Wednesday 16 November 2016

ಸಾವಿಗಿನ್ಯಾವ ನೆಲ?



ದೇಶ ಸಣ್ಣದೊ, ದೊಡ್ಡದೊ ರಾಜಕೀಯ ವಿಪ್ಲವ ಅಥವಾ ಪಲ್ಲಟಗಳಿಲ್ಲದ ಒಂದು ದೇಶ ಇಲ್ಲವೇ ಇಲ್ಲ ಎಂದೇ ಹೇಳಬೇಕು. ಆಂತರಿಕ ಕ್ಷೋಭೆ, ಕಲಹ ಹಾಗೂ ಯುದ್ಧಗಳ ಹಿನ್ನಲೆಯಲ್ಲಿ ಐನ್ಸ್ಟಿನ್ ಹೇಳುತ್ತಿದ್ದರು, The destinies of all countries are closely interwoven and the conditions are same.
ಭಾರತದ ಭಾಗದಂತೆಯೇ ಇರುವ ಪುಟಾಣಿ ದೇಶ ಶ್ರೀಲಂಕ. ಇದರೊಂದಿಗಿನ ಭಾರತದ ನಂಟು ಭೌತಿಕವಾದುದಲ್ಲ. ಬದಲಾಗಿ ಭಾವನಾತ್ಮಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ನೆಲೆಯದ್ದು. ಶ್ರೀಲಂಕೆಯ ಭಾವದೊಳು ಕೈಯಾಡಿಸಿದಷ್ಟೂ ಸಿಗುತ್ತವೆ ಭಾರತಗಳು, ಭಾರತದ ಇತಿಹಾಸ ಓದಿದಷ್ಟು ಕಾಣಿಸುತ್ತವೆ ಸಿಡಿದ ಮತ್ತೆ ಮತ್ತೆ ಸಿಡಿಯುತ್ತಲೇ ಕೂಡಿದ ಶ್ರೀಲಂಕಾಗಳು. ಒಂದರ್ಥದಲ್ಲಿ ಭಾರತದ ಇತಿಹಾಸದಷ್ಟೇ ದೀರ್ಘ ಶ್ರೀಲಂಕಾದ ಇತಿಹಾಸ.
ಶ್ರೀಲಂಕಾದ ಹಲವು ಮಜಲುಗಳ ಇತಿಹಾಸದಲ್ಲಿ ನಮ್ಮ ಕ್ಷಣದ ಆಯ್ಕೆ ಅದರ ಸಿವಿಲ್ ವಾರ್ ಅವಧಿ. ಸಂದರ್ಭದಲ್ಲಿ ಮಹತ್ವದ ಪತ್ರಕರ್ತರ, ಸಾಹಿತಿಗಳ, ನಟರ ಹಾಗೂ ಸೃಜನಶೀಲ ಚಿಂತಕರ ಹತ್ಯಯಾಯಿತು. ಮೂಲಕ ಶ್ರೀಲಂಕದಂಥ ಪುಟ್ಟರಾಷ್ಟ್ರವೂ ಬೌದ್ಧಿಕ ಅಸಹನೀಯತೆಯಿಂದ ಮುಕ್ತವಲ್ಲ ಎನ್ನುವುದಕ್ಕೆ ಸಾಕ್ಷಿಯಾಯಿತು. ಶ್ರೀಲಂಕ ಸಿವಿಲ್ವಾರ್ ಅವಧಿಯಲ್ಲಿ ಮುಖ್ಯವಾಗಿ ಪತ್ರಕರ್ತರ ಹತ್ಯೆಯಾಯಿತು ಎನ್ನುವುದು ಗಮನಿಸಬೇಕಾದ ಅಂಶ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಪರೂಪದ ಪುಟಗಳಾಗಿದ್ದ ಪತ್ರಕರ್ತರು ಹತ್ಯೆಗೊಳ್ಳುವುದರ ಮೂಲಕ ಕಳಚಿದ ಕೊಂಡಿಗಳಂತಾದರು.
ನಾವು ಕೇಳಿಸಿಕೊಳ್ಳಲಾಗದ ಸತ್ಯವನ್ನು ಸಾರಿಹೇಳಲು ಯತ್ನಿಸಿ ಸಾವನ್ನು ಎದುರಿಸಿದ ಅಕ್ಷರಲೋಕದ ಗೆಳೆಯರ ಹೆಸರುಗಳನ್ನು ಕೇಳಿಸಿಕೊಳ್ಳದ ಭಾವದಾದಿದ್ರ್ಯಕ್ಕೆ ನಾವು ಸಾಕ್ಷಿಗಳಾಗಬಾರದು ಎನ್ನುವ ಉದ್ದೇಶದಿಂದ ಅವುಗಳನ್ನಿಲ್ಲಿ ದಾಖಲಿಸುತ್ತಿದ್ದೇನೆ. ನದರಜ್ ಅತ್ಪುತ್ರಾಜಾ, ಪ್ರೇಮಕೀರ್ತಿ ಡಿಅಲ್ವಿಸ್, ನಿರ್ಮಲ ರಾಜನ್, ಕೆ.ಎಸ್.ರಾಜಾ, ತರಕ್ಕಿ ಶಿವರಾಂ, ರೇಲಂಗಿ ಸೆಲ್ವರಾಜ, ಷಣ್ಮುಗಲಿಂಗಂ, ಸಿನ್ನಥಂಬಿ, ಶಿವಮಹಾರಾಜ, ಸುಬ್ರಮನ್ಯಮ್, ರಜನಿ, ಲಾಸಂತ ಮತ್ತು ಸುಗಿರದರ್ಜನ್ ಹೀಗೆ ಒಟ್ಟು ಹದಿನೇಳು ಪ್ರತಿಭಾನ್ವಿತ ಶ್ರೀಲಂಕನ್ ಪತ್ರಕರ್ತರ ಹತ್ಯೆ ದೇಶದ ಸಿವಿಲ್ವಾರ್ ಅವಧಿಯಲ್ಲಿ ನಡೆಯಿತು ಎಂದು ದಾಖಲಿಸುತ್ತದೆ ದೇಶದ ಇತಿಹಾಸ.
 ನೆನಪಿರಲಿ ಬಂಧುಗಳೆ ಇದು ಒಟ್ಟು ಶ್ರೀಲಂಕಾದ ಇತಿಹಾಸದಲ್ಲಿ ನಡೆದ ಪತ್ರಕರ್ತರ ಹತ್ಯೆಯ ಪಟ್ಟಿಯಲ್ಲ ಬದಲಾಗಿ ಕೇವಲ ಶ್ರೀಲಂಕಾದ ಸಿವಿಲ್ವಾರ್ ಅವಧಿಯಲ್ಲಿ ಹತ್ಯೆಗೊಂಡವರ ಹಲಕೆಲವು ಹೆಸರುಗಳಷ್ಟೆ.
ತರಕ್ಕಿ ಶಿವರಾಂ ಅಥವಾ ಧರ್ಮರತ್ನಂ ಶಿವರಾಂ, 1959 ದಿಂದ 2005 ಅವಧಿಯಲ್ಲಿ ಬದುಕಿದ್ದ ಮಹತ್ವದ ಪತ್ರಕರ್ತ. ಈತನ ಜೀವಿತಾವಧಿ ಕೇವಲ ನಲ್ವತ್ತೈದು ವರ್ಷ. ಶ್ರೀಲಂಕಾ ದೇಶ ಕಂಡ ಅಪರೂಪದ ಲೇಖಕ, ಚಳುವಳಿಕಾರ ಹಾಗೂ ಪರ್ತಕರ್ತ. ಈತ ಬರೆದುದೆಲ್ಲವೂ ತಮಿಳು ಭಾಷೆಯಲ್ಲಿ ಬದುಕು ಕೊನೆಯುಸಿರೆಳೆದದ್ದು ಬಂಬಲಪಿತ್ಯ ಪೊಲೀಸ್ ಸ್ಷೇಷನ್ ಎದುರಿನಲ್ಲಿ. ಇದಲ್ಲವೆ ವ್ಯಂಗ್ಯ?
ತರಕ್ಕಿ ಶಿವರಾಂ ಶ್ರೀಲಂಕಾ ದೇಶದ ಬಟ್ಟಿಕೊಲವಾ ಬಳಿಯ ಅಕ್ಕರಾಯಪಟ್ಟು ಪ್ರಾಂತದ ಪ್ರತಿಷ್ಠಿತ ಜಮೀನ್ದಾರಿಕೆಯ ರಾಜಕೀಯ ಹಿನ್ನಲೆಯ ಶ್ರೀಮಂತ ಕುಟುಂಬದಲ್ಲಿ 11 ಅಗಷ್ಟ್ 1959ರಲ್ಲಿ ಜನಿಸಿದಾತ. ತಮಿಳು ಭಾಷೆಯಲ್ಲಿ ಬರೆದು ಬದುಕಿದ ಶಿವರಾಂ ಇದೇ ಬಟ್ಟಿಕೊಲವಾದ ಸೇಂಟ್ ಮೈಖಲ್ ಹಾಗೂ ಕೋಲಂಬೊದ ಅಕ್ಯೂನಾಸ್ ಕಾಲೇಜುಗಳಲ್ಲಿ ಶಿಕ್ಷಣವನ್ನು ಪೂರೈಸಿದ. 1982ರಲ್ಲಿ ಪೆರಾದೆನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದನಾದರೂ ಶ್ರೀಲಂಕನ್ ಸಿವಿಲ್ವಾರ್ ಮೊದಲ ಹಂತದ ಚಟುವಟಿಕೆಗಳ ಬಿಸಿ ತಾಗಿ ಓದಿಗೆ ವಿದಾಯ ಹೇಳಿ ಪತ್ರಕರ್ತನಾಗಿ ಚಳುವಳಿಯನ್ನು ಸೇರಿದ.
ಗಾಂಧಿಯನ್ ಮೂವ್ಹ್ಮೆಂಟ್ ತರಕ್ಕಿ ಶಿವರಾಂ ಆಯ್ದುಕೊಂಡ ಮೊದಲ ದಾರಿ. ಈಗ ಆತನ ವಯಸ್ಸು ಇಪತ್ಮೂರು. ಇಲ್ಲಿಂದ ಮುನ್ನಡೆದ ಶಿವರಾಂ ಅನೇಕ ತಮಿಳು ಪರ ಸಂಘಟನೆಗಳಲ್ಲಿ ಒಂದಾಗಿದ್ದ ಪೀಪಲ್ಸ್ ಆರ್ಗ್ನೈಜೇಶನ್ ಆಫ್ ತಮಿಳ ಈಲಂನ್ನು ಸೇರಿಕೊಂಡು 1983ರಲ್ಲಿ ಪ್ರಭಲವಾದ ಶ್ರೀಲಂಕನ್ ಸಿವಿಲ್ವಾರ್ ಮಹತ್ವದ ಲೇಖಕನಾದ. ಎಸ್.ಆರ್ ಎಂಬ ಹೆಸರಿನಡಿ ಬರೆಯುತ್ತ ಹೋದ ಶಿವರಾಂ ತಮಿಳು ಉಗ್ರವಾದಿ ಎಂಬ ಹಣೆಪಟ್ಟಿ ಕಟ್ಟಿಕೊಂಡ.
ಅತಂತ್ರ ಅಪಾಯದ ಇಟ್ಟಿಗೆಗಳ ಮೇಲೆ ಕಾಲಿಡುತ್ತಲೆ ಅಲ್ಲಲ್ಲಿ ಕನಸುಗಳ ಹಬ್ಬ ಆಚರಿಸಿಕೊಳ್ಳುತ್ತದೆ ಪತ್ರಕರ್ತರ ಬದುಕು. ಚಳುವಳಿ ಸೇರಿದ ಐದು ವರ್ಷಗಳ ನಂತರ ಮುದುವೆಯಾದ ಶಿವರಾಂ. ಬಾಳಸಂಗಾತಿ ಅದೇ ಬಟ್ಟಿಕೊಲವಾದವಳು. ಹೆರ್ಲಿ ಯೋಗರಂಜಿನಿ ಪೂಪಲ ಪಿಲ್ಲೈ ಎಂಬ ಹೆಸರಿನ ಇವಳು ವೈಷ್ಣವಿ, ವೈತೇಕಿ ಮತ್ತು ಎಂಡ್ರಿವ್ ಎನ್ನುವ ಮೂರು ಮಕ್ಕಳನ್ನು ನೀಡಿ ಶಿವರಾಂನ ಬದುಕಿಗೆ ಪ್ರೀತಿಯ ಆದ್ರ್ರರತೆಯನ್ನು ತುಂಬಿದವಳು. ಹಿಂದೂ ಹಿನ್ನಲೆಯಿಂದಲೇ ಕುಟುಂಬ ಬಂದುದಾಗ್ಯೂ ಕ್ರಿಶ್ಚಿಯನ್ ಪ್ರಭಾವಕ್ಕೇವು ಕೊರತೆ ಇರಲಿಲ್ಲ. 1988 ಸಪ್ಟೆಂಬರ್ 8ರಂದು ಮದುವೆಯಾದ ದಂಪತಿಗಳಿಗೆ ದಕ್ಕಿದ ನೆಮ್ಮದಿಯ ದಿನಗಳು ಮಾತ್ರ ಬೆರಳೆಣಿಕೆಯಷ್ಟೆ ಎಂದು ಹೇಳಬೇಕು.
1988ರಲ್ಲಿ ಶಿವರಾಂ ಬದುಕಿನ ಅತ್ಯಂತ ಮಹತ್ವದ ವರ್ಷ ಎಂದು ಹೇಳದೆ, ಶಿವರಾಂ ಮದುವೆಯಾದ ಇದೇ ವರ್ಷ ಇಂಡೋ-ಲಂಕನ್ ಒಪ್ಪಂದ ಏರ್ಪಟ್ಟು ಚಳುವಳಿಗಳನ್ನೆಲ್ಲ ಬಗ್ಗು ಬಡಿಯುವ ಕಾರ್ಯಾಚರಣೆ ಆರಂಭವಾಯಿತು. ಒಂದೆಡೆ ಪಿಎಲ್ಓಟಿಇ ಸಂಘಟನೆಯ ನಾಯಕ ಉಮಾ ಮಹೇಶ್ವರನ್ ಸಂಘಟನೆಯ ಜನರಲ್ ಸೆಕ್ರೆಟರಿಯಾಗಿ ಶಿವರಾಂನನ್ನು ನಿಯುಕ್ತಗೊಳಿಸುತ್ತಿದ್ದರೆ ಇನ್ನೊಂದೆಡೆ ಶಿವರಾಂ ಅತ್ಯಂತ ಪ್ರೀತಿಯ ಗೆಳೆಯ, ನಟ, ಚಳುವಳಿಕಾರನಾಗಿದ್ದ ರಿಚರ್ಡ್ ಡಿಸೋಜಾನ ಹತ್ಯೆಯ ಯೋಜನೆ ರೂಪಗೊಳ್ಳುತ್ತಿತ್ತು. ಆಗಲೇ ಯುಎನ್ ಪೋಷಿತ ಇಂಟರ್ ಪ್ರೆಸ್ ಸರ್ವಿಸ್ ವರದಿಗಾರನಾಗಿದ್ದ ರಿಚರ್ಡ್ನೇ ಶಿವರಾಂನನ್ನು ಐಲ್ಯಾಂಡ್ ಪತ್ರಿಕೆಗೆ ರಾಜಕೀಯ ಸುದ್ದಿಗಾರನಾಗಿ ಪರಿಚಯಿಸಿದ. ಮುಂದೊರೆದ ಶಿವರಾಂ ಗಾಮಿನಿ, ತಾರಕಾ, ಸ್ಟಾರ್ ಹಾಗೂಸಿಂಹಳೀಸ್ ಪತ್ರಿಕೆಗಳಲ್ಲಿ ವರದಿಗಾರನಾಗಿ ತನ್ನ ವ್ಯಕ್ತಿತ್ವ ರೂಪಿಸಿಕೊಂಡ. ಎಲ್ಲ ನರಿಯಾಗಿತ್ತು ಎನ್ನುವ ವೇಳೆಯಲ್ಲಿಯೆ ಅಂದರೆ 1990ರಲ್ಲಿ ಆತ್ಮೀಯ ಕಲಾವಿದ ಗೆಳೆಯ ರಿಜರ್ಡ್ ಡಿಸೋಜಾನ ಹತ್ಯೆಯಾಯಿತು. ಇದು ಒಂದು ರೀತಿಯಲ್ಲಿ ಶಿವರಾಂಗೆ ನೀಡಿದ ಎಚ್ಚರಿಕೆಯೂ ಆಗಿತ್ತು.
 ತರಕ್ಕಿ ಶಿವರಾಂ ಶ್ರೀಲಂಕಾದಲ್ಲಿ ಮನೆಯಾತಾಗಿದ್ದು ಎರಡು ಮಹತ್ವದ ಬರಹದ ರೀತಿಗಳಿಂದಾಗಿ. ಅವನ ಮಿಲಿಟರಿ ಸಾಯಿನ್ ಕುರಿತಾದ ಬರಹಗಳು ಹಾಗೂ ಪೊಲಿಟಿಕಲ್ ಫಿಲಾಸಫಿ ಕುರಿತಾದ ವಿವರಣೆಗಳು ಸಮಕಾಲೀನ ಪತ್ರಕರ್ತರಲ್ಲಿಯೇ ಆತನನ್ನು ಭಿನ್ನವಾಗಿಸಿತು. 1990 ದಶಕದ ತರಕ್ಕಿಯ ಬರಹಗಳು ಅಂತರ್ ರಾಷ್ಟ್ರೀಯ ಮನ್ನಣೆಯ ಸಂಡೆ ಟೈಮ್ಸ್, ತಮಿಳ ಟೈಮ್ಸ್, ಡೇಲಿ ಮಿರರ್ ಹಾಗೂ ವೀರಕೇಸರಿ ಪತ್ರಿಕೆಗಳ ಅವಿಭಾಜ್ಯ ಅಂಗದಂತೆ ಪ್ರಕಟವಾಗಲಾರಂಭಿಸಿದವು.
1991ರಲ್ಲಿ ಪ್ರಕಟವಾದ ತರಕ್ಕಿ ಶಿವರಾಂನ ಎರಡು ಪುಸ್ತಕಗಳಾದ ಆನ್ ಇನ್ಸೈಡರ್ ಎನಲಿಸಸ್ ಆಫ್ ಎಥ್ನಿಕ್ ಕಾನ್ಪ್ಲಿಕ್ಟ್ ಇನ್ ಶ್ರೀಲಂಕಾ ಹಾಗೂ ಅವನ ಅನೇಕ ತಮಿಳು ಲೇಖನಗಳು ಜಾಗತಿಕ ಮಟ್ಟದ ಇತಿಹಾಸಕಾರರ, ರಾಜಕೀಯ ಚಿಂತಕರ, ವಿಜ್ಞಾನಿಗಳ, ಮಾನವಶಾಸ್ತ್ರಜ್ಞರ, ಗಮನ ಸೆಳೆಯಲಾರಂಭಿಸಿದವು. ಕೊಲರ್ಯಾಡೊ, ಕರೋಲಿನಾ, ಕ್ಲರ್ಕ್ ವಿಶ್ವವಿದ್ಯಾಲಯಗಳಿಂದ ಚಿಂತಕರು ಶಿವರಾಂನೆಡೆಗೆ ಬೆರಗು ಕಣ್ಣುಗಳಿಂದ ನೋಡಲಾರಂಭಿಸಿದರು.
1990 ವೇಳೆಗೆ ಪ್ರಪಂಚದ ಅನೇಕ ದೇಶಗಳ ಸರಕಾರಗಳು ಹಾಗೂ ಎನ್ಜಿಓ ಸಂಘಟನೆಗಳು ತರಕ್ಕಿ ಎಡೆಗೆ ಸ್ಣೆಹದ ಹಸ್ತ ಚಾಚಿದವು. ತರಕ್ಕಿ ಈಗ ಏಷಿಯಾ, ಇರೋಪ, ಅಮೇರಿಕಾಗಳನ್ನು ವ್ಯಾಪಕವಾಗಿ ಸುತ್ತಿದ. ಇನ್ನೇನು ಜಪಾನಿಗೆ ಹೋಗುವುದು ಶಿವರಾಂರ ಮುಂದಿನ ಗುರಿಯಾಗಿತ್ತು ಆದರೆ ಘಟಿಸಬಾರದ ಘಟನೆ ಜರುಗಿಹೋಯಿತು. ಮಧ್ಯ ಅನೇಕ ಬಾರಿ ತರಕ್ಕಿಗೆ ಕೊಲೆ ಬೆದರಿಕೆಯ ಸಂದೇಶಗಳು ಬರುತ್ತಲೇ ಇದ್ದವು. ಇದನ್ನೇ ಹಿನ್ನಲೆಯಾಗಿಟ್ಟುಕೊಂಡೇ ವ್ಹೇರ್ ಎಲ್ಸ್ ಶುಡ್ ಡೈ ಬಟ್ ಹೀಯರ್ ಎನ್ನುವ ಮಹತ್ವದ ಸಾರ್ವಜನಿಕ ಭಾಷಣವನ್ನು ಈತ ಮಾಡಿದ್ದ. ಪ್ರಮುಖವಾಗಿ ಶ್ರೀಲಂಕಾದ ಜಾತಿಕಾ ಹೇಲಾ ಉರ್ಮಯಾ ಮತ್ತು ಜನತಾ ವಿಮುಕ್ತಿ ಪೆರಮುನಾ ಸಂಘಟನೆಗಳು ಪದೆ ಪದೆ ಶಿವರಾಂನಿಗೆ ಕೊಲೆ ಬೆದರಿಕೆಯ ಸಂದೇಶಗಳು ರವಾನಿಸಿದ್ದವು. ಹಿನ್ನಲೆಯಲ್ಲಿ 2004ರಲ್ಲಿ ಈತನ ಮನೆಯನ್ನು ಶೋಧಿಸಿದ ಶ್ರೀಲಂಕನ್ ಪೊಲೀಸ್ ಈತನಿಗಿದ್ದ ಕೊಲೆ ಬೆದರಿಕೆಯ ಮಾಹಿತಿಯನ್ನು ಕಲೆ ಹಾಕಿದ್ದವು.
28 ಏಪ್ರಿಲ್, 2005 ತರಕ್ಕಿ ಶಿವರಾಂ ತನ್ನ ನಿತ್ಯದ ಚಳುವಳಿ, ಭಾಷಣ, ಬರಹದಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದಾಗ ಮನೆಯಲ್ಲಿದ್ದ ಈತನನ್ನು ಬಿಳಿ ಬಣ್ಣದ ವ್ಯಾನ್ನಲ್ಲಿ ಬಂದ ನಾಲ್ಕು ಜನ ಅಪರಿಚಿತರು ಅಪಹರಿಸಿದರು. ಅಲ್ಲಿಂದಾಚೆ ಎರಡು-ಮೂರು ದಿನಗಳವರೆಗೆ ಯಾವ ಮಾಹಿತಿಗಳೂ ಲಭ್ಯವಾಗಲಿಲ್ಲ. ಮುಂದೆ ಬಂಬಲ ಪೀಠ ಪೊಲೀಸ್ ಸ್ಟೇಷನ್ ಎದುರುಗಡೆ ತರಕ್ಕಿಯ ಹೆಣ ಸಿಕ್ಕಿತು. ಇದು ಶ್ರೀಲಂಕಾದ ಪಾರ್ಲಿಮೆಂಟ್ ಸಮೀಪದ ಸ್ಥಳವೇ ಆಗಿತ್ತೆನ್ನುವದೊಂದು ವಿಪರ್ಯಾಸ. ಶರೀರದ ಮೇಲೆ ಈತನನ್ನು ಹಿಗ್ಗಾ-ಮುಗ್ಗಾ ಥಳಿಸಿದ ಗುರುತುಗಳು, ತಲೆಗೆ ಗುಂಡು ಹಾರಿಸಿದ ಸ್ಪಷ್ಟ ಕುರುಹು.
ಹರಣ-ಹಂಸ ಎಲ್ಲಿಂದಲೇ ಹಾರಲಿ ಅದರ ನೆನಪು ಸ್ಮರಣೀಯ. ಹೀಗೆ ನಮ್ಮ ನಿತ್ಯದ ಸ್ಮರಣೆ ತರಕ್ಕಿ ಶಿವರಾಂ.