Monday 5 May 2014

ಸಫ್ದರ್ ಹಸ್ಮಿ: ಧ್ವನಿ ಇದ್ದರೆ ಪ್ರತಿಧ್ವನಿ (Safdar Hashmi)



     “ಪ್ರಪಂಚವೇ ನಮ್ಮ ದೇಶವೆನ್ನುವುದಾದರೆ ಆದ್ಯತೆಯ ದೃಷ್ಟಿಯಿಂದ ಭಾರತದ ಹಿಡಿ ಮಣ್ಣಿಗೆ ನನ್ನ ಮೊದಲ ನಮನ. ಜಗತ್ತಿನ ಮನುಕುಲವೆಲ್ಲವೂ ನಮ್ಮ ಸಹೋದರರೆನ್ನುವುದಾದರೆ ಭಾರತದ ನನ್ನ ಸಹೋದರರಿಗೆ ಮೊದಲ ಸ್ಥಾನ.” ಇವು ಮಕ್ಕಾದಿಂದ ಭಾರತಕ್ಕೆ ಬಂದು, ತಮ್ಮ ಇಡೀ ಬದುಕನ್ನು ಭಾರತೀಯ ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪಕ್ಕಾಗಿ ಕಳೆದ ಮೌಲಾನಾ ಅಬ್ದುಲ್ ಕಲಾಂರ ಸಾಲುಗಳು. ಹೀಗೆ ಈ ದೇಶ ಜಾತಿ-ಮತ ಪಂಥಗಳ ಭೇದವಿಲ್ಲದೇ ಹರಿದು ಬಂದ ಇಂಥ ಹಲವಾರು ಕನಸುಗಾರರಿಂದ ಕೈ ಗೂಡಿದ ಸಾಧನೆ.  ಮುಸ್ಲಿಂ ಎಂದರೆ ‘ಭಯೋತ್ಪಾದಕ' ಎನ್ನುವ ಅರ್ಥದ ಸಂಕುಚಿತತೆಯಲ್ಲಿ ಬದುಕುವ ನಮಗೆ ‘ಮುಸ್ಲಿಂ' ಎಂದರೆ ಅಲಿ ಸಹೋದರರು, ಆಜಾದರುಗಳು, ಗಫ್‍ರ್ ಖಾನ್, ಅಬ್ಬಾಸ್, ಕೈಫಿ ಹಾಗೂ ಸಾವಿರ ಸಾವಿರ ಸೂಫಿಗಳು, ದರವೇಶಿಗಳು ಎನ್ನುವುದೂ ಹೊಳೆಯಬೇಕು. ಮತಾಂಧರಿಂದ ಯಾವ ಮತವೂ ಮುಕ್ತವಾಗಿಲ್ಲ. ಮಧ್ಯಯುಗೀನ ಸಂದರ್ಭದಲ್ಲಿ ಬರುವ ಈ ಮುಸ್ಲಿಮರಕ್ಕಿಂತಲೂ ಮುಂಚೆ ದೇಶವೇನು ಬರೀ ಶಾಂತಿಯ ಬೀಡೆ ಆಗಿರಲಿಲ್ಲ. ಮನುಷ್ಯ ಮತ ಅಂಥವರ್ಯಾರಿಗೂ ಬೇಕಾಗಿಲ್ಲ. ಅಂದಹಾಗೆ ಸಾಲು ಸಾಲು ರಾಷ್ಟ್ರನಿಷ್ಠ ಮುಸ್ಲಿಂರಲ್ಲಿ ಈ ಒಬ್ಬನನ್ನು ನೀವು ಓದಲೇಬೇಕು.

 ಸಫ್ದರ್ ಹಸ್ಮಿ(Safdar Hashmi)
ಸಫ್ದರ್ ಹಸ್ಮಿ(Safdar Hashmi)
            ಈತನ ವಯಸ್ಸು ಕೇವಲ ಮುವತ್ತ್ನಾಲ್ಕು. ಅದು ನಮ್ಮ ವೈರಿಯೂ ಸಾಯಬಾರದ ವಯಸ್ಸಲ್ಲವೆ? ಕೊಲೆಯಂತಹ ಬರ್ಬರ ಶಿಕ್ಷೆಯನ್ನು ಎದುರಿಸಲು ಈತ ಮಾಡಿದ ಅಪರಾಧವೇನು? ಉತ್ತರ, ಈತ ಸತ್ತು ಹೋದ ಸಾಮಾನ್ಯರಲ್ಲಿ ಆತ್ಮಾಭಿಮಾನದ ಕಿಚ್ಚು ಹಚ್ಚಿದ್ದ, ಗುಡಿಸಲುಗಳಲ್ಲಿ ಬೆಳಕಿನ ಬುಡ್ಡಿ ದೀಪ ಬೆಳಗಿಸಿದ. ‘ಗಾಂವೊಸೆ ಶಹರ್ ತಕ್' ಎಂದು ಜನರನ್ನು ಬಾಚಿ ತಬ್ಬಿ ‘ಹಲ್ಲಾ ಬೊಲ್’(Halla Bol) ಎಂದು ಮೂಲಭೂತವಾದಿಗಳ, ಬಂಡವಾಳಶಾಹಿಗಳ, ಪಟ್ಟಭದ್ರ ರಾಜಕಾರಣಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದ. ಅಂದಹಾಗೆ, ಈತನ ಹೆಸರು ಹಸ್ಮಿ, ಸಫ್ದರ್ ಹಸ್ಮಿ(Safdar Hashmi). ರಂಗಭೂಮಿಗೆ ಈತನೇ ಒಂದು ಪರ್ಯಾಯ. 
ಹಾಡು ಹಗಲೇ ದೆಹಲಿಯ ಜನಸಾಮಾನ್ಯರಿಂದ ತುಂಬಿದ್ದ ಪ್ರದೇಶದಲ್ಲಿ ಈತನ ಕೊಲೆಯಾಯಿತು. ಕೊನೆಯುಸಿರೆಳೆದ ಕ್ಷಣದಲ್ಲಿ
            12 ಎಪ್ರಿಲ್ 1954 ರಲ್ಲಿ ದೆಹಲಿಯಲ್ಲಿ ಹುಟ್ಟಿ, 2 ಜನೆವರಿ 1989 ರಲ್ಲಿ ಕೊಲೆಯಾದ ಈತ ಹನಿಫ್ ಮತ್ತು ಖಮರ್ ಆಜಾದ್ ಹಸ್ಮಿಯವರ ಮಗ. ಶೈಕ್ಷಣಿಕ ಸಾಧನೆ ಅಲಿಘಡ್ ಮತ್ತು ದೆಹಲಿಗಳಲ್ಲಿ. ಮನೆ ತುಂಬ ಉದಾರವಾದಿ ಮಾರ್ಕ್ಸ್ ಚಿಂತನೆಯ ವಾತಾವರಣ. ದೆಹಲಿಯ ಸೇಂಟ್ ಸ್ಟಿಫನ್ಸ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಸೇರಿಕೊಂಡ ಹಸ್ಮಿ ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿಯೇ ಸ್ನಾತಕ ಪದವಿಯನ್ನ ಪೂರೈಸಿದ. ಕಾಲೇಜು ದಿನಗಳಲ್ಲಿಯೇ ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ, ಸ್ಟುಡೆಂಟ್ ವಿಂಗ್ ಆಫ್ ಸಿಪಿಐ-ಎಮ್, ಕಿಸಾನ್ ಸಭಾ ಮತ್ತು ಇಪ್ಟಾ ಗಳೊಂದಿಗೆ ಬೆಳೆದು ಭಾರತದ ಈ ನೆಲದಲ್ಲಿ ಸಮಾನತೆಯ ಕನಸು ಕಂಡಿದ್ದ ಹಸ್ಮಿ, ತನ್ನದೇ ಆದ ಜಾತ್ಯಾತೀತ, ರಾಷ್ಟ್ರನಿಷ್ಠ ಗೆಳೆಯರ ವೇದಿಕೆಯನ್ನು ರೂಪಿಸುವ ದೊಡ್ಡ ಕನಸನ್ನು ಕಂಡಿದ್ದ. ಇದನ್ನು ಸಾಧಿಸಲು ಆತ ತೆಗೆದುಕೊಂಡ ಅವಧಿ ಕೇವಲ 21 ವರ್ಷ! ಅಂದರೆ, 1973 ರಲ್ಲಿ ‘ಜನ ನಾಟ್ಯ ಮಂಚ್'(ಜನಮ್) ಎನ್ನುವ ಜನಸಾಮಾನ್ಯರ ರಂಗ ವೇದಿಕೆಯನ್ನು ದೆಹಲಿಯಲ್ಲಿ ಹುಟ್ಟು ಹಾಕಿ ಹಸ್ಮಿ ಕಹಳೆ ಊದಿದ.
  
       ಇಂದಿರಾ ಗಾಂಧಿಯ ವಿರುದ್ಧ ಏಳು ದಿನಗಳವರೆಗೆ ನವದೆಹಲಿಯ ಬೋಟ್ ಕ್ಲಬ್ಬಿನ ಬಯಲಿನಲ್ಲಿ ‘ಕುರ್ಸಿ, ಕುರ್ಸಿ, ಕುರ್ಸಿ’
Halla Bol by Safdar Hashmi
Halla Bol by Safdar Hashmi
ಎನ್ನುವ ಬೀದಿ ನಾಟಕವನ್ನು ಪ್ರದರ್ಶಿಸಿದ, 1975ರ ತುರ್ತು ಪರಸ್ಥಿತಿಯ ಸಂದರ್ಭದಲ್ಲಿ ಘರ್‍ವಾಲ್, ಕಾಶ್ಮೀರ್ ಮತ್ತು ದೆಹಲಿ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಕೆಲಸ ಮಾಡುತ್ತ ಯುವಕರಲ್ಲಿ ವಿಚಾರ ಕ್ರಾಂತಿಗೆ ಆವ್ಹಾನ ನೀಡಿದ. 1979 ರಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸದಸ್ಯನಾದ, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಮತ್ತು ದ ಎಕನಾಮಿಕ್ ಟೈಮ್ಸ್‍ಗಳಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ, ವೆಸ್ಟ್ ಬೆಂಗಾಲ್ ಸರ್ಕಾರದ ಇನ್‍ಫರ್ಮೇಶನ್ ಅಧಿಕಾರಿಯಾಗಿ ದೆಹಲಿಯಲ್ಲಿ ಕಾರ್ಯ ನಿರ್ವಹಿಸಿದ, 1988 ರಲ್ಲಿ ರಷ್ಯಾದ ಕಾದಂಬರಿಕಾರ ಮ್ಯಾಕ್ಸಿಮ್ ಗಾರ್ಕಿಯ ‘ಎನೆಮಿಸ್’ ಮತ್ತು ಸಮಾಕಾಲೀನ ರಂಗಕರ್ಮಿ ಹಬೀಬ್ ತನ್ವಿರರೊಂದಿಗೆ ಸೇರಿಕೊಂಡು ‘ಮೊತೆರಮ್ ಕಾ ಸತ್ಯಾಗ್ರಹ’ ಎನ್ನುವ ನಾಟಕಗಳನ್ನು ಪ್ರದರ್ಶಿಸಿದ. 1978 ರಲ್ಲಿ ‘ಜನಮ್’ದ ಮೂಲಕ ಎರಡು ಲಕ್ಷ ಕಾರ್ಮಿಕರನ್ನು ಒಂದೆಡೆ ಒಗ್ಗೂಡಿಸಿ ‘ಮಷಿನ್’ ಮತ್ತು ‘ಗಾಂವೊಸೆ ಶಹರ್ ತಕ್’ ಎನ್ನುವ ಬೀದಿ ನಾಟಕಗಳ ಮೂಲಕ ಅವರನ್ನು ಬಡಿದೆಬ್ಬಿಸಿದ. ಸರ್ಕಾದಲ್ಲಿರುವ ಜಾಡ್ಯವನ್ನು ಅವಹೇಳಿಸುತ್ತ ‘ಹತ್ಯಾರೆ’ ಮತ್ತು ‘ಅಪಹರಣ ಬೇಚಾರೆ ಕೆ’ ಎನ್ನುವ ಪ್ರದರ್ಶನಗಳನ್ನು ನೀಡಿದ. ಮಹಿಳಾ ದೌರ್ಜನ್ಯವನ್ನು ಖಂಡಿಸಿ ‘ಔರತ್’ ಹೀಗೆ ಒಟ್ಟು 1973 ರಿಂದ ಈತನ ಕೊಲೆಯ ದಿನವಾದ 2 ಜನೆವರಿ 1989 ವರೆಗೆ 4024 ನಾಟಕಗಳನ್ನು ಪ್ರದರ್ಶಿಸಿ ದಾಖಲೆ ಸೃಷ್ಠಿಸಿದ. ಇವುಗಳಲ್ಲಿ ಇಪ್ಪನಾಲ್ಕು ಬೀದಿ ನಾಟಕಗಳು. ಇಂಥವನೊಬ್ಬ ನಮ್ಮೊಂದಿಗೆ ಇದ್ದನೆಂದು ಈಗಲೂ ನಂಬಲಾಗುತ್ತಿಲ್ಲವಲ್ಲ!
               
       ಹಸ್ಮಿಯ ಹೋರಾಟದ ಬದುಕನ್ನು ಗಮನಿಸಿದಾಗ ನನ್ನನ್ನು ಕಾಡಿದ ಪ್ರಶ್ನೆ ಈತನಿಗೊಂದು ವ್ಯಯಕ್ತಿಕ ಬಾಳು ಎನ್ನುವುದಿತ್ತೆ? ಈತ ಎಂದಾದರೂ ನಿದ್ರಿಸಿದನೇ? ಇವುಗಳಿಗೊಂದು ಉತ್ತರ ಸಾಕ್ಷಿ ಸಮೇತವಾಗಿ ದೊರೆತದ್ದು 2002 ರಲ್ಲಿ. ಭಾರತೀಯ ಭಾಷಾ ಅಧ್ಯಯನ ಸಂಸ್ಥೆ ಮೈಸೂರಿನಲ್ಲಿ ಸಹಾಯಕ ಸಂಶೋಧಕನಾಗಿ ಭಾರತೀಯ ಮಹಿಳಾ ರಂಗಭೂಮಿಗಾಗಿ ಆಗ ಕೆಲಸ ಮಾಡುತ್ತಿದ್ದ ನಾನು ರಂಗಭೂಮಿಗೆ ಸಂಭಂದಪಟ್ಟ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದೆ. ಪಕ್ಕದಲ್ಲಿ ಬಾಚದ ತಲೆಯ, ಬಿಳಿ ಸಮವಸ್ತ್ರದ , ಎತ್ತರ ಕಾಯದ ಮಹಿಳೆಯೊಬ್ಬರು ಕುಳಿತ್ತಿದ್ದರು. ಕೆಲವು ಕ್ಷಣಗಳ ನಂತರ ಗೊತ್ತಾಯಿತು ಅವರೇ ಮಾಲಾ ಹಸ್ಮಿ, ಪೂರ್ಣ ಹೆಸರು ಮಲಯಶ್ರೀ ಹಸ್ಮಿ. ಹುತಾತ್ಮ ಸಫ್ದರ್ ಹಸ್ಮಿಯ ರಂಗ ಸಂಗಾತಿ, ಬಾಳ ಸಂಗಾತಿಯೂ ಕೂಡ. ಇಂಡಿಯನ್ ನ್ಯಾಶ್‍ನಲ್ ಕಾಂಗ್ರೆಸ್ಸಿನ ಗೂಂಡಾಗಳಿಂದ 1 ಜನೆವರಿ 1989 ರಲ್ಲಿ ‘ಹಲ್ಲಾ ಬೋಲ್’ ಬೀದಿ ನಾಟಕದ ಪ್ರದರ್ಶನ ವೇಳೆ, ಗಂಡ ಸಫ್ದ್‍ರ್ ಹಸ್ಮಿ ದಾಳಿಗೊಳಗಾಗಿ, ಜನೆವರಿ 2 ರಂದು ಕೊನೆಯುಸಿರೆಳೆದರೂ ಮತ್ತೆ ಜನೆವರಿ 4 ರಂದು ಅದೇ ಭೀಕರ ಸ್ಥಳದಲ್ಲಿ ‘ಜನಮ್’ನ ಕಲಾವಿದರುಗಳೊಂದಿಗೆ ನಾಟಕವನ್ನು ಮುಂದುವರೆಸಿದ, ಆ ಮೂಲಕ ಸಫ್ದರ್ ಹಸ್ಮಿಯನ್ನು ದಂತ ಕಥೆಯಾಗಿಸಿದ ದಿಟ್ಟ ಮಹಿಳೆ ಮಲಯಶ್ರೀ ಹಸ್ಮಿ. ಆತನ ಅವಸಾನವಾದ 15 ವರ್ಷಗಳವರೆಗೂ ಕೋರ್ಟಿಗೆ ಅಲೆದಾಡಿ ತಪ್ಪಿತಸ್ಥರನ್ನು ಬಯಲಿಗೆಳದಾಕೆ. ಆತನ ಕನಸಿನ ಮುಂದುವರಿಕೆಯಾಗಿ ನಮ್ಮೊಂದಿಗೆ ಉಳಿದುಕೊಂಡಾಕೆ.
 
Safdar and Malayashri Hashmi
Safdar and Malayashri Hashmi
         ‘ಹಲ್ಲಾ ಬೋಲ್’ ಆಧರಿಸಿ 2008 ರಲ್ಲಿ ಸಿನಿಮಾ ಮಾಡಿದ. 1998 ರಿಂದ ಕೇರಳದಲ್ಲಿ ಸಫ್ದ್‍ರ್ ಹಸ್ಮಿ ನಾಟ್ಯ ಸಂಘಮ್ ಎನ್ನುವ ಸಂಸ್ಥೆಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಲಾ ತರಬೇತಿಯನ್ನು ನೀಡಲಾಗುತ್ತಿದೆ. ಲಖನೌನಲ್ಲಿ ಸಫ್ದರ್ ಹಸ್ಮಿ ಅವಾರ್ಡ್ ಫಾರ್ ಹ್ಯುಮನ್ ರೈಟ್ಸ್ ನೀಡಲಾಗುತ್ತಿದೆ. ಭಾರತದ ಮತ್ತೋರ್ವ ರಂಗಕರ್ಮಿ ಭಿಶಮ್ ಸಹಾನಿ ಸಫ್ದರ್ ಹಸ್ಮಿ ಮೆಮೋರಿಯಲ್ ಟ್ರಸ್ಟ್ (ಸಹಮತ್) ಸ್ಥಾಪಿಸಿದ್ದಾರೆ. ಹೀಗೆ ನೀರಿದ್ದರೆ ರಿಂಗಣ, ಧ್ವನಿ ಇದ್ದರೆ ಪ್ರತಿಧ್ವನಿ.
ಹಸ್ಮಿ ಹದ್ದಿನಂತೆ ನೂರಾರು ವರ್ಷ ಬದುಕಲಿಲ್ಲ. ಆದರೆ, ರಣಹದ್ದಿನಂತೆ ಪಟ್ಟಭದ್ರರ ಮೇಲೆ ಆಕ್ರಮಣ ಮಾಡಿದ. ಬಾಳುವ ಸಣ್ಣ ಲಕ್ಷಣವೂ ಇಲ್ಲದ ಅಂಥ ಬದುಕು ನಿರರ್ಥಕವೆಂದು ತಿಳಿದಿತ್ತೇನೊ. ಕೇವಲ 34 ವರ್ಷ ಬದುಕಿ ಅಗ್ನಿ ಪರ್ವತದಂತೆ ಸದಾ ನಿಗಿ ನಿಗಿಯಾಗಿದ್ದ ಸಫ್ದರ್ ಹಸ್ಮಿಯ ಪ್ರಭಾವ ಎಷ್ಟೊಂದು ತೀವ್ರವಾಗಿತ್ತು ಎನ್ನಲು ಕೆಲವು ನಿದರ್ಶನಗಳು. ಹೆಚ್ಚು ಕಡಿಮೆ ಈತನಂತೆಯೆ ನಿರಂತರ ಅಲೆಮಾರಿಯಾಗಿದ್ದ ಕಲಾವಿದ ಎಮ್.ಎಫ್ ಹುಸೇನ್. ಹಸ್ಮಿಯನ್ನು ಆಧರಿಸಿ ತೆಗೆದ ಒಂದು ಪೇಂಟಿಂಗ್ ಒಂದು ಮಿಲಿಯನ್ ಡಾಲರ್‍ಗೆ ಮಾರಾಟವಾಯಿತು ಎಂದರೆ ಹುಬ್ಬೆರಿಸಬೇಕಾಗಿಲ್ಲ. ಹಾಗೆಯೆ ಭಾರತದ ಶ್ರೇಷ್ಠ ಚಿತ್ರ ನಿರ್ದೇಶಕ ರಾಜಕುಮಾರ ಸಂತೋಷಿ ಹಸ್ಮಿಯ ಕೊನೆಯ ನಾಟಕ
 
              ಕಲಾಂರು ಜೀವನದುದ್ದಕ್ಕೂ ತಮ್ಮ ಭಾಷಣದಲ್ಲಿ ಒಂದು ಮಾತನ್ನು ಪದೇ ಪದೇ ಹೇಳುತ್ತಿದ್ದರು. "ನಾನೊಬ್ಬ ಭಾರತೀಯನಾಗಿ ಭಾರತವನ್ನು ಇಬ್ಬಾಗಿಸುವ ಭಾವನೆಯನ್ನೂ ತಿರಸ್ಕರಿಸುತ್ತೇನೆ. ಮುಸ್ಲಿಂನಾಗಿ ಪ್ರತ್ಯೇಕತಾ ವಾದವನ್ನು ಎಲ್ಲ ಕಾಲಕ್ಕೂ ಧಿಕ್ಕರಿಸುತ್ತೇನೆ. ಭಾರತವೇ ನನ್ನ ಮನೆ ಎಂದು ಸಾರಿಕೊಳ್ಳುವ ಹಕ್ಕನ್ನು ನಿರಂತರವಾಗಿ ಆನಂದಿಸುತ್ತೇನೆ." ಆದರೆ ಈ ಮಾತನ್ನು ಅಕ್ಷರಶಹ ಅನುಸರಿಸಿ ತೋರಿಸಿದಾತ ಸಫ್ದರ್ ಹಸ್ಮಿ. ರಂಗದಿಂದ ಆತ ನಿರ್ಗಮಿಸಿದ್ದಾನೆ ಆದರೆ ಆತನ ರಂಗರಿಂಗಣವಾದ ‘ಹಲ್ಲಾ ಬೋಲ್’ ಈಗಲೂ ಕೇಳಿಸುತ್ತಿದೆ.