Saturday 26 April 2014

ಉರುಳಿನ ಕೊರಳಿಗೆ ವಿಜಯದ ಮಾಲೆ....


                         
ಕಿಮ್ ಡೆ ಜಂಗ್
ಕಿಮ್ ಡೆ ಜಂಗ್
ಈತನೊಬ್ಬ ವಿಚಿತ್ರ ಪುಸ್ತಕ ಪ್ರೇಮಿ.ಈತನ ಬದುಕಿನ ಎಲ್ಲಾ ಕಾಲದ ಸಂಗಾತಿಗಳು ತತ್ವಜ್ಞಾನ, ರಾಜಕಾರಣ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳು, ದೇಶದಿಂದ ಉಚ್ಛಾಟನೆಗೊಂಡಾಗ, ತಲೆಮರೆಸಿಕೊಂಡಾಗ , ಅಪಹರಣಕ್ಕೊಳಗಾದಾಗ, ಗಲ್ಲುಗಂಬದ ಮುಂದೆ ನಿಂತಾಗ, ಹೀಗೆ ಎಲ್ಲ ತಲ್ಲಣದ ಕ್ಷಣಗಳಲ್ಲಿ ಆತ ಸಮಾಧಾನ ಕಂಡಿದ್ದೇ ಪುಸ್ತಕಗಳಲ್ಲಿ. ಕೋರಿಯಾದ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ, ಜಪಾನಿನ ಹಡಗು ಕಂಪನಿಯಲ್ಲಿ ಗುಮಾಸ್ತನಾಗಿ ಸೇರಿ, ಆನಂತರ ಬೆಳೆಯುತ್ತಾ ಅಲ್ಲಿಯ 15 ನೇ ರಾಷ್ಟ್ರಾಧ್ಯಕ್ಷ, ಶಾಂತಿಗಾಗಿ 2000 ನೇ ಇಸ್ವಿಯಲ್ಲಿ ನೊಬೆಲ್ ಪ್ರಶಸ್ತಿ ಪಡೆದಾತ, `ಏಷಿಯಾದ ನೆಲ್ಸನ್ ಮಂಡೆಲಾಎಂದು ಹೆಸರುವಾಸಿ. ಅಂದಹಾಗೆ ಈತನ ಹೆಸರು ಕಿಮ್ ಡೆ ಜಂಗ್. ‘ಹಂಗುಲ್ಈತನ ಕಾವ್ಯನಾಮ.
 ಜಂಗ್ ಪ್ರಗತಿಪರ ಆಲೋಚನೆಗಳ ಜಂಗ್(ಯುದ್ಧ)ನಲ್ಲಿ ಕಂಗಾಲಾದ ರಾಜಕೀಯ ವಿರೋಧಿಗಳು ಈತನನ್ನು 1954 ರಿಂದ 76 ರವರೆಗೆ 22 ವರ್ಷ ಬಂಧನದಲ್ಲಿಟ್ಟರು. 1978 ರಿಂದ 79ರವರೆಗೆ ಗೃಹ ಬಂಧನದಲ್ಲಿರಿಸಿದರು. ಇಲ್ಲಿಯ ಅನುಭವಗಳನ್ನು ಕುರಿತು `ಪ್ರಿಜನ್ ರೈಟಿಂಗ್ಸ್ಎನ್ನುವ ಕೃತಿ  ಬರೆದಿದ್ದಕ್ಕಾಗಿ 1989ರಲ್ಲಿ ಗಲ್ಲುಶಿಕ್ಷೆ ವಿಧಿಸಿದರು. ಆದರೆ ಭಿನ್ನವಾಗಿದ್ದ ದೈವದ ದಾರಿ ಉರುಳಿನ ಕೊರಳಿಗೆ ವಿಜಯದ ಮಾಲೆ ಹಾಕಿತು, ವಿಶ್ವದ ಶ್ರೇಷ್ಠ  ಮಾನವೀಯ ಚಿಂತಕರಲ್ಲಿ ಒಬ್ಬನನ್ನಾಗಿಸಿತು. ನಿಲ್ಲದ ಈತನ ಲೇಖನಿಮಾಸ್ ಪಾರ್ಟಿಸಿಪೇಟರಿ’, ‘ಪಿಸ್ಫುಲ್ ರಿಯುನಿಫಿಕೇಷನ್ಮತ್ತುಫಾರ್ ನ್ಯೂ ಬಿಗಿನಿಂಗ್ಕೃತಿಗಳನ್ನು ಬರೆಯುತ್ತಲೇ ಹೋಯಿತು. ಆತ್ಮಶಕ್ತಿಯ ಮುಂದೆ ಇದು ಸಾವೂ ಸೋಲುವ ಪರಿ!!

ನೇಣುಗಂಬದ ಮುಂದೆ ನಿಂತು, ಏಷಿಯಾದ ಸೌಂದರ್ಯವನ್ನು ಪ್ರಪಂಚಕ್ಕೆ ಸಾರಿ ಹೇಳುವ ಅವನ ಮಾತುಗಳನ್ನು ಕೇಳಿ, “ದಶಕಗಳ ಬದುಕನ್ನು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಕಳೆದಿದ್ದೇನೆ, ಪಾಶ್ಚಿಮಾತ್ಯ ಶೈಲಿಯ ಪ್ರಜಾಪ್ರಭುತ್ವ ಏಷಿಯಾಕ್ಕೆ ಹೊಂದುವುದಿಲ್ಲವೆಂದು ಕೇಳಿದ್ದೇನೆ. ಪಾಶ್ಚಾತ್ಯರ ಪ್ರಕಾರ ಅದಕ್ಕೆ ಏಷಿಯಾದಲ್ಲಿ ಬೇರುಗಳಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತಲೂ ನೂರಾರು ವರ್ಷಗಳ ಮುಂಚೆಯೇ ಏಷಿಯಾದಲ್ಲಿ ಜನರ ಬೌದ್ಧಿಕ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ಮಾನವ ಘನತೆಯ ಅನೇಕ ವಿಚಾರಗಳನ್ನು ಸ್ಪಷ್ಟಪಡಿಸಲಾಗಿದೆ. ಉದಾಹರಣೆಗೆ“The people are in heaven, the will of the people is the will of the heaven. Revere the people as you would heaven.” ಎಂದು. ಚೈನಾದ ರಾಜಕೀಯ ವಿಚಾರದ ಕೇಂದ್ರ ಅಂಶವೇ ಇದು. ಇದು 3000 ವರ್ಷಗಳ ಹಿಂದಿನಿಂದ ಕೋರಿಯಾಕ್ಕೂ ಗೊತ್ತಿದೆ. 5000 ವರ್ಷಗಳಿಂದ ಭಾರತ ಇದನ್ನು ಅನುಸರಿಸಿಕೊಂಡು ಬಂದಿದೆ. ಇಲ್ಲಿ ಹುಟ್ಟಿದಬೌದ್ಧಿಸಂಎಲ್ಲ ಕಾಲಕ್ಕೂ ಮಾನವ ಘನತೆ ಮತ್ತು ಹಕ್ಕುಗಳನ್ನು ಜಗತ್ತಿಗೆ ಸಂದೇಶವಾಗಿ ನೀಡಿದೆ.
ಇವುಗಳನ್ನು ಹೊರತುಪಡಿಸಿಯೂ ಇಲ್ಲಿಯೇ ಕೆಲವು ಸಂಸ್ಥೆಗಳೂ, ಸಿದ್ಧಾಂತಗಳು ಮನುಷ್ಯನನ್ನು ಯಾವಾಗಲೂ ಅತ್ಯಂತ ಗೌರವದಿಂದ ನೋಡುತ್ತ ಬಂದಿವೆ. ಕನ್ಪ್ಯೂಶಿಯಸ್ ವಿದ್ಯಾರ್ಥಿಯಾದ ಮೆನಷಿಯಸ್ ಬರೆಯುತ್ತಾನೆ“The king is son of heaven. Heaven sent him to serve the People with just rule. If he fails and oppresses the people, the people have the right, on behalf of heaven, to dispose of him.”ಇವುಗಳನ್ನು ಆಧರಿಸಿಯೇ ಎರಡು ಸಾವಿರ ವರ್ಷಗಳ ಮುಂಚೆ ಜಾನ್ಲಾಕ್ ತನ್ನThe Theory of the Social Contract and Civic Sovereignty  ಎನ್ನುವದನ್ನು ರೂಪಿಸಿದ. ಸ್ನೇಹಿತರೇ, ಪ್ರಜಾಪ್ರಭುತ್ವದ ತೊಟ್ಟಿಲು ಏಷಿಯಾ. ಇದಕ್ಕೆ ಯಾವುದೂ ಹೊಸತಲ್ಲ
ಚೈನಾ ಮತ್ತು ಕೋರಿಯಾಗಳಲ್ಲಿ ಬಂಡವಾಳಶಾಹಿತನ ಮತ್ತು ಊಳಿಗಮಾನ್ಯವನ್ನು ಜೀಸಸ್ ಹುಟ್ಟುವ ಮುಂಚಿನಿಂದಲೂ ವಿರೋಧಿಸಲಾಗಿದೆ. ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಿವಿಲ್ ಸರ್ವೀಸ್ ಮುಖಾಂತರವೇ ಆಯ್ಕೆ ಮಾಡುವುದು ಸಾವಿರಾರು ವರ್ಷಗಳಷ್ಟು ಹಳೆಯ ವಿಷಯ. ರಾಜನ ಅಧಿಕಾರವನ್ನು ಕೂಡ Auditing System  ಮೂಲಕವೇ ನಿಯಂತ್ರಿಸಲಾಗಿದೆ. ಪಶ್ಚಿಮವು ಡೆಮಾಕ್ರಸಿಗೆ ಒಂದು ಸಾಂಘಿಕ ಸ್ವರೂಪವನ್ನು ಕೊಡುವದರ ಮೂಲಕ ಭಿನ್ನವಾಗಿ, ಅದನ್ನೊಂದು ಸೌಹಾರ್ದದ, ಮಾನವ ಇತಿಹಾಸದ ಸಾರ್ವಕಾಲಿಕ ಪಥವನ್ನಾಗಿ ಮಾರ್ಪಡಿಸಿತಷ್ಟೇ.
ಏಷಿಯಾದಲ್ಲಿಯೇ ಹುಟ್ಟಿಕೊಂಡಿದ್ದ  ಪ್ರಜಾತಂತ್ರವನ್ನು ವ್ಯವಸ್ಥಿತವಾಗಿ ಮತ್ತು ಪ್ರಶಂಶನೀಯವಾಗಿ ಅನುಸರಣೆಗೆ ತರುವ ಎಲ್ಲ ವ್ಯವಸ್ಥೆಯನ್ನು ಪಾಶ್ಚಾತ್ಯರು ಮಾಡಿಕೊಂಡರು. ಯಾವತ್ತೋ ಥೈಲ್ಯಾಂಡ್, ಇಂಡಿಯಾ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕ, ಇಂಡೋನೇಷಿಯಾ, ಫಿಲಿಪೈನ್ಸ್, ಜಪಾನ್ ಮತ್ತು ಕೋರಿಯಾಗಳಲ್ಲಿ ಪ್ರಜಾಸತ್ತೆ ಅಸ್ತಿತ್ವದಲ್ಲಿದೆ. ಪಾಶ್ಚಾತ್ಯರು ಹೇಳುವ ಹಾಗೆ ಪ್ರಜಾಸತ್ತೆ ಇಲ್ಲಿ ಸಾಧ್ಯವಿಲ್ಲ ಎನ್ನುವುದಾಗಿದ್ದರೆ ಇಷ್ಟೊಂದು ರಾಷ್ಟ್ರಗಳಲ್ಲಿ ಹೇಗೆ ಸಾಧ್ಯವಾಯಿತು? ಗೊತ್ತಿರಲಿ, ತೈಮೂರನ ದಾಳಿಗಳನ್ನು ಲೆಕ್ಕಿಸದೇ ಜನರು ಇಲ್ಲಿ ಮತ ಚಲಾಯಿಸಿದ್ದಾರೆ. ಮಯನ್ಮಾರದಲ್ಲಿ ಆಂಗ್ ಸಾನ್ ಸುಕೈಡಾ ಬಂಧನದಲಿದ್ದೂ ಡೆಮಾಕ್ರಸಿಗಾಗಿ ಬಡಿದಾಡುತ್ತಿದ್ದಾಳೆ. ನನಗೆ ವಿಶ್ವಾಸವಿದೆ ಪ್ರಜಾತಂತ್ರ ನಮ್ಮ ದೀಕ್ಷೆ
ಕಿಮ್ ಡೆ ಜಂಗ್ನನ್ನು ಸಾವಿನ ಬಾಗಿಲಿಗೊಯ್ದು ನಿಲ್ಲಿಸಿದ ಕೃತಿ `ಪ್ರೀಜನ್ ರೈಟಿಂಗ್ಸ್’ .ಪ್ರತಿಯೊಬ್ಬ ಹೋರಾಟಗಾರನು ಓದಲೇಬೇಕಾದ ಕೃತಿ. ಅದು ಕಥೆಯಲ್ಲ, ಆತನ ಬದುಕು.

ಕಿಮ್ ಡೆ ಜಂಗ್
ಕಿಮ್ ಡೆ ಜಂಗ್

ಸಾಲುಗಳನ್ನು ಗಮನಿಸಿ, “ನನ್ನ ವೈಯಕ್ತಿಕವಾದ ಕೆಲವು ವಿಚಾರಗಳನ್ನು, ಸಂಕಷ್ಟದ ನೆನಪುಗಳನ್ನು ವ್ಯಕ್ತಪಡಿಸಲು ಒಂದಿಷ್ಟು ಅವಕಾಶ ಕೊಡಿ. ಕ್ರೂರವಾದ ಸರ್ವಾಧಿಕಾರಿಗಳ ಕೈಯಲ್ಲಿ ಐದು ಬಾರಿ ಸಾವಿಗೆ ಮುಖಾಮುಖಿಯಾಗಿ ನಿಂತಿದ್ದೇನೆ. ಜೈಲುಗಳಲ್ಲಿ  ಬದುಕಿನ ಆರು ವರ್ಷಗಳನ್ನು ಬಂಧಿಯಾಗಿ ಕಳೆದಿದ್ದೇನೆ. ನಲವತ್ತು ವರ್ಷಗಳವರೆಗೆ ನನನ್ನು ಗೃಹಬಂಧನದಲ್ಲಿ ಇಡಲಾಗಿದೆ. ಅನೇಕ ವರ್ಷ ಗಡಿಪಾರುಗೊಂಡಿದ್ದೇನೆ. ಆದಾಗ್ಯೂ ನಿಮ್ಮ ಬೆಂಬಲವಿgದೇ ಹೋಗಿದ್ದರೆ, ಹೋರಾಟ ಸಾಧ್ಯವಾಗುತ್ತಿರಲಿಲ್ಲ. ನಾನು ಶಕ್ತಿಯಾದದ್ದು ನಿಮ್ಮೆಲ್ಲರಿಂದ, ನನ್ನೊಳಗಿನ ಶಕ್ತಿಯ ಮೇಲಿನ ನಂಬಿಕೆಯಿಂದ.
ನಾನು ಬದುಕಿದ್ದೇನೆ, ಬದುಕುತ್ತೇನೆ, ದೇವರ ಕಾರುಣ್ಯ ನನ್ನೊಂದಿಗಿದೆ ಎಂದು ನಂಬುತ್ತೇನೆ. ಇದು ನನ್ನ ಅನುಭವದ ಮಾತಾಗಿದೆ. ಬಂಧುಗಳೇ, 1973 ಆಗಸ್ಟ್ನಲ್ಲಿ ಜಪಾನಿಗೆ ನಾನು ಗಡಿಪಾರುಗೊಂಡಾಗ, ಟೋಕಿಯೋದ ಹೋಟೆಲನಿಂದ ನನ್ನನ್ನು ಅಪಹರಿಸಲಾಯಿತುGovernment of South Koriaದಿಂದ ನನ್ನನ್ನು ವಿಚಾರಣೆಗೆ ಒಳಪಡಿಸಲಾಯಿತು. ಸುದ್ಧಿ ಜಗತ್ತನ್ನು ಬೆಚ್ಚಿಬೀಳಿಸಿತು. ನನ್ನನ್ನು ಒಂದು ಬೋಟಿನಲ್ಲಿ ಸಮುದ್ರದ ಯಾವುದೋ ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು. ಕೈಗಳನ್ನು ಕಟ್ಟಿ, ಕಣ್ಣುಗಳಿಗೆ ಕಪ್ಪು ಬಟ್ಟೆ ಬಿಗಿದು, ಬಾಯಿಯನ್ನು ಮುಚ್ಚಿಸಲಾಯಿತು. ಇನ್ನೇನು ಅವರು  ನನ್ನನ್ನು ಎತ್ತಿ  ಸಮುದ್ರಕ್ಕೆ ಎಸೆಯಬೇಕು ಅಷ್ಟೆ, ಆಗ ನನ್ನೆದುರು ಬಂದು ನಿಂತವ ಜೀಸಸ್. ನಾನು ಆತನನ್ನು ಎಷ್ಟೊಂದು ಸ್ಪಷ್ಟವಾಗಿ ಕಂಡೆ. ಆತನ ಹೆಗಲಿಗೆ ಬಿದ್ದು ರಕ್ಷಣೆಗಾಗಿ ಗೋಗರೆದೆ. ಕ್ಷಣದಲ್ಲಿ ಆಕಾಶದಿಂದ ಬಂದ ಏರೋಪ್ಲೇನ್ವೊಂದು ನನ್ನನ್ನು ಹೊತ್ತೊಯ್ದು, ಸಾವಿನಿಂದ ರಕ್ಷಿಸಿತು.
ನನ್ನ ಇನ್ನೊಂದು ಮುಖ್ಯವಾದ ನಂಬಿಕೆ ಇತಿಹಾಸದ ನ್ಯಾಯಕ್ಕೆ ಸಂಬಂಧಿಸಿದ್ದು. 1980ರಲ್ಲಿ ಮಿಲಿಟರಿ ಸರಕಾರ ನನಗೆ ಮರಣದಂಡನೆಯನ್ನು ವಿಧಿಸಿತು. ಅದಕ್ಕೂ ಮುಂಚೆ ಆರು ತಿಂಗಳು ಜೈಲಿನಲ್ಲಿದ್ದೆ. ಪ್ರತಿದಿನವೂ ನಾನು ಸಾವಿನ ದಾರಿ ಕಾಯುತ್ತಿದ್ದೆ. ಅನೇಕ ದಿನ ರಾತ್ರಿಯಾದರೆ ಭಯಗೊಳ್ಳುತ್ತಿದ್ದೆ. ಸಾವು ನನ್ನನ್ನು ಸುತ್ತುವರಿಯುತ್ತಿತ್ತು. ಆದರೆ ನನಗೆಲ್ಲೊ ಭಯ ಆದಾಗ್ಯೂ ಅಂತಿಮವಾಗಿ ನ್ಯಾಯಕ್ಕೆ ಜಯ ಸಿಗುತ್ತದೆ ನಂಬಿಕೆ. ಇದನ್ನು ಇತಿಹಾಸದಲ್ಲಿ ಓದಿದ್ದೆ. ಹೀಗಾಗಿ ಆಗಲೂ ಈಗಲೂ ನಾನು ಇತಿಹಾಸದ ಪ್ರೇಮಿ, ಎಲ್ಲ ಕಾಲದಲ್ಲಿ, ಎಲ್ಲ ಸ್ಥಳಗಳಲ್ಲಿ ಯಾವ ವ್ಯಕ್ತಿ ಮಾನವತೆಗೆ ಮತ್ತು ಜನತೆಗೆ ತನ್ನ ಬದುಕನ್ನು ಧಾರೆ ಎರೆದು ಪ್ರಾಮಾಣಿಕನಾಗಿ ಬದುಕಿರುವನೋ, ಅಂತಹ ವ್ಯಕ್ತಿ ದೊಡ್ಡ ವಿಜಯವನ್ನು ಸಾಧಿಸಲಿಕ್ಕಿಲ್ಲ, ಜೀವನದಲ್ಲಿ ಒಂದಿಷ್ಟು ಎಡರು ತೊಡರುಗಳನ್ನೂ ಎದುರಿಸಬಹುದು, ಆದರೆ ಅಂತಿಮ ಜಯ ಅವನದೇ. ಇತಿಹಾಸದಲ್ಲಿ ಅವನಿಗೊಂದು ಗೌರವದ ಸ್ಥಾನ ಇದ್ದೇ ಇರುತ್ತದೆಂದು ನನ್ನ ಬಲವಾದ ನಂಬಿಕೆHe who wins by injustice may dominate the present day but History will always judge him to be a shameful looser. Their can be no exception.
ರಾಜಕಾರಣಿಯಾಗಿಯೂ ತತ್ವಜ್ಞಾನಿಯಂತೆ ಮಾತನಾಡುವ ಕಿಮ್ ಡೆ ಜಂಗ್ ಸಾಲುಗಳು ಆತ್ಮದ ಅನುರಣನವಾಗಿರುವುದರಿಂದ ಅವು ಪ್ರತಿ ಬರಹಗಾರನಲ್ಲಿಯೂ ಹೋರಾಟದ ಕಿಚ್ಚು ಹೊತ್ತಿಸುತ್ತವೆ ಎನ್ನುವುದನ್ನು ಸಂಶಯಿಸಬಹುದೇ?


Monday 7 April 2014

ಆಗಸವಾಗುವೆ ನಾನು, ಮಳೆಯಾಗಿಸು ನೀನು

    ಏನೆಲ್ಲ ದಕ್ಕುವ ಜೀವಕ್ಕೆ ಕೆಲವೊಮ್ಮೆ ಒಂದು ಸಾಮಾನ್ಯ ಬದುಕೇ ದಕ್ಕದ ಸ್ಥಿತಿ ನೋಡಿದಾಗ ಅಯ್ಯೋ ಎನಿಸುತ್ತದೆ. ಅಂಥ ಬದುಕು ಈಕೆಯದು. ಈಕೆಯ ಹೆಸರು ಫ್ರಿದಾ, ಫ್ರಿದಾ ಕಾಹಲೊ. ಕೇವಲ 31 ವರ್ಷಗಳ ಬದುಕಾವಧಿಯನ್ನು ಪಡೆದು ಹುಟ್ಟಿದ್ದ ಈಕೆ ಶ್ರೇಷ್ಠ ಮೆಕ್ಸಿಕನ್ ಚಿಂತಕಿ, ಕಾವ್ಯಾರಾದಕಿ, ರೂಪಸಿ ಹಾಗೂ ಕುಂಚ ಕಲಾವಿದೆ. 20 ನೇ ಶತಮಾನದ ಮೆಕ್ಸಿಕನ್ ಕಲೆ ಮತ್ತು ಸಂಸ್ಕøತಿಯ ಅದ್ವಿತಿಯ ಪ್ರತಿನಿಧಿಯೆಂದೇ ಗುರುತಿಸಲ್ಪಟ್ಟವಳು. ಅವಳ ಮುಖವೆಂದರೆ ಹೆಣ್ತನ ಮತ್ತು ಮುಗ್ಧತೆಯ ಅಪರೂಪದ ಮೇಳೈಕೆ. ಇಪ್ಪತ್ತನೆಯ ಶತಮಾನದ ಕಲಾ ಪ್ರಪಂಚದಲ್ಲಿ ಈಕೆಯನ್ನು ಸರಿಗಟ್ಟುವ ಸುಂದರಿ, ಕಲಾವಿದೆ, ಚಿಂತಕಿ ಮೆಕ್ಸಿಕೊದಲ್ಲಿ ಮತ್ತೊಬ್ಬರಿರಲಿಲ್ಲ. ಇವಳೆಂದರೆ ಇವಳೆ. ಈ ಕಾರಣಕ್ಕಾಗಿ ಬದುಕಾವಧಿಯಲ್ಲಿಯೇ ಇವಳೊಂದು ದಂತ ಕಥೆ.
 
ಸ್ವಯಂ ಫ್ರಿದಾ ಕೂಡ ತನ್ನ ಸೌಂದರ್ಯವನ್ನು ಎಷ್ಟೊಂದು ಆರಾಧಿಸಿಕೊಂಡಿದ್ದಳೆಂದರೆ ಆಕೆ ತನ್ನ ಸೃಜನಶೀಲತೆಯ ತುಂಬ ತನ್ನ ರೂಪವನ್ನೇ ದಾಖಲಿಸಿಕೊಂಡಳು. ಲೋಕದೊಳಗಿದ್ದೂ ಒಂಟಿಯಾಗಿದ್ದಳು. ಈಕೆಯನ್ನು ನೋಡಿದ ಕವಿಯೊಬ್ಬ ಹೇಳಿದ್ದ 'ನಿನ್ನ ಅವಸಾನದ ನಂತರ ನಿನೇನು ನೋಡಲು ಸಾಧ್ಯ? ನಿನ್ನಿಂದ ಹೊರಟ ನಿನ್ನ ಬರಹ ಮತ್ತು ಬಣ್ಣಗಳು ಸಂಪೂರ್ಣ ನಿನೇ ಆಗಿವೆ. ಅಲ್ಲಿ ನಿನ್ನ ಹೊರತು ಮತ್ತಿನ್ನೇನೂ ಸಿಗಲಾರದು.' ಫ್ರಿದಾ ತನ್ನ ಕಲೆಗಳಲ್ಲಿ, ಪದಗಳಲ್ಲಿ ಅನ್ಯವನ್ನು ತುಂಬಲು ಯತ್ನಿಸಿದಷ್ಟೂ ಅದೇಕೊ ಅದು ಅವಳ ಆತ್ಮದ ಆಲಾಪನೆಯಾಗುತ್ತಲೇ ಹೋಯಿತು. ಅವಳು ಮೃದುವಾಗಲು ಯತ್ನಿಸಿದಾಗ ಅದು ಭಯಂಕರವಾಯಿತು, ಅವಳು ಭಯಂಕರವಾದಾಗÀ ಅದು ಹೂವಿನಷ್ಟು ಮೃದುವಾಯಿತು. ಅವಳು ಶಾಂತವಾದಾಗ ಅದು ಕದಡಿದ ಕೊಳ, ಅವಳು ಕದಡಲು ಯತ್ನಿಸಿದಾಗ ಅದು ಮಹಾಮೌನಿ. ಸಮಕಾಲೀನ ವಿಪ್ಲವಗಳ ರಾಜಕಾರಣ, ನಿತ್ಯ ಬಾಧಿಸುತ್ತಿದ್ದ ಅನಾರೋಗ್ಯ,ಆ ಚಿಕ್ಕ ವಯಸ್ಸಿನಲ್ಲೇ ಜನ್ಮಜಾತವಾಗಿ ಬಂದಿದ್ದ ಬೆನ್ನುಹುರಿ ನೋವು, ಹುರುಕು, ಸೊಟ್ಟ ಕಾಲು ತನ್ನೊಳಗಿನ ತಳಮಳ, ಹೆಜ್ಜೆ ಹೆಜ್ಜೆಗೂ ಕುಸಿಯುತ್ತಿದ್ದ ಪ್ರೀತಿ ಇವೆಲ್ಲವುಗಳಿಗೆ ಯಾವುದೋ ಹೊಸ ರೂಪ ಕೊಡಲು ಯತ್ನಿಸುತ್ತಿದ್ದ ಫ್ರಿದಾಳ ಸೃಜನಶೀಲತೆ ಅವಳನ್ನು ಭಿನ್ನವಾಗಿಯೇ ಬಿಂಬಿಸಿತು. ಇಂಥ ಫ್ರಿದಾ ತನ್ನ ಅವಸಾನದ ಐದು ದಶಕಗಳವರೆಗೂ ಪ್ರಪಂಚಕ್ಕೆ ಅರ್ಥವಾಗಲೇ ಇಲ್ಲ. ಅವಳ ಬಣ್ಣ ಮತ್ತು ಬರಹಗಳಂತೆಯೇ ಅವಳೂ ನಿಗೂಢವಾಗಿಯೇ ಉಳಿದಳು. ಆದರೆ ತೀರಿ ಹೋದ ಐದು ದಶಕಗಳ ನಂತರ ಕೋಟಿ ಕೋಟಿ ಮೊತ್ತದಲ್ಲಿ ಆಕೆಯ ಸಾಹಿತ್ಯ ಮತ್ತು ಚಿತ್ರಗಳ ಮಾರಾಟವಾಯಿತು.
    ವಿಚಿತ್ರವಾದ ರೋಗದಿಂದ ನರಳುತ್ತಿದ್ದ ಫ್ರಿದಾಳಿಗೆ ನರಳುವಿಕೆಯೂ ಒಂದು ವಿನೂತನ ಲೋಕವಾಗಿತ್ತು. ಆಕೆಯ ಕಲೆ ಮತ್ತು ಸಾಹಿತ್ಯಗಳಿಗೆ ವಿಶಿಷ್ಟ ಮನೋಭೂಮಿಕೆಯನ್ನು ಒದಗಿಸಿತ್ತು. ರೋಗವೇ ಬಣ್ಣವಾಗಿ, ಕಾವ್ಯವಾಗಿ ಅವಳನ್ನು ಕಾಡುವ ವೇಳೆಯಲ್ಲಿ ದುರ್ವಿಧಿ ಅವಳ ಬಾಳಿನಲ್ಲಿ ಮತ್ತೊಂದು ಆಟವನ್ನಾಡಿತು. ಇನ್ನೂ ಯೌವ್ವನದ ರೆಕ್ಕೆ ಬಲಿಯದ ವೇಳೆಯಲ್ಲಿ ಆಕೆ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಳು. ತನ್ನನ್ನೇ ತಾನು ಎಷ್ಟೊಂದು ಮೋಹಿಸಿದ ಫ್ರಿದಾಳಿಗೆ ಇದು ಬರೀ ಕಾಲಿನ ದುರಂತದ ಕಥೆಯಾಗಿರಲಿಲ್ಲ, 'ತಾನು' ಎಂಬ ಅಪ್ಪಟ ಶಿಲ್ಪದ ಭಗ್ನದ ವ್ಯಥೆಯಾಗಿತ್ತು. ಬಹುತೇಕ ಇದುವರೆಗೂ ಬರೀ ಪೇಂಟರ್ ಆಗಿದ್ದ ಫ್ರಿದಾಳಲ್ಲಿ ಕಾವ್ಯದ ಹೊಸ ಒರತೆ ಶುರುವಾದದ್ದು ಇಲ್ಲಿಂದಲೇ. ಇನ್ನೂ ಹುಟ್ಟದ ಹೂ, ಹಣ್ಣು ಮತ್ತು ಮಣ್ಣಿನ ಹಾಡು ಹೇಳುವಂತೆ, ಫ್ರಿದಾಳ ಅಂತರ್ಮುಖಿ ಆಲೋಚನೆಗಳು ಹೆಪ್ಪುಗಟ್ಟಲಾರಂಭಿಸಿದ್ದು ಇಲ್ಲಿಂದಲೆ. ಈಗ ಕಲೆ ಮತ್ತು ಸಾಹಿತ್ಯ ಆಕೆಯನ್ನು ಸಾವಿನೊಂದಿಗೆ, ಬದುಕಿನ ಖಾಲಿತನದೊಂದಿಗೆ, ಬಣ್ಣಗಳ ಬರಿದುತನದೊಂದಿಗೆ, ಶಬ್ಧಗಳೊಳಗಿನ ನಿಶ್ಯಬ್ಧದೊಂದಿಗೆ ಮುಖಾ-ಮುಖಿಯಾಗಿಸಲಾರಂಭಿಸಿದವು. ಇದೇ ವೇಳೆಯಲ್ಲಿ ಫ್ರಿದಾ ಅಲೆಝಾಂಡ್ರೊ ಗೊಮೇಝ್‍ನನ್ನು ಪ್ರೀತಿಸಿದ್ದು. ಈತ ಈಕೆಯ ಸಮವಯಸ್ಕ. ಆದರೆ ಅನಾನುಭವದ ಹುಡುಗ. ಆದರೆ ಬದುಕಿನ ಬಗ್ಗೆ ಅಪಾರ ಕಲ್ಪನೆಯನ್ನಿಟ್ಟುಕೊಂಡವ, ದ್ವಂದ್ವದಲ್ಲಿದ್ದವ. ದುರಂತಗಳ ದಾರಿಯಲ್ಲಿ ನಡೆದುಹೋಗುತ್ತಿದ್ದ ಫ್ರಿದಾ ಈತನಿಗೊಂದು ಅಪರೂಪದ ಪತ್ರ ಬರೆದಿದ್ದಾಳೆ. ವಯಸ್ಸಿನ ಲೆಕ್ಕಾಚಾರದಿಂದ ಹೊರಬಂದು ಸರಳವಾಗಿ ಆಲೋಚಿಸುವ ಪ್ರತಿಯೊಬ್ಬರೂ ಓದಲೇ ಬೇಕಾದ ಸಾಲುಗಳಿವು.
    "ಪ್ರಿಯ ಅಲೆಝಾಂಡ್ರೊ,
        ಪುಸ್ತಗಳ ಗುಡ್ಡೆ ಹಾಕಿಕೊಂಡು ಎಷ್ಟೊಂದು ಓದುತ್ತೀಯ? ಬದುಕಿನ ಅದ್ಯಾವ ರಹಸ್ಯವನ್ನು ಬೇಧಿಸಲು ಹೊರಟಿದ್ದೀಯ? ಸುಮ್ಮನಿರು, ಅದು ತನ್ನಷ್ಟಕ್ಕೇ ಅನಾವರಣಗೊಳ್ಳುತ್ತದೆ. ನನ್ನನ್ನು ನೋಡು, ಎನನ್ನೂ ಓದದ, ಬರೆಯದ ನನಗೆ ಆಗಲೇ ಈ ಬದುಕು ಅರ್ಥವಾಗಿಬಿಟ್ಟಿದೆ. ಸಾವು ಮತ್ತು ದುರಂತಗಳ ಪಲ್ಲಂಗದ ಮೇಲೆ ನನಗೀ ಅನುಭವ ದಕ್ಕಿದೆ. ಬಣ್ಣ ಮತ್ತು ನಿರಂತರ ತೊಳಲಾಟಗಳ ಮಧ್ಯ ಹೊರಟ ಹುಡುಗಿಯಾಗಿದ್ದ ನನಗೆ ಒಂದೊಮ್ಮೆ ಎಲ್ಲವೂ ಅಚ್ಚರಿ ಎನ್ನಿಸುತ್ತಿತ್ತು, ರಹಸ್ಯವೆನ್ನಿಸುತ್ತಿತ್ತು. ಆಗೆಲ್ಲ ಈ ನಿಗೂಢಗಳನ್ನು ಕುರಿತು ಆಲೋಚಿಸುವುದೇ ಆಟಗಿತ್ತು. ಆದರೆ ಅದೇನು ಘಟಿಸಿತೊ, ಮಂಜುಗಡ್ಡೆಯಂತೆ ಪಾರದರ್ಶಕವಾಗಿ ನಾನೀಗ ನೋವೆನ್ನುವ ನಕ್ಷತ್ರದ ಮೇಲೆ ವಿರಮಿಸಿದ್ದೇನೆ. ಇತ್ತೀಚೆಗೆ ಕೇವಲ ಕೆಲವು ಕ್ಷಣಗಳಲ್ಲಿ ಇಡೀ ಬದುಕಿನ ಅನುಭೂತಿಯಾದ ಸಮಾಧಾನ ನನಗೆ. ಕೆಲವೇ ಕ್ಷಣಗಳಲ್ಲಿ ನಾನು ಬೆಳೆದು, ನನ್ನ ಗೆಳತಿಯರೆಲ್ಲ ವಯಸ್ಕರಾದ ವಿಚಿತ್ರ ದೃಶ್ಯ. ಈಗ ಎಲ್ಲವೂ ಸರಳ, ಅತೀ ಸರಳ. ಈ ಪ್ರಪಂಚದಲ್ಲಿ ನಾನು ನೋಡಬೇಕಾದುದೇನಾದರು ಉಳಿದಿದೆ ಎಂದು ನನಗನ್ನಿಸುತ್ತಿಲ್ಲ. ಆದರೆ ಅವಸರದ ಈ ಬೆಳವಣಿಗೆಗೆ ನಾ ತೆತ್ತ ಮೊತ್ತ, ನನ್ನ ಬದುಕೇ. ನಾ ಪಡೆದ ಕೊಡುಗೆ, ಸಾವು."
    ಈಕೆಯ ಎರಡನೆಯ ಪ್ರೀತಿ ಡಿಯಾಗೋ ರಿವೆರಾ, ಸಾಮಾನ್ಯ ಕವಿ. ಆದರೆ ಫ್ರಿದಾಳ ಪಾಲಿನ ಪರಿಪೂರ್ಣ ಮನುಷ್ಯ. ಕಾವ್ಯ, ಕನಸು, ಕಲ್ಪನೆ, ಭಾವನೆಗಳ ತೀವ್ರತೆಯನ್ನು, ಮನಸ್ಸಿನ ಸಂಕೀರ್ಣತೆಯನ್ನು, ಆತ್ಮವನ್ನು ಬಾಧಿಸುವ ಬರಹದ ದುರಂತವನ್ನು ಫ್ರಿದಾಳಿಗೆ ಮನದಟ್ಟಾಗಿಸಿದ ಒಬ್ಬ ವಿಚಿತ್ರ ಮಾಯಾವಿ. ಕಾಡು ಕಾಡಿಗಿದ್ದ ಈತ ಅದೆಷ್ಟು ಕಾವ್ಯ ಹೊಸೆದನೋ ಗೊತ್ತಿಲ್ಲ ಆದರೆ ಇವನ ಸಂಘದಲ್ಲಿ, ಇವನ ಆಗಮನಕ್ಕೂ ಮುಂಚೆ ಬರೀ ಕುಂಚವನ್ನು ನಂಬಿಕೊಂಡಿದ್ದ ಫ್ರಿದಾ ಈಗ ಕವಿತೆಯ ಕೈ ಹಿಡಿದಳು ಮತ್ತು ಕವಿತೆಯಾದಳು. ಡಿಯಾಗೋನಿಗೆ ಬರೆದ ಪತ್ರದಲ್ಲಿ ಅವಳು ಬರೆಯುತ್ತಾಳೆ "ಗಾಳಿಯ ನರನಾಡಿಯಲ್ಲಿ ಲೋಕ ಸುತ್ತಲು ಬಯಸುವ ನನ್ನ ರಕ್ತ ಎಷ್ಟೊಂದು ವಿಚಿತ್ರ! ಆ ಮೂಲಕವೇ ನಿನ್ನ ಸೇರುವ ಅದರ ಬಯಕೆ, ಅಲ್ಲ ಒಂದು ಸತ್ತ ಚಿತ್ರ." ಈವನಿಗೇ ಅವಳು ಕೋರಿಕೊಂಡದ್ದು 'ಆಗಸವಾಗುವೆ ನಾನು, ಮಳೆಯಾಗಿಸು ನೀನು' ಎಂದು. ಆದರೆ ಈ ಪ್ರೀತಿಯೂ ಅವಳಿಗೆ ದಕ್ಕಲೇ ಇಲ್ಲ. ತನ್ನ ಅಕಾಲಿಕ ಮರಣದ ಹೆಜ್ಜೆ ಸಪ್ಪಳುಗಳನ್ನು ಕೇಳಿಸಿಕೊಂಡಿದ್ದ ಫ್ರಿದಾ ಇವನ ಕುರಿತು, "ನನಗೆ ಆರೋಗ್ಯವಿದ್ದಿದ್ದರೆ, ಯೌವ್ವನವಿದ್ದಿದ್ದರೆ ಅದೆಲ್ಲವನ್ನೂ ಆತ ಪಡೆಯಬಹುದಿತ್ತು. ಆತನೆಂದರೆ ನನ್ನ ಪಾಲಿಗೆ ಬೀಜ, ಮರ ಮತ್ತು ನೆಮ್ಮದಿಯ ನೆರಳು. ಅವನೆಂದರೆ ಮತ್ತೇನೂ ಅಲ್ಲ ನಾನೇ," ಎಂದು ಕನವರಿಸಿದ್ದಾಳೆ.
    ಈ ಹೊಯ್ದಾಟದ ದಿನಗಳಲ್ಲಿ ಆಕೆ ಬರೆದ ಅನೇಕ ಕವಿತೆಗಳು--
"ದೇಹದಲ್ಲಿರುವವನೊಬ್ಬನೆ; ನನಗಿಬ್ಬರು ಬೇಕು
ಇಬ್ಬರ ನನ್ನಾಸೆಗೆ; ಒಬ್ಬರನ್ನವರು ಕಿತ್ತುಕೊಂಡರು
ನನಗೆ ದಕ್ಕದ ಆ ಒಬ್ಬ
ನನಗಾಗಬೇಕು, ನಾ ನಡೆಯಬೇಕು
ಕಾರಣ
ಇನ್ನೊಬ್ಬ ತೀರಿ ಹೋಗಿದ್ದಾನೆ"
 
"ಸಾಕು ಸಾಕಾಗುವಷ್ಟು ರೆಕ್ಕೆಗಳಿರಬಾರದು ಬಾನಾಡಿಯಾಗಲು
ಕತ್ತರಿಸಿ ಬಿಡು, ಆನಂತರ
ನನ್ನ ಹಾರಲು ಬಿಡು"

"ಓ ಸೂರ್ಯನೇ, ಮರದ ಮಗುವೇ
ಮರ ಸಾಯಬಾರದು ನೀರಡಿಕೆಯಿಂದ
ತಿಳಿದುಕೊ, ಅದು ನಿನ್ನ ಬೀಜಗಳ ಭೂಮಿ
ನಿನ್ನ ಪ್ರೀತಿಗೊಂದು ಸಾಕ್ಷಿ"
ಫ್ರಿದಾ ಕಾಲು ಕಳೆದುಕೊಂಡದ್ದು 1953ರಲ್ಲಿ ಅದೇ ವರ್ಷ ರಷ್ಯಾದ ಪ್ರಶ್ನಾತೀತ ಕಮ್ಯುನಿಷ್ಟ ನಾಯಕ ಸ್ಟಾಲಿನ್ ತೀರಿಹೋದ. "ಸ್ಟಾಲಿನ್‍ನ ನಿಧನದೊಂದಿಗೆ ಇಡೀ ಪ್ರಪಂಚ ಹಾಗೂ ಮೆಕ್ಸಿಕೊ ತಮ್ಮ ಸಮತೋಲನವನ್ನು ಕಳೆದುಕೊಂಡಿವೆ" ಎಂದು ಹೇಳಿಕೆ ನೀಡುತ್ತಾಳೆ ಫ್ರಿದಾ. ಆದರೆ ವಿಚಿತ್ರವೆಂದರೆ ಜೀವನದುದ್ದಕ್ಕೂ ಸ್ಟಾಲಿನ್‍ನ ಸರ್ವಾಧಿಕಾರವನ್ನು ವಿರೋಧಿಸುತ್ತ ರೆಡ್ ಆರ್ಮಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಸೇರೆವಾಸ ಅನುಭವಿಸಿ, ಗಡಿಪಾರುಗೊಂಡು ಕೊನೆಗೂ ರಷ್ಯಾದಿಂದ ಗೂಡಾಚಾರಿಯಂದೇ ಅವಹೇಳಿಸಲ್ಪಟ್ಟ ಲಿಯಾನ್ ಟ್ರಾಟಸ್ಕಿ ಫ್ರಿದಾಳ ಪ್ರೇಮಿಗಳಲ್ಲೊಬ್ಬನಾಗಿದ್ದ. 1940 ರಲ್ಲಿ ತೀರಿದ ಈತ ನಿಸ್ಸಂಶಯವಾಗಿಯೂ ಈಕೆಯಲ್ಲಿ ಪ್ರೀತಿಯ ದಂಗೆ ಎಬ್ಬಿಸಿದ ಜನಪ್ರಿಯ ನಾಯಕ. ಆದರೆ ಸ್ವಯಂ ಬೇರುಗಡಿತನಾಗಿದ್ದ ಟ್ರಾಟಸ್ಕಿಯ ಬಳಿ ಫ್ರಿದಾಳ ಅಳಲನ್ನು ಕೇಳುವಷ್ಟೂ ವ್ಯವಧಾನವಿರಲಿಲ್ಲ. ಆತನ ಬದುಕೆನ್ನುವುದು ಮರಭೂಮಿಯಲ್ಲಿಯ ಬಿರುಗಾಳಿ. ಹೀಗೆ ಬಿರುಗಾಳಿಯ ಬೆನ್ನುಹತ್ತಿ ಬದುಕು ಕಟ್ಟಿಕೊಳ್ಳಲು ಹೊರಟ ಫ್ರಿದಾ ಜೀವನದುದ್ದಕ್ಕೂ ಸೂತ್ರವಿಲ್ಲದ ಪಟವಾದಳು. ಸೃಜನಶೀಲ ಲೋಕದ ರೋಚಕ ಪುಟವಾದಳು.