ಒಂದು
ಕ್ಷಣ, ನೀನು ಬೆಂಕಿ
ಮತ್ತೊಂದು
ಕ್ಷಣ ಮೃದು ಇಬ್ಬನಿ
ನೀನು
ವಜ್ರ,
ಒಮ್ಮೆ
ನೀನು ದೇವದೂತ,
ಮತ್ತೆ
ಪುನಃ ಶಿಲಾಮೂರ್ತಿ
-ಅಲಿ
ಸರ್ದಾರ್ ಜಾಫ್ರಿ
------------------------------------------------------------------------------------------------------------
![]() |
ತಾಯಿ-ನಾಯಿ |
ನಮ್ಮ ತೋಟದ ಮನೆಯಲ್ಲೊಂದು ನಾಯಿ
ಇತ್ತು. ಬೇಸಿಗೆ ರಜೆಗೆ ನಾವೆಲ್ಲ
ತೋಟಕ್ಕೆ ಹೋದಾಗ ನಮ್ಮನ್ನು ಸ್ವಾಗತಿಸುತ್ತಿದ್ದ
ಅದರ ಸಂಭ್ರಮ ಹೇಳಲು ಇಂದು
ಭಾಷೆ ಸೋಲುತ್ತದೆ. ಅದರ ಹೆಸರು ಕಾಶಿ.
ತೆಳ್ಳಗೆ-ಬೆಳ್ಳಗೆ, ಕಣ್ತುಂಬ ಕರುಣೆ, ಪ್ರಿತಿ
ತುಂಬಿಕೊಂದು ಮುದ್ದಿಸಲು ಮೈಮೇಲೆ ಬರುತ್ತಿದ್ದ ಅದರ
ಪ್ರೀತಿ ಈಗಲೂ ಸ್ಮರಣಿಯ.
ಪ್ರೀತಿಗೆ ನಾಯಿ ಹಾಗೂ ತಾಯಿ
ಎರಡೂ ಶ್ರೇಷ್ಠ ಉದಾಹರಣೆಗಳೇ. ತಾಯಿಗೆ
ಹೇಸಿಗೆ ಇಲ್ಲ, ನಾಯಿಗೆ ನಾಚಿಕೆ
ಇಲ್ಲ. ಎದೆ ತುಂಬಿ ಬಂದರೆ
ಸಾಕು ಇವರ ಪ್ರೀತಿಯ ಅಭಿವ್ಯಕ್ತಿಗೆ
ನಿಶ್ಚಿತ ಸ್ಥಳವೆಂಬುದಿಲ್ಲ ಔಪಚಾರಿಕತೆಯ ನಾಟಕೀಯ ಲೆಪನವಿಲ್ಲ.ತೋಟದ ಮನೆಯ ಮುಂದೆ, ಕಣಜದಲ್ಲಿ
ರಾಶಿ ಇಟ್ಟುಕೊಂಡು, ಮಕ್ಕಳು ಆಳು, ದನಗಳು
ಮಲಗಿಕೊಂಡಾಗ, ಈ ಕಾಶಿ ಎಚ್ಚರವಾಗಿದ್ದು
ಕಾಯುತ್ತಿರುತ್ತಿತ್ತು. ಮನೆಯವರ್ಯಾರಾದರೂ ಊರಿಗೆ ಹೊರಟರೆ ತೋಟದ
ಮನೆಯಿಂದ ಬಸ್ಟ್ಯಾಂಡಿನವರೆಗೂ ಚಕ್ಕಡಿಯ ಕೆಳಗೆ ಊರ
ನಾಯಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತ ಹೋಗಿ ಕಳುಹಿಸಿ ಬರುತ್ತಿತ್ತು.
ರಾತ್ರಿ ದಿಂಬು ಮರೆತು ಮಲಗಿದ್ದರೆ ಅದರ ಬೆನ್ನನ್ನೇ
ದಿಂಬಿನಂತೆ ಬಳಸಿಕೊಂಡು ನಮ್ಮ ತಲೆ ಇಡಬಹುದಾಗಿತ್ತು.
ನಾವು ಕಾಶಿಗೆ ಕೈ ಹಚ್ಚುವಂತಿರಲಿಲ್ಲ.
ಅದು ಕಲ್ಲೋ, ಮುಳ್ಳೋ ತುಳಿದುಕೊಂಡು
ಕಾಲಿಗೆ ಏನಾದರೂ ಗಾಯ ಮಾಡಿಕೊಂಡು
ಬಂದರೆ ಆಗ ಮಾತ್ರ ಕಾಶಿ
ತನ್ನ ಉಪಚಾರಕ್ಕೆ ಅವಕಾಶ ಮಾಡಿಕೊಡುತ್ತಿತ್ತು. ಮೂರು
ತಿಂಗಳು ಬೇಸಿಗೆ ರಜೆ ಮುಗಿಸಿಕೊಂಡು
ನಾವು ಚಕ್ಕಡಿಯಲ್ಲಿ ಊರಿಗೆ ಹೊರಟಾಗ ನೂರಾರು
ಗಾವುದ ನಡೆದುಕೊಂಡು ಕಾಶಿ ನಮ್ಮನ್ನು ಕಳುಹಿಸಲು
ಬಂದು ಬಸ್ಟ್ಯಾಂಡಿನಲ್ಲಿ ಮುಖ ಸಪ್ಪೆ ಮಾಡಿಕೊಂಡು
ನಿಲ್ಲುವುದನ್ನು ನೆನಪಿಸಿಕೊಂಡರೆ ಈಗಲೂ ಮರುಕು ಹುಟ್ಟುತ್ತದೆ.
ಲಂಕೇಶರ ಆ ಹಾಡು ಎದೆ
ಇರಿಯುತ್ತದೆ –
`ಎಲ್ಲಿದ್ದೆ ಇಲ್ಲೀ ತನಕ
ಎಲ್ಲಿಂದ ಬಂದೆವ್ವಾ'
ಮತ್ತೊಂದು ಬೇಸಿಗೆ ರಜೆಗೆ ಹೋದಾಗ
ಎದುರುಗೊಳ್ಳಲು ಕಾಶಿ ಬರಲಿಲ್ಲ. ತೋಟದ
ಮೆನೆಗೆ ಹೋದರೆ ಅಲ್ಲಿಯೂ ಇರಲಿಲ್ಲ.
ಆ ಮೇಲೆ ಗೊತ್ತಾಯಿತು
ಕಾಶಿ ಸತ್ತು ಹೋಗಿದೆ ಎಂದು.
ಛೇ! ನಾನು ನಿಮಗೆ ಹೇಳಬೇಕಾದುದೇ
ಬೇರೆ, ಹೇಳುತ್ತಿರುವುದೇ ಬೇರೆಯಾಯಿತೇ? ಮೂರು ದಶಕಗಳ ಈ
ಶಬ್ಧ ಸಂಸಾರದಲ್ಲಿ ಸಾಗಿಹೋದ ನನಗೆ ಕೆಲವೊಮ್ಮೆ
ಹಾಗೆ ಅನ್ನಿಸುವುದೇ ಇಲ್ಲ. ಎಲ್ಲವೂ ಎಲ್ಲೋ
ಒಂದೆಡೆ ಒಂದೇ ಆಗಿದೆ. ಕಥೆ0iÉುೀ ಆಗಿದೆ. ಈಗಾಗಲೇ
ಹೇಳಿದಂತೆ ಈ ನಾಯಿಯ ಹೆಸರು
ಮತ್ತು ನನ್ನ ಅಜ್ಜಿಯ ಹೆಸರು
ಒಂದೇ ಆಗಿರುವುದರಿಂದ ಇಷ್ಟೆಲ್ಲ ಹೇಳಬೇಕಾಯಿತೇನೊ. ಬರೀ ಹೆಸರು ಒಂದಾಗಿದ್ದರೆ
ಇಷ್ಟು ವಿವರಣೆ ನೀಡುವ ಅವಶ್ಯಕತೆ
ಇರಲಿಲ್ಲ. ಹೆಸರನ್ನು ಮೀರಿ ಇಡೀ ಬದುಕನ್ನೇ
ಒಂದು ಸಿದ್ಧಾಂತಕ್ಕಾಗಿ ನಿಸ್ವಾರ್ಥದ ಗಾಳಿಪಟದಂತೆ ಹಾರಿಸಿ ಬಿಟ್ಟಾಗ ಅವರ
ಕುರಿತು ಮಾತೂ ಮಹಾಕಾವ್ಯವಾಗುತ್ತದೆ.
ಈ
ಬದುಕಿನ ಮಿತಿಯೇಇದು?
ಅಥವಾ ದುರಂತವೋ? ಅಜ್ಜಿ ತೀರಿದ ಮೇಲೆ
ನನ್ನವ್ವನ ಊರಿಗೆ ಹೋಗುವುದೇ ಅಪರೂಪವಾಯಿತು.
ಖಂಡಿತ ನಮಗಾಗಿ ಹಸಿಯದ ಜೀವ
ಇಲ್ಲ ಎನ್ನುವುದಾದರೆ ಯಾವ ಊರಿನ ಗತಿಯೂ
ಅಷ್ಟೆ. ನನ್ನಜ್ಜಿಯಂತೂ ಒಂದು ಜನ್ಮಗಳೂ ಅಳಿಸಿ
ಹಾಕಲಾಗದ ವಿಚಿತ್ರ ಜೀವ. ಅವಳಿಗಾಗಿ
ಹಂಬಲಿಸಿ ನಾನೆಂದೂ ಆ ಊರಿಗೆ
ಹೋಗದಿದ್ದರೂ ಅವಳ ಊರು ಮಾತ್ರ
ನನಗೆ ಈ ಜನ್ಮಕ್ಕೆ ಸಾಕೆನ್ನುವಷ್ಟು
ಅನುಭವಗಳ ಬುತ್ತಿ ಕಟ್ಟಿಕೊಟ್ಟಿದೆ. ಅಬ್ಬಾ!
ಕಾಡು ಮಲ್ಲಿಗೆಯಂಥ ನನ್ನಜ್ಜಿಗೆ ಎಂಥ ಸಂಭ್ರಮದ ಬಾಳು,
ಕೈಗೊಂದು-ಕಾಲಿಗೊಂದು ಆಳು, ಊರ ತುಂಬ
ಮಾತು ಹಬ್ಬದ ಗೆಳತಿಯರು, ಒಂದರ್ಥದಲ್ಲಿ ಅವಳೆಂದರೆ ಆ ಊರೇ. ಅಥವಾ
ಹೀಗೆನ್ನಿ- ಆ ಊರೆಂದರೆ ಇವಳೇ.
ಈಗ ಅವಳು ತೀರಿ ಬರೋಬ್ಬರಿ
ನಾಲ್ಕು ವರ್ಷ. ಈಗಲೂ ನಾಲ್ಕಾರು
ಬಾರಿ ನಾನು ಅವಳ ನೆನಪು
ಕೆದಕುತ್ತ ಅತ್ತ ಹೋಗಿ ಬಂದಿರಬಹುದು.
ಒಂದು ಕ್ಷಣ, ಏರಿಯ ಮೇಲಿನ
ಆಕೆಯ ಊರ ಬಸ್ಟಾಂಡಿನೊಳಗೆ ಇಳಿದು
ಪಕ್ಕದಲ್ಲಿಯೇ ಇರುವ ಸ್ಮಶಾನದೊಳಗಿನ ಆಕೆಯ
ಸಮಾಧಿಯನ್ನು ಕಂಡು ಮನೆಯ ಕಡೆ
ಹೊರಟಾಗ ಎಂದೋ ಹೀಗೊಂದು ಕವಿತೆ
ಹರಳುಗಟ್ಟಿತು-
"ಒಲೆಗೆ ಬೆಂಕಿಯಿಡದೆ
ಮೊಲೆಗೆ ನಾಚಿಕೆ ಪಡದೆ
ಹಡೆದದ್ದೇ ಹುಡುಗಾಟಕ್ಕೆನ್ನುವಂತಿದ್ದ,
ಅಜ್ಜ ಮುಟ್ಟಿದ ಮೈಗಳಿಗೆಲ್ಲ
ಉಡಿಯಕ್ಕಿ ಹಾಕಿ ಪಗಡಿಯಾಡಿದ್ದ
ನನ್ನಜ್ಜಿ
ಈಗ ಹೇಸಿಗೆಯ ಹೊರೆ ಇಳಿಸಿ
ಸಂತೆ ಗೆದ್ದು ನಿಶ್ಚಿಂತಳಾದಳು"
ಊರೊಳಗೆ 'ದೊಡ್ಮನೆ' ಕಾಶಿಬಾಯಿ ಎಂದೇ ಖ್ಯಾತಳಾಗಿದ್ದ ನನ್ನಜ್ಜಿ
ಆ ಮನೆತನದ ಹೆಸರಿಗೆ
ಒಂದು ಅಪವಾದದಂತಿದ್ದಳು. ಕರ್ರನೆಯ ಬಣ್ಣ, ದೇಹ
ಅತೀ ಸಣ್ಣ. ಪೀಚಲು ಪಾತ್ರ.
ಆದರೆ ಇವಳೆಂದರೆ ಬರೀ ಮಾತು. ಹೀಗೆ
ಏನೆಲ್ಲ ನೆನಪುಗಳ ಸುರುಳಿ ಬಿಚ್ಚುತ್ತಾ
ಮನೆಯಲ್ಲದ ಮನೆ ಮುಟ್ಟಿದಾಗ ಮೂರು
ಸಂಜೆ. ಹುಟ್ಟಿದೂರಿನಲ್ಲಿ ಹೊರಗಿನವನಂತೆ ಹೊರಟ ನನ್ನನ್ನು ನೋಡಿ
ಅಲ್ಲಲ್ಲಿ ಹೆಂಗಸರು, ಒಳಗೊಳಗೇ ದೊಡ್ಮನೆ ಕಾಶಿಬಾಯಿ
ಮೊಮ್ಮಗ ಇರಬಹುದು ಎಂದಾಡುತ್ತಿದ್ದ ಮಾತುಗಳು
ಕಿವಿಗಪ್ಪಳಿಸುತ್ತಿದ್ದವು.
ಧೂಳು, ಧೂಳಾದ ಊರಿನ ದಾರಿ
ಕ್ರಮಿಸಿ, ಮನೆ ಮುಟ್ಟಿ ಮುಖಮಾರ್ಜನೆ
ಮಾಡಿಕೊಂಡು ಹೊರಗಡೆ ಬಂದು
ಕುಳಿತರೆ ಕಾಡುವ ಎರಡು ವಸ್ತುಗಳು-
ಒಂದು ಆ ಕರಿಕಲ್ಲಿನ, ದೊಡ್ಡ
ಬಾಗಿಲಿನ, ಈಗ ಸಂಪೂರ್ಣ ಹಾಳು
ಬಿದ್ದ ನನ್ನಜ್ಜಿಯ ಮನೆ; ಇನ್ನೊಂದು ಐದು
ಗಡಗಡಿಯ ಕಲ್ಲಿನಲ್ಲೇ ಕಟ್ಟಿದ ವಿಶಾಲ ಬಾವಿ.
ಒಂದು ಕಾಲಕ್ಕೆ ನನ್ನಜ್ಜಿಯ
ಮನೆಯ ಪಕ್ಕದ್ದೇ ಈ ಬಾವಿ. ಆದರೆ
ಈಗ ಸ್ವಲ್ಪ ದೂರ ದೂರವಾಗಿವೆ.
ಯಾಕೆಂದರೆ ಇವೆರಡರ ಮಧ್ಯದಲ್ಲಿದ್ದ ತಿಪ್ಪೆಯಲ್ಲಿ
ಹೊಸದಾಗಿ ಒಂದು ಗಿರಣಿ ಹುಟ್ಟಿಕೊಂಡಿದೆ.
ಸಣ್ಣ ಊರಿನ ಸಂದಿ-ಸಂದಿಗಳಲ್ಲೆಲ್ಲ
ನಲ್ಲಿಗಳು ಬಂದು ಈ ಹಳೆಯ
ಬಾವಿ ಅನಾಥವಾಗಿದೆ. ಆಳವಲ್ಲದ ಈ ಭಾವಿಯ
ಅಳಿದುಳಿದ ನೀರು ಮಲೆತು, ಗಣಾಚೌತಿಯಲ್ಲಿ
ಗಣೇಶನಿಗೆ ಮೋಕ್ಷ ತೋರಿಸುವ ಆತ್ಮಹತ್ತ್ಯಾ
ಕೇಂದ್ರವಾಗಿದೆ ಅಷ್ಟೆ. ನಸುಕಿನ ಮೂರು
ಗಂಟೆಯಾದರೆ ಸಾಕು ಕೀರಿಡಲು ಸುರುವಾಗುತ್ತಿದ್ದ
ಬಾವಿಯ ಗಡಗಡೆಗಳೆಲ್ಲ ಬೆಳಗಾಗುವುದರಲ್ಲಿ ಬೆವಿಯುತ್ತಿದ್ದವು, ಆದರೆ ಈಗ ತುಕ್ಕು
ಹಿಡಿದಿವೆ. ಒಂದು ಕಾಲಕ್ಕೆ ಎಂಥ
ರೋಮಾಂಚನದ ಕೇಂದ್ರವಾಗಿತ್ತು ಈ ಬಾವಿ. ಹೊಸದಾಗಿ
ಬಂದ ಸೊಸೆಯಂದಿರು, ಆಗಷ್ಟೆ ಮೈನೆರೆದ ಹುಡುಗಿಯರು,
ಮೈ ಮೂಲೆ ಮೂಲೆಗೂ ಮುಪ್ಪು
ವಕ್ಕರಿಸಿದ್ದರೂ ದೇವರಿಗೆ ಮಡಿ ನೀರೇ
ಬೇಕೆಂದು ಬರುತ್ತಿದ್ದ ಮುದುಕಿಯರು, ಹುಡುಗಿಯರ ಹೊಸ ಮುಖಗಳಿಗೆ ಹಸಿ
ಹೆಚ್ಚಿಸಿಕೊಂಡು ಅಲ್ಲಿಂದಲೇ ಕಾಯುತ್ತ
ಕುಳಿತಿರುತ್ತಿದ್ದ ಚಪಲ ಚನ್ನಿಗರಾಯರು, ಅಯ್ಯೋ,
ಈ ನೆನಪುಗಳಿಗೆ ಬರವಿಲ್ಲ
ಬಿಡಿ. ಆದರೆ ಈಗ ರಂಡೆ-ಮುಂಡೆಯರಂತೆ ಹಾಳು ಹೊಡೆಯುತ್ತಿದೆ ಈ
ಬಾವಿ. ಊರಿಗೆ ಬಂದವಳು ನೀರಿಗೇ
ಬರುತ್ತಿಲ್ಲ. ಇದನ್ನು ನೆನೆದು ನಾನೇ
ಬರೆದ ಕವಿತೆ-
![]() |
ನೀರೆ-ನಿರಿಗೆ |
ಈಗ
ಅಜ್ಜಿಯ ಊರಲ್ಲಿ
ಗೆಜ್ಜೆಯ ಸದ್ದೇ ಇಲ್ಲ
ಎಲ್ಲ ಹಾಳು-ಬೀಳು, ಧೂಳು
ಬೆಳದಿಂಗಳಿಗೆ
ಬಾಯ್ತೆರೆದು ಮಲಗಿದರೆ
ಕೇಳುವ ಧ್ವನಿ ಗೋಳು
ಈಗ ಎಲ್ಲ ಹೀಗೆ
ಇಣುಕಿ ನೋಡಿದರೆ
ಅವರವ್ವನನ್ನು ನುಂಗಿ ನೀರು ಕುಡಿದ
ಬಾವಿಯ ಬಾಯಿಗೇ
ಈಗ ಬೋರ್ ನೀರಿನ ಜೀವದಾನ
ಗಡಗಡಿಗಳು ತುಕ್ಕಾಗಿ
ಕೊಡದ ಕಟ್ಟೆಗಳೆಲ್ಲ ಒಡೆದು ಹೋಗಿ
ಬಾವಿ ಈಗ
ಗಣೇಶನ ಆತ್ಮ ಹತ್ಯೆಯ ಸ್ಥಳವಷ್ಟೆ
ಕೊಳೆತು
ಕಪ್ಪಿಟ್ಟ ನೀರೊಳಗೆ
ಬಿಂದಿಗೆಗಾಗಿ ಬಾಗಿದ
ಗೆಳತಿಯರ ನೆರಳಿಲ್ಲ
ಕಲ್ಲು ಕಲ್ಲಿನ ಮೇಲೆ ಬಿದ್ದ
ಬಳೆಚೂರು ಕಳೆದುಕೊಂಡಿವೆ ಎಲ್ಲ
ಸತ್ತು ಸ್ವರ್ಗ ಸೇರದೆ
ಊರು ಸೇರಿದ ಅಜ್ಜಿಗೆ ಹೇಳಬೇಕಿದೆ ನಾನು
ಊರಿಗೆ ಬಂದವಳು ನೀರಿಗೆ ಬರುತ್ತಿಲ್ಲ ಅಜ್ಜಿ
ನೀರಿಗೇ ಬರದವಳು
ಎದೆಯ ಮೇಲೊಂದು ನಿರಿಗೆ
ಹಾಕುವುದು ಹ್ಯಾಗೆ ಅಜ್ಜಿ?'’
--------------------------------------------------------------------- (ಸಶೇಷ, ನಿರೀಕ್ಷಿಸಿ-ಭಾಗ-೨)
No comments:
Post a Comment