suffering whom she helped and served.ಮುಜ್ಜಿಯದು ಭೌತಿಕವಾಗಿ ಬದುಕಿ ತೀರುವ ಅಥವಾ ಬೌದ್ಧಿಕವಾಗಿ ಹೇಳಿ ಮುಗಿಸುವ ಜೀವನ ಎಂದು ಅಬ್ಬಾಸ ಎಂದೂ ಅಂದುಕೊಳ್ಳಲಿಲ್ಲ. ಅಂತೆಯೆ ಅಬ್ಬಾಸರ ಜೀವನ ಪ್ರವಾಹ ಅವಳ ನಂತರದ ದಿನಗಳಲ್ಲಿಯೂ ಅದೇ ಲವಲವಿಕೆಯಿಂದ ಮುಂದುವರಿಯಿತು.



Tuesday 23 April 2013

ಮಕ್ಕಳು, ಸೂಳೆಯರು ಮತ್ತು ಸುಳ್ಳು


                      (ಅಲೆಕ್ಸಾಂಡರ್ ಕುಪ್ರಿನ್‌ನ ‘ಯಮಾ ದಿ ಪಿಟ್’ ಕಾದಂಬರಿಯ ಸುತ್ತ)

"ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ
ಹಿಡಿದಡೆ ಬತ್ತಲೇ ನಿಲಿಸಿ ಕೊಲುವರಯ್ಯ
ವೃತಹೀನನರಿದು ಬೆರೆದಡೆ
ಕಾದಕತ್ತಿಯಲ್ಲಿ ಕೈ, ಕಿವಿ, ಮೂಗ ಕೊಯ್ವರಯ್ಯ
   ಒಲ್ಲೆನೊಲ್ಲೆ ಒಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ"
                                -ಸೂಳೆ ಸಂಕವ್ವೆ






 ಸೂಳೆ ಸಂಕವ್ವೆಯ ವೃತ್ತಿ ನಿಯತ್ತಿನ ಈ ವಚನದ ವ್ಯಾಪ್ತಿಯಲ್ಲಿ ಶ್ರೇಷ್ಟ ರಶ್ಯಿಯನ್ ಕಾದಂಬರಿಕಾರ  ಅಲೆಕ್ಸಾಂಡರ್ ಕುಪ್ರಿನ್‌ (Alexander Kuprin)ನ ‘ಯಮಾ ದಿ ಪಿಟ್’(Yama The Peet) ಕಾದಂಬರಿಯನ್ನು ಗ್ರಹಿಸಿಕೊಳ್ಳಲು ಸಾಧ್ಯ ಎಂದು ನನ್ನ ವಾದ. ಸಂಕವ್ವೆ ಮಾತನಾಡುವುದು ನಿಯತ್ತನ್ನು ಕುರಿತು. ಕುಪ್ರಿನ್ ಸರಿ ಸುಮಾರು ೪೦೦ ಪುಟಗಳ ತನ್ನ ಕಾದಂಬರಿಯಲ್ಲಿ ಚರ್ಚಿಸುವುದು ಕೂಡಾ ಇದೇ ಮನುಷ್ಯ ನಿಯತ್ತಿನ ವಿಷಯವನ್ನು. ಆತ ವಾದಿಸುವಂತೆ “ಪ್ರಪಂಚದ ಅತ್ಯಂತ ಮುಗ್ಧ ಮತ್ತು ನಿಯತ್ತಿನ ಜೀವಿಗಳೆಂದರೆ ಮಕ್ಕಳು ಮತ್ತು ಸೂಳೆಯರು. ಅವರ ಸುಳ್ಳಿಗೊಂದು ಸಾತ್ವಿಕತೆ ಇದೆ , ಸೌಂದರ್ಯವಿದೆ” ಎಂದು. ೨೦ ನೇ ಶತಮಾನದ ಆದಿ ಭಾಗದಲ್ಲಿ ರಚನೆಯಾದ  ಈ ಕಾದಂಬರಿಯಲ್ಲಿಯ ಈ ಸಾಲುಗಳನ್ನು ನೀವು ಗಮನಿಸಬೇಕು, “ ಪ್ರಪಂಚದಲ್ಲಿ ಸುಳ್ಳುಗಳು ಹೇಳೋರಂದ್ರೆ ಎಳೆಯ ಮಕ್ಕಳೆಂಬುದು ನಿಮಗೆ ಗೊತ್ತು. ಅವರ ತರಹ ಸಿಹಿಯಾಗಿ, ಚಮತ್ಕಾರವಾಗಿ ಸುಳ್ಳು ಹೇಳೋರು ಮತ್ಯಾರು ಇರೊಲ್ಲ. ಆದರೆ ಮುಗ್ಧ ಮಕ್ಕಳಲ್ಲಿರುವ ನಿಷ್ಠೆ, ನಿಷ್ಕಪಟತೆ ಈ ಜಗತ್ತಿನಲ್ಲಿ ಬೆರೆಯಲ್ಲಿಯಾದ್ರೂ ಇದೆಯೇ? ಹಾಗೇ ವೇಶ್ಯೆಯರೂ ಕೂಡ ! ಈ ವಿಷಯದಲ್ಲಿ ಎಳೆಯ ಮಕ್ಕಳಿಗೂ, ಗಣಿಕೆಯರಿಗೂ ಯಾವ ವ್ಯತ್ಯಾಸವೂ ಇರೊಲ್ಲ. ಇಬ್ಬರೂ ಒಂದೇ! ಇವರ ಸುಳ್ಳುಗಳಲ್ಲಿ ಅಂದವಾದ ನೀತಿ, ನಿಷ್ಠೆ, ಅಮಾಯಕತೆ, ಅವ್ಯಾಜ್ಯ ಪ್ರೀತಿ ಕಾಣಿಸುತ್ತದೆ. ಇವರ ಸುಳ್ಳಿನಲ್ಲಿ ನಿಜವಿದೆ. ಇವರ ಸುಳ್ಳಿನಲ್ಲಿ ಅಂದ, ಆನಂದ ಇವೆ. ಮತ್ತೊಂದು ವಿಷಯ, ನಮ್ಮೊಂದಿಗೆ ಇವರು ಅಸತ್ಯ ಮಾತಾಡುತ್ತಾರೆ. ಅವರು ತಮಗೆ ತಾವು ಸತ್ತರೂ ಸುಳ್ಳು ಹೇಳಿಕೊಳ್ಳುವುದಿಲ್ಲ. ಇನ್ನು ನಾವಿದ್ದೀವಿ ನೋಡಿ, ನಮ್ಮ ಜೀವನವೇ ಒಂದು ಸುಳ್ಳು. ನಿತ್ಯವೂ ಸುಳ್ಳುಗಳಿಂದ ಒಬ್ಬರನೊಬ್ಬರು ಮೋಸಮಾಡ್ಕೊಂಡು, ನೀಚವಾಗಿ, ಕೃತ್ರಿಮವಾಗಿ ದ್ರೋಹ ಮಾಡ್ಕೋತೀವಿ. ಅಸಲಿಗೆ ಅವರು ಸುಳ್ಳು ಯಾಕೆ ಹೇಳ್ತಾರೆ ಅಂದ್ಕೊಂಡಿದ್ದೀರಿ? ನಮಗಾಗಿ, ನಾವು ಹಾಗೆ ಇರ್ಬೇಕು ಅಂತ ಬಯಸ್ತೀವಿ ಅದ್ರಿಂದ. ಸುಳ್ಳು ಹೇಳು ಅಂತ ನಾವೇ ಪ್ರೋತ್ಸಾಹಿಸ್ತೀವಿ, ಒತ್ತಡ ಹೇರ್ತಿವಿ”. ಇದು ಈ ಕಾದಂಬರಿಯ ವೈಶಿಷ್ಠತೆ. ಇಲ್ಲಿ ಅಸಹಜವಾದುದು ಎನ್ನಿಸುವ ಆದರೆ ಸತ್ಯವಾಗಿರುವ ಸಂಗತಿಗಳು ಸಹಜತೆಯ ಮೂಲಕ ಸ್ಥಾಪನೆಗೊಳ್ಳುತ್ತವೆ. 

ಶ್ರೀ ಟಿ.ಡಿ. ರಾಜಣ್ಣ ತಗ್ಗಿಯವರು ತೆಲುಗಿನ ‘ಯಮಕೂಪಂ’ ಮೂಲಕ ಕನ್ನಡಕ್ಕೆ ‘ಕಾಮಕೂಪ’ವಾಗಿ ಭಾಷಾಂತರಗೊಂಡಿರುವ ದೇಸಿ ಪುಸ್ತಕ  ಪ್ರಕಾಶನ ಪ್ರಕಟಿಸಿರುವ, ೨೦೧೨ ನೇ ಸಾಲಿನ ‘ಪ್ರೊ. ತೇಜಸ್ವಿ ಕಟ್ಟಿಮನಿ ಸಾಹಿತ್ಯ ಪ್ರಶಸ್ತಿ’ಗೆ ಭಾಜನವಾಗಿರುವ ಅಲೆಕ್ಸಾಂಡರ್ ಕುಪ್ರಿನ್‌ನ ಈ ಕಾದಂಬರಿ ಕಟ್ಟಿಕೊಡುವ ರಶ್ಯಾ ದೇಶದ ವೇಶ್ಯಾ ಜಗತ್ತಿನ ನೈಜ ಚಿತ್ರಣದಿಂದಾಗಿ ಆತ ಟಾಲಸ್ಟಾಯ್, ದಾಸ್ತೊವಸ್ಕಿ, ಗಾರ್ಕಿಯಂತಹ ಲೇಖಕರ ಸಾಲಿಗೆ ಸೇರುತ್ತಾನೆ. ‘ಸ್ವಂತ ಆಸ್ತಿಗಳು ಇರುವವರೆಗೂ ದಾರಿದ್ರ್ಯ ಕೂಡಾ ಇರುತ್ತೆ. ಹಾಗೆಯೇ ವೈವಾಹಿಕ ವ್ಯವಸ್ಥೆ ಇರುವವರೆಗೂ ವ್ಯಭಿಚಾರ ಕೂಡಾ ಇರುತ್ತೆ’ ಎಂದು ಸಾರುವ ಕುಪ್ರಿನ್  ಮನುಷ್ಯರ ಮನಸ್ಸಿನಲ್ಲಿಯ ಕೆಲವು ಕತ್ತಲೆ ಮೂಲೆಗಳಲ್ಲಿರುವ, ಬೂಸ್ಟ್ ಹತ್ತಿ ವಿಕಾರಗೊಂಡಿರುವ ಸತ್ಯವನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾನೆ. ಈ ಕ್ಷಣದಲ್ಲಿ ನನಗೆ ಷೇಕ್ಸ್‌ಪಿಯರ್‌ನ ಲೇಡಿ ಮ್ಯಾಕ್‌ಬತ್ ನೆನಪಾಗುತ್ತಾಳೆ. ಮತಿ ಭ್ರಮಣದ ಆ ಹಂತದಲ್ಲೂ ಅವಳು ಒಂದು ಸತ್ಯವನ್ನು ಹೇಳಿದ್ದಾಳೆ. ‘ ಕಣ್ಣೀರಿನಲ್ಲಿ ಮಿಂದು ಹೋದ ಕಿವಿಗಳಿಲ್ಲದ, ಹೇಳಲು ಬಾಯಿಲ್ಲದ ತಲೆದಿಂಬುಗಳಿಗೆ ಮಾತ್ರ ಮನುಷ್ಯನ ಮನಸ್ಸಿನ ರಹಸ್ಯಗಳನ್ನು ಬಿಚ್ಚಿಡುವ ಶಕ್ತಿ ಇದೆ’ ಎಂದು. ಈ ಬದುಕಿನ ದುರ್ವಿಧಿಯೇ ಇದು. ಅಂತಹ ಸತ್ಯ ಪ್ರಕಟಗೊಳ್ಳುವ ಯಾವ ಸಾಧ್ಯತೆಗಳೂ ಇಲ್ಲ. ಒಂದು ವೇಳೆ ಪ್ರಕಟಗೊಂಡರೆ ಸಹಿಸಿಕೊಳ್ಳುವ ಶಕ್ತಿಯಾದರೂ ಸಮಾಜಕ್ಕಿದೆಯೇ? ಇದೂ ಯಕ್ಷ ಪ್ರಶ್ನೆ. ಅಂತೆಯೇ ಸಾಕ್ರಟಿಸ್ ಹೇಳಿದ, ‘ಸಹಾಯವಿಲ್ಲದ ಸತ್ಯಕ್ಕೆ ಲೋಕ ವ್ಯವಹಾರದಲ್ಲಿ ಯಾವ ಅಸ್ತಿತ್ವವೂ ಇಲ್ಲ’. 


ಕುಪ್ರಿನ್‌ನ ಈ ಕಾದಂಬರಿ ರಷ್ಯಾದ ಯಾಮಾ ನಗರದ ಸೂಳೆಯರ ಕೊಂಪೆಗಳ ದಾರುಣ ಕಥೆ. ಇಲ್ಲಿಗೆ ಅರ್ಧಗಂಟೆ, ಗಂಟೆ, ದಿನಗಳ ಲೆಕ್ಕಕ್ಕೆ ಬರುವ ಪುರುಷರಿಗೆ ಮೈ ತುಂಬ ತೆವಲುಗಳು. ತಲೆತಲಾಂತರದಿಂದ ಇದೇ ವೃತ್ತಿಯಲ್ಲಿ ತೊಡಗಿರುವ ಇಲ್ಲಿಯ ಅನೇಕ ಸೂಳೆಯರಿಗೆ ಮೈ ತುಂಬಾ ರೋಗಗಳು. ಆರಂಭಕ್ಕೆ ಈ ಹಾಳು ಕೊಂಪೆಯಲ್ಲಿ ಹೇಗೆ ಬಾಳೊದು? ಇಲ್ಲಿ ಬರುವ ಮುದುಕ, ರೋಗಗ್ರಸ್ಥ, ವಿಕೃತ, ಅಮಾನವೀಯ ಪುರುಷರನ್ನು ಹೇಗೆ ಸಂಭಾಳಿಸೋದು? ಎಂದು ಕೇಳಿಕೊಳ್ಳುವ ಸಾಲು ಸಾಲು ಸೂಳೆಯರು ಆನಂತರ ಇದೇ ವೃತ್ತಿಯಲ್ಲಿ ಸುಟ್ಟು ಸಾಯುವ ಚಿಟ್ಟೆಗಳಾಗುತ್ತಾರೆ. ಒಂದು ತಿಂಗಳಿಗೆ ೫೦೦ ರೊಬೆಲ್ಸ್‌ಗಾಗಿ ಐಹಿಕತೆಯನ್ನು ಮಾರಿ ಆಧ್ಯಾತ್ಮಿಕತೆಯ ಸಣ್ಣ ಸೆಳಕ ಸಿಗದೆ ಸತ್ತು ಹೋಗುವ ಇವರು ಎಲ್ಲ ಕಾಲಕ್ಕೂ ನಿತ್ಯ ಮುತ್ತೈದೆಯರು. ಕಾದಂಬರಿಯ ಕೊನೆಯಲ್ಲಿ ಮತ್ತೆ ಇದೇ ವೃತ್ತಿಗೆ ವ್ಯವ್ಯಸ್ಥಿತವಾಗಿ ಸಿಕ್ಕಿ ಹಾಕಿಕೊಳ್ಳುವ ಪಾತ್ರವೊಂದು ಹೇಳುವಂತೆ, “ ಪ್ರಪಂಚ ತುಂಬಾ ಸುಂದರವಾದುದು. ನಾವು ಮಾತ್ರವೇ, ಕೇವಲ ನಾವು ಮಾತ್ರವೇ ಪತಿತೆಯರಾಗಿ, ಭ್ರಷ್ಟರಾಗಿ, ರಂಡೆಯರಾಗಿ, ರಸ್ತೆಯ ಪಕ್ಕಕ್ಕೆ ತಳ್ಳಲ್ಪಟ್ಟ ತಿಪ್ಪೆಯ ಕಸದಂತೆ ಇಲ್ಲಿ ಬಿದ್ದಿದ್ದೇವೆ”. ಆದ್ಯಾಗೂ ಅವರ ಪಾಲಿಗೆ ಅವರ ಈ ಶೃಂಗಾರಪುರ ಯಾಮಾ ಹೊರಗಿನ ಲೋಕದಷ್ಟು ಸುಳ್ಳು ಮತ್ತು ಕೃತ್ರಿಮ ಅಲ್ಲ. ಅಲ್ಲಿ ಬರುವ ಮಿಲಿಟರಿಯವರಿಗಾಗಿ, ವಿಧ್ಯಾರ್ಥಿ, ಪಾದ್ರಿಗಳಿಗಾಗಿ, ಗುಮಾಸ್ತ, ಗರ್ಭಿಣಿ ಹೆಂಡಂದಿರ ಗಂಡಂದಿರಿಗಾಗಿ, ವಿಧುರನಿಗಾಗಿ ಅವರು ಥಳ ಥಳ ಹೊಳೆಯುವ ಮೇಕಪ್ ಮಾಡಿಕೊಳ್ಳುತ್ತಾರೆ. ಆರಂಭದಲ್ಲಿ ಇಷ್ಟಕ್ಕಾಗಿಯೇ ಹೊಗುವ ಗಿರಾಕಿ ಮಾತ್ರ ಮತ್ತಿನಷ್ಟಕ್ಕಾಗಿ ಹಾತೊರೆಯುತ್ತಾನೆ. ಅವರಿಂದ ಪ್ರೀತಿ ಬೇಕು ಅಂತಾನೆ. ಆಗ ಸೂಳೆ ಆತ್ಮವಂಚನೆಯೊಂದಿಗೆ ಸುಳ್ಳಿನ ಹಾವ-ಭಾವಗಳಲ್ಲಿ ಮಾತುಗಳಲ್ಲಿ ಚೇಷ್ಟೆ, ನಿಟ್ಟುಸಿರುಗಳಲ್ಲಿ ಇನ್ನಿಲ್ಲದ ಪ್ರೇಮವನ್ನು ಸುರಿಯುತ್ತಾಳೆ. ರಾತ್ರಿಯೊಂದಕ್ಕೆ ಕೊಡುವ ೫ ರೊಬೆಲ್‌ಗಳಿಗಾಗಿ ಅವಳ ಜನ್ಮ ಜಾಲಾಡುತ್ತಾನೆ. ಆತ ಕೇಳುವ ಎಲ್ಲ ನೀಚ ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸುತ್ತಾನೆ. ಈ ಸಂದರ್ಭದಲ್ಲಿ ಕಾದಂಬರಿಯಲ್ಲಿ ಇಡೀ ಸಮಾಜಕ್ಕೆ ಸೂಳೆಯೊಬ್ಬಳು ಕೇಳುವ ಪ್ರಶ್ನೆಯನ್ನು ಗಮನಿಸಬೇಕು, “ ಈ ಪ್ರಶ್ನೆಗಳನ್ನು ಕೇಳೋದಕ್ಕೆ ಅವನಿಗೇನು ಹಕ್ಕಿದೆ ಹೇಳಿ? ಪಾಪ! ಅವಳು ಅವನ ಬಗ್ಗೆ ಏನೂ ಕೇಳೋದಿಲ್ಲ. ಅವನ ತಂಗಿಯ ಬಗ್ಗೆ, ತಾಯಿ ಬಗ್ಗೆ, ಹೆಂಡತಿ ಬಗ್ಗೆ ಅವನ ಶೀಲದ ಬಗ್ಗೆ ಏನೂ ಕೇಳೊದಿಲ್ಲ. ಹಾಗಿದ್ದಾಗ ಅವನಿಗ್ಯಾಕೆ ಬೇಕು ಅವಳ ವೈಯಕ್ತಿಕ ವಿಷಯ? ಯಾಕಂದ್ರೆ ಅವನು ದುಡ್ಡು ಕೊಡ್ತಾನಲ್ಲ? ಹೌದು, ಪೋಲಿಸರು, ಸರ್ಕಾರ, ಡಾಕ್ಟರ್, ಸಮಾಜ ಎಲ್ಲವೂ ಅವನ ಹಿಂದೆ ಬೆಂಬಲಕ್ಕೆ ನಿಂತಿದೆಯಲ್ಲ ಅದಕ್ಕೆ. ಆದ್ದರಿಂದ ಅವನು ಏನು ಬೇಕಾದರೂ ಕೇಳ್ಬೋದು. ಕ್ಷಣದ ಸುಖಕ್ಕಾಗಿ ಹೇಗಾದ್ರೂ ಭೇಧಿಸಬಹುದು. “ಹೂಂ, ನೀನು ಕೊಡೋ ಪುಡಿಗಾಸಿಗೆ ಪ್ರೇಮ, ಒಲುಮೆ, ಇವಷ್ಟೇ ಅಲ್ಲದೆ ನನ್ನ ಅಂತರಂಗದ ನಿಜ ಕೂಡ ಬೇಕಾಗಿದೆಯೇನೋ? ಹಾಗಾದರೆ ಕೇಳು. ಕಾಕಮ್ಮನ ಕಟ್ಟುಕತೆ ಹೇಳ್ತೀನಿ ಕೇಳು” ಎಂದುಕೊಳ್ಳುತ್ತಾಳೆ ಅವಳು. ನಿನ್ನನ್ನು ತೃಪ್ತಿ ಪಡಿಸೋದಕ್ಕೊಸ್ಕರ ಸುಳ್ಳು ಹೇಳ್ತಾಳೆ. ಹೌದೋ ಅಲ್ಲವೋ? ಮತ್ತೆ ಈ ಮೂರು ಸುಳ್ಳುಗಳಿಗೆ ಕಾರಣ ನೀನಾ? ಆಕೆಯೋ? 

ನಿಸ್ಸಂಶಯವಾಗಿಯೂ ಕಾಮಕೂಪ ಒಂದು ಭ್ರಮಾಲೋಕ, ಸುಳ್ಳು ಸೃಷ್ಟಿ. ಆದರೆ ಈ ಸುಳ್ಳು ಎಷ್ಟೊಂದು ಶಾಶ್ವತ ಮತ್ತು ನಿರಂತರವಾಗಿದೆ ಎಂದರೆ ಇಲ್ಲಿ ಸತ್ಯದ ಮುಖವೂ ಮಖಾಳವಾಗುತ್ತದೆ. ಸೂಳೆಯರ ಪ್ರಕಾರ ಈ ಸುಳ್ಳು ಸೃಷ್ಟಿಯ ಪಿತೃಗಳು ಸಮಾಜದಲ್ಲಿಯ  ಸಭ್ಯಸ್ಥರು ಮತ್ತು ಸದ್ಗೃಹಸ್ಥರು ಎನ್ನುವ ದ್ವಿಪಾದ ಪಶುಗಳು. ಪುರುಷರನ್ನು ಕುರಿತು ಕುಪ್ರಿನ್‌ನ ಸೂಳೆಯರು ಎಳೆಯುವ ಷರಾಗಳನ್ನು ನೀವು ಗಮನಿಸಬೇಕು. ಜೆನ್ನಿ ಎನ್ನುವ ಸೂಳೆ ಹೇಳುತ್ತಾಳೆ, “ ಗಂಡಸರೆಲ್ಲರಲ್ಲಿ ನೀತಿ, ನಿಷ್ಟೆ ಇರೋರು ಅಂದರೆ ಇಬ್ಬರೇ. ಒಬ್ಬ ಕಳ್ಳ, ಇನ್ನೊಬ್ಬ ಹಂತಕ. ಇವರಿಬ್ಬರು ಪ್ರೇಯಸಿಯ ಜೊತೆ ಮನಸ್ಸು ಬಿಚ್ಚಿ ಮಾತಾಡ್ತಾರೆ. ಸತ್ರೂ ಸುಳ್ಳು ಹೇಳೋಲ್ಲ. ಅಗತ್ಯ ಬಿದ್ದರೆ ಪ್ರಿಯತಮೆಗಾಗಿ ಕಳ್ಳತನವಾಗಲಿ, ಹತ್ಯೆಯಾಗಲಿ ಮಾಡ್ತಾರೆ. ತಮ್ಮ ಪ್ರಾಣ ಕೊಡ್ತಾರೆ. ಆದರೆ ಉಳಿದವರು? ಅವರು ಹಸಿ ಹಲಾಲುಕೋರರು, ಮೋಸಗಾರರು, ಸುಳ್ಳುಗಾರರು. ಗೊತ್ತಾಗದ ಹಾಗೆ ಕುತ್ತಿಗೆ ಕೊಯ್ತಾರೆ”. 

‘ಕಾಮಕೂಪ’ ಕಾದಂಬರಿ ಒಂದು ಕಥೆಯಾಗಿ ಆರಂಭವಾಗುವುದು ಮಧ್ಯಭಾಗದಿಂದ. ಅಲ್ಲಿಯವರೆಗೂ ಅದು ಸಂತೆ, ಚೆಂದುಳ್ಳ ಹೆಂಗಸರ, ವಿಟರ, ತಲೆಹಿಡುಕರ, ಸತ್ಯ ಶೋಧಕರ, ಸಮಾಜೊದ್ಧಾರಕರ, ಕಥೆ-ನಾಟಕಕಾರರ ಒಂದು ಸಂತೆ. ಮಧ್ಯಭಾಗದಲ್ಲಿ ಶುರುವಾಗುವ ಈ ಕಥೆಯ ನಾಯಕ ಲಿಖೋನಿನ್ ಯಾಮಾ ನಗರದ ಕಾಮಕೂಪದಿಂದ ಲೂಬಾ ಎಂಬ ಸೂಳೆಯನ್ನು ಎತ್ತಿ ತಂದು ಸಹೋದರನಂತೆ ಆಕೆಯ ಕಾಳಜಿ ವಹಿಸಿ, ಸಮಾಜಕ್ಕೊಂದು ಆದರ್ಶವನ್ನು ತೋರಿಸಬೇಕೆಂಬ ಹಂಬಲದಲ್ಲಿರುವವ. ಆದರೆ ಅವನ ಈ ಕನಸಿನ ಕಾಲ್ತೋಡಕುಗಳೇ ಅವನ ಉಳಿದ ಮೂವರು ಗೆಳೆಯರು. ಅವರು ಕೇಳುವ ಪ್ರಶ್ನೆ, “ ಅವಳನ್ನು ನೀನು ಅನುಭವಿಸದೆ ಇರ್ತಿ ಎಂದುಕೋ. ಸಹೋದರನಂತೆ ಪ್ರೀತಿ ತೋರುತ್ತಾ ನಿಷ್ಟೆಯಿಂದ ಇರ್ತಿ ಎಂದುಕೋ. ಆಗ ಆಕೆ ಇನ್ಯಾರೋ ಪುರುಷರನ್ನು ಪ್ರೇಮಿಸ್ತಾಳೆ. ನನ್ನ ಮಾತು ಕೇಳೊ ತಮ್ಮಾ, ಹೆಣ್ಣು ಎಂದು ಹೆಣ್ಣೇ ಕಣೋ! ಪ್ರೀತಿಯಿಲ್ಲದೇ, ಪ್ರೀತಿಸದೇ ಯಾವ ಹೆಣ್ಣೂ ಬದುಕಲ್ಲ. ಬದುಕಲಾರಳು. ಇದು ಬೆಂಕಿಯಷ್ಟೇ ಸತ್ಯ. ಅದಕ್ಕೆ ಅವಳು ತಾನು ನಿಗ್ರಹಿಸಿಕೊಳ್ಳಲಾರದೇ ಪ್ರೀತಿಸಿದ ಗಂಡಿನ ಜೊತೆ ಓಡಿ ಹೋಗ್ತಾಳೆ. ಅವನು ಅವಳ ಶರೀರ ಸುಖವನ್ನು ಪಡೆದುಕೊಂಡು ತನ್ನ ತೀಟೆ ತೀರಿದ ಮೇಲೆ ಮತ್ತೆ ಹೊರದಬ್ಬುತ್ತಾನೆ. ನಿನ್ನದೆಲ್ಲವೂ ನಾನ್ಸೆನ್ಸ್”.

ಆದಾಗ್ಯೂ ಲಿಖೋನಿನ್ ಅಚಲ. ಆತ ಸೂಳೆಯೊಬ್ಬಳನ್ನು ಸಹೋದರಿಯಂತೆ ಪ್ರೀತಿಸಿ ಸಮಾಜಕ್ಕೆ ತೋರಿಸಲೇಬೇಕಿದೆ. ಹೀಗಾಗಿ ಯಾಮಾಕೂಪದ ಲೂಬಾಳನ್ನು ಎಷ್ಟೆಲ್ಲ ಹಣ ಖರ್ಚು ಮಾಡಿ ಕಾನೂನಿನ ತೊಂದರೆಗಳನ್ನು ಎದುರಿಸಿ ಗೆಳೆಯರ ಮಾತುಗಳನ್ನು ನಿರ್ಲಕ್ಷಿಸಿ, ಲೂಬಾಳನ್ನು ಕರೆದುಕೊಂಡು ಬಂದು ತನ್ನ ಪ್ರಯೋಗ ಶುರು ಮಾಡುತ್ತಾನೆ. ನಿತ್ಯ ಹಸಿ-ಹಸಿ ಗಂಡಸರ ಮಧ್ಯ, ಒಂದೊಂದು ದಿನವಂತೂ ನೂರಕ್ಕೂ ಮೀರಿದ ಪುರುಷರ ತೆಕ್ಕೆಯೊಳಗೆ ಒದ್ದಾಡಿದ್ದ ಲೂಬಾ ಎಂಬ ಸೂಳೆಯನ್ನು ಈಗ ಮನೆಯಲ್ಲಿ ಕೂಡ್ರಿಸಿ ಸಹೋದರ ಪ್ರೇಮದ ಪಾಠವನ್ನು ಶುರು ಮಾಡುತ್ತಾನೆ. “ಲೂಬಾ, ಪ್ರೇಮ ತುಂಬ ಶ್ರೇಷ್ಠವಾದುದು, ಉನ್ನತವಾದುದು, ಗಂಭೀರವಾದುದು, ಅಗಾಧವಾದುದು. ಪ್ರೇಮ, ಪ್ರಪಂಚಕ್ಕಿಂತ 
ಶ್ರೇಷ್ಠವಾದುದು ಲೂಬಾ ! ಪ್ರೇಮ ಅಂದ್ರೆ ಹಾಸಿಗೆ ಮೇಲೆ ಬಿದ್ದು ಹೊರಳಾಡೋದಲ್ಲ. ಅಂತಹ ಪ್ರೇಮ ನಮಗೆ ಬೇಕಿಲ್ಲ. ನೀನು ನನ್ನ ಜೀವನದಲ್ಲಿ ನಂಬಿಕಸ್ಥ ಸ್ನೇಹಿತೆ, ಸೋದರಿ. ಸಹೋದರ ಪ್ರೇಮವೇ ನಮ್ಮಿಬ್ಬರ ಹೃದಯದಲ್ಲಿ ನಾಟಿಕೊಳ್ಳಬೇಕು. ಹಾಗೆ ನಾವು ಪ್ರೇಮಿಸಿಕೊಂಡ ದಿನ ಅಪೂರ್ವವಾದ ಆನಂದ ಉಂಟಾಗುತ್ತೆ. ಅದರ ಮುಂದ ಈ ತುಚ್ಚವಾದ ವಾಂಛೆಗಳೆಲ್ಲವೂ ವೇಸ್ಟ್, ಅದು ಸ್ವರ್ಗ ಲೂಬಾ ! ಅದೇ ನನಗೆ ಬೇಕಾಗಿರೋದು, ಅಷ್ಟೇ !”. 

ಆದರೆ ಎನೆಲ್ಲ ನರಕವನ್ನು ದೇಹದ ನಾಡಿ-ನಾಡಿಯೂ ಅನುಭವಿಸಿ ಬಂದ ಲೂಬಾಳಿಗೆ ಇದ್ಯಾವುದು ಅರ್ಥವಾಗುವುದಿಲ್ಲ. ಸಹೋದರ- ಸಹೋದರಿ, ಇದೆಲ್ಲ ಕಾಮ ವಾಂಛೆಯನ್ನು ಉದ್ದೇಶಪೂರ್ವಕವಾಗಿ ದಮನ ಮಾಡುವ ಆತ್ಮವಂಚನೆಯ ಕ್ರಿಯೆ ಎನಿಸುತ್ತದೆ ಅವಳಿಗೆ. ಗಂಡನಿಗೆ ನೆಮ್ಮದಿಯ ಹೆಂಡತಿಯಾಗಬೇಕು. ಆತನೊಂದು ಸಾಂಪ್ರದಾಯಿಕ ಮದುವೆ ಮಾಡಿಕೊಳ್ಳದಿದ್ದರೂ ಚಿಂತೆಯಿಲ್ಲ, ಆತನ ಬೂಟು ಒರೆಸಿ, ಅಡುಗೆ ಮಾಡಿ, ವಿಧೇಯತೆಯಿಂದ ಬದುಕಬೇಕು, ಹೀಗೆ ಅವಳ ಕನಸು. ಆದರೆ ಲೂಬಾ ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಲಿಖೋನಿನ್‌ನ ಮನೆಗೆ ಬರುವ ವಿದ್ಯಾರ್ಥಿಗಳೂ, ಸ್ನೇಹಿತರೂ ಅವಳನ್ನು ಗಣಿಕೆಯಾಗಿಯೇ ನೋಡುತ್ತಾರೆಯೇ ವಿನಃ ಗೆಳತಿ, ಸಹೋದರಿಯಾಗಿ ಅಲ್ಲ. ‘ನಿನೊಬ್ಬಳು ಗಣಿಕೆ. ಇದಕ್ಕೂ ಮೊದಲು ಅನೇಕ ಮಂದಿಯ ಸ್ವತ್ತು. ಈಗ ಒಬ್ಬ ಯುವಕನ ಕೋರಿಕೆಯನ್ನು ತೀರಿಸಲು ಇಲ್ಲಿಗೆ ಬಂದಿರುವಿ. ಅಷ್ಟು ಮಾತ್ರಕ್ಕೆ ನೀನೊಬ್ಬ ಪವಿತ್ರವಾದ ಸ್ತ್ರೀಯಾಗಲಿ, ಪತಿವೃತೆಯಾಗಲಿ ಆಗೊಲ್ಲ. ನಿನ್ನ ಕಳಂಕ ನಿನ್ನ ಬಳಿಯೇ ಚಿರಕಾಲ ಇರುತ್ತೆ.’ ಎನ್ನುವುದನ್ನು ಇವರೆಲ್ಲಾ ಲೂಬಾಳಿಗೆ ಮತ್ತೆ ಮತ್ತೆ ನೆನಪಿಸುತ್ತಾರೆ. ಲಿಖೋನಿನ್‌ನ ಗೆಳೆಯ ಸಿಮನೊವಸ್ಕಿಯಂತೂ ಪಾಠ ಹೇಳುವ ನೆಪದಲ್ಲಿ ಮನೆಗೆ ಬಂದು ಲೂಬಾಳನ್ನು ಅವಳ ವೃತ್ತಿಯ ಹಿನ್ನೆಲೆಯಲ್ಲಿ ನಿರಂತರವಾಗಿ ಪೀಡಿಸುತ್ತಾನೆ. ‘ಹಸಿವಿನ ರೀತಿ ಪ್ರೇಮ ಮತ್ತು ಕಾಮಗಳು, ತೃಷೆಗಳು. ಇವುಗಳನ್ನು ನನ್ನಿಂದ ತೀರಿಸಿಕೊ, ಮಾನವನು ಸ್ವೇಚ್ಚಾಜೀವಿ, ಅವನನ್ನು ಯಾವ ಕಟ್ಟುಪಾಡುಗಳು, ಧರ್ಮ, ಆದರ್ಶಗಳು ತಡೆಯಲಾರವು, ಅವನು ಎಲ್ಲದಕ್ಕೂ ಅತೀತ’ ಎಂದು ಅವಳ ದುಂಬಾಲು ಬೀಳುತ್ತಾನೆ. ಈಗ ಲೂಬಾ ಮತ್ತು ಲಿಖೋನಿನ್‌ನರ ಪ್ರೇಮ ಮತ್ತು ಆದರ್ಶಗಳಲ್ಲಿ ಬಿರುಕು ಮೂಡಲಾರಂಭಿಸುತ್ತದೆ. ದೂರ ಸರಿಯಲಾರಂಭಿಸುತ್ತಾನೆ ಲಿಖೋನಿನ್ ತನ್ನ ಆದರ್ಶದಿಂದ. ತನ್ನ ಗೆಳೆಯನಾದ ಸಿಮನೊವಸ್ಕಿಗೆ ಲೂಬಾಳನ್ನು ಬಿಟ್ಟು ಕೊಡುವ ವಿಚಾರ ಮಾಡುತ್ತಾನೆ. ಕೊನೆಗೆ, “ ಲೂಬಾ ನೀನೊಬ್ಬ ಅನಾಗರಿಕ ಪಶು, ಕೆಲಸಕ್ಕೆ ಬಾರದ ಕ್ರಿಮಿ, ನೀಚ ಬುದ್ಧಿಯ ಹೆಣ್ಣು, ಪ್ರೇಮ ಸೂಳೆಯರಿಗೆ ಅರ್ಥವಾಗುವುದಿಲ್ಲ” ಎಂದು ಅವಳನ್ನು ಧಿಕ್ಕರಿಸಿ ಹೊರಟುಹೋಗುತ್ತಾನೆ. 

ಆನಂತರ ಸಿಮನೊವಸ್ಕಿ ತನ್ನ ಪಶುಬಲದಿಂದ ಒಂದಿಷ್ಟು ಕಾಲ ಅವಳನ್ನು ಅನುಭವಿಸುತ್ತಾನೆ. ಆನಂತರ ಬಿಟ್ಟು ಹೊಗುತ್ತಾನೆ. ಈಗ ಲೂಬಾ ಒಂಟಿಯಾಗಿ ಹೊರಟಾಗ ಉಂಡಾಡಿಗುಂಡರು, ಕಳ್ಳರು, ದುರ್ಮಾರ್ಗಿಗಳು, ಅಲೆಮಾರಿಗಳು, ಸೋಮಾರಿಗಳು, ರಸಿಕ ಮುಂಡೆ ಮಕ್ಕಳು, ತಲೆ ಹಿಡುಕರು ಎಲ್ಲ ಕಾಡುತ್ತಾರೆ. ಒಂದಿಷ್ಟು ಅವಧಿ ಒಬ್ಬ ಮುದುಕನೊಂದಿಗೆ, ಮತ್ತಷ್ಟು ಅವಧಿ ಒಬ್ಬ ಹುಡುಗನೊಂದಿಗೆ ಲೂಬಾ ಕಳೆಯುತ್ತಾಳೆ. ಒಂದು ದಿನ ಒಬ್ಬ ವ್ಯಕ್ತಿಯಂತೂ ಆಕೆಯ ಬಳಿಯಲಿದ್ದ ೮೦ ಕೊಪೆಕ್‌ಗಳನ್ನು ಕಿತ್ತುಕೊಂಡು ರಕ್ತ ಬರುವಂತೆ ಥಳಿಸಿ ಬಿಟ್ಟುಹೋಗುತ್ತಾನೆ. ನಾಲ್ಕು ದಿನಗಳ ಕಾಲ ನಗರದ ಬೀದಿ-ಬೀದಿ ಪಿಶಾಚಿಯಂತೆ ಅಲೆದು ಮತ್ತೆ ಯಾಮಾದ ಕಾಮಕೂಪಕ್ಕೆ ಬರುತ್ತಾಳೆ. 

ಒಡತಿ ಎಮ್ಮಾ ಇವಳನ್ನು ಸೇರಿಸಿಕೊಳ್ಳಲು ಸಿದ್ಧಳಿಲ್ಲ. “ ಲೇ ಭ್ರಷ್ಟ ರಂಡೆ, ನಮಗೇನು ಮಾನ, ಮರ್ಯಾದೆ, ಘನತೆ ಇಲ್ಲಾ ಅಂದುಕೊಂಡಿದಿಯೇನೇ? ನಿನ್ನಂಥ ಕನಿಷ್ಟ ದರ್ಜೆಯ ಮುಂಡೆಯರನೆಲ್ಲಾ ಸೇರಿಸಿಕೊಂಡರೆ ನಾಳೆ ನಮ್ಮ ಕೊಂಪೆಗೆ ಬೆಂಕಿ ಬೀಳುತ್ತೆ, ಇಲ್ಲಿಂದ ಹೊರಟು ಹೋಗು”. ಹೀಗೆ ಲೂಬಾಳನ್ನು ಒಡತಿ ಜರಿಯುತ್ತಿರುವುದನ್ನು ನೋಡುತ್ತಿರುವ ಜೆನ್ನಿ ಎಂಬ ಗಣಿಕೆ ಕನಿಕರದಿಂದ ಲೂಬಾಳ ಪರವಾಗಿ ನಿಂತು ಎಮ್ಮಾಳನ್ನು ಪ್ರತಿಭಟಿಸುತ್ತಾಳೆ. ಮೂವರು ಹೆಂಗಸರ ಮಧ್ಯ ಮಾರಾಮಾರಿಯಾಗುತ್ತದೆ. ಇಲ್ಲಿಂದ ಮುಂದೆ ಲೂಬಾಳ ಕಥೆ ಏನಾಯಿತು ಎನ್ನುವುದು ಅಸ್ಪಷ್ಟ. ಈಗ ಪ್ರವೇಶಿಸಿದ ಪಾತ್ರ ಜೆನ್ನಿಯ ಕಥೆ ಇಡೀ ಕಾದಂಬರಿಯ ಕೊನೆಯನ್ನು ನಿರ್ದರಿಸುತ್ತದೆ. 

ವರ್ಷಕ್ಕೊಮ್ಮೆ ಕೊಲ್ಯಾ ಎಂಬ ಮಿಲಿಟರಿ ಯುವಕನನ್ನು ಪ್ರೀತಿಸುವ ಜೆನ್ನಿ ಬಹಳ ಪ್ರಾಮಾಣಿಕ ಸೂಳೆ. ಅವಳೀಗ ಸಯಾಮಿ ರೋಗದಿಂದ ನರಳುತ್ತಿದ್ದಾಳೆ. ತನ್ನ ಮೈ ಅಂಗುಲಂಗುಲವನ್ನು ನೆಕ್ಕಿದ ಪ್ರತಿ ಪುರುಷ ನಾಯಿಗೂ ಈ ರೋಗ ಅಂಟಿಸಿ ಕೊಲ್ಲಬೇಕು ಎನ್ನುವುದು ಅವಳ ಗುರಿ. ಆದರೆ ಈ ಯುವಕ ಕೊಲ್ಯಾನ ಬಗೆಗೆ ಅವಳದು ಶುದ್ಧ ಪ್ರೇಮ. ತಲೆಗೇರಿದ ಕಾಮವಲ್ಲ, ಈತನ ಕುರಿತು ಯಾಕೆ ಇಂತಹ ಕಾಳಜಿ ಎನ್ನುವುದು ಆಕೆಗೆ ಗೊತ್ತಿಲ್ಲ. ಆದರೆ ಪುರುಷರೆಲ್ಲರನ್ನು ದುರ್ಮಾರ್ಗಿಗಳು, ನೀಚರು, ಗಢವಗಳು ಎಂದು ಹೀಯಾಳಿಸುವ ಲೂಬಾ ಯಾಕೆ ಕೊಲ್ಯಾನಿಗೆ ಮೋಸಮಾಡಲಾಗಲಿಲ್ಲ ಎನ್ನುವುದನ್ನು ಆಕೆಯ ಸಾಲುಗಳಲ್ಲಿಯೇ ಓದಬೇಕು. ಆಕೆ ಹೇಳುತ್ತಾಳೆ, “ ಆ ಯುವಕನನ್ನು ನೋಡಿದ ಕೂಡಲೇ ನನಗೇನು ಅನ್ನಿಸಿತು ಗೊತ್ತಾ? ಒಬ್ಬ ಹುಚ್ಚನ ಹತ್ತಿರವೋ, ಮೂರ್ಖನ ಹತ್ತಿರವೋ ದುಡ್ಡು ಕಳ್ಳತನ ಮಾಡುತ್ತಿದ್ದಂತೆ, ಇಲ್ಲ ಒಬ್ಬ ಕುರುಡನ ತಲೆಯನ್ನು ಒಡೆಯುತ್ತಿರುವಂತೆ, ಇಲ್ಲ ನಿದ್ದೆ ಮಾಡುತ್ತಿರುವ ಮನುಷ್ಯನ ಕುತ್ತಿಗೆ ಕೊಯ್ಯುತ್ತಿರುವಂತೆ ಅನ್ನಿಸಿತು”. ಇಂತಹ ಜೆನ್ನಿ ಇದ್ದಕ್ಕಿದಂತೆ ಒಂದು ದಿನ ತನ್ನ ಬಳಿಯ ಚಿನ್ನಾಭರಣಗಳೆಲ್ಲವನ್ನು ಗೆಳತಿಯರಾದ ಪುಟ್ಟ ಮಂಕಾ, ತಮಾರಾಳಿಗೆ ಕೊಟ್ಟು, ಕೊನೆಗ ತಾನು ಹಾಕಿಕೊಳ್ಳುವ ಡ್ರಾಯರನ್ನು ತನ್ನ ನೆನಪಿಗಾಗಿ ಕೆಲಸದವಳಿಗೆ ಕೊಟ್ಟು, ಸ್ನಾನದ ಕೊಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾಳೆ. 

ಇಡೀ ಕಾದಂಬರಿಯಲ್ಲಿ ಧರ್ಮ ಮತ್ತು ಮನುಷ್ಯರ ಮಧ್ಯದ ಕಿತ್ತಾಟ ಪ್ರಾರಂಭವಾಗುವುದೇ ಜೆನ್ನಿಯ ಸಾವಿನ ನಂತರ. ತಮಾರಾಳಿಗೆ ತನ್ನ ಗೆಳತಿ ಜೆನ್ನಿಯ ಅಂತ್ಯಸಂಸ್ಕಾರವನ್ನು ಅತ್ಯಂತ ಧಾರ್ಮಿಕವಾಗಿ ನೇರವೇರಿಸಬೇಕಿದೆ. ಇದು ಅಷ್ಟು ಸರಳವಲ್ಲ. ಗಣಿಕೆಯರಿಗೆ ಅಂತಹ ಅಂತ್ಯ ಸಂಸ್ಕಾರವನ್ನಿಡಲು ಧರ್ಮವಾಗಲಿ, ಪೋಲಿಸ್ ವ್ಯವಸ್ಥೆಯಾಗಲಿ ಒಪ್ಪಿಕೊಳ್ಳುವುದಿಲ್ಲ. ಚರ್ಚಿನ ೧೭೨ ನೇ ನಿಯಮ ೮ ನೇ ಪ್ಯಾರಾದ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಶಾಸ್ತ್ರೊಕ್ತ ಅಂತ್ಯಕ್ರಿಯೆ ಇಲ್ಲ. ಆದರೆ ತಮಾರ ಸೋಲೊಪ್ಪಲು ಸಿದ್ಧಳಿಲ್ಲ. ಯಾಮಾದ ಎಲ್ಲ ಗಣಿಕೆಯರು ತಮ್ಮ ತಮ್ಮ ಪಾಲಿನ ಹಣವನ್ನು ಸೇರಿಸಿ ಪೋಲಿಸ್, ಪಾದ್ರಿ, ಬ್ಯಾಂಡ್ ಮಾಸ್ಟರ್ ಹೀಗೆ ಎಲ್ಲರನ್ನು ಕೊಂಡುಕೊಳ್ಳುತ್ತಾರೆ. ಗೆಳತಿ ಜೆನ್ನಿಯ ಸೃತಿ ಚಿನ್ಹೆ ಶಾಶ್ವತವಾಗಿ ಉಳಿಯಲಿ ಎಂದು ಪ್ರಾರ್ಥಿಸಿ ಧಾರ್ಮಿಕವಾಗಿ ಅಂತ್ಯಸಂಸ್ಕಾರ ಮುಗಿಸುತ್ತಾರೆ. 

ಈ ನಂತರದ ಬೆಳವಣಿಗೆಗಳನ್ನು ಗಮನಿಸಿ, ಯಜಮಾನಿ ಅನ್ನಾ ತನ್ನ ಕೊಂಪೆಯನ್ನು ಎಮ್ಮಾಳಿಗೆ ಮಾರಿಹೊಗುತ್ತಾಳೆ. ತಮಾರಾ ಒಂದಿಷ್ಟು ಕಾಲ ಎಮ್ಮಾಳ ಮನೆಯಲ್ಲಿ ಮೇಲ್ವಿಚಾರಕಿಯಾಗಿ ಕೆಲಸ ಮಾಡಿ ಆನಂತರ ಗಿರಾಕಿಯೊಬ್ಬನನ್ನು ಕೊಂದು ಜೈಲಿಗೆ ಸೇರಿ ಅಂತ್ಯವಾಗುತ್ತಾಳೆ. ವೆರ್ಕಾ ಸಂಸಾರ ಸೇರುತ್ತಾಳೆ. ಕೊನೆಗೆ ಯಾಮಾ ನಗರಕ್ಕೆ ಬಂದ ಸೈನಿಕರ ಪಡೆಯೊಂದು ಗಣಿಕೆಯ ಕೊಂಪೆಯನ್ನು ಹೊಕ್ಕು, ಕೈಗೆ ಸಿಕ್ಕಿದ್ದನ್ನು ದೋಚಿ, ಈ ಹೆಂಗಸರ ಮೈ ಮೇಲಿನ ಬಟ್ಟೆ ಬಿಚ್ಚಿ ಬೀದಿಗೆ ನೂಕಿ, ದೊಂಬಿ ಮಾಡುತ್ತಾರೆ. ಗವರ್ನರ್ ಯಾಮಾ ನಗರದ ಗಣಿಕೆಯರ ಕೊಂಪೆಗಳನೆಲ್ಲಾ ತಕ್ಷಣ ಮುಚಿಸಿ ಆದೇಶ ಹೊರಡಿಸುತ್ತಾನೆ. ಅಳಿದುಳಿದ ಗಣಿಕೆಯರು ಈಗ ಬೀದಿಯ ಬದಿಯ ಭಿಕ್ಷುಕಿಯರಾಗಿದ್ದಾರೆ. 

ಗೊತ್ತಿರಲಿ, ಈಗ ಗಣಿಕೆಯರು ಸ್ಥಳಾಂತರಗೊಂಡಿದ್ದಾರೆ, ರೂಪಾಂತರಗೊಂಡಿದ್ದಾರೆ, ಆದರೆ ಅವರು ಶಾಶ್ವತವಾಗಿ ಅಳಿದುಹೋಗಿಲ್ಲ. ಯಾಕೆಂದರೆ ಸಭ್ಯಸ್ಥರು, ಸಂಸಾರಿಗಳು ಇರುವವರೆಗೂ ಸೂಳೆಯರು ಹುಟ್ಟುತ್ತಲೇ ಇರುತ್ತಾರೆ. 
ಭಾರತೀಯ ಸಾಹಿತ್ಯ ಲೋಕಕ್ಕೆ ಇಂತಹ ಬರಹ ಹೊಸದೇನೂ ಅಲ್ಲ, ಆದರೆ ವಿರಳ. ಹೀಗೆ ಸಾಮಾಜಿಕ ಪಲ್ಲಟಗಳಲ್ಲಿ ಪತನಗೊಂಡ ಅನೇಕ ನಗರಗಳ ಕಥೆ ಇಲ್ಲಿಯೂ ಇವೆ. ಪ್ರತಿ ಯುದ್ಧದ ನಂತರವೂ ಖಾಲಿಯಾದ ಸಾಮ್ರಾಜ್ಯಗಳಲ್ಲಿ ಇಂತಹ ಯಾಮಾ ನಗರಗಳನ್ನು ಸೆರೆ ಹಿಡಿದು ಇಡಬಹುದಾಗಿತ್ತು. ಶ್ಯಾಂ ಬೆನಗಲ್‌ರ ‘ಮಂಡಿ’ ಚಿತ್ರ ಒಂದಿಷ್ಟು ಈ ನಿರೀಕ್ಷೆಯನ್ನು ಪೂರೈಸಿದೆ. ನಿರಂಜನರ ‘ಕೊನೆಯ ಗಿರಾಕಿ’, ಅನಕೃ ಅವರ ‘ಶನಿ ಸಂತಾನ’, ಜೀವಣ್ನ ಮಸಳಿಯವರ ‘ನರಕದಲ್ಲಿ ನಂದಾದೀಪ’, ಹನುಮಂತ ಹಾಲಿಗೇರಿಯವರ ‘ಕೆಂಗುಲಾಬಿ’, ನಳಿನಿ ಜಮೀಲಾ ರ ‘ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥೆ’, ಗಳು ಇಂತಹ ಲೂಬಾ, ಜೆನ್ನಿ, ತಮಾರಾಳ ಕಥೆಗಳ ಪುನರಾವರ್ತನೆಯೇ ಆಗಿವೆ.







            (ಭಾಷಣ: ತೇಜಸ್ವಿ ಕಟ್ಟಿಮನಿ ಪ್ರಶಸ್ತಿ ಪ್ರಧಾನ ಸಮಾರಂಭ, ಬನಹಟ್ಟಿ, ದಿ ೦೭-೦೪-೨೦೧೩)


Thursday 18 April 2013

ಇವಳು ಸಾಕಿಯಲ್ಲ,ಸಖಿ


“ಸಖಿಯೆ,
ನಿನ್ನೂರಿನಲ್ಲಿ
ನಾನೊಬ್ಬನೆ
ನಿನ್ನ ಹೆಜ್ಜೆಗಳ
ಹಾದಿ ಹಿಡಿದು
ಎಲ್ಲವೂ ಬಿಟ್ಟು
ಬಂದಿದ್ದೇನೆ ಸುಮ್ಮನೆ
ದಾರಿಹೋಕನಿಗಿಂತ ಕೇಳು,
ದೊಡ್ಡ ಗೌರವವೇನೂ ಬೇಡ
ಕಪ್ಪಿಟ್ಟ ಮಲ್ಲಿಗೆಯ
ಮಾತ್ರ ಕೊಡಬೇಡ
ಹೊತ್ತು ಮುಳುಗುತ್ತಿದೆ ಹೌದು,
ನನಗಾಗಿಯೇ ದೀಪ ಹೊತ್ತಿಸಬೇಡ
ನಿನ್ನ ಕಣ್ಣಾಲೆಗಳ
ಬೆಳಕು ಮಾತ್ರ ನಂದಿಸಬೇಡ.
ಮನೆಯಿಲ್ಲದವನೊಡನೆ ಹೀಗೆ,
ಮಾತೇನು? ಎನಬೇಡ.
ಮನದೊಳಗೇ ಉಳಿದವನ
ಮನೆಗೋಡೆ ಕೆಡವಬೇಡ.
ನನಗೆ,
ಗೊತ್ತಿತ್ತು ಸಖಿಯೆ
ಶೆರೆಯ ಮಿಂದೇಳುವುದು
ಸಾವಲ್ಲವೆಂದು
ನಿಶೆಯೊಡಲ ಹಾಡುಗಳು
ಬೆಳಕಲ್ಲವೆಂದು
ಬಾ
ಬಂದಿದ್ದೇನೆ ನಾನೊಬ್ಬನೆ
ಇಂಗುತ್ತೇನೆ ಮಾತಾಗಿ
ನಿನ್ನೊಳಗೆ ಸುಮ್ಮನೆ”






ಇದು ಅವಳ ಕುರಿತು ಎಂದೋ ಬರೆದು, ಇನ್ನೆಂದೋ ಓದಿದ ಕವಿತೆ. ಕಾವ್ಯದಂತೆ ಕಮನೀಯವಾಗಿ ಬದುಕಿದವರ ಸುತ್ತ ಮಾತ್ರ ಕವಿತೆ ಸಾಧ್ಯ. ನಮ್ಮ ಬಾಳಿನ ದಾರಿಯಲ್ಲಿ ಬೆಳಕಿದ್ದವರ ಬೆನ್ನುಹತ್ತಿ ಬಹಳಷ್ಟು ಹೆಂಗಸರು ಬರುತ್ತಾರೆ. ಬಂದವರು ಮೈಯಲ್ಲಿ ಮುಳುಗಿ, ಮಾತಲ್ಲಿ ಅರಳಿ, ಮತ್ಯಾವುದೋ ವಿನಾಕಾರಣ ಕಾರಣಕ್ಕೆ ಕೆರಳಿ, ಇದುವರೆಗಿನ ಈ ಬದುಕೇ ಸುಳ್ಳು ಎನ್ನುವಂತೆ ಎಲ್ಲ ಕಿತ್ತೆಸೆದು ಹೊರಟು ಹೋಗುತ್ತಾರೆ. ಕೆಲವರು, ಕೆಲವೇ ಕೆಲವರು ಮಾತ್ರ ಹೆಳೆಯ ಹಾಡಿನಂತೆ, ಗಂಟೆಯ ರಿಂಗಣದಂತೆ, ಮಧುರ ವಾಸನೆಯಂತೆ ಅವರ ನಿಧನದ ನಂತರವೂ ಉಳಿದು ಬಿಡುತ್ತಾರೆ. ಇಂಥವರ ನೆನಪೆಂದರೆ ಹುಚ್ಚು ಹುಚ್ಚಾಗಿ ಕೆನ್ನೆ ಕಚ್ಚುವ ಕೂಸಿನ ಮಾತೇ ಅಲ್ಲವೇ? ಹೀಗೆ ನೆನಪಾಗಿ ಉಳಿದವಳು ಅವಳು.

ಅವಳ ನೆನಪು ಬಿಕ್ಕಳಿಸಿದ್ದು ಆ ದಿನದಂದು( ದಿ. ೦೬/೦೪/೨೦೧೩ ರಂದು) ತಾಳಿಕೋಟಿಯಲ್ಲಿ. ಅಂದು ಸ್ಥಳಿಯ ಕಾಲೇಜೊಂದರಲ್ಲಿ ‘ಗಾಂಧಿ ಮತ್ತು ಗೂಂಡಾ’ ನನ್ನ ನಾಟಕ ಪ್ರದರ್ಶನ. ಹಿರಿಯ ರಂಗಮಿತ್ರ ಪ್ರೊ. ಶೇಷಾಚಲ ಹವಾಲ್ದಾರ್ ನನ್ನ ನಾಟಕವನ್ನು  ರಂಗಕ್ಕಳವಡಿಸಿದ್ದರು. ಅನಿರೀಕ್ಷಿತ ಆಮಂತ್ರಣ ಅವರಿಂದ. ಇಷ್ಟು ಸಾಕಿತ್ತು ಅಲೆಮಾರಿಯ ಯಾತ್ರೆಗೆ. ಗೆಳತಿಯೊಂದಿಗೆ ಹೊರಟೇಬಿಟ್ಟೆ. ಅಲ್ಲಿ ಹೋಗುವುದರೊಳಗಾಗಿ ಎಷ್ಟೊಂದು ಪ್ರೀತಿಯ ಬಳಗ!(ಪ್ರೊ.ವೀರಭದ್ರ ಕೌದಿ, ಪ್ರೊ,ಗುರುಪಾದ ಘಿವಾರಿ, ಶಿಷ್ಯ ವಿರೇಶ್ ಬಡಿಗೇರ್ ಎಲ್ಲ ಇಲ್ಲಿಯೇ ಇದ್ದಾರೆ.) ಇಷ್ಟಾಗಿದ್ದರೆ ಮಹತ್ವದ್ದೇನೂ ಘಟಿಸುವುದಿಲ್ಲ. ನೆನಪುಗಳ ನಂಟು ಮಾತ್ರ ನಮ್ಮ ಹಳೆಯ ಗಂಟಗಳನ್ನು ಬಿಡಿಸಿಕೊಳ್ಳಲು ಕಾರಣವಾಗುತ್ತವೆ. ಅಂಥಹ ಪ್ರೀತಿಯ ಗಂಟು ಮತ್ತು ಹೃದಯದ ನಂಟು ಆ ನನ್ನ ಗೆಳತಿ.


ಇನ್ನೂ ನೆಟ್ಟಗೆ ಮೀಸೆ ಮೂಡದ ಕಾಲ. ಅವು ನನ್ನ ಪಿಯುಸಿ ದಿನಗಳು. ಹೊಸದಾಗಿ ಲುಂಗಿ ಉಟ್ಟು ನೆಟ್ಟಗೆ ನಡೆಯಲು ಹೋಗಿ ಮುಗ್ಗರಿಸುವ ಯವ್ವೌನದ ಹಂಗಾಮು. ಆ ಬಿಸಿಯುಸಿರಿನಲ್ಲಿಯೇ ಹುಡುಗಿಯರ ಹೈರಾಣಾಗಿಸಿ ಬಿಡುವ ಹುಂಬತನ. ಈಗ ನಡು ವಯಸ್ಸಿನ ಹಂಗಸರೂ ಈ ಕಾಮದ ಕಣ್ಣುಗಳಿಗೆ ಕಡುಬಣ್ಣದ ಗೆಳತಿಯರಂತೆಯೇ ಕಾಣುತ್ತಾರೆ. ಸೃಷ್ಟಿಯಲ್ಲಿ ಮುಟ್ಟಿದೆಲ್ಲವೂ ಮೈ ನೆರೆದ ಹುಡುಗಿಯಂತೆಯೇ ಮೃದುವಾಗುತ್ತದೆ. ಮಾತೆಲ್ಲವೂ ಕವಿತೆ, ಮೌನವೆನ್ನುವುದು ಕಾಡುಕಲ್ಪನೆಗಳ, ನೆನಪುಗಳ ಅವಿಶ್ರಾಂತ ಅಲೆದಾಟ. ಈಗ ಕಣ್ಣು ಖಾಲಿ ಇರುವುದಿಲ್ಲ. ತಣ್ಣಗೆಲ್ಲ ಮನಸ್ಸು, ಮುಗಿಯದ ಹಳಿಯ ಮೇಲೆ ಗೂಡ್ಸ್ ಗಾಡಿಯಂತೆ ಓದುವ ಆಲೋಚನೆಗಳಿಗೆ ಒಂದೇ ಗಂತವ್ಯವಿರುವುದಿಲ್ಲ, ಅಲ್ಲವೇ?
           

      ಅವಳು ಆಗ ಹೈಸ್ಕೂಲಿನಲ್ಲಿ ಓದುತ್ತಿದ್ದ ನೆನಪು. ಯಾವ ಕ್ಲಾಸು? ಈಗ ಸ್ಪಷ್ಟವಾಗಿ ನೆನಪಾಗುತ್ತಿಲ್ಲ. ಬೆಳ್ಳಗೆ ಹಾಲು ಬೆಳದಿಂಗಳಂಥ ಅವಳು ತನ್ನ ಗೆಳತಿಯೊಬ್ಬಳನ್ನು ಹುಡುಕಿಕೊಂಡು ನಮ್ಮ ವಠಾರಕ್ಕೆ ಬರುತ್ತಿದ್ದಳು. ಹಾಗೆ ನೋಡಿದರೆ ದುಂಡು ದುಂಡಾದ ಇಂಥ ಹುಡುಗಿಯರ ದಂಡೇ ನಮ್ಮ ವಠಾರದಲ್ಲಿತ್ತು. ಬರೀ ಇವರ ಮಾತಿನಲ್ಲಿಯೇ ದಿನಕ್ಕೆ ಮುಪ್ಪು ಬಂದು ಮುಸ್ಸಂಜೆಯ ಚಂದಿರನ ಮುಸಿ ನಗೆ ಪ್ರಾರಂಭವಾಗುತ್ತಿತ್ತು. ಎರಡು ಹೆಳಲುಗಳ ಈ ಹುಡುಗಿ ಮಾತು ಹರಡಿ ತನ್ನ ಮನೆಗೆ ಹೊರಡುವಾಗ ಮನೆಗಳೊಳಗೆ ದೀಪ ಬೆಳಗುವ ಸಮಯ.

       ಅವಳನ್ನು ನಾನು ನಿತ್ಯ ನೋಡುತ್ತಿದ್ದೆ. ನಮ್ಮ ಕಾಲೇಜು, ಅವಳ ಹೈಸ್ಕೂಲು ಒಂದೇ ಕಡೆಗೆ ಇದ್ದುದ್ದರಿಂದ ಅವಳ ಹೆಜ್ಜೆಗಳೊಳಗೆ ಹೆಜ್ಜೆ ಇರಿಸಿಕೊಂಡು ಹೋಗಲು ನಿತ್ಯ ಕಾತರಿಸುತ್ತಿದ್ದೆ. ಆಗಲೇ ನನ್ನ ಬರಹ-ಭಾಷಣಗಳ ಪರ್ವ ಪ್ರಾರಂಭವಾಗಿತ್ತು. ಸಾಮಾನ್ಯವಾಗಿ ಇವರ ಹೈಸ್ಕೂಲಿನ ಸಭಾಂಗಣದಲ್ಲಿಯೇ ನದೆಯುತ್ತಿದ್ದ ನಮ್ಮ ಕಾರ್ಯಕ್ರಮಗಳಲ್ಲಿ ಅವಳ ಉಪಸ್ಥಿತಿ ಇದ್ದೇ ಇರುತ್ತಿತ್ತು. ಸಾರ್ವಜನಿಕವಾದ ನನ್ನ ಸಾಹಸಗಳಿಗೆ ನೋಟದಲ್ಲಿಯೇ ಅವಳ ಬೆಂಬಲ ರವಾನೆಯಾಗುತ್ತಿತ್ತು. ಆದರೆ ಈ ನೋಟ,ಮೌನ ಸಮ್ಮತಿ, ಒಳಗೊಳಗೆ ಮಿಡುಕಾಟ ಸಾಕಾಗಿ ನಮ್ಮ ಪ್ರೀತಿಗೊಂದು ಫಲಿತಾಂಶ ಬೇಕಾಗಿತ್ತು. ಹಾಗಿದ್ದಾಗ ಪರೀಕ್ಷೆಗೂ ಒಳಪಡಿಸಿಕೊಳ್ಳಬೇಕಲ್ಲವೇ?

      ಒಂದು ದಿನ ಕಾಲೇಜಿಗೆ ಹೋಗುವ ಸಮಯ, ಮನೆದೇವರಿಗೆ ಹತ್ತು ಬಾರಿ ನಮಸ್ಕರಿಸಿ ಪ್ರಥಮ ಪ್ರೇಮ ಪತ್ರವನ್ನು ಈಕೆಯ ಕೈಗೆ ಕೊಟ್ಟೆ. ರಾತ್ರಿಯೆಲ್ಲಾ ನಿದ್ದೆಗೆಟ್ಟು, ಓದು-ಬರಹ ಬದಿಗಿಟ್ಟು ಬರೆದ ಈ ಪ್ರೇಮ ಪತ್ರಕ್ಕೆ ದೈವ ಸಮ್ಮತಿ ಬರಲೆಂದು ಪತ್ರ ಕೊಟ್ತ ಮರುಕ್ಷಣವೇ ನಾನು ಓಡಿದ್ದು ನೇರ ದೇವಸ್ಥಾನಕ್ಕೆ. ಯಾವುದೋ ಘೋರ ಅಪರಾಧ ಮಾಡಿದಂತೆ ಕೈ-ಕಾಲುಗಳು ಥರಗುಟ್ಟುತ್ತಿದ್ದವು. ಅದು ಭಯವೆನ್ನುವುದಕ್ಕಿಂತ ಅನೀರಿಕ್ಷಿತತೆಯ ಸುತ್ತಲಿನ ಆತಂಕ ಎಂದುಕೊಳ್ಳುವುದೇ ಸೂಕ್ತ. ಆನಂತರದ ನಾಲ್ಕು ದಿನಗಳ ಹಿಂಸೆ ಆ ದೇವರಿಗೂ ಬೇಡ. ಆಗ ಆನ್ನಿಸಿದ್ದು ಈ ಪ್ರೀತಿಯ ಸಹವಾಸವೇ ಬೇಡ.
ನನ್ನ ಪತ್ರದ ಪ್ರಹಸನಕ್ಕೆ ಮೊದಲು ತಣ್ಣಗಿನ ಗಾಳೀಯಂತೆ ನನ್ನ ವಠಾರದಲ್ಲಿ ಸುಳಿದು ಹೋಗುತ್ತಿದ್ದ ಈ ಹುಡುಗಿ ಆನಂತರ ಬರುವುದನ್ನೇ ನಿಲ್ಲಿಸಿಬಿಟ್ಟಳು. ನನ್ನ ಕಾಲೇಜಿನ ರಸ್ತೆಯಲ್ಲಿಯೂ ಅವಳ ಸುಳಿವಿಲ್ಲ. ಆ ಮಾತು, ಕಳ್ಳನೋಟ, ನಗೆ ಎಲ್ಲವೂ ನನ್ನಿಂದ ದೂರ. ಯಾಕಾದರೂ ಆ ಹಾಳು ಪ್ರೇಮ ಪತ್ರ ಕೊಟ್ಟೆ ಎಂಬ ಬೇಸರ ಮನಸ್ಸಿನಲ್ಲಿ ಮಡುಗಟ್ಟಲು ಪ್ರಾರಂಭಿಸಿತು. ಕುಳಿತು ಅಳುವುದೊಂದೇ ಬಾಕಿ. ಜೊತೆಗೆ ಮಹಾಕವಿಯೊಬ್ಬನಿಗೆ ಆದ ಅಪಮಾನದ ಭಾರ. ಆದರೆ ಇದು ಧೀರ್ಘವಾಗಿರಲಿಲ್ಲ.

        ಹೆಚ್ಚು-ಕಡಿಮೆ ನಾನು ಪತ್ರ ಕೊಟ್ಟ ಸಮಯವೇ. ಒಂದು ದಿನ ಅವಳು ನನ್ನ ಮನೆಗೇ ಬಂದು ತನ್ನ ಲಿಖಿತ ಸಮ್ಮತಿಯನ್ನು ನನ್ನ ತಂಗಿಯ ಕೈಗಿಟ್ಟು ‘ಇದೇನು ಅಕ್ಕಾ?’ ಎಂದು ಕೇಳಿದಾಗ ‘ನಿಮ್ಮ ಅಣ್ಣನಿಗೆ ಕೊಡು’ ಎಂದು ಹೇಳಿ ಒಂದು ಹೂ ಮುತ್ತ ನನ್ನ ತಂಗಿಗೆ ಕೊಟ್ಟು ಹೋಗಿದ್ದಳು. ನನ್ನ ಬದುಕಿನ ಆ ದಿನದ, ಆಕ್ಷಣದ ಖುಷಿ ಬಹುತೇಕ ಮುಂದೆ ಮತ್ತೆಲ್ಲಿಯಾದರೂ ಸಾಧ್ಯವಾದೀತೇ? ಸಂಶಯವಿದೆ ನನಗೆ.
ಹೀಗೆ ಹುಚ್ಚು ಹಾಡಾದ ಪ್ರೀತಿ. ವಾರಕ್ಕೆ ಒಂದೇ ಭೆಟ್ಟಿ, ಅದೂ ಅವಳ ಮನೆಯಲ್ಲಿಯೇ. ದೊಡ್ಡ ಪ್ರಮಾಣದ ಮಿಠಾಯಿ ವ್ಯಾಪಾರಿಗಳಾಗಿದ್ದ ಅವರ ಮನೆಗೆ ಅವರ ಮನೆಯಲ್ಲಿ ಯಾರೂ ಇಲ್ಲದಾಗ ನನ್ನನ್ನು ಬಿಟ್ಟು ಬರಲು, ನಾವು ಒಳಗಡೆ ಕೂಡಿ ಇದ್ದಾಗ ಕೂಗಿ ಹೇಳಲು ಜೊತೆಗೊಬ್ಬ ಗೆಳೆಯನೂ ಇದ್ದ. ಅವನ ಈ ಪರಿಚಾರಿಕೆಗೆ ಆತನಿಗೊಂದಿಷ್ಟು ಸ್ವೀಟ್ ಕೊಟ್ಟರೆ ಮುಗಿಯಿತು. ಮನೆಯೊಳಗೆ ಆಕೆಯ ಅಂಗೈಯೊಳಗೆ ಕೈಯಿಟ್ಟು ಒಮ್ಮೊಮ್ಮೆ ಅವಳ ಕಾಲುಗಳನ್ನೇ ದಿಂಬವಾಗಿಸಿಕೊಂಡು ಮಾತಾಡಿದ ಆ ಖುಷಿಯೇ ಅಪೂರ್ವ. ಅವಳದು ನಿರಂತರ ಮೌನ, ಮುಗುಳ್ನಗೆ. ನನ್ನದು ಮಾತು, ಮಾತು, ಮಾತು ಮತ್ತು ಮಾತು. ಹೀಗೆ ಎರಡು ವರ್ಷ ಉರುಳಿತೇ? ಎಷ್ಟೆಲ್ಲಾ ಪ್ರೀತಿ ಅನುರಾಗದ ವಿನಿಮಯವಾಯಿತು. ನಗುವಾಯಿತು. ಈಗ ಎಲ್ಲ ನೆನಪಿಲ್ಲ. ಕಾಲಕ್ಕೆ ಎಲ್ಲದರ ಅಥವಾ ಯಾವುದರ ಹಂಗೂ ಇಲ್ಲವಲ್ಲ.

       ಬೇಸಿಗೆಯ ರಜೆ ಬಂತು. ಎರಡು ತಿಂಗಳ ರಜೆಗೆ ವಾಡಿಕೆಯಂತೆ ಅಜ್ಜನ ಅಥವಾ ಸೋದರ ಮಾವನ ಊರಿಗೆ ರಜೆ ಕಳೆಯಲು ನಾವು ಹೋಗಲೇಬೇಕಾದುದು ನಮ್ಮ ಮನೆಯ ಅಲಿಖಿತ ನಿಯಮ. ಈ ಸಾರಿಯ ರಜೆಯನ್ನು ಸೋದರ ಮಾವನ ಊರಾದ ಶ್ರೀಶೈಲದಲ್ಲಿ ಕಳೆಯುವುದು ಎಂದಾಯಿತು. ತಂದೆ-ತಾಯಿಗಳೊಂದಿಗೆ ಊರಿಗೆ ಹೋಗಲು ಮನಸ್ಸಿಲ್ಲ. ಹಾಗಂತ ಅವಳನ್ನು ಬಿಟ್ಟು ಬರುವುದಿಲ್ಲ ಎನ್ನುವ ವಯಸ್ಸಲ್ಲ. ಎಲ್ಲವೂ ಕಳ್ಳದಾರಿಯಲ್ಲಿ ನಡೆದದ್ದು ತಾನೇ? ನಮ್ಮದೇನು ಸಲೀಂ-ಅನಾರ್ಕಲಿಯಂತೆ ಬಯಲಿಗೆ ಬಿದ್ದ ಕತೆಯೇ? ಅವಳನ್ನು ಊರಿಗೆ ಹೊರಡುವ ಮುಂಚೆ ಒಮ್ಮೆ ಭೆಟ್ಟಿಯಾಗಿ ಏನೋ ಹೇಳುವ ಆಸೆ. ಅವಳು ಬಿಕ್ಕಳಿಸಿ ಅಳುತ್ತಿದ್ದಳು. ನಾನೆರಡು ಮುತ್ತು ಕೊಟ್ಟೆ. ಅಂದು ನಾನವಳಿಗೆ ಹೇಳಿದ್ದು ಮಾತ್ರ ಇಂದಿಗೂ ನೆನಪಿದೆ. ಆಕೆಗೆ ನೀಡಿದ್ದ ಆ ವಚನವನ್ನು ನನಗಿಂದಿಗೂ ಮರೆಯಲಾಗಿಲ್ಲ. ಹೇಳಿದ್ದೆ, “ನಾನು ಬಹಳಾ ದೊಡ್ಡ ಮನುಷ್ಯನಾಗುತ್ತೇನೆ, ತುಂಬಾ ಪ್ರಸಿದ್ಧನಾಗುತ್ತೇನೆ. ನೀನೊಂದು ದಿನ ನನ್ನನ್ನು ಪತ್ರಿಕೆಗಳಲ್ಲಿ, ವೇದಿಕೆಗಳಲ್ಲಿ, ಮಧ್ಯಮಗಳಲ್ಲಿ ನೋಡಿ ಬೆರೆಗಾಗುತ್ತಿಯ. ನನ್ನ ಈ ಪ್ರೀತಿಯ ಬಗೆಗೆ ಅಭಿಮಾನ ಪಡುತ್ತಿಯ” ಇದು ಅವಳೊಂದಿಗಿನ ಕೊನೆಯ ಭರವಸೆಯ ನುಡಿ.

      ರಜೆ ಕಳೆದು ಊರಿಗೆ ಬರುವುದರೊಳಗಾಗಿ ಅವಳು ಅಲ್ಲಿರಲಿಲ್ಲ. ಗೆಳೆಯನಿಗೆ ಕರೆದು ಕೇಳಿದಾಗ ಅವಳು ಮದುವೆಯಾಗಿ ತಾಳಿಕೋಟಿಗೆ ಹೋದಳೆಂದು ಗೊತ್ತಾಯಿತು. ಚೆಂದುಳ್ಳ ಹುಡುಗಿಯರ ಮದುವೆ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ಹಮ್ತಕ್ಕೆ ಮುಗಿದುಬಿಡುವುದು ಉತ್ತರ ಕರ್ನಾಟಕದಲ್ಲಿ ಇಂದಿಗೂ ಸಾಮಾನ್ಯ. ಅಂದಿಗಂತೂ ಚರ್ಚೆಯ ಸಂಗತಿಯೇ ಅಲ್ಲ. ಪಿಯುಸಿ ಮುಗಿಸಿದ್ದ ನಾನು ಪದವಿ ಶಿಕ್ಷಣಕ್ಕಾಗಿ ಮುಂದಿನ ಊರಿಗೆ ಹೋಗಬೇಕಾದದ್ದು ಅನಿವಾರ್ಯವಾಗಿತ್ತು. ಊರಿಂದ ಊರಿಗೆ ನಾನು ಹೋದೆ. ಈ ವಯಸ್ಸಿನಲ್ಲಿ ನಮ್ಮ ಸುತ್ತಲಿನ ಆಗು-ಹೋಗುಗಳೆಲ್ಲ ಕುಟುಂಬ ಹಾಗೂ ಸಮಾಜ ನಿರ್ಧಾರಿತ. ಇಲ್ಲಿ ಪ್ರತಿರೋಧದ ಭಾಷೆ ಎಲ್ಲಿ ಸಾಧ್ಯ?

      ಹಾವು ಪೊರೆ ಕಳಚಿಕೊಳ್ಳುವಂತೆ, ತೆಂಗಿನ ಮರದ ಪೊಟರೆಗಳು ಉಚ್ಚಿ ಬೀಳುವಂತೆ ವರುಷಗಳ ಮೇಲೆ ವರುಷಗಳು ಉರುಳಿದವು. ಪದವಿಗಳ ಮೇಲೆ ಪದವಿಗಳು ಮುಗಿದವು. ಆದರೆ ನೆನಪಿನ ನಂಟು ಅಳಿಯಲಿಲ್ಲ. ಸಾಧನೆಯ ಬೆನ್ನು ಹತ್ತಿ ಹೋಗಿದ್ದ ನನ್ನ ಊರಿಗೆ ಅವಳು ಅದೆಷ್ಟು ಬಾರಿ ಬಂದು ಹೋಗಿದ್ದಳೋ ಗೊತ್ತಿಲ್ಲ. ಅವಳ ಆಗಮನ ನಿರ್ಗಮನದ ಕುರಿತು ಹೇಳಬೇಕಾದ ಅವಳ ಗೆಳತಿಯೂ ಈಗ ಮದುವೆಯಾಗಿ ಊರು ಖಾಲಿ ಮಾಡಿದಳು. ಸಾವಿಲ್ಲದ ನಮ್ಮೂರ ನಮ್ಮ ನೆನಪುಗಳ ಪಾಲಿಗೆ ಜಾಲಿಯ ನೆರಳಾಗಿತ್ತಷ್ಟೆ.

       ಹಾಗೆ ಹೋದ ನಾನು ಅದೆಷ್ಟೋ ವರ್ಷ ಊರಿಗೆ ಮರಳಲೇ ಇಲ್ಲ. ಸಾಧನೆಯ ದೇಗುಲದ ಸುತ್ತ ಉರುಳು ಸೇವೆ ಮಾಡುತ್ತಿದ್ದ ಮನಸ್ಸಿಗೆ ಎಂಥ ವಿಚಿತ್ರ ಮಗ್ಗಲು ಅಂತೀರಾ. ಬಹಳ ವರ್ಷಗಳ ನಂತರ ಒಮ್ಮೆ ಬದಲಾದ ನನ್ನೂರನ್ನು ಬೆರಗುಗಣ್ಣಿನಿಂದ ನೋಡುತ್ತಾ ಹೊರಟಿರಬೇಕಾದರೆ ಆಕೆ ಧುತ್ತನೆ ಎದುರಾದಳು. ನಾನು ಅದು ರಸ್ತೆ ಎನ್ನುವುದನ್ನು ಮರೆತು ಒಂದು ಕ್ಷಣ ನಿಂತುಕೊಂಡೆ. ಮನಸ್ಸು ಮುಳ್ಳುಮುಳ್ಳಾಗಿತ್ತು. ಯಾವುದೇ ತಪ್ಪು ಮಾಡಿದಂತಹ ಅಪರಾಧಿ ಭಾವ. ಹಿಂದೆ ನನ್ನೆಡೆಗೆ ನೋಡುತ್ತಾ ಮುಂದೆ ಹೋದ ಅವಳ ಬೆರಳಿಗೆ ಒಂದು ಕೂಸೂ ಇರಲಿಲ್ಲ. ಆಕೆಯ ಮೈ ಮೂಲೆ ಮೂತಿಯನ್ನು ಮಗುವಂತೆ ಹಿಡಿದಾಡಿದ್ದ ನನ್ನೊಂದಿಗೆ ಅವಳು ಅಂದು ಮಾತಾಡಲಿಲ್ಲ. ಅಂದೇ ಅಲ್ಲ, ಅಂದು ಮಾತಾಡದವಳು ಇನ್ನೆಂದೂ ಮಾತಾಡಲಿಲ್ಲ.

       ಆಮೇಲೆ ಗೊತ್ತಾಯಿತು. ಈಗವಳು ತಾಳಿಕೋಟಿ ಬಿಟ್ಟಿದ್ದಳು. ಗಂಡನೊಂದಿಗೆ ಬಂದು ತನ್ನ ತವರಿನಲ್ಲಿ ಅಂದರೆ ನಮ್ಮೂರಲ್ಲಿಯೇ ಉಳಿದುಬಿಟ್ಟಿದ್ದಳು. ಮಕ್ಕಳ ವಿವರವಿಲ್ಲ. ವಯಸ್ಸಿನ ಹದಿನಾರಕ್ಕೆ ಮದುವೆಯಾಗಿ ಹೋಗಿದ್ದ ಈಕೆಯನ್ನು ನಾನು ಈಗ ನೋಡುವಾಗ ಇಪ್ಪತ್ತೆಂಟರ ಅಕ್ಕ-ಪಕ್ಕ ಇದ್ದಳೆನೋ. ಅಂದಿಗೂ ಅವಳ ಮುಖದಲ್ಲಿಯ ಶಾಂತ, ಮಂದಹಾಸ, ನಿಧಾನದ ನಡಿಗೆ, ವಿಶಾಲ ಕಣ್ಣುಗಳ ಹೊಳಪು ಯಾವುದೂ ಕಳೆಗುಂದಿರಲಿಲ್ಲ. ದುಖಃದ ಸಂಗತಿಯೆಂದರೆ ನಾನು ಅವಳಿಗೆ ತಿಳಿಸಿದಂತೆ ದೊಡ್ಡ  ವ್ಯಕ್ತಿಯೇ ಆಗಿರಲಿಲ್ಲ.

        ಮತ್ತೆ ಹೀಗೆಯೇ ವರ್ಷಗಳ ಲೆಕ್ಕ. ನಿಷ್ಕರುಣಿ ಜೀವನಕ್ಕೆ ಕ್ರಮಿಸುವ ಹಂಬಲವಷ್ಟೇ. ಕ್ರಶರ್ ಬಾಯಿಗೆ ಸಿಕ್ಕ ಕಬ್ಬಿನಂತೆ ಕರುಳ ಕನಸುಗಳನೆಲ್ಲಾ ಕತ್ತರಿಸಿ ಎಸೆಯುತ್ತದೆ ಬದುಕು. ದೊಡ್ಡ ದೊಡ್ಡದಾಗಿ ಕಾಣಿಸಿಕೊಂಡು ನಾನು ಅವಳ ಪಾಲಿಗೆ ಏನೋ ಆಗುತ್ತೇನೆ ಎಂದುಕೊಂಡದೆಲ್ಲ ಸುಳ್ಳು ಎನ್ನಿಸಲಾರಂಭಿಸಿತು. ಹೀಗೆ ಸೋಲಿನ ದಾರಿಯಲಿ ಮುದ್ದೆಯಾದ ಮನಸ್ಸಿಗೆ ಮದುವೆ ಬಿಟ್ಟರೆ ಇನ್ಯಾವ ಗಂತವ್ಯ? ನನ್ನದೂ ಮದುವೆಯಾಯಿತು. ಹೆಂಡತಿಯೊಂದಿಗೆ ಕೈ ಹಿಡಿದುಕೊಂಡು ಅವಳ ಮನೆಯ ಮುಂದಿನಿಂದ ಹೋಗುವುದು ಹೇಗೆ ಎನ್ನುತ್ತ ಕಾರಿನಲ್ಲಿ ಹೋದೆ. ಆದರೆ ಹೋಗುವಾಗ ಅವಳ ಮನೆಯೆಡೆಗೆ ಒಂದು ಕಳ್ಳ ನೋಟ ಬೀರದೇ ಇರಲಾಗಲಿಲ್ಲ.

       ಬೇಸರದ ಸಂಗತಿ ಅವಳ ಮನೆಯ ಕದ ಮುಚ್ಚಿಕೊಂಡಿತ್ತು. ಮತ್ತೆ ದುಗುಡ, ಪ್ರಶ್ನೆ. ಏನಾಯಿತು ಎಂಬ ತವಕ. ಹೆಂಡತಿಯನ್ನು ಮನೆಗೆ ಬಿಡುತ್ತಲೇ ಮತ್ತೆ ಒಬ್ಬನೇ ಬಂದು ಕಳ್ಳನೋಟ ಬೀರುತ್ತಲೇ ಆ ಮನೆಯನ್ನು ಗಮನಿಸಿದೆ. ಕೀಲಿ ಹಾಕಿದ ಕದ, ರಂಗೋಲಿ ಇಲ್ಲದ ಅಂಗಳ. ಮನೆ ಬಳಸುತ್ತಿರುವ ಕುರುಹೇ ಇಲ್ಲ. ಆನಂತರ ವಿಷಯ ತಿಳಿಯಿತು.ನನ್ನ ಕನಸುಗಳ ಕಣ್ಣರೆಪ್ಪೆಯಿಂದ ಜಾರಿ ಹೋದ ಅವಳು ತೀರಿಹೋಗಿದ್ದಳು. ಅವಳಿಲ್ಲದ ಆ ಊರಲ್ಲಿ ಇರುವುದಕ್ಕೆ ಯಾವ ಅರ್ಥವೂ ಇಲ್ಲ ಎಂದು ಅವಳ ನೆನಪುಗಳ ಅರಸುತ್ತಾ ಗಂಡ ಮರಳಿ ಮತ್ತೆ ತನ್ನೂರಿಗೆ ಹೋಗಿದ್ದ. ಇಲ್ಲಿ ಎಲ್ಲ ಬಯಲಾಗಿತ್ತು.

    ನಾನೀಗ ದೊಡ್ಡವನಾಗಿದ್ದೇನೆ. ಕೂದಲು ನೆರೆತಿವೆ, ಸೊಂಟ ನೋವು ಪ್ರಾರಂಭವಾಗಿವೆ, ಮಕ್ಕಳಾಗಿವೆ. ಕನ್ನಡಕ ಬಂದು ನಿಂತ ನೆಲವೇ ಕಾಲ್ತೊಡಕಾಗಿದೆ. ಮಣ್ಣಲ್ಲಿ ಮಲಗಿದವಳೊಂದಿಗೆ, ಈಗ ಅವಳೂರಲ್ಲಿಯೇ ಮಾತಾಡಿಸಲು ಈ ಕವಿತೆಯೊಂದನ್ನು ಹೊರತುಪಡಿಸಿ ನನ್ನ ಬಳಿ ಎನೂ ಇಲ್ಲ.ನಾನೀಗ ದೊಡ್ಡವನಾಗಿದ್ದೇನೆ. ಯಾಕೆಂದರೆ, ಅವಳ ಕುರಿತು ನಾನೀಗ ಕವಿತೆ ಓದುವಾಗ ಕನಿಷ್ಟ ಎರಡು ಸಾವಿರ ಕಿವಿಗಳು, ಒಂದು ಸಾವಿರ ಹೃದಯ ನನ್ನೊಂದಿಗಿವೆ. ಆದರೆ ಅವಳು, ಅವಳೊಬ್ಬಳನ್ನು ಹೊರತುಪಡಿಸಿ.



Sunday 14 April 2013

ಸೋಕಿದ ಕೈಗಳ ಸುಖವ ನೆನೆದು



"ನೀನಿರಬೇಕಮ್ಮ ಬಾಗಿಲೊಳಗೆ

ಶಾಲೆ ಜೈಲಿಂದ ಹೊರ ಬಂದ

ಹೈದಗೆ ರೆಕ್ಕೆ ಮೂಡಿ, ಹಾತೊರೆದು ಬರುವವನ

ಎದೆಯೊಳಗೆ ಇಂಗಿಸಿಕೊಳ್ಳಲು

ನೀನಿರಬೇಕಮ್ಮ ಬಾಗಿಲೊಳಗೆ

ಮರೆತು ಹೋಗುವ ಸೂರ್ಯ

ಚಂದ್ರ, ನಕ್ಷತ್ರ, ಮಿಂಚು ಹುಳುಗಳ ಕರೆದು

ಮನೆಯ ಮೊಮ್ಮಗಳೊಡನೆ ಮಾತಾಡ ಹೇಳಲು"


ಇದು ಅವ್ವನನ್ನು ಕುರಿತು ನಾನೇ ಬರೆದ ದೀರ್ಘ ಕವಿತೆಯ ಆಯ್ದ ಎರಡು ಪದ್ಯಗಳಷ್ಟೆ. ಮೇಲ್ನೋಟಕ್ಕೆ ಇದು ಅಮ್ಮನನ್ನು ಕುರಿತು ಬರೆದ ಕವಿತೆಯಂತೆ ಓದಿಸಿಕೊಂಡರೂ ಅದರೊಳಗೆ ಅನಾವರಣಗೊಂಡಿರುವುದು ಮಾತ್ರ ತಾಯಿಯ ಕೈಗಳ ಸುಖ, ಶಕ್ತಿ ಮತ್ತು ಜೀವ ಸಂಚಾರ. 

ನಿಮಗೆ ಕೈಗಳ ಬಗೆಗೆ ಅದೇಷ್ಟು ಗೊತ್ತಿದೆಯೊ. ನನ್ನ ಬದುಕೆನ್ನುವುದು ಮಾತ್ರ ಈ ಕೈಗಳ ಕಥೆಯನ್ನುವುದು ಬಿಟ್ಟು ಮತ್ತೆನೂ ಅಲ್ಲ. ಹರಸುವ ಕೈ, ಹಂಬಲಿಸುವ ಕೈ, ಚಿವುಟುವ ಕೈ, ಸುಖನೀಡುವ ಕೈ, ಮೈ ಮರೆಸುವ ಕೈ, ಎತ್ತಾಡಿಸಿದ ಕೈ, ಕತ್ತು ಹಿಚುಕುವ ಕೈ, ನಮ್ಮ ಕೆತ್ತುವ ಕೈ, ಅಬ್ಬಬ್ಬಾ!!! ಎಷ್ಟೊಂದು ಭಾವಗಳು ಅಷ್ಟೊಂದು ಕೈಗಳು ಮನುಷ್ಯನಿಗೆ. ಹಾಗೆ ನೋಡಿದರೆ ಮನುಷ್ಯನ ಮೈ ಎಲ್ಲವೂ ಕೈ.

ನಾನು ಬಹಳ ಅದ್ಭುತ ಕೈಗಳ ಸುಖ ಉಂಡಿದ್ದೇನೆ. ಕೈ ತುತ್ತು ಉಂಡು ಬೆಳೆದಿದ್ದೇನೆ. ‘ಈ ಕೈಯ ಕಥೆ ಆ ಕೈಗೆ ಗೊತ್ತಾಗಬಾರದು’ ಎಂಬ ನಮ್ಮ ಜನಪದರ ಜಾಣ್ಣುಡಿಗೆ ಎಷ್ಟೊಂದು ಚಿಂತಿಸಿದ್ದೇನೆ. ‘ಅಯ್ಯೋ!! ಅದ್ಯಾವ ಘಳಿಗೆಯಲ್ಲಿ ಈ ಹಾಳು ಕೈ ಹಚ್ಚಿದೆನೋ ಕೂಸಿಗೆ ಹೀಗಾಯಿತು’ ಎಂದು ಕನವರಿಸುವ ಅವ್ವಂದಿರನ್ನು ನೋಡಿದ್ದೇನೆ. ನನ್ನ ಕೈಗೂ ಬಾ ಕೂಸೆ, ನನ್ನನ್ನು ಉದ್ದರಿಸು ಎಂದು ಕರೆದ ಶೋಡಷಿಯರು, ಕೆನ್ನೆ ರಂಗಾಗಿಸಿಕೊಂಡಿದ್ದನ್ನು ನೋಡಿದ್ದೇನೆ. ರಾಮನ ಕೈ ಹಿಡಿದು ಸೀತೆ, ಲವನ ಕೈ ಹಿಡಿದು ಕುಶ, ಸಂಜೆಯನನ್ನ ಕೈ ಹಿಡಿದು ದೃತರಾಷ್ಟ್ರ, ಕೃಷ್ಣನ ಕೈ ಹಿಡಿದು ಗೊಲ್ಲರು, ಗೋಪಿಯರು, ಗುರು ಗೋವಿಂದನ ಕೈ ಹಿಡಿದು ಶರೀಫ, ಬುದ್ಧನ ಕೈ ಹಿಡಿದು ಬಿಂದುಸಾರ, ಅಬ್ಬಾ! ಈ ದೇಶದ ಇತಿಹಾಸವೆನ್ನುವುದು ಬರೀ ಕೈಗಳ ಕಥೆಯಲ್ಲವೇ? 

ನನಗೆ ಎರಡು ಚಿತ್ರಗಳು ಹುಚ್ಚು ಹಿಡಿಸುತ್ತವೆ. ದಿನಬೆಳಗಾದರೆ ನೀವೂ ಇದನ್ನು ನೋಡುತ್ತೀರಿ, ಅನುಭವಿಸುತ್ತೀರಿ, ಬರೆಯಲಿಲ್ಲವಷ್ಟೆ. ಮೊದಲ ಚಿತ್ರ ಅವ್ವ, ಅಕ್ಕ, ಅಣ್ಣ ಗೆಳೆಯರ ಕೈ ಹಿಡಿದು ಶಾಲೆಗೆ ಹೋಗುವ ಆ ಕೂಸುಗಳನ್ನು ಕಂಡೀರಾ! ಎಂಥ ಭರವಸೆಯ ನಡಿಗೆ ಅದು. ಅದರಲ್ಲೂ ಬೆಟ್ಟದಂಥ ಅವ್ವಂದಿರ ಕೈ ಹಿಡಿದು ಪುಟಾಣಿಗಳು ಹೋಗುವುದನ್ನು ನೋಡಿದರೆ ನಿತ್ಯ ಸಾವಿರ ಕವಿತೆ ಬರೆಯಬಹುದು. ನನ್ನದೊಂದು ಕವಿತೆ ಈ ಕೈ ಮತ್ತು ಕರುಳಿನ ಸಂವಾದದ್ದೆ-

"ಈ ನೆರಳ ಸೊಬಗೇ ಸೊಬಗು

ಈ ಮರುಳು ಮತ್ತೆ ಕರುಳು

ಹುಟ್ಟಬೇಕು ಇಲ್ಲಿಯೇ ಗೋವರ್ಧನ ಬೆರಳು

ಮತ್ತೆ ಕರೆದೊಯ್ಯಬೇಕು

ಮಣ್ಣಿಗೆ, ಇದುವೆ ನಮಗೂ ನಿಮಗೂ"

ಮತ್ತೊಂದು ಚಿತ್ರ ಭಕ್ತ ಮತ್ತು ಭಗವಂತನದ್ದು. ನಮ್ಮ ಆದ್ಯರು ಎಷ್ಟೊಂದು ಪುಣ್ಯವಂತರು. ಅವರು ಭಕ್ತನ ಕೈ ಹಿಡಿದು ಬಂದು ಬಾಲಕನಾದ, ಸೇವಕನಾದ, ಸಂಗಾತಿಯಾದ ಭಗವಂತನ ಕಥೆಗಳು ಬರೆದರು. ಇದೆಲ್ಲವೂ ಈ ದೇಶದಲ್ಲಿ ಮಾತ್ರ ಸಾಧ್ಯ. ಕೆಲವೊಮ್ಮೆ ಈ ಕೈಗಳಿಗಾಗಿ ನಾನಂತೂ ಬಾಲ್ಯದಲ್ಲಿ ಗೆಳೆಯರೊಂದಿಗೆ ತುಂಬಾ ಜಗಳವಾಡಿದ್ದೇನೆ. ಹೆಗಲು ಹೆಗಲಿಗೆ ಕೈ ಹಾಕಿ ಕೂಡಿ ಶಾಲೆಗೂ, ಮನೆಗೂ ಅಷ್ಟೆ ಅಲ್ಲ ಉಚ್ಚೆಗೂ ಹೋಗುತ್ತಿದ್ದ ಆ ಚಿತ್ರಗಳು ಈಗ ಕಾಣುವುದಿಲ್ಲ ಬಿಡಿ. ನಾನಂತೂ ಹೋಗುತ್ತಾ ಹೋಗುತ್ತಲೇ ಇಬ್ಬರ ಗೆಳೆಯರ ಹೆಗಲ ಮೇಲೆ ಕೈ ಹಾಕಿ, ಕಾಲು ಸೋತಾಗ ಜೋತು ಬಿದ್ದು ರೆಸ್ಟು ತೆಗೆದುಕೊಂಡರೂ ಪಾಪ ಆ ನನ್ನ ಗೆಳೆಯರು ಒಂದಿಷ್ಟೂ ಕೋಪಿಸಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ಈ ಕೈಗಳ ಕಂತ್ರಾಟದಿಂದಾಗಿ ಜಗಳವೂ ಆಗುತ್ತಿತ್ತು. ಎತ್ತರವಾಗಿರುವ ಗೆಳೆಯರ‍್ಯಾರಾದರು ಹೆಗಲ ಮೇಲೆ ಕೈ ಹಾಕಿದರೆ ವಾಮನ ಮೂರ್ತಿಗಳಾದ ನಮಗೆ ಎಲ್ಲಿಲ್ಲದ ಸಿಟ್ಟು. ನಮ್ಮನ್ನು ಗಿಡ್ಡನನ್ನಾಗಿ ಮಾಡುವ ಸಲುವಾಗಿಯೇ ನಮ್ಮ ಹೆಗಲ ಮೇಲೆ ಕೈ ಇಡುತ್ತಾನೆ ಬೋ..ಮಗ ಎಂದು ಆಕ್ರೋಶ. ನೀವು ಗೆಳೆಯರ ಕೈ ಮೇಲೆ ಗಣಪತಿಯಾಗಿದ್ದೀರಾ?! ಕೈ ಕೈ ಕೂಡಿಸಿ ಮಳೆರಾಯನನ್ನು ಕರೆದಿದ್ದೀರಾ?! ನಾಲ್ಕು ಕೈಗಳ ಮೇಲೆ ಬಿದ್ದು ರಾಕೆಟ್ ಆಗಿದ್ದೀರಾ?! ಹಾಗೊಂದು ವೇಳೆ ಆಗಿದ್ದರೆ ನೀವು ಶ್ರೀಮಂತರಾಗಿದ್ದೀರಿ ಬಿಡಿ. 

ನಮ್ಮಪ್ಪ ನನ್ನನ್ನು ಕೂಡ್ರಿಸಿಕೊಂಡು ಈ ಕೈಗಳ ಕುರಿತು ಏನೆಲ್ಲ ಹೇಳಿದ್ದಾನೆ. ನನ್ನ ದೊಡ್ಡಪ್ಪನಂತೂ ನನ್ನ ಅಂಗಾಲು ಅಂಗೈಗಳ ದೊಡ್ಡ ಅಭಿಮಾನಿ. ನನ್ನ ದೂರದ ತಾಯಿಯೊಬ್ಬಳು ಹೇಳುತ್ತಿದ್ದಳು, ‘ಕೈ ಎತ್ತಿ ಮಾತನಾಡು’. ನಮ್ಮ ಕುವೆಂಪು ಹೇಳಿದ್ದು ಇದೆ ತಾನೆ, ‘ಕನ್ನಡಕ್ಕಾಗಿ ಕೈ ಎತ್ತು  ಕಲ್ಪವೃಕ್ಷವಾಗುವುದು, ಕಿರುಬೆರಳೆತ್ತಿದರೂ ಸಾಕು ಅದು ಗೋವರ್ಧನ ಗಿರಿ ಆಗುವುದು’. ಮನೆಯಲ್ಲಿ ಕೇಳುತ್ತಿದ್ದ ಭಜನ್‌ದ ಈ ಸಾಲು ನೋಡಿ, ‘ಖಾಲಿ ಹಾಥ ಆಯೆಗಾ ಖಾಲಿ ಹಾಥ ಜಾಯೆಗಾ.’ ಈ ಒಂದು ಸಾಲು ನನಗೆ ಅಲೆಗ್ಘಾಂಡರ್‌ನ ಕೈಯ ಕಥೆಯನ್ನು ನೆನಪಿಸುತ್ತದೆ. ಪ್ರಪಂಚವನ್ನು ಗೆಲ್ಲಲು ಹೊರಟ ಅಲೆಗ್ಘಾಂಡರ್ ಹಿಂದೂಖುಷ್ ಪರ್ವತಾವಳಿಗಳ ಅಕ್ಕ-ಪಕ್ಕದಲ್ಲೆಲ್ಲೊ ತೀರಿಕೊಂಡ. ತಾನು ಹೆಣವಾಗುವ ಮುಂಚೆ ತನ್ನ ಸೇವಕರಿಗೆ ಆತ ಒಂದು ಮಾತನ್ನು ಹೇಳಿದ್ದ, ತಾಯಿನಾಡಿಗೆ ನನ್ನ ಹೆಣವನ್ನು ಒಯ್ಯುವಾಗ ನನ್ನ ದೇಹವನ್ನೆಲ್ಲ ಮುಚ್ಚಿಡಿ ಪರವಾಗಿಲ್ಲ ಆದರೆ ನನ್ನ ಬಲಗೈಯನ್ನು ಮಾತ್ರ ಹಾಗೆಯೆ ಬಿಟ್ಟಿರಿ. ಈ ಪ್ರಪಂಚಕ್ಕೆ ಗೊತ್ತಾಗಲಿ ಜಗತ್ತನ್ನು ಗೆಲ್ಲಲು ಹೊರಟ ಅಲೆಗ್ಘಾಂಡರ್ ಹೋಗುವಾಗ ಖಾಲಿ ಕೈಯಿಂದ ಹೊರಟು ಹೋದ ಎಂದು. ಇದೊಂದು ಕಥೆಯಾದರೆ ರೈ ದಾಸನದು ಮತ್ತೊಂದು ಕಥೆ. ಆತ ದಾನ ಮಾಡುವಾಗ ತನ್ನ ಕೈಗಳೆಡೆಗೆ ನೋಡುತ್ತಿರಲಿಲ್ಲ. ಮಾಡಿದೆನ್ನೆನ್ನುವುದು ಮನದಲಿ ಹೊಳೆದು ಭಕ್ತಿಯ ಹದ ಕೆಡಬಾರದೆನ್ನುವುದು ಆತನ ಹಟ. ನಮ್ಮ ಪರಂಪರೆ ನಮ್ಮ ಕೈಗಳಿಗೆ ಬಹಳಷ್ಟು ಸಂಸ್ಕಾರ ನೀಡಿದೆ. ಮುಟ್ಟುವ ಕೈಗಳಲ್ಲಿ ಅಮೃತ ಧಾರೆಯಾಗದಿದ್ದರೆ ಹೆತ್ತ ಮಗುವನ್ನೂ ಮುಟ್ಟಬಾರದೆಂದು ಎಚ್ಚರಿಕೆ ನೀಡಿದ್ದರು ಹಿರಿಯರು. ನೀರಡಿಸಿ ಬರುವ ದಾರಿ ಹೋಕನ ಕೈಗಳಿಗೆ ಶುದ್ಧ ಮನಸ್ಸಿನಿಂದಲೇ ನೀರೆರೆಯಬೇಕೆಂದು ಹೇಳಿದ್ದಾರೆ. ಯಾರಿಗೆ ಗೊತ್ತು ಕೈ ಮುಂದೆ ಮಾಡಿಕೊಂಡು ನೀರು ಕುಡಿಯುವ ಆ ಮನುಷ್ಯ ಪಂಪನೇ ಆಗಿರಬಹುದು. ನಿಮ್ಮ ಶುದ್ಧ ಭಾವದ ಬಿಸುಪು ತಟ್ಟಿ-

"ನೆನಪಾಯಿತು ತಾಯೆ

ನನ್ನೂರು ನನಗೆ ಇಂದು

ನನ್ನನ್ನು ಕರೆಯುವರು

ಪಂಪನೆಂದು"

ಎಂದು ಹಾಡಿಬಿಡಬಹುದು.

ನಮ್ಮಪ್ಪ ನಮ್ಮೊಂದಿಗೆ ಸಿನಿಮಾಗಳನ್ನು ನೋಡಲಿಲ್ಲ. ತನ್ನ ಸಿನಿಮಾಗಳ ಮುಂದೆ ನಮ್ಮ ಸಿನಿಮಾಗಳು ಕಳಪೆ ಎನ್ನುವ ಸಾತ್ವಿಕ ಸೊಕ್ಕು ಅವನಿಗೆ. ಆದರೆ ಒಮ್ಮೆ ಮಾತ್ರ ನನ್ನನ್ನು ನನ್ನ ತಮ್ಮನ್ನನ್ನು ಅತ್ಯಂತ ಉತ್ಸುಕತೆಯಿಂದ ಊರ ಜಾತ್ರೆಯಲಿ ಬಂದಿದ್ದ ಶೋಲೆ ಸಿನಿಮಾಕೆ ಕರೆದುಕೊಂಡು ಹೋಗಿದ್ದ. ಅದರಲ್ಲಿ ನಮ್ಮಪ್ಪನಿಗೆ ಪೋಲಿಸ ಅಧಿಕಾರಿಯಾಗಿ ಸಂಜುಕುಮಾರ, ದರೋಡೆಕೊರ ಗಬ್ಬರ್ ಸಿಂಗ್‌ನನ್ನು ಬರೀ ಒಂದು ರಟ್ಟೆಯಲ್ಲಿ ಎಳೆದುಕೊಂಡು ಬರುವುದನ್ನು ತೋರಿಸಬೇಕಾಗಿತ್ತು. ‘ಎ ಹಾಥ ನಹೀ ಗಬ್ಬರ್ ಲೋಹೆಕೆ ಪಂಜಾ ಹೈ’ ಎನ್ನುವ ಡೈಲಾಗ್‌ನ್ನು ಕೇಳಿಸಬೇಕಾಗಿತ್ತು. ಕುಸ್ತಿಯಲ್ಲಿ ಕೈಗಳಲ್ಲಿ ಭಯಂಕರ ಶಕ್ತಿಯಿರಬೇಕೆನ್ನುವುದು ನಮ್ಮಪ್ಪನ ಪಾಠ. ಯೌವ್ವನಕ್ಕೆ ತಿರುಗುತ್ತಿದ್ದ ನಾನು ನಮ್ಮಪ್ಪನೊಂದಿಗೆ ಕುಸ್ತಿಯಾಡಿ ಆತನ ಕತ್ತನ್ನು ನನ್ನ ರಟ್ಟೆಯಲ್ಲಿ ಹಿಚ್ಚುಕಿದರೆ ಆ ಯಾತನೆಯಲ್ಲಿಯೂ ಎಷ್ಟೊಂದು ಖುಷಿ ಆತನಿಗೆ. 

ಈ ಕೈಗಳ ಕುರಿತು ನಾನೊಂದು ಕಥೆ ಕೇಳಿದ್ದೆ. ಅದು ಇಂಗ್ಲೀಷನದು. ಮೂಲ ಈಗ ಮರೆತಿದ್ದೆನೆ. ವರುಷಗಳವರೆಗೆ ಪ್ರೇಮಿಗಳಿಬ್ಬರು ಅಗಲಿದ್ದಾರೆ. ಪ್ರಿಯಕರ ಸೈನಿಕ. ಯುದ್ಧ ನಡೆದಿದೆ. ಆತನಿಗೆ ಹೆಂಡತಿಯ ಹಸಿವು. ಆದರೆ ಯುದ್ಧ. ಆಕೆಗೂ ಆತನ ಬರುವಿಕೆಯದೇ ಧ್ಯಾನ- 

"ನಿಮ್ಮ ಬರುವಿಕೆ ನಲ್ಲ 

ಎದೆಗೆ ಬೇವು-ಬೆಲ್ಲ"

ಎನ್ನುವುದೊಂದೆ ಆಕೆಯ ಕನವರಿಕೆ. ಅಂತು ಇಂತು ಯುದ್ಧ ನಿಂತಿತು. ಆತ ಹಂಬಲಿಸಿ ಊರಿಗೆ ಬಂದ. ಮನೆಗೆ ಬಂದರೆ, ಮನೆ ತುಂಬ ಜನಗಳು, ಆತನ ಪರಾಕ್ರಮದ ಗುಣಗಾನ, ವಿಜಯಕ್ಕೊಂದು ಅಭಿನಂದನೆ, ಅವರಿವರ ಕಣ್ಣೀರಿನ ಹೈ ಡ್ರಾಮಾ. ಊಹುಂ, ಆತನಿಗೆ ಇದಾವುದು ನೆಮ್ಮದಿ ನೀಡುತ್ತಿಲ್ಲ. ಆತ ಕೈಗಳಿಗಾಗಿ ಹುಡುಕಾಡುತ್ತಿದ್ದಾನೆ. ಅವಳು ಅಲ್ಲೆ ಇದ್ದಾಳೆ, ಸುಟ್ಟ ಬತ್ತಿಯ ಹಾಗೆ ಸುಮ್ಮನೆ. ವರುಷಗಳ ಬರ ಉಂಡ ಎದೆಗೆ ಪ್ರೀತಿಯ ಸಿಂಚನವಾಗಬೇಕಾಗಿದೆ. ಕೈಗೆ ಕೈ ಹೊಸೆದು ಅವರಿನ್ನೆಂದು ಅಗಲದಂತೆ ಬಾಚಿ ತಬ್ಬಿಕೊಳ್ಳಬೇಕಾಗಿದೆ. ಆದರೆ ಇದೆಲ್ಲವು ಸಂತೆಯಲ್ಲಿ ಸಾಧ್ಯವೆ? ಅವರಿಬ್ಬರು ಊರ ಹೊರಗಿನ ತೋಟಕ್ಕೆ ಹೋಗಬೇಕೆಂದು ನಿರ್ಧರಿಸಿಕೊಂಡರು, ಹೋಗಿಯೇ ಬಿಟ್ಟರು. 

ಆತ ಗದ್ದೆಯ ಬದುವಿನ ಮೇಲೆ ಕುಳಿತುಕೊಂಡ. ಆಕೆ ಆತನ ಮೊಳಕಾಲುಗಳ ಮೇಲೆ ಇಟ್ಟ ಕೈಗಳ ಮೇಲೆ ಮೊಗವಿಟ್ಟು ಅವನನ್ನೇ ದಿಟ್ಟಿಸಿದಳು. ಕೇಳಿದಳು, ನನ್ನನ್ನು ಪ್ರೀತಿಸುತ್ತೀರಾ?

ಆತ ಹೇಳಿದ ಇಲ್ಲ.

ಆಕೆಗೆ ದಿಗ್ಭ್ರಮೆ, ದಿಗಿಲು ಮತ್ತೆ ಪ್ರಶ್ನೆ, ಹಾಗಾದರೆ?

ಆತ ಉತ್ತರಿಸಿದ. ನಿನೊಂದು ಕವಿತೆ. ನನಗೆ ನಿನ್ನ ಹುಚ್ಚು.

ತಟ್ಟನೆ ಮೊಗ ಹೊರಳಿಸಿ, ಮೈ ಅರಳಿಸಿ, ಆತನ ಮೊಳಕಾಲಿಗೆ ಬೆನ್ನು ತಾಗಿಸಿ ದೂರದಲ್ಲಿ ದೃಷ್ಠಿ ನೆಟ್ಟು, ವಿರಹದ ಆ ಬೆಂಕಿಯೊಳಗೆ ತಾನು ಸಾಗಿ ಬಂದ ರೀತಿಯನ್ನು ಕಥೆಯಾಗಿಸಲಾರಂಭಿಸಿದಳು. ಎಲ್ಲ ಕೇಳುತ್ತ ಆತ ಆಕೆಯ ಹೆಳಲಿನಲ್ಲಿ ಕೈಯಾಡಿಸುತ್ತ, ಎರಡು ಜಡೆಗಳ ಎಳೆದು, ಹಾಗೆ ಆಕೆಯ ಕತ್ತು ಸವರಿ ಎರಡು ಜಡೆಗಳ ಒಂದಾಗಿಸುತ್ತ ಕಥೆ ಕೇಳುತ್ತಿದ್ದ. ಆಕೆಯದು ಮುಗಿಯಿತು. ಈತನ ಯುದ್ಧದ ಕಥೆ ಶುರುವಾಯಿತು. ಅವಳು ಕೇಳುತ್ತಾ ಹ್ಞೂಂಗುಟ್ಟುತ್ತಿದ್ದಳು. ಗಂಟೆಗಳವರೆಗೆ ಕಥೆ ಹೇಳುತ್ತಲೇ ಇದ್ದ. ಆತ ನೇವರಿಸುತ್ತಿದ್ದ ಕೈಗಳು ಆಕೆಯನ್ನು ಯುದ್ಧ ಭೂಮಿಗೆ ಕರೆದ್ಯೊಯ್ದಿದ್ದವು. ಎಲ್ಲ ಮರೆತು ಆ ಕೈಗಳ ನಂಬಿ ಆಕೆ ಹ್ಞೂಂಗುಟ್ಟುತ್ತಲೇ ಇದ್ದಳು. ಆತನ ಕಥೆ ಮುಗಿಯಿತು. ಆದರೆ ಹ್ಞೂಂಗುಟ್ಟುವ ಧ್ವನಿ ನಿಂತು ಹೋಗಿತ್ತು. ಅಯ್ಯೋ!! ಹಾಗಲ್ಲ, ಆಕೆಯ ಉಸಿರೇ ನಿಂತು ಹೋಗಿತ್ತು. ನೋಡುತ್ತಾನೆ, ಪ್ರೇಯಸಿ ಸತ್ತುಹೋಗಿದ್ದಾಳೆ. ಆತ ಹಾಕಿದ ಹೆಳಲು ಆಕೆಯ ಕತ್ತು ಬಿಗಿದು, ಸಾವನ್ನೇ ತಂದಿಟ್ಟಿದೆ. ಕೈ ಸುಖದಲ್ಲಿ ಮೈ ಮರೆತವಳು, ಮಸಣಕ್ಕೆ ಹೋಗಿದ್ದಾಳೆ. 

ಅಬ್ಬಬ್ಬಾ!!! ಈ ಕೈಗಳಲ್ಲಿ ಎಷ್ಟೊಂದು ಭಯಾನಕ ಸುಖವಿದೆಯಲ್ಲಾ! 

ನೀವು ಅಮೇರಿಕಾದ ಶ್ರೇಷ್ಠ ಕಾದಂಬರಿಕಾರ ಹೆಮಿಂಗ್ವೆಯ ‘ಫೇರವೆಲ್ ಟು ಆರ್ಮ್ಸ್’ ಓದಿದ್ದೀರಾ. ಅದು ಮತ್ತೇನು ಅಲ್ಲ ಸೂಳೆಯರ ಗಲ್ಲಿಯಲ್ಲಿ ಅಪರೂಪಕ್ಕೆ ಸಿಕ್ಕ ಸಂಗಾತಿಯೊಬ್ಬಳ ಆಕಸ್ಮಿಕ ಸಾವನ್ನು ಸ್ವೀಕರಿಸಲಾಗದ ಮನಸ್ಸೊಂದರ ತಳಮಳ. ಆಕೆಯ ಆ ಕೈಗಳಿಗೆ ವಿದಾಯ ಹೇಳಲು ಆತ ಒಪ್ಪುತ್ತಿಲ್ಲ. ಒಂದು ಕ್ಷಣ ಕಲ್ಪಿಸಿಕೊಳ್ಳಿ, ಅವೆಂಥ ಅದ್ಭುತ ಕೈಗಳಿರಬಹುದು! 

ನನ್ನ ಬಾಲ್ಯ ಶ್ರೀಶೈಲದಲ್ಲಿ ಕಳೆಯಿತು. ಹತ್ತಿಪ್ಪತ್ತು ಪೂಜಾರಿಯ ಮನೆಗಳನ್ನು ಬಿಟ್ಟರೆ, ಆಗ ಶ್ರೀಶೈಲ ನಿರ್ಜನ. ಮುಂಜಾನೆ ಮತ್ತು ಸಾಯಂಕಾಲ ದೇವಸ್ಥಾನದ ಸುತ್ತ ಎಲ್ಲ ನಲ್ಲಿಗಳ ಮುಂದೆ ವಿಚಿತ್ರ ವಿಚಿತ್ರವಾದ ಸನ್ಯಾಸಿಗಳು, ಸನ್ಯಾಸಿನಿಯರು, ಅಘೋರಿಗಳು ಸ್ನಾನ ಮಾಡುತ್ತಿದ್ದರು. ಅದೆಲ್ಲಿಂದ ಬಂದು ಮತ್ತೆ ಅದೇಲ್ಲಿ ಮಾಯವಾಗುತ್ತಿದ್ದರೊ. ಇದೆಲ್ಲ ಬಿಡಿ. ನಾನು ಹೇಳಬೇಕಾದುದು ಅವರು ತಮ್ಮ ಕೈಗಳಿಗೆ ಬೂದಿ ಬಳೆದುಕೊಳ್ಳುವುದನ್ನು ಕುರಿತು. ಒಬ್ಬ ಸನ್ಯಾಸಿಯಂತೂ ತನ್ನ ತಲೆಯನ್ನೂ ನೆಲಕ್ಕೆ ತಾಗಿಸದೇ ಎರಡೂ ಕೈಗಳ ಮೇಲೆ ಕಾಲು ಮೇಲೆ ಮಾಡಿ ನಿಂತು ಬಿಡುತ್ತಿದ್ದ. ಸಾಯಂಕಾಲವಾಗುತ್ತಲೇ ಆ ಮಂದ ಕತ್ತಲೆಯಲ್ಲಿ ತಾಯಿ ಕಾರುಣ್ಯದ ಒಬ್ಬ ಸನ್ಯಾಸಿ ಬರುತ್ತಿದ್ದ. ಆತನ ಕೈಯಲ್ಲಿ ಒಂದು ಬಿಕ್ಷಾ ಪಾತ್ರೆ, ದೊಡ್ಡದೊಂದು ವಿಭೂತಿ ಉಂಡೆ ಬಿಟ್ಟರೆ ಮತ್ತೇನೂ ಇರುತ್ತಿರಲಿಲ್ಲ. ಅಂದಹಾಗೆ ಅವನನ್ನು ನಾವೆಲ್ಲ ವಿಭೂತಿ ಮುತ್ಯಾ ಅಂತಲೆ ಕರೆಯುತ್ತಿದ್ದೇವು. ಆತನ ಮುಖ ಸ್ಪಷ್ಟವಾಗಿ ನೆನಪಿಲ್ಲ ನನಗೆ. ಆದರೆ ಅವನ ಆ ಕೈಗಳನ್ನು ಮರೆಯುವುದಾಗಿಲ್ಲ. ನಾವು ಹಾಕುವ ಬಿಕ್ಷೆಯನ್ನು ಮುಗುಳ್ನಗುತ್ತಾ ಪ್ರೀತಿಯಿಂದ ಸ್ವೀಕರಿಸಿ, ತನ್ನ ಮೂರು ಬೆರಳಿಗೂ ವಿಭೂತಿಯನ್ನು ಸವರಿ ನಮ್ಮ ಹಣೆಗಿಟ್ಟು ನೆತ್ತಿಯಿಂದ ಬೆನ್ನಿನವರೆಗೂ ಕೈಯಾಡಿಸಿದರೆ ಅಬ್ಬಾ! ಎಂಥ ಸುಖವೆನಿಸುತ್ತಿತ್ತು. ಅದ್ಯಾವುದೋ ಶಕ್ತಿ ಸಾಗರ ನಮ್ಮ ಮೈಯೊಳಗೆ ಧುಮಿಕ್ಕಿ ಹರಿದಂತೆ ಭಾಸವಾಗುತ್ತಿತ್ತು. ಅಂಥ ತಾಕತ್ತಿನ ಕೈ, ಈ ನನ್ನ ತಲೆಯ ಮೇಲೆ ಅದ್ಯಾವ ಸನ್ಯಾಸಿಯೂ ಇಡಲಿಲ್ಲ.

ನಾನು ಚಿಕ್ಕವನಿದ್ದೆ. ಯಾರದೋ ಮದುವೆಗೆ ಹೊರಟಿದ್ದೇವು. ದನಗಳನ್ನು ತುಂಬುವ ಟ್ರಕ್ಕಿನಲ್ಲಿ ಮನುಷ್ಯರನ್ನು ಕೂಡ್ರಿಸಿ ಮೇಲೆ ಹೊದಿಸಿ, ಪೋಲಿಸರ ಕಣ್ ತಪ್ಪಿಸಿ, ದಿಬ್ಬಣಕ್ಕೆ ಹೋಗುವುದು ಆಗ ಸಾಮಾನ್ಯ. ನನಗೆ ಸ್ವಲ್ಪ ನಿದ್ರೆಯ ಮಂಪರು. ಯಾರೋ ಎಳೆದು ತೊಡೆಯ ಮೇಲೆ ಹಾಕಿಕೊಂಡತಾಯಿತು. ನಾನು ಮಲಗಿದೆ. ಆ ತಾಯಿ ನನ್ನ ತಲೆ ಸವರುತ್ತಲೇ ಇದ್ದಳು. ಅದೆಷ್ಟು ಗಂಟೆ ಹಾಗೆ ನಡೆಯಿತೋ. ನಸುಕಿನ ಜಾವ ನಾನೆದ್ದು ನೋಡಿದರೆ, ಅವಳಿರಲಿಲ್ಲ. ಆದರೆ ಇಂದಿಗೂ ಆಕೆಯ ಆ ಕೈ ಅನುಭವವನ್ನು ನನಗೆ ಮರೆಯುವದಾಗಿಲ್ಲ. ನಮ್ಮೂರಲ್ಲೊಂದು ಅಜ್ಜಿ ಇತ್ತು. ಅಯ್ಯೋ, ನನ್ನ ಪಾಲಿಗಂತೂ ಅಜ್ಜಿಯರ ದೊಡ್ಡ ದಂಡೇ ಇತ್ತು. ಒಬ್ಬ ಅಜ್ಜಿಗೆ ಆರು ಬೆರಳುಗಳ ಒಂದು ಕೈ ಇತ್ತು. ಮುಪ್ಪಾದಂತೆ ಸೊಟ್ಟಾದ ತನ್ನ ಕೈಯಿಂದ ನಮ್ಮ ಬಾಯಿ ಒರೆಸುವಾಗ, ನನ್ನ ಕಣ್ಣು ಆ ಆರನೆಯ ಬೆರಳಿನ ಮೇಲೆ ಇರುತ್ತಿತ್ತು. ಅದೆಂಥ ನೆರಳಿನ ಕೈ ಎನ್ನುತ್ತೀರಿ, ಈಗಲೂ ನನ್ನ ಮೈತುಂಬಾ ಮಾತನಾಡುತ್ತದೆ. ಇಂಥ ಕೆಲವು ಕೈಗಳು ಕೊನೆಯುಸಿರೆಳೆದಾಗ ನಾನು ಬಹಳ ನೊಂದಿದ್ದೇನೆ. ಹೆಚ್ಚು ಕಡಿಮೆ ಊರ ಎಲ್ಲ ಹುಡುಗಿಯರ ಹೆರಿಗೆಯನ್ನು ತನ್ನ ಕೈಯಿಂದಲೇ ಮಾಡಿ, ಪ್ರತಿ ಕೂಸಿಗೂ ಹಚ್ಚಡ ಹೊದಿಸಿದ ಅಜ್ಜಿಯಂದಿರ ಕೈಗೆ ಶುಗರ್ ಆಗಿ ಕತ್ತರಿಸಬೇಕಾದ ಸಂದರ್ಭ ಬಂದಾಗ ಆಕಾಶವೇ ಕಳಚಿಬಿದ್ದ ಕಷ್ಟ ಅನುಭವಿಸಿದ್ದೇನೆ. ಈ ಪ್ರಪಂಚದಲ್ಲಿ ಏನಾದರೂ ಆಗಲಿ ಇಂಥ ಕೈಗಳಿಗೆ ರೋಗ ಬರಬಾರದು ದೇವರೇ! ಮದರ್ ಥೇರೆಸಾ ಅವರ ಕೈಗಳ ಬಗ್ಗೆ ನಾನು ಎಷ್ಟೊಂದು ಓದಿದ್ದೇನೆ. ಇಡೀ ಪ್ರಪಂಚವನ್ನೇ ಎತ್ತುವ ಶಕ್ತಿ ಆ ಕೈಗಳಿಗೆ. 

ಈಗ ಕಾಲ ಬದಲಾಗಿದೆ. ಮೇಹೆಫಿಲ್‌ಗಳು ಸತ್ತು ಹೋಗಿವೆ. ಅದರೊಂದಿಗೆ ಕೈಗಳೂ ಸತ್ತು ಹೋಗಿವೆ. ನಮ್ಮ ಮೇಹೆಫಿಲ್ ಇತಿಹಾಸದ ಸೂಳೆಯರ ಕೈಗಳು ನಮ್ಮ ಮಧ್ಯದ ಸಂತ, ರಾಜಕಾರಣಿ, ಚಿಂತಕನಿಗಿಂತಲೂ ಅರ್ಥಪೂರ್ಣ ಕೆಲಸಗಳನ್ನು ಮಾಡಿವೆ. ರಸವತ್ತಾದದ್ದನ್ನು ಕಟ್ಟಿಕೊಟ್ಟಿವೆ. ಬದುಕನ್ನು ಜೀವಂತವಾಗಿಟ್ಟಿವೆ. ಗಾಲಿಬ್, ಖಯಾಮ್, ಹಾಲಿ, ಹರೀವಂಶರಾಯ್, ನೆಪಕ್ಕಾಗಿ ಕೆಲವು ಹೆಸರುಗಳು ಮಾತ್ರ. ಆದರೆ ಇಡೀ ಕಾವ್ಯವನ್ನು ಕಟ್ಟಿಕೊಟ್ಟದ್ದೆ, ನಮ್ಮೊಳಗೊಂದು ವಿದ್ರೋಹದ ಬೆಂಕಿಯನ್ನು ಹೊತ್ತಿಸಿದ್ದೇ, ನಮ್ಮ ಗ್ಲಾಸುಗಳಿಗೆ ಸೇರೆಯನ್ನು ಸುರಿಯುತ್ತ ಪ್ರಪಂಚವನ್ನು ಇಂಚು ಇಂಚಾಗಿ ಅನುಭವಿಸುವ ಪಾಠ ಕಲಿಸಿದ್ದೇ ಈ ಸಾಕಿಯರ ಕೈಗಳು. ಏನಾದರೂ ಸರಿ, ಈ ಕೈಗಳು ಮಾತ್ರ ಸಾಯಬಾರದು. 

ನನಗಂತೂ ಹೀಗನ್ನಿಸಿದೆ. ನನ್ನ ಮಕ್ಕಳಿಗೆ ನಾನೇನನ್ನೂ ಕೊಡಲಾಗದಿದ್ದರೂ ಚಿಂತೆ ಇಲ್ಲ. ಇಂಥ ಕೈಗಳ ಆಸರೆ ಮಾತ್ರ ತಪ್ಪಿಸಬಾರದು. ಒಂದೊಂದು ಕೈಗೂ ಸಾವಿರ ವರ್ಷದ ತಪಸ್ಸಿದೆ. ಈ ದೇಶದ ಮಂದಿರ, ಮಸೀದಿ, ಇಗರ್ಜಿ, ಚರ್ಚು, ಸಮಾಧಿಗಳಲ್ಲಿ ಮತ್ತು ಅವುಗಳ ಮುಂದೆ ನಿಂತ ಕೈಗಳಿಗೆ ತಲೆಬಾಗಿ ಕೈ ಸಾವರಿಸಿಕೊಂಡು ಒಂದಿಷ್ಟು ಮಣ್ಣು ಹಣೆಗೆ ಒತ್ತಿಕೊಂಡರೂ ಸಾಕು, ನನ್ನ ಸಂತಾನ ದೇಶದ್ರೋಹಕ್ಕೆ ಸಾಕ್ಷಿಯಾಗುವುದಿಲ್ಲ. ಕರುಣಾಳು ಕೈಗಳು ನಡೆಯಿಸುವ ರೀತಿಯೇ ಅದು. ಈ ಬದುಕಿನಲ್ಲಿ ಕೈ ತೊಳೆಯುವುದು ಅನಿವಾರ್ಯ, ಆದರೆ ಕೈ ತೊಡೆಯುವುದು ತುಂಬಲಾರದ ಹಾನಿ.