Sunday 15 September 2013

ಕೌದಿಯಂತೆ ಕಾವ್ಯ !!!





ಕೌದಿಯ ಒಂದು ಭಯಾನಕ ಕಥೆ. ಚಿಕ್ಕವನಿದ್ದಾಗ ಕೇಳಿ ನಾ ಬೆಚ್ಚಿ ಬಿದ್ದಿದ್ದೆ. ನನ್ನ ತಾಯಿಯ ತವರಿನಲ್ಲಿ ನನ್ನದೇ ವಯಸ್ಸಿನ ಹುಡುಗನೊಬ್ಬನಿಗೆ ಹುಚ್ಚು ನಾಯಿ ಕಡಿದಿತ್ತಂತೆ. ವೈದ್ಯಕೀಯ ಸೌಲಭ್ಯಗಳಿಲ್ಲದ ದಿನಗಳಲ್ಲಿ ಹಳ್ಳಿಗರಿಗೆ ಔಷಧಿಗಳ ಬಗೆಗೆ ಏನು ಮಾಹಿತಿಗಳಿರಲಿಲ್ಲ. ಇರುವ ಔಷಧಿಗಳೂ ಅವರ ಆರ್ಥಿಕ ಸ್ಥಿತಿಗೆ ದಕ್ಕುವಂತಿರಲಿಲ್ಲ. ಹುಚ್ಚುನಾಯಿ ಕಡಿದ ಹುಡುಗ ನೆರೆ-ಹೊರೆಯ ಒಂದಿಬ್ಬರನ್ನು ಕಚ್ಚಿಬಿಟ್ಟ. ಮನುಷ್ಯನಂತಿದ್ದರೂ ನಾಯಿ ಕಡಿತದಿಂದಾಗಿ ದಿನವೆಲ್ಲ ಬೊಗಳುತ್ತಾ, ಗುರಾಯಿಸುತ್ತಾ, ಜೊಲ್ಲು ಸುರಿಸುತ್ತಾ, ಗೋಡೆಗೆ ಹೊಡೆದುಕೊಂಡು ತಲೆಯಿಂದ ರಕ್ತ ಸುರಿಸಿಕೊಳ್ಳುತ್ತಾ ಇರುತ್ತಿದ್ದ ಆತನ ಬಗೆಗೆ ಚಿತ್ರ-ವಿಚಿತ್ರ ಕಥೆಗಳು ಹುಟ್ಟಿಕೊಂಡವು. ಆತನ ಉಪಟಳವನ್ನು ತಾಳದೆ, ಜೊತೆಗೆ ಹಳ್ಳಿಗರಿಂದ ಬರುವ ಟೀಕೆ, ಅಪಮಾನ, ಒತ್ತಡಗಳಿಂದ ಮುಕ್ತರಾಗಲು ಬಯಸಿದ ಹುಡುಗನ ತಂದೆ-ತಾಯಿಗಳು ಕೌದಿಯನ್ನು ನೀರೊಳಗೆ ಅದ್ದಿ, ಮುಖದ ಮೇಲೆ ಹೊಚ್ಚಿ ಆತನನ್ನು ಕೊಂದುಬಿಟ್ಟರಂತೆ. ಇದು ಹಸಿ ಕೌದಿಯ ಕತೆ.
ರಜೆಯಲ್ಲಿ ನಮ್ಮಜ್ಜನ ಊರಿಗೆ ಹೋಗುತ್ತಿದ್ದೆವು. ಅಜ್ಜನ ಊರೆಂದರೆ ಹರಕು ಬಾಯಿ, ಹರಕು ಕಚ್ಚೆ, ಹಾಗೆಯೇ ಹರಕು ಕೌದಿಗಳ ಮಹಾ ಸಾಮ್ರಾಜ್ಯ. ಕೌದಿಗಳ ಭಂಡಾರ. ಮುಖಕ್ಕೆ ಬರುವ ಕೌದಿ ಕಾಲಿಗೆ ಬರುತ್ತಿರಲಿಲ್ಲ. ಕಾಲು ಕಾಯುವ ಕೌದಿ ಮುಖ ಮುಚ್ಚುತ್ತಿರಲಿಲ್ಲ. ಮಧ್ಯ-ಮಧ್ಯ ಇಡೀ ಆಕಾಶ ದರ್ಶನ ಮಾಡಿಸುವ ಕಿಂಡಿಗಳು, ಹುರುಕಿನಿಂದ ನರಳುತ್ತಿದ್ದ ನನ್ನ ತಮ್ಮನೊಬ್ಬನ ಕುಂಡಿಗಂತೂ ಕೌದಿಯೇ ಎಲ್ಲವೂ. ಅಕೀತಿ(ಅಕ್ಷಯ ತೃತಿಯ)ಊರ ಬಸವಣ್ಣನ ಜಾತ್ರೆಯಲ್ಲಿ ದೊಡ್ಡಾಟ ನೋಡುವಾಗಲಂತೂ ನಮ್ಮ ಠಿಕಾಣಿ ಕೌದಿ ಇದ್ದವರ ಪಕ್ಕದಲ್ಲಿಯೇ. ಅತ್ತ ದೊಡ್ಡಾಟ ಶುರುವಾಗಬೇಕು, ಮೆಲ್ಲಗೆ ನಾವಿತ್ತ ಕೌದಿಯ ಬಿಸುಪಿಗೆ ಶರಣಾಗಬೇಕು. ಅಂದಹಾಗೆ, ಮಳೆಗಾಲದ ರಾತ್ರಿಗಳಲ್ಲಿ ಅಂಗಳದಲ್ಲಿ ಮಲಗಿರುತ್ತಿದ್ದ ನಮ್ಮ ಕೌದಿಗಳು ತೋಯ್ದು ನಾವು ಮುಖದ ಮೇಲೆ ಹೊದ್ದುಕೊಂಡು ಹಾಗೆ ಮಲಗಿರುತ್ತಿದ್ದರೆ, ಹಿರಿಯರು ಬಂದು ಅವುಗಳನ್ನು ಮುಖದ ಮೇಲಿಂದ ಸರಿಸಿಹೋಗುತ್ತಿದ್ದರು. ಯಾಕೆಂದರೆ ಹುಚ್ಚುನಾಯಿ ಕಡಿದವನಂತೆ ನಾವು ಉಸಿರುಗಟ್ಟಿ ಸತ್ತುಹೋಗಬಹುದೆಂಬುದೇ ಅವರ ಚಿಂತೆ(?). ಇವು ಕೌದಿಯ ನೆನಪಿನ ಕೆಲವು ಝಲಕುಗಳು ಅಷ್ಟೇ.
  ಗೊತ್ತಿರಲಿ, ಕೌದಿಯಂತೆಯೇ ಕಾವ್ಯ, ನಿಮಗೆ ಯುವಕಬಿ ಜಾನ್ಕೀಟ್ಸ್ ಬಗೆಗೆ ಅದೇನು ಗೊತ್ತೊ ನನಗೆ ಗೊತ್ತಿಲ್ಲ. ಈತ ಮಹಾನ್ ವ್ಯಸನಿ. ಕಾವ್ಯ, ಪ್ರೀತಿ ಮತ್ತು ಕಲ್ಪನೆಗಳ ಮಹಾನ್ ವ್ಯಸನಿ. ಕೌದಿಗಾಗಿ ಬಟ್ಟೆ ಪೇರಿಸುವ ಹೆಂಗಸಿನಂತೆ, ಕಾವ್ಯ ಎನ್ನುವ ಕೌದಿಗಾಗಿ ಎಂತೆಂತಹ ಜೀವನಾನುಭವಗಳನ್ನು ಪೇರಿಸಿಟ್ಟಿದ್ದ ಹುಡುಗ ಕೊನೆಗೆ ಅದರೊಳಗೇ ಉಸಿರುಗಟ್ಟಿ ಸತ್ತ. ಕಾವ್ಯಕ್ಕಾಗಿ ಪ್ರಾಣವನೇ ತೆತ್ತ.  
ವಿಶೇಷ ನೋಡಿ, ನಮ್ಮ ತಾಯಿಯ ಸುತ್ತ ಕೌದಿ ಹೊಲೆಯುವವರ ದೊಡ್ಡ ಬಳಗವೇ ಇತ್ತು. ಟೇಲರ್ ಅಂಗಡಿಗಳ ಸುತ್ತ, ಸುತ್ತಿ ಸುತ್ತಿ ನಿರುಪಯುಕ್ತವಾಗಿ, ಕಾಲುಕಸವಾಗಿ, ತುಂಡು ತುಂಡಾಗಿ ಬೀಳುತ್ತಿದ್ದ ಬಣ್ಣ ಬಣ್ಣದ ಬಟ್ಟೆಗಳನ್ನು ತಂದು ಸಂಗ್ರಹಿಸಿ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗಾಗಿಯೂ ಕೌದಿ ಹೊಲಿಸುವ ತಾಯಂದಿರ ಗುಂಪಿನಂತೆ, ದಂಡು-ದಂಡಾದ ಕೌದಿ ಹೊಲೆಯುವ ಅಜ್ಜಿಯರ ಗುಂಪೂ ಇತ್ತು. ಇಬ್ಬರು ಮೂವರು ಇಂಥವರು ಸೇರಿಕೊಂಡು, ಬಣ್ಣ ಬಣ್ಣದ ತುಂಡುಗಳನ್ನು ಅಂದ-ಚಂದವಾಗಿ ಜೋಡಿಸಿ, ಅವುಗಳ ಮೇಲೆಯೇ ಗುಬ್ಬಿ ಕಾಲು, ಬಾವಿ, ಪಗಡಿಯಾಟದ ಚೌಕಾ, ನಕ್ಷತ್ರಗಳ ಹಿಂಡು, ಏನೆಲ್ಲ ಮೂಡಿಸುತ್ತಿದ್ದ ಅವರ ಕಲ್ಪನೆ, ಧ್ಯಾನಸ್ಥತೆ, ನನ್ನನ್ನು ಇಂದಿಗೂ ಎಷ್ಟೊಂದು ಕಾಡುತ್ತವೆ. ಶಾಲೆಗೆ ಹೋಗಬೇಕಾದ ಅವಸರದಲ್ಲಿಯೂ ಅದನ್ನು ಮರೆತು ಕೌದಿ ಹೊಲೆಯುವ ಕಾಡು ಹೆಂಗಸರ ಮುಂದೆ ಕುಕ್ಕುರುಗಾಲಿನಲ್ಲಿ ಕುಳಿತು ಬೈಯಿಸಿಕೊಂಡ ನೆನಪಿದೆ ನನಗೆ. ಆದರೆ ಈಗನಿಸುತ್ತಿದೆ, ಬಹುತೇಕ ಇಲ್ಲೇ ಎಲ್ಲೋ ನನ್ನ ಕಾವ್ಯದ ಒಳ ಬೇಗುದಿ ಮಾಗುವ ಪರಿ ಶುರುವಿಟ್ಟುಕೊಂಡದ್ದು. ಅಂದು ಅಂತರ್ಮುಖಿಯಾದುದು ಇಂದು ಬಹಿರಂಗವಾಗಿ ಪ್ರಕಟಗೊಳ್ಳುತ್ತಿದೆ ಎನ್ನಬಹುದೇ? ಗೊತ್ತಿಲ್ಲ.
 ನನ್ನ ಕಬೋರ್ಡುಗಳಲ್ಲಿ ಬೇರೆ ಬೇರೆ ಭಾಷೆ, ದೇಶ, ಸಂಸ್ಕೃತಿಗಳಿಗೆ ಸಂಬಂಧಪಟ್ಟ ಹಲವು ಪ್ರಕಾರದ ಪುಸ್ತಕಗಳು ಇರುವಂತೆಯೇ ನನ್ನೊಂದಿಗೆ ಕೌದಿಗಳೂ ನಿರಂತರ ಸಾಗಿಬಂದಿವೆ. ರೈತಾಪಿ ಹಿನ್ನೆಲೆಯ ನನ್ನ ಇಬ್ಬರೂ ಅಜ್ಜಂದಿರ ಮನೆಗಳಲ್ಲಿ ಕೌದಿ ಇಲ್ಲದೆ ಕಳೆದ ನನ್ನ ಬಾಲ್ಯದ ದಿನಗಳೇ ಇಲ್ಲ. ಉತ್ತರ ಕರ್ನಾಟಕದ ಕಡು ಬೇಸಿಗೆಯ ನಮ್ಮೂರುಗಳಲ್ಲಿ ಯಾರ ಮಾನೆಯಲ್ಲಿಯೂ ಕೌದಿ ಇರಲಿಲ್ಲ ಎಂದು ಹೇಳಲಾಗದು. ಅದೊಂದು ರೀತಿ ಸಾವಿಲ್ಲದವರ ಮನೆಯಿಂದ ಸಾಸಿವೆ ತರುವ ಹುಚ್ಚು ಯತ್ನ. ಹರಿದ ಕೌದಿ, ಹೊಲಸು ಕೌದಿ, ಹುಟ್ಟಿನಿಂದ ಸಾವಿನವರೆಗೆ ನೀರೇ ಕಾಣದ ಕೌದಿ, ಮುಪ್ಪಿಗೆ ಕೊನೆಯ ಆಸರೆಯಾಗಿ, ಅಂತ್ಯಸಂಸ್ಕಾರದಲ್ಲೂ ಸಂಗಾತಿಯಾಗಿ ಚಿತೆ ಏರಿದ ಕೌದಿ, ಹೊಸ ಸಂಸಾರಗಳ ಹೊಚ್ಚಿಟ್ಟ ಕೌದಿ,ಸುರಗಿಯೊಳಗೆ ಶೃಂಗಾರಗೊಂಡ ಕೌದಿ, ಮಕ್ಕಳು-ಮೊಮ್ಮಕ್ಕಳ ದೀಪ ಹಚ್ಚಿಟ್ಟ ಕೌದಿ, ಅಬ್ಬಬ್ಬಾ!! ಎಷ್ಟೊಂದು ಬಗೆ ಕೌದಿ. ಎಷ್ಟೊಂದು ಸೊಗಸಾದ ಬದುಕು. ನಿಜಕ್ಕೂ ಒಂದರ್ಥದಲ್ಲಿ ಕೌದಿ ಎಂದರೆ ಬದುಕೇ ಹೌದು.
ತುಂಡು ತುಂಡುಗಳ ಮಧ್ಯದ ಬೆಸುಗೆಯಿಂದ ಹುಟ್ಟುವ ಕೌದಿ ಮಾತ್ರ ಬರೀ ತುಂಡಲ್ಲ. ಅದು ಅಖಂಡ. ಅದು ಅಪೂರ್ಣವಲ್ಲ. ಪೂರ್ಣ-ಸಂಪೂರ್ಣ. ಅದಕ್ಕೆ, ಹೇಳಿದೆ ಕೌದಿ ಕವಿತೆಯಂತೆ ಅಥವಾ ಕವಿತೆ ಕೌದಿಯಂತೆ. ಹೇಗಾದರೂ ಅಂದುಕೊಳ್ಳಿ. ಕವಿತೆ ಹುಟ್ಟಿಕೊಳ್ಳುವುದು ಕೌದಿಯಂತೆಯೆ. ಮುಂದೊಮ್ಮೆ ಸಿದ್ಧವಾಗಬಹುದಾದ ಕೌದಿಗಾಗಿ ಎಂದೋ ಬಣ್ಣ ಬಣ್ಣದ ಬಟ್ಟೆಯ ತುಂಡುಗಳು ಸಂಗ್ರಹವಾಗುವಂತೆಯೇ ಕಾವ್ಯದ ಸಾಮಗ್ರಿಯೂ ಹಲವು-ಕಾಡುವ ನೆನಪು, ಸಂವೇದನೆ, ಗಾಯ, ರಮಿಸುವಿಕೆ, ಅಚ್ಚರಿ, ಆಲೋಚನೆ ಹೀಗೆ ಏನೆಲ್ಲ ಸ್ವರೂಪದಲ್ಲಿ ನಮ್ಮೊಳಗೆ ಸಂಗ್ರಹವಾಗತೊಡಗುತ್ತವೆ. ಹೀಗೆ ಕೌದಿಯಂತೆ ಒಂದೊಮ್ಮೆ ಕವಿತೆಯಾಗಿ ಒಡಮೂಡುತ್ತದೆ. ಆಗ ಹುಟ್ಟಿಕೊಂಡದ್ದು ನನ್ನ ಇರುವಷ್ಟು ಕಾಲ... ಇರುವಷ್ಟೇ ಕಾಲ!.
ಕೌದಿಗಾಗಿ ಸಂಗ್ರಹವಾದ ತುಂಡುಗಳಂತೆ ಸಂಕಲನದ ನನ್ನ ಸಂವೇದನೆಗಳು 2009 ರಿಂದ 2013ವರೆಗೆ ನಿರಂತರ ಸಂಗ್ರಹಗೊಂಡು ಈಗ ನಿಮ್ಮ ಕೈಯಲ್ಲಿವೆ. ಇಲ್ಲಿಯ ಅನೇಕ ಕವನಗಳು ಕಾಲ ಕಾಲಕ್ಕೆ ನಾಡಿನ ಅನೇಕ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ಗುಂಡು, ಗೆಳೆಯ-ಗೆಳತಿಯರ ತೀರ ಖಾಸಗಿ ಗೋಷ್ಠಿಗಳಲ್ಲಿ ಹಾಡಲ್ಪಟ್ಟಿವೆ, ಓದಲ್ಪಟ್ಟಿವೆ, ಹೇಳಲ್ಪಟ್ಟಿವೆ ಹೀಗೆ ಏನೆನೋ.
ಅಂದಹಾಗೆ ಮುಖಪುಟಕ್ಕಾಗಿ ನಮ್ಮ ಬೇಲೂರಿನ ಪಕ್ಕದ ವಿಜಯದುರ್ಗದ ಮರವೊಂದರ ಪೆÇೀಟೊವನ್ನು ಇಲ್ಲಿ ಬಳಸಿಕೊಂಡಿದ್ದೇನೆ. ನಾನೇನು ವೃತ್ತಿಪರ ಫೆÇೀಟೊಗ್ರಾಫರ್ ಅಲ್ಲದಿದ್ದರೂ ಹೆಚ್ಚು-ಕಡಿಮೆ ಬರಹವನ್ನೇ ವೃತ್ತಿಯಾಗಿಸಿಕೊಂಡಿರುವ, ನನ್ನ ಕಲ್ಪನೆಗೆ ಸಮೀಪವೆನಿಸುವ ಕೆಲವು ಚಿತ್ರ, ಭಂಗಿ, ಬದುಕುಗಳನ್ನು ಕ್ಯಾಮರಾದ ಕಣ್ಣೊಳಗೆ ಸೆರೆಹಿಡಿಯುವ ಹವ್ಯಾಸವನ್ನು ಇತ್ತಿಚಿಗೆ ರೂಢಿಸಿಕೊಳ್ಳುತ್ತಿದ್ದೇನೆ. ವಿಚಿತ್ರ ಗೊತ್ತೆ? ವಿಜಯದುರ್ಗದ ಬೋಳು ಮರಕ್ಕೆ ಸಂಕಲ್ಪವೃಕ್ಷ ಎಂದು ಬೇರೆ ಬೋರ್ಡು ನೇತುಹಾಕಿದ್ದಾರೆ. ವಿಪರ್ಯಾಸವೆಂದರೆ ಇದೇ ಇರಬಹುದು, ಅಲ್ಲವೇ? ನೀವು ಎತ್ತಕಡೆಯಿಂದ ನೋಡಿದರೂ ಹಸಿರು ಕಾಣದ, ವಿಶಾಲ ಬೊಡ್ಡೆಯ ಆಕಾಶದೆತ್ತರದ, ಅಸಂಖ್ಯಾತ ರೆಂಬೆ ಕೊಂಬೆಗಳ  ಮರದಲ್ಲಿ ಹಕ್ಕಿ ಪಕ್ಷಿಗಳು ಮಾತ್ರ ಗೂಡು ಕಟ್ಟಿವೆ. ನಿತ್ಯ ಮನುಷ್ಯರು ಓಡಾಡಿ ಸಾಯಬೇಕಾದ ಕಾಲ್ದಾರಿಗಳ ಮೇಲಿನ ಹುಲ್ಲು ಗರಿಕೆಯನ್ನೂ ಹಠÀ ತೊಟ್ಟು  ಹಸಿರಾಗಿಸುವ ಮಲೆನಾಡು ಅದ್ಯಾವ ಕಾರಣಕ್ಕೆ ಮರವನ್ನು ತನ್ನ ಮಡಿಲಲ್ಲಿ ಹಾಕಿಕೊಳ್ಳಲಿಲ್ಲವೊ?
ಸಂಕಲನದ ಹಲವಾರು ಕವಿತೆಗಳಲ್ಲಿ ನನ್ನ ಮರ ಮರಮರಿಸುತ್ತದೆ, ಮಾತಾಡುತ್ತದೆ, ಮತ್ತು ಕವಿತೆಯಾಗಿ ಕರಗುತ್ತಲೇ ಮರಗುತ್ತದೆ. ಮರವಿಲ್ಲದ ಮನುಷ್ಯರ ಸಂಸಾರ ಎಷ್ಟು ಭೀಕರವಾಗಿರುತ್ತಿತ್ತು ಎಂದು ಬೆಚ್ಚಿಬೀಳುವಂತಾಗಿಸುತ್ತದೆ.