Sunday 12 May 2013

ನೀನಿರಬೇಕಮ್ಮ ಬಾಗಿಲೊಳಗೆ




ನೀನಿರಬೇಕಮ್ಮ ಬಾಗಿಲೊಳಗೆ
ನೀನಿಟ್ಟ ರಂಗೋಲಿಗೆ ಪಾದ ಸೋಕಿ
ತುಳಸಿ ತಣ್ಣಗೆ ಹರಸಿ
ಪುನಿತವಾಗುವ ದೇಹ 
ಸಾಗಿ ಹೋಗುವುದ ನೋಡಲು

ನೀನಿರಬೇಕಮ್ಮ ಬಾಗಿಲೊಳಗೆ
ಹುಲ್ಲು ಹುಟ್ಟಿದೆ ಕಟ್ಟೆ, ದಾರಿ ಹೋಕರ
ಬಾಳ ಹರುಕರು ಬಾಯಿಗೆ
ಜೀವಜಲ ಸುರಿದು ತಣ್ಣಗಿರಿಸಲು

ನೀನಿರಬೇಕಮ್ಮ ಬಾಗಿಲೊಳಗೆ
ಶಾಲೆ ಜೈಲಿಂದ ಹೊರ ಬಂದ
ಹೈದಗೆ ರೆಕ್ಕೆ ಮೂಡಿ, ಹಾತೊರೆದು ಬರುವವನೆ
ಎದೆಯೊಳಗೆ ಇಂಗಿಸಿಕೊಳ್ಳಲು

ನೀನಿರಬೇಕಮ್ಮ ಬಾಗಿಲೊಳಗೆ
ಹೂ-ಹಣ್ಣು ತರಕಾರಿ-ಗಳ ಜೀವ ಬಾಡದೆ
ಆಂತರ್ಯ ಕೆಡದೆ, ಮರುಕಳೆಯ
ಪಡೆದು ಘಮಘಮಿಸಲು

ನೀನಿರಬೇಕಮ್ಮ ಬಾಗಿಲೊಳಗೆ
ನೆಲವ ನಂಬಿದ ನಾಯಿ
ರೊಟ್ಟಿ ಜೊಲ್ಲಿಗೆ ತುತ್ತಿಡಲು
ಮುತ್ತಿಡಲು, ಮೈ ಸವರಿ ಮಲಗಿಸಲು

ನೀನಿರಬೇಕಮ್ಮ ಬಾಗಿಲೊಳಗೆ
ಅಕ್ಷತೆ ಅಕ್ಕಿ ಉಡಿಗೆ ಬಿದ್ದು
ಮುಡಿಗೆ ಹೂ ಬಿದ್ದು, ಒಂದು ನಾಲ್ಕಾಗಿ
ಮರಳಿ ಬರುವ ಮನ್ವಂತರದ ಕೈ ಹಿಡಿಯಲು

ನೀನಿರಬೇಕಮ್ಮ ಬಾಗಿಲೊಳಗೆ
ಜರಿದವರ ಶಪಿಸದೆ, ಬಂದವರ ಲೆಕ್ಕವಿಡದೆ
ಬರದವರ ನೆನೆದು, ಕಣ್ಣೀರು ಕರೆದು
ಬಾಗಿಲಿಗೆ ತಲೆ ಚಚ್ಚಿಕೊಳ್ಳಲು

ನೀನಿರಬೇಕಮ್ಮ ಬಾಗಿಲೊಳಗೆ
ಇಲ್ಲಿ ಧರ್ಮಗಳು ಬರುತ್ತವೆ ಬಿಕ್ಷೆ ಅರಸಿ
ಹಿಡಿ ಅನ್ನ ಸುರಿದು
ಕಳಿಸುವೆ ನೀನೆ ಮಮತೆಯ ಅರಸಿ

ನೀನಿರಬೇಕಮ್ಮ ಬಾಗಿಲೊಳಗೆ
ಮರೆತು ಹೋಗುವ ಸೂರ್ಯ
ಚಂದ್ರ, ನಕ್ಷತ್ರ, ಮಿಂಚು ಹುಳುಗಳ ಕರೆದು
ಮನೆಯ ಮೊಮ್ಮಗಳೊಡನೆ ಮಾತಾಡ ಹೇಳಲು

ನೀನಿರಬೇಕಮ್ಮ ಬಾಗಿಲೊಳಗೆ
ಗುಮ್ಮನನು ಕರೆದು, ನಮ್ಮ ಸುಮ್ಮನಾಗಿಸಿ
ಮತ್ತೆಂದು ಬಾರದಿರು ಬಿಕನಾಸಿ ಹೋಗೆಂದು
ದಿಕ್ಕರಿಸಿ ತಳ್ಳಲು

ನೀನಿರಬೇಕಮ್ಮ ಬಾಗಿಲೊಳಗೆ
ಆರತಿಯ ಎತ್ತಿ ನಮ್ಮ ಮೂರುತಿಗಳ ಮಾಡಿ
ಒಳಗೆ ಮಮ್ಮಲ ಮರುಗಿ, ಹೊರಗೆ
ಕೀರುತಿಯ ಹುಚ್ಚು ಹರಸಲು

ನೀನಿರಬೇಕಮ್ಮ ಬಾಗಿಲೊಳಗೆ
ನಡೆದವರ ಕಾಲಧೂಳ ಭಾಗ್ಯ ತಂದು
ಮಡಿದವರ ಪುಣ್ಯದ ಬುತ್ತಿ ಬಿಚ್ಚಿಟ್ಟು
ಇತಿಹಾಸ ತಿಲಕ ಹಣೆಗಿಟ್ಟು 
ಮರುಜನ್ಮ ನೀಡಲು

ನೀನಿರಬೇಕಮ್ಮ ಬಾಗಿಲೊಳಗೆ
ಹೊರಗೆ ಹೋಗುವ ಜೀವದ
ದೀಪ ಒಳಗಡೆ ಇಟ್ಟು ಬಳಗಕ್ಕೆಲ್ಲವೂ
ಭಾಗ್ಯವಾಗುಳಿಸಲು, 
ನೆನಪ ಕಾಯ್ದಿರಿಸಲು

(Happy Mother's Day)





Sunday 5 May 2013

ಹುಣಸೆಗೂ ಹೆಂಗಸಿಗೂ ಹಸಿ ಸಂಬಂಧ


“ಆಕೆಯ ಕಾಲುಗಳ ಮೇಲೆ
ಉಗುರ ಚಿತ್ರ ಎಳೆದು ಖಾಲಿಯಾದ
ಭಂಡರು ತಿಳಿಯಲಿಲ್ಲ ಅವಳ ಆಳ
ರಾತ್ರಿ ಎಸೆದೊಗೆದ
ಖಾಲಿ ಬಾಟಲ್‌ಗಳೊಳಗೆ
ತಲೆ ಸವರಿಕೊಂಡು ಕೆಲಸಕ್ಕೆ
ಅಣಿಯಾಗುತ್ತಿದ್ದ ಅವಳ ನೆನಸಿಕೊಂಡರೆ
ಸುಳಿದುಹೋಗುತ್ತವೆ ನೂರಾರು
ಗಂಡಸರ ಭಾವಚಿತ್ರಗಳು”

         
 ಈ ಪದ್ಯದ ಸಾಲುಗಳಲ್ಲಿ ಹೆಪ್ಪುಗಟ್ಟಿದವಳು ನನ್ನನ್ನು ಬಾಲ್ಯದಿಂದಲೂ ಕಾಡಿದ ಅತ್ಯಂತ ಬಲಿಷ್ಟ ಹೆಣ್ಣು. ೧೯೯೬ ರಿಂದ ಇದುವರೆಗಿನ ನನ್ನ ದಿನಚರಿಗಳನ್ನು ಜಾಲಾಡಿದರೆ ಮತ್ತೇ ಮತ್ತೇ ಸಿಗುವ ಒಂದು ಪಾತ್ರ ಇವಳು. ಯಾಕೆ ಈಕೆಯನ್ನು ಕುರಿತು ನಾನು ಇಷ್ಟೊಂದು ಬರೆಯುತ್ತೇನೆ? ಇಷ್ಟು ಬರೆದೂ ಈಕೆಯ ಕುರಿತು ನಾನೇನನ್ನೂ ಸರಿಯಾಗಿ ಹೇಳಲಿಲ್ಲ ಎಂದು ಯಾಕೆ ಚಡಪಡಿಸುತ್ತೇನೆ? ಇವಳಿಗೂ ನನಗೂ, ಅಕ್ಕನ ಆ ಬೆಟ್ಟದ ನೆಲ್ಲೆಕಾಯಿ ಸಮುದ್ರದ ನೀರಿಗೂ ಅದ್ಯಾವ ಅವಿನಾಭಾವ ಸಂಬಂಧ? ಮಜಾರು, ದರ್ಗಾ, ಮಸೀದೆ, ಆಜಾನ್‌ಗಳನ್ನೆಲ್ಲ ನನ್ನ ಬದುಕಿನ ಬಾಟಲ್‌ನೊಳಗೆ ಸುರಿದವಳು ಇವಳೇ ಇರಬಹುದೇ? ಸೂಳೆಯರನ್ನೂ ಸತ್‌ಚರಿತರಷ್ಟೇ ಗೌರವದಿಂದ ನೋಡುವ ಪಾಠ ಇವಳೇ ಕಲಿಸಿದಳೇ? ಹೇಸಿಗೆಯ ಹಂಗು ಹರಿಸಿದವಳೆ? ಹೆಂಗಸರ ಬಗೆಗಿನ ಕಣ್ಣಿನ ಒಂದು ವಿಚಿತ್ರ ಹಸಿವು ನೀಗಿಸಿದವಳೆ? ಮಳೆಯ ಹನಿಹನಿಗೂ ಶೃದ್ಧೆಯಿಂದ ಬಸಿರಾಗಿ ಬಸಿಯುವ ಭೂಮಿ ತೋರಿಸಿದಳೆ? ಬದುಕಿನ ಯತೀಮತೆಗೊಂದು ಕಾರುಣ್ಯದ ಹೃದಯವನ್ನು ನನ್ನೊಳಗೆ ಇವಳೇ ಕಾಯ್ದಿಟ್ಟು ಬೆಳೆಸಿದಳೇ? ಈವು ಬಗೆಹರಿಯದ ಪ್ರಶ್ನೆಗಳು. ಒಂದು ಉತ್ತರ ಮಾತ್ರ ನಿಶ್ಚಿತ, ಅದೇನೆಂದರೆ, ಇವಳನ್ನು ನಾನು ಇಡಿಯಾಗಿ ಕುಡಿದುಬಿಟ್ಟಿದ್ದೇ. ಮತ್ತೆ ಕುಡಿಯುವ ಪ್ರಮೇಯವೇ ಇಲ್ಲದಂತೆ.

           ಅವಳ ಹೆಸರು ಜೈನಬಿ ಇರಬಹುದು. ಹೆಸರಿಗೇನು, ಬಸಿದು ಸಾಯುವ ಒಂದು ಜೀವಕ್ಕೆ ಅದು ಅಂಟಿಕೊಳ್ಳುವ ಒಂದು ಬಿಲ್ಲೆ ಅಷ್ಟೆ. ಇದಕ್ಕಿಂತಲೂ ಉತ್ತಮ, ಹುಟ್ಟಿ ಬೀಳುವ ಒಂದು ಮನೆಗೆ, ಒಂದು ನಾಮ ಫಲಕ ಅಂದುಕೊಳ್ಳಿ. ನನಗೆ ತಿಳುವಳಿಕೆಗೆ ಬಂದು ಶಾಲೆಗೆ ಹೋಗುವ ದಿನಗಳಲ್ಲಿ ಇವಳು ನಮ್ಮೂರಲ್ಲಿ ಇರಲಿಲ್ಲ. ಆದರೆ ಈಕೆಯ ಮಗ ನನ್ನ ಕರುಳಿಗೆ ತಿಡುಕಾದ ಜೀವವಾದ. ಹೀಗಾಗಿ, ಆತ ನನ್ನ ಗೆಳೆಯನಾದ ಎಂಬ ವ್ಯಾವಹಾರಿಕ ಪದವನ್ನು ನಾನು ಬಳಸುತ್ತಿಲ್ಲ. ಆತ ಗೆಳೆಯನಿಗೂ ಮೀರಿದ ಗೆಳೆಯ.

            ನಮ್ಮ ಮನೆಯ ಎದಿರು ಒಂದು ದರ್ಗಾ ಇತ್ತು. ಅದಕ್ಕೊಂದು ಹೆಸರು ದಾವಲ್‌ಮಲೀಕ್ ದರ್ಗಾ. ಇವನೊಬ್ಬ ಸೂಫಿ ಸಂತ ಇರಬಹುದು. ಯಾಕೆಂದರೆ ಗುರುವಾರಕ್ಕೊಮ್ಮೆ ಈ ದರ್ಗಾಕ್ಕೆ ಬಂದುಹೋಗುವ ಭಕ್ತರಲ್ಲಿ ಎಲ್ಲ ಜನಾಂಗದವರೂ ಸೇರಿಕೊಂಡಿದ್ದರು. ಗುರುವಾರಕ್ಕೊಮ್ಮೆ ನನ್ನ ಕೈಯಲ್ಲೊಂದು ಬಟ್ಟಲು ಕೊಟ್ಟು, ಅದರೊಳಗೆ ಸಕ್ಕರೆ, ಮೇಲೆ ಉದುಕಡ್ಡಿಯನ್ನಿಟ್ಟು ನಮ್ಮವ್ವ ನನ್ನನ್ನು ಈ ದರ್ಗಾಕ್ಕೆ ಕಳುಹಿಸುತ್ತಿದ್ದ ನೆನಪು. ಸ್ವಲ್ಪ ಎತ್ತರದಲ್ಲಿದ್ದ ಈ ದರ್ಗಾ ಹತ್ತಿದರೆ ನನಗೊಂದು ದೊಡ್ಡ ಖುಷಿ. ತಲೆಗೆ ಹಸಿರು ಕರವಸ್ತ್ರ ಕಟ್ಟಿಕೊಂಡು, ನಮಸ್ಕರಿಸಲು ಬಂದವರ ಕಣ್ಣು ಉರಿಯುವಷ್ಟು ಉದು ಹಾಕಿ, ನಮ್ಮ ಬೆನ್ನಿಗೆ ನವಿಲು ಗರಿಯಿಂದ ಬಾರಿಸುತ್ತಿದ್ದ ಆ ಮುಲ್ಲಾ ಈಕೆಯ ಮಗನೇ ಆಗಿರುತ್ತಿದ್ದ. ಹಿಗೆಂದುಕೊಳ್ಳಿ ಆ ನನ್ನ ಗೆಳೆಯನೇ ಆಗಿರುತ್ತಿದ್ದ. ಒಂದು ದಿನ ಆತ ಬಹಳ ಖುಷಿಯಿಂದ ಹೇಳಿದ ಈ ವರ್ಷದ ಉರುಸಿಗೆ ದುಬಾಯಿಯಿಂದ ನಮ್ಮವ್ವ ಬರುತ್ತಾಳೆ. ಹಾಂ, ಇದು ನಮಗೂ ನಿಮಗೂ ವಿಶೇಷವಾದ ಮಾತೇನೂ ಅಲ್ಲ. ನಿತ್ಯ ನಮ್ಮ ಕಿವಿಹಿಂಡಿ, ನಮ್ಮ ಅಪ್ಪಂದಿರರನ್ನು ಶಪಿಸುತ್ತ ಸದ್ಗೃಹಿಣಿಯರಾಗುವ ನಮ್ಮವ್ವಂದಿರರು ಸಾಮಾನ್ಯವಾಗಿ ಸಾಯುವವರೆಗೂ ನಮ್ಮೊಂದಿಗೇ ಇರುತ್ತಾರೆ. ಆದರೆ ಈ ಭಾಗ್ಯ ನನ್ನ ಈ ಗೆಳೆಯನಿಗಿರಲಿಲ್ಲ. ಅವರವ್ವನದು ಭಿನ್ನವಾದ ಬದುಕು. ವರ್ಷಕ್ಕೊ, ಮೂರು ವರ್ಷಕ್ಕೊಮ್ಮೆ ಬರುತ್ತಿದ್ದ ಅವಳನ್ನು ನೋಡುವುದೆಂದರೆ ಒಂದು ಮರುಜನ್ಮ ಸಿಕ್ಕ ಅನುಭವವೆ ಅವನಿಗೆ. ಹದವಾದ ಹೆಣ್ಣೊಂದು ಬದುಕಿನ ಭವಣೆಗಳೊಳಗೆ ಮಾಗಿ ತಾಯಿಯಾದರೆ ಅಂಥ ತಾಯಿಯ ಭೇಟ್ಟಿ ಎಂಥವನಿಗೂ ಕೂಡ ಮರುಜನ್ಮದ ಅನುಭವ ನೀಡಿಯೇ ನೀಡುತ್ತದೆ.
             ಇವಳವ್ವ ಊರಿಗೆ ಬರುವುದು ಇವನಿಗೆ ಸಂತೋಷದ ಸಂಗತಿಯಾಗಲಿ, ಇವನಂತೆಯೆ ಇವನ ಅಕ್ಕ, ಇಬ್ಬರು ತಮ್ಮಂದಿರರಿಗೂ ಆಗಲಿ, ಆದರೆ ಜೈನಬಿ ಈ ಸಂತಸ ಇಡೀ ಊರಿಗೇಕಾಗಬೇಕು? ಅದಕ್ಕೊಂದು ಮುಖ್ಯ ಉತ್ತರವಿದೆ. ಅವಳು ಬೊಂಬಾಯಿ ಇಂದ ಬರುವ ಬಂಗಾರದ ಮೊಟ್ಟೆ ಇಡುವ ಕೋಳಿ. ಆಗೊಮ್ಮೆ ಇಗೊಮ್ಮೆ ಬರುತ್ತಿದ್ದ ಅವಳ ಮೈಮೇಲಿನ ಬಂಗಾರ ನೋಡುವುದಕ್ಕಾಗಿಯೇ ಜನ ಸೇರುತ್ತಿದ್ದರು. ಒಮ್ಮೆ ನಮ್ಮೂರ ಬಸ್ಟ್ಯಾಂಡಿನಲ್ಲಿ ಕುಳಿತುಕೊಂಡು ಈಕೆ ಚಿನ್ನದ ಬಿಸ್ಕತ್‌ಗಳನ್ನು ಜನರಿಗೆ ತೋರಿಸಿದ್ದು ಎಂಥ ದೊಡ್ಡ ಗುಲ್ಲಾಯಿತು. ಕ್ಯಾಮರಾ, ವಿಲಾಯತಿ ಮಸ್ಲಿನ್ ಬಟ್ಟೆಗಳು, ಚಂದ ಚಂದದ ಪಿಂಗಾಣಿ ಪಾತ್ರೆಗಳು, ಅತ್ತರ ಬಾಟಲ್‌ಗಳು, ಆಭರಣ, ಸಾಬೂನು ಹೀಗೆ ಏನೆಲ್ಲ ತರುತ್ತಿದ್ದ ಈಕೆಗಾಗಿ, ಈಕೆಯ ಬರುವಿಕೆಗಾಗಿ, ನಮ್ಮೂರು ಸಂಭ್ರಮಿಸುವುದು ತಪ್ಪೆ? ಎಲ್ಲಕ್ಕೂ ಮಿಗಿಲಾಗಿ ಜೈನಬಿ, ಯಾವಾಗಲೂ ಹಂಚಿ ಬದುಕಿದ ಹೆಣ್ಣು. ಊರವರು ಹಿಚುಕಾಡಿ ತಿಂದ ಹಣ್ಣು. ಈಕೆ ಹಾದು ಹೋದರೆ ಓಣಿಯ ತುಂಬ ಸುಗಂಧಗಳ ಹೋಳಿ, ನೋಡುವವರ ಕಣ್ಣಲ್ಲಿ ಕಾಮದ ಕೇಳಿ.
ನಮ್ಮೂರಿಂದ ಸ್ವಲ್ಪ ಜೋರಾಗಿ ನೆಗೆದರೆ ಮಹಾರಾಷ್ಟ್ರದಲ್ಲಿಯೇ ಬೀಳುತ್ತಿರಿ. ಬಹಿರ್ದೆಸೆಗೆ ಎರಡು ಮೂರು ಕೀಲೋ ಮೀಟರ ಹೋರಗೆ ಹೋಗುವ ಹವ್ಯಾಸ ಇರುವವರು, ತಮ್ಮ ಮುಂಜಾನೆಯ ಕ್ರಿಯಾ ವಿಧಿಯನ್ನ ಮಹಾರಾಷ್ಟ್ರದಲ್ಲೇ ಮುಗಿಸಿಕೊಂಡು ಬರಬಹುದು. ಅಂದಹಾಗೆ, ನಮ್ಮೂರಿನಿಂದ ಮಂಗಳವೇಡೆಯ ದಾರಿಯಲ್ಲಿ ಬೋರಾಳು ಎಂಬ ಊರಿದೆ. ದೊಡ್ಡ ಕೆರೆಯ ಏರಿಯ ಮೇಲೆ ನೂರಾರು ವರ್ಷ ಹಿಂದೆ ನೆಟ್ಟ ಹುಣಸೆಯ ಮರದ ಕೆಳಗೆ ಒಂದು ಶಿವಾಲಯವಿದೆ. ಆದರೆ ಅದನ್ನು ಕರೆಯುವುದು ‘ಬೋರಾಳು ಬಸವಣ್ಣನ ಗುಡಿ’ ಎಂದೇ. ಈ ಬಸವಣ್ಣ ಅಂಥಿಂತವನಲ್ಲ. ನಮ್ಮ ಜೈನಬಿಯಷ್ಟೇ ದೊಡ್ಡ ಮನುಷ್ಯ. ಶಿವನನ್ನೂ ಮೀರಿ ಬೆಳೆದವ ಹೀಗೇ ಬಿಟ್ಟರೆ ದೊಡ್ಡವನಾಗುತ್ತಾ ಶಿವಾಲಯವನ್ನೂ ಕೆಡವಿಬಿಡುತ್ತಾನೆಂದು ಆತನ ಬೆನ್ನಿಗೆ ಹಾರಿ ಹೊಡೆದಿದ್ದಾರೆ ಎಂದು ಜೈನಬಿಯ ಮಗ ನನಗೆ ಹೇಳಿದ್ದುಂಟು. ಈ ಬಸವಣ್ಣನ ಕಥೆ ಹೇಳುವ ಉದ್ದೇಶವಿಷ್ಟೆ ಈತನೇ ಆಕೆಯ ಮನೆದೇವರು. ಅಂದಹಾಗೆ ಬೋರಾಳು ಅವಳ ಗಂಡನೂರು.  ಅವಳು ಪೂಣಾ, ಬೊಂಬಾಯಿ, ದುಬಾಯಿಯಲ್ಲಿದ್ದಾಗಲೂ ಚಡಚಣದ ದಾವಲ್‌ಮಲೀಕ್‌ನನ್ನು, ಬೋರಾಳದ ಬಸವಣ್ಣನನ್ನು ಪಾಲಿಸುವುದನ್ನು ಎಂದೂ ಮರೆಯಲಿಲ್ಲ. ಹಾಗಾದರೆ ಅವಳು ಮುಸ್ಲಿಂಳೋ ಅಥವಾ ಹಿಂದೂವೋ? ಜಾತಿ ಯಾವುದು? ಇದು ಹೊಟ್ಟೆತುಂಬ ಉಚಿಡು, ಊಟ ಕರಗದಕ್ಕೆ . . . . ಗೆರೆ ಎಣಿಸುವ ನಮ್ಮ ನಿಮ್ಮ ಪ್ರಶ್ನೆ ಬಿಡಿ. ನನಗೆ ಗೊತ್ತಿರುವಂತೆ ಅವಳು ಹಸಿವಿನ ಜಾತಿಯವಳು. ಭಗವಂತ ಎಂದೂ ತುಂಬದ ಒಂದು ಭಿಕ್ಷಾ ಪಾತ್ರೆಯನ್ನು ಹುಟ್ಟುತ್ತಲೇ ಆಕೆಯ ಕೈಗಿಟ್ಟು ಅಂಗಾಂಗಗಳ ತುಂಬ ಬಣ್ಣ ಬಯಕೆಗಳನ್ನ ತುಂಬಿ, ಈ ಪ್ರಪಂಚಕ್ಕೆ ದೂಡಿ ಬಿಟ್ಟಿದ್ದ. ತನ್ನ ಹೊಟ್ಟೆ ತುಂಬಿಸಿಕೊಂಡು, ಬೆನ್ನಿಗೆ ಬಿದ್ದವರನ್ನೂ ಸಲಹುವುದರಲ್ಲಿಯೇ ಮಗ್ನಳಾಗಿದ್ದ ಆಕೆಗೆ ಊರ ದೇವರೆನು, ಕೆರಿಯ ದೇವರೇನು, ದಾರಿಯ ದೇವರೇನು? ನಿಂತಲ್ಲೇ ನೆಮ್ಮದಿ ಕಂಡುಕೊಂಡವಳವಳು. ಅವಳ ಬದುಕು ನಮ್ಮೂರ ಹಳ್ಳದಂತೆ. ಹರಿದಷ್ಟೂ ರಭಸ, ಬತ್ತಿದಾಗ ಬಿಕಾರಿ.
        ನೀವು ಕೇಳುವುದಾದರೆ, ಅವಳ ದಾರುಣ ಬದುಕನ್ನು ಹೀಗೆ ಹೇಳಬಹುದು. ಒಂದಾನೊಂದು ಕಾಲದಲ್ಲಿ ಅವಳು ಚಡಚಣದ ಬಡ ಮುಸ್ಲಿಂ ಮನೆತನದಲ್ಲಿ ಹುಟ್ಟಿದವಳು. ವೃತ್ತಿಯಲ್ಲಿ ಅವಳ ಪೂರ್ವಜರು ಮುಲ್ಲಾಗಳು. ಖಬ್ರಸ್ಥಾನದಲ್ಲಿ ಮುಲ್ಲಾನಿಗಿರುವ ಪ್ರಶಸ್ಥ್ಯ ಯಾವ ಹಕೀಮನಿಗೂ ಊರಲ್ಲಿ ಇರುವುದಿಲ್ಲ. ಆದರೆ ಜೈನಬಿ, ಹುಟ್ಟಿ ದೊಡ್ಡವಳಾಗುವವರೆಗೂ ತುತ್ತು ಅನ್ನಕ್ಕಾಗಿಯೂ ಹೋರಾಡುವ ಬದುಕನ್ನೇ ಸಾಗಿಸಬೇಕಾಯಿತು. ಅವಳ ಇಬ್ಬರೂ ಅಣ್ಣಂದಿರು ಹೊಟ್ಟೆಗಾಗಿ ಇದೇ ದಾವಲ್‌ಮಲೀಕನ ದರ್ಗಾ ನೆಚ್ಚಿಕೊಂಡು ಬದುಕಬೇಕಾಗಿತ್ತು. ಅವರಿವರ ಮನೆಯ ಪಾತ್ರೆ ತೊಳೆದು, ಅಡುಗೆ ಕೆಲಸ ಮಾಡಿಕೊಂಡ ಈಕೆ, ವಯಸ್ಸಿಗೆ ಬಂದಾಗ ಮದುವೆಯನ್ನುವದೊಂದಾಯಿತು. ಗಂಡನಮನೆ ಎಂದುಕೊಂಡು ಮಹಾರಾಷ್ಟ್ರದ ಬೋರಾಳಿಗೆ ಬಂದಳು. ಹಳ್ಳಿಯಲ್ಲಿ ದರ್ಜಿ ಕೆಲಸ ಮಾಡಿಕೊಂಡವನೊಬ್ಬನ ಸತಿಯಾಗಿ ಮೊದಲಿಗೆ ಹೆಣ್ಣು ಹೆತ್ತಳು. ಅನಿಯಮಿತ ಮಳೆ, ವರ್ಷದಲ್ಲಿ ಒಂದೆರಡು ಸಾರಿ ಎಲ್ಲೋ ಹೊಟ್ಟೆಗಾಗುವಷ್ಟು ಸಿಗುತ್ತಿದ್ದ ಕೆಲಸವನ್ನು ನಂಬಿ ಸಂಸಾರ ಬೆಳೆಸಲಾಗದು ಎಂದು ಗಂಡ ದುಡಿಯಲು ಬೊಂಬಾಯಿಗೆ ಹೊರಟ. ತಾ ಹೆತ್ತ ಹೆಣ್ಣುಮಗುವಿನೊಂದಿಗೆ ಜೈನಬಿಯೂ ಗಂಡನ ಜೊತೆಯಾದಳು. ನಗರಕ್ಕೆ ಮೊದಲ ಹೆಜ್ಜೆ ಇಟ್ಟಳು.
          ಬೊಂಬಾಯಿಗೆ ಹೋದ ಈಕೆಯ ಗಂಡನಿಗೆ ಕೆಲಸ ಸಿಕ್ಕಿತೋ ಇಲ್ಲವೊ, ಮತ್ತೆ ಮೂರು ಗಂಡು ಮಕ್ಕಳ ಸಂತಾನ ಮಾತ್ರ ಗಂಡ ಈಕೆಗೆ ನೀಡಿದ. ಕೆಲಸ ಒಗ್ಗದಕ್ಕೆ ಕುಡಿತ ಹಚ್ಚಿಕೊಂಡ. ಕಾಡುವ ಬಡತನದೊಂದಿಗೆ ಕಾದಾಡುವ ಬದಲು ಕುಡಿತವೇ ನೆಮ್ಮದಿ ಎಂದುಕೊಂಡ. ಹಳ್ಳಿಯಲ್ಲಿದ್ದರೆ ಹಿರಿಯರು ಈತನಿಗೆ ತಿಳುವಳಿಕೆ ಹೇಳಿ ಅವನನ್ನು ಸರಿಪಡಿಸಬಹುದಿತ್ತೇನೊ. ಆದರೆ ಇದು ಬೊಂಬಾಯಿ, ಒಂಟಿ ಸಂಸಾರ. ನಮ್ಮ ಜೈನಬಿ ಗಂಡನನ್ನು ಪ್ರಶ್ನಿಸುವ ಗುಂಡಿಗೆಯವಳಲ್ಲ. ಹೀಗಾಗಿ ಕೆಲವೇ ವರ್ಷಗಳಲ್ಲಿ ಅದ್ಯಾವುದೋ ಗೊತ್ತಾಗದ ರೋಗಕ್ಕೆ ತುತ್ತಾಗಿ ಗಂಡ ಸತ್ತು ಹೋದ. ಗೊತ್ತಿಲ್ಲದ ಊರಲ್ಲಿ ಒಂಟಿ ಹೆಣ್ಣು ಜೈನಬಿ ಗಂಡನ ಹೆಣಕ್ಕೆ ಅದ್ಯಾವ Uತಿ ಕಾಣಿಸಿದಳೋ ಬಸವಣ್ಣನೇ ಬಲ್ಲ.
ಬೊಂಬಾಯಿಯಲ್ಲಿ ಗಂಡ ಸತ್ತಾಗ ಆತನ ಶವದೊಂದಿಗೇ ಜೈನಬಿಯ ಬಾಳೂ ಬೀದಿ ಪಾಲಾಯಿತು. ಗಂಡನ ಮನೆ ಇಲ್ಲ. ನಾಲ್ಕು ಮಕ್ಕಳ ತಾಯಿಯಾಗಿದ್ದ ಆಕೆ ಈಗ ಮರಳಿ ತವರಿಗೆ ಬರಬೇಕೆಂದರೆ ಆಕೆಯ ತಾಯಿಯೂ ದೈವಾಧೀನ.

         
 ಅಷ್ಟರಲ್ಲಿಯೇ ಬೊಂಬಾಯಿಯ ಕೆಂಪು ದೀಪದ ಪ್ರಪಂಚ ಅವಳಿಗೆ ಸದಸ್ಯತ್ವ ಕೊಟ್ಟಿತ್ತು. ಮೈ ಮಾರುವ ಚೂರುಪಾರು ಉದ್ಯೋಗ ಶುರುವಾಗಿತ್ತು. ಅದ್ಯಾವ ಆಕರ್ಶಣೆಯೋ ಮೂರು ಮಕ್ಕಳನ್ನು ಯಥೀಮಖಾನೆಯಲ್ಲಿ ಹಾಕಿ ಅವಳು ದುಬೈಗೆ ಹೋದ ಸುದ್ದಿ ಕೇಳುತ್ತಲೇ ಆಕೆಯ ದುಷ್ಟ ಸಹೋದರನೊಬ್ಬ ಓಡಿ ಹೋಗಿ ಈಕೆಯ ಮೂರೂ ಮಕ್ಕಳನ್ನು ತಂದು ತನ್ನ ಬಳಿಯಲ್ಲಿ ಇರಿಸಿಕೊಂಡ. ಈ ಹುಡುಗರ ಅವ್ವ ಆಗ ಚಿನ್ನದ ಮೊಟ್ಟೆ ಇಡುವ ಕೋಳಿಯಾದಳು. ದೇಶ ವಿದೇಶಗಳ ಕೆಂಪು ದೀಪದ ರಸ್ತೆಗಳಲ್ಲಿ ತನ್ನ ಯೌವನವನ್ನು ಮಾರಿಕೊಂಡು ತಂದ ಹಣವನ್ನೆಲ್ಲ ತನ್ನ ಮಕ್ಕಳನ್ನು ಸಲುಹಲಿ ಎಂದು ತಮ್ಮನಿಗೇ ನೀಡಿದಳು. ದರ್ಗಾಗಳ ಮುಂದೆ ದೂಪಕ್ಕೆ ಉಸಿರು ಹಾಕುತ್ತಾ ಭಿಕ್ಷಾನ್ನದ ಮೇಲೆ ಬದುಕುತ್ತಿದ್ದ ತಮ್ಮಂದಿರು ಈಕೆಯ ಹಣದಿಂದ ಬೆಳಗಾಗುವುದರಲ್ಲಿಯೇ ನಮ್ಮೂರಲ್ಲಿ ಆಗರ್ಭ ಶ್ರೀಮಂತರಾದರು. ಹೋಟೆಲು, ರಾಜಕಾರಣ, ಶಿಕ್ಷಣ ಕ್ಷೇತ್ರಗಳನ್ನು ವ್ಯಾಪಿಸಿಕೊಂಡು ಸಭ್ಯರಾದರು. ಮುಸ್ಲಿಂ ಸಮಾಜದ ನೈತಿಕತೆಯ ಮಾನದಂಡಗಳಾದರು. ಎಲ್ಲಿಯೂ ಮಾರಾಟವಾಗದ ತಮ್ಮ ಹೆಣ್ಣು ಮಕ್ಕಳನ್ನು ಈಕೆಯ ಮೂರು ಗಂಡು ಮಕ್ಕಳಿಗೆ ಮದುವೆ ಮಾಡಿ, ಆದಾಯದ ಪಾಲುದಾರರಾದರು. ಇದೆಲ್ಲವು ಲೋಕ ವ್ಯವಹಾರದಲ್ಲಿ ಒಂದಿಷ್ಟು ಸರಿಯೇನೊ, ಆದರೆ ಲೋಕದಲ್ಲಿ ಮೈಮಾರಿದವಳು ಮರಳಿ ಬಂದರೆ ಇವರ ಸಭ್ಯತೆಯ ಪ್ರಪಂಚ ಸಮೀಪ ಕರೆದುಕೊಳ್ಳಬಹುದೆ? ಇದು ನನ್ನ ಪ್ರಶ್ನೆಯಾಗಿಯೇ ಇತ್ತು. ವರ್ಷಕ್ಕೊಮ್ಮೆ ಊರಿಗೆ ಬಂದು, ಉರುಸು ಮುಗಿಸಿಕೊಂಡು ಇವಳು ಮರಳಿ ಮುಂಬೈಗೆ ಹೊರಟರೆ ನಮ್ಮೂರಿನ ಪುಟ್ಟ ಬಸ್ಟಾಂಡಿನ ತುಂಬ ಎಷ್ಟೊಂದು ಜನರು, ಏನು ಕಥೆ. ನನ್ನ ಗೆಳೆಯ ಮಾತ್ರ ಅವ್ವ ಹೊರಟ ನೋವಿಗೆ ಜೋಲು ಮೋರಿ ಹಾಕಿಕೊಂಡು ಅಳುತ್ತ ನಿಂತಿರುತ್ತಿದ್ದ. ಬಂಧುಗಳಿಗೆಲ್ಲ ಅವಳು ಹೋಗಿ ಹೋಗಿ ಬರಬೇಕು ಯಾಕೆಂದರೆ ಹೋಗಿ ಬಂದಾಗಲೊಮ್ಮೆ ಅವಳು ಪೊರೆ ಕಳಚಿದ ಹಾವು. ಆಕೆಯ ಮೈ ಮಾರುಕಟ್ಟೆಯಲ್ಲಿ ಬಸಿದಷ್ಟೂ ಬಂಗಾರ ಆಕೆಯ ಬಂಧುಗಳಿಗೆ. ದುಬಾಯಿ, ಕತರ್, ಮಾಲ್ಡೀವ್ಸ್‌ಗಳಿಗೂ ಆಕೆ ಆಗ ಪಕ್ಕದ ಓಣಿಗೆ ಹೋಗಿ ಬಂದಷ್ಟು ಸಲೀಸಾಗಿ ಹೋಗಿ ಬರುತ್ತಿದ್ದಳು. ಅದರಲ್ಲಿ ಆಕೆಗೆ ನೆಮ್ಮದಿ, ಸುಖ ಎಷ್ಟಿತ್ತೋ ಆಕೆಗೇ ಗೊತ್ತು.
ಜೈನಬಿಗೆ ಸುಂದರ ದೇಹವಿತ್ತು, ವಿಶಾಲ ಹೃದಯವಿತ್ತು ಆದರೆ ಬುದ್ಧಿ ಮಾತ್ರ ಇರಲಿಲ್ಲ. ಹೀಗಂದುಕೊಂಡವರು ನಮ್ಮೂರ ಜನರು. ಯಾಕೆಂದರೆ ಅವಳ ಬಾಳೇ ಹಾಗಾಯಿತು. ಗಲ್ಫನ ಗಲ್ಲಿಯಿಚಿದ ಒಮ್ಮೆ ನಡುವಯಸ್ಸಿನಲ್ಲಿ ಗುಳೆ ಹೊರಟು ನಮ್ಮೂರಿಗೆ ಬಂದ ಈಕೆಗೆ ಆಕೆಯ ತಮ್ಮಂದಿರರ ಮನೆಯ ಬಾಗಿಲುಗಳು ಇದ್ದಕ್ಕಿದ್ದಂತೆ ಮುಚ್ಚಿಕೊಂಡವು. ಈಕೆ ಎಸೆದ ಭಿಕ್ಷೆಯ ಅನ್ನ ತಿಂದು ಬದುಕಿದ್ದ ಬಿಕಾರಿಗಳು ಈಗ ಪರಮ ಪಾವಿತ್ರ್ಯದ ಪೂಜಾರಿಗಳಾಗಿದ್ದರು. ಅದೇನಾಯಿತೋ ಒಂದು ಕಾಲಕ್ಕೆ ಈಕೆ ಮೆಟ್ಟಿ ಬಿಟ್ಟ ಚಪ್ಪಲಿಯನ್ನೂ ಕದಿಯಲು ಆಸಿಸುತ್ತಿದ್ದ ಆಶಿಕರು ಈಗ ಆಕೆಗೆ ಸಾಮಾಜಿಕತೆಯ ಸವಾಲುಗಳನ್ನೆಸೆದರು. ಇದು ಹೊಂದಲಾರದ ಬದುಕು ಎಂದು ಆಕೆ ತಿಳಿಯುವಲ್ಲಿ ಬಹಳ ಸಮಯವೇನು ತೆಗೆದುಕೊಳ್ಳಲಿಲ್ಲ. ಮತ್ತೆ ಮರಳಿ ದುಬಾಯಿಗೆ ಹೋಗುವಷ್ಟು ದೇಹದಲ್ಲಿ ಯೌವ್ವನದ ಕಸುವಿರಲಿಲ್ಲ.
                  ನನಗೆ ಗೊತ್ತಿರುವಂತೆ ನಾನು ಬಿ.ಎ ಮುಗಿಸಿದಾಗ ಇವಳು ಮತ್ತೆ ಪುಣೆಗೆ ಹೋದಳು. ಛಲದ ಹೆಣ್ಣು ಅಷ್ಟಿಷ್ಟು ತನ್ನಲ್ಲಿ ಉಳಿದ ಕಾಮಕ್ಕೆ ಬಣ್ಣ ಸವರಿ ಮುಸ್ಲಿಂ ಠೇಕೆದಾರನೊಬ್ಬನನ್ನು ತೋಳಿಗೆ ಹಾಕಿಕೊಂಡು ಕೊಂಡವಾದಲ್ಲಿ ಒಂದು ಮನೆ ಖರೀದಿಸಿದಳು. ಇವನನ್ನು ಗೆದ್ದೆ ಎಂದು ಈಕೆ ಬೀಗುವುದರೊಳಗಾಗಿ ಆತ ಈಕೆಯನ್ನೇ ತನ್ನ ಹಣದ ಬೇಟೆಯ ಆಮಿಸೆಯಾಗಿ ಪಣಕ್ಕೊಡ್ಡಿದ್ದ. ನೌಟಂಕಿಯಲ್ರ್ಲೆಂದು ಪುಟ್ಟ ಕೋಣೆಯನ್ನ ಮಾಡಿ ಮುಪ್ಪಿಗೆ ಹೊರಳುತ್ತಿದ್ದ ಈಕೆಯನ್ನು ಓರ್ವ ಘರವಾಲಿಯಾಗಿ ಕೂಡ್ರಿಸಿ ನಾಲ್ಕಾರು ಹುಡುಗಿಯರನ್ನ ಈಕೆಯ ಕೈ ಕೆಳಗೆ ಧಂದೆಗೆ ತೊಡಗಿಸಿದ. ರಾವುಫ್ ಎಂಬ ಎಳೆ ಹುಡುಗನನ್ನು ಸರಬರಾಜಿಗಿಟ್ಟು, ಜೈನಬಿಯನ್ನ ಮತ್ತೆ ಹಣ ಹುಟ್ಟಿಸುವ ಯಂತ್ರವಾಗಿಸಿದ. ತಮ್ಮಂದಿರಿಂದ ಮೋಸ ಹೋಗಿ ಒಳಗೊಳಗೇ ಕುದಿಯುತ್ತಿದ್ದ ಜೈನಬಿಗೆ ಜ್ಞಾನೋದಯವಾಗಿ ಇನ್ನು ಬರೀ ತನ್ನ ಮಕ್ಕಳಿಗಾಗಿಯೇ ಎನಾದರೂ ಮಾಡಬೇಕೆಂಬ ಹೂಟೆ ಹುಟ್ಟಿಕೊಂಡಿತ್ತು. ಆದರೆ ಆಕೆಯ ರೂಪ, ಯೌವ್ವನ, ಮೈಯಿಚಿದ ವಾಸನೆ ಎಲ್ಲ ಬತ್ತಿ ಹೋಗಿತ್ತು.
ಈ ಮಧ್ಯದಲ್ರ್ಲೆಂದ ವಿಚಿತ್ರ ಘಟನೆ. ನನ್ನ ಗೆಳೆಯ ಅಂದರೆ ಈಕೆಯ, ಮಗನ ಮದುವೆ, ತನ್ನ ತಮ್ಮನ ಮಗಳೊಂದಿಗೇ ಆಗಿತ್ತು. ಇಳಿ ವಯದಲ್ಲಿ ತನ್ನ ಮಗ ಮೊಮ್ಮಗನ್ನು ಕಂಡು ಮುದ್ದಾಡಲು ಹೋಗಿದ್ದ ಈ ಜೈನಬಿಗೆ ಸೊಸೆಯಿಂದ, ಸೊಸೆಯ ಬಂಧುಗಳಿಂದ ಭಯಾನಕ ಮುಖಭಂಗವಾಗಿತ್ತು. ಸೊಸೆಯ ತಾಯಿಯಂತೂ ಜೈನಬಿ ಗಲ್ಲಿ ಗಲ್ಲಿಗಳಲ್ಲಿ ತೊಡೆ ತೆರೆದ ಕತೆಯನ್ನು ಊರೆಲ್ಲವೂ ಕೇಳಿ ಜೊಲ್ಲು ಸುರಿಸುವಂತೆ ಮಾತನಾಡಿದ್ದಳು. ಅಪಮಾನವಾದರೇನು ಅದು ಒಂದು ಮಾನವೇ ತಾನೆ ಎಂದು ಈ ಹೊಸ ಪಣವನ್ನು ಒಪ್ಪಿಕೊಂಡು ಪುಣೆಗೆ ಮರಳಿ ಬಂದಿದ್ದಳು ಜೈನಬಿ. ಆಕೆಯ ಬಸಿದ ದೇಹಕ್ಕೀಗ ಮಾತೃತ್ವದ ಹಸಿವು ಹುಟ್ಟಿತ್ತು. ಮೊಮ್ಮಗನ ನೆನಪು ಕಾಡುತ್ತಿತ್ತು.

                  ಅವು ನನ್ನ ಸಂಶೋಧನೆಯ ದಿನಗಳು. ನನ್ನ ಓದಿನ ವಸ್ತುವಾಗಿದ್ದ ಅಬ್ಬಾಸರನ್ನು, ಅವರ ಸಾಹಿತ್ಯವನ್ನು ರೂಪಿಸಿದ ಊರುಗಳಾದ ಪುಣೆ, ಬೊಂಬಾಯಿ, ದೆಹಲಿಗಳನ್ನು ಸುತ್ತುವುದು ನನಗೆ ಅವಶ್ಯಕ ಎನ್ನಿಸಿತು. ಪುಣೆಗೆ ಬಂದಾಗ ನನ್ನೊಂದಿಗೆ ಆಕೆಯ ಮಗನೂ ಇದ್ದ. ನಮ್ಮಿಬ್ಬರ ಸ್ನೇಹ ಈ ಭೇಟ್ಟಿ ಹೊಸ ಜೀವ ಸಂಚಾರ ತಂದಿತ್ತು ಆಕೆಯಲ್ಲಿ. ನಾಲ್ಕು ದಿನ ಧಂದೆಯನ್ನೇ ನಿಲ್ಲಿಸಿದ್ದಳು. ಪುಟ್ಟ ರಾವುಫ್ ಆಕೆಯೊಂದಿಗಿದ್ದ. ತುಂಬ ಮುದ್ದಾದ ಕಳೆಯುಳ್ಳ ಕೂಸು. ಜೈನಬಿ ಏನು ಮಾಡುತ್ತಾಳೆ ಎಂದು ಪ್ರಶ್ನಿಸುವ ವಯಸ್ಸೂ ಆತನದಲ್ಲ. ಆಕಳಿನ ಸುತ್ತ ಕರು ಸುತ್ತುವಂತೆ ಅವಳ ಲೋಕದ ಸುತ್ತುಹೊಡೆದುಕೊಂಡಿರುತ್ತಿದ್ದ. ನಾವು ಹೋದೆವು, ಜೈನಬಿ ಆತನಿಗೂ ರಜೆ ಘೋಸಿಷಿದಳು. ಬಹುತೇಕ ಪುಣೆಯ ಪಕ್ಕದ ಯಾವುದೋ ಹಳ್ಳಿಯ ಮಗುವಾಗಿರಬಹುದು ಅದು. ಅಲ್ಲಿಯ ಆ ಮುಂಜಾನೆಗಳು ನನಗಿನ್ನೂ ಚನ್ನಾಗಿ ನೆನಪಿವೆ. ನನ್ನವ್ವನ ವಯಸ್ಸಿನ ಜೈನಬಿ, ಪಂಜಾಬಿ ಶೈಲಿಯಲ್ಲಿ ದೊಡ್ಡ ದೊಡ್ಡ ಗ್ಲಾಸುಗಳಲ್ಲಿ ನಮಗೆ ಚಹಾ ಕೊಟ್ಟು, ಕಣ್ಣಲ್ಲಿ ಕಣ್ಣಿಟ್ಟು ಮಾತಿಗಾಗಿ ಮುಂದೇ ಕುಳಿತುಕೊಳ್ಳುತ್ತಿದ್ದಳು. ಎಲ್ಲ ಉತ್ತಮವಾದುದ್ದನ್ನೇ, ಶ್ರೀಮಂತವಾದುದ್ದನ್ನೇ ಅನಿಭವಿಸಿದ್ದ ಆಕೆಗೆ ಆಹಾರ, ಬಟ್ಟೆ, ಕುಡಿತಗಳಲ್ಲಿ ಅಶಿಸ್ತು ಯಾವ ಕಾಲಕ್ಕೂ ಆಗಿ ಬರುತ್ತಿರಲಿಲ್ಲ. ತನ್ನ ಮಗ ಸೊಗಸಾಗಿ ಬದುಕುವುದನ್ನು ಆಶಿಸಿದ್ದ ಆಕೆಗೆ ಸೈತಾನ ನಂತಹ ಸೊಸೆ ಸಿಕ್ಕಳಲ್ಲ ಎಚಿದು ನಿತ್ಯ ನೂರು ಸಾರಿ ಶಾಪ ಹಾಕುತ್ತಿದ್ದಳು. ಮಕ್ಕಳಿಗೆ ಚಹಾ ಕುಡಿಸುವುದೂ ತುಂಬ ಮುತುವರ್ಜೆಯ ಕೆಲಸ ಅವಳಿಗೆ. ಗಲ್ಫಿನ ಉತ್ತಮ ಒಂಟೆ ಹಾಲಿನ ಚಹಾ ಕುಡಿದಿದ್ದ ಅವಳಿಗೆ ಪುಣಾದ ಚಹಾ ಕೂಡ ನಗಣ್ಯ ಎನಿಸಿತ್ತು ಎಂದರೆ ನೀವು ನಂಬುತ್ತೀರಾ? ನಾವು ಸ್ನಾನ ಮಾಡುವುದರೊಳಗಾಗಿಯೇ ತಿಂಡಿ ಸಿದ್ದವಾಗಿರುತ್ತಿತ್ತು. ತಟ್ಟೆಯಲ್ಲಲ್ಲ ಥೈಲಿಯಲ್ಲಿ. ‘ಥೈಲಿ ಭರ ಖಾವೊ’ ಇದು ಅವಳ ಘೋಷ ವಾಖ್ಯ. ಆಳೆತ್ತರದ ಗಂಡಸರುಗಳನ್ನು ನೋಡಿದ್ದ, ಅವರು ನಿಂತು ನೆಗೆದಾಡಿದರು ಕಿಮಕ್ ಎನ್ನದ ಎದೆಗಳಿಗೆ ಕೈಯಾಡಿಸಿದ್ದ, ತೊಡೆಗೆ ತೊಡೆ ಹೊಸೆದು ಉಸಿರಲ್ಲೂ ಸೋಲದ ಕಾಮ ಉಂಡಿದ್ದ, ಉಣಿಸಿದ್ದ ಅವಳಿಗೆ ನಾವಿಬ್ಬರು ಸಶಕ್ತ ಗಂಡುಮಕ್ಕಳಂತೆ ಕಾಣಿಸಿದ್ದೇವೆ? ಇದು ಈಗಲೂ ಪ್ರಶ್ನೆ ನನಗೆ. ನಾಗರೀಕತೆಯ ಸುಳ್ಳಿನ ಪರದೆಯ ಹೊರಬಂದು ಪ್ರಶ್ನಿಸಿಕೊಳ್ಳುವುದಾದರೆ ಅವಳು ಬಿಡಿಸಲಾಗದ ಒಗಟು ನಿಮಗೆ.
             ಮಗನನ್ನು ಉದ್ದೇಶಿಸಿ ಆಕೆಯದು ನನ್ನ ಮುಂದೆ ತಕರಾರು. ‘ಜೋ ಪೇಟಭರ್ ಖಾನಾ ನ ಖಾಯೆಗಾ ಓ ಬಚ್ಚೇ ಕ್ಯಾ ಪೈದಾ ಕರೇಗಾ?’ ಎಂದು ಕೇಳುತ್ತ, ಸೌಧಿಯಲ್ಲಿ ಅಮೀರರು ಉಣುವ, ಉಡುವ ಹೆಂಗಸರುಗಳನ್ನು ಸುಖಿಸುವ, ಹದಿಸುವ ಛಂದದ ಕಥೆ ಹೇಳುತ್ತಿದ್ದಳವಳು. ಅವಳೊಳಗೇ ಸಂಕಟವಿತ್ತು. ಅವಳು ಮಹಾ ಮೋಹದ ತಾಯಿ, ಗಂಡು ಮಕ್ಕಳು ಹೆಂಗಸರ ಮೈಯೇರಿ ಗೆಲ್ಲುವಂತಿರಬೇಕೆನ್ನುವ ಹಂಬಲವಿತ್ತು. ಹೆಣ್ಣಿನ ಹಸಿವು ಅರಿತವಳವಳು. ಎಂಥ ಗಂಡಸರ ತೋಳಿನಿಂದಲೂ ಕೊಸರಿಕೊಂಡು, ಅದ್ಭುತವಾಗಿ ತಿಂದು, ಮೈ ಮೊಲೆಗಳಲ್ಲಿ ನೋಡಿದವರಲ್ಲಿ ಆಸೆಯ ಕಿಚ್ಚು ಹಚ್ಚುವ ಶಕ್ತಿ ಬಹುಕಾಲ ಉಳಿಸಿಕೊಂಡವಳು. ಆ ನಡುವಯಸ್ಸಿನಲ್ಲೂ ಸ್ನಿಗ್ಧವಾದ ಅವಳ ಚರ್ಮಕ್ಕೆ ಗೆರೆ ಮೂಡಿರಲಿಲ್ಲ. ನಮಗಂತೂ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಅವಳ ನಿಗಾಹದಲ್ಲಿ ಮಾಡಿಗೆದ್ದರೆ, ಅವಳು ಅದಕ್ಕೆ ಖುಷಿಯಾದರೆ ಪರಮವೀರ ಚಕ್ರ ಪಡೆದ ಅನುಭವ. ಯಾಕೆಂದರೆ ಅವಳು ಸುಳ್ಳನ್ನು ಎಂದೂ ಆರಾಧಿಸಿದವಳಲ್ಲ.
            ಹೆಣ್ಣಿನೊಳಗಿನ ಕಿಚ್ಚು, ಸಂಕಟ, ಸಿಟ್ಟು, ಹಗೆ ಮತ್ತು ಶಾಪದ ದರ್ಶನ ಕೊಟ್ಟವಳವಳು. ಆ ಚಿಕ್ಕ ಕೋಣೆಯಲ್ಲಿ ನನ್ನ ಗೆಳೆಯ ನಾನು ಹೀಗೆ ನಾವಿಬ್ಬರೂ ಪಲ್ಲಂಗದ ಮೇಲೆ ಮಲಗಿದರೆ ಹಣೆ ಬರಹ ಬರೆಯುವ ಷಟಕವ್ವನ ಸೊಕ್ಕಿನಿಂದ ಅಲ್ಲೇ ಕೆಳಗೆ ಮಲಗಿರುತ್ತಿದ್ದಳವಳು. ರಾತ್ರಿಯಲ್ಲಾ ಹೇಳುತ್ತಿದ್ದಳು ‘ಬೇಟಾ ಮೈ ಬಡೇ ಬಡೇ ದಿವಾನೋಕೊ ದೇಖಿ ಹುಂ. ಜಿನ್ಹೋನೆ ಮೇರಿ ಹರಾಮಿ ಖಾಯಿ ಹೈ ಉನಕೊ ಮೈ ತಭಾಹ ಕರದೂಂಗಾ’. ಅವಳ ಈ ಸಿಟ್ಟಿಗೆ ಬಲವಾದ ಸಕಾರಣವಿತ್ತು. ಸುಮ್ಮನೆ ನಂಬಿ ಸುಟ್ಟುಕೊಂಡಿದ್ದಳವಳು. ಆ ರಾತ್ರಿಗಳಲ್ಲಿ ಖಂಡಿತ ಅವಳು ಮಾತಾಡುತ್ತಿರಲಿಲ್ಲ ಸಂಕಟ, ಸಂಕಟ ಮಾತನಾಡುತ್ತಿತ್ತು. ಬಿಕನಾಸಿಯಾಗಿದ್ದ, ಅವಮಾನಕ್ಕೀಡಾಗಿದ್ದ ಆಕೆಯ ಜೀವ ಮಾತಾಡುತ್ತಿತ್ತು.
             
 ಮರುದಿನ ನನಗೆ ಪುಣೆಯ ರೆಡ್‌ಲೈಟ್ ಏರಿಯಾಕ್ಕೇ ಹೋಗಬೇಕಾಗಿತ್ತು. ಅದು ನನ್ನ ಸಂಶೋಧನೆಯ ಅನಿವಾರ್ಯವೂ ಕೂಡ. ನಾನು ಮುಕ್ತವಾಗಿಯೇ ಹೇಳಿದೆ. ಸೂಳೆಯರನ್ನು ಗಂಭೀರವಾಗಿ, ಅವರ ಬದುಕಿನ ಯಥಾಸ್ಥಿತಿಯೊಂದಿಗೆ ಅಭ್ಯಸಿಸುವ, ದಾಖಲಿಸುವ ನನ್ನ ಓದಿನ ಅನಿವಾರ್ಯತೆ, ನನ್ನ ಕುತೂಹಲ, ನನ್ನ ಹಿಂದಿನ ಸಭ್ಯರ ಕೆಟ್ಟ ಆಸಕ್ತಿ ಎಲ್ಲವನ್ನು ನಾನವಳಿಗೆ ಪ್ರಾಮಾಣಿಕವಾಗಿಯೇ ವಿವರಿಸಿದೆ. ನಗುತ್ತ ಅವಳು ಹೇಳಿದ್ದು ಅಷ್ಟೆ. ‘ದೋ ಚಾರ ಚಾಹಿಯೆ ತೋ ಇಧರ್ ಹೀ ಮಿಲ್‌ತೆ ಥೇ. ಅಗರ್ ಲೌಂಡಿಯೊಂಕಾ ಮಾಹೋಲ್ ಹೀ ಹೋನಾತೋ ಉದರ್ ಜಾವೋ. ಬೇಟೆ, ಮಗರ್ ಕುಚ್ ನಹೀ ಕರನಾ, ಉದರ್ ಕೀ ಮಾಲ್ ಬಹುತ್ ಘಟಿಯಾ ಹೋತಿ ಹೈ.’ ನನಗೆ ಆಕೆಯ ಕಾಳಜಿ ಅರ್ಥವಾಗಿತ್ತು. ನನ್ನೆಲ ವಿವರಣೆಯ ನಂತರವೂ ನಾನೊಂದು ಗಂಡು ಎಂದು ಚನ್ನಾಗಿ ಓದಿದ್ದಳವಳು ಆದರೆ ಪ್ಯಾಂಟು ಕೆಳಗಿಳಿಸದೆ ಆಕೆ ಸೂಚಿಸಿದ ಎಲ್ಲ ಸ್ಥಳಗಳನ್ನು ಸುತ್ತಾಡಿ ಬಂದೆ. ಈ ಪ್ರಪಂಚ ಒಂದು ಅದ್ಭುತ ಅನುಭವಗಳ ವಿಶ್ವವಿದ್ಯಾಲಯ ಎಂದು ಒಪ್ಪುವದಾದರೆ ನಾವು ಯಾವುದರಿಂದಲೂ ದೂರ ಸರಿಯುವಂತಿಲ್ಲ. ಯಾವುದಕ್ಕೂ ಮುಖ ಸಿಂಡರಿಸುವಂತಿಲ್ಲ.
          ಅದೇನಾಯಿತೊ ಗೊತ್ತಿಲ್ಲ ನಾನು ಸಂಶೋಧನೆ ಮುಗಿಸುವದರೊಳಗಾಗಿ ಇದ್ದಕ್ಕಿದ್ದಂತೆ ಅವಳು ಪೂಣಾ ಬಿಡುವ ವಿಚಾರ ಮಾಡಿದಳು. ಠೇಕೆದಾರನಿಂದ ಮುಕ್ತಳಾಗಿ, ಧಿಡೀರನೆ ಕೋಣೆಗೆ ಕೀಲಿ ಜಡಿದು, ಹುಡುಗಿಯರಿಗೆ ವಿದಾಯ ಹೇಳಿ, ಊರಿಗೆ ಬಂದು ಮಗನ ಮನೆ ಹೊಕ್ಕಳು. ಮೈ ಬಾಗಿ ಅಜ್ಜಿಯಾಗಿದ್ದಳು ಆಕೆ. ಮೊಮ್ಮಗನಿಗಾಗಿ ಹಲಬುತ್ತಿದ್ದಳು. ಅತ್ಯಂತ ಅಸಹ್ಯಳಾಗಿದ್ದ ಸೊಸೆಯಿಂದ ತನ್ನ ಮಗನನ್ನು ಮುಕ್ತಗೊಳಿಸಿ ಇನ್ನೊಂದು ಮದುವೆ ಮಾಡುವ ಹವಣಿಕೆಯಲ್ಲಿದ್ದಳು. ಕೆಟ್ಟ ಹಟಕ್ಕೆ ಬಿದ್ದಿದ್ದಳು. ಮಗನ ಮನೆಯೆನ್ನುವುದು ನಿತ್ಯ ಕುರುಕ್ಷೇತ್ರವಾಯಿತು. ಮಗನನ್ನು ಭಯಾನಕವಾಗಿ ಪ್ರೀತಿಸುತ್ತಿದ್ದ ಅವಳಿಗೆ ತನಗಾದ ಅಪಮಾನಗಳಿಗಿಂತಲೂ ಅವನ ಭವಿಷ್ಯದ ಪ್ರಶ್ನೆ ದೊಡ್ಡದಾಗಿತ್ತು. ಆದರೆ ಇಷ್ಟರಲ್ಲಿ ಆಕೆಯ ಆರೋಗ್ಯ ಕೈಕೊಡಲಾರಂಭಿಸಿತ್ತು. ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆ ಇದೆ ಎಂದು ವೈದ್ಯರು ಹೇಳಿದರು. ಅದನ್ನು ಸರಿ ಪಡಿಸಲು ಫುಟ್‌ಪರ್ತೆಯ ಆಸ್ಪತ್ರೆಗೆ ದಾಖಲಾದಳು. ಮತ್ತೂ ಹೊಸ ಜೀವನದೊಂದಿಗೆ ಬರುವ ಭರವಸೆ ಅವಳಿಗೆ. ಮಗನನ್ನು ಸ್ವತಂತ್ರ ಗಂಡಸನ್ನಾಗಿ ನೋಡುವ ಮಹಾನ್ ಹಟ. ಆದರೆ ಎಲ್ಲವೂ ಅವಳು ಅಂದುಕೊಂಡಂತಾಗಲಿಲ್ಲವಲ್ಲ. ಆಕೆ ಒಂದೆಡೆ, ಆಕೆಯ ಕನಸು ಇನ್ನೊಂದೆಡೆ.

            ಅವ್ವ ಊರಿಗೆ ಬಂದರೆ ಮತ್ತೆ ಅದೇ ಕಿತ್ತಾಟ. ಸಿಕ್ಕ ಸಿಕ್ಕ ಗಂಡಸರ ತೊಡೆಗಳ ಮಧ್ಯ ಸಿಕ್ಕು ಸವೆದು ಹೋಗಿದ್ದ ಆಕೆಗೆ ಒಂದಿಷ್ಟೂ ನೆಮ್ಮದಿಯ ದಿನಗಳನ್ನು ನೀಡಬೆಕೆನ್ನುವುದು ನನ್ನ ಗೆಳೆಯನ ಆಸೆ. ನನ್ನದೂ ಅಷ್ಟೆ, ಈ ಮೋಹದ ತಾಯಿಯನ್ನು ನಾನು ಬಹಳ ಹಚ್ಚಿಕೊಂಡಿದ್ದೆ. ಅವಳ ಬದುಕಿನ ಹೋರಾಟವನ್ನು ಹೊದ್ದುಕೊಂಡಿದ್ದೆ. ಹೀಗಾಗಿ ಹೃದಯದ ಚಿಕಿತ್ಸೆಯ ನಂತರ ಕೆಲಕಾಲ ಅವಳನ್ನು ಕರೆದುಕೊಂಡು ಹೋಗಿ ಬೆಳಗಾವಿಯ ನನ್ನ ತಂಗಿಯ ಮನೆಯಲ್ಲಿ ಠಿಕಾಣಿ ಹೂಡಿಸಿದೆ. ತುಂಬಿದ ಮನೆ. ಶುಗರ್‌ನಿಂದ ಕಾಲು ಕಳೆದುಕೊಂಡು ನೆಲ ಹಿಡಿದಿದ್ದ ನನ್ನಜ್ಜನಿಗೆ, ವಿಶ್ರಾಂತಿಗೆಂದು ಬಂದ ಈಕೆ ವಿಪರೀತ ಸೇವೆ ಮಾಡಿದಳು. ನನ್ನಜ್ಜಿಗೆ ಅಪರೂಪದ ಮಗಳಾದಳು. ಪೂರ್ವಾಪರ ಲೆಕ್ಕಿಸದ ನನ್ನ ತಂಗಿಗೆ ತಾಯಿಯಾದಳು. ದಿನವಿಡೀ ಒಂದಿಲ್ಲಾ ಒಂದು ಕೆಲಸದಲ್ಲಿ ತನ್ನನ್ನೇ ತಾ ಮರೆಯಲು ಯತ್ನಿಸಿದಳು. ನೆಮ್ಮದಿ ಕಂಡಳು. ಆದರೆ ಅದೆಲ್ಲವೂ ಯಾವುದರಿಂದಲೊ ಓಡಿಹೋಗುವ ನಿತ್ಯದ ಹೋರಾಟವಾಗಿತ್ತು. ಮನಸ್ಸು ಮಗನೊಂದಿಗೇ ಇತ್ತು. ಸೇಡಿತ್ತು ಆಕೆಯಲ್ಲಿ.
           ನನಗೆ ಧಾರವಾಡಕ್ಕೆ ಹೋಗಬೇಕಾಯಿತು. ಆಕೆ ಬೆಳಗಾವಿಯಿಂದ ಹೋಗಿ ಚಡಚಣ ಸೇರಿಕೊಂಡಳು. ಒಂದಿಷ್ಟು ಕಾಲ ಯಾವ ಸುದ್ದಿಯೂ ಇರಲಿಲ್ಲ. ನನ್ನ ಗೆಳೆಯನು ಅಷ್ಟೆ ಜೈನಬಿಯ ಬಗ್ಗೆ ಒಂದು ಮಾತನ್ನೂ ಬರೆಯಲಿಲ್ಲ. ಅದೊಂದು ಸಾಯಂಕಾಲ, ಏಳು ಗಂಟೆಯ ಸಮಯ, ಊರಿನಿಂದ ಫೋನು ಬಂತು. ವಿಷಯ ಇಷ್ಟೆ, ಅವ್ವ ಸತ್ತಿದ್ದಾಳೆ ಹೊರಟು ಬಾ. ನನಗೆ ಕಾರಣ ಕೇಳುವ ಹಕ್ಕಿತ್ತು. ಆತ ಅಷ್ಟೇ ನಿರಾಳವಾಗಿ ಹೇಳಿದ ಮನೆಯಲ್ಲಿ ಜಗಳವಾಯಿತು. ತನ್ನ ಹೆಂಡತಿ ಅವ್ವನ ಗಂಟು-ಮೂಟೆಗಳನ್ನೆಸೆದು ರಸ್ತೆಗೆಸೆದಳು. ಆಕೆ ಮಾಡಿಕೊಂಡು ಬಂದ ಹಿಂದಿನ ಕಸುಬನ್ನು ಕುರಿತು ಕೀಳಾಗಿ ಜರಿದಳು. ನಾನು ಪ್ರೀತಿಸಿದೆ, ಆದರೆ ನನ್ನ ಹೆಂಡತಿ ಅವ್ವನನ್ನು ಧಿಕ್ಕರಿಸಿದಳು. ಜಗಳದ ಆ ರಾತ್ರಿ ಎದೆಗೆ ಕೈ ಹಚ್ಚಿಕೊಂಡು ಮಲಗಿದವಳು, ಮರುದಿನದ ಹಗಲು ನೋಡಲೇ ಇಲ್ಲ. ಇಷ್ಟೆ.
             ನಾನು ನನ್ನ ಊರು ತಲಪುವುದರೊಳಗೆ ನಸುಕಿನ ಸಮಯ. ಆಕೆ ಆಗಲೇ ತಣ್ಣಗಾಗಿದ್ದಳು. ಹೆಣವಾಗಿದ್ದಳು. ಒಂದು
ಕ್ಷಣ ದಿಟ್ಟಿಸಿ ನೋಡಿದಾಗ ನನ್ನನ್ನು ಕಾಡಿದ್ದು ಅದೇ ಆಕೆಯ ಛಲ ಮತ್ತು ಕೆತ್ತಿ ತೆಗೆದಂತ ರೂಪ. ಮುಟ್ಟಬೇಕೆನಿಸುವ ದೇಹ, ಸಾಗರ ಕೊಚ್ಚೆಗಳನ್ನು ದಕ್ಕಿಸಿಕೊಂಡು ಹರಿದ ಒಂದು ನದಿ, ಎಲ್ಲ ನುಂಗಿಯು ನದಿಯ ನೀರು ಪವಿತ್ರವಾಗುವದಾದರೆ ಜೈನಬಿಯ ದೇಹವೂ ಯಾಕೆ ಪವಿತ್ರವಾಗಬಾರದು? ಸಮೀಪ ಹೋಗಿ ಹಣೆ ಮುಟ್ಟಿ, ತಣ್ಣಗಿರು ತಾಯಿ ಇನ್ನು ನಿನ್ನ ಜೀವಕ್ಕೆ ಯಾವ ಜಂಜಾಡವೂ ಇಲ್ಲ ಎಂದು ಹೇಳಿದೆನಷ್ಟೆ. ಮಧ್ಯಾಹ್ನ ಶವದ ಯಾತ್ರೆ ಶುರುವಾಯಿತು. ಜನ ಸೇರಿತು.
ಸುಡು ಬಿಸಿಲಿನಲಿ ಊರು ಸುತ್ತು ಹೊಡೆದು ಅವಳಾಡಿ ಬೆಳೆದ ಮನಸ್ಸುಗಳಿಗೆ, ಮನೆಗಳಿಗೆ ಅವಳ ದೇಹಕ್ಕಾಗಿ ಹಸಿದ ಕಣ್ಣುಗಳಿಗೆ, ಅವಳೊಳಗೇ ಮಿಂದೆದ್ದ ದೇಹಗಳಿಗೆ ಒಂದು ಕೊನೆಯ ವಿದಾಯ ಹೇಳಿ ಹೊರಟಂತಿದ್ದ ಅವಳ ಶವದ ಮೆರವಣಿಗೆಯಲ್ಲಿ ಅವಳ ಆತ್ಮದ ಕನವರಿಕೆ ನನ್ನಲ್ಲಿ ಹಾಡಾಗುತ್ತಿತ್ತು-

"ಬಿಸಿಲ ದಾರಿಯ ಬದಿಗೆ
ವಿಷದ ಬಿದಿಗೆಯನಿಟ್ಟು
 ತುಸು ದೂರು ಸಿದಿಗೆಗೆ
ಹೆಗಲ ಕೊಟ್ಟವರ ನೆನಪಿದೆ ನನಗೆ
ಮಾತು ಮಾತಿಗೂ ಇರಿದು
ಕಣ್ಣಿಂದ ಕೆನ್ನಾಲಿಗೆ ಚಾಚಿ
ಮೊಸಳೆ ಕಣ್ಣೀರಿನಿಂದ ಬಾಚಿ
ತಬ್ಬಿದ ಪ್ರಿಯ ಬಂಧುವೆ
ನಿನ್ನ ನೆನಪಿದೆ ನನಗೆ
ಹಾಸಿಗೆಯ ಬುಡದಲ್ಲಿ
ಮೆಣಸು ಮುಳ್ಳನು ಸುರಿದು
ಕನಸಿನಾ ಜೋಗುಳವ ಕಿವಿಗುಣಿಸಿ
ಚಿವುಟಿದ ಕರುಣಾಳು ಕೈ
ನೆನಪಿದೆ ನನಗೆ
ಹಸಿದ ಬಾಯಿಯ ಮುಂದೆ
ವಿಷಮಗೊಳಿಸಿದ ಅನ್ನ
ಹಳಸು ಹಾಲಾಹಲವಿಟ್ಟು
ನಸುನಗುತ ತುತ್ತಿಟ್ಟ ಪ್ರೀತಿಯ
ನೆನಪಿದೆ ನನಗೆ
ನನ್ನ ಗುಡಿಸಲಿನಲ್ಲಿ
ಬುಡ್ಡಿ ದೀಪವ ನಂದಿಸಿ
ಬೆತ್ತಲಾಗಿಸುತ ದೇಹ
ಏರಿಳಿದ ಗೆಳೆಯರ ಬಸಿರ ವಾಸನೆ
ನೆನಪಿದೆ ನನಗೆ

ಕೊನೆಯ ಉಸಿರಿಗೂ ಮುನ್ನ
ಮಸಣದಲಿ ಮೈದುಂಬಿ
ಖುಷಿಯಿಂದ ಕುಣಿತುಂಬಿ
ಕುಣಿದಾಡಿದ ಕಡು ಸ್ನೇಹಿಯೆ
ನಿನ್ನ ನೆನಪಿದೆ ನನಗೆ
ಚಟ್ಟಕ್ಕೆ ಕಟ್ಟುವ
ಕಾಳಲ್ಲೂ ಕಲ್ಲ ಬೆರೆಸಿ
ಮಸಣದ ಬಾಳಿನಲೂ ಹಾಳನ್ನೇ ಹರಿಸಿ
ಬೀಳ್ಕೊಟ್ಟ ಕೈಗಳೇ
ನಿಮ್ಮ ನೆನಪಿದೆ ನನಗೆ
ನಾನು ಹೆಣವಾದರೂ
ಎಲ್ಲ ನೆನಪಿದೆ ನನಗೆ ಎಂದರೂ
ಗೌರವಾನ್ವಿತರೆ ಮಣ್ಣಿಗೂ ಮುಂಚೆ
ನೀವು ಇಳಿಸುವುದಿಲ್ಲ ನನ್ನ ಸಿದಿಗೆ
ಒಂದು ತುತ್ತು ಅನ್ನಕ್ಕೆ
ನನ್ನ ಬಾಳು ಹರಿಸಿದ ನಾಯಿಯ
ಹರಕೆ ಕೈಗೂಡಿ, ಸತ್ತ ಈ ಮರಕೆ
ಮತ್ತೆ ಜೀವ ಮೂಡಿದರೆ?
 ಎಂಬ ಭಯ ನಿಮಗೆ
ಎಲ್ಲ ನೆನಪಿದೆ ನನಗೆ
ಮತ್ತೆ ಮಳೆ ಬಾರದೆ
ಮತ್ತೆ ಉರಿ ಆರದೆ
ಅಗ್ನಿ ಪಥದಲಿ
ನನ್ನ ಮೂಳೆಗಳ ಅಳಿಸಿ
ಕಳುಹಿಸುವ ನಿಮ್ಮ ಪ್ರೇಮ
ನೆನಪಿದೆ ನನಗೆ."
                      ಖಬ್ರಸ್ಥಾನಕ್ಕೆ ಅವಳ ಶರೀರ ಬಂದು ತಲುಪಿದಾಗ ನಮಗೆಲ್ಲರಿಗೂ ಹುಣಸೆ ಮರಗಳ ಥಣ್ಣನೆಯ ನೆರಳಿತ್ತು. ಎಲ್ಲ ಸೇರಿದ್ದರು ಅಲ್ಲಿ ಸಭ್ಯರು, ಜರಿದವರು, ಅವಳಪ್ಪಿ ಮುದ್ದಾಡಿದವರು, ರಕ್ತ ಹೀರಿದವರು, ಕೈ ಕೊಟ್ಟವರು, ಕೈ ಹಿಡಿದವರು, ಕಾಲು ನೆಕ್ಕಿದವರು, ಜೊತೆಗೆ ಎಲ್ಲರ ಕೈಯಲ್ಲೂ ಹಿಡಿ ಮಣ್ಣಿತ್ತು. ಅವಳ ದೇಹ ತಣ್ಣಗೆ ಗೋರಿಯೊಳಗಿತ್ತು. ಬದುಕಿನುದ್ದಕ್ಕೂ ಬಾರದ ಮೌಲ್ವಿಯೊಬ್ಬ, ಎಂದೂ ಮಜಾರು, ಮಸೀದೆಗೆ ಬಂದು ಭಿಕ್ಷೆ ಕೇಳದ ಆಕೆಯ ಹೆಣದ ಮುಂದೆ ಖುರಾನದ ಸಾಲುಗಳನ್ನು ಒಟಗುಟ್ಟುತ್ತಿದ್ದ. ಎಲ್ಲರೂ ಮುಂದೆ ಬಂದು ತಮ್ಮ ತಮ್ಮ ಪಾಲಿನ ಮಣ್ಣೆರೆದು ಹೊರಡಲಣಿಯಾದರು. ನನ್ನ ಹಿಡಿ ಮಣ್ಣು ಮಾತ್ರ ಆಕೆಯ ಮೈ ಏರಿಸಲಿಲ್ಲ. ನಾನು ಮಣ್ಣೆರೆಯಬೇಕಾದ ಜೀವ ಅದು ಎಂದು ನನಗನ್ನಿಸಲೇ ಇಲ್ಲ. ಯಾವಳ ಮೂಲಕ ಇಡೀ ಪ್ರಪಂಚದ ಜ್ಞಾನವನ್ನು, ಹೆಣ್ಣಿನ ಸೂಕ್ಷ್ಮತೆಯನ್ನು, ಗಂಡಿನ ಹುಂಬತನವನ್ನು ಅರ್ಥೈಸಿಕೊಂಡಿದ್ದೆನೊ ಅಂತ ಅನುಭವದ ಪುಸ್ತಕವೇ ಆದ ಅವಳಿಗೆ ಹೇಗೆ ಮಣ್ಣು ಹಾಕುವುದು? ಒಂದು ಕ್ಷಣ ಎಲ್ಲ ಹೋದ ಮೇಲೆ, ಗೆಳೆಯನೊಂದಿಗೆ ನಿಂತು ಹುಣಸೆ ಮರಗಳೆಡೆಗೆ ನೋಡಿದೆ. ಬೋರಾಳು ಬಸವಣ್ಣನ ನೆನಪಾದ. ಈ ಹುಣಸೆಗೂ ಮಣ್ಣೊಳಗಿನ ಆ ಜೈನಬಿಗೂ ಅದೇನು ಋಣಾನುಬಂಧವೋ. ಅವಳು ಮುಟ್ಟಿದ, ಎತ್ತಾಡಿದ, ಹೋರಾಡಿದ, ಯಾವ ಊರೂ, ಪುರುಷರೂ, ಒಡಹುಟ್ಟಿದವರೂ, ಮಕ್ಕಳೂ ನೀಡದ ನೆರಳು ಮತ್ತು ನೆಮ್ಮದಿ ಈ ಹುಣಸೆ ಇಂದು ಈಕೆಗೆ ನೀಡಿತೆನ್ನಬೇಕೆ? ಹೆಣ್ಣು ಬಸಿರಾದರೆ ಹಸಿಯುವುದು, ಹಂಬಲಿಸುವುದು ಹುಣಸೆ ಹಣ್ಣಿಗಾಗಿ. ಯಾರದೋ ಸಾಲುಗಳು ಇವಳ ಕುರಿತು ಬರೆದಂತೆಯೆ ಇವೆ-


"ಹುಗಿದ ನೆಲದಲ್ಲೊಂದಿಷ್ಟು
ಸುಮ್ಮನಿರಬಹುದು ನನ್ನವ್ವ
ನಾಯಿ ಬಾಳಿನಿಂದ ಮುಕ್ತಿ ಪಡೆದು
ಅವ್ವ ತಣ್ಣಗಿರಬಹುದು"
               

      ಈ ಪರಿ ಕಾಡಿದ ತಾಯಿಯೊಬ್ಬಳು ನನಗಿಲ್ಲ. ದೇಹಕ್ಕೊಂದು ಬಸಿರು ಬಿಗಿದು ಬರೀ ಹೆತ್ತು ಹೆಣ್ಣಾಗಿದ್ದರೆ ಇವಳು ನನ್ನನ್ನು ಕಾಡುತ್ತಿರಲೂ ಇಲ್ಲ. ನನ್ನೂರೊಳಗೊಂದು ಆಸ್ತಿ ಏನಾದರು ಇಂದಿಗೂ ಇದೆ ಎಂದುಕೊಂಡಾಗ ನನ್ನ ಕಣ್ಣುಮುಂದೆ ತಟ್ಟನೆ ಬಂದು ನಿಲ್ಲುವುದು ಇವಳ ಹುಗಿದ ಆ ನೆಲ ಮತ್ತು ಆ ಮರಗಳು. ಈಗ ಅವಳಿಲ್ಲ. ಅವಳ ಅವಸಾನದೊಂದಿಗೆ ನನ್ನ ಪಾಲಿಗೆ ಈ ಜಗದ ಅದೆಷ್ಟೋ ಸೌಂದರ್ಯ ನಶಿಸಿ ಹೋಗಿದೆ. ಗೊತ್ತಿರಲಿ ನಮ್ಮ ಪಾಲಿನ ಪ್ರಪಂಚ ಅವಿರ್ಭವಿಸುವುದು ನಾವು ಬೆಳೆದ ನೆಲದಿಂದ, ಮುಟ್ಟಿದ ಮೈಗಳಿಂದ. ಎರಡು ದಶಕಗಳು ಉರುಳಿವೆ ಜೈನಬಿಯ ಮೂಳೆಯು ಈಗ ಅಲ್ಲಿ ಮಣ್ಣಾಗಿರಬಹುದು, ನಮ್ಮ ಊರು ಬದಲಾಗಿದೆ. ಹಾಂ, ಇಗಲೂ ಅಷ್ಟೆ, ಯಾವುದೇ ವೇದಿಕೆ, ಕೂದಲು ಸೀಳುವ ನನ್ನ ಭಾಷಣದ ನಂತರ ಎದೆ ಹಸಿಯಾಗಿಸುವ ಒಂದಿಷ್ಟೇನಾದರು ಓದಿ ಎಂದು ಯಾರಾದರು ಕೇಳಿಕೊಂಡರೆ ಜೈನಬಿಯ ಬಾಳನ್ನೇ ಗರ್ಭಿಕರಿಸಿಕೊಂಡ ಈ ನನ್ನ ಕವಿತೆಯನ್ನು ಓದುತ್ತೇನೆ- ‘ಈಗ ಊರು ಬದಲಾಗಿದೆ’, ಯಾಕೆಂದರೆ ಈ ಕವಿತೆ ಎಂದರೆ ಇವಳೆ-

"ಖಬ್ರಸ್ಥಾನದಲ್ಲಿ
ಅವ್ವ ಮಣ್ಣಾಗಿಲ್ಲ
ಇನ್ನೂ ಮಣ್ಣೊಳಗೆ,
ಜಗಭಂಡರ
ಮೆಟ್ಟುಗಳ ಕೆಳಗೆ
ಧೂಳಾಗಿದ್ದವಳು
ತಪ್ಪಿಯೂ ಕಣ್ಣೊಳಗೆ
ಬೀಳಲಿಲ್ಲ
ಒಂದು ಸೂರಿನ
ಕನಸು ಕಂಡವಳು
ತೆಕ್ಕೆಯ ಬೆವರ
ಸಾಗರದಿಂದ ಮೇಲೇಳಲಿಲ್ಲ
ಈಗ ಊರು ಬದಲಾಗಿದೆ
ಬೊಂಬಾಯಿ ದುಬಾಯಿಯ
ಮಾಂಸದ ಮಾರುಕಟ್ಟೆಯಿಂದ
ಬಂಗಾರ ಬಸಿದ ನನ್ನವ್ವನ
ತೊಡೆಯಲ್ಲಿ ಮೂಗಿಟ್ಟವರು ಈಗ
ಮುಪ್ಪಿನಲ್ಲಿ ಸಂತರಾಗಿದ್ದಾರೆ
ನಮ್ಮೂರ ಸಂತೆಯಲಿ
ಆದರ್ಶದ ತೆವಲುಗಳ
ತುತ್ತೂರಿ ಊದಿ
ಹಗಲುಗಳ್ಳರೆಲ್ಲ ಮಹಂತರಾಗಿದ್ದಾರೆ.
ಈಗ ಊರು ಬದಲಾಗಿದೆ
ನನ್ನವ್ವನ ಮೈ ತೊಳೆದ
ಪಾಪದ ಗಂಗೆ
ಪರಮ ಪಾವನರ ಕೈಗೆ
ಸಿಗದಂತೆ
ಬತ್ತಿ ಹೋಗಿದೆ
ಜನ, ವಾಹನ, ಹೊಲಸಿನಿಂದ
ಒತ್ತುವರಿಯಾದ ಹಳ್ಳದ
ವಿಶಾಲ ಮಳಲರಾಶಿ
ಮುಖ ಮುಚ್ಚಿಕೊಂಡಿದೆ
ಮಣ್ಣೆರಚಿಕೊಂಡು,
ಅವ್ವ ಮಲಗಿರುವಂತೆ
ಖಬ್ರಸ್ಥಾನದಲ್ಲಿ
ಈಗ ಊರು ಬದಲಾಗಿದೆ
ದೇವರೂ ದಾರಿ ತಪ್ಪಿದ್ದಾನೆ
ಬಸ್ಟ್ಯಾಂಡಿನ ಸುತ್ತ ಹುಟ್ಟಿಕೊಂಡ
ಮುಂಗಟ್ಟುಗಳ ಮುಂದೆ
ಕುಣಿಯುತ್ತಿದ್ದಾನೆ ದರ್ವೇಶಿಯಂತೆ
ಹಿಂದೆ ನನ್ನವ್ವ ಹೊಟ್ಟೆಪಾಡಿಗೆ
ಕುಣಿದಂತೆ
ಈಗ ಊರು ಬದಲಾಗಿದೆ
ತಳದಲ್ಲಿ, ಬುಡದಲ್ಲಿ
ಆದರೂ
ಅವ್ವನ ಘೋರಿಯ ಪಕ್ಕದ
ಹುಣಸೆ ಇನ್ನೂ ಹಸಿರಾಗಿದೆ
ಸಮಾಧಿ ಮೇಲಿನ ಹುಲ್ಲು
ಇನ್ನೂ ಚಿಗುರುತ್ತಿದೆ "
        ಹೆಣ್ಣಿರುವಲ್ಲಿ ಇಂಥ ಕವಿತೆಗಳು, ಗಂಡುಗಳು? ಅದ್ಯದ ಅಪರಾವತಾರಗಳು ಅಲ್ಲವೆ? ನನಗೂ ನಿಮಗೂ ಈ ಭಾಗ್ಯವಿಲ್ಲ.