Sunday 15 December 2013

ಮಾತಿಗೆ ಸೊತವಳು-ಭಾಗ ೨

ಏನೋ ಹೇಳಲು ಹೋಗಿ ನಾನು ನಿಮ್ಮನ್ನು ಎಲ್ಲೋ ತೆಗೆದುಕೊಂಡು ಹೋದೆ. ನನ್ನಜ್ಜಿಯ ಭೂತಕಾಲಕ್ಕೂ, ಈಗ ಸೋತು ಬಸವಳಿದಿರುವ ಬಾವಿಗೂ, ಒಂದು ಮರೆಯದ, ಮುಗಿಯದ ಸಂಬಂಧ. ಅಂದಹಾಗೆ ಈ ಬಾವಿಗೆ ಒಂದು ಹೆಸರೂ ಇದೆ- 'ಪಿಂಜಾರ ಬಾವಿ'. ಈ ದೇಶದ ವ್ಯವಸ್ಥೆಯಲ್ಲಿ ಈ ಪಿಂಜಾರರದು ಒಂದು ತ್ರಿಶಂಕು ಸ್ಥಿತಿ. ಅವರು ಜಾತಿಗಳ ಪಟ್ಟಿಯಲ್ಲಿ ಮುಸ್ಲಿಂರು ಆದರೆ ಹಿಂದೂ ದೇವರುಗಳನ್ನೂ ಆರಾಧಿಸುತ್ತಾರೆ. ಹೀಗಾಗಿ ಪಿಂಜಾರರು ಮುಸ್ಲಿಂರಿಗೆ ಒಪ್ಪಿತವಲ್ಲ. ಆದರೆ ಗಣನೆಯಲ್ಲಿ ಮುಸ್ಲಿಂರಾಗಿರುವುದರಿಂದ ಇವರು ಹಿಂದೂ ದೇವರುಗಳನ್ನು ಪೂಜಿಸಿಯೂ ಇವರು ಹಿಂದೂಗಳ ಬಂಧುಗಳಲ್ಲ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಪ್ರಚಲಿತವಿರುವಂತೆ ಹಿಂದೂ ದಲಿತ ಸ್ಥರದ ಜನಗಳು ಒಂದು ಕಾಲಕ್ಕೆ ಮುಸ್ಲಿಂ ಆಳ್ವಿಕೆಯ ಅವಧಿಯಲ್ಲಿ ಪಿಂಜಾರರಾದರಂತೆ. ಇನ್ನು ಕುತೂಹಲದ ಸಂಗತಿ ಎಂದರೆ ಈ ಜನಾಂಗದ ಬಹುಪಾಲು ಸ್ತ್ರೀಯರು ವೇಶ್ಯಾ ಚಟುವಟಿಕೆಗೆ ತೊಡಗಿಕೊಂಡಿದ್ದು. ಇದಿರಲಿ, ಅಜ್ಜಿಯ ಊರಿನ ಈ ಬಾವಿ ಏಕೆ ಪಿಂಜಾರ ಬಾವಿಯಾಯಿತು? ಗೊತ್ತಿಲ್ಲ. ಅದರ ಕೆಳಪುರಾಣ, ಸ್ಥಳಪುರಾಣಗಳನ್ನು ಹೇಳುವವರೂ ಈಗ ಬದುಕಿಲ್ಲ. ಒಟ್ಟಾರೆ ಇತ್ತ ಮುಸ್ಲಿಂರೂ ಅಲ್ಲದ, ಅತ್ತ ಹಿಂದೂಗಳೂ ಅಲ್ಲದ ಈ ಪಿಂಜಾರರು ಉಪೇಕ್ಷಿತರು. ಅದ್ಯಾಕೆ ಈ ಬಾವಿಗೆ ಪಿಂಜಾರ ಬಾವಿ ಅಂತ ಹೆಸರು ಬಂತೋ ಅದೊಂದು ವಿವರಗಳಿಲ್ಲದ ವಾಸ್ತವ. ಆದರೆ ಆದರೆ ಒಂದಂತೂ ಸತ್ಯ ಈ ಪಿಂಜಾರ ಬಾವಿಯಿಂದಲೇ ಊರ ಮಲ್ಲಬಸವಣ್ಣನ ಗುಡಿಗೂ, ಮುಲ್ಲಾನ ಮನೆಗೂ ನೀರು ಹೋಗಿದ್ದನ್ನು ನಾನು ನೋಡಿದ್ದೇನೆ. ಗೊತ್ತಿರಲಿ, ಈ ಊರ ಹಾಜೇಸಾಬನ ದರ್ಗಾ ಕೂಡ ಈ ನೀರ ರುಚಿ ಕಂಡಿದೆ.

         
ಇದೆಲ್ಲ ಬಿಡಿ, ನಾನು ಹೇಳಬೇಕಾದುದು ನಮ್ಮಜ್ಜಿಯ ಅವ್ವನ ಕತೆ. ಈ ಕತೆ ಹೇಳಿದ ಮೇಲೆ ನಿಮಗನ್ನಿಸಬಹುದು, ನಾನು ಇದುವರೆಗೂ ಚರ್ಚಿಸಿದ ಈ ಬಾವಿ ನಮ್ಮಜ್ಜಿಯ ಪಾಲಿಗೆ ಎಂಥ ಭಯಾನಕ ಸ್ಥಳವಾಗಿರಬಹುದು ಎಂದು. ಅದಕ್ಕೇ ಇರಬಹುದೆನೊ ಒಂದು ತಂಬಿಗೆ ನೀರಿಗೂ ನನ್ನಜ್ಜಿ ತನ್ನ ಎಪ್ಪತ್ತು ವರ್ಷದ ಬದುಕಿನಲ್ಲಿ ಇತ್ತ ಎಂದೂ ಬಂದ ಸಾಕ್ಷಿಗಳು ಇಲ್ಲ. ಆನಂತರ ನೀರು ತರುವುದು ಅದೇನಿದ್ದರೂ ನಮ್ಮಜ್ಜನದೇ ಕೆಲಸ, ಇಲ್ಲ ಮನೆಯಾಳುಗಳದ್ದು. ತಮ್ಮವ್ವನ ಬಗ್ಗೆ ಹೇಳುವಾಗ ನಮ್ಮಜ್ಜಿ ಎಂದೂ ಅತ್ಯಂತ ಭಾವುಕಳಾಗಿರುವುದನ್ನ ನಾನು ನೋಡಲಿಲ್ಲ. ಎಲ್ಲ  ಕತೆಗಳಂತೆ ಇದು ಒಂದು ಕತೆ ಎಂದು ಹೇಳಿಬಿಡುತ್ತಿದ್ದಳಷ್ಟೆ. ನಾನಾಗಲೇ ಹೇಳಿದೆನಲ್ಲ ಅವಳಿದ್ದದ್ದೇ ಹಾಗೆ. ಇದೇ ಪಿಂಜಾರ ಬಾವಿಗೆ ಬಿದ್ದು ನನ್ನಜ್ಜಿಯ ಅವ್ವ ಪ್ರಾಣ ನೀಗಿದ್ದರೂ ಕೂಡ ಅವಳೆಂದೂ ಆ ಕುರಿತು ನಮಗೆ ಭಯಾನಕವಾಗಿ ವಿವರಿಸಲಿಲ್ಲ. ಅಗೌರವದ ಮಾತುಗಳನ್ನಾಡಲಿಲ್ಲ, ಕಾರಣ ಬಹುತೇಕ ತನ್ನ ತಾಯಿಯ ಆ ಕಠಿಣ ನಿರ್ಧಾರದ ಹಿಂದಿದ್ದ ಭಾವಶುದ್ಧಿ ಮತ್ತು ನಂಬಿಕೆ, ಮುಗ್ಧ ನಂಬಿಕೆ.

           ನಮ್ಮಜ್ಜಿಯ ಅವ್ವನಿಗೆ ಮಾತುಗಳೆಂದರೆ ಬಾಯಿ ಚಟ ತೀರಿಸಿಕೊಳ್ಳಲು ಬರೀ ಶಬ್ದಗಳ ಹಂದರವಾಗಿರಲಿಲ್ಲವಂತೆ. ಎಷ್ಟು ವಿಚಿತ್ರ ನೋಡಿ. ಈ ಇವಳಿಗೆ ಬದುಕೆಂದರೆ ಬರೀ ಮಾತುಗಳ ಜಾತ್ರೆ, ಆದರೆ ಅವಳಿಗೆ ಬದುಕೆಂದರೆ ಮೌನದ ಮಹಾ ಯಾತ್ರೆ. ಆಕೆ ಒಮ್ಮೆ ಮಾತನಾಡಿದರೆ ಮುಗಿಯಿತು ಅದು ಅನುಶಾಸನದ ಮಾರ್ಗವಾಗಬೇಕು ಅಥವಾ ಆ ಮಾತಿಗಾಗಿ ಅವಳ ಪ್ರಾಣವೇ ಹೋಗಬೇಕು. ಅವಳು ಕನಸಿನಲ್ಲಿಯೂ ಆಡಿದ ಮಾತಿಗೆ ಮೌಲ್ಯಕಟ್ಟುವವಳು, ಕಟ್ಟಿದವಳು. ಪ್ರಾಣಕ್ಕಿಂತಲೂ ಪರಮವಾಗಿತ್ತು ಆಕೆಗೆ ಮಾತು. ಮದುವೆಯಾದ ಮೇಲೆ ಆಕೆಗೆ ಎರಡು ಮಕ್ಕಳಾದವು. ಒಂದು ಹೆಣ್ಣು, ಅವಳೇ ನನ್ನಜ್ಜಿ. ಇನ್ನೊಂದು ಗಂಡು. ಈ ಗಂಡು ಮಗ ಬೆಳೆದು ಪ್ರಾಯಕ್ಕೆ ಬಂದಾಗ ಒಟ್ಟಾರೆ ಸಂಸಾರ ಅದರ ಸುತ್ತಲಿನ ಕ್ರಿಯೆಗಳಲ್ಲಿ  ಅನಾಸಕ್ತನಾಗಿದ್ದ ಆತನ ಮದುವೆ ಮಾಡಿದಳು. ಆದರೆ ಈ ಮಗ ಮಾತ್ರ ಮೈಯೆಲ್ಲ ಬೂದಿ ಬಳಿದುಕೊಂಡು ಮದುವೆ ನಂತರವೂ ಸನ್ಯಾಸಿಯಂತೆ ಅಲೆಯಲಾರಂಭಿಸಿದ. ಆತ ಮಹಾ ಮೌನಿಯಾದ. ಹೇಳದೆ, ಕೇಳದೆ ಊರ ಹೊರಗಿನ ಹಾಳು ದೇವಾಲಯಗಳಲ್ಲಿ, ಪಾಳು ಬಾವಿಗಳ ಗೂಡಿನಂಥ ಮಾಡುಗಳಲ್ಲಿ, ಉರಿ ಬಿಸಿಲಿನ ಬೇಸಿಗೆಯ ದಿನಗಳಲ್ಲಿ ಧೋ ಎಂದು ಮಳೆ ಸುರಿಯುವ ಮಳೆಗಾಲದ ರಾತ್ರಿಗಳಲ್ಲಿ ನಿರಂತರ ಧ್ಯಾನ, ಮೌನ, ತಪಸ್ಸು ಎಂದು ಅರೆ ಹುಚ್ಚನಂತೆ ಹಗಲು ರಾತ್ರಿ ಎನ್ನದೆ ಅಲೆದಾಡಲು ಪ್ರಾರಂಭಿಸಿದ.

            ನನ್ನಜ್ಜಿಯ ಅವ್ವ ಭಯಂಕರ ಚಿಂತೆಗೊಳಗಾದಳು, ಹರಕೆ ಹೊತ್ತಳು, ಹಲವು ದೇವರ ಮುಂದೆ ಹೋಗಿ ಮೊರೆ ಹೊಕ್ಕಳು. ಆಕೆಗೆ ಎಷ್ಟೊಂದು ಚಿಂತೆಯಾಗಿತ್ತು ಅಂದರೆ ಹಗಲು- ರಾತ್ರಿ ತನ್ನ ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾರ್ಜುನನಿಗೆ ಮಗನ ಸಂಸಾರ ಸರಿಯಾಗಲಿ ಎಂದು ಬೇಡಿಕೊಂಡಳು. ಇರುವ ಒಬ್ಬ ಮಗ ಸಂಸಾರ ಮಾಡದೆ, ದೊಡ್ಮನೆಗೆ ದೀಪ ಹಚ್ಚುವ ಮೊಮ್ಮಗನನ್ನು ಕೊಡದೆ ಹೋದರೆ? ಈ ಚಿಂತೆ ಚಿತೆಯಾಯಿತು. ಕೊನೆಗೊಂದು ರಾತ್ರಿ ತನ್ನ ಈ ಭಯಾನಕ ಮಾನಸಿಕ ಸ್ಥಿತಿಯಲ್ಲಿ ದೇವರಿಗೆ ವಚನಕೊಟ್ಟಳು, ಅಲ್ಲ ಮಾತುಕೊಟ್ಟಳು-“"ದೇವರೇ, ನನ್ನ ಮಲ್ಲಿಕಾರ್ಜುನ, ಶ್ರೀಶೈಲ ಗಿರಿವಾಸ, ನನ್ನ ಮಗ ಸಂಸಾರದ ದಡ ಹಿಡಿಯಲಿ. ಮನೆಗೆ ಬಂದ ಸೊಸೆ ಬರಡಾಗದೆ, ಮಕ್ಕಳು, ಮೊಮ್ಮಕ್ಕಳು ಹುಟ್ಟಿ ನನ್ನ ಮನೆಯೆಂಬುದು ಗೀಜಗನ ಗೂಡಾಗಲಿ." ವಿಚಿತ್ರವೆಂದರೆ 'ದೊಡ್ಮನೆ'ಯಲ್ಲಿ ಈಕೆಯ ಆಶಯಕ್ಕೆ ವ್ಯತಿರಿಕ್ತವಾಗಿ ಎನ್ನುವಂತೆ, ತನ್ನ ಸ್ವಯಂ ಸಂಸಾರದ ಗೂಡು ಕಟ್ಟಿಕೊಳ್ಳದೇ ಹೋದರೂ 'ದೊಡ್ಮನೆ'ಯನ್ನು ಒಂದು ಪ್ರಾಣಿ ಸಂಗ್ರಹಾಲಯ ಮಾಡಿದ್ದ ಈ ಮಗ. ಎಂಟು ಎತ್ತುಗಳ ಒಕ್ಕಲುತನವಿದ್ದ ದೊಡ್ಮನೆಯಲ್ಲಿ ಮಗರಾಯ ಬೈರಾಗಿಯಾಗಿ ಸುಂದರ ಹೆಂಡತಿಯನ್ನು ಒಳಗಿಟ್ಟು ಹೊರಗೆ ಅಂಗಳದಲ್ಲಿ ತಾನ್ ಸಾಕಿದ ಗಿಳಿ, ಪಾರಿವಾಳ, ಹಾವು, ಮೊಲ, ಬಿಳಿ ಇಲಿಗಳನ್ನು ಮನೆ ಮುಂದೆ ಹೋಗುವವರಿಗೆಲ್ಲ ತೋರಿಸುತ್ತ ಡೊಂಬರವನಾಗಿದ್ದ. ದೊಡ್ಮನೆಯಲ್ಲಿ ಕಾಲಿಡುವುದೇ ಒಂದು ಮರ್ಯಾದೆ ಎಂದುಕೊಳ್ಳುತ್ತಿದ್ದವರಿಗೆ ಈಗ ಅದೊಂದು ಮನರಂಜನೆ ಮತ್ತು ಮೋಜಿನ ಸ್ಥಳ. ಹೀಗಾಗಿ ಚಿಂತೆಗೊಳಗಾದ ತಾಯಿ ದೇವರಿಗೆ ಹೇಳಿದಳು - "ಒಂದು ವೇಳೆ ಈ ನನ್ನ ಪ್ರಾರ್ಥನೆ ಈಡೇರಿದರೆ ನಾನು ನನ್ನ ಪ್ರಾಣವನ್ನೇ ನಿನಗೆ ಕೊಟ್ಟುಬಿಡುತ್ತೇನೆ"”ಹೀಗೆ ರಾತ್ರಿಯ ನಿದ್ದೆಯ ಅರೆಪ್ರಜ್ಞಾವಸ್ಥೆಯಲ್ಲಿ ನನ್ನಜ್ಜಿಯ ತಾಯಿಯ ಮಾತು ಹೋಯಿತು. ಬೆಳಗಾದಾಗ ಯಾರೋ ಆಕೆಗೆ ಹೇಳಿದರು ಹಾಗಂತ ಅವಳು ಆ ರಾತ್ರಿ ಬಡಬಡಿಸಿದ್ದನ್ನು.

         ಎಷ್ಟು ವಿಚಿತ್ರ ನೋಡಿ, ಕ್ರಮೇಣ ಕಾಲ ಉರುಳಿತು. ನನ್ನಜ್ಜಿಯ ಅಣ್ಣ ಮೆಲ್ಲಗೆ ಸಂಸಾರದತ್ತ ಒಲವು ತೋರಿಸಿದ. ಹಾಳು ಬಿಟ್ಟಿದ್ದ ಹೆಂಡತಿಯ ಎದೆಹೊಕ್ಕು ಮಕ್ಕಳಿಗೆ ಜನ್ಮ ನೀಡಿದ. ಶುದ್ಧ ಸಂಸಾರಿಯಾದ. ಮನೆ ತುಂಬ ಈಗ ಮೊಮ್ಮಕ್ಕಳು. ಆಕೆಗೆ ಈಗ ಒಂದೆಡೆ ಹರ್ಷ, ಇನ್ನೊಂದೆಡೆ ತಾನು ದೇವರಿಗೆ ನೀಡಿದ ಆ ವಚನ. ಇದಕ್ಕೆಂದೇ ಈಗ ಮನೆಯಲ್ಲಿ ಅವಳಿಗೆ ಸರ್ಪಗಾವಲು ಪ್ರಾರಂಭವಾಯಿತು. ಯಾಕೆಂದರೆ ರಾತ್ರಿ ಎಲ್ಲಿಯಾದರೂ ಎದ್ದು ಹೋಗಿ ಬಾವಿಗೆ ಬಿದ್ದು ಈಕೆ ಪ್ರಾಣ ಬಿಟ್ಟಾಳು ಎಂದು ಎಲ್ಲರಿಗೂ ಚಿಂತೆ. ಹೀಗಾಗಿ ಅಜ್ಜ ಮಲಗುವಾಗ ಆಕೆಯ ಸೀರೆಯ ಒಂದು ಅಂಚನ್ನು ತನ್ನ ಧೋತರದ ತುದಿಗೇ ಕಟ್ಟಿಕೊಂಡು ಮಲಗುತ್ತಿದ್ದ. ಆದರೂ ಅವಳದು ವಚನ ಬದ್ಧ ದಾರಿ. ದೃಢ ನಿರ್ಧಾರ. ಮಾತೆಂಬುದು ಆಕೆಗೆ ಬಿಟ್ಟ ಬಾಣ. ತೊಟ್ಟು ಬಿಟ್ಟ ಸೀರೆ. ಅಜ್ಜಿ ದೇವರಿಗೆ ಮಾತುಕೊಟ್ಟಂತೆ ಸಾಯಲೇಬೇಕೆಂದು ನಿರ್ಧರಿಸಿದಳು. ನಿರ್ಧಾರವನ್ನೇ ಬದುಕಿದಳು.

       ಮಳೆಗಾಲದ ದಿನಗಳು, ಇದ್ದಕ್ಕಿದ್ದಂತೆ ಒಂದು ರಾತ್ರಿ ಮನೆಯವರೆಲ್ಲ ಎದ್ದು ನೋಡಿದಾಗ ಅಜ್ಜಿಯ ಅವ್ವ ಹಾಸಿಗೆಯೊಳಗೆ ಇರಲಿಲ್ಲ. ಎಲ್ಲರೂ ಹೊರ ಬಂದು ನೋಡಿದಾಗ ಆಕೆಯ ಹೆಣ ಮನೆಯ ಪಕ್ಕದ ಬಾವಿಯಲ್ಲಿ ಬೋರಲಾಗಿ ಬಿದ್ದು ತೇಲಾಡುತ್ತಿತ್ತು. ಆದರೆ ಅವಳು ನಂಬಿಕೊಂಡಿದ್ದ ಮೌಲ್ಯ ಚಿರಾಯುವಾಯಿತು, ಅಮರವಾಯಿತು.
ಈಗ ಹೇಳಿ ಅವಳಿಗೆ ಮಾತೆಂದರೇನು? ವಚನ, ಭಾಷೆ, ಶಬ್ದಗಳೆಂದರೇನು? ನುಡಿಯೆಂದರೇನು? ನನ್ನ ಅಜ್ಜಿಯ ತಾಯಿ ನೆನಪಾದಾಗಲೆಲ್ಲ ನನ್ನೊಳಗೆ, ನನ್ನ ರಕ್ತದೊಳಗೆ ಆಕೆಯ ಮೌಲ್ಯ ಮತ್ತೆ ಮರುಹುಟ್ಟು ಪಡೆಯುತ್ತದೆ. ಮಾತು ಭಯ ಹುಟ್ಟಿಸುತ್ತದೆ. ಮೌನ ಲೇಸೆನ್ನಿಸುತ್ತದೆ. ಆಡಿ ಬಿಡಬಹುದಾದಂಥ ಮಾತಿಗೆ ಯಾವ ಬೆಲೆ ನೀಡಿದರೂ ಕಡಿಮೆ ಎನ್ನಿಸುತ್ತದೆ. ಪ್ರಾಣವೂ ಒಂದು ಭಾಷೆ ಎನ್ನುವುದಾದರೆ ಪ್ರಾಣವೇ ಹೋಗಲಿ ಭಾಷೆ ಮಾತ್ರ ಉಳಿಯಲಿ.

Tuesday 3 December 2013

ಮಾತಿಗೆ ಸೋತವಳು-ಭಾಗ-೧



ಒಂದು ಕ್ಷಣ, ನೀನು ಬೆಂಕಿ
ಮತ್ತೊಂದು ಕ್ಷಣ ಮೃದು ಇಬ್ಬನಿ
ನೀನು ವಜ್ರ,
ಒಮ್ಮೆ ನೀನು ದೇವದೂತ,
ಮತ್ತೆ ಪುನಃ ಶಿಲಾಮೂರ್ತಿ
                                                                       -ಅಲಿ ಸರ್ದಾರ್ ಜಾಫ್ರಿ
------------------------------------------------------------------------------------------------------------

ತಾಯಿ-ನಾಯಿ
            ನಮ್ಮ ತೋಟದ ಮನೆಯಲ್ಲೊಂದು ನಾಯಿ ಇತ್ತು. ಬೇಸಿಗೆ ರಜೆಗೆ ನಾವೆಲ್ಲ ತೋಟಕ್ಕೆ ಹೋದಾಗ ನಮ್ಮನ್ನು ಸ್ವಾಗತಿಸುತ್ತಿದ್ದ ಅದರ ಸಂಭ್ರಮ ಹೇಳಲು ಇಂದು ಭಾಷೆ ಸೋಲುತ್ತದೆ. ಅದರ ಹೆಸರು ಕಾಶಿ. ತೆಳ್ಳಗೆ-ಬೆಳ್ಳಗೆ, ಕಣ್ತುಂಬ ಕರುಣೆ, ಪ್ರಿತಿ ತುಂಬಿಕೊಂದು ಮುದ್ದಿಸಲು ಮೈಮೇಲೆ ಬರುತ್ತಿದ್ದ ಅದರ ಪ್ರೀತಿ ಈಗಲೂ ಸ್ಮರಣಿಯ.

           ಪ್ರೀತಿಗೆ ನಾಯಿ ಹಾಗೂ ತಾಯಿ ಎರಡೂ ಶ್ರೇಷ್ಠ ಉದಾಹರಣೆಗಳೇ. ತಾಯಿಗೆ ಹೇಸಿಗೆ ಇಲ್ಲ, ನಾಯಿಗೆ ನಾಚಿಕೆ ಇಲ್ಲ. ಎದೆ ತುಂಬಿ ಬಂದರೆ ಸಾಕು ಇವರ ಪ್ರೀತಿಯ ಅಭಿವ್ಯಕ್ತಿಗೆ ನಿಶ್ಚಿತ ಸ್ಥಳವೆಂಬುದಿಲ್ಲ ಔಪಚಾರಿಕತೆಯ ನಾಟಕೀಯ ಲೆಪನವಿಲ್ಲ.ತೋಟದ ಮನೆಯ ಮುಂದೆ, ಕಣಜದಲ್ಲಿ ರಾಶಿ ಇಟ್ಟುಕೊಂಡು, ಮಕ್ಕಳು ಆಳು, ದನಗಳು ಮಲಗಿಕೊಂಡಾಗ, ಕಾಶಿ ಎಚ್ಚರವಾಗಿದ್ದು ಕಾಯುತ್ತಿರುತ್ತಿತ್ತು. ಮನೆಯವರ್ಯಾರಾದರೂ ಊರಿಗೆ ಹೊರಟರೆ ತೋಟದ ಮನೆಯಿಂದ ಬಸ್ಟ್ಯಾಂಡಿನವರೆಗೂ ಚಕ್ಕಡಿಯ ಕೆಳಗೆ ಊರ ನಾಯಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತ ಹೋಗಿ ಕಳುಹಿಸಿ ಬರುತ್ತಿತ್ತು. ರಾತ್ರಿ ದಿಂಬು ಮರೆತು ಮಲಗಿದ್ದರೆ ಅದರ ಬೆನ್ನನ್ನೇ ದಿಂಬಿನಂತೆ ಬಳಸಿಕೊಂಡು ನಮ್ಮ ತಲೆ ಇಡಬಹುದಾಗಿತ್ತು. ನಾವು ಕಾಶಿಗೆ ಕೈ ಹಚ್ಚುವಂತಿರಲಿಲ್ಲ. ಅದು ಕಲ್ಲೋ, ಮುಳ್ಳೋ ತುಳಿದುಕೊಂಡು ಕಾಲಿಗೆ ಏನಾದರೂ ಗಾಯ ಮಾಡಿಕೊಂಡು ಬಂದರೆ ಆಗ ಮಾತ್ರ ಕಾಶಿ ತನ್ನ ಉಪಚಾರಕ್ಕೆ ಅವಕಾಶ ಮಾಡಿಕೊಡುತ್ತಿತ್ತು. ಮೂರು ತಿಂಗಳು ಬೇಸಿಗೆ ರಜೆ ಮುಗಿಸಿಕೊಂಡು ನಾವು ಚಕ್ಕಡಿಯಲ್ಲಿ ಊರಿಗೆ ಹೊರಟಾಗ ನೂರಾರು ಗಾವುದ ನಡೆದುಕೊಂಡು ಕಾಶಿ ನಮ್ಮನ್ನು ಕಳುಹಿಸಲು ಬಂದು ಬಸ್ಟ್ಯಾಂಡಿನಲ್ಲಿ ಮುಖ ಸಪ್ಪೆ ಮಾಡಿಕೊಂಡು ನಿಲ್ಲುವುದನ್ನು ನೆನಪಿಸಿಕೊಂಡರೆ ಈಗಲೂ ಮರುಕು ಹುಟ್ಟುತ್ತದೆ. ಲಂಕೇಶರ ಹಾಡು ಎದೆ ಇರಿಯುತ್ತದೆ
`ಎಲ್ಲಿದ್ದೆ ಇಲ್ಲೀ ತನಕ
ಎಲ್ಲಿಂದ ಬಂದೆವ್ವಾ'

         ಮತ್ತೊಂದು ಬೇಸಿಗೆ ರಜೆಗೆ ಹೋದಾಗ ಎದುರುಗೊಳ್ಳಲು ಕಾಶಿ ಬರಲಿಲ್ಲ. ತೋಟದ ಮೆನೆಗೆ ಹೋದರೆ ಅಲ್ಲಿಯೂ ಇರಲಿಲ್ಲ. ಮೇಲೆ ಗೊತ್ತಾಯಿತು ಕಾಶಿ ಸತ್ತು ಹೋಗಿದೆ ಎಂದು. ಛೇ! ನಾನು ನಿಮಗೆ ಹೇಳಬೇಕಾದುದೇ ಬೇರೆ, ಹೇಳುತ್ತಿರುವುದೇ ಬೇರೆಯಾಯಿತೇ? ಮೂರು ದಶಕಗಳ ಶಬ್ಧ ಸಂಸಾರದಲ್ಲಿ ಸಾಗಿಹೋದ ನನಗೆ ಕೆಲವೊಮ್ಮೆ ಹಾಗೆ ಅನ್ನಿಸುವುದೇ ಇಲ್ಲ. ಎಲ್ಲವೂ ಎಲ್ಲೋ ಒಂದೆಡೆ ಒಂದೇ ಆಗಿದೆ. ಕಥೆ0iÉುೀ ಆಗಿದೆ. ಈಗಾಗಲೇ ಹೇಳಿದಂತೆ ನಾಯಿಯ ಹೆಸರು ಮತ್ತು ನನ್ನ ಅಜ್ಜಿಯ ಹೆಸರು ಒಂದೇ ಆಗಿರುವುದರಿಂದ ಇಷ್ಟೆಲ್ಲ ಹೇಳಬೇಕಾಯಿತೇನೊ. ಬರೀ ಹೆಸರು ಒಂದಾಗಿದ್ದರೆ ಇಷ್ಟು ವಿವರಣೆ ನೀಡುವ ಅವಶ್ಯಕತೆ ಇರಲಿಲ್ಲ. ಹೆಸರನ್ನು ಮೀರಿ ಇಡೀ ಬದುಕನ್ನೇ ಒಂದು ಸಿದ್ಧಾಂತಕ್ಕಾಗಿ ನಿಸ್ವಾರ್ಥದ ಗಾಳಿಪಟದಂತೆ ಹಾರಿಸಿ ಬಿಟ್ಟಾಗ ಅವರ ಕುರಿತು ಮಾತೂ ಮಹಾಕಾವ್ಯವಾಗುತ್ತದೆ.


         ಈ ಬದುಕಿನ ಮಿತಿಯೇಇದು? ಅಥವಾ ದುರಂತವೋ? ಅಜ್ಜಿ ತೀರಿದ ಮೇಲೆ ನನ್ನವ್ವನ ಊರಿಗೆ ಹೋಗುವುದೇ ಅಪರೂಪವಾಯಿತು. ಖಂಡಿತ ನಮಗಾಗಿ ಹಸಿಯದ ಜೀವ ಇಲ್ಲ ಎನ್ನುವುದಾದರೆ ಯಾವ ಊರಿನ ಗತಿಯೂ ಅಷ್ಟೆ. ನನ್ನಜ್ಜಿಯಂತೂ ಒಂದು ಜನ್ಮಗಳೂ ಅಳಿಸಿ ಹಾಕಲಾಗದ ವಿಚಿತ್ರ ಜೀವ. ಅವಳಿಗಾಗಿ ಹಂಬಲಿಸಿ ನಾನೆಂದೂ ಊರಿಗೆ ಹೋಗದಿದ್ದರೂ ಅವಳ ಊರು ಮಾತ್ರ ನನಗೆ ಜನ್ಮಕ್ಕೆ ಸಾಕೆನ್ನುವಷ್ಟು ಅನುಭವಗಳ ಬುತ್ತಿ ಕಟ್ಟಿಕೊಟ್ಟಿದೆ. ಅಬ್ಬಾ! ಕಾಡು ಮಲ್ಲಿಗೆಯಂಥ ನನ್ನಜ್ಜಿಗೆ ಎಂಥ ಸಂಭ್ರಮದ ಬಾಳು, ಕೈಗೊಂದು-ಕಾಲಿಗೊಂದು ಆಳು, ಊರ ತುಂಬ ಮಾತು ಹಬ್ಬದ ಗೆಳತಿಯರುಒಂದರ್ಥದಲ್ಲಿ ಅವಳೆಂದರೆ ಊರೇ. ಅಥವಾ ಹೀಗೆನ್ನಿ- ಊರೆಂದರೆ ಇವಳೇ.

           ಈಗ ಅವಳು ತೀರಿ ಬರೋಬ್ಬರಿ ನಾಲ್ಕು ವರ್ಷ. ಈಗಲೂ ನಾಲ್ಕಾರು ಬಾರಿ ನಾನು ಅವಳ ನೆನಪು ಕೆದಕುತ್ತ ಅತ್ತ ಹೋಗಿ ಬಂದಿರಬಹುದು. ಒಂದು ಕ್ಷಣ, ಏರಿಯ ಮೇಲಿನ ಆಕೆಯ ಊರ ಬಸ್ಟಾಂಡಿನೊಳಗೆ ಇಳಿದು ಪಕ್ಕದಲ್ಲಿಯೇ ಇರುವ ಸ್ಮಶಾನದೊಳಗಿನ ಆಕೆಯ ಸಮಾಧಿಯನ್ನು ಕಂಡು ಮನೆಯ ಕಡೆ ಹೊರಟಾಗ ಎಂದೋ ಹೀಗೊಂದು ಕವಿತೆ ಹರಳುಗಟ್ಟಿತು-





"ಒಲೆಗೆ ಬೆಂಕಿಯಿಡದೆ
ಮೊಲೆಗೆ ನಾಚಿಕೆ ಪಡದೆ
ಹಡೆದದ್ದೇ ಹುಡುಗಾಟಕ್ಕೆನ್ನುವಂತಿದ್ದ,
ಅಜ್ಜ ಮುಟ್ಟಿದ ಮೈಗಳಿಗೆಲ್ಲ
ಉಡಿಯಕ್ಕಿ ಹಾಕಿ ಪಗಡಿಯಾಡಿದ್ದ
ನನ್ನಜ್ಜಿ
ಈಗ ಹೇಸಿಗೆಯ ಹೊರೆ ಇಳಿಸಿ
ಸಂತೆ ಗೆದ್ದು ನಿಶ್ಚಿಂತಳಾದಳು"

      ಊರೊಳಗೆ 'ದೊಡ್ಮನೆ' ಕಾಶಿಬಾಯಿ ಎಂದೇ ಖ್ಯಾತಳಾಗಿದ್ದ ನನ್ನಜ್ಜಿ ಮನೆತನದ ಹೆಸರಿಗೆ ಒಂದು ಅಪವಾದದಂತಿದ್ದಳು. ಕರ್ರನೆಯ ಬಣ್ಣ, ದೇಹ ಅತೀ ಸಣ್ಣ. ಪೀಚಲು ಪಾತ್ರ. ಆದರೆ ಇವಳೆಂದರೆ ಬರೀ ಮಾತು. ಹೀಗೆ ಏನೆಲ್ಲ ನೆನಪುಗಳ ಸುರುಳಿ ಬಿಚ್ಚುತ್ತಾ ಮನೆಯಲ್ಲದ ಮನೆ ಮುಟ್ಟಿದಾಗ ಮೂರು ಸಂಜೆ. ಹುಟ್ಟಿದೂರಿನಲ್ಲಿ ಹೊರಗಿನವನಂತೆ ಹೊರಟ ನನ್ನನ್ನು ನೋಡಿ ಅಲ್ಲಲ್ಲಿ ಹೆಂಗಸರು, ಒಳಗೊಳಗೇ ದೊಡ್ಮನೆ ಕಾಶಿಬಾಯಿ ಮೊಮ್ಮಗ ಇರಬಹುದು ಎಂದಾಡುತ್ತಿದ್ದ ಮಾತುಗಳು ಕಿವಿಗಪ್ಪಳಿಸುತ್ತಿದ್ದವು

       ಧೂಳು, ಧೂಳಾದ ಊರಿನ ದಾರಿ ಕ್ರಮಿಸಿ, ಮನೆ ಮುಟ್ಟಿ ಮುಖಮಾರ್ಜನೆ ಮಾಡಿಕೊಂಡು ಹೊರಗಡೆ  ಬಂದು ಕುಳಿತರೆ ಕಾಡುವ ಎರಡು ವಸ್ತುಗಳು- ಒಂದು ಕರಿಕಲ್ಲಿನ, ದೊಡ್ಡ ಬಾಗಿಲಿನ, ಈಗ ಸಂಪೂರ್ಣ ಹಾಳು ಬಿದ್ದ ನನ್ನಜ್ಜಿಯ ಮನೆ; ಇನ್ನೊಂದು ಐದು ಗಡಗಡಿಯ ಕಲ್ಲಿನಲ್ಲೇ ಕಟ್ಟಿದ ವಿಶಾಲ ಬಾವಿ. ಒಂದು ಕಾಲಕ್ಕೆ  ನನ್ನಜ್ಜಿಯ ಮನೆಯ ಪಕ್ಕದ್ದೇ ಬಾವಿ. ಆದರೆ ಈಗ ಸ್ವಲ್ಪ ದೂರ ದೂರವಾಗಿವೆ. ಯಾಕೆಂದರೆ ಇವೆರಡರ ಮಧ್ಯದಲ್ಲಿದ್ದ ತಿಪ್ಪೆಯಲ್ಲಿ ಹೊಸದಾಗಿ ಒಂದು ಗಿರಣಿ ಹುಟ್ಟಿಕೊಂಡಿದೆ. ಸಣ್ಣ ಊರಿನ ಸಂದಿ-ಸಂದಿಗಳಲ್ಲೆಲ್ಲ ನಲ್ಲಿಗಳು ಬಂದು ಹಳೆಯ ಬಾವಿ ಅನಾಥವಾಗಿದೆ. ಆಳವಲ್ಲದ ಭಾವಿಯ ಅಳಿದುಳಿದ ನೀರು ಮಲೆತು, ಗಣಾಚೌತಿಯಲ್ಲಿ ಗಣೇಶನಿಗೆ ಮೋಕ್ಷ ತೋರಿಸುವ ಆತ್ಮಹತ್ತ್ಯಾ ಕೇಂದ್ರವಾಗಿದೆ ಅಷ್ಟೆ. ನಸುಕಿನ ಮೂರು ಗಂಟೆಯಾದರೆ ಸಾಕು ಕೀರಿಡಲು ಸುರುವಾಗುತ್ತಿದ್ದ ಬಾವಿಯ ಗಡಗಡೆಗಳೆಲ್ಲ ಬೆಳಗಾಗುವುದರಲ್ಲಿ ಬೆವಿಯುತ್ತಿದ್ದವು, ಆದರೆ ಈಗ ತುಕ್ಕು ಹಿಡಿದಿವೆ. ಒಂದು ಕಾಲಕ್ಕೆ ಎಂಥ ರೋಮಾಂಚನದ ಕೇಂದ್ರವಾಗಿತ್ತು ಬಾವಿ. ಹೊಸದಾಗಿ ಬಂದ ಸೊಸೆಯಂದಿರು, ಆಗಷ್ಟೆ ಮೈನೆರೆದ ಹುಡುಗಿಯರು, ಮೈ ಮೂಲೆ ಮೂಲೆಗೂ ಮುಪ್ಪು ವಕ್ಕರಿಸಿದ್ದರೂ ದೇವರಿಗೆ ಮಡಿ ನೀರೇ ಬೇಕೆಂದು ಬರುತ್ತಿದ್ದ ಮುದುಕಿಯರು, ಹುಡುಗಿಯರ ಹೊಸ ಮುಖಗಳಿಗೆ ಹಸಿ ಹೆಚ್ಚಿಸಿಕೊಂಡು ಅಲ್ಲಿಂದಲೇ ಕಾಯುತ್ತ ಕುಳಿತಿರುತ್ತಿದ್ದ ಚಪಲ ಚನ್ನಿಗರಾಯರು, ಅಯ್ಯೋ, ನೆನಪುಗಳಿಗೆ ಬರವಿಲ್ಲ ಬಿಡಿ. ಆದರೆ ಈಗ ರಂಡೆ-ಮುಂಡೆಯರಂತೆ ಹಾಳು ಹೊಡೆಯುತ್ತಿದೆ ಬಾವಿ. ಊರಿಗೆ ಬಂದವಳು ನೀರಿಗೇ ಬರುತ್ತಿಲ್ಲ. ಇದನ್ನು ನೆನೆದು ನಾನೇ ಬರೆದ ಕವಿತೆ-
ನೀರೆ-ನಿರಿಗೆ



                                                               ಈಗ
ಅಜ್ಜಿಯ ಊರಲ್ಲಿ
ಗೆಜ್ಜೆಯ ಸದ್ದೇ ಇಲ್ಲ

ಎಲ್ಲ ಹಾಳು-ಬೀಳು, ಧೂಳು
ಬೆಳದಿಂಗಳಿಗೆ
ಬಾಯ್ತೆರೆದು ಮಲಗಿದರೆ
ಕೇಳುವ ಧ್ವನಿ ಗೋಳು

ಈಗ ಎಲ್ಲ ಹೀಗೆ
ಇಣುಕಿ ನೋಡಿದರೆ
ಅವರವ್ವನನ್ನು ನುಂಗಿ ನೀರು ಕುಡಿದ
ಬಾವಿಯ ಬಾಯಿಗೇ
ಈಗ ಬೋರ್ ನೀರಿನ ಜೀವದಾನ
ಗಡಗಡಿಗಳು ತುಕ್ಕಾಗಿ
ಕೊಡದ ಕಟ್ಟೆಗಳೆಲ್ಲ ಒಡೆದು ಹೋಗಿ
ಬಾವಿ ಈಗ
ಗಣೇಶನ ಆತ್ಮ ಹತ್ಯೆಯ ಸ್ಥಳವಷ್ಟೆ
ಕೊಳೆತು
    ಕಪ್ಪಿಟ್ಟ ನೀರೊಳಗೆ
ಬಿಂದಿಗೆಗಾಗಿ ಬಾಗಿದ
ಗೆಳತಿಯರ ನೆರಳಿಲ್ಲ
ಕಲ್ಲು ಕಲ್ಲಿನ ಮೇಲೆ ಬಿದ್ದ
ಬಳೆಚೂರು ಕಳೆದುಕೊಂಡಿವೆ ಎಲ್ಲ

ಸತ್ತು ಸ್ವರ್ಗ ಸೇರದೆ
ಊರು ಸೇರಿದ ಅಜ್ಜಿಗೆ ಹೇಳಬೇಕಿದೆ ನಾನು
ಊರಿಗೆ ಬಂದವಳು ನೀರಿಗೆ ಬರುತ್ತಿಲ್ಲ ಅಜ್ಜಿ
ನೀರಿಗೇ ಬರದವಳು
ಎದೆಯ ಮೇಲೊಂದು ನಿರಿಗೆ

ಹಾಕುವುದು ಹ್ಯಾಗೆ ಅಜ್ಜಿ?'’

 --------------------------------------------------------------------- (ಸಶೇಷ, ನಿರೀಕ್ಷಿಸಿ-ಭಾಗ-೨)