Tuesday 23 April 2013

ಮಕ್ಕಳು, ಸೂಳೆಯರು ಮತ್ತು ಸುಳ್ಳು


                      (ಅಲೆಕ್ಸಾಂಡರ್ ಕುಪ್ರಿನ್‌ನ ‘ಯಮಾ ದಿ ಪಿಟ್’ ಕಾದಂಬರಿಯ ಸುತ್ತ)

"ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ
ಹಿಡಿದಡೆ ಬತ್ತಲೇ ನಿಲಿಸಿ ಕೊಲುವರಯ್ಯ
ವೃತಹೀನನರಿದು ಬೆರೆದಡೆ
ಕಾದಕತ್ತಿಯಲ್ಲಿ ಕೈ, ಕಿವಿ, ಮೂಗ ಕೊಯ್ವರಯ್ಯ
   ಒಲ್ಲೆನೊಲ್ಲೆ ಒಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ"
                                -ಸೂಳೆ ಸಂಕವ್ವೆ






 ಸೂಳೆ ಸಂಕವ್ವೆಯ ವೃತ್ತಿ ನಿಯತ್ತಿನ ಈ ವಚನದ ವ್ಯಾಪ್ತಿಯಲ್ಲಿ ಶ್ರೇಷ್ಟ ರಶ್ಯಿಯನ್ ಕಾದಂಬರಿಕಾರ  ಅಲೆಕ್ಸಾಂಡರ್ ಕುಪ್ರಿನ್‌ (Alexander Kuprin)ನ ‘ಯಮಾ ದಿ ಪಿಟ್’(Yama The Peet) ಕಾದಂಬರಿಯನ್ನು ಗ್ರಹಿಸಿಕೊಳ್ಳಲು ಸಾಧ್ಯ ಎಂದು ನನ್ನ ವಾದ. ಸಂಕವ್ವೆ ಮಾತನಾಡುವುದು ನಿಯತ್ತನ್ನು ಕುರಿತು. ಕುಪ್ರಿನ್ ಸರಿ ಸುಮಾರು ೪೦೦ ಪುಟಗಳ ತನ್ನ ಕಾದಂಬರಿಯಲ್ಲಿ ಚರ್ಚಿಸುವುದು ಕೂಡಾ ಇದೇ ಮನುಷ್ಯ ನಿಯತ್ತಿನ ವಿಷಯವನ್ನು. ಆತ ವಾದಿಸುವಂತೆ “ಪ್ರಪಂಚದ ಅತ್ಯಂತ ಮುಗ್ಧ ಮತ್ತು ನಿಯತ್ತಿನ ಜೀವಿಗಳೆಂದರೆ ಮಕ್ಕಳು ಮತ್ತು ಸೂಳೆಯರು. ಅವರ ಸುಳ್ಳಿಗೊಂದು ಸಾತ್ವಿಕತೆ ಇದೆ , ಸೌಂದರ್ಯವಿದೆ” ಎಂದು. ೨೦ ನೇ ಶತಮಾನದ ಆದಿ ಭಾಗದಲ್ಲಿ ರಚನೆಯಾದ  ಈ ಕಾದಂಬರಿಯಲ್ಲಿಯ ಈ ಸಾಲುಗಳನ್ನು ನೀವು ಗಮನಿಸಬೇಕು, “ ಪ್ರಪಂಚದಲ್ಲಿ ಸುಳ್ಳುಗಳು ಹೇಳೋರಂದ್ರೆ ಎಳೆಯ ಮಕ್ಕಳೆಂಬುದು ನಿಮಗೆ ಗೊತ್ತು. ಅವರ ತರಹ ಸಿಹಿಯಾಗಿ, ಚಮತ್ಕಾರವಾಗಿ ಸುಳ್ಳು ಹೇಳೋರು ಮತ್ಯಾರು ಇರೊಲ್ಲ. ಆದರೆ ಮುಗ್ಧ ಮಕ್ಕಳಲ್ಲಿರುವ ನಿಷ್ಠೆ, ನಿಷ್ಕಪಟತೆ ಈ ಜಗತ್ತಿನಲ್ಲಿ ಬೆರೆಯಲ್ಲಿಯಾದ್ರೂ ಇದೆಯೇ? ಹಾಗೇ ವೇಶ್ಯೆಯರೂ ಕೂಡ ! ಈ ವಿಷಯದಲ್ಲಿ ಎಳೆಯ ಮಕ್ಕಳಿಗೂ, ಗಣಿಕೆಯರಿಗೂ ಯಾವ ವ್ಯತ್ಯಾಸವೂ ಇರೊಲ್ಲ. ಇಬ್ಬರೂ ಒಂದೇ! ಇವರ ಸುಳ್ಳುಗಳಲ್ಲಿ ಅಂದವಾದ ನೀತಿ, ನಿಷ್ಠೆ, ಅಮಾಯಕತೆ, ಅವ್ಯಾಜ್ಯ ಪ್ರೀತಿ ಕಾಣಿಸುತ್ತದೆ. ಇವರ ಸುಳ್ಳಿನಲ್ಲಿ ನಿಜವಿದೆ. ಇವರ ಸುಳ್ಳಿನಲ್ಲಿ ಅಂದ, ಆನಂದ ಇವೆ. ಮತ್ತೊಂದು ವಿಷಯ, ನಮ್ಮೊಂದಿಗೆ ಇವರು ಅಸತ್ಯ ಮಾತಾಡುತ್ತಾರೆ. ಅವರು ತಮಗೆ ತಾವು ಸತ್ತರೂ ಸುಳ್ಳು ಹೇಳಿಕೊಳ್ಳುವುದಿಲ್ಲ. ಇನ್ನು ನಾವಿದ್ದೀವಿ ನೋಡಿ, ನಮ್ಮ ಜೀವನವೇ ಒಂದು ಸುಳ್ಳು. ನಿತ್ಯವೂ ಸುಳ್ಳುಗಳಿಂದ ಒಬ್ಬರನೊಬ್ಬರು ಮೋಸಮಾಡ್ಕೊಂಡು, ನೀಚವಾಗಿ, ಕೃತ್ರಿಮವಾಗಿ ದ್ರೋಹ ಮಾಡ್ಕೋತೀವಿ. ಅಸಲಿಗೆ ಅವರು ಸುಳ್ಳು ಯಾಕೆ ಹೇಳ್ತಾರೆ ಅಂದ್ಕೊಂಡಿದ್ದೀರಿ? ನಮಗಾಗಿ, ನಾವು ಹಾಗೆ ಇರ್ಬೇಕು ಅಂತ ಬಯಸ್ತೀವಿ ಅದ್ರಿಂದ. ಸುಳ್ಳು ಹೇಳು ಅಂತ ನಾವೇ ಪ್ರೋತ್ಸಾಹಿಸ್ತೀವಿ, ಒತ್ತಡ ಹೇರ್ತಿವಿ”. ಇದು ಈ ಕಾದಂಬರಿಯ ವೈಶಿಷ್ಠತೆ. ಇಲ್ಲಿ ಅಸಹಜವಾದುದು ಎನ್ನಿಸುವ ಆದರೆ ಸತ್ಯವಾಗಿರುವ ಸಂಗತಿಗಳು ಸಹಜತೆಯ ಮೂಲಕ ಸ್ಥಾಪನೆಗೊಳ್ಳುತ್ತವೆ. 

ಶ್ರೀ ಟಿ.ಡಿ. ರಾಜಣ್ಣ ತಗ್ಗಿಯವರು ತೆಲುಗಿನ ‘ಯಮಕೂಪಂ’ ಮೂಲಕ ಕನ್ನಡಕ್ಕೆ ‘ಕಾಮಕೂಪ’ವಾಗಿ ಭಾಷಾಂತರಗೊಂಡಿರುವ ದೇಸಿ ಪುಸ್ತಕ  ಪ್ರಕಾಶನ ಪ್ರಕಟಿಸಿರುವ, ೨೦೧೨ ನೇ ಸಾಲಿನ ‘ಪ್ರೊ. ತೇಜಸ್ವಿ ಕಟ್ಟಿಮನಿ ಸಾಹಿತ್ಯ ಪ್ರಶಸ್ತಿ’ಗೆ ಭಾಜನವಾಗಿರುವ ಅಲೆಕ್ಸಾಂಡರ್ ಕುಪ್ರಿನ್‌ನ ಈ ಕಾದಂಬರಿ ಕಟ್ಟಿಕೊಡುವ ರಶ್ಯಾ ದೇಶದ ವೇಶ್ಯಾ ಜಗತ್ತಿನ ನೈಜ ಚಿತ್ರಣದಿಂದಾಗಿ ಆತ ಟಾಲಸ್ಟಾಯ್, ದಾಸ್ತೊವಸ್ಕಿ, ಗಾರ್ಕಿಯಂತಹ ಲೇಖಕರ ಸಾಲಿಗೆ ಸೇರುತ್ತಾನೆ. ‘ಸ್ವಂತ ಆಸ್ತಿಗಳು ಇರುವವರೆಗೂ ದಾರಿದ್ರ್ಯ ಕೂಡಾ ಇರುತ್ತೆ. ಹಾಗೆಯೇ ವೈವಾಹಿಕ ವ್ಯವಸ್ಥೆ ಇರುವವರೆಗೂ ವ್ಯಭಿಚಾರ ಕೂಡಾ ಇರುತ್ತೆ’ ಎಂದು ಸಾರುವ ಕುಪ್ರಿನ್  ಮನುಷ್ಯರ ಮನಸ್ಸಿನಲ್ಲಿಯ ಕೆಲವು ಕತ್ತಲೆ ಮೂಲೆಗಳಲ್ಲಿರುವ, ಬೂಸ್ಟ್ ಹತ್ತಿ ವಿಕಾರಗೊಂಡಿರುವ ಸತ್ಯವನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾನೆ. ಈ ಕ್ಷಣದಲ್ಲಿ ನನಗೆ ಷೇಕ್ಸ್‌ಪಿಯರ್‌ನ ಲೇಡಿ ಮ್ಯಾಕ್‌ಬತ್ ನೆನಪಾಗುತ್ತಾಳೆ. ಮತಿ ಭ್ರಮಣದ ಆ ಹಂತದಲ್ಲೂ ಅವಳು ಒಂದು ಸತ್ಯವನ್ನು ಹೇಳಿದ್ದಾಳೆ. ‘ ಕಣ್ಣೀರಿನಲ್ಲಿ ಮಿಂದು ಹೋದ ಕಿವಿಗಳಿಲ್ಲದ, ಹೇಳಲು ಬಾಯಿಲ್ಲದ ತಲೆದಿಂಬುಗಳಿಗೆ ಮಾತ್ರ ಮನುಷ್ಯನ ಮನಸ್ಸಿನ ರಹಸ್ಯಗಳನ್ನು ಬಿಚ್ಚಿಡುವ ಶಕ್ತಿ ಇದೆ’ ಎಂದು. ಈ ಬದುಕಿನ ದುರ್ವಿಧಿಯೇ ಇದು. ಅಂತಹ ಸತ್ಯ ಪ್ರಕಟಗೊಳ್ಳುವ ಯಾವ ಸಾಧ್ಯತೆಗಳೂ ಇಲ್ಲ. ಒಂದು ವೇಳೆ ಪ್ರಕಟಗೊಂಡರೆ ಸಹಿಸಿಕೊಳ್ಳುವ ಶಕ್ತಿಯಾದರೂ ಸಮಾಜಕ್ಕಿದೆಯೇ? ಇದೂ ಯಕ್ಷ ಪ್ರಶ್ನೆ. ಅಂತೆಯೇ ಸಾಕ್ರಟಿಸ್ ಹೇಳಿದ, ‘ಸಹಾಯವಿಲ್ಲದ ಸತ್ಯಕ್ಕೆ ಲೋಕ ವ್ಯವಹಾರದಲ್ಲಿ ಯಾವ ಅಸ್ತಿತ್ವವೂ ಇಲ್ಲ’. 


ಕುಪ್ರಿನ್‌ನ ಈ ಕಾದಂಬರಿ ರಷ್ಯಾದ ಯಾಮಾ ನಗರದ ಸೂಳೆಯರ ಕೊಂಪೆಗಳ ದಾರುಣ ಕಥೆ. ಇಲ್ಲಿಗೆ ಅರ್ಧಗಂಟೆ, ಗಂಟೆ, ದಿನಗಳ ಲೆಕ್ಕಕ್ಕೆ ಬರುವ ಪುರುಷರಿಗೆ ಮೈ ತುಂಬ ತೆವಲುಗಳು. ತಲೆತಲಾಂತರದಿಂದ ಇದೇ ವೃತ್ತಿಯಲ್ಲಿ ತೊಡಗಿರುವ ಇಲ್ಲಿಯ ಅನೇಕ ಸೂಳೆಯರಿಗೆ ಮೈ ತುಂಬಾ ರೋಗಗಳು. ಆರಂಭಕ್ಕೆ ಈ ಹಾಳು ಕೊಂಪೆಯಲ್ಲಿ ಹೇಗೆ ಬಾಳೊದು? ಇಲ್ಲಿ ಬರುವ ಮುದುಕ, ರೋಗಗ್ರಸ್ಥ, ವಿಕೃತ, ಅಮಾನವೀಯ ಪುರುಷರನ್ನು ಹೇಗೆ ಸಂಭಾಳಿಸೋದು? ಎಂದು ಕೇಳಿಕೊಳ್ಳುವ ಸಾಲು ಸಾಲು ಸೂಳೆಯರು ಆನಂತರ ಇದೇ ವೃತ್ತಿಯಲ್ಲಿ ಸುಟ್ಟು ಸಾಯುವ ಚಿಟ್ಟೆಗಳಾಗುತ್ತಾರೆ. ಒಂದು ತಿಂಗಳಿಗೆ ೫೦೦ ರೊಬೆಲ್ಸ್‌ಗಾಗಿ ಐಹಿಕತೆಯನ್ನು ಮಾರಿ ಆಧ್ಯಾತ್ಮಿಕತೆಯ ಸಣ್ಣ ಸೆಳಕ ಸಿಗದೆ ಸತ್ತು ಹೋಗುವ ಇವರು ಎಲ್ಲ ಕಾಲಕ್ಕೂ ನಿತ್ಯ ಮುತ್ತೈದೆಯರು. ಕಾದಂಬರಿಯ ಕೊನೆಯಲ್ಲಿ ಮತ್ತೆ ಇದೇ ವೃತ್ತಿಗೆ ವ್ಯವ್ಯಸ್ಥಿತವಾಗಿ ಸಿಕ್ಕಿ ಹಾಕಿಕೊಳ್ಳುವ ಪಾತ್ರವೊಂದು ಹೇಳುವಂತೆ, “ ಪ್ರಪಂಚ ತುಂಬಾ ಸುಂದರವಾದುದು. ನಾವು ಮಾತ್ರವೇ, ಕೇವಲ ನಾವು ಮಾತ್ರವೇ ಪತಿತೆಯರಾಗಿ, ಭ್ರಷ್ಟರಾಗಿ, ರಂಡೆಯರಾಗಿ, ರಸ್ತೆಯ ಪಕ್ಕಕ್ಕೆ ತಳ್ಳಲ್ಪಟ್ಟ ತಿಪ್ಪೆಯ ಕಸದಂತೆ ಇಲ್ಲಿ ಬಿದ್ದಿದ್ದೇವೆ”. ಆದ್ಯಾಗೂ ಅವರ ಪಾಲಿಗೆ ಅವರ ಈ ಶೃಂಗಾರಪುರ ಯಾಮಾ ಹೊರಗಿನ ಲೋಕದಷ್ಟು ಸುಳ್ಳು ಮತ್ತು ಕೃತ್ರಿಮ ಅಲ್ಲ. ಅಲ್ಲಿ ಬರುವ ಮಿಲಿಟರಿಯವರಿಗಾಗಿ, ವಿಧ್ಯಾರ್ಥಿ, ಪಾದ್ರಿಗಳಿಗಾಗಿ, ಗುಮಾಸ್ತ, ಗರ್ಭಿಣಿ ಹೆಂಡಂದಿರ ಗಂಡಂದಿರಿಗಾಗಿ, ವಿಧುರನಿಗಾಗಿ ಅವರು ಥಳ ಥಳ ಹೊಳೆಯುವ ಮೇಕಪ್ ಮಾಡಿಕೊಳ್ಳುತ್ತಾರೆ. ಆರಂಭದಲ್ಲಿ ಇಷ್ಟಕ್ಕಾಗಿಯೇ ಹೊಗುವ ಗಿರಾಕಿ ಮಾತ್ರ ಮತ್ತಿನಷ್ಟಕ್ಕಾಗಿ ಹಾತೊರೆಯುತ್ತಾನೆ. ಅವರಿಂದ ಪ್ರೀತಿ ಬೇಕು ಅಂತಾನೆ. ಆಗ ಸೂಳೆ ಆತ್ಮವಂಚನೆಯೊಂದಿಗೆ ಸುಳ್ಳಿನ ಹಾವ-ಭಾವಗಳಲ್ಲಿ ಮಾತುಗಳಲ್ಲಿ ಚೇಷ್ಟೆ, ನಿಟ್ಟುಸಿರುಗಳಲ್ಲಿ ಇನ್ನಿಲ್ಲದ ಪ್ರೇಮವನ್ನು ಸುರಿಯುತ್ತಾಳೆ. ರಾತ್ರಿಯೊಂದಕ್ಕೆ ಕೊಡುವ ೫ ರೊಬೆಲ್‌ಗಳಿಗಾಗಿ ಅವಳ ಜನ್ಮ ಜಾಲಾಡುತ್ತಾನೆ. ಆತ ಕೇಳುವ ಎಲ್ಲ ನೀಚ ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸುತ್ತಾನೆ. ಈ ಸಂದರ್ಭದಲ್ಲಿ ಕಾದಂಬರಿಯಲ್ಲಿ ಇಡೀ ಸಮಾಜಕ್ಕೆ ಸೂಳೆಯೊಬ್ಬಳು ಕೇಳುವ ಪ್ರಶ್ನೆಯನ್ನು ಗಮನಿಸಬೇಕು, “ ಈ ಪ್ರಶ್ನೆಗಳನ್ನು ಕೇಳೋದಕ್ಕೆ ಅವನಿಗೇನು ಹಕ್ಕಿದೆ ಹೇಳಿ? ಪಾಪ! ಅವಳು ಅವನ ಬಗ್ಗೆ ಏನೂ ಕೇಳೋದಿಲ್ಲ. ಅವನ ತಂಗಿಯ ಬಗ್ಗೆ, ತಾಯಿ ಬಗ್ಗೆ, ಹೆಂಡತಿ ಬಗ್ಗೆ ಅವನ ಶೀಲದ ಬಗ್ಗೆ ಏನೂ ಕೇಳೊದಿಲ್ಲ. ಹಾಗಿದ್ದಾಗ ಅವನಿಗ್ಯಾಕೆ ಬೇಕು ಅವಳ ವೈಯಕ್ತಿಕ ವಿಷಯ? ಯಾಕಂದ್ರೆ ಅವನು ದುಡ್ಡು ಕೊಡ್ತಾನಲ್ಲ? ಹೌದು, ಪೋಲಿಸರು, ಸರ್ಕಾರ, ಡಾಕ್ಟರ್, ಸಮಾಜ ಎಲ್ಲವೂ ಅವನ ಹಿಂದೆ ಬೆಂಬಲಕ್ಕೆ ನಿಂತಿದೆಯಲ್ಲ ಅದಕ್ಕೆ. ಆದ್ದರಿಂದ ಅವನು ಏನು ಬೇಕಾದರೂ ಕೇಳ್ಬೋದು. ಕ್ಷಣದ ಸುಖಕ್ಕಾಗಿ ಹೇಗಾದ್ರೂ ಭೇಧಿಸಬಹುದು. “ಹೂಂ, ನೀನು ಕೊಡೋ ಪುಡಿಗಾಸಿಗೆ ಪ್ರೇಮ, ಒಲುಮೆ, ಇವಷ್ಟೇ ಅಲ್ಲದೆ ನನ್ನ ಅಂತರಂಗದ ನಿಜ ಕೂಡ ಬೇಕಾಗಿದೆಯೇನೋ? ಹಾಗಾದರೆ ಕೇಳು. ಕಾಕಮ್ಮನ ಕಟ್ಟುಕತೆ ಹೇಳ್ತೀನಿ ಕೇಳು” ಎಂದುಕೊಳ್ಳುತ್ತಾಳೆ ಅವಳು. ನಿನ್ನನ್ನು ತೃಪ್ತಿ ಪಡಿಸೋದಕ್ಕೊಸ್ಕರ ಸುಳ್ಳು ಹೇಳ್ತಾಳೆ. ಹೌದೋ ಅಲ್ಲವೋ? ಮತ್ತೆ ಈ ಮೂರು ಸುಳ್ಳುಗಳಿಗೆ ಕಾರಣ ನೀನಾ? ಆಕೆಯೋ? 

ನಿಸ್ಸಂಶಯವಾಗಿಯೂ ಕಾಮಕೂಪ ಒಂದು ಭ್ರಮಾಲೋಕ, ಸುಳ್ಳು ಸೃಷ್ಟಿ. ಆದರೆ ಈ ಸುಳ್ಳು ಎಷ್ಟೊಂದು ಶಾಶ್ವತ ಮತ್ತು ನಿರಂತರವಾಗಿದೆ ಎಂದರೆ ಇಲ್ಲಿ ಸತ್ಯದ ಮುಖವೂ ಮಖಾಳವಾಗುತ್ತದೆ. ಸೂಳೆಯರ ಪ್ರಕಾರ ಈ ಸುಳ್ಳು ಸೃಷ್ಟಿಯ ಪಿತೃಗಳು ಸಮಾಜದಲ್ಲಿಯ  ಸಭ್ಯಸ್ಥರು ಮತ್ತು ಸದ್ಗೃಹಸ್ಥರು ಎನ್ನುವ ದ್ವಿಪಾದ ಪಶುಗಳು. ಪುರುಷರನ್ನು ಕುರಿತು ಕುಪ್ರಿನ್‌ನ ಸೂಳೆಯರು ಎಳೆಯುವ ಷರಾಗಳನ್ನು ನೀವು ಗಮನಿಸಬೇಕು. ಜೆನ್ನಿ ಎನ್ನುವ ಸೂಳೆ ಹೇಳುತ್ತಾಳೆ, “ ಗಂಡಸರೆಲ್ಲರಲ್ಲಿ ನೀತಿ, ನಿಷ್ಟೆ ಇರೋರು ಅಂದರೆ ಇಬ್ಬರೇ. ಒಬ್ಬ ಕಳ್ಳ, ಇನ್ನೊಬ್ಬ ಹಂತಕ. ಇವರಿಬ್ಬರು ಪ್ರೇಯಸಿಯ ಜೊತೆ ಮನಸ್ಸು ಬಿಚ್ಚಿ ಮಾತಾಡ್ತಾರೆ. ಸತ್ರೂ ಸುಳ್ಳು ಹೇಳೋಲ್ಲ. ಅಗತ್ಯ ಬಿದ್ದರೆ ಪ್ರಿಯತಮೆಗಾಗಿ ಕಳ್ಳತನವಾಗಲಿ, ಹತ್ಯೆಯಾಗಲಿ ಮಾಡ್ತಾರೆ. ತಮ್ಮ ಪ್ರಾಣ ಕೊಡ್ತಾರೆ. ಆದರೆ ಉಳಿದವರು? ಅವರು ಹಸಿ ಹಲಾಲುಕೋರರು, ಮೋಸಗಾರರು, ಸುಳ್ಳುಗಾರರು. ಗೊತ್ತಾಗದ ಹಾಗೆ ಕುತ್ತಿಗೆ ಕೊಯ್ತಾರೆ”. 

‘ಕಾಮಕೂಪ’ ಕಾದಂಬರಿ ಒಂದು ಕಥೆಯಾಗಿ ಆರಂಭವಾಗುವುದು ಮಧ್ಯಭಾಗದಿಂದ. ಅಲ್ಲಿಯವರೆಗೂ ಅದು ಸಂತೆ, ಚೆಂದುಳ್ಳ ಹೆಂಗಸರ, ವಿಟರ, ತಲೆಹಿಡುಕರ, ಸತ್ಯ ಶೋಧಕರ, ಸಮಾಜೊದ್ಧಾರಕರ, ಕಥೆ-ನಾಟಕಕಾರರ ಒಂದು ಸಂತೆ. ಮಧ್ಯಭಾಗದಲ್ಲಿ ಶುರುವಾಗುವ ಈ ಕಥೆಯ ನಾಯಕ ಲಿಖೋನಿನ್ ಯಾಮಾ ನಗರದ ಕಾಮಕೂಪದಿಂದ ಲೂಬಾ ಎಂಬ ಸೂಳೆಯನ್ನು ಎತ್ತಿ ತಂದು ಸಹೋದರನಂತೆ ಆಕೆಯ ಕಾಳಜಿ ವಹಿಸಿ, ಸಮಾಜಕ್ಕೊಂದು ಆದರ್ಶವನ್ನು ತೋರಿಸಬೇಕೆಂಬ ಹಂಬಲದಲ್ಲಿರುವವ. ಆದರೆ ಅವನ ಈ ಕನಸಿನ ಕಾಲ್ತೋಡಕುಗಳೇ ಅವನ ಉಳಿದ ಮೂವರು ಗೆಳೆಯರು. ಅವರು ಕೇಳುವ ಪ್ರಶ್ನೆ, “ ಅವಳನ್ನು ನೀನು ಅನುಭವಿಸದೆ ಇರ್ತಿ ಎಂದುಕೋ. ಸಹೋದರನಂತೆ ಪ್ರೀತಿ ತೋರುತ್ತಾ ನಿಷ್ಟೆಯಿಂದ ಇರ್ತಿ ಎಂದುಕೋ. ಆಗ ಆಕೆ ಇನ್ಯಾರೋ ಪುರುಷರನ್ನು ಪ್ರೇಮಿಸ್ತಾಳೆ. ನನ್ನ ಮಾತು ಕೇಳೊ ತಮ್ಮಾ, ಹೆಣ್ಣು ಎಂದು ಹೆಣ್ಣೇ ಕಣೋ! ಪ್ರೀತಿಯಿಲ್ಲದೇ, ಪ್ರೀತಿಸದೇ ಯಾವ ಹೆಣ್ಣೂ ಬದುಕಲ್ಲ. ಬದುಕಲಾರಳು. ಇದು ಬೆಂಕಿಯಷ್ಟೇ ಸತ್ಯ. ಅದಕ್ಕೆ ಅವಳು ತಾನು ನಿಗ್ರಹಿಸಿಕೊಳ್ಳಲಾರದೇ ಪ್ರೀತಿಸಿದ ಗಂಡಿನ ಜೊತೆ ಓಡಿ ಹೋಗ್ತಾಳೆ. ಅವನು ಅವಳ ಶರೀರ ಸುಖವನ್ನು ಪಡೆದುಕೊಂಡು ತನ್ನ ತೀಟೆ ತೀರಿದ ಮೇಲೆ ಮತ್ತೆ ಹೊರದಬ್ಬುತ್ತಾನೆ. ನಿನ್ನದೆಲ್ಲವೂ ನಾನ್ಸೆನ್ಸ್”.

ಆದಾಗ್ಯೂ ಲಿಖೋನಿನ್ ಅಚಲ. ಆತ ಸೂಳೆಯೊಬ್ಬಳನ್ನು ಸಹೋದರಿಯಂತೆ ಪ್ರೀತಿಸಿ ಸಮಾಜಕ್ಕೆ ತೋರಿಸಲೇಬೇಕಿದೆ. ಹೀಗಾಗಿ ಯಾಮಾಕೂಪದ ಲೂಬಾಳನ್ನು ಎಷ್ಟೆಲ್ಲ ಹಣ ಖರ್ಚು ಮಾಡಿ ಕಾನೂನಿನ ತೊಂದರೆಗಳನ್ನು ಎದುರಿಸಿ ಗೆಳೆಯರ ಮಾತುಗಳನ್ನು ನಿರ್ಲಕ್ಷಿಸಿ, ಲೂಬಾಳನ್ನು ಕರೆದುಕೊಂಡು ಬಂದು ತನ್ನ ಪ್ರಯೋಗ ಶುರು ಮಾಡುತ್ತಾನೆ. ನಿತ್ಯ ಹಸಿ-ಹಸಿ ಗಂಡಸರ ಮಧ್ಯ, ಒಂದೊಂದು ದಿನವಂತೂ ನೂರಕ್ಕೂ ಮೀರಿದ ಪುರುಷರ ತೆಕ್ಕೆಯೊಳಗೆ ಒದ್ದಾಡಿದ್ದ ಲೂಬಾ ಎಂಬ ಸೂಳೆಯನ್ನು ಈಗ ಮನೆಯಲ್ಲಿ ಕೂಡ್ರಿಸಿ ಸಹೋದರ ಪ್ರೇಮದ ಪಾಠವನ್ನು ಶುರು ಮಾಡುತ್ತಾನೆ. “ಲೂಬಾ, ಪ್ರೇಮ ತುಂಬ ಶ್ರೇಷ್ಠವಾದುದು, ಉನ್ನತವಾದುದು, ಗಂಭೀರವಾದುದು, ಅಗಾಧವಾದುದು. ಪ್ರೇಮ, ಪ್ರಪಂಚಕ್ಕಿಂತ 
ಶ್ರೇಷ್ಠವಾದುದು ಲೂಬಾ ! ಪ್ರೇಮ ಅಂದ್ರೆ ಹಾಸಿಗೆ ಮೇಲೆ ಬಿದ್ದು ಹೊರಳಾಡೋದಲ್ಲ. ಅಂತಹ ಪ್ರೇಮ ನಮಗೆ ಬೇಕಿಲ್ಲ. ನೀನು ನನ್ನ ಜೀವನದಲ್ಲಿ ನಂಬಿಕಸ್ಥ ಸ್ನೇಹಿತೆ, ಸೋದರಿ. ಸಹೋದರ ಪ್ರೇಮವೇ ನಮ್ಮಿಬ್ಬರ ಹೃದಯದಲ್ಲಿ ನಾಟಿಕೊಳ್ಳಬೇಕು. ಹಾಗೆ ನಾವು ಪ್ರೇಮಿಸಿಕೊಂಡ ದಿನ ಅಪೂರ್ವವಾದ ಆನಂದ ಉಂಟಾಗುತ್ತೆ. ಅದರ ಮುಂದ ಈ ತುಚ್ಚವಾದ ವಾಂಛೆಗಳೆಲ್ಲವೂ ವೇಸ್ಟ್, ಅದು ಸ್ವರ್ಗ ಲೂಬಾ ! ಅದೇ ನನಗೆ ಬೇಕಾಗಿರೋದು, ಅಷ್ಟೇ !”. 

ಆದರೆ ಎನೆಲ್ಲ ನರಕವನ್ನು ದೇಹದ ನಾಡಿ-ನಾಡಿಯೂ ಅನುಭವಿಸಿ ಬಂದ ಲೂಬಾಳಿಗೆ ಇದ್ಯಾವುದು ಅರ್ಥವಾಗುವುದಿಲ್ಲ. ಸಹೋದರ- ಸಹೋದರಿ, ಇದೆಲ್ಲ ಕಾಮ ವಾಂಛೆಯನ್ನು ಉದ್ದೇಶಪೂರ್ವಕವಾಗಿ ದಮನ ಮಾಡುವ ಆತ್ಮವಂಚನೆಯ ಕ್ರಿಯೆ ಎನಿಸುತ್ತದೆ ಅವಳಿಗೆ. ಗಂಡನಿಗೆ ನೆಮ್ಮದಿಯ ಹೆಂಡತಿಯಾಗಬೇಕು. ಆತನೊಂದು ಸಾಂಪ್ರದಾಯಿಕ ಮದುವೆ ಮಾಡಿಕೊಳ್ಳದಿದ್ದರೂ ಚಿಂತೆಯಿಲ್ಲ, ಆತನ ಬೂಟು ಒರೆಸಿ, ಅಡುಗೆ ಮಾಡಿ, ವಿಧೇಯತೆಯಿಂದ ಬದುಕಬೇಕು, ಹೀಗೆ ಅವಳ ಕನಸು. ಆದರೆ ಲೂಬಾ ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಲಿಖೋನಿನ್‌ನ ಮನೆಗೆ ಬರುವ ವಿದ್ಯಾರ್ಥಿಗಳೂ, ಸ್ನೇಹಿತರೂ ಅವಳನ್ನು ಗಣಿಕೆಯಾಗಿಯೇ ನೋಡುತ್ತಾರೆಯೇ ವಿನಃ ಗೆಳತಿ, ಸಹೋದರಿಯಾಗಿ ಅಲ್ಲ. ‘ನಿನೊಬ್ಬಳು ಗಣಿಕೆ. ಇದಕ್ಕೂ ಮೊದಲು ಅನೇಕ ಮಂದಿಯ ಸ್ವತ್ತು. ಈಗ ಒಬ್ಬ ಯುವಕನ ಕೋರಿಕೆಯನ್ನು ತೀರಿಸಲು ಇಲ್ಲಿಗೆ ಬಂದಿರುವಿ. ಅಷ್ಟು ಮಾತ್ರಕ್ಕೆ ನೀನೊಬ್ಬ ಪವಿತ್ರವಾದ ಸ್ತ್ರೀಯಾಗಲಿ, ಪತಿವೃತೆಯಾಗಲಿ ಆಗೊಲ್ಲ. ನಿನ್ನ ಕಳಂಕ ನಿನ್ನ ಬಳಿಯೇ ಚಿರಕಾಲ ಇರುತ್ತೆ.’ ಎನ್ನುವುದನ್ನು ಇವರೆಲ್ಲಾ ಲೂಬಾಳಿಗೆ ಮತ್ತೆ ಮತ್ತೆ ನೆನಪಿಸುತ್ತಾರೆ. ಲಿಖೋನಿನ್‌ನ ಗೆಳೆಯ ಸಿಮನೊವಸ್ಕಿಯಂತೂ ಪಾಠ ಹೇಳುವ ನೆಪದಲ್ಲಿ ಮನೆಗೆ ಬಂದು ಲೂಬಾಳನ್ನು ಅವಳ ವೃತ್ತಿಯ ಹಿನ್ನೆಲೆಯಲ್ಲಿ ನಿರಂತರವಾಗಿ ಪೀಡಿಸುತ್ತಾನೆ. ‘ಹಸಿವಿನ ರೀತಿ ಪ್ರೇಮ ಮತ್ತು ಕಾಮಗಳು, ತೃಷೆಗಳು. ಇವುಗಳನ್ನು ನನ್ನಿಂದ ತೀರಿಸಿಕೊ, ಮಾನವನು ಸ್ವೇಚ್ಚಾಜೀವಿ, ಅವನನ್ನು ಯಾವ ಕಟ್ಟುಪಾಡುಗಳು, ಧರ್ಮ, ಆದರ್ಶಗಳು ತಡೆಯಲಾರವು, ಅವನು ಎಲ್ಲದಕ್ಕೂ ಅತೀತ’ ಎಂದು ಅವಳ ದುಂಬಾಲು ಬೀಳುತ್ತಾನೆ. ಈಗ ಲೂಬಾ ಮತ್ತು ಲಿಖೋನಿನ್‌ನರ ಪ್ರೇಮ ಮತ್ತು ಆದರ್ಶಗಳಲ್ಲಿ ಬಿರುಕು ಮೂಡಲಾರಂಭಿಸುತ್ತದೆ. ದೂರ ಸರಿಯಲಾರಂಭಿಸುತ್ತಾನೆ ಲಿಖೋನಿನ್ ತನ್ನ ಆದರ್ಶದಿಂದ. ತನ್ನ ಗೆಳೆಯನಾದ ಸಿಮನೊವಸ್ಕಿಗೆ ಲೂಬಾಳನ್ನು ಬಿಟ್ಟು ಕೊಡುವ ವಿಚಾರ ಮಾಡುತ್ತಾನೆ. ಕೊನೆಗೆ, “ ಲೂಬಾ ನೀನೊಬ್ಬ ಅನಾಗರಿಕ ಪಶು, ಕೆಲಸಕ್ಕೆ ಬಾರದ ಕ್ರಿಮಿ, ನೀಚ ಬುದ್ಧಿಯ ಹೆಣ್ಣು, ಪ್ರೇಮ ಸೂಳೆಯರಿಗೆ ಅರ್ಥವಾಗುವುದಿಲ್ಲ” ಎಂದು ಅವಳನ್ನು ಧಿಕ್ಕರಿಸಿ ಹೊರಟುಹೋಗುತ್ತಾನೆ. 

ಆನಂತರ ಸಿಮನೊವಸ್ಕಿ ತನ್ನ ಪಶುಬಲದಿಂದ ಒಂದಿಷ್ಟು ಕಾಲ ಅವಳನ್ನು ಅನುಭವಿಸುತ್ತಾನೆ. ಆನಂತರ ಬಿಟ್ಟು ಹೊಗುತ್ತಾನೆ. ಈಗ ಲೂಬಾ ಒಂಟಿಯಾಗಿ ಹೊರಟಾಗ ಉಂಡಾಡಿಗುಂಡರು, ಕಳ್ಳರು, ದುರ್ಮಾರ್ಗಿಗಳು, ಅಲೆಮಾರಿಗಳು, ಸೋಮಾರಿಗಳು, ರಸಿಕ ಮುಂಡೆ ಮಕ್ಕಳು, ತಲೆ ಹಿಡುಕರು ಎಲ್ಲ ಕಾಡುತ್ತಾರೆ. ಒಂದಿಷ್ಟು ಅವಧಿ ಒಬ್ಬ ಮುದುಕನೊಂದಿಗೆ, ಮತ್ತಷ್ಟು ಅವಧಿ ಒಬ್ಬ ಹುಡುಗನೊಂದಿಗೆ ಲೂಬಾ ಕಳೆಯುತ್ತಾಳೆ. ಒಂದು ದಿನ ಒಬ್ಬ ವ್ಯಕ್ತಿಯಂತೂ ಆಕೆಯ ಬಳಿಯಲಿದ್ದ ೮೦ ಕೊಪೆಕ್‌ಗಳನ್ನು ಕಿತ್ತುಕೊಂಡು ರಕ್ತ ಬರುವಂತೆ ಥಳಿಸಿ ಬಿಟ್ಟುಹೋಗುತ್ತಾನೆ. ನಾಲ್ಕು ದಿನಗಳ ಕಾಲ ನಗರದ ಬೀದಿ-ಬೀದಿ ಪಿಶಾಚಿಯಂತೆ ಅಲೆದು ಮತ್ತೆ ಯಾಮಾದ ಕಾಮಕೂಪಕ್ಕೆ ಬರುತ್ತಾಳೆ. 

ಒಡತಿ ಎಮ್ಮಾ ಇವಳನ್ನು ಸೇರಿಸಿಕೊಳ್ಳಲು ಸಿದ್ಧಳಿಲ್ಲ. “ ಲೇ ಭ್ರಷ್ಟ ರಂಡೆ, ನಮಗೇನು ಮಾನ, ಮರ್ಯಾದೆ, ಘನತೆ ಇಲ್ಲಾ ಅಂದುಕೊಂಡಿದಿಯೇನೇ? ನಿನ್ನಂಥ ಕನಿಷ್ಟ ದರ್ಜೆಯ ಮುಂಡೆಯರನೆಲ್ಲಾ ಸೇರಿಸಿಕೊಂಡರೆ ನಾಳೆ ನಮ್ಮ ಕೊಂಪೆಗೆ ಬೆಂಕಿ ಬೀಳುತ್ತೆ, ಇಲ್ಲಿಂದ ಹೊರಟು ಹೋಗು”. ಹೀಗೆ ಲೂಬಾಳನ್ನು ಒಡತಿ ಜರಿಯುತ್ತಿರುವುದನ್ನು ನೋಡುತ್ತಿರುವ ಜೆನ್ನಿ ಎಂಬ ಗಣಿಕೆ ಕನಿಕರದಿಂದ ಲೂಬಾಳ ಪರವಾಗಿ ನಿಂತು ಎಮ್ಮಾಳನ್ನು ಪ್ರತಿಭಟಿಸುತ್ತಾಳೆ. ಮೂವರು ಹೆಂಗಸರ ಮಧ್ಯ ಮಾರಾಮಾರಿಯಾಗುತ್ತದೆ. ಇಲ್ಲಿಂದ ಮುಂದೆ ಲೂಬಾಳ ಕಥೆ ಏನಾಯಿತು ಎನ್ನುವುದು ಅಸ್ಪಷ್ಟ. ಈಗ ಪ್ರವೇಶಿಸಿದ ಪಾತ್ರ ಜೆನ್ನಿಯ ಕಥೆ ಇಡೀ ಕಾದಂಬರಿಯ ಕೊನೆಯನ್ನು ನಿರ್ದರಿಸುತ್ತದೆ. 

ವರ್ಷಕ್ಕೊಮ್ಮೆ ಕೊಲ್ಯಾ ಎಂಬ ಮಿಲಿಟರಿ ಯುವಕನನ್ನು ಪ್ರೀತಿಸುವ ಜೆನ್ನಿ ಬಹಳ ಪ್ರಾಮಾಣಿಕ ಸೂಳೆ. ಅವಳೀಗ ಸಯಾಮಿ ರೋಗದಿಂದ ನರಳುತ್ತಿದ್ದಾಳೆ. ತನ್ನ ಮೈ ಅಂಗುಲಂಗುಲವನ್ನು ನೆಕ್ಕಿದ ಪ್ರತಿ ಪುರುಷ ನಾಯಿಗೂ ಈ ರೋಗ ಅಂಟಿಸಿ ಕೊಲ್ಲಬೇಕು ಎನ್ನುವುದು ಅವಳ ಗುರಿ. ಆದರೆ ಈ ಯುವಕ ಕೊಲ್ಯಾನ ಬಗೆಗೆ ಅವಳದು ಶುದ್ಧ ಪ್ರೇಮ. ತಲೆಗೇರಿದ ಕಾಮವಲ್ಲ, ಈತನ ಕುರಿತು ಯಾಕೆ ಇಂತಹ ಕಾಳಜಿ ಎನ್ನುವುದು ಆಕೆಗೆ ಗೊತ್ತಿಲ್ಲ. ಆದರೆ ಪುರುಷರೆಲ್ಲರನ್ನು ದುರ್ಮಾರ್ಗಿಗಳು, ನೀಚರು, ಗಢವಗಳು ಎಂದು ಹೀಯಾಳಿಸುವ ಲೂಬಾ ಯಾಕೆ ಕೊಲ್ಯಾನಿಗೆ ಮೋಸಮಾಡಲಾಗಲಿಲ್ಲ ಎನ್ನುವುದನ್ನು ಆಕೆಯ ಸಾಲುಗಳಲ್ಲಿಯೇ ಓದಬೇಕು. ಆಕೆ ಹೇಳುತ್ತಾಳೆ, “ ಆ ಯುವಕನನ್ನು ನೋಡಿದ ಕೂಡಲೇ ನನಗೇನು ಅನ್ನಿಸಿತು ಗೊತ್ತಾ? ಒಬ್ಬ ಹುಚ್ಚನ ಹತ್ತಿರವೋ, ಮೂರ್ಖನ ಹತ್ತಿರವೋ ದುಡ್ಡು ಕಳ್ಳತನ ಮಾಡುತ್ತಿದ್ದಂತೆ, ಇಲ್ಲ ಒಬ್ಬ ಕುರುಡನ ತಲೆಯನ್ನು ಒಡೆಯುತ್ತಿರುವಂತೆ, ಇಲ್ಲ ನಿದ್ದೆ ಮಾಡುತ್ತಿರುವ ಮನುಷ್ಯನ ಕುತ್ತಿಗೆ ಕೊಯ್ಯುತ್ತಿರುವಂತೆ ಅನ್ನಿಸಿತು”. ಇಂತಹ ಜೆನ್ನಿ ಇದ್ದಕ್ಕಿದಂತೆ ಒಂದು ದಿನ ತನ್ನ ಬಳಿಯ ಚಿನ್ನಾಭರಣಗಳೆಲ್ಲವನ್ನು ಗೆಳತಿಯರಾದ ಪುಟ್ಟ ಮಂಕಾ, ತಮಾರಾಳಿಗೆ ಕೊಟ್ಟು, ಕೊನೆಗ ತಾನು ಹಾಕಿಕೊಳ್ಳುವ ಡ್ರಾಯರನ್ನು ತನ್ನ ನೆನಪಿಗಾಗಿ ಕೆಲಸದವಳಿಗೆ ಕೊಟ್ಟು, ಸ್ನಾನದ ಕೊಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾಳೆ. 

ಇಡೀ ಕಾದಂಬರಿಯಲ್ಲಿ ಧರ್ಮ ಮತ್ತು ಮನುಷ್ಯರ ಮಧ್ಯದ ಕಿತ್ತಾಟ ಪ್ರಾರಂಭವಾಗುವುದೇ ಜೆನ್ನಿಯ ಸಾವಿನ ನಂತರ. ತಮಾರಾಳಿಗೆ ತನ್ನ ಗೆಳತಿ ಜೆನ್ನಿಯ ಅಂತ್ಯಸಂಸ್ಕಾರವನ್ನು ಅತ್ಯಂತ ಧಾರ್ಮಿಕವಾಗಿ ನೇರವೇರಿಸಬೇಕಿದೆ. ಇದು ಅಷ್ಟು ಸರಳವಲ್ಲ. ಗಣಿಕೆಯರಿಗೆ ಅಂತಹ ಅಂತ್ಯ ಸಂಸ್ಕಾರವನ್ನಿಡಲು ಧರ್ಮವಾಗಲಿ, ಪೋಲಿಸ್ ವ್ಯವಸ್ಥೆಯಾಗಲಿ ಒಪ್ಪಿಕೊಳ್ಳುವುದಿಲ್ಲ. ಚರ್ಚಿನ ೧೭೨ ನೇ ನಿಯಮ ೮ ನೇ ಪ್ಯಾರಾದ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಶಾಸ್ತ್ರೊಕ್ತ ಅಂತ್ಯಕ್ರಿಯೆ ಇಲ್ಲ. ಆದರೆ ತಮಾರ ಸೋಲೊಪ್ಪಲು ಸಿದ್ಧಳಿಲ್ಲ. ಯಾಮಾದ ಎಲ್ಲ ಗಣಿಕೆಯರು ತಮ್ಮ ತಮ್ಮ ಪಾಲಿನ ಹಣವನ್ನು ಸೇರಿಸಿ ಪೋಲಿಸ್, ಪಾದ್ರಿ, ಬ್ಯಾಂಡ್ ಮಾಸ್ಟರ್ ಹೀಗೆ ಎಲ್ಲರನ್ನು ಕೊಂಡುಕೊಳ್ಳುತ್ತಾರೆ. ಗೆಳತಿ ಜೆನ್ನಿಯ ಸೃತಿ ಚಿನ್ಹೆ ಶಾಶ್ವತವಾಗಿ ಉಳಿಯಲಿ ಎಂದು ಪ್ರಾರ್ಥಿಸಿ ಧಾರ್ಮಿಕವಾಗಿ ಅಂತ್ಯಸಂಸ್ಕಾರ ಮುಗಿಸುತ್ತಾರೆ. 

ಈ ನಂತರದ ಬೆಳವಣಿಗೆಗಳನ್ನು ಗಮನಿಸಿ, ಯಜಮಾನಿ ಅನ್ನಾ ತನ್ನ ಕೊಂಪೆಯನ್ನು ಎಮ್ಮಾಳಿಗೆ ಮಾರಿಹೊಗುತ್ತಾಳೆ. ತಮಾರಾ ಒಂದಿಷ್ಟು ಕಾಲ ಎಮ್ಮಾಳ ಮನೆಯಲ್ಲಿ ಮೇಲ್ವಿಚಾರಕಿಯಾಗಿ ಕೆಲಸ ಮಾಡಿ ಆನಂತರ ಗಿರಾಕಿಯೊಬ್ಬನನ್ನು ಕೊಂದು ಜೈಲಿಗೆ ಸೇರಿ ಅಂತ್ಯವಾಗುತ್ತಾಳೆ. ವೆರ್ಕಾ ಸಂಸಾರ ಸೇರುತ್ತಾಳೆ. ಕೊನೆಗೆ ಯಾಮಾ ನಗರಕ್ಕೆ ಬಂದ ಸೈನಿಕರ ಪಡೆಯೊಂದು ಗಣಿಕೆಯ ಕೊಂಪೆಯನ್ನು ಹೊಕ್ಕು, ಕೈಗೆ ಸಿಕ್ಕಿದ್ದನ್ನು ದೋಚಿ, ಈ ಹೆಂಗಸರ ಮೈ ಮೇಲಿನ ಬಟ್ಟೆ ಬಿಚ್ಚಿ ಬೀದಿಗೆ ನೂಕಿ, ದೊಂಬಿ ಮಾಡುತ್ತಾರೆ. ಗವರ್ನರ್ ಯಾಮಾ ನಗರದ ಗಣಿಕೆಯರ ಕೊಂಪೆಗಳನೆಲ್ಲಾ ತಕ್ಷಣ ಮುಚಿಸಿ ಆದೇಶ ಹೊರಡಿಸುತ್ತಾನೆ. ಅಳಿದುಳಿದ ಗಣಿಕೆಯರು ಈಗ ಬೀದಿಯ ಬದಿಯ ಭಿಕ್ಷುಕಿಯರಾಗಿದ್ದಾರೆ. 

ಗೊತ್ತಿರಲಿ, ಈಗ ಗಣಿಕೆಯರು ಸ್ಥಳಾಂತರಗೊಂಡಿದ್ದಾರೆ, ರೂಪಾಂತರಗೊಂಡಿದ್ದಾರೆ, ಆದರೆ ಅವರು ಶಾಶ್ವತವಾಗಿ ಅಳಿದುಹೋಗಿಲ್ಲ. ಯಾಕೆಂದರೆ ಸಭ್ಯಸ್ಥರು, ಸಂಸಾರಿಗಳು ಇರುವವರೆಗೂ ಸೂಳೆಯರು ಹುಟ್ಟುತ್ತಲೇ ಇರುತ್ತಾರೆ. 
ಭಾರತೀಯ ಸಾಹಿತ್ಯ ಲೋಕಕ್ಕೆ ಇಂತಹ ಬರಹ ಹೊಸದೇನೂ ಅಲ್ಲ, ಆದರೆ ವಿರಳ. ಹೀಗೆ ಸಾಮಾಜಿಕ ಪಲ್ಲಟಗಳಲ್ಲಿ ಪತನಗೊಂಡ ಅನೇಕ ನಗರಗಳ ಕಥೆ ಇಲ್ಲಿಯೂ ಇವೆ. ಪ್ರತಿ ಯುದ್ಧದ ನಂತರವೂ ಖಾಲಿಯಾದ ಸಾಮ್ರಾಜ್ಯಗಳಲ್ಲಿ ಇಂತಹ ಯಾಮಾ ನಗರಗಳನ್ನು ಸೆರೆ ಹಿಡಿದು ಇಡಬಹುದಾಗಿತ್ತು. ಶ್ಯಾಂ ಬೆನಗಲ್‌ರ ‘ಮಂಡಿ’ ಚಿತ್ರ ಒಂದಿಷ್ಟು ಈ ನಿರೀಕ್ಷೆಯನ್ನು ಪೂರೈಸಿದೆ. ನಿರಂಜನರ ‘ಕೊನೆಯ ಗಿರಾಕಿ’, ಅನಕೃ ಅವರ ‘ಶನಿ ಸಂತಾನ’, ಜೀವಣ್ನ ಮಸಳಿಯವರ ‘ನರಕದಲ್ಲಿ ನಂದಾದೀಪ’, ಹನುಮಂತ ಹಾಲಿಗೇರಿಯವರ ‘ಕೆಂಗುಲಾಬಿ’, ನಳಿನಿ ಜಮೀಲಾ ರ ‘ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥೆ’, ಗಳು ಇಂತಹ ಲೂಬಾ, ಜೆನ್ನಿ, ತಮಾರಾಳ ಕಥೆಗಳ ಪುನರಾವರ್ತನೆಯೇ ಆಗಿವೆ.







            (ಭಾಷಣ: ತೇಜಸ್ವಿ ಕಟ್ಟಿಮನಿ ಪ್ರಶಸ್ತಿ ಪ್ರಧಾನ ಸಮಾರಂಭ, ಬನಹಟ್ಟಿ, ದಿ ೦೭-೦೪-೨೦೧೩)


2 comments:

  1. ರಶ್ಯಿಯನ್ ಕಾದಂಬರಿಕಾರ ಅಲೆಕ್ಸಾಂಡರ್ ಕುಪ್ರಿನ್‌ನ‘ಯಮಾ ದಿ ಪಿಟ್’ಕಾದಂಬರಿಯ ಬಗ್ಗೆ ಕೇಳಿದ್ದೆ ಸರ್. ಆದರೆ, ಏನೇನೂ ಗೊತ್ತಿರಲಿಲ್ಲ.
    ಕೃತಿಯ ಅನುವಾದದ ಬಗ್ಗೆ ಚನ್ನಾಗಿ ಪರಿಚಯಿಸಿದ್ದಿರಿ.ರಾಜಣ್ಣ ಅವರ ಕಾಮಕೂಪವನ್ನು ಓದಬೇಕೆಂದು ಅತೀವ ಆಸೆಯಾಗುತ್ತಿದೆ. ಅವರ ನಂ ಇದ್ದರೆ ತಿಳಿಸಿ, ಪುಸ್ತಕ ತರಿಸಿಕೊಳ್ತಿನಿ.
    ಜೊತೆಗೆ·ನಿಮ್ಮ·ಅನುಮತಿ·ಇದ್ದರೆ·ಇದನ್ನು·ೊಸದಾಗಿ·ಪ್ರಾರಂಭಿಸುತ್ತಿರುವ·ನನ್ನ·ಬ್ಲಾಗ್·ನಲ್ಲಿ·ಬಳಸಿಕೊಳ್ಳುತ್ತೇನೆ.
    ·ಹನುಮಂತ·ಹಾಲಿಗೇರಿ

    ReplyDelete
  2. ದಯವಿಟ್ಟು ಬಳಸಿಕೊಳ್ಳಿ, ಪ್ರತಿಕ್ರಿಯೆಗೆ ಖುಷಿಯಾಯಿತು. ರಾಜಣ್ಣ ತಗ್ಗಿಯವರ ಮೊಬೈಲ್ ನಂ- ೮೯೦೪೪೬೩೪೪.

    ReplyDelete