Monday 7 April 2014

ಆಗಸವಾಗುವೆ ನಾನು, ಮಳೆಯಾಗಿಸು ನೀನು

    ಏನೆಲ್ಲ ದಕ್ಕುವ ಜೀವಕ್ಕೆ ಕೆಲವೊಮ್ಮೆ ಒಂದು ಸಾಮಾನ್ಯ ಬದುಕೇ ದಕ್ಕದ ಸ್ಥಿತಿ ನೋಡಿದಾಗ ಅಯ್ಯೋ ಎನಿಸುತ್ತದೆ. ಅಂಥ ಬದುಕು ಈಕೆಯದು. ಈಕೆಯ ಹೆಸರು ಫ್ರಿದಾ, ಫ್ರಿದಾ ಕಾಹಲೊ. ಕೇವಲ 31 ವರ್ಷಗಳ ಬದುಕಾವಧಿಯನ್ನು ಪಡೆದು ಹುಟ್ಟಿದ್ದ ಈಕೆ ಶ್ರೇಷ್ಠ ಮೆಕ್ಸಿಕನ್ ಚಿಂತಕಿ, ಕಾವ್ಯಾರಾದಕಿ, ರೂಪಸಿ ಹಾಗೂ ಕುಂಚ ಕಲಾವಿದೆ. 20 ನೇ ಶತಮಾನದ ಮೆಕ್ಸಿಕನ್ ಕಲೆ ಮತ್ತು ಸಂಸ್ಕøತಿಯ ಅದ್ವಿತಿಯ ಪ್ರತಿನಿಧಿಯೆಂದೇ ಗುರುತಿಸಲ್ಪಟ್ಟವಳು. ಅವಳ ಮುಖವೆಂದರೆ ಹೆಣ್ತನ ಮತ್ತು ಮುಗ್ಧತೆಯ ಅಪರೂಪದ ಮೇಳೈಕೆ. ಇಪ್ಪತ್ತನೆಯ ಶತಮಾನದ ಕಲಾ ಪ್ರಪಂಚದಲ್ಲಿ ಈಕೆಯನ್ನು ಸರಿಗಟ್ಟುವ ಸುಂದರಿ, ಕಲಾವಿದೆ, ಚಿಂತಕಿ ಮೆಕ್ಸಿಕೊದಲ್ಲಿ ಮತ್ತೊಬ್ಬರಿರಲಿಲ್ಲ. ಇವಳೆಂದರೆ ಇವಳೆ. ಈ ಕಾರಣಕ್ಕಾಗಿ ಬದುಕಾವಧಿಯಲ್ಲಿಯೇ ಇವಳೊಂದು ದಂತ ಕಥೆ.
 
ಸ್ವಯಂ ಫ್ರಿದಾ ಕೂಡ ತನ್ನ ಸೌಂದರ್ಯವನ್ನು ಎಷ್ಟೊಂದು ಆರಾಧಿಸಿಕೊಂಡಿದ್ದಳೆಂದರೆ ಆಕೆ ತನ್ನ ಸೃಜನಶೀಲತೆಯ ತುಂಬ ತನ್ನ ರೂಪವನ್ನೇ ದಾಖಲಿಸಿಕೊಂಡಳು. ಲೋಕದೊಳಗಿದ್ದೂ ಒಂಟಿಯಾಗಿದ್ದಳು. ಈಕೆಯನ್ನು ನೋಡಿದ ಕವಿಯೊಬ್ಬ ಹೇಳಿದ್ದ 'ನಿನ್ನ ಅವಸಾನದ ನಂತರ ನಿನೇನು ನೋಡಲು ಸಾಧ್ಯ? ನಿನ್ನಿಂದ ಹೊರಟ ನಿನ್ನ ಬರಹ ಮತ್ತು ಬಣ್ಣಗಳು ಸಂಪೂರ್ಣ ನಿನೇ ಆಗಿವೆ. ಅಲ್ಲಿ ನಿನ್ನ ಹೊರತು ಮತ್ತಿನ್ನೇನೂ ಸಿಗಲಾರದು.' ಫ್ರಿದಾ ತನ್ನ ಕಲೆಗಳಲ್ಲಿ, ಪದಗಳಲ್ಲಿ ಅನ್ಯವನ್ನು ತುಂಬಲು ಯತ್ನಿಸಿದಷ್ಟೂ ಅದೇಕೊ ಅದು ಅವಳ ಆತ್ಮದ ಆಲಾಪನೆಯಾಗುತ್ತಲೇ ಹೋಯಿತು. ಅವಳು ಮೃದುವಾಗಲು ಯತ್ನಿಸಿದಾಗ ಅದು ಭಯಂಕರವಾಯಿತು, ಅವಳು ಭಯಂಕರವಾದಾಗÀ ಅದು ಹೂವಿನಷ್ಟು ಮೃದುವಾಯಿತು. ಅವಳು ಶಾಂತವಾದಾಗ ಅದು ಕದಡಿದ ಕೊಳ, ಅವಳು ಕದಡಲು ಯತ್ನಿಸಿದಾಗ ಅದು ಮಹಾಮೌನಿ. ಸಮಕಾಲೀನ ವಿಪ್ಲವಗಳ ರಾಜಕಾರಣ, ನಿತ್ಯ ಬಾಧಿಸುತ್ತಿದ್ದ ಅನಾರೋಗ್ಯ,ಆ ಚಿಕ್ಕ ವಯಸ್ಸಿನಲ್ಲೇ ಜನ್ಮಜಾತವಾಗಿ ಬಂದಿದ್ದ ಬೆನ್ನುಹುರಿ ನೋವು, ಹುರುಕು, ಸೊಟ್ಟ ಕಾಲು ತನ್ನೊಳಗಿನ ತಳಮಳ, ಹೆಜ್ಜೆ ಹೆಜ್ಜೆಗೂ ಕುಸಿಯುತ್ತಿದ್ದ ಪ್ರೀತಿ ಇವೆಲ್ಲವುಗಳಿಗೆ ಯಾವುದೋ ಹೊಸ ರೂಪ ಕೊಡಲು ಯತ್ನಿಸುತ್ತಿದ್ದ ಫ್ರಿದಾಳ ಸೃಜನಶೀಲತೆ ಅವಳನ್ನು ಭಿನ್ನವಾಗಿಯೇ ಬಿಂಬಿಸಿತು. ಇಂಥ ಫ್ರಿದಾ ತನ್ನ ಅವಸಾನದ ಐದು ದಶಕಗಳವರೆಗೂ ಪ್ರಪಂಚಕ್ಕೆ ಅರ್ಥವಾಗಲೇ ಇಲ್ಲ. ಅವಳ ಬಣ್ಣ ಮತ್ತು ಬರಹಗಳಂತೆಯೇ ಅವಳೂ ನಿಗೂಢವಾಗಿಯೇ ಉಳಿದಳು. ಆದರೆ ತೀರಿ ಹೋದ ಐದು ದಶಕಗಳ ನಂತರ ಕೋಟಿ ಕೋಟಿ ಮೊತ್ತದಲ್ಲಿ ಆಕೆಯ ಸಾಹಿತ್ಯ ಮತ್ತು ಚಿತ್ರಗಳ ಮಾರಾಟವಾಯಿತು.
    ವಿಚಿತ್ರವಾದ ರೋಗದಿಂದ ನರಳುತ್ತಿದ್ದ ಫ್ರಿದಾಳಿಗೆ ನರಳುವಿಕೆಯೂ ಒಂದು ವಿನೂತನ ಲೋಕವಾಗಿತ್ತು. ಆಕೆಯ ಕಲೆ ಮತ್ತು ಸಾಹಿತ್ಯಗಳಿಗೆ ವಿಶಿಷ್ಟ ಮನೋಭೂಮಿಕೆಯನ್ನು ಒದಗಿಸಿತ್ತು. ರೋಗವೇ ಬಣ್ಣವಾಗಿ, ಕಾವ್ಯವಾಗಿ ಅವಳನ್ನು ಕಾಡುವ ವೇಳೆಯಲ್ಲಿ ದುರ್ವಿಧಿ ಅವಳ ಬಾಳಿನಲ್ಲಿ ಮತ್ತೊಂದು ಆಟವನ್ನಾಡಿತು. ಇನ್ನೂ ಯೌವ್ವನದ ರೆಕ್ಕೆ ಬಲಿಯದ ವೇಳೆಯಲ್ಲಿ ಆಕೆ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಳು. ತನ್ನನ್ನೇ ತಾನು ಎಷ್ಟೊಂದು ಮೋಹಿಸಿದ ಫ್ರಿದಾಳಿಗೆ ಇದು ಬರೀ ಕಾಲಿನ ದುರಂತದ ಕಥೆಯಾಗಿರಲಿಲ್ಲ, 'ತಾನು' ಎಂಬ ಅಪ್ಪಟ ಶಿಲ್ಪದ ಭಗ್ನದ ವ್ಯಥೆಯಾಗಿತ್ತು. ಬಹುತೇಕ ಇದುವರೆಗೂ ಬರೀ ಪೇಂಟರ್ ಆಗಿದ್ದ ಫ್ರಿದಾಳಲ್ಲಿ ಕಾವ್ಯದ ಹೊಸ ಒರತೆ ಶುರುವಾದದ್ದು ಇಲ್ಲಿಂದಲೇ. ಇನ್ನೂ ಹುಟ್ಟದ ಹೂ, ಹಣ್ಣು ಮತ್ತು ಮಣ್ಣಿನ ಹಾಡು ಹೇಳುವಂತೆ, ಫ್ರಿದಾಳ ಅಂತರ್ಮುಖಿ ಆಲೋಚನೆಗಳು ಹೆಪ್ಪುಗಟ್ಟಲಾರಂಭಿಸಿದ್ದು ಇಲ್ಲಿಂದಲೆ. ಈಗ ಕಲೆ ಮತ್ತು ಸಾಹಿತ್ಯ ಆಕೆಯನ್ನು ಸಾವಿನೊಂದಿಗೆ, ಬದುಕಿನ ಖಾಲಿತನದೊಂದಿಗೆ, ಬಣ್ಣಗಳ ಬರಿದುತನದೊಂದಿಗೆ, ಶಬ್ಧಗಳೊಳಗಿನ ನಿಶ್ಯಬ್ಧದೊಂದಿಗೆ ಮುಖಾ-ಮುಖಿಯಾಗಿಸಲಾರಂಭಿಸಿದವು. ಇದೇ ವೇಳೆಯಲ್ಲಿ ಫ್ರಿದಾ ಅಲೆಝಾಂಡ್ರೊ ಗೊಮೇಝ್‍ನನ್ನು ಪ್ರೀತಿಸಿದ್ದು. ಈತ ಈಕೆಯ ಸಮವಯಸ್ಕ. ಆದರೆ ಅನಾನುಭವದ ಹುಡುಗ. ಆದರೆ ಬದುಕಿನ ಬಗ್ಗೆ ಅಪಾರ ಕಲ್ಪನೆಯನ್ನಿಟ್ಟುಕೊಂಡವ, ದ್ವಂದ್ವದಲ್ಲಿದ್ದವ. ದುರಂತಗಳ ದಾರಿಯಲ್ಲಿ ನಡೆದುಹೋಗುತ್ತಿದ್ದ ಫ್ರಿದಾ ಈತನಿಗೊಂದು ಅಪರೂಪದ ಪತ್ರ ಬರೆದಿದ್ದಾಳೆ. ವಯಸ್ಸಿನ ಲೆಕ್ಕಾಚಾರದಿಂದ ಹೊರಬಂದು ಸರಳವಾಗಿ ಆಲೋಚಿಸುವ ಪ್ರತಿಯೊಬ್ಬರೂ ಓದಲೇ ಬೇಕಾದ ಸಾಲುಗಳಿವು.
    "ಪ್ರಿಯ ಅಲೆಝಾಂಡ್ರೊ,
        ಪುಸ್ತಗಳ ಗುಡ್ಡೆ ಹಾಕಿಕೊಂಡು ಎಷ್ಟೊಂದು ಓದುತ್ತೀಯ? ಬದುಕಿನ ಅದ್ಯಾವ ರಹಸ್ಯವನ್ನು ಬೇಧಿಸಲು ಹೊರಟಿದ್ದೀಯ? ಸುಮ್ಮನಿರು, ಅದು ತನ್ನಷ್ಟಕ್ಕೇ ಅನಾವರಣಗೊಳ್ಳುತ್ತದೆ. ನನ್ನನ್ನು ನೋಡು, ಎನನ್ನೂ ಓದದ, ಬರೆಯದ ನನಗೆ ಆಗಲೇ ಈ ಬದುಕು ಅರ್ಥವಾಗಿಬಿಟ್ಟಿದೆ. ಸಾವು ಮತ್ತು ದುರಂತಗಳ ಪಲ್ಲಂಗದ ಮೇಲೆ ನನಗೀ ಅನುಭವ ದಕ್ಕಿದೆ. ಬಣ್ಣ ಮತ್ತು ನಿರಂತರ ತೊಳಲಾಟಗಳ ಮಧ್ಯ ಹೊರಟ ಹುಡುಗಿಯಾಗಿದ್ದ ನನಗೆ ಒಂದೊಮ್ಮೆ ಎಲ್ಲವೂ ಅಚ್ಚರಿ ಎನ್ನಿಸುತ್ತಿತ್ತು, ರಹಸ್ಯವೆನ್ನಿಸುತ್ತಿತ್ತು. ಆಗೆಲ್ಲ ಈ ನಿಗೂಢಗಳನ್ನು ಕುರಿತು ಆಲೋಚಿಸುವುದೇ ಆಟಗಿತ್ತು. ಆದರೆ ಅದೇನು ಘಟಿಸಿತೊ, ಮಂಜುಗಡ್ಡೆಯಂತೆ ಪಾರದರ್ಶಕವಾಗಿ ನಾನೀಗ ನೋವೆನ್ನುವ ನಕ್ಷತ್ರದ ಮೇಲೆ ವಿರಮಿಸಿದ್ದೇನೆ. ಇತ್ತೀಚೆಗೆ ಕೇವಲ ಕೆಲವು ಕ್ಷಣಗಳಲ್ಲಿ ಇಡೀ ಬದುಕಿನ ಅನುಭೂತಿಯಾದ ಸಮಾಧಾನ ನನಗೆ. ಕೆಲವೇ ಕ್ಷಣಗಳಲ್ಲಿ ನಾನು ಬೆಳೆದು, ನನ್ನ ಗೆಳತಿಯರೆಲ್ಲ ವಯಸ್ಕರಾದ ವಿಚಿತ್ರ ದೃಶ್ಯ. ಈಗ ಎಲ್ಲವೂ ಸರಳ, ಅತೀ ಸರಳ. ಈ ಪ್ರಪಂಚದಲ್ಲಿ ನಾನು ನೋಡಬೇಕಾದುದೇನಾದರು ಉಳಿದಿದೆ ಎಂದು ನನಗನ್ನಿಸುತ್ತಿಲ್ಲ. ಆದರೆ ಅವಸರದ ಈ ಬೆಳವಣಿಗೆಗೆ ನಾ ತೆತ್ತ ಮೊತ್ತ, ನನ್ನ ಬದುಕೇ. ನಾ ಪಡೆದ ಕೊಡುಗೆ, ಸಾವು."
    ಈಕೆಯ ಎರಡನೆಯ ಪ್ರೀತಿ ಡಿಯಾಗೋ ರಿವೆರಾ, ಸಾಮಾನ್ಯ ಕವಿ. ಆದರೆ ಫ್ರಿದಾಳ ಪಾಲಿನ ಪರಿಪೂರ್ಣ ಮನುಷ್ಯ. ಕಾವ್ಯ, ಕನಸು, ಕಲ್ಪನೆ, ಭಾವನೆಗಳ ತೀವ್ರತೆಯನ್ನು, ಮನಸ್ಸಿನ ಸಂಕೀರ್ಣತೆಯನ್ನು, ಆತ್ಮವನ್ನು ಬಾಧಿಸುವ ಬರಹದ ದುರಂತವನ್ನು ಫ್ರಿದಾಳಿಗೆ ಮನದಟ್ಟಾಗಿಸಿದ ಒಬ್ಬ ವಿಚಿತ್ರ ಮಾಯಾವಿ. ಕಾಡು ಕಾಡಿಗಿದ್ದ ಈತ ಅದೆಷ್ಟು ಕಾವ್ಯ ಹೊಸೆದನೋ ಗೊತ್ತಿಲ್ಲ ಆದರೆ ಇವನ ಸಂಘದಲ್ಲಿ, ಇವನ ಆಗಮನಕ್ಕೂ ಮುಂಚೆ ಬರೀ ಕುಂಚವನ್ನು ನಂಬಿಕೊಂಡಿದ್ದ ಫ್ರಿದಾ ಈಗ ಕವಿತೆಯ ಕೈ ಹಿಡಿದಳು ಮತ್ತು ಕವಿತೆಯಾದಳು. ಡಿಯಾಗೋನಿಗೆ ಬರೆದ ಪತ್ರದಲ್ಲಿ ಅವಳು ಬರೆಯುತ್ತಾಳೆ "ಗಾಳಿಯ ನರನಾಡಿಯಲ್ಲಿ ಲೋಕ ಸುತ್ತಲು ಬಯಸುವ ನನ್ನ ರಕ್ತ ಎಷ್ಟೊಂದು ವಿಚಿತ್ರ! ಆ ಮೂಲಕವೇ ನಿನ್ನ ಸೇರುವ ಅದರ ಬಯಕೆ, ಅಲ್ಲ ಒಂದು ಸತ್ತ ಚಿತ್ರ." ಈವನಿಗೇ ಅವಳು ಕೋರಿಕೊಂಡದ್ದು 'ಆಗಸವಾಗುವೆ ನಾನು, ಮಳೆಯಾಗಿಸು ನೀನು' ಎಂದು. ಆದರೆ ಈ ಪ್ರೀತಿಯೂ ಅವಳಿಗೆ ದಕ್ಕಲೇ ಇಲ್ಲ. ತನ್ನ ಅಕಾಲಿಕ ಮರಣದ ಹೆಜ್ಜೆ ಸಪ್ಪಳುಗಳನ್ನು ಕೇಳಿಸಿಕೊಂಡಿದ್ದ ಫ್ರಿದಾ ಇವನ ಕುರಿತು, "ನನಗೆ ಆರೋಗ್ಯವಿದ್ದಿದ್ದರೆ, ಯೌವ್ವನವಿದ್ದಿದ್ದರೆ ಅದೆಲ್ಲವನ್ನೂ ಆತ ಪಡೆಯಬಹುದಿತ್ತು. ಆತನೆಂದರೆ ನನ್ನ ಪಾಲಿಗೆ ಬೀಜ, ಮರ ಮತ್ತು ನೆಮ್ಮದಿಯ ನೆರಳು. ಅವನೆಂದರೆ ಮತ್ತೇನೂ ಅಲ್ಲ ನಾನೇ," ಎಂದು ಕನವರಿಸಿದ್ದಾಳೆ.
    ಈ ಹೊಯ್ದಾಟದ ದಿನಗಳಲ್ಲಿ ಆಕೆ ಬರೆದ ಅನೇಕ ಕವಿತೆಗಳು--
"ದೇಹದಲ್ಲಿರುವವನೊಬ್ಬನೆ; ನನಗಿಬ್ಬರು ಬೇಕು
ಇಬ್ಬರ ನನ್ನಾಸೆಗೆ; ಒಬ್ಬರನ್ನವರು ಕಿತ್ತುಕೊಂಡರು
ನನಗೆ ದಕ್ಕದ ಆ ಒಬ್ಬ
ನನಗಾಗಬೇಕು, ನಾ ನಡೆಯಬೇಕು
ಕಾರಣ
ಇನ್ನೊಬ್ಬ ತೀರಿ ಹೋಗಿದ್ದಾನೆ"
 
"ಸಾಕು ಸಾಕಾಗುವಷ್ಟು ರೆಕ್ಕೆಗಳಿರಬಾರದು ಬಾನಾಡಿಯಾಗಲು
ಕತ್ತರಿಸಿ ಬಿಡು, ಆನಂತರ
ನನ್ನ ಹಾರಲು ಬಿಡು"

"ಓ ಸೂರ್ಯನೇ, ಮರದ ಮಗುವೇ
ಮರ ಸಾಯಬಾರದು ನೀರಡಿಕೆಯಿಂದ
ತಿಳಿದುಕೊ, ಅದು ನಿನ್ನ ಬೀಜಗಳ ಭೂಮಿ
ನಿನ್ನ ಪ್ರೀತಿಗೊಂದು ಸಾಕ್ಷಿ"
ಫ್ರಿದಾ ಕಾಲು ಕಳೆದುಕೊಂಡದ್ದು 1953ರಲ್ಲಿ ಅದೇ ವರ್ಷ ರಷ್ಯಾದ ಪ್ರಶ್ನಾತೀತ ಕಮ್ಯುನಿಷ್ಟ ನಾಯಕ ಸ್ಟಾಲಿನ್ ತೀರಿಹೋದ. "ಸ್ಟಾಲಿನ್‍ನ ನಿಧನದೊಂದಿಗೆ ಇಡೀ ಪ್ರಪಂಚ ಹಾಗೂ ಮೆಕ್ಸಿಕೊ ತಮ್ಮ ಸಮತೋಲನವನ್ನು ಕಳೆದುಕೊಂಡಿವೆ" ಎಂದು ಹೇಳಿಕೆ ನೀಡುತ್ತಾಳೆ ಫ್ರಿದಾ. ಆದರೆ ವಿಚಿತ್ರವೆಂದರೆ ಜೀವನದುದ್ದಕ್ಕೂ ಸ್ಟಾಲಿನ್‍ನ ಸರ್ವಾಧಿಕಾರವನ್ನು ವಿರೋಧಿಸುತ್ತ ರೆಡ್ ಆರ್ಮಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಸೇರೆವಾಸ ಅನುಭವಿಸಿ, ಗಡಿಪಾರುಗೊಂಡು ಕೊನೆಗೂ ರಷ್ಯಾದಿಂದ ಗೂಡಾಚಾರಿಯಂದೇ ಅವಹೇಳಿಸಲ್ಪಟ್ಟ ಲಿಯಾನ್ ಟ್ರಾಟಸ್ಕಿ ಫ್ರಿದಾಳ ಪ್ರೇಮಿಗಳಲ್ಲೊಬ್ಬನಾಗಿದ್ದ. 1940 ರಲ್ಲಿ ತೀರಿದ ಈತ ನಿಸ್ಸಂಶಯವಾಗಿಯೂ ಈಕೆಯಲ್ಲಿ ಪ್ರೀತಿಯ ದಂಗೆ ಎಬ್ಬಿಸಿದ ಜನಪ್ರಿಯ ನಾಯಕ. ಆದರೆ ಸ್ವಯಂ ಬೇರುಗಡಿತನಾಗಿದ್ದ ಟ್ರಾಟಸ್ಕಿಯ ಬಳಿ ಫ್ರಿದಾಳ ಅಳಲನ್ನು ಕೇಳುವಷ್ಟೂ ವ್ಯವಧಾನವಿರಲಿಲ್ಲ. ಆತನ ಬದುಕೆನ್ನುವುದು ಮರಭೂಮಿಯಲ್ಲಿಯ ಬಿರುಗಾಳಿ. ಹೀಗೆ ಬಿರುಗಾಳಿಯ ಬೆನ್ನುಹತ್ತಿ ಬದುಕು ಕಟ್ಟಿಕೊಳ್ಳಲು ಹೊರಟ ಫ್ರಿದಾ ಜೀವನದುದ್ದಕ್ಕೂ ಸೂತ್ರವಿಲ್ಲದ ಪಟವಾದಳು. ಸೃಜನಶೀಲ ಲೋಕದ ರೋಚಕ ಪುಟವಾದಳು.

No comments:

Post a Comment