Sunday 12 May 2013

ನೀನಿರಬೇಕಮ್ಮ ಬಾಗಿಲೊಳಗೆ




ನೀನಿರಬೇಕಮ್ಮ ಬಾಗಿಲೊಳಗೆ
ನೀನಿಟ್ಟ ರಂಗೋಲಿಗೆ ಪಾದ ಸೋಕಿ
ತುಳಸಿ ತಣ್ಣಗೆ ಹರಸಿ
ಪುನಿತವಾಗುವ ದೇಹ 
ಸಾಗಿ ಹೋಗುವುದ ನೋಡಲು

ನೀನಿರಬೇಕಮ್ಮ ಬಾಗಿಲೊಳಗೆ
ಹುಲ್ಲು ಹುಟ್ಟಿದೆ ಕಟ್ಟೆ, ದಾರಿ ಹೋಕರ
ಬಾಳ ಹರುಕರು ಬಾಯಿಗೆ
ಜೀವಜಲ ಸುರಿದು ತಣ್ಣಗಿರಿಸಲು

ನೀನಿರಬೇಕಮ್ಮ ಬಾಗಿಲೊಳಗೆ
ಶಾಲೆ ಜೈಲಿಂದ ಹೊರ ಬಂದ
ಹೈದಗೆ ರೆಕ್ಕೆ ಮೂಡಿ, ಹಾತೊರೆದು ಬರುವವನೆ
ಎದೆಯೊಳಗೆ ಇಂಗಿಸಿಕೊಳ್ಳಲು

ನೀನಿರಬೇಕಮ್ಮ ಬಾಗಿಲೊಳಗೆ
ಹೂ-ಹಣ್ಣು ತರಕಾರಿ-ಗಳ ಜೀವ ಬಾಡದೆ
ಆಂತರ್ಯ ಕೆಡದೆ, ಮರುಕಳೆಯ
ಪಡೆದು ಘಮಘಮಿಸಲು

ನೀನಿರಬೇಕಮ್ಮ ಬಾಗಿಲೊಳಗೆ
ನೆಲವ ನಂಬಿದ ನಾಯಿ
ರೊಟ್ಟಿ ಜೊಲ್ಲಿಗೆ ತುತ್ತಿಡಲು
ಮುತ್ತಿಡಲು, ಮೈ ಸವರಿ ಮಲಗಿಸಲು

ನೀನಿರಬೇಕಮ್ಮ ಬಾಗಿಲೊಳಗೆ
ಅಕ್ಷತೆ ಅಕ್ಕಿ ಉಡಿಗೆ ಬಿದ್ದು
ಮುಡಿಗೆ ಹೂ ಬಿದ್ದು, ಒಂದು ನಾಲ್ಕಾಗಿ
ಮರಳಿ ಬರುವ ಮನ್ವಂತರದ ಕೈ ಹಿಡಿಯಲು

ನೀನಿರಬೇಕಮ್ಮ ಬಾಗಿಲೊಳಗೆ
ಜರಿದವರ ಶಪಿಸದೆ, ಬಂದವರ ಲೆಕ್ಕವಿಡದೆ
ಬರದವರ ನೆನೆದು, ಕಣ್ಣೀರು ಕರೆದು
ಬಾಗಿಲಿಗೆ ತಲೆ ಚಚ್ಚಿಕೊಳ್ಳಲು

ನೀನಿರಬೇಕಮ್ಮ ಬಾಗಿಲೊಳಗೆ
ಇಲ್ಲಿ ಧರ್ಮಗಳು ಬರುತ್ತವೆ ಬಿಕ್ಷೆ ಅರಸಿ
ಹಿಡಿ ಅನ್ನ ಸುರಿದು
ಕಳಿಸುವೆ ನೀನೆ ಮಮತೆಯ ಅರಸಿ

ನೀನಿರಬೇಕಮ್ಮ ಬಾಗಿಲೊಳಗೆ
ಮರೆತು ಹೋಗುವ ಸೂರ್ಯ
ಚಂದ್ರ, ನಕ್ಷತ್ರ, ಮಿಂಚು ಹುಳುಗಳ ಕರೆದು
ಮನೆಯ ಮೊಮ್ಮಗಳೊಡನೆ ಮಾತಾಡ ಹೇಳಲು

ನೀನಿರಬೇಕಮ್ಮ ಬಾಗಿಲೊಳಗೆ
ಗುಮ್ಮನನು ಕರೆದು, ನಮ್ಮ ಸುಮ್ಮನಾಗಿಸಿ
ಮತ್ತೆಂದು ಬಾರದಿರು ಬಿಕನಾಸಿ ಹೋಗೆಂದು
ದಿಕ್ಕರಿಸಿ ತಳ್ಳಲು

ನೀನಿರಬೇಕಮ್ಮ ಬಾಗಿಲೊಳಗೆ
ಆರತಿಯ ಎತ್ತಿ ನಮ್ಮ ಮೂರುತಿಗಳ ಮಾಡಿ
ಒಳಗೆ ಮಮ್ಮಲ ಮರುಗಿ, ಹೊರಗೆ
ಕೀರುತಿಯ ಹುಚ್ಚು ಹರಸಲು

ನೀನಿರಬೇಕಮ್ಮ ಬಾಗಿಲೊಳಗೆ
ನಡೆದವರ ಕಾಲಧೂಳ ಭಾಗ್ಯ ತಂದು
ಮಡಿದವರ ಪುಣ್ಯದ ಬುತ್ತಿ ಬಿಚ್ಚಿಟ್ಟು
ಇತಿಹಾಸ ತಿಲಕ ಹಣೆಗಿಟ್ಟು 
ಮರುಜನ್ಮ ನೀಡಲು

ನೀನಿರಬೇಕಮ್ಮ ಬಾಗಿಲೊಳಗೆ
ಹೊರಗೆ ಹೋಗುವ ಜೀವದ
ದೀಪ ಒಳಗಡೆ ಇಟ್ಟು ಬಳಗಕ್ಕೆಲ್ಲವೂ
ಭಾಗ್ಯವಾಗುಳಿಸಲು, 
ನೆನಪ ಕಾಯ್ದಿರಿಸಲು

(Happy Mother's Day)





No comments:

Post a Comment