Sunday 11 August 2013

`ಪಾರಿಜಾತ’ವೆಂದರೆ ಅವಳೇ!?

               
                                                                            ಹಾಲ ಬೆಳದಿಂಗಳ ಅವಳ ಹಣೆ
                              ಈಗ ಇಬ್ಬನಿಯಲ್ಲಿ ಅದ್ದಿದ ಹೂವಿನಂತೆ
                            ದೇಹ ಕೊರಡು ಮರ
                      ಒಣಗಿ ನಿಂತಿದೆ ಮರಭೂಮಿಯಲಿ ಜಾಲಿ ಹೂವಿನಂತೆ
                                                                                        
                                                                                                                   ~  ಅಲಿ ಸರ್ದಾರ್ ಜಾಫ್ರಿ
-----------------------------------------------------------------------------------------------------------------



ನನ್ನ ದೊಡ್ಡಪ್ಪನ ನಾಟಕ ಕಂಪನಿಯಲ್ಲಿ ಪಾತ್ರ ಮಾಡುತ್ತ ಬದುಕಿದ್ದ, ಕೇವಲ ದಶಕದ ಹಿಂದೆ ಸತ್ತು ಹೋದ ನನ್ನ ದೊಡ್ಡವ್ವಳನ್ನು, ಅವಳ ಶಾರೀರಿಕ ರಚನೆಯನ್ನು ಶಬ್ದಶಃ ಕಟ್ಟಿಕೊಡುವ ಸಾಲುಗಳಿವು. ಇವಳೆಂದರೆ ನನ್ನ ಪಾಲಿಗೆ ಮುಗಿಯದ ಹಾಡು. ಬೆಚ್ಚನೆಯ ರಾತ್ರಿ, ಚುಮು-ಚುಮು ಮುಂಜಾವು, ಸಾಲದಕ್ಕೆ ಬಣ್ಣ, ಬಿಂಕ, ಮನುಷ್ಯತ್ವದ, ಮಾತೃ-ಮಹಾಭಾವದ ಈ ಅದ್ಭುತ ಸಾಲುಗಳನ್ನು ನನ್ನ ಕಿವಿಯಲ್ಲಿ ಉಸುರಿದವಳವಳು. ಕೇಳಿ-


                  "ಜೋತ್ ಸೇ ಜೋತ್ ಜಗಾತೇ ಚಲೋ
                              ಪ್ರೇಮ್ ಕೀ ಗಂಗಾ ಬಹಾತೇ ಚಲೋ
                                                ರಾಹ್ ಮೇಂ ಆಯೆ ಜೋ ದೀನ ದುಖಿಃ
                                                                     ಸಬಕೋ ಗಲೇ ಸೆ ಲಗಾತೇ ಚಲೋ "

ಯಾವ ಪುಣ್ಯಾತ್ಮ ಬರೇದನೋ ಈ ಗೀತೆಯನ್ನು? ಈ ಗೀತೆಯನ್ನು ಶಬ್ದಶಃ ಬದುಕುವುದು ಒಂದೆಡೆ ಇರಲಿ, ಬರೀ ಹಾಡಿಕೊಂಡರೂ ಸಾಕು, ಒಂದಿಷ್ಟು ಸಂಬಂಧಗಳನ್ನು ಬೆಸೆದ ಪುಣ್ಯ ನಮ್ಮ ಪಾಲಾಗುತ್ತದೆ. ಬಹಳ ಹಿಂದೆ ಇದನ್ನು ಶಬ್ದಶಃ ಗಾಯಕ ಮುಖೇಶ್ ಚಿತ್ರಗೀತೆಯಾಗಿ ಹಾಡಿದ್ದರೆನ್ನುವುದು ಒಂದು ರೆಫರೆನ್ಸ್ ಅಷ್ಟೇ. ನನ್ನ ಪಾಲಿಗೆ ಈ ಹಾಡನ್ನು ಜೋಗುಳದಂತೆ ಹಾಡಿದವಳು ಮಾತ್ರ ನನ್ನವ್ವನೇ. ಈ ನನ್ನ ಅವ್ವ, ದೊಡ್ಡವ್ವ-ಚಿಕ್ಕವ್ವ, ಹಡೆದವ್ವ-ಪಡೆದವ್ವ ಇದ್ಯಾವುದೂ ಅಲ್ಲ. ಅಥವಾ ಇದೆಲ್ಲವೂ ಹೌದು. ಅಂತಲೇ ಹೇಳಿದೆ ಹರಿವ ಗಂಗೆಯಂತಹ ಇವಳೊಂದು ಸರಳ ಪದ, ಅವಳು `ನನ್ನವ್ವ’.
ಯಾಕೋ ಗೊತ್ತಿಲ್ಲ, ಜಗದ ಯಾವ ಹದಿ ಹೆಣ್ಣೂ ಇವಳಷ್ಟು ನನ್ನನ್ನು ಬಲವಾಗಿ ಕಾಡಲಿಲ್ಲ, ಕಾಡುವುದೂ ಇಲ್ಲ. ಇವಳ ಕುರಿತು ನಾನೇನೂ ಬರೆಯಲಿಲ್ಲ, ಬರೆದುದಾವುದು ಇದುವರೆಗೂ ತೃಪ್ತಿಸಲಿಲ್ಲ. ಸಾಕಾಗಿ ಕೊನೆಗೊಂದು ಸಣ್ಣ ಪದ್ಯ ಬರೆದಿದ್ದೇನೆ, ಕೇಳಿ-
                            
                                       “ ಈದಿಮಾಯಿ ನನ್ನವ್ವ ಹದಿ ಆಸೆ ಸುಟ್ಟವಳು
                                                ಕರುಳ ಕುಡಿ ನೋವಿಗೆ ನೀ
                                             ಯಮನ ಸಿದಿಗೆ ಸಿಂಗರಿಸಿದವಳು
                                          ಹಡೆದವ್ವ, ಪಡೆದವ್ವ, ಜಗದವ್ವ ಕೇಳೇ
                                       ನೀ ಬಯಸದ ಕಥೆಯ ನಾನೆಂದೂ ಹೇಳೆ “

       ಇಷ್ಟೇ, ಇಷ್ಟೇ, ನಾನು ಅವಳಿಗೆ ಕೊಟ್ಟ ಭಾಷೆ. ನಾನು ಈ ಭಾಷೆಯ ಎಚ್ಚರದಲಿ ಬದುಕಿ ಹೋದರೂ ಸಾಕು, ನನ್ನ ಈ ಬದುಕಿಗೆ ಯಾವುದೋ ಒಂದು ಅಪೂರ್ವ, ಅರ್ಥಪೂರ್ಣ ಅರ್ಥ ಬಂದೇ ಬರುತ್ತದೆಂಬ ಭರವಸೆ ಇದ್ದೇ ಇದೆ ನನಗೆ.
ಅಂದಹಾಗೆ ಮುಖೇಶನ ಹಾಡು ಉದ್ಧರಿಸಿ, ನನ್ನವ್ವನ ಕಥೆ ಹೇಳಲು ಹೊರಟ ನಾನು ನಿಮಗೆ ನನ್ನ ಕಥೆಗೆ ಕರೆದೆನೇನೋ. ಕ್ಷಮಿಸಿ, ಅವ್ವ ಎನ್ನುವುದು ಹಾಗೆಯೇ ಅಲ್ಲವೇ, ಸುಟ್ಟ ಬೂದಿಯಿಂದೇಳುವ ಫಿನಿಕ್ಸ್ ಅವಳ ನೆನಪು.

         
    `ಕೃಷ್ಣ ಪಾರಿಜಾತ’ ದ ನಾಲ್ಕನೇ ಪ್ರಹರದಲ್ಲಿ ನನ್ನವ್ವ ಸ್ಟೇಜಿಗೆ ಬರುತ್ತಿದ್ದಳು. ಹೆಚ್ಚು-ಕಡಿಮೆ ಆಕೆ ಹಾಗೆ ಸ್ಟೇಜಿಗೆ ಬರುವ ವೇಳೆಗೆ ಚುಮುಚುಮು ನಸುಕಾಗಿ ಕೋಳಿ ಕೂಗಲಾರಂಭಿಸುತ್ತಿದ್ದವು. ಹೀಗೆ ಅವಳು ಯಾವಾಗ ಬಂದರೂ ಅಷ್ಟೇ, ಅವಳ ಪಾತ್ರವನ್ನು ನೋಡಲು ಕುಳಿತಿರುತ್ತಿದ್ದ ಅಭಿಮಾನಿಗಳಿಗೆ ಮಾತ್ರ ಮಂತ್ರಗಂಗೆಯ ಪ್ರೋಕ್ಷಣೆಯ ಅನೀರ್ವಚನೀಯ ಅನುಭವ. ಎಂತಹ ಮಾಯದ ಗೊಂಬೆ ಅವಳು. ಸ್ವತಃ ಕುಣಿದುದಕ್ಕಿಂತ ಕುಣಿಸಿದ್ದೇ ಹೆಚ್ಚು. ಪಾತ್ರಗಳಲ್ಲಿ ಹೆಣ್ಣೆಂದರೆ ಹೆಣ್ಣು, ಗಂಡೆಂದರೆ ಕೇವಲ  ಗಂಡು. ನಲವತ್ತು ಕೇಜಿ ತೂಕದ, ಸಣ್ಣ ದೇಹದ, ಒಂಟೆಲುವಿನ ಅವಳು ಮಾಡುತ್ತಿದುದೇ ಅಂತಹ ಪಾತ್ರ,ಕಲಹಪ್ರಿಯ  ನಾರದನ ಪಾತ್ರ. ಈಕೆ ಬರುವ ವೇಳೆಗೆ ರಂಗ(ಸ್ಟೇಜ್)ವೆನ್ನುವುದು ರುಕ್ಮಿಣಿ ಮತ್ತು ಸತ್ಯಭಾಮೆಯರಿಂದಾಗಿ ವೈಷಮ್ಯದ ವೇದಿಕೆಯಾಗಿರುತ್ತಿತ್ತು. ಸತ್ಯಭಾಮೆಯ ಸೆಡುವು ತಾಳದ ಕೃಷ್ಣ, ರುಕ್ಮಿಣಿಯ ಅಂತಃಪುರದಲ್ಲಿ ಠಿಕಾಣಿ ಹೂಡಿಬಿಟ್ಟಿದ್ದಾನೆ.ಜೀವನದಲ್ಲಿ ಸೋಲಿನ ಸುಖವನ್ನೇ ಅರಿಯದ ಸತ್ಯಭಾಮೆ ಸೆಡುವಿನಿಂದಲೇ ಕೃಷ್ಣನನ್ನು ಸೆಳೆಯಲು ನಿಂತಿದ್ದಾಳೆ. ಗೊಲ್ಲ ಕೃಷ್ಣನ ಬುದ್ಧಿಯ ಒಂದಂಗುಲವೂ ಈ ಬುದ್ಧಿಗೇಡಿ ಹೆಂಗಸಿಗೆ ಗೊತ್ತಾಗಿಲ್ಲ. ಈಗ ಬರುತ್ತಾನೆ ನಾರದ ಈ `ಪಾರಿಜಾತ’  ಹೂ ಹಿಡಿದುಕೊಂಡು. ಈ ಸತ್ಯಭಾಮೆ ಒಂದು ತರಹ ಜಗದ ಜಾತ್ರೆಯಲ್ಲಿ ಪ್ರೀತಿ ಕೊಳ್ಳಲು ನಿಂತ ಹುಚ್ಚು ಹೆಂಗಸು. ಆಕೆಗೆ ಕೊಳ್ಳುವ ಭಾಷೆ ಮಾತ್ರವೇ ಗೊತ್ತು, ಕಣ್ತುಂಬ ನೋಡಿ ಕರಗುವ ಸುಖ ಗೊತ್ತಿಲ್ಲ. ಇಂತಹ ನಾರಿಗೆ,ಹೆಮ್ಮಾರಿಗೆ ನಾರದನ ಸಲಹೆ, `ಯಾರ ಬಳಿ ಈ ಪಾರಿಜಾತದ ಹೂವಿರುತ್ತದೆಯೋ ಅವರ ಬಳಿಯೇ ಕೃಷ್ಣ ಇರುತ್ತಾನೆ’. ಇಷ್ಟುಸಾಕು ಭಾಮೆಗೆ, ಹೂ  ಖರೀದಿಗೆ ನಿಂತೇಬಿಡುತ್ತಾಳೆ. ಅಂತಃಪುರವನ್ನು ಅದೆಷ್ಟೋ ದಿನಗಳಿಂದ ಬಿಟ್ಟು ಹೋದ ಕೃಷ್ಣ ಎದುರು ನಿಂತು ` ಯೋಚಿಸು ಭಾಮೆ, ನಿನಗೆ ನಾನು ಬೇಕೋ, ಪಾರಿಜಾತ ಬೇಕೋ’ ಎಂದು ಕೇಳಿದಾಗ, ಈ ಹುಚ್ಚು ಹೆಣ್ಣು ಪಾರಿಜಾತವೇ ಬೇಕೆನ್ನುತ್ತದೆ. ಜಗವನ್ನೇ ಸೃಷ್ಟಿಸಿದ ಕೃಷ್ಣನಿಗೆ ಇಂಥ ಅದೆಷ್ಟೋ ಪಾರಿಜಾತದ ಶಕ್ತಿ ಇದೆ ಎನ್ನುವುದನ್ನು ಮರೆತೇಬಿಡುತ್ತಾಳೆ ಭಾಮೆ.

                    
ನನ್ನವ್ವ ನಾರದಳಾಗಿ ವೇದಿಕೆಗೆ ಬರುವಷ್ಟರಲ್ಲಿ ಈ ಭಾಮೆ ಬುದ್ಧಿ ಕಳೆದುಕೊಂಡು, ಕೋಪದಲ್ಲಿ ಕುದಿಯುತ್ತಾ, ಕೃಷ್ಣನನ್ನು ಹುಡುಕುತ್ತಾ, ದ್ವಾರಕೆಯ ಬೀದಿ-ಬೀದಿ ಅಲೆಯುತ್ತಿದ್ದಾಳೆ. ತನ್ನ ನಾದಲೋಲನನ್ನು ಹೇಗೆ ಹುಡುಕುವುದು ಕೂಡ ಗೊತ್ತಿಲ್ಲ ಅವಳಿಗೆ. ಆಗ ಬಂದು ಭಾಮೆಯ ಕಣ್ಣೀರಿರೊರೆಸಿ ನನ್ನವ್ವ ಹಾಡುತ್ತಿದುದೇ ಈ ಮೇಲೆ ಉಲ್ಲೇಖಿಸಿದ ಹಾಡನ್ನು. `ದೀಪದಿಂದ ದೀಪ, ಪ್ರೀತಿಯಿಂದ ಪ್ರೀತಿ ಬೆಳೆಸುತ್ತಾ ಹೋದಲ್ಲಿ ಮಾತ್ರ ಕೃಷ್ಣ. ಯಾಕೆಂದರೆ ಕೃಷ್ಣ ಎಂದರೆ ಪ್ರೀತಿ. ಇದು ಬರೀ ಸತ್ಯಭಾಮೆಗೆ ಹೇಳಿದ ಕಿವಿಮಾತಲ್ಲ. ಇಡೀ ಲೋಕಕ್ಕೆ ಅವಳು ನೀಡುತ್ತಿದ್ದ ಸಂದೇಶ. ಹಾಗೆ ನೋಡಿದರೆ ನಾರದನ ಪಾತ್ರದಲ್ಲಿ ಆಕೆ ಬಂದು ಮರಾಠಿ, ಕನ್ನಡ, ಹಿಂದಿ, ಹೀಗೆ ಅದೆಷ್ಟೋ ಗೀತೆಗಳನ್ನು ಹಾಡುತ್ತಿದ್ದಳು. ಅಭಂಗ, ಭಜನೆ, ನಾಟ್ಯ, ಘಜಲ್‍ಗಳ ಪ್ರಭಾವ ಅವೆಲ್ಲವುಗಳ ಮೇಲಿರುತ್ತಿತ್ತು. ಆದರೆ ಯಾಕೋ ಈ ಹಾಡು ಮಾತ್ರ ನನ್ನ ಬದುಕಿನ ಭಾಗವಾಗಿ ಉಳಿದುಕೊಂಡುಬಿಟ್ಟಿತು. ಕಾರಣ, ಅವಳು ಬದುಕಿದ ಹಾಡಿನಂಥ ಬದುಕು ಇರಬಹುದು. ನನ್ನ ದೊಡ್ಡಪ್ಪನ ದೊಡ್ಡಪ್ಪನ ದೊಡ್ಡ ಸಂಸಾರದಲ್ಲಿ ಅವಳು ಇದ್ದದ್ದೇ ಹಾಗೆ-

                                "ರಾಹ್ ಮೇಂ ಆಯೆ ಜೋ ದಿನ ದುಖಿಃ
                                        ಸಬಕೋ ಗಲೆಸೇ ಲಗಾತೇ ಚಲೋ
                                                     ಪ್ರೇಮ ಕೀ ಗಂಗಾ ಬಹಾತೆ ಚಲೋ"

ನನ್ನಪ್ಪನ ಬಣ್ಣದ ಬಾಳಿನಲ್ಲಿ ಬಂದುದೆಲ್ಲವನ್ನು ಬಳಿಸಾರಿ, ಬಿಗಿಯಾಗಿ ತಬ್ಬಿದಳು. ಆದರೆ ಬಂಧುವಾಗಿಯೇ ಉಳಿದಳು.
ಕಮಲಾಬಾಯಿ - ಇದು ಅವಳ ಪೂರ್ಣ ಹೆಸರು. ದೊಡ್ಡದಾದ ಹಾರ್ಮೋನಿಯಂ ಕಾಲುಪೆಟ್ಟಿಗೆಯ ಬೋರ್ಡಿನ ಮೇಲೆ ಕಂಪನಿ ಮ್ಯಾನೇಜರ್ ಕಮಲಾಬಾಯಿ, ಮಾಲೀಕರು ಮಲ್ಲಯ್ಯಸ್ವಾಮಿ ಅಥಣಿ, ಶ್ರೀ ಕೃಷ್ಣ ಪಾರಿಜಾತ ಕಂಪನಿ, ಜಮಖಂಡಿ. ಇದು ನಾನು ಚಿಕ್ಕವನಿದ್ದಾಗ ನಿತ್ಯ ಓದುತ್ತಿದ್ದ ನಮ್ಮ ನಾಟಕ ಕಂಪನಿಯ ಬೋರ್ಡು. ಒಟ್ಟಾರೆ ಇಂತಹ ನಾಲ್ಕು ಬೋರ್ಡುಗಳಿದ್ದವು. ಒಂದು, ಜಮಖಂಡಿ ಬಸ್ಟ್ಯಾಂಡ್ ನ ಮುಂದಿರುವ ಬೇವಿನ ಮರದಲ್ಲಿ, ಮತ್ತೊಂದು ಪಿಬಿ ಹೈಸ್ಕೂಲ್ ರಸ್ತೆಯಲ್ಲಿ, ಮಗದೊಂದು ಕಂಪನಿ ಜೀಪಿನ ಮೇಲೆ, ಇನ್ನೊಂದು ಈ ಹಾರ್ಮೋನಿಯಂ ಪೆಟ್ಟಿಗೆಯ ಮೇಲೆ.

            ನನ್ನ ದೊಡ್ಡಪ್ಪ ಎಂಬ ಜಗಮೊಂಡ ಜಂಗಮನಿಗೆ ಮನಸೋತು ಬಂದ ಮಾದಿಗರ ಹೆಣ್ಣು, ಈ ನನ್ನವ್ವ ಕಮಲಾಬಾಯಿ. ನನಗೆ ಮನೆಹಾಳು ಈ ತಿಳುವಳಿಕೆ ಬರುವಷ್ಟರಲ್ಲಿ ಇವರಿಬ್ಬರಿಗೂ ಒಬ್ಬ ಮಗಳು ಹುಟ್ಟಿ ಅವಳು ನಮ್ಮ ಮನೆತನದ ಹಿರಿಯಕ್ಕಂದಿರ ಸಾಲಿಗೆ ಸೇರಿಬಿಟ್ಟಿದ್ದಳು. ಅವಳಿಗೆ ಮುದ್ದಿನಿಂದ ಸುಜಾತ ಎಂದು ಹೆಸರಿಟ್ಟಿದ್ದರು, ಕೃಷ್ಣಾ ತೀರದ ಆ ಗೋದಿಯ ಬಣ್ಣ, ನನ್ನವ್ವನ ಮುಖದ ತೀಕ್ಷ್ಣತೆ, ಬ್ರಾಹ್ಮಣರಂಥ ಭಾಷಾ ಶುದ್ಧಿ, ನಮ್ಮಪ್ಪನ ಎತ್ತರದ ದೇಹ, ಭಂಡತನ, ಧೈರ್ಯ ಇವೆಲ್ಲವುಗಳ ಸಂಗಮವಾಗಿದ್ದ ಅವಳಷ್ಟು ವಿಶಿಷ್ಟ `ಅಕ್ಕ’ ಉಳಿದ ಒಂಬತ್ತು ಮಂದಿ ಅಕ್ಕಂದಿರಲ್ಲಿ ನಮಗೆ ಸಿಗಲೇ ಇಲ್ಲ.
ಲೋಕದ ಸಾಮಾನ್ಯ ಹೆಂಗಸರಂತಿಲ್ಲದ ಹೆಂಗಸಾಗಿದ್ದ ಈ ನನ್ನವ್ವ ಹಗಲುಗಳಿಗಿಂತ ರಾತ್ರಿಗಳನ್ನು ಬದುಕಿದ್ದೇ ಹೆಚ್ಚು. ಆಕೆಯ ಪಾಲಿನ ಬದುಕು ಅಥವಾ ಹಗಲಿ ಆರಂಭವಾಗುತ್ತಿದುದುದೇ ರಾತ್ರಿಯ ಹನ್ನೆರಡು ಗಂಟೆಗೆ. `ಪಾರಿಜಾತ’ ದೊಡ್ಡಾಟದ ಮೊದಲ ಸುತ್ತಿನಲ್ಲಿ ಒಮ್ಮೆ ಬಾಲಗೋಪಾಲನಾಗಿ ಬಂದು, ರಾಧೆಯ ಸೀರೆ ಸೆಳೆದಾಡಿ, ಆಕೆಯನ್ನು ಕಾಡಿಸಿ ಪೀಡಿಸಿ ಹೋಗಿ ಮಲಗಿದರೆ ಮತ್ತೆ ತಟ್ಟನೆ ಕಾಣಿಸಿಕೊಳ್ಳುವುದು ಅದೇ ಕಾಡಿಸುವ ಪೀಡಿಸುವ ಕೆಲಸಕ್ಕಾಗಿ, ಆದರೆ ನಸುಕಿನಲ್ಲಿ.
ನಿಜ ಪಾರಿಜಾತಕ್ಕಿಂತ `ನನ್ನವ್ವ’ ಎನ್ನುವ ಈ ಪಾರಿಜಾತದ ಕಥೆಯೇ ಬಹಳ ದೊಡ್ಡದು. ಎಲ್ಲಿಂದ ಪ್ರಾರಂಭಿಸಿದರೂ ಅದು ತೃಪ್ತಿ ನೀಡದು. ಎಲ್ಲಿಯೇ ನಿಲ್ಲಿಸಿದರೂ ಅದು ಪೂರ್ಣವಾಗದು. ಆದರೂ ಎಂತದೋ ಒಂದು ಆರಂಭ ಬೇಕಲ್ಲ? ಹಾಗೆ ಆರಂಬಿಸಿದ್ದೇನೆ, ಅಷ್ಟೇ.

          ನನ್ನ ನಟ ಭಯಂಕರ ದೊಡ್ಡಪ್ಪ ಅಥಣಿಯಲ್ಲಿ ತನ್ನ ಪಾರಿಜಾತದ ಕಂಪನಿ ಕಟ್ಟುವಾಗ ಇವಳು ಅಲ್ಲಿ ನರ್ಸ್ ಆಗಿದ್ದಳಂತೆ. ಸುಮಾರು ಅರವತ್ತು ವರ್ಷಗಳ ಹಿಂದೆ, ಒರ್ವ ಮಾದಿಗ ಮಹಿಳೆ ಓದಿ ನರ್ಸ್ ಆಗಿದ್ದಳೆನ್ನುವುದು ಅವಳ ಶೈಕ್ಷಣಿಕ ಪ್ರಜ್ಞೆ, ಅಲ್ಪ-ಸ್ವಲ್ಪ ಇಂಗ್ಲೀಷಿನ ತಿಳುವಳಿಕೆ, ವಿಜ್ಞಾನದ ಸಂಪರ್ಕ, ವೈದ್ಯಕೀಯ ಸೂಕ್ಷ್ಮತೆಗಳು, ಎಲ್ಲವುಗಳ ಮೇಲೂ ಬೆಳಕು ಚೆಲ್ಲುವುದಿಲ್ಲವೇ? ಇನ್ನೂ ಆಶ್ಚರ್ಯವೆಂದರೆ ಆಕೆ ಆ ವೃತ್ತಿಯಲ್ಲಿರುವಾಗ ಆಗಲೇ ವಿವಾಹಿತಳೂ ಕೂಡ. ಅವಳದೇ ಆದ `ಮಾದಿಗ’ ಸಮಾಜದ  ಆಕೆಯ ಗಂಡ ವೃತ್ತಿಯಿಂದ ಶಿಕ್ಷಕನಾಗಿದ್ದನಂತೆ. ಈ ಎಲ್ಲ ಭದ್ರ ಹಿನ್ನೆಲೆಯಲ್ಲಿದ್ದ ಈ ನನ್ನವ್ವ, ನನ್ನಪ್ಪನ ಕನಸಿನ ಪಾರಿಜಾತದ ವಾಸನೆಯ ಹಿಂದೆ ಯಾವಾಗ ಹೊರಟಳೋ ಗಂಡನ ಹಂಗು ಹರಿದು ಯಾವಾಗ ಬಣ್ಣದ ಹಾದಿ ಹಿಡಿದಳು ಎನ್ನುವುದಕ್ಕೆ ಸ್ಪಷ್ಟತೆಗಳಿಲ್ಲ, ಅಥವಾ ನನಗೆ ಗೊತ್ತಿಲ್ಲ. ಪ್ರೀತಿಗೆ, ಅದರ ರೀತಿಗೆ  ದಿನಾಂಕಗಳು ಬೇಕಿಲ್ಲ. ಅದು ಮುಟ್ಟುವ ಗುರಿ ಮುಖ್ಯವಾಗುತ್ತದೆಯೇ ವಿನಃ ಅದು ಹುಟ್ಟಿದ ಪರಿಯಲ್ಲ. ನಮಗೆಲ್ಲ ಗೊತ್ತಲ್ಲ, ಪ್ರೀತಿ ಲೆಕ್ಕಾಚಾರವಲ್ಲ; ವ್ಯವಹಾರವಲ್ಲ; ಹೊಳೆ,ಸಿಕ್ಕಿದ್ದನ್ನೆಲ್ಲಾ ಕೊಚ್ಚಿಕೊಂಡು ಹೋಗುವ ಹುಚ್ಚು ಹೊಳೆ.

                         ಹೀಗೆ ಬದುಕಿನ ಯಾವುದೋ ಒಂದು ಘಳಿಗೆಯಲ್ಲಿ, ಇದ್ದ ಗಂಡನನ್ನು ಬಿಟ್ಟು, ಸರಕಾರಿ ನೌಕರಿ ಬಿಟ್ಟು ಪಾರಿಜಾತದ ಹುಡುಕಾಟದಲ್ಲಿದ್ದ  ಜಂಗಮನ ಬೆನ್ನು ಬಿದ್ದು ಬಿಟ್ಟಳು. ಅವಳು ಹೀಗ ಹೊರಟು ನನ್ನ ದೊಡ್ಡಪ್ಪನನ್ನು ನಂಬಿ ಬರುವಾಗ, ಈತನಿಗಾಗಲೇ ಮದುವೆಯಾಗಿತ್ತು. ಜಾತಿ ಹದಿನಾರು ಹೆಂಗಸರನ್ನು ಹಂಗಿಲ್ಲದೆ ಕರೆತರುತ್ತಿದ್ದ ನನ್ನ ದೊಡ್ಡಪ್ಪನದಂತೂ ಬಣ್ಣದ ದೊಡ್ಡ ಬದುಕು, ಅಮಿತ ಸಂಸಾರ. ಇಷ್ಟರೊಳಗೆ ಮರ್ಯಾದಸ್ಥ ಬ್ರಾಹ್ಮಣ ಹೆಣ್ಣು ಮಗಳೊಬ್ಬಳನ್ನು ಓಡಿಸಿಕೊಂಡು ಬಂದು, ಅಣ್ಣ-ತಮ್ಮಂದಿರಲ್ಲಿಯೇ ಖಡ್ಗ ಹಿಡಿದು ಕಾದಾಡಿಯೂ ಬಿಟ್ಟಿದ್ದ ಭೂಪ. ಒಂದು ಮಾತ್ರ ವಿಚಿತ್ರ, ಇಂತಹ ಕಾಡು ಕಾಡಾದ, ಒರಟು ವಾಸನೆಯ ನನ್ನ ದೊಡ್ಡಪ್ಪ ಮಾತ್ರ ಈ ನನ್ನವ್ವನ ಮುಂದೆ ಪುಂಗಿಯೆದುರಿನ ಹಾವಿನಂತಾಗಿಬಿಡುತ್ತಿದ್ದ.

              ತನ್ನ ಹೆಂಡತಿ ನನ್ನ ದೊಡ್ಡಪ್ಪನೊಂದಿಗೆ ಓಡಿಬಂದಾಗ ಶಿಕ್ಷಕನಾಗಿದ್ದ ಆಕೆಯ ಗಂಡ ಏನಾದರೂ ಹೊರಾಡಿದನೇ? ಅಥವಾ ಈಕೆಯನ್ನು ಮತ್ತೆ ಕರೆದೊಯ್ದು ಬಾಳು ಸಾಗಿಸಲು ಹಿಂಜರಿದನೇ? ನನಗೊಂದೂ ಗೊತ್ತಿಲ್ಲ. ನನ್ನದು ಆಗ ಅದೆಲ್ಲವೂ ಗೊತ್ತಾಗುವ ವಯಸ್ಸೂ ಅಲ್ಲ. ಗೊತ್ತಿದ್ದದ್ದು ಇಷ್ಟೇ, ಜಮಖಂಡಿಯ `ಶ್ರೀನಿವಾಸ ಚಿತ್ರಮಂದಿರ’ದ ಪಕ್ಕದ ಗಲ್ಲಿಯಲ್ಲಿ ನನ್ನ ದೊಡ್ಡಪ್ಪನ ಎರಡು ಮನೆಗಳಿದ್ದವು ಒಂದಕ್ಕೊಂದು ಹೊಂದಿಕೊಂಡು. ಒಂದರಲ್ಲಿ, ಈ ನನ್ನ ಅವ್ವ ತನ್ನ ಮುಪ್ಪಾನ ತಂದೆ ಮತ್ತು ಮಗಳೊಂದಿಗೆ, ಮತ್ತೊಂದರಲ್ಲಿ ಮತ್ತೊಬ್ಬ ಅವ್ವ , ತನ್ನವೇ ಎರಡು ಗಂಡು ಮಕ್ಕಳೊಂದಿಗೆ. ಇಡೀ ಮನೆಯೆನ್ನುವುದು `ಮೆಹಖಾನೆ’ ತರಹ. ನಿತ್ಯ ನಿರಂತರ ಶೆರೆಯ ಸರಬರಾಜು, ಮೊಟ್ಟೆಯಿಲ್ಲದ ಊಟವಿರುತ್ತಿರಲಿಲ್ಲ. ಕರಿ ಹಂಚಿನಂತಹ ಒಬ್ಬ ಮುದುಕನಿದ್ದ, ಆತ ಯಾವಾಗಲೂ ಮನೆಯ ಹೊರಗಡೆಯೇ ಕುಳಿತುಕೊಂಡಿರುತ್ತಿದ್ದ, ಆತನೇ ನನ್ನವ್ವನ ತಂದೆ. ಒಳಗಡೆ ಬಾಟಲಿಗಳು ಖಾಲಿಯಾಗುತ್ತಿದುದನ್ನು ಗಮನಿಸಿ, ಈತನ ಕೆಲಸವಷ್ಟೇ, ದೊಡ್ಡಪ್ಪ, ದೊಡ್ಡವ್ವನ ಮದಿರಾಖಾನೆಯಲ್ಲಿ ಸಂಗೀತದಂತೆ ಸುತ್ತಾಡುವುದು. ಮತ್ತೆ ಓಡಿಹೋಗಿ ಸೆರೆಯನ್ನು ತಂದು ಸುರಿಯುತ್ತಲೇ ಇರಬೇಕು.


               ಪಕ್ಕದ ಕೋಣೆಯಲ್ಲಿರುತ್ತಿದ್ದ ಈ ನನ್ನ ಅವ್ವ ಅಷ್ಟಿಷ್ಟು ಕುಡಿಯುತ್ತಿದುದು ನನಗೆ ಗೊತ್ತು. ಆದರೆ ಗಂಡಸರೊಂದಿಗೆ ಕಂಪನಿಯ ವ್ಯವಹಾರಗಳಲ್ಲಿ ಆಕೆ ನೇರವಾಗಿ ಎಂದು ಪಾಲ್ಗೊಳ್ಳುತ್ತಿರಲಿಲ್ಲ. ಏನಿದ್ದರೂ ಪಕ್ಕದಲ್ಲಿಯೇ ಇದ್ದು ಎಲ್ಲವನ್ನು ಗಮನಿಸುವುದು., ತಾರೀಖುಗಳನ್ನು ಕೊಡುವುದು, ಒರಟು ಒರಟಾಗಿ ಮಾತಾಡುತ್ತಿದ್ದ ನನ್ನ ದೊಡ್ಡಪ್ಪನ ಭಾಷೆ ತಿದ್ದುವುದು, ಕೈ ಬಿಡುವುದರಲ್ಲಿದ್ದ ಆಟವನ್ನು ಚಾಣಾಕ್ಷತನದಿಂದ ಹಿಡಿದುಕೊಳ್ಳುವುದು, ಬಂದವರು ಎದ್ದು ಹೋಗುವಾಗ ಅದೇ ಬ್ರಾಹ್ಮಣಿಕೆಯ ಭಾಷೆಯ ಚಾಣಾಕ್ಷತನದಿಂದ ದೂರದಲ್ಲಿಯೇ ನಿಂತು, ಒಂದು ದೊಡ್ಡ ನಮಸ್ಕಾರ ಮಾಡಿ, ಮುಗುಳ್ನಕ್ಕು ಅಭಿಮಾನಿಗಳನ್ನು ಕಳಿಸುವುದು, ಸೀಜನ್ನಿನಲ್ಲಿ ಎದುರಾಳಿ ಕಂಪನಿಗಳ ಚಲನ-ವಲನಗಳನ್ನು ಗಮನಿಸುವುದು, ಅಬ್ಬಾ ! ಅವಳು ಲೋಕಜ್ಞಾನದ ಮಹಾನ್ ಪಂಡಿತೆ. ಸತ್ಯ, ನನಗೆ ಗೊತ್ತಿರುವಂತೆ ನನ್ನ ದೊಡ್ಡಪ್ಪನ ನಾಟಕ ಕಂಪನಿಯ ಮುಖ್ಯ ಆಕರ್ಷಣೆಯೇ ಅವಳಾಗಿದ್ದಳು. ಅವಳಿರುವ ಕಾರಣಕ್ಕಾಗಿಯೇ ಜನರಿಗೆ ಇವನ ಕಂಪನಿ ಪಾರಿಜಾತ ಬೇಕಾಗುತ್ತಿತ್ತು. ಆದರೆ ಇದು ಗೊತ್ತಿದ್ದೂ ಗೊತ್ತಿಲ್ಲದಂತೆ ಬಿಗರ್ವಿಯಾಗಿ ಬದುಕಿದ್ದ ಅವಳು, ಸಂಸಾರದಲ್ಲಿಯೂ ಹಾಗೆಯೇ ಇದ್ದಳು.

           ಕಟ್ಟಿಕೊಂಡ ಗಂಡನನ್ನು ಬಿಟ್ಟು, ನನ್ನಪ್ಪನೊಂದಿಗೆ ಓಡಿ ಬಂದು, ಮಗಳನ್ನು ಹೆತ್ತು ರಾಜಾರೋಷವಾಗಿ ಬದುಕಿದ್ದ ಅವಳಿಗೆ ಯಾವ ಕಾರಣಕ್ಕೂ ಅಪರಾಧಿ ಪ್ರಜ್ಞೆ ಇರಲಿಲ್ಲ. ತನ್ನದೊಂದು ರೀತಿಯಲ್ಲಿ ಕೃಷ್ಣನ ಸೇವೆ, ತಾನು ಒಬ್ಬ ಮಹಾನ್ ಕಲಾವಿದೆ, ಈತನ ರಾಧೆ ಎನ್ನುವ ಆತ್ಮವಿಶ್ವಾಸದಿಂದ ಬದುಕಿದವಳವಳು.ಅಂದಹಾಗೆ ಇದೇನು ವಿಶೇಷವಾಗಬೇಕಾಗಿಲ್ಲ, ಆದರೆ ಆಕೆಯನ್ನು ನೆನಪಿಸಿಕೊಳ್ಳುವ ಒಂದು ದೊಡ್ಡ ವಿಚಾರ, ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ನನ್ನ ದೊಡ್ಡಪ್ಪನನ್ನು ಮೆಚ್ಚಿಕೊಂಡು ಬಂದ ಈಕೆ ಸಾಮಾನ್ಯ ಹೆಂಗಸರಂತೆ ಅವನ ಬೆನ್ನ ಬೇತಾಳವಾಗಲಿಲ್ಲ. ಎಂದೂ ಬಾಳ ಹುಣ್ಣಾಗಲಿಲ್ಲ. ನಾನು ಗಮನಿಸಿದಂತೆ ಅವಳ ನಂತರ ಅವನ ಬಣ್ಣದ ಬದುಕಿನಲ್ಲಿ ಕನಿಷ್ಟ ಮೂರು ಮಹಿಳೆಯರು ಬಂದು ಹೋದರೂ ಇವಳು ಮಾತ್ರ ಎಂದೂ ಅನಾಥಪ್ರಜ್ಞೆಯಿಂದ ನರಳಲಿಲ್ಲ. ಖಂಡಿತವಾಗಿಯೂ ನನ್ನ ದೊಡ್ಡಪ್ಪನನ್ನು ಆಕೆ ಗಂಡನಂತೆ ಗೌರವಿಸಲಿಲ್ಲ. ಆದರೆ ಕೊನೆವರೆಗೂ ಆತನನ್ನು ಹೆಸರಿನಿಂದಲೇ ಸಂಭೋದಿಸುತ್ತಿದ್ದ ಆಕೆ ಏನೆಲ್ಲಾ ಮಾತಾಡಿಯೂ ಉದ್ಧಟಳೆನಿಸಲಿಲ್ಲ. ಪ್ರೀತಿಗಾಗಿಯೇ ಬಂದಳು, ಇರುವಷ್ಟು ಕಾಲ ಪ್ರೀತಿಯಾಗಿಯೇ ಬಾಳಿದಳು. ದೊಡ್ದಪ್ಪನ ಬಾಳಿನ ಮುಗಿಯದ ಮಾತಾಗಿದ್ದಳು.
ನನ್ನ ಮತ್ತು ಅವಳ ಮಧ್ಯ ಒಂದು ಜನ್ಮಾಂತರದ ಅನಿರ್ವಚನೀಯ ಅನುಬಂಧವಿತ್ತೇನೋ. ಬಾಲಕನಾಗಿ ಯಾವಾಗಲೂ ಹಾರ್ಮೋನಿಯಂ ಪಕ್ಕದಲ್ಲೇ ಕುಳಿತಿರುತ್ತದ್ದ ನನ್ನನ್ನು ಸ್ಟೇಜಿನ ಮೇಲಿನಿಂದಲೇ ಗಮನಿಸುತ್ತಾ, ನಿರ್ದೇಶಿಸುತ್ತ, ತನ್ನ ಧಾಟಿಯಲ್ಲಿಯೇ ಹಾಡಲು ಪ್ರೋತ್ಸಾಹಿಸುತ್ತಾ, ನನ್ನ ವಯಸ್ಸಿಗೆ ಮೀರಿದ ಪ್ರತಿಭೆಯನ್ನು ನಾನು ಹಾಡುಗಾರಿಕೆಯಲ್ಲಿ ತೊರಿಸಿದಾಗ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅಲ್ಲಿಂದಲೇ ಮುಗುಳ್ನಗುತ್ತಿದ್ದ ಆಕೆ ಸ್ಟೇಜು ಹತ್ತಿದರೆ ಸಾಕು ಅದು ಹಬ್ಬ, ಹುಚ್ಚು, ಮತ್ತಿಳಿಯದ ನಶೆ. ಬೆಳಕು ಹರಿಯದ ನಶೆ. ಭಾವನೆಗಳನ್ನದುಮಿಟ್ಟುಕೊಳ್ಳಲಾಗದ ಕುಡುಕರು ವೇದಿಕೆ ಹತ್ತಿ ಆಕೆಯ ಹತ್ತಿರ ಬಂದಾಗಲೂ ಅವರನ್ನು ನಿಭಾಯಿಸುತ್ತಿದ್ದ ಆಕೆಯ ಚಾಣಾಕ್ಷತೆ ಯಾರಾದರೂ ನೋಡಿಯೇ ಕಲಿಯಬೇಕು. ಹುಂಬ ನನ್ನಪ್ಪ ಅನೇಕ ಸಾರಿ ಸಹನೆ ಕಳೆದುಕೊಂಡು ಪ್ರೆಕ್ಷಕರೊಂದಿಗೆ ಹೊಡೆದಾಟಕ್ಕೆ ನಿಲ್ಲುವಾಗ, ಕ್ಷಣಾರ್ಧದಲ್ಲಿ ಎಲ್ಲವನ್ನೂ ತಿಳಿಗೊಳಿಸಿ, ಎಲ್ಲರನ್ನೂ ನಗಿಸಿ ಹೋಗುತ್ತಿದ್ದ ಆಕೆಯ ಆ ಮೋಡಿಗೆ ಏನೆನ್ನಬೇಕು? ಆಕೆಯ ಬಳಿ ನಾನಿರುವಷ್ಟೂ ಕಾಲ ಕನಸುಗಳ ಜಾತ್ರೆ. ನಮಿಬ್ಬರದೊಂದು ಮಮತೆಯ ಮಹಾಯಾತ್ರೆ.

               ನನ್ನ ದೊಡ್ಡಪ್ಪನ ಮನೆಯಲ್ಲಿ ಎಷ್ಟೊಂದು ವೈಟ್ ಆಂಡ್ ಬ್ಲ್ಯಾಕ್ ಫೋಟೊಗಳಿದ್ದವು. ಅವೆಲ್ಲಾ ಆಕೆಯ ಥರಾವರಿಯ ನಾಟಕದ ಭಂಗಿಗಳೆ. ನಮ್ಮ ಕಂಪನಿ ಎಂದರೆ ನಮ್ಮವ್ವನೆ. ಹೀಗಾಗಿ ಸರ್ಕಾರ ಕಲಾವಿದರಿಗೆ ಕೊಡುತ್ತಿದ್ದ ಮಾಶಾಸನ ಪಡೆದ ಮೊದಲ ಮಹಿಳೆ ಅವಳೆ. ಕಲೆ ಮತ್ತು ಸಂಸಾರದ ವಿಷಯದಲ್ಲಿ, ಊಟ ಮತ್ತು ನಿದ್ರೆ ವಿಷಯದಲ್ಲಿ, ಮಾತು ಮತ್ತು ವ್ಯಸನದ ವಿಷಯದಲ್ಲಿ ಅತ್ಯಂತ ಕಟ್ಟುನಿಟ್ಟಾಗಿದ್ದ ಅವಳು ಅಸಿಸ್ತನ್ನು ಕಂಡಾಗ ಸಿಡಿದೇಳುತ್ತಿದ್ದಳು. ಮೆಚ್ಚಿದವನ ಬೆನ್ನು ಹತ್ತಿ ಓಡಿಬಂದಿದ್ದ ಅವಳಿಗೆ ಗೌರವದಿಂದ ಬಾಳುವ ಬಹುತೇಕ ದಾರಿಗಳು ಇವುಗಳೇ ಆಗಿದ್ದವು. ತನ್ನ ಮತ್ತು ನನ್ನ ದೊಡ್ಡಪ್ಪನ ಪ್ರೀತಿಯ ಸಂಕೇತದಂತಿದ್ದ ಮಗಳನ್ನು ಆಕೆ ತುಂಬಾ ಪ್ರೀತಿಸುತ್ತಿದ್ದಳು. ನಮ್ಮಪ್ಪನೂಅಷ್ಟೆ ಅವಳೆಂದರೆ ಆತನಿಗೆ ಪ್ರಾಣ. ಆದರೆ ಈ ಪ್ರಾಣದ ಪ್ರಾಣ ಹೋಗುವ, ಮಾನ ಹೋಗುವ ಒಂದು ಅಸಹ್ಯ ಘಟನೆ ಮನೆಯಲ್ಲಿ ನಡೆದು ಹೋಯಿತು. ಅಂದು ಕುಂದಿದ ನನ್ನವ್ವನ ಜೀವನ ಉತ್ಸಾಹ ಅವಳನ್ನು ಹಿಂದೆ ನೋಡುವಂತೆ ಮಾಡಿತು. ಬೇರಿಗಾಗಿ ತಡಕಾಡುತ್ತಾ ಆಕೆ ಬೇರ್ಪಡಬೇಕಾಯಿತು.

                         ಸೀಜನ್‍ದಲ್ಲಿ ನಿರಂತರ ಆಟಗಳು. ಯಾರೂ ನಿದ್ರೆ, ವಿಶ್ರಾಂತಿ, ಊರು, ಸಂಸಾರ ನೆನಪಿಸಿಕೊಳ್ಳುವ ಹಾಗೂ ಇರಲಿಲ್ಲ. ಮಳೆಗಾಲದ ಮೂರು ತಿಂಗಳನ್ನು ಹೋರತುಪಡಿಸಿದರೆ ಉಳಿದೆಲ್ಲ ಸಮಯ ಕಂಪನಿ, ಕಲಾವಿದರನ್ನು ಕಟ್ಟಿಕೊಂಡು ದೊಡ್ಡಪ್ಪ, ದೊಡ್ಡವ್ವ ತಿರುಗಾಡುತ್ತಲೇ ಇರಬೇಕು. ಈ ಸಮಯದಲ್ಲಿ ಊರಲ್ಲಿ ಅಕ್ಕನೊಂದಿಗೆ ಮನೆ ನೋಡಿಕೊಳ್ಳುತ್ತಾ ಒಬ್ಬ ಕಂಪನಿ ಮ್ಯಾನೆಜರ್ ಮತ್ತು ದೂರದ ನನ್ನ ಮನೆಯಲ್ಲಿ ಒಬ್ಬ ತಮ್ಮ ಬಿಟ್ಟರೆ ಇನ್ನ್ಯಾರೂ ಇರುತ್ತಿರಲಿಲ್ಲ. ಅಂದಹಾಗೆ ಈ ತಮ್ಮ ಪೈಲ್ವಾನಿಕೆಗಾಗಿ ದೊಡ್ಡಪ್ಪನ ಮನೆಗೆ ಬಂದು ಠಿಕಾಣಿ ಹೂಡಿದ್ದ. ಸೊಗಸಾಗಿ ಬೆಳೆದಿದ್ದ ಅಕ್ಕನದು ಆಗ ಕಣ್ಣು ಕೋರೈಸುವ ಯೌವ್ವನ. ಆಕೆಯ ಬಗ್ಗೆ ನನಗೆ ಎಷ್ಟೊಂದು ಅಭಿಮಾನವೆಂದರೆ ಆಕೆ ಹುಟ್ಟಿದ ಸಂದರ್ಭವನ್ನು ನೆನೆದು, ಆಕೆ ನಮ್ಮೊಂದಿಗೆ ಕಳೆದ ಬಾಲ್ಯವನ್ನು ನೆನೆದು ನಾನೊಂದು ಕವಿತೆಯನ್ನೇ ಬರೆದಿದ್ದೆ. ನೀವು ಅದನ್ನು ಓದಬೇಕು-
  
                                                                  ಬೆಳಕಾತು,‘ಸುಜಾತ’
                                                              ಕೋಳಿ ಕೊಕ್ಕರಿಸೋ ವ್ಯಾಳ್ಯಾ
                                                              `ಕೋಹಳ್ಳಿ’ ತುಂಬ ಮಕರಂದ
                                                                      ಅಪ್ಪನಂತಾ ದೇಹ
                                                                     ಆತನೆದೆಯ ನಾದಾ
                                                                    ಅಕ್ಕ ನಮ್ಮ ವತನಕ
                                                                       ಮೊದಲಿಗವಳ
                                                    `ಹಾದರದ ಹುಡಿ’ ಜಗಕ್ಕಿರಬಹುದು
                                                 `ಸು-ಜಾತ’ ಎಂದವ್ವ ಮುತ್ತು ಕೊಟ್ಟಾಕಿ.

                                                              ಕೈಕೈ ಕಟ್ಟಿ ನಮ್ಮಕ್ಕ
                                                               ಕಳ್ಯಾಮಿಳ್ಯಾ ಆಗಿ
                                               ‘ಸರವತ್ತಾತೋಸಂಗಯ್ಯಾ’ ಅಂದು
                                                     ಮಂಗ್ಯಾನಂಗ ಮನಿಗೋಡಿ
                                                  ನಮ್ಮ ಹರಕ ಕೌದಿಯ ತೂತಿಗೆ
                                                   ಗೂಡಗಾಲ ಹಾಕಿ ಅಡಿದಾಕಿ
                                                 ಬೆಳಕಾದ್ರ ಆಕಿಯ ಲಂಗ ಹಿಡಿದು
                                                   ಎಂಜಿನ್ ಹಿಂದಿನ ಡಬ್ಬಿ ಆಗಿ
                                                 ಆಕಿ ಹೋದ ಹಾದಿಯೊಳಗ
                                         ಆನಂದದ ಜಾತರಿ ಮಾಡಿದವ್ರ ನಾವು

                                                   ಜಾತಿ `ಜಂಗಮ’ ನಮ್ದು
                                                 ರೀತಿ ಕೊರವಿ-ಕೊಂಚರದು
                                              ಸಿಕ್ಕಲ್ಲಿ ಬೆತ್ತಲಾಗುತ್ತಿದ್ದ ನಾವೂ
                                               ಒಂದು ಥರಾ ಮಹಾವೀರರೇ
                                            ಅಕ್ಕ ಹಾಡಿದಳೇನೋ ಕಿವಿಯೊಳಗ
                                           ಪಂಚಾಕ್ಷರಿ ಉಸಿರಿದಾಂಗ ಜಗದ್ಗುರು
                                                 ಎಚ್ಚತ್ತು ಲಂಗೂಟಿ ಹಾಕಿ
                                                     ಬುದ್ಧರಾದೆವು
                                             ಅಕ್ಕನ ಕಕ್ಕುಲಾತಿಗೆ ಮಣಿದು
                                                     ಬದ್ಧರಾದೆವು


          ಇಪ್ಪತ್ನಾಲ್ಕು ಗಂಟೆ ವ್ಯಾಯಾಮ, ತಿಂಡಿ, ನಿದ್ರೆಯಲ್ಲಿ ತೊಡಗಿರುತ್ತಿದ್ದ ಈ ನನ್ನ ತಮ್ಮನದು ಕಾಡು ಕಾಡಾದ ಯೌವ್ವನ. ಈಗ ಇವನ ವಯಸ್ಸಿಗೆ ಪದಗಳ ಅರ್ಥ ತಿಳಿಯದ ಕಾಲ. ಹಾಗೊಂದು ದಿನ ಯಾರೂ ಇಲ್ಲದ ಅವಧಿ ನೋಡಿ. ಈತ ನನ್ನಕ್ಕನ ಶೀಲ ಹರಣಕ್ಕೆ ಪ್ರಯತ್ನಿಸಿದ. ಮೃಗದಂತೆ ಆಕೆಯನ್ನು ಎಳೆದಾಡಿಬಿಟ್ಟ. ಗಾಬರಿಗೊಂಡ ನನ್ನಕ್ಕ ಮರುದಿನ ನನ್ನವ್ವ ಊರಿನಿಂದ ಬರುವುದನ್ನೇ ಕಾಯುತ್ತಿದ್ದಳೇನೊ? ಮರುದಿನ ಆಟ ಮುಗಿಸಿಕೊಂಡು ಎಲ್ಲರೂ ಬಂದೇ ಬಿಟ್ಟರು. ಆದರೆ ಅದ್ಯಾಕೊ ಗೊತ್ತಿಲ್ಲ, ನನ್ನಕ್ಕ ಮಾತ್ರ ಈ ಘಟನೆಯನ್ನ ನನ್ನವ್ವನಿಗೆ ತಿಳಿಸಲೇ ಇಲ್ಲ. ಆದರೆ ಸಹಿಸಿಕೊಳ್ಳಲಾಗದ ಆಕೆ ನನ್ನಪ್ಪನಿಗೆ ತಿಳಿಸುವುದನ್ನು ಮಾತ್ರ ಮರೆಯಲಿಲ್ಲ.

                    ಇದನ್ನು, ಇಂಥ ಅಸಹ್ಯವನ್ನು ಕೇಳುತ್ತಲೇ ಒಂದು ಕ್ಷಣ ಅಪ್ಪನಿಗೆ ಭೂಮಿ ಬಿರಿದ ಅನುಭವವಾಗಿರಬಹುದು. ಅದೂ ಆತನ ಮೋಹದ ಮಗಳೊಂದಿಗೆ. ಆಕೆಯನ್ನು ಮುಟ್ಟುವುದಿರಲಿ, ಕೆಟ್ಟ ದೃಷ್ಟಿಯಿಂದ ನೋಡಿದ್ದರೂ ಆತ ಯಾರನ್ನೂ ಸುಟ್ಟುಬಿಡುತ್ತಿದ್ದ. ಆದರೆ ಈಗ ಮಾತ್ರ ಆತನಿಗೆ ಏನು ಮಾಡಬೇಕು ತಿಳಿಯಲೇ ಇಲ್ಲ. ಎರಡೂ ತಾನೇ ಸಾಕಿದ, ಆಶ್ರೆಯ ನೀಡಿದ ಮಕ್ಕಳು. ಇಬ್ಬರೂ ಮಕ್ಕಳ ಭವಿಷ್ಯದ ರೂವರಿ ಅವನೆ. ಸಿಟ್ಟಿನಲ್ಲಿ ಏನಾದರೂ ಮಾಡಿದಾಗ ಹುಡುಗ ಸತ್ತು ಹೋದರೆ? ತಾನು ತನ್ನ ಮಗಳು, ಮೇಲಾಗಿ ಇದಾವುದೂ ಗೊತ್ತಿಲ್ಲದೆ ಮುಗ್ಧವಾಗಿರುವ ತನ್ನ ಪ್ರೇಯಸಿ, ಎಲ್ಲರೂ ಅಪರಾಧಿ ಸ್ಥಾನದಲ್ಲಿ ನಿಲ್ಲುವ ಅತ್ಯಂತ ಭಯಾನಕ ಸಂದರ್ಭ. ಹೀಗಾಗಿ, ಮನೆಯಲ್ಲಿ ಏನೂ ನಡಿಯದಿರುವಂತೆ ನನ್ನ ದೊಡ್ಡಪ್ಪ ಈ ಸಂದರ್ಭವನ್ನು ನಿಭಾಯಿಸಿ ಬಿಟ್ಟ. ಆದರೆ ಮುಂದೊಂದು ವೇಳೆ ಈ ಘಟನೆ ನನ್ನವ್ವನಿಗೆ ಗೊತ್ತಾದರೆ  ಬದುಕಿನ ನಂಬಿಕೆಯ ಪ್ರಶ್ನೆ ಎಲ್ಲಿಗೆ ಬರಬಹುದು? ಎನ್ನುವ ಭಯ ಮಾತ್ರ ಉಳಿದುಕೊಂಡೇ ಬಿಟ್ಟಿತು. `ನಾನು ನಿನ್ನನ್ನು ಮೆಚ್ಚಿ ಬಂದೆ, ಹಾಗಂತ ನನ್ನ ಮಗಳು ನಿಮ್ಮ ಗಂಡು ಮಕ್ಕಳಿಗೆ ನನ್ನ ಪುನರಾವರ್ತನೆಯೇ ಆಗಬೇಕೆ? ನಾನು ನನ್ನ ಮಗಳು ಈ ಮನೆಯಲ್ಲಿ ವ್ಯಭಿಚಾರದ ಸಂಕೇತಗಳಾಗಿ ಉಳಿಯಬೇಕೆ? ನಲವತ್ತು ವರ್ಷದ ಸಂಸಾರ ಮತ್ತು ತ್ಯಾಗಕ್ಕೆ ಮತ್ತೇ ಇದೇ ಉತ್ತರವಾಗಬೇಕಿತ್ತೆ?’ ಎಂದು ಒಂದು ವೇಳೆ ಕೇಳಿದರೆ ನಾವು ಹೋಗಿ ನಿಲ್ಲುವುದೆಲ್ಲಿ? ಎನ್ನುವ ಪ್ರಶ್ನೆಯೂ ಕೆಲವು ಕಾಲ ಭಯಾನಕವಾಗಿ ಆತನನ್ನು ಕಾಡಿರಬೇಕು.

               
ಕಾಲಕ್ಕೆ ಎಲ್ಲವನ್ನೂ ತಿಳಿಗೊಳಿಸುವ ಶಕ್ತಿ ಇದೆ. ಅದು ಇಲ್ಲಿಯೂ ಆಯಿತು. ನನ್ನ ತಂದೆಯ ನಂತರ ಅತ್ತ್ಯುನ್ನತ ಶಿಕ್ಷಣವನ್ನು ಪಡೆದಿದ್ದ ನನ್ನಕ್ಕನನ್ನು ಮಿಲ್ಟ್ರಿಯವನೊಬ್ಬನಿಗೆ ಕೊಟ್ಟು ನನ್ನ ದೊಡ್ಡಪ್ಪ ಮದುವೆ ಮಾಡಿದ. ಆ ಮೂಲಕ ಹಡೆದ ತಂದೆಯಾಗಿ ಕರ್ತವ್ಯ ನಿರ್ವಹಿಸಿದ ದೊಡ್ಡ ಸಮಾಧಾನ ಪಡೆದ. ಆದರೆ ಒಟ್ಟಾರೆ ಈ ಮಧ್ಯದಲ್ಲಿ ಏನೋ ಆಯಿತು. ಅದು ಏನು ಆಯಿತೋ ನನಗಿಗಲೂ ಗೊತ್ತಾಗಿಲ್ಲ. ನನ್ನವ್ವ ಮಾತ್ರ ಮೌನಿಯಾಗಿದ್ದಳು, ಅಂತರ್ಮುಖಿಯಾಗಿದ್ದಳು. ಈಗ ಆಕೆಗೆ ಯಾವುದರಲ್ಲಿಯೂ ಆಸಕ್ತಿಗಳಿಲ್ಲ. ಆಟದಲ್ಲಿಯೂ ಅಷ್ಟೆ ತನ್ನ ಪಾಲಿನ ದೃಶ್ಯ ಮುಗಿದ ಮೇಲೆ ಬಂದು ನಿರಾಳಳಾಗಿ ಮಲಗಿದರೆ ಮತ್ತೆ ಯಾಂತ್ರಿಕವಾಗಿ ಮುಂದಿನ ದೃಶ್ಯಕ್ಕೆ ಏಳುತ್ತಿದ್ದಳಷ್ಟೆ. ಅದೇಕೊ ಕಾಲ ಗತಿಸಿದಂತೆ ಒಂದೇ ಒಂದು ದೃಶ್ಯದಲ್ಲಿ ಕಾಣಿಸಲಾರಂಭಿಸಿದಳು. ಮಾತು ತುಂಬಾ ಕಡಿಮೆ, ಸದಾ ಒಂಟಿಯಾಗಿರುತ್ತಿದ್ದಳು. ನನ್ನಪ್ಪನೊಂದಿಗೂ ಅಷ್ಟೆ, ಈಗ ಮೊದಲಿನ ಆ ಠೀಕು-ಠಾಕು ಉಳಿಸಿಕೊಂಡಿಲ್ಲ. ಪಂಜರದಿಂದ ಹಾರುವ ಹಕ್ಕಿ ಒಂದೇ ಸಮನೆ ಚಡಪಡಿಸುವಂತೆ ಆಕೆಯಲ್ಲಿ ಏನೋ ಚಡಪಡಿಕೆ ಇತ್ತು. ನನ್ನಪ್ಪ ಮತ್ತು ಆಕೆಯ ಮಧ್ಯ ಈಗ ಆ ಸಾಯಂಕಾಲದ ರಭಸವಿಲ್ಲ. ಅಡುಗೆ ಮನೆಯ ಆಕೆಯ ಕಪಾಟುಗಳನ್ನು ತೆರೆದು ನೋಡಿದರೆ ಶೆರೆಯ ಬಾಟಲ್‍ಗಳೂ ಇಲ್ಲ.ಮೆಹಖಾನೆ ಸತ್ತುಹೋಗಿದೆ. ಈ ಮಧ್ಯ ಶೆರೆ ಸುರಿಯಲೆಂದೇ ಇದ್ದ ಆಕೆಯ ಅಪ್ಪನೂ ಸತ್ತು ಹೋದ. ಹೊಸ್ತಿಲದ ಹೋರಗಿನ ಕಟ್ಟೆಯ ಮೇಲೆ ಈಗೊಂದು ಆತನ ನೆರಳು ಬೆನ್ನಟ್ಟುತಿತ್ತು. ಬಣ್ಣದಲ್ಲಿ ಆಸಕ್ತಿ ಕಳೆದುಕೊಂಡಿದ್ದ ಆಕೆ ನನಗಂತೂ ಹಾಳು ಬಿದ್ದ ವಾಡೆಯನ್ನು ನೆನಪಿಸುತ್ತಿದ್ದಳು. ಆದರೆ ಆಕೆ ಹೇಗಿದ್ದರೂ ಸರಿಯೆ. ನಾನೆ ಬರೆದ ಪದ್ಯವನ್ನು ನೆನಪಿಸಿಕೊಂಡೇ ಹೇಳುವುದಾದರೆ ಅವಳು-

 ಹೇಗಿದ್ದರೂ ಸರಿಯೆ ಹರಕೆಯಾಗಿ
ನಮ್ಮೆದೆಯ ತೋಟದ ಕರಕಿಯಾಗಿ

                ಬದುಕೆಂದರೆ ಇದೆ, ನಾವು ಅಂದುಕೊಳ್ಳುವುದೊಂದು ಆಗುವುದು ಮತ್ತೊಂದು. ಈ ನನ್ನವ್ವನ ಪಾಲಿಗೆ ಯಾವುದು ಎಂದೂ ಆಗಬಾರದೆಂದು ನಾನು ಹಂಬಲಿಸಿದೆನೋ, ಅದು ಆಗಿಯೇ ಬಿಟ್ಟಿತು. ನನ್ನವ್ವ ಹೋಗಿಯೆ ಬಿಟ್ಟಳು. ಎಲ್ಲಿಗೆ ಹೋದಳು? ಯಾವಾಗ ಹೋದಳು? ಯಾಕಾಗಿ ಹೋದಳು? ಹೀಗೆ ಹೋಗಲು ಆಕೆ ಯಾವ ಲೆಕ್ಕಾಚಾರಗಳನ್ನಿಟ್ಟುಕೊಂಡಿದ್ದಳು ಅದ್ಯಾವುದೂ ನನಗೀಗಲೂ ಗೊತ್ತಾಗುತ್ತಿಲ್ಲ.  ಈ ಕುರಿತು ನನ್ನ ದೊಡ್ಡಪ್ಪನನ್ನೂ ಕೇಳಬಹುದುತ್ತೇನೊ, ಆದರೆ ನನ್ನದು ಕೇಳುವ ವಯಸ್ಸಲ್ಲ. ಕೆಲವು ದಿನಗಳ ನಂತರ ಒಂದು ಸಮಾಧಾನ ಮಾತ್ರ ಸಿಕ್ಕಿತು. ಅವಳು ಅಥಣಿಗೆ ಹೋಗಿದ್ದಳು. ಮೂವತ್ತು ವರ್ಷಗಳವರೆಗೆ ಇವಳ ನಿರ್ಗಮನದ ನಂತರ ಮತ್ತೆ ಮರು ಮದುವೆಯಾಗದೆ ಈಕೆಗಾಗಿಯೇ ಕಾಯ್ದು ಕೂತಿದ್ದ ಗಂಡನನ್ನು ಆಕೆ ಕೂಡಿಕೊಂಡಿದ್ದಳು. ಆ ದಿನಗಳಲ್ಲಿ ನೊಂದಿದ್ದ ನಾನು ಹೀಗೆ ಬರೆದುಕೊಂಡಿದ್ದೆ. ಆಕೆಯ ನಿರ್ಗಮನವನ್ನು ಅಕ್ಕ ಎನ್ನುವ ಕವಿತೆಯಲ್ಲಿ ಹೀಗೆ ದಾಖಲಿಸಿದ್ದೆ –
`ಅವ್ವ’ ಎದ್ದಳು
ಹಡಬಡಿಸಿ ಒಂದ್ ರಾತ್ರಿ
ಬಿಟ್ಟ ಕೇರಿಯ ಗೂಡಿಸಲಿನ
ಕನಸು ಬಿದ್ದು
ಕಟ್ಟಿಟ್ಟ ಗುಳದಾಳಿ, ಬಿಟ್ಟ ಗಂಡನ
ನೆನಪು ಬಂದು.

ಅಪ್ಪ ಕುಡಿದಿದ್ದ ಕಂಠ ತುಂಬ
ನಶೆಯೊಳಗೆ ನಡೆದದ್ದು
ಗೊತ್ತಾಗಲಿಲ್ಲ
ಅವ್ವ ಹೊಚ್ಚಿದ್ದ
ಬಣ್ಣದ ಹಡಪ ಸರಿಸಿ
ಅಪ್ಪ ಹುಡುಕಾಡಿದರೂ
ಮತ್ತೆ ನನ್ನವ್ವ ಹೋದ
ದಾರಿ ಸಿಗಲಿಲ್ಲ

                  ಈಗಲೂ ನನಗೆ ಒಂದಂತೂ ಅರ್ಥವಾಗುತ್ತಿಲ್ಲ. ಮೂವತ್ತು ವರ್ಷದ ನಂತರ ಮರಳಿದ ತನ್ನ ಮಡದಿಯನ್ನು ಹಳೆಯ ಗಂಡ ಹೇಗೆ ಸ್ವಾಗತಿಸಿರಬಹುದು? ಅಥವಾ ಇಷ್ಟೋಂದು ದೀರ್ಘ ಅವಧಿಯ ನಂತರ ಅವನನ್ನು ಸೇರಿಕೊಳ್ಳಬೇಕೆನ್ನುವ ನನ್ನವ್ವನ ಬಳಿ ಎಂಥ ಧೈರ್ಯ ಅಥವಾ ಪ್ರಾಂಜಲತೆ ಇರಬಹುದು? ಯಾವ ಒಪ್ಪಂದ ಆಗಿರವಹುದು? ಅವರಿಬ್ಬರ ಮಧ್ಯ ಯಾವ ಸಂಭಾಷಣೆ ನಡೆದಿರಬಹುದು? ಮಧ್ಯದಲ್ಲಿ ಹುಟ್ಟಿದ ಮಗಳ ವಾರಸುದಾರನಿಗೆ `ಅಜ್ಜ’ ಯಾರಾಗಬಹುದು? ಅವರಿಬ್ಬರ ಮಧ್ಯ ಬರೀ ಮೌನದ ಒಂದು ಕಾಲ ಘಟ್ಟವೂ ಉರುಳಿ ಹೋಗಿರಬಹುದೇ? ಇಲ್ಲ ಇಲ್ಲಿಯೇ ಮೌನವಾಗಿದ್ದ ಅವಳು ಅದರ ಕಟ್ಟಯೊಡೆದು ಆತನನ್ನು ಕಿತ್ತಾಡಿ ಗೋಳು ಹೊಯ್ದಿರಬಹುದೆ? ಯಾವುದೊಂದು ಅರ್ಥವಾಗಲಿಲ್ಲ. ಯಾಕೆಂದರೆ ಇದೆಲ್ಲವೂ ಅರ್ಥವಾಗುವಷ್ಟು ದೀರ್ಘ ಕಾಲ ಅವಳು ಆತನೊಂದಿಗೆ ಬದುಕಲೇ ಇಲ್ಲ.ಒಟ್ಟಾರೆ ಕಟ್ಟಿದ ತಾಳಿಗೆ ಸಾಕ್ಷಿಯಾಗಿದ್ದ ಆತನ ಮುಂದೆ ಒಮ್ಮೆ ಮತ್ತೆ ನಿಲ್ಲಬೇಕಾಗಿತ್ತೇನೊ ಆಕೆಗೆ. ಗೂಟದ ಕಲ್ಲಿನಿಂದ ಮೇಯಲು ಹೊರಗೆ ಹೋಗುವ ಆಕಳು, ಮತ್ತೆ ಸಾಯಂಕಾಲ ಬಂದು ಅಲ್ಲಿಯೇ ನಿಲ್ಲುವಂತೆ ಆಕೆ ತನ್ನ ಮನೆಗೆ ಮರಳಿ ಹೋಗಿದ್ದಳಷ್ಟೆ.
ಇಷ್ಟರಲ್ಲಿ ಇನ್ನೊಂದು ಸಂಸಾರ, ಸಾಂಪ್ರದಾಯಿಕ ಜಾತಸ್ತ `ಹೆಂಡತಿ’, ಎದೆ ಮಟ್ಟ ಬೆಳೆದ ಎರಡು ಗಂಡು ಮಕ್ಕಳು ಹೀಗೆ ಹಬ್ಬಿಕೊಂಡಿದ್ದ ನನ್ನ ದೊಡ್ಡಪ್ಪನೂ,  ತನ್ನ ಗಂಡನನ್ನು ಸೇರಿಕೊಂಡಿದ್ದ ಆಕೆಯನ್ನು ಹೋಗಿ ಕರೆಯುವಂತಿರಲಿಲ್ಲ. ಅವಳು ಎಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದಳೋ ಅಲ್ಲಿ ಸುಖದ ಬಾಳನ್ನು ಹರಸಲೇ ಬೇಕಾದುದು ಅವನ ಕರ್ತವ್ಯವಾಗಿತ್ತು ಅಷ್ಟೆ.
ಆಗಲೆ ಹೇಳಿದೆನಲ್ಲ, ಯಾವ ವಿವರಣೆಗೂ ಆಸ್ಪದವೀಯದ ಆಕೆ, ನನ್ನಪ್ಪನ ಬದುಕಿನಲ್ಲಿ ಎಷ್ಟು ವೇಗವಾಗಿ ಆಗಮಿಸಿದಳೊ ಅಷ್ಟೇ ತೀವ್ರವಾಗಿ ನಿರ್ಗಮಿಸಿದಳು. ಗಂಡನ ಊರಿಗೆ ಹೋದ ಅವಳು ಕೆಲವು ತಿಂಗಳಷ್ಟೇ ಬದುಕಿದಳು. ಅತಿಸಾರದಿಂದ ಬಳಲಿದ ಅವಳು ತೀರಿಹೋದಳು. ಇಲ್ಲಿಗೊಂದು ಪೂರ್ಣ ವಿರಾಮ.

                        ಪಾತ್ರ ಮುಗಿಸಿಬಂದು ಬಣ್ಣದ ಕೋಣೆಯಲ್ಲಿ, ಕೈಗೆ ಕೊಬ್ಬರಿ ಎಣ್ಣೆ ಸವರಿಕೊಂಡು ಸ್ವಚ್ಛವಾಗಿ, ಪಾತ್ರವನ್ನು ಮಾಡಿಯೇ ಇಲ್ಲ ಎನ್ನುವಂತೆ ಬಣ್ಣ ಒರಸಿ ಮಲಗುತ್ತಿದ್ದ ಆಕೆಯ ಆ ಭಂಗಿ ನೆನಪಾಯಿತಷ್ಟೆ ನನಗೆ. ಈಗ ಆಕೆ ಮಲಗಿದ್ದಾಳೆ, ವ್ಯತ್ಯಾಸವಿಷ್ಟೆ ಮುಂದಿನ ದೃಷ್ಯಕ್ಕೆ ಮತ್ತೆ ಏಳುವ ಒತ್ತಡವಿಲ್ಲ. ಇದು ನಿರಾಳದ ನಿದ್ರೆ. ನಿಶ್ಚಿಂತೆಯ ನಿದ್ರೆ.

ಹಿಂಗ ಕಾಲದ ಹಾದಿಗಿ
ನನ್ನವ್ವ, ನನ್ನಕ್ಕ ಎರಡು
ಬಳ್ಳಿಯ ತೊಡಕು.
ಬೀಜ ಬೀದಿಯೊಳಗ
ಬಳ್ಳಿ ಹಂದರದೊಳಗ
ಬೇರು ಕೇರಿಯೊಳಗ
ಹೂ ಊರಿನೊಳಗ
ಪೂಜೆಗಂತ್ಹೇಳಿ ಯಾರು
ಎತ್ಕೋಬೇಕು?