Wednesday 23 July 2014

ಪ್ರೀತಿಯ ನಲವತ್ತು ರೀತಿಗಳು

ಜಗತ್ಪ್ರಸಿದ್ಧ ಚಿಂತಕ ಜಲಾಲ್-ಉದ್ದಿನ್ ರೂಮಿಯ ಗುರುವೇ ತಬ್ರೀಝಿ. 1185 ರಲ್ಲಿ ಇರಾನದ ತಬ್ರೀಝಿಯಲ್ಲೇ ಹುಟ್ಟಿದ ಈತ, ವೃತ್ತಿಯಿಂದ ನೇಕಾರ, ಪ್ರವೃತ್ತಿಯಿಂದ ಕವಿ ಮತ್ತು ತತ್ವಜ್ಞಾನಿ. ಎಂದೂ ಸಂತೆಯಲ್ಲಿ ನಿಂತು ಮಾತನಾಡಿದವನಲ್ಲ. ಈತನ ಶಿಷ್ಯ ಜಲಾಲ್-ಉದ್ದಿನ ರೂಮಿಯಷ್ಟೂ ಪ್ರಸಿದ್ಧನಾಗದ ಈತ 1248 ರಲ್ಲಿ ಖೋಯ್‍ದಲ್ಲಿ ನಿಧನನಾದ. 15 ನವೆಂಬರ್, 1244 ರಲ್ಲಿ ಭೇಟ್ಟಿಯಾದ ರೂಮಿ ಮತ್ತು ಈತನ ಮಧ್ಯದ ಸ್ನೇಹ ಕೇವಲ 40 ದಿನಗಳದ್ದು. ಶಾಮ್ಸ್ ತಬ್ರೀಝಿಯ ಮನಸ್ಸು ಸೂಫಿಗಳದ್ದು. ನಿರಂತರ ಅಲೆಮಾರಿಯಾಗಿದ್ದ ಈತ, ಬುಟ್ಟಿ-ಕೈಚೀಲುಗಳನ್ನು ಹೆಣೆದು ಮಾರಾಟಮಾಡುತ್ತ ಹೊಟ್ಟೆ ತುಂಬಿಸಿಕೊಂಡ. ಜಗಳಗಂಟನಾಗಿದ್ದ ತಬ್ರೀಝಿ ಯಾರನ್ನೂ, ಯಾವುದನ್ನೂ ಸರಳವಾಗಿ ಒಪ್ಪಿಕೊಳ್ಳಲಿಲ್ಲ. ತಬ್ರೀಝಿಯ ಬದುಕಿನಲ್ಲಿ ಕುತೂಹಲಕಾರಿಯಾದ ಎರಡೇ ಸಂಗತಿಗಳಿವೆ. ಒಂದು ಪ್ರೀತಿಯ ಆತನ 40 ರೀತಿಗಳು ಮತ್ತೊಂದು ಆತನ ನಿಗೂಢ ಸಾವು.

ಸಮಕಾಲೀನ ಸೂಫಿಗಳ ಪ್ರಕಾರ ನಿಗೂಢನಾಗಿದ್ದ ತಬ್ರೀಝಿ ಇದ್ದಕ್ಕಿದ್ದಂತೆ ನಿಗೂಢವಾಗಿಯೇ ಮರೆಯಾದ. ಕೆಲವರ ಪ್ರಕಾರ ತಬ್ರೀಝಿಯ ಪರಮಶಿಷ್ಯನೆಂದು ಕರೆಯಿಸಿಕೊಳ್ಳುವ ಜಲಾಲ್-ಉದ್ದಿನ ರೂಮಿಯ ಅನುಯಾಯಿಗಳಿಂದಲೇ ಕೊಲೆಯಾದ. ಏನಾದರೂ ಆಗಿರಲಿ ಇರಾನದ ಖೋಯ್‍ದಲ್ಲಿ ಆತನ ಸಮಾಧಿ ಮಾತ್ರ ಇದೆ. ರೂಮಿಯ ಮಗ ಸುಲ್ತಾನ್ ವಾಲದ್ ಈ ಸಮಾಧಿಯನ್ನು ಸುಂದರ ಕಲಾಕೃತಿಯನ್ನಾಗಿ ಅಮರಗೊಳಿಸಿದ್ದಾನೆ. 'ಮಕಾಲತ್-ಎ-ಶಾಮ್ಸ್-ಎ ತಬ್ರೀಝಿ' ಎನ್ನುವುದು ಆತನ ಏಕೈಕ ರಚನೆ. ಗದ್ಯ ರೂಪದಲ್ಲಿರುವ ಈ ಪರ್ಶಿಯನ್ ಪುಸ್ತಕ ಆತನ ವೃದ್ಧಾಪ್ಯದಲ್ಲಿ ರಚನೆಯಾಗಿದ್ದು, ಮಾಗಿದ ಮನಸ್ಸೊಂದರ ಮಹಾನ್ ಸ್ವಗತವಾಗಿದೆ. ಆತ ಹೇಳುವ ಪ್ರೀತಿಯ 40 ರೀತಿಗಳು ಹೀಗಿವೆ-
  

1. ನಾವು ದೇವರನ್ನು ಹೇಗೆ ನೋಡುತ್ತೇವೆ ಎನ್ನುವುದು ನಮ್ಮನ್ನು ನಾವು ಹೇಗೆ ನೋಡುತ್ತೇವೆ ಎನ್ನುವುದನ್ನೇ ಅವಲಂಬಿಸಿದೆ. ಆತನ ಸ್ಮರಣೆ, ಭಯ ಮತ್ತು ಆಪಾದನೆಗಳಿಂದಲೇ ತುಂಬಿರುವುದಾದರೆ ಅಷ್ಟೇ ಭಯ ಮತ್ತು ಆರೋಪಗಳು ನನ್ನೊಳಗೂ ಇವೆ ಎಂದರ್ಥ. ದೇವರು ಪ್ರೇಮಸ್ವರೂಪಿ ಹಾಗೂ ಸಹಾನುಭೂತಿಯಾಗಿ ಕಾಣುವುದಾದರೆ ನಾವೂ ಅದೇ ಆಗಿದ್ದೇವೆ ಎನ್ನುವುದು ದಿಟ.
2. ಸತ್ಯದ ದಾರಿ ಹೃದಯವನ್ನವಲಂಬಿಸಿದೆ, ಬುದ್ಧಿಯನ್ನಲ್ಲ. ಕಾರಣ ಹೃದಯವೇ ನಿಮ್ಮ ಗುರುವಾಗಿರಲಿ. ಬದುಕಿನ ಎಲ್ಲ ನಿರ್ಧಾರಗಳು ಹೃದಯದಿಂದ ನಿರ್ದೇಶಿಸಲ್ಪಡಲಿ. ಇಲ್ಲದೇ ಹೋದಲ್ಲಿ, ಅಹಂಕಾರ ನಿಮ್ಮನ್ನು ದೇವರಿಂದ ವಂಚಿತರನ್ನಾಗಿಸುತ್ತದೆ.
3. ಪ್ರಪಂಚದಲ್ಲಿ ಎಲ್ಲರಿಂದ ಎಲ್ಲವುಗಳಿಂದ ಪ್ರೇಮಸ್ವರೂಪಿ ದೇವರನ್ನು ಅರಿಯಬಹುದಾಗಿದೆ. ಇಂಥ ದೇವರು ಮಠ, ಮಸೀದೆ ಮತ್ತು ಚರ್ಚುಗಳಲ್ಲಿಲ್ಲ. ಆತÀ ಪ್ರೇಮಿಯ ಹೃನ್ಮಮಂದಿರದಲ್ಲಿ ಮುಗುಳ್ನಗುತ್ತಿದ್ದಾನೆ.
4. ಬುದ್ಧಿ ಮತ್ತು ಪ್ರೇಮ ಭಿನ್ನ ವಸ್ತುಗಳಿಂದ ಮಾಡಲ್ಪಟ್ಟಿವೆ. ಬುದ್ಧಿ ನಮ್ಮನ್ನು ಸಮಸ್ಯೆಗಳಿಗೆ ಸಿಲುಕಿಸಿ, ತೊಡಕು ಬಿಳುವಂತೆ ಮಾಡುತ್ತದೆ. ಪ್ರೇಮ ಎಲ್ಲ ತೊಡಕುಗಳಿಂದ ಅತೀತರನ್ನಾಗಿಸುತ್ತದೆ. ಬುದ್ಧಿ ಯಾವಗಲೂ ಎಚ್ಚರವಾಗಿದ್ದು ಸಲಹೆಗಳಿಗೆ ಕಿವಿಗೊಡುತ್ತದೆ. ಪ್ರೇಮ, ಭಯ ಬೇಡ ನಿಚ್ಚಿಂತನಾಗಿರು, ಧುಮುಕು ಮತ್ತು ಮುನ್ನುಗ್ಗು ಎಂದು ಪ್ರೋತ್ಸಾಹಿಸುತ್ತದೆ. ಬುದ್ಧಿ ನಿಸ್ಸೋತು ಕತ್ತರಿಸಿ ಬಿಳುತ್ತದೆ, ಪ್ರೇಮ ರಬ್ಬರಿನಂತೆ ಬಾಳುತ್ತದೆ. ಪ್ರೇಮ ಹಾಳು ಬಿದ್ದ ಸಾಮ್ರಾಜ್ಯದಂತೆ, ಹಾಳು ಬಿದ್ದರೂ ಅದು ಸಾಮ್ರಾಜ್ಯವೆ. ಭಗ್ನ ಪ್ರೇಮಿಯ ಹೃದಯ ಅನಘ್ರ್ಯ ಆಸ್ತಿ ಹುದುಗಿಸಿಕೊಂಡ ನೆಲದಂತೆ.
5. ಭಾಷಿಕ ಸಮಸ್ಯಗಳಿಂದಾಗಿಯೇ ಎಲ್ಲ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಶಾಬ್ಧಿಕವಾಗಿ ಶಬ್ಧಗಳನ್ನು ಅರ್ಥೈಸಿಕೊಳ್ಳುವುದನ್ನು ನಿಲ್ಲಿಸಿದರೆ, ಗಂಡಾಂತರಗಳನ್ನು ಗೆದ್ದಂತೆಯೆ. ಮೌನದಿಂದ ಹೀರಬಹುದಾದ ಸುಧೆಯನ್ನು ಶಬ್ಧಗಳಿಂದ ಹೀರಲಾಗದು.
6. ಒಂಟಿತನ ಮತ್ತು ಏಕಾಂಗಿತನ ಎರಡು ಭಿನ್ನ ಸ್ಥಿತಿಗಳು. ಒಂಟಿಯಾಗಿದ್ದಾಗ ನಾವು ಸರಿಯಾದ ಮಾರ್ಗದಲ್ಲಿದ್ದೇವೆ ಎನ್ನುವ ಭ್ರಮೆಯಲ್ಲಿರತ್ತೇವೆ. ಆದರೆ ಅದು ಹುಚ್ಚು ಭ್ರಮೆ. ಒಂಟಿಯಾಗಿರುವುದಕ್ಕಿಂತ ಏಕಾಂಗಿಯಾಗಿರುವುದು ಒಳಿತು. ಯಾಕೆಂದರೆ, ಅದು ಏಕಾಂಗಿತನ ಸತ್ಯ, ಆದರೆ ಒಂಟಿತನವಲ್ಲ. ಈ ಏಕಾಂಗಿತನದಲ್ಲಿ ನಿಮ್ಮತನಕ್ಕೊಂದು ಕನ್ನಡಿ ಇದೆ. ಈ ನಿಮ್ಮತನ ಆ ಭಗವಂತನ ಸ್ವರೂಪವೇ ಆಗಿದೆ.
7. ಬದುಕಿನಲ್ಲಿ ಏನೆಲ್ಲ ಘಟಿಸಲಿ, ಎಷ್ಟೇ ಗೋಳಾಡಿಸಲಿ ಹಾಗಂತ ಹತಾಶದ ನೆಲೆಯನ್ನು ನಂಬಬೇಡಿ. ಎಲ್ಲ ದಾರಿಗಳೂ ಮುಚ್ಚಿದಾಗ ನಿಮಗಾಗಿಯೇ ಒಂದು ದಾರಿಯನ್ನು ದೇವರು ಖಂಡಿತ ತೆರೆಯುತ್ತಾನೆ. ಋಣಿಯಾಗಿರಿ, ಎಲ್ಲವೂ ಒಳ್ಳೆಯದಾಗಿರುವಾಗ ಋಣಿಯಾಗಿರುವುದು ಸಹಜ. ಆದರೆ ಜ್ಞಾನಿ ಬರೀ ಒಳಿತಾದುದುಕಷ್ಟೇ ಅಲ್ಲ, ತಾನು ಯಾವುದರಿಂದ ವಂಚಿಸಲ್ಪಟ್ಟನೋ ಅದಕ್ಕಾಗಿಯೂ ದೇವರಲ್ಲಿ ಋಣಿಯಾಗಿದ್ದಾನೆ.
8. ಸಹನೆ ಎಂದರೆ ನಿರ್ವೀರ್ಯತೆ ಅಲ್ಲ. ಸಮಸ್ಯೆಯ ಕೊನೆಯ ತುದಿಯನ್ನೂ ನೋಡುವುದು ಎಂದರ್ಥ. ಅದು ಹೂವಿನೊಂದಿಗೆ ಮುಳ್ಳನ್ನೂ, ರಾತ್ರಿಯೊಂದಿಗೆ ಬೆಳಗನ್ನೂ ನಿರೀಕ್ಷಿಸುವ ಸುಖ. ಅಸಹನೆ ಇರುಳು ಗಣ್ಣಿನ ರೋಗ. ದೇವರನ್ನು ಪ್ರೀತಿಸುವವರು ಅಸಹಿಷ್ಣುಗಳಾಗಿರಲು ಸಾಧ್ಯವಿಲ್ಲ. ಯಾಕೆಂದರೆ, ಅರ್ಧ ಚಂದ್ರ ಒಂದು ದಿನ ಪೂರ್ಣಗೊಳ್ಳುತ್ತಾನೆ ಎನ್ನುವ ಸಂಪೂರ್ಣ ನಂಬಿಕೆ ಅವರಿಗಿರುತ್ತದೆ.
9. ಪೂರ್ವ-ಪಶ್ಚಿಮ, ದಕ್ಷಿಣ-ಉತ್ತರಗಳ ಮಧ್ಯ ಸಣ್ಣ ವ್ಯತ್ಯಾಸವಿದೆ. ನಿಮ್ಮ ದಿಕ್ಕಿನ ಬಗೆಗೆ ದುಃಖಿತರಾಗಬೇಡಿ. ಪ್ರವಾಸ ಪ್ರಾರಂಭವಾಗಿದೆ ಸಂತಸ ಪಡಿ. ಈ ಪಯಣ ನಿಮ್ಮೊಳಗೂ ಆಗಲು ಬಿಡಿ. ನಿಮ್ಮೊಳಗಿನ ಪಯಣ ನಿಮಗೆ ವಿಶ್ವವನ್ನೇ ಸುತ್ತುವ ಮತ್ತು ಅದನ್ನು ಮೀರಿದ ಪ್ರಪಂಚವನ್ನು ಪಯಣಿಸುವ ಅನಂತದ ಅನುಭವವನ್ನು ನೀಡುತ್ತದೆ.
10. ನೋವಿಲ್ಲದೆ, ಶಿಶುವಿಗೆ ಹುಟ್ಟಿನ ಹೊಸ ಮಾರ್ಗವಿಲ್ಲ ಎನ್ನುವುದು ಸೂಲಗಿತ್ತಿಗೆ ಗೊತ್ತು. ಹಾಗೆಯೇ ಸಂಕಷ್ಟವಿಲ್ಲದೆ ನಮಗೊಂದು ಹೊಸ ಹುಟ್ಟು ಸಾಧ್ಯವಿಲ್ಲ. ಹದ ಬೆಂಕಿ ಇಲ್ಲದೆ ಮಡಕೆಯಾಗುವುದಿಲ್ಲ. ಪ್ರೀತಿ ಯಾವಾಗಲೂ ಸಂಕಟದಂತೆ ಮತ್ತು ಹದಗೊಳಿಸುವ ಬೆಂಕಿಯಂತೆ.
11.ಪ್ರೀತಿಯನ್ನು ಹುಡುಕುವವನು ಹುಡುಕುತ್ತಲೆ ಹೊಸ ಮಾರ್ಪಾಟಕ್ಕೊಳಪಡುತ್ತಾನೆ. ಹುಡುಕುವುದನ್ನು ನಿಲ್ಲಿಸಿದವನು ಪ್ರಬುದ್ಧನಾಗಲು ಸಾಧ್ಯವಿಲ್ಲ. ನೀವು ಪ್ರೀತಿಯನ್ನು ಹುಡಕಲಾರಂಭಿಸಿದ ಮರುಕ್ಷಣವೇ, ನಿಮ್ಮೊಳಗೆ ಮತ್ತು ನಿಮ್ಮ ಹೊರಗೆ ಬದಲಾವಣೆಯ ಪರ್ವ ಪ್ರಾರಂಭವಾಯಿತು.
12. ಈ ಪ್ರಪಂಚವೆನ್ನುವುದು ಖೊಟ್ಟಿ ಗುರುಗಳ ಮತ್ತು ಸುಳ್ಳು ಶಿಕ್ಷಕರ ಒಂದು ಅಗಣಿತ ಲೋಕ. ಅಧಿಕಾರಕ್ಕಾಗಿ ಆಸೆ ಪಡುವವರು ಮತ್ತು ದುರಹಂಕಾರಿಗಳು ಗುರು ಅಲ್ಲ ಒಬ್ಬ ಸಾಮಾನ್ಯ ಗೆಳೆಯನೂ ಆಗಲು ಸಾಧ್ಯವಿಲ್ಲ. ನಿಜವಾದ ಗುರು ನಿಮ್ಮನ್ನು ತನ್ನೆಡೆಗೆ ಕೇಂದ್ರಕರಿಸಿಕೊಳ್ಳುವುದಿಲ್ಲ, ಆತ ನಿಮ್ಮನ್ನೆಂದೂ ಹೊಗಳುವುದಿಲ್ಲ, ಆತ ನಿಮ್ಮ ನಿಷ್ಠೆಯನ್ನೂ ಇಷ್ಟಪಡುವುದಿಲ್ಲ. ಬದಲಾಗಿ ನಿಮ್ಮೊಳಗನ್ನು ಆರಾಧಿಸುವ ಮಾರ್ಗ ತೋರಿಸುತ್ತಾನೆ. ಗ್ಲಾಸಿನಂತೆ ಪಾರದರ್ಶಕವಾಗಿರುತ್ತಾನೆ. ತನ್ಮೂಲಕ ದೇವರ ಬೆಳಕು ನಿಮ್ಮೆಡೆಗೆ ಹರಿಯುವಂತೆ ಮಾಡಿ, ಸದ್ಗುರುವಾಗುತ್ತಾನೆ.
13. ಬದಲಾವಣೆಯನ್ನು ತಡೆಯಬೇಡ. ಬದಲಾವಣೆಯಂತೆ ನಿನ್ನ ಬದುಕು ಬದಲಾಗಲು ಬಿಡು. ಅದರ ತಲೆ ಕೆಳಗಾಗುತ್ತಿದೆಯೊ? ಭಯ ಬೇಡ? ಯಾರಿಗೆ ಗೊತ್ತು, ಯಾವ ತುದಿಯಿಂದ ನಿನ್ನ ಉದ್ಧಾರದ ಕಥೆ ಆರಂಭವಾಗಿ ಇನ್ನ್ಯಾವ ಮಹಾ ಉದ್ಧಾರದೆಡೆಗೆ ಸಾಗುತ್ತಿದೆ ಎಂದು.
14. ನಿನ್ನ ಕೆಲಸಗಳನ್ನೇ ಪೂರ್ಣಗೊಳಿಸುವುದರಲ್ಲಿ ಭಗವಂತ ತನ್ಮಯನಾಗಿದ್ದಾನೆ. ಅವನ ಕಣ ಕಣವೂ ನೀನೆ, ಅವನ ಮಯ್ಯ ಮತ್ತೂ ನೀನೆ. ಪ್ರತಿ ಮನುಷ್ಯರನ್ನು ಸೃಷ್ಠಿಸುವುದೆಂದರೆ ಆತನಿಗೆ ಪರಿಪೂರ್ಣನೊಬ್ಬನನ್ನು ಸಿದ್ಧಪಡಿಸುವ ಹಠ. ನಾವೆಲ್ಲರೂ ಅಪೂರ್ಣರಿದ್ದು ಆತನಿಂದ ಪೂರ್ಣಗೊಳ್ಳಲು ಕಾಯ್ದುನಿಂತ ಕಲಾಕೃತಿಗಳು. ದೇವರು ನಮ್ಮೆಲ್ಲರೊಂದಿಗೆ ಪ್ರತ್ಯೇಕವಾಗಿಯೇ ವ್ಯವಹರಿಸಿದ್ದಾನೆ. ಯಾಕೆಂದರೆ ನಾವು ನಮ್ಮದೇ ಕೊರತೆಗಳಿಂದ ಬಳಲುವ ಅನನ್ಯ ರಚನೆಗಳು. ಈ ಕೊರತೆಗಳನ್ನು ನೀಗಿಸಿದಂತೆ ಆತನಿಗೊಂದು ಸಮಗ್ರ ಚಿತ್ರಣ ಸಿಗುತ್ತದೆ.
15. ಪರಿಪೂರ್ಣನಾದ ದೇವರನ್ನು ಪ್ರೀತಿ ಮಾಡುವುದು ಸಹಜ. ಆದರೆ ನ್ಯೂನ್ಯತೆಗಳಿಂದ ನರಳುವ ನಮ್ಮೊಡನಾಡಿಯನ್ನು ಪ್ರೀತಿಸುವುದು ಕಷ್ಟ. ನಮ್ಮ ಪ್ರೀತಿಯ ಸಾಮಥ್ರ್ಯದ ಪರೀಕ್ಷೆ ಇರುವುದು ಇಲ್ಲಿಯೇ. ಇಂಥ ಪ್ರೀತಿ ಇಲ್ಲದ ಜ್ಞಾನವೂ ಅಪೂರ್ಣ. ದೇವರ ಇಂಥ ಅಪೂರ್ಣ ಸೃಷ್ಠಿಗಳನ್ನು ಅಪ್ಪಿಕೊಳ್ಳದವನು ದೇವರನ್ನು ಬಿಡಿ, ತನ್ನನ್ನೂ ತಾನು ಒಪ್ಪಿಕೊಳ್ಳಲಾರ.
16. ಒಂದೆಡೆ ಇರುವುದೇ ನಿಜವಾದ ವಿಶ್ವಾಸ. ಉಳಿದಿದೆಲ್ಲವೂ ಹೊಳೆಯೊಳಗಿನ ಹುಣಸೆ. ಶುದ್ಧ ನೀರಿನಿಂದಲೂ ಸ್ವಚ್ಚಗೊಳಿಸಲಾಗದ ಪಾಪ ಕೃತ್ಯ ಮೋಸ. ಉಪವಾಸ ಮತ್ತು ವೃತಗಳಿಂದ ಶರೀರವನ್ನು ಶುದ್ಧೀಕರಿಸಬಹುದು ಆದರೆ ಹೃದಯವ ಶುದ್ಧಿ ಮಾತ್ರ ಕೇವಲ ಪ್ರೇಮದಿಂದ.
17. ಇಡೀ ವಿಶ್ವವನ್ನು ವ್ಯಾಪಿಸಿದ ವ್ಯಕ್ತಿ ನಿನೊಬ್ಬನೆ. ನಿನ್ನ ಸುತ್ತಲೂ ನೀನು ನೋಡುತ್ತಿರುವುದೆಲ್ಲವೂ ನಿನ್ನೊಳಗೇ ಇದೆ, ನಿನ್ನಿಂದಲೇ ಹುಟ್ಟಿಕೊಂಡಿದೆ. ಹೀಗಾಗಿ ರಾಕ್ಷಸನನ್ನೂ ಹೊರಗೆ ಹುಡುಕಬೇಡ, ಅದು ನಿನ್ನೊಳಗಿನ ಧ್ವನಿಯೆ. ನಿನ್ನಷ್ಟಕ್ಕೇ ನೀನು ಪ್ರಾಮಾಣಿಕನಾಗಿ, ಕಟುವಾಗಿ ವಿಮರ್ಶಿಸಿಕೊಳ್ಳಬಲ್ಲವನಾದರೆ ಅದು ನಿನಗೆ ಗೊತ್ತಾಗುತ್ತದೆ.
18. ನಿನ್ನನ್ನು ನೋಡಬೇಕಾದ ಅನ್ಯರ ದಾರಿಗಳು ಬದಲಾಗಬೇಕು ಎಂದು ನೀನು ಬಯಸುವುದಾದರೆ, ನಿನ್ನ ನೋಡುವ ನಿನ್ನ ರೀತಿಗಳೇ ಮೊದಲು ಬದಲಾಗಬೇಕು. ಆಗ ಅನ್ಯರು ನಿನ್ನೆಡೆಗೆ ಎಸೆಯುವ ಮುಳ್ಳುಗಳಿಗಾಗಿಯೂ ನೀನು ವಿಧೆಯನಾಗಿರುತ್ತಿ. ಇದು ಮುಂದೊಮ್ಮೆ ಹೂ-ಮಳೆಯಾಗುವುದರ ಸಂಕೇತ.
19. ಕರೆದುಕೊಂಡು ಹೋಗುವ ದಾರಿಯ ಬಗೆಗೆ ಚಿಂತೆ ಬೇಡ. ಇಡುವ ಮೊದಲ ಹೆಜ್ಜೆಯ ಬಗೆಗೆ ಚಿಂತಿಸು. ಅದು ಅತ್ಯಂತ ಕಷ್ಟಕರ ಮತ್ತು ಜವಾಬ್ದಾರಿಯ ಕೆಲಸ. ನಿನ್ನ ಮೊದಲ ಹೆಜ್ಜೆ ಸರಿ ಇದ್ದರೆ ಉಳಿದಿದ್ದೆಲ್ಲವೂ ತಾನಾಗಿಯೇ ಅನುಸರಿಸುತ್ತದೆ. ಪ್ರವಾಹದಲ್ಲಿ ಕೊಚ್ಚಿಹೋಗಬೇಡ, ಪ್ರವಾಹವೇ ಆಗು.
20. ನಾವೆಲ್ಲ ಆತನ ಕಲ್ಪನೆಯ ಕೂಸುಗಳು, ಆದಾಗ್ಯೂ ಭಿನ್ನ ಮತ್ತು ಅನನ್ಯ. ಒಬ್ಬರಿನ್ನೊಬ್ಬರಂತಿಲ್ಲ, ಪ್ರತಿ ಹೃದಯದ ಸಂಗೀತವೂ ಭಿನ್ನ. ಆತ ಬಯಸಿದ್ದರೆ ನಮ್ಮನ್ನೆಲ್ಲ ಒಂದೇತೆರನಾಗಿಸಬಹುದಿತ್ತು, ಅಂತೆಯೇ, ಅನ್ಯರನ್ನು ಅಗೌರವಿಸುವುದು ಮತ್ತು ಅವರ ಮೇಲೆ ನಮ್ಮ ವಿಚಾರವನ್ನು ಹೇರುವುದು ಸಮಾನತೆಯ ನಮ್ಮ ಸೃಷ್ಠಿಕರ್ತನಿಗೆ ಅಪಮಾನ ಮಾಡಿದಂತೆಯೆ.

21. ದೇವರಲ್ಲಿ ಅನುರಕ್ತನಾದವ ಮದಿರಾ ಕೋಣೆಗೆ ಕಾಲಿಟ್ಟರೂ ಮಂದಿರವಾಗಿ ಮಾರ್ಪಡುತ್ತದೆ, ಮಂದಿರಕ್ಕೆ ಕಾಲಿಟ್ಟರೂ ಕುಡುಕನಿಗೆ ಅದು ಮದಿರಾ ಕೋಣೆಯಾಗಿ ಕಾಣುತ್ತದೆ. ಇದೆಲ್ಲವೂ ನಮ್ಮ ಅಂತರಾತ್ಮವನ್ನು ಅವಲಂಬಿಸಿದೆ. ಜ್ಞಾನಿ ಜನರು ಹೇಗೆ ಕಾಣುತ್ತಾರೆ ಮತ್ತು ಅವರು ಯಾರು ಎನ್ನುವುದನ್ನು ನಿರ್ಧರಿಸಲು ಹೋಗಲಾರ. ಆತ ಯಾರನ್ನೇ ಕಂಡರೂ ಬಾಹ್ಯದ ತನ್ನೆರಡೂ ಕಣ್ಣುಗಳನ್ನು ಮುಚ್ಚಿಕೊಂಡು, ಮೂರನೆಯ ತನ್ನ ಒಳಗಣ್ಣನ್ನು ತೆರೆದುಕೊಳ್ಳುತ್ತಾನೆ, ತನ್ನೊಳಗೇ ಇಳಿಯುತ್ತಾನೆ.
22. ಬದುಕು ಒಂದು ತಾತ್ಕಾಲಿಕ ಸಾಲ. ಪ್ರಪಂಚ ಒಂದು ವಾಸ್ತವ. ಮಕ್ಕಳು ಇಲ್ಲಿ ಆಟಿಕೆಯ ವಸ್ತುಗಳನ್ನೇ ಸತ್ಯದ ವಸ್ತಗಳೆಂದು ತಪ್ಪಾಗಿ ಗ್ರಹಿಸುತ್ತಾರೆ. ಹೀಗಾಗಿ ಈ ಸುಳ್ಳು ವಸ್ತುಗಳೊಂದಿಗೆ ಕೆಲಕಾಲ ಮೋಹದಿಂದ ಆಟವಾಡಿ, ಹಠ ಬಂದಾಗ ಮುರಿದು, ಬೇಸರ ಬಂದಾಗ ಎತ್ತಿ ಎಸೆಯುತ್ತಾರೆ. ಈ ಅತಿರೇಕಗಳಿಂದ ದೂರಿರುವುದೇ ಬದುಕು. ಅತಿರೇಕಗಳು ನಿಮ್ಮ ಒಳ ಉಧ್ಯಾನದ ಅಂದಗೆಡಿಸುತ್ತವೆ. ಜಾಣ ಯಾವಾಗಲೂ ಮೃದುವಾಗಿರುತ್ತಾನೆ ಮತ್ತು ಮಧ್ಯದ ದಾರಿಯವನಾಗಿರುತ್ತಾನೆ.
23. ದೇವರ ಸೃಷ್ಠಿಯಲ್ಲಿ ಮನುಷ್ಯನಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅವನೊಳಗೆ 'ನಾನು ಚೈತನ್ಯದ ಉಸಿರು ಹಾಕಿದ್ದೇನೆ' ಎನ್ನುತ್ತಾನೆ ದೇವರು. ಸೃಷ್ಠಿಯಾದ ನಾವೆಲ್ಲರೂ ಅವನ ಸಂದೇಶಗಳೆ. ಆದರೆ ಆತನ ಸಂದೇಶ ಸಾರುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡಿರುವೆನೇ? ಎಂದು ನಾವೆಂದಾದರೂ ಕೇಳಿಕೊಂಡಿರುವೆವೊ? ನಮ್ಮೊಳಗಿನ ಆ ಚಿತ್‍ಶಕ್ತಿಯನ್ನು ಕಾಣುವುದೇ ನಮ್ಮ ಗುರಿಯಾಗಬೇಕು.
24. ನರಕ ಈ ಕ್ಷಣ ಇಲ್ಲೇ ಇದೆ. ಹಾಗೆಯೆ ಸ್ವರ್ಗವೂ. ನಾವು ಪ್ರೀತಿ ಮಾಡಿದ ಪ್ರತಿ ಕ್ಷಣವೂ ಸ್ವರ್ಗದಲ್ಲಿ ಕಾಲಿಟ್ಟಿದ್ದೇವೆ, ದ್ವೇಷಿಸಿದ ಮರುಕ್ಷಣ ನರಕದ ದಳ್ಳುರಿಗೆ ಬಿದ್ದು ಒದ್ದಾಡಿದ್ದೇವೆ.
25. ಎಲ್ಲ ಧರ್ಮ ಗ್ರಂಥಗಳನ್ನು ನಮ್ಮ ಶಕ್ತಿಯನುಸಾರ ಗ್ರಹಿಸಿದ್ದೇವೆ. ಒಟ್ಟು ನಾಲ್ಕು ದೃಷ್ಠಿಕೋನಗಳಿವೆ. ಒಂದು ಅರ್ಥ ಇನ್ನೊಂದು ಒಳಾರ್ಥ ಮತ್ತೊಂದು ಮತಿತಾರ್ಥ ಹುಡುಕುವುದು. ನಾಲ್ಕನೇಯದು ಇವೆಲ್ಲಕ್ಕೂ ಮೀರಿ ಹೋಗಿ ಹಂಚಿಕೊಳ್ಳಲಾಗದÀ ಅನುಭೂತಿಗೆ ಮೌನಿಯಾಗುವುದು.
26. ಪ್ರಪಂಚ ಒಂದೇ ಆಗಿರುವುದರಿಂದ ನಮ್ಮೆಲ್ಲರ ಕಥೆಗಳು ಒಂದು ಇನ್ನೊಂದರಲ್ಲಿ ಹಾಸುಹೊಕ್ಕಿವೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೊ ಒಂದೇ ಕಥೆಯನ್ನು ಪಿಸುಗುಡುತ್ತಿದ್ದೇವೆ. ತೊಂದರೆ ಇಲ್ಲ, ಪರಸ್ಪರ ಕಥೆ ಹೇಳುವುದರಲ್ಲಿ, ಕೇಳುವುದರಲ್ಲಿ ಮಾತ್ರ ಸಹಾನುಭೂತಿ ಇರಲಿ. ತಪ್ಪಿಯೂ ಅನ್ಯರ ಕುರಿತು ಅವರಿಲ್ಲದಾಗ ಮಾತನಾಡಬೇಡ. ಯಾಕೆಂದರೆ ನೀನಾಡಿದ ಮಾತುಗಳು ನಶಿಸಿಹೋಗುವುದಿಲ್ಲ. ಈ ಬಯಲೊಳಗೇ ಬಚ್ಚಿಟ್ಟುಕೊಂಡ ಅವುಗಳು ಒಂದು ದಿನ ಶಾಪಗಳಾಗಿ ನಿನಗೇ ಮರಳುತ್ತವೆ. ಒಬ್ಬನ ನೋವು ನಾವೆಲ್ಲರೂ ನರಳುವಂತೆ ಮಾಡುವ ಹಾಗೆಯೇ ಒಬ್ಬನ ಸಂತೋಷವೂ ನಾವೆಲ್ಲರೂ ನಗುವಂತೆ ಮಾಡುತ್ತದೆ.
27. ನೀನಾಡುವ ಪ್ರತಿ ಒಳ್ಳೆಯ ಮತ್ತು ಕೆಟ್ಟ ಪದಗಳು ನಿನಗೇ ಮರಳುತ್ತವೆ. ಕೆಡುಕಾಡುವವರನ್ನು ದುಷ್ಟತನದ ಮೂಟೆಹೊತ್ತ ಹಡುಗಿನಂತೆ ತೇಲಲು ಬಿಡು. ಪ್ರತಿಯಾಡಿದರೆ ನೀನೂ ಅದೇ ಆಗುತ್ತಿಯ. ಬದಲಾಗಿ ನಲವತ್ತು ದಿನ ಮತ್ತು ನಲವತ್ತು ರಾತ್ರಿ ಆ ಪಾಪಿಯ ಕುರಿತು ಒಳಿತನ್ನೇ ನುಡಿ, ಆಲೋಚಿಸು. ನಲವತ್ತು ದಿನಗಳ ನಂತರ ಎಲ್ಲವೂ ಭಿನ್ನವಾಗಿರುತ್ತದೆ, ಯಾಕೆಂದರೆ ನಿನ್ನೊಳಗಿನದೇ ಭಿನ್ನವಾಗಿಬಿಟ್ಟಿರುತ್ತದೆ.
28. ಭೂತಕಾಲ ಒಂದು ಅರ್ಥೈಸುವಿಕೆ ಅಷ್ಟೆ. ಭವಿಷ್ಯ ಮತ್ತೊಂದು ಭ್ರಮೆ. ಸಮಯದಂತೆ ಸರಳವಾಗಿ ಪ್ರಪಂಚ ಸಾಗುವುದಿಲ್ಲ. ಪ್ರಪಂಚದ ಮೂಲಕ, ನಿನ್ನ ಮೂಲಕ, ಸಾಗಿಹೋಗುವ ಸಮಯವೂ ಸೀಮಾತೀತ. ಹೀಗಾಗಿ, ಭೂತ ಮತ್ತು ಭವಿಷ್ಯದ ಹಂಗು ಹರಿದುಕೊಂಡು ವರ್ತಮಾನದ ಒಳಿತಿನಲ್ಲಿ ಇಳಿಯುವುದನ್ನು ಕಲಿ.
29. ದೈವವೆಂದರೆ ಬದುಕು ಪೂರ್ವ ನಿರ್ಧಾರಿತ ಎಂದರ್ಥವಲ್ಲ. ಎಲ್ಲವನ್ನು ದೈವಕ್ಕೆ ಹೊರಸಿ ಜಗದ ಸಂಗೀತವನ್ನೇ ಆಲಿಸದೆ ಹೋಗುವುದು ಅಜ್ಞಾನವಲ್ಲದೆ ಮತ್ತೇನು? ಮಧುರ ಸಂಗೀತ ವಿಶ್ವವನ್ನೆಲ್ಲ ವ್ಯಾಪಿಸಿದೆ ಮತ್ತು ಇದಕ್ಕೆ ನಲವತ್ತು ಭಿನ್ನ ಸ್ಥರಗಳಿವೆ. ನಿನ್ನ ದೈವವೆನ್ನುವುದು ಇವುಗಳಲ್ಲಿ ಯಾವುದೊ ಒಂದು ಸ್ಥರ. ಇಲ್ಲಿ ನಿನಗೆ ನಿನ್ನ ವಾದ್ಯವನ್ನು ಬದಲಾಯಿಸುವ ಸ್ವಾತಂತ್ರ್ಯವಿಲ್ಲ. ಆದರೆ ಇರುವ ವಾದ್ಯವನ್ನು ಎಷ್ಟು ಚನ್ನಾಗಿ ನುಡಿಸಿದೆ ಎನ್ನುವುದು ನಿನ್ನ ದೈವವನ್ನು ನಿರ್ಧರಿಸುತ್ತದೆ.
30. ಅನಾವಶ್ಯಕವಾಗಿ ಆಪಾದನೆಗೊಳಗಾಗಿ, ಹಲ್ಲೆಗೊಳಗಾಗಿ ಮತ್ತು ದಿಕ್ಕರಿಸಲ್ಪಟ್ಟವನಾಗಿ ಬದುಕಿಯೂ ಸುಮ್ಮನಿದ್ದವನೇ ಸಂತ. ಆತ ಪ್ರತಿ ನುಡಿಯುವುದಿಲ್ಲ, ಏಕೆಂದರೆ ಆತನಲ್ಲಿ ತಾನು ಮತ್ತು ಅನ್ಯ ಎನ್ನುವುದೇ ಇಲ್ಲ.

31. ನಿನ್ನ ವಿಶ್ವಾಸವನ್ನು ದೃಢಗೊಳಿಸಿಕೊಳ್ಳಬೇಕೆನ್ನುವ ನೀನು, ನಿನ್ನೊಳಗನ್ನು ಮೃದುವಾಗಿಸಿಕೊಳ್ಳಬೇಕು. ಆತ್ಮ ಬೆಟ್ಟದಂತಾಗಬೇಕೆನ್ನುವವರು ಮನಸ್ಸನ್ನು ಹಂಸತೌಲಿಕೆಯಾಗಿಸಿಕೊಳ್ಳಬೇಕು. ರೋಗವಿರಲಿ, ಅನಾಹುತಗಳಿರಲಿ, ದುರಂತಗಳಾಗಲಿ ಅವುಗಳೆಲ್ಲ ಘಟಿಸುವುದು ನಮ್ಮನ್ನು ಮೃದುವಾಗಿಸಲು, ಉದಾರಿಯಾಗಿಸಲು ಮತ್ತು ಅನುಕಂಪಶೀಲರನ್ನಾಗಿಸಲು. ಆದರೆ ಕೆಲವರು ಮಾತ್ರ ಈ ಮಾರ್ಪಾಟಕ್ಕೊಳಗಾಗುತ್ತಾರೆ. ಉಳಿದವರು ಇದ್ದುದರಕ್ಕಿಂತಲು ಭಯಾನಕವಾಗಿ ಮಾರ್ಪಟ್ಟು ಹಾಳಾಗುತ್ತಾರೆ.
32. ದೇವರು ಮತ್ತು ನಿನ್ನ ಮಧ್ಯ ಯಾರೂ ನಿಲ್ಲಲು ಸಾಧ್ಯವಿಲ್ಲ. ಇಮಾಮ್, ಪೂಜಾರಿ ಅಥವಾ ಸ್ವಾಮಿಗಳಿಗೆ ಯಾರೂ ಧರ್ಮದ ನಾಯಕತ್ವವನ್ನು ಕೊಡಲಿಲ್ಲ. ಯಾವ ಆಧ್ಯಾತ್ಮಿಕ ಗುರುವೂ ನಿಮ್ಮಿಬ್ಬರ ಮಧ್ಯದ ಮಧ್ಯವರ್ತಿಯಲ್ಲ. ನಿನ್ನ ಸ್ವನಿಯಮ, ಮೌಲ್ಯಗಳೇ ಪ್ರೇಮಸ್ವರೂಪಿ ದೇವರೆಡೆಗಿನ ಸೂತ್ರಗಳು. ಹೃದಯಗಳನ್ನು ಭಗ್ನಗೊಳಿಸುವ ಕುಕೃತ್ಯದಲ್ಲಿ ತೊಡಗಿರುವ ನೀನು ಎಷ್ಟೇ ಧಾರ್ಮಿಕನಾಗಿದ್ದರೂ ಅರ್ಥಹೀನ. ಎಲ್ಲ ದುಷ್ಟತನಗಳಿಂದ ದೂರವಿರು, ಇಲ್ಲದಿದ್ದಲ್ಲಿ ಅವು ನಿನ್ನ ಬುದ್ಧಿಗೆ ಮಂಕೆರಚುತ್ತವೆ. ದೇವರೊಬ್ಬನೇ ನಿನ್ನ ಮಾರ್ಗದರ್ಶಿಯಾಗಿರಲಿ. ಗೊತ್ತಿರಲಿ ಗೆಳೆಯನೆ, ಈ ಬದುಕಿಗೆ ಸತ್ಯ ಬೇಕು. ಆದರೆ ನಿನ್ನ ಸತ್ಯಕ್ಕೆ ವಂಚನೆಯ ಲೇಪನವಿರಬಾರದು.
33. ನಾವೆಲ್ಲರೂ ಏನನ್ನೋ, ಯಾರನ್ನೋ ಪಡೆಯುವ ಹುಚ್ಚಿನಲ್ಲಿದ್ದೇವೆ, ನಿಧನಾನಂತರ ಅವರೆಲ್ಲರನ್ನು ಹೀಗೆಯೇ ಬಿಟ್ಟು ಹೋಗುತ್ತೇವೆ. ನಿನ್ನ ಗುರಿ ಶೂನ್ಯದೆಡೆಗಿರಲಿ. ಬೆಳಕಿನಂತೆ, ಖಾಲಿತನದಂತೆ ನಿರಾಳನಾಗಿರು, ಶೂನ್ಯನಾಗಿರು. ಮಡಕೆಯ ಬಾಹ್ಯ ಅದನ್ನು ಒಪ್ಪಗೊಳಿಸಿದಷ್ಟೇ ಅದರೊಳಗಿನ ಖಾಲಿತನವು ಅದಕ್ಕೊಂದು ಅರ್ಥ ತುಂಬಿದೆ. ನಾವು ಏನನ್ನು ಸಾಧಿಸಲು ಹಂಬಲಿಸುತ್ತೇವೆ ಎನ್ನುವಷ್ಟೇ ಮುಖ್ಯ, ಶೂನ್ಯದ ಪ್ರಜ್ಞೆ. ಯಾಕೆಂದರೆ ಅದೇ ನಮ್ಮನ್ನು ನಿರಂತರ ಚಲನಶೀಲರನ್ನಾಗಿರಿಸಿದ್ದು.
34. ಸಮರ್ಪಣೆ ಎನ್ನುವುದು ದೌರ್ಬಲ್ಯದ ಲಕಣ್ಷವಲ್ಲ, ದುರ್ವಿಧಿಯ ಮಾತಲ್ಲ. ಈ ಸಮರ್ಪಣೆಯೇ ನಿಜವಾದ ಶಕ್ತಿ. ಅದು ನಮ್ಮ ಎದುರಾಳಿಗೆ ನಮ್ಮ ಅಂತರಂಗದ ಸೌಂದರ್ಯವನ್ನು ತೋರಿಸುತ್ತದೆ. ಬದುಕಿನ ದೈವಶಕ್ತಿಗೆ ತಲೆಬಾಗಿದವರು ಚಾಂಚಲ್ಯಗಳಿಂದ ಮುಕ್ತರಾಗಿ, ಶಾಂತಿಯಲ್ಲಿ ಸಾಮ್ರಾಜ್ಯ ಕಟ್ಟುತ್ತಾರೆ. ಇಡೀ ಪ್ರಪಂಚವೇ ಗಲಿಬಿಲಿಗೊಂಡಾಗಲೂ ಅವರು ದೃಢ ಚಿತ್ತಾಗಿರುತ್ತಾರೆ.
35. ವೈರುದ್ಯಗಳೆನ್ನುವವವು ನಮ್ಮೊಳಗೇ ಇವೆ. ನನ್ನೊಳಗಿನ ವೈರುದ್ಯಕ್ಕಾಗಿ ಅನ್ಯರನ್ನು ಆಪಾದಿಸುವ ಬದಲು, ವಿರೋಧಿಯೇ ಆಗಿರಲಿ ಆತನನ್ನು ಬಲವಾಗಿ ನಂಬು, ಅಪನಂಬಿಕೆಯೇ ನಮ್ಮ ಮೊದಲ ವೈರಿ.
36. ಈ ಪ್ರಪಂಚ ಕೊಡುಕೊಳ್ಳುವಿಕೆಯ ಸಿದ್ಧಾಂತದ ಮೇಲೆ ಸೃಷ್ಠಿಯಾಗಿದೆ. ಒಂದು ತೊಟ್ಟು ನೀರೇ ಆಗಲಿ, ಮಣ್ಣಿನ ಒಂದೊಂದು ಕಣವೇ ಆಗಿರಲಿ ಎಲ್ಲವೂ ಹಂಚಿಕೆಯೇ. ಇದನ್ನು ತಪ್ಪಿಸಲು ದುಷ್ಟವ್ಯೂಹಗಳನ್ನು, ಆಲೋಚನೆಗಳನ್ನು ರಚಿಸಬೇಡ. ನೀನು ಕುತಂತ್ರಿಯಾಗುವುದಾದರೆ ನಿನ್ನ ಸೃಷ್ಠಿಸಿದ ಭಗವಂತ ನಿನ್ನಗಿಂತಲೂ ಮಹಾ ತಂತ್ರಗಾರನೆನ್ನುವುದನ್ನು ಮರೆತು ಮುರ್ಖನಾಗುತ್ತೀಯ. ಆತನ ಅರಿವಿಗೆ ಬಾರದೆ ಒಂದು ಎಲೆಯೂ ಉದುರದು. ಇದನ್ನು ನಂಬು. ಆತನು ಏನು ಮಾಡುತ್ತಿರುವನೋ ಅದೆಲ್ಲವೂ ಸರಿಯಾಗಿಯೇ ಇದೆ ಎಂದು ಒಪ್ಪಿಕೊ.
37. ದೇವರ ಗಡಿಯಾರವೇ ವಿಚಿತ್ರ. ಪ್ರಪಂಚದಲ್ಲಿ ಯಾವುದು? ಯಾವಾಗ? ಘಟಿಸಬೇಕೆನ್ನುವುದನ್ನೆಲ್ಲ ಆತ ಈ ಗಡಿಯಾರದೊಂದಿಗೆ ಹೊಂದಿಸಿಬಿಟ್ಟಿದ್ದಾನೆ. ಒಂದು ಕ್ಷಣವೂ ಈ ನಿಯಮ ತಪ್ಪುವುದಿಲ್ಲ. ಪ್ರಪಂಚದ ಪ್ರತಿ ಜೀವಿಗಾಗಿಯೂ ಅದು ಅಷ್ಟೇ ಕರಾರುವಕ್ಕಾಗಿ ಕ್ರಿಯಾಶೀಲವಾಗಿದೆ. ಹೀಗಾಗಿಯೇ ಪ್ರತಿಯೊಬ್ಬನ ಪ್ರೀತಿಗೆ ಮತ್ತು ಸಾವಿಗೆ ಇದೇ ಗಡಿಯಾರ ಘಂಟೆ ಬಾರಿಸುತ್ತದೆ.
38. ನಾನು ಬದುಕುವ ಈ ಬದುಕನ್ನು ಬದಲಾಯಿಸಿಕೊಳ್ಳಲು ಸಿದ್ಧನಿರುವೆನೇ? ನನ್ನೊಳಗಿನ ನೀಚತನವನ್ನು ನಾನು ಬದಲಿಸಿಕೊಳ್ಳಬಲ್ಲೆನೇ? ಎಂದು ಪರೀಕ್ಷಿಸಿಕೊಳ್ಳಲು ಬಹಳ ತಡವಾಯಿತು ಎಂದು ಯಾವ ಕಾಲಕ್ಕೂ ಅಂದುಕೊಳ್ಳಬೇಡ. ಯಾವ ದಿನವೂ ಈ ಕಾರ್ಯಕ್ಕಾಗಿ ನಿನ್ನ ಹುಟ್ಟಿನ ದಿನದಷ್ಟೆ ಮುಖ್ಯ. ಪ್ರತಿ ಕ್ಷಣದೊಂದಿಗೆ ಮತ್ತು ಉಸಿರಿನೊಂದಿಗೆ ಹೊಸ ಹುಟ್ಟು ಪಡೆಯಲು ಸಾಧ್ಯವಿರುವ ವಿವೇಕದ ಏಕೈಕ ಪ್ರಾಣಿ ನೀನು. ಸಾವಿಗೂ ಮುಂಚೆ ಮರುಹುಟ್ಟುವ, ಅಮರನಾಗುವ ಭಾಗ್ಯ ನಿನಗೊಬ್ಬನಿಗೇ ಇದೆ.
39. ಒಂದು ಭಾಗ ಬದಲಾಗುತ್ತದೆ ಅಷ್ಟೆ. ಇರುವುದೆಲ್ಲವೂ ಅಖಂಡವಾಗಿ ಯಥಾ ಪ್ರಕಾರವೇ ಉಳಿದುಕೊಳ್ಳುತ್ತದೆ. ಹಳೆಯ ಕಳ್ಳ ಹೋಗುತ್ತಾನೆ ಹೊಸಬ ಆಗಲೇ ಸಿದ್ಧನಾಗಿದ್ದಾನೆ. ಈತ ಆತನ ಬದಲಿ ವ್ಯವಸ್ಥೆ ಅಷ್ಟೆ. ಅಂತೆಯೇ ಹೇಳುವುದು, ಇಲ್ಲಿ ಯಾವುದೂ ಉಳಿಯುವುದೂ ಇಲ್ಲ, ಬದಲಾಗುವುದೂ ಇಲ್ಲ. ಜ್ಞಾನಿಯೊಬ್ಬ ಸಾಯುತ್ತಾನೆ, ಮತ್ತೊಬ್ಬ ಜ್ಞಾನಿ ಮರುಹುಟ್ಟುತ್ತಾನಷ್ಟೆ.
40. ಪ್ರೀತಿ ಇಲ್ಲದ ಬದುಕು ಒಂದು ಖಾಲಿ ರಶೀದಿ. ನಿನಗೆ ಬೇಕಾಗಿರುವ ಪ್ರೀತಿ ಭೌತಿಕವಾದುದೊ? ಆಧ್ಯಾತ್ಮಿಕವಾದುದೊ? ಪೂರ್ವದ್ದೊ? ಪಶ್ಚಿಮದ್ದೊ? ಪ್ರಶ್ನಿಸಿಕೊಳ್ಳಲೇಬೇಡ. ಈ ಪ್ರಶ್ನೆಗಳು ಮತ್ತಷ್ಟು ಪ್ರಶ್ನೆಗಳನ್ನೇ ಹುಟ್ಟಿಸುತ್ತವೆ. ನೆನಪಿಡು, ಪ್ರೀತಿಗೆ ಯಾವುದೇ ಶೀರ್ಷಿಕೆ ಇಲ್ಲ, ವ್ಯಾಖ್ಯಾನವಿಲ್ಲ. ಅದು ಅತ್ಯಂತ ಸರಳ, ಶುದ್ಧ ಮತ್ತು ಮಾತೃಮಯಿ. ಅದು ಜೀವಜಲ, ಪ್ರೇಮ ಆತ್ಮದ ಕಿಚ್ಚು, ಈ ಕಿಚ್ಚು ನೀರನ್ನು ಪ್ರೀತಿಸಿದಾಗ ಪ್ರಪಂಚವೇ ಭಿನ್ನವಾಗಿಬಿಡುತ್ತದೆ.



Saturday 5 July 2014

ಅಂಕಣದ ಆಸರೆಯಲ್ಲಿ. . .


          ಅಂಕಣ ಸಾಹಿತ್ಯದೊಂದಿಗಿನ ನನ್ನ ಸಂಬಂಧ, ಒಂದೂವರೆ ದಶಕಗಳಷ್ಟು ಹಳೆಯದ್ದು. ಸರಿಸುಮಾರು 2002 ರಿಂದ ಬೆಳಗಾವಿಯ 'ಹಸಿರು ಕ್ರಾಂತಿ' ಎಂಬ ಸಣ್ಣ ಪತ್ರಿಕೆಗೆ ಅಂಕಣ ಬರೆಯಲಾರಂಭಿಸಿದ ನಾನು, ನಂತರದ ದಿನಗಳಲ್ಲಿ 'ಈ ಭಾನುವಾರ', 'ಪುಷ್ಪದೀಪಿಕಾ', 'ಸಿಹಿ ಗಾಳಿ', 'ಜನತಾ ಮಾಧ್ಯಮ', 'ಅಡ್ವೈಜರ್' ಹಾಗೂ ಇತ್ತೀಚೆಗೆ ಸಂಯುಕ್ತ ಕರ್ನಾಟಕಕ್ಕೆ ಬರೆಯುತ್ತಲೇ ಬಂದೆ. ಇಂಥ ಬರಹ ನನಗೊಂದು ಕುತೂಹಲ ಮತ್ತು ಶಕ್ಯತೆಯ ಪ್ರಶ್ನೆಯಾಗಿಯೆ ಎದುರಾಯಿತು. ಈ ನಿಟ್ಟಿನಲ್ಲಿ ಇಂಗ್ಲೀಷ್‍ನಲ್ಲಿ 'ಲಾಸ್ಟ್ ಪೇಜ್'ನ ಕೆ.ಎ.ಅಬ್ಬಾಸ, ಕನ್ನಡದ ಪಾಪು, ಲಿಂಗದೇವರು ಹಳೆಮನೆ ಹಾಗೂ ಹಾಮಾನ ನನ್ನ ಮುಂದಿದ್ದ ಆದರ್ಶ ಮತ್ತು ಪರಂಪರೆಯಾಗಿದ್ದರು. ಹೀಗಾಗ ಒಂದು ಹೆಜ್ಜೆ ಈ ನಿಟ್ಟಿನಲ್ಲಿ ಯಾಕೆ ಇಟ್ಟು ನೋಡಬಾರದು ಎಂಬ ಕುತೂಹಲ ನನ್ನ ಹಲವಾರು ಮಹತ್ವದ ರಚನೆಗಳಿಗೆ ಕಾರಣವಾಗಿದೆ. ಪ್ರಸ್ತುತ "ಕಾವ್ಯಕ್ಕೆ ಉರುಳು" ಕೃತಿಯೂ ಇಂಥದೇ ಒಂದು ಫಲಶೃತಿ.
          ಅಖಂಡ ಸಂವೇದನೆಯೊಂದರ ಸೆಳಕಿನಂತೆ ಅನಾವರಣಗೊಂಡ ಈ ನನ್ನ ಅಂಕಣಗಳು, ಸಾಹಿತ್ಯದ ನನ್ನ ಅನ್ಯ ಪ್ರಕಾರಗಳ ರಚನೆಗಳಷ್ಟೇ ನನಗೆ ಮಹತ್ವದ್ದೆನ್ನಿಸಿವೆ. ಕಾವ್ಯದ ತೀವ್ರತೆಯನ್ನು, ಗದ್ಯದ ಗಟ್ಟಿತನ ಮತ್ತು ಶಿಸ್ತನ್ನು, ಮಹಾ ಕಾವ್ಯದ ದರ್ಶನವನ್ನು ಅನುಭೂತಿಗೆ ತರುವ ಯಾವುದೇ ಬರಹವಿರಲಿ, ಅದಕ್ಕೆ ಪ್ರಕಾರದ ಪ್ರಶ್ನೆ ಉದ್ಭವಿಸಲೇ ಬಾರದು ಎನ್ನುವುದು ನನ್ನ ವಾದ. ನೀರು ಆರೋಗ್ಯ ಪೂರಕವಾಗಿದ್ದರೆ ಸಾಕು ಅದು ಹಳ್ಳದ್ದೊ, ಹೊಳೆಯದ್ದೊ. ಕೊಳ-ಬಾವಿಯದ್ದೊ ಪ್ರಶ್ನೆಯಾಗಬಾರದು.
          ಪ್ರಸ್ತುತ ಈ ಸಂಕಲನದ ಮೂಲ ಶೀರ್ಷಿಕೆ "ಕಾವ್ಯಕ್ಕೆ ಕತ್ತು ನೀಡಿ". ಆದರೆ ಅದನ್ನು "ಕಾವ್ಯಕ್ಕೆ ಉರುಳು" ಎಂದು ಬದಲಾಯಿಸಿದವರು ಸಂಪಾದಕ ಗೆಳೆಯ ರಾಜು ಮಳವಳ್ಳಿ. ಸಾಹಿತ್ಯವನ್ನು ಅಥವಾ ಇನ್ನೂ ವಿಸ್ತøತವಾಗಿ ಹೇಳುವುದಾದರೆ ಬರಹವನ್ನು ತಬ್ಬಿಕೊಂಡ ಮಾತ್ರಕ್ಕಾಗಿಯೇ ದೇಶಬ್ರಷ್ಟಗೊಂಡು, ಗಡಿಪಾರುಗೊಂಡು, ಕೆಲವೊಮ್ಮೆ ಶಿರಚ್ಚೇದ, ಗಲ್ಲು, ಜೀವಾವಧಿ ಶಿಕ್ಷೆಗೊಳಗಾಗಿ ಸತ್ತು ಹೋದ ಚೇತನಗಳ ಪುನರ್ ಚಿಂತನೆ ಹೇಗಿರಬಹುದು? ಎಂದು ಆಲೋಚಿಸುವಾಗಲೇ, ಈ ಆಲೋಚನೆಯೇ ಕಾರ್ಯರೂಪಕ್ಕೆ ಬರಲಿ, ಅದು ಸಂಯುಕ್ತ ಕರ್ನಾಟಕದ ಸಾಪ್ತಾಹಿಕಕ್ಕೆ ಇರಲಿ ಎಂದು ಒತ್ತಯಿಸಿದವರು ಗೆಳೆಯ ಮಳವಳ್ಳಿ ರಾಜು. ಹೀಗಾಗಿ ಪ್ರಸ್ತುತ ಈ ಸಂಕಲನ ಸಂಯುಕ್ತ ಕರ್ನಾಟಕ ಸಮಗ್ರ ಪತ್ರಿಕಾ ಬಳಗ, ಓದುಗ ಸಮುದಾಯಗಳ ಪ್ರೇರಣೆಯ ಫಲಶೃತಿಯಾಗಿ ನಿಮ್ಮ ಕೈಯಲ್ಲಿದೆ.
          ಯಾವುದೇ ಯೋಜನೆಯ ಕನಸು ಕಾಣುವುದು ಸುಲಭ. ಆದರೆ ಅದನ್ನು ಸಾಧ್ಯವಾಗಿಸುವುದು ಕನಸು ಕಂಡಷ್ಟು ಸರಳವಲ್ಲ. ಕನಸಿನ ಹಿಂದೆ ಕೆಲಸಕ್ಕಾಗಿ ಕಾಡುವ ಮನಸ್ಸುಗಳಿರಬೇಕು. ಹೀಗೆ ಕಾಡಿದವರು ಪದ್ದು, ಗೌರಿ, ನಿರಂತರ ಓದುಗರು. ಇವರು ನನ್ನ ಈ ಹುಡುಕಾಟಕ್ಕೆ, ಸಂಗ್ರಹಕ್ಕೆ ಕಾರಣರಾದವರು. ಹಾಗೆಯೇ, ಬರಹವೆನ್ನುವ ಕನಸಿನ ಖಾಲಿ ದೋಣಿಗೆ ಏನೆಲ್ಲ ಸರುಕು ತುಂಬಿ ಸುಂದರವಾಗಿಸಿ ನಿಮ್ಮ ಕೈಗೆ ನೀಡಿದವರು ಪ್ರಕಾಶಕ ಮಿತ್ರ ಎಂ.ಆರ್.ಗಿರಿರಾಜು ಹಾಗೂ ಕಣ್ವದ ಸಮಗ್ರ ಬಳಗ. ಮರೆಯಬಾರದ ಮನುಷ್ಯ, ಕಲಾವಿದ ಶ್ರೀ ಬಿ.ಎಸ್.ದೇಸಾಯಿ. ಸದಾ ನನ್ನ ಬರಹಗಳನ್ನು ಓದುತ್ತ, ಕೃತಿಯ ಆಲೋಚನೆಯನ್ನು ಮುಖಪುಟದಲ್ಲಿ ಪ್ರತಿಫಲಿಸಲು ಯತ್ನಿಸಿದವರವರು. ಇದಕ್ಕೆ ಪೂರಕವಾಗಿ ಸಹಾಯ ಮಾಡಿದವರು ಅವರ ಮಗ ಶಶಿಕಿರಣ ದೇಸಾಯಿ ಮತ್ತು ಕುಟುಂಬ. ಹೀಗಾಗಿ ಇದು ರಾಗಂ ಎಂಬ ಲೇಖಕನೊಬ್ಬನ ಕೃತಿಗಳ ಸಂಖ್ಯೆಗೆ ಸೇರುವುದೇನೊ ಸತ್ಯ, ಆದರೆ ಅದಕ್ಕೂ ಪ್ರಾಮಾಣಿವಾದ ವಿಚಾರ ಇದು ಇವರೆಲ್ಲರ ಕೃತಿ ಎನ್ನುವುದೂ ಕೂಡ.
   'ಶೋ ಮಸ್ಟ್ ಗೋ ಆನ್' ಎನ್ನುವಂತೆ "ಕಾವ್ಯಕ್ಕೆ ಉರುಳು" ಯಥಾ ಪ್ರಕಾರ ಸಂಯುಕ್ತ ಕರ್ನಾಟಕದಲ್ಲಿ ಮುಂದುವರೆಯುತ್ತದೆ. ಮೊದಲ ಸಂಗ್ರಹವಾಗಿ ಮಾತ್ರ ಈ ಕೃತಿ ನಿಮ್ಮ ಕೈಯಲ್ಲಿದೆ.