Saturday 5 July 2014

ಅಂಕಣದ ಆಸರೆಯಲ್ಲಿ. . .


          ಅಂಕಣ ಸಾಹಿತ್ಯದೊಂದಿಗಿನ ನನ್ನ ಸಂಬಂಧ, ಒಂದೂವರೆ ದಶಕಗಳಷ್ಟು ಹಳೆಯದ್ದು. ಸರಿಸುಮಾರು 2002 ರಿಂದ ಬೆಳಗಾವಿಯ 'ಹಸಿರು ಕ್ರಾಂತಿ' ಎಂಬ ಸಣ್ಣ ಪತ್ರಿಕೆಗೆ ಅಂಕಣ ಬರೆಯಲಾರಂಭಿಸಿದ ನಾನು, ನಂತರದ ದಿನಗಳಲ್ಲಿ 'ಈ ಭಾನುವಾರ', 'ಪುಷ್ಪದೀಪಿಕಾ', 'ಸಿಹಿ ಗಾಳಿ', 'ಜನತಾ ಮಾಧ್ಯಮ', 'ಅಡ್ವೈಜರ್' ಹಾಗೂ ಇತ್ತೀಚೆಗೆ ಸಂಯುಕ್ತ ಕರ್ನಾಟಕಕ್ಕೆ ಬರೆಯುತ್ತಲೇ ಬಂದೆ. ಇಂಥ ಬರಹ ನನಗೊಂದು ಕುತೂಹಲ ಮತ್ತು ಶಕ್ಯತೆಯ ಪ್ರಶ್ನೆಯಾಗಿಯೆ ಎದುರಾಯಿತು. ಈ ನಿಟ್ಟಿನಲ್ಲಿ ಇಂಗ್ಲೀಷ್‍ನಲ್ಲಿ 'ಲಾಸ್ಟ್ ಪೇಜ್'ನ ಕೆ.ಎ.ಅಬ್ಬಾಸ, ಕನ್ನಡದ ಪಾಪು, ಲಿಂಗದೇವರು ಹಳೆಮನೆ ಹಾಗೂ ಹಾಮಾನ ನನ್ನ ಮುಂದಿದ್ದ ಆದರ್ಶ ಮತ್ತು ಪರಂಪರೆಯಾಗಿದ್ದರು. ಹೀಗಾಗ ಒಂದು ಹೆಜ್ಜೆ ಈ ನಿಟ್ಟಿನಲ್ಲಿ ಯಾಕೆ ಇಟ್ಟು ನೋಡಬಾರದು ಎಂಬ ಕುತೂಹಲ ನನ್ನ ಹಲವಾರು ಮಹತ್ವದ ರಚನೆಗಳಿಗೆ ಕಾರಣವಾಗಿದೆ. ಪ್ರಸ್ತುತ "ಕಾವ್ಯಕ್ಕೆ ಉರುಳು" ಕೃತಿಯೂ ಇಂಥದೇ ಒಂದು ಫಲಶೃತಿ.
          ಅಖಂಡ ಸಂವೇದನೆಯೊಂದರ ಸೆಳಕಿನಂತೆ ಅನಾವರಣಗೊಂಡ ಈ ನನ್ನ ಅಂಕಣಗಳು, ಸಾಹಿತ್ಯದ ನನ್ನ ಅನ್ಯ ಪ್ರಕಾರಗಳ ರಚನೆಗಳಷ್ಟೇ ನನಗೆ ಮಹತ್ವದ್ದೆನ್ನಿಸಿವೆ. ಕಾವ್ಯದ ತೀವ್ರತೆಯನ್ನು, ಗದ್ಯದ ಗಟ್ಟಿತನ ಮತ್ತು ಶಿಸ್ತನ್ನು, ಮಹಾ ಕಾವ್ಯದ ದರ್ಶನವನ್ನು ಅನುಭೂತಿಗೆ ತರುವ ಯಾವುದೇ ಬರಹವಿರಲಿ, ಅದಕ್ಕೆ ಪ್ರಕಾರದ ಪ್ರಶ್ನೆ ಉದ್ಭವಿಸಲೇ ಬಾರದು ಎನ್ನುವುದು ನನ್ನ ವಾದ. ನೀರು ಆರೋಗ್ಯ ಪೂರಕವಾಗಿದ್ದರೆ ಸಾಕು ಅದು ಹಳ್ಳದ್ದೊ, ಹೊಳೆಯದ್ದೊ. ಕೊಳ-ಬಾವಿಯದ್ದೊ ಪ್ರಶ್ನೆಯಾಗಬಾರದು.
          ಪ್ರಸ್ತುತ ಈ ಸಂಕಲನದ ಮೂಲ ಶೀರ್ಷಿಕೆ "ಕಾವ್ಯಕ್ಕೆ ಕತ್ತು ನೀಡಿ". ಆದರೆ ಅದನ್ನು "ಕಾವ್ಯಕ್ಕೆ ಉರುಳು" ಎಂದು ಬದಲಾಯಿಸಿದವರು ಸಂಪಾದಕ ಗೆಳೆಯ ರಾಜು ಮಳವಳ್ಳಿ. ಸಾಹಿತ್ಯವನ್ನು ಅಥವಾ ಇನ್ನೂ ವಿಸ್ತøತವಾಗಿ ಹೇಳುವುದಾದರೆ ಬರಹವನ್ನು ತಬ್ಬಿಕೊಂಡ ಮಾತ್ರಕ್ಕಾಗಿಯೇ ದೇಶಬ್ರಷ್ಟಗೊಂಡು, ಗಡಿಪಾರುಗೊಂಡು, ಕೆಲವೊಮ್ಮೆ ಶಿರಚ್ಚೇದ, ಗಲ್ಲು, ಜೀವಾವಧಿ ಶಿಕ್ಷೆಗೊಳಗಾಗಿ ಸತ್ತು ಹೋದ ಚೇತನಗಳ ಪುನರ್ ಚಿಂತನೆ ಹೇಗಿರಬಹುದು? ಎಂದು ಆಲೋಚಿಸುವಾಗಲೇ, ಈ ಆಲೋಚನೆಯೇ ಕಾರ್ಯರೂಪಕ್ಕೆ ಬರಲಿ, ಅದು ಸಂಯುಕ್ತ ಕರ್ನಾಟಕದ ಸಾಪ್ತಾಹಿಕಕ್ಕೆ ಇರಲಿ ಎಂದು ಒತ್ತಯಿಸಿದವರು ಗೆಳೆಯ ಮಳವಳ್ಳಿ ರಾಜು. ಹೀಗಾಗಿ ಪ್ರಸ್ತುತ ಈ ಸಂಕಲನ ಸಂಯುಕ್ತ ಕರ್ನಾಟಕ ಸಮಗ್ರ ಪತ್ರಿಕಾ ಬಳಗ, ಓದುಗ ಸಮುದಾಯಗಳ ಪ್ರೇರಣೆಯ ಫಲಶೃತಿಯಾಗಿ ನಿಮ್ಮ ಕೈಯಲ್ಲಿದೆ.
          ಯಾವುದೇ ಯೋಜನೆಯ ಕನಸು ಕಾಣುವುದು ಸುಲಭ. ಆದರೆ ಅದನ್ನು ಸಾಧ್ಯವಾಗಿಸುವುದು ಕನಸು ಕಂಡಷ್ಟು ಸರಳವಲ್ಲ. ಕನಸಿನ ಹಿಂದೆ ಕೆಲಸಕ್ಕಾಗಿ ಕಾಡುವ ಮನಸ್ಸುಗಳಿರಬೇಕು. ಹೀಗೆ ಕಾಡಿದವರು ಪದ್ದು, ಗೌರಿ, ನಿರಂತರ ಓದುಗರು. ಇವರು ನನ್ನ ಈ ಹುಡುಕಾಟಕ್ಕೆ, ಸಂಗ್ರಹಕ್ಕೆ ಕಾರಣರಾದವರು. ಹಾಗೆಯೇ, ಬರಹವೆನ್ನುವ ಕನಸಿನ ಖಾಲಿ ದೋಣಿಗೆ ಏನೆಲ್ಲ ಸರುಕು ತುಂಬಿ ಸುಂದರವಾಗಿಸಿ ನಿಮ್ಮ ಕೈಗೆ ನೀಡಿದವರು ಪ್ರಕಾಶಕ ಮಿತ್ರ ಎಂ.ಆರ್.ಗಿರಿರಾಜು ಹಾಗೂ ಕಣ್ವದ ಸಮಗ್ರ ಬಳಗ. ಮರೆಯಬಾರದ ಮನುಷ್ಯ, ಕಲಾವಿದ ಶ್ರೀ ಬಿ.ಎಸ್.ದೇಸಾಯಿ. ಸದಾ ನನ್ನ ಬರಹಗಳನ್ನು ಓದುತ್ತ, ಕೃತಿಯ ಆಲೋಚನೆಯನ್ನು ಮುಖಪುಟದಲ್ಲಿ ಪ್ರತಿಫಲಿಸಲು ಯತ್ನಿಸಿದವರವರು. ಇದಕ್ಕೆ ಪೂರಕವಾಗಿ ಸಹಾಯ ಮಾಡಿದವರು ಅವರ ಮಗ ಶಶಿಕಿರಣ ದೇಸಾಯಿ ಮತ್ತು ಕುಟುಂಬ. ಹೀಗಾಗಿ ಇದು ರಾಗಂ ಎಂಬ ಲೇಖಕನೊಬ್ಬನ ಕೃತಿಗಳ ಸಂಖ್ಯೆಗೆ ಸೇರುವುದೇನೊ ಸತ್ಯ, ಆದರೆ ಅದಕ್ಕೂ ಪ್ರಾಮಾಣಿವಾದ ವಿಚಾರ ಇದು ಇವರೆಲ್ಲರ ಕೃತಿ ಎನ್ನುವುದೂ ಕೂಡ.
   'ಶೋ ಮಸ್ಟ್ ಗೋ ಆನ್' ಎನ್ನುವಂತೆ "ಕಾವ್ಯಕ್ಕೆ ಉರುಳು" ಯಥಾ ಪ್ರಕಾರ ಸಂಯುಕ್ತ ಕರ್ನಾಟಕದಲ್ಲಿ ಮುಂದುವರೆಯುತ್ತದೆ. ಮೊದಲ ಸಂಗ್ರಹವಾಗಿ ಮಾತ್ರ ಈ ಕೃತಿ ನಿಮ್ಮ ಕೈಯಲ್ಲಿದೆ.



                                                                                                

No comments:

Post a Comment