Sunday 19 January 2014

ನಿನ್ನ ಚಿತೆ ಸುಡುವಲ್ಲಿ ನನ್ನ ಕನಸುಗಳಿಲ್ಲ...-ಭಾಗ-೧


                   ಸಾಕಿಯಾಗಿ, ಸಖಿಯಾಗಿ ನಮ್ಮನ್ನು ಕಾಡಿದ ಈ ಹೆಣ್ಣೆಂಬ ಹೆಣ್ಣು ಸದ್ಗೃಹಿಣಿಯಾಗಿ ಹಲವರನ್ನು ಹಣ್ಣಾಗಿಸಿದ ರೀತಿಯನ್ನು ನೋಡಬೇಕು. ಗಾಂಧಿಯೊ, ಗುರ್ಜೈಫನೊ: ನಾವೊ, ನೀವೊ ಯಾರಾದರು ಸರಿ ಅವರೆಲ್ಲರೂ ಆಕೆಯ ಸುತ್ತ ಸುತ್ತಲೇಬೇಕು. ಅಂತೆಯೇ ‘ಶಕ್ತಿಸಂಗಮ ತಂತ್ರ ಹೇಳುತ್ತದೆ – 


ಹೆಣ್ಣಿಗಿಂತ ಧ್ಯಾನವಿಲ್ಲ
ಹೆಣ್ಣಿಗೂ ಮಿಗಿಲು ಯೋಗವಿಲ್ಲ
ಹೆಣ್ಣಿಗಿಂತ ಮಂತ್ರವಿಲ್ಲ
ಹೆಣ್ಣಿಗೆ ಸಮ ಸಮನ್ಯಾರೂ ಇಲ್ಲ

Mahatma Gandhi                     ನನ್ನನ್ನು ನೂರು ನೂರು ರೀತಿಯಲ್ಲಿ ಕಾಡಿಸಿದ, ಪೀಡಿಸಿದ, ಅಟ್ಟಾಡಿಸಿದ ಈ ಹೆಣ್ಣು ನಮ್ಮ ಗಾಂಧಿಯ ಬದುಕಿನಲ್ಲಿ ಮೂಡಿಸಿದ ಹೆಜ್ಜೆ ಗುರುತುಗಳನ್ನೊಮ್ಮೆ ಗಮನಿಸಬೇಕೆಂಬ ಆಸೆಯಿಂದ ಆತನ ಇತಿಹಾಸ ಕೆದಕಿದಾಗ ಸಿಕ್ಕ ತುಣುಕುಗಳಿವು. ಅಂದಹಾಗೆ, ಒಂದು ಮಾತು, ಗಾಂಧಿಯನ್ನು ದೇವರಂತೆ ಆರಾಧಿಸಿ ಬಿಡುವ ನಾವು ಒಂದು, ಎರಡು, ಮೂರು ಅಥವಾ ಹದಿನಾರು ಸಾವಿರ ಹೀಗೆ ಅವರವರ ಶಕ್ತಾ 
ನುಸಾರ ಮದುವೆಗಳನ್ನು ಮಾಡಿಕೊಂಡ ದೇವರುಗಳ ದೇಶದಲ್ಲಿ ಹುಟ್ಟಿದ್ದೇವೆ ಎನ್ನುವುದನ್ನು ಮರೆಯಬಾರದು. ತಾಯಿ ಮತ್ತು ಮಡದಿ ಈ ದೇಶದ ಎಲ್ಲ ಸ್ಥರಗಳ ಮನುಷ್ಯರ ಜೀವನಕ್ಕೆ ಮಣ್ಣಿನಂತೆಯೇ ಮೆತ್ತಿಕೊಂಡ ಎರಡು ಪದಗಳು. ಇವುಗಳಿಂದ ಹೊರತಾದ ಮಹಾತ್ಮನೂ ಇಲ್ಲಿ ಮನುಷ್ಯನೆನ್ನಿಸಿಕೊಳ್ಳುವುದಿಲ್ಲ, ಆದರ್ಶಪ್ರಾಯನಾಗುವುದಿಲ್ಲ. ಹೀಗಾಗಿಯೇ ನಮ್ಮ ಗಾಂಧಿ ಎಂಬ ಮಹಾತ್ಮ ಈ ಸತ್ಯದಿಂದ ಓಡಿಹೋಗುವ ಯತ್ನವನ್ನು ಎಂದೂ ಮಾಡಲಿಲ್ಲ. 

                   
Mahatma Gandhi with Kastur Ba
ಅವನ ಬಾಲ್ಯವೆಲ್ಲವೂ ತಾಯಿಯ ಅಣತಿಯಲ್ಲಿ ನಡೆದರೆ, ಹದಿಮೂರನೆಯ ವಯಸ್ಸಿನಲ್ಲಿ ಮದುವೆಯಾದ ಈತನ ಸಂಸಾರವೆಲ್ಲವೂ ಕಸ್ತೂರಿ ಬಾಳ ಕಾರುಣ್ಯದಲ್ಲಿ ಕರಗುತಿತ್ತು. ತಾಯಿಯೊಂದಿಗೆ ಕೈ ಹಿಡಿದುಕೊಂಡು ರಾಣಿ ವಾಸಕ್ಕೆ ಹೋಗಿ, ಸೌಂದರ್ಯವನ್ನು ಕಣ್ಣು ತುಂಬಿಸಿಕೊಂಡ ಹುಡುಗ ಈ ಗಾಂಧಿ. ಇಂಥ ಈತನ ಮಧ್ಯದ ಯವ್ವನವಂತೂ ವಿದೇಶದಲ್ಲಿ ಹೆಣ್ಣಿನ ಮನೆಯ ಕದತಟ್ಟುವುದರಲ್ಲಿ ಉಂಡಾಡಿಯಾಯಿತು. ಗ್ರಹಸ್ಥಾಶ್ರಮ? ಅಬ್ಬಾ! ಅದಂತು ಕೊನೆಯುಸಿರೆಳೆಯುತ್ತಿದ್ದ ತಂದೆಯ ದೇಹವನ್ನು ಪಕ್ಕಕ್ಕಿರಿಸಿ ಹೆಂಡತಿಯೊಂದಿಗಿನ ಅತಿ ಮೋಹದಲ್ಲಿ ನಿದ್ರೆಗೊರಗಿತು, ಇನ್ನು ಈತನ ಮುಪ್ಪೆಂಬ ಮುಸ್ಸಂಜೆ ಮನು ಮತ್ತು ಅಬಾಳ ಹೆಗಲ ಹೊರೆಯಾಗಿತ್ತು. ಆತನೇ ಹೇಳಿಕೊಳ್ಳುವಂತೆ ಹಾವು, ಪಿಶಾಚಿ, ಕಳ್ಳರಿಗೆ ಹೆದರುತ್ತಿದ್ದ ಗಾಂಧಿ ಆಗೊಮ್ಮೆ ಈಗೊಮ್ಮೆ ಹೆಂಡತಿಯನ್ನು ಕ್ರಮಿಸಿಕೊಂಡು ಹೋಗುವ ಉದ್ಧಟತನವನ್ನು ಮೆರೆದಿದ್ದಾನೆ. ಗೆಳೆಯನೊಬ್ಬನ ಮಾತು ಕೇಳಿ ಅವಳಿಗೆ ಅನವಶ್ಯಕ ಕಿರುಕುಳವನ್ನೂ ಕೊಟ್ಟಿದ್ದಾನೆ. ಆದರೆ ಕತ್ತಲೆಗೆ ಹೆದರಿ ಮತ್ತೆ ಅವಳ ಬಳಿಯೇ ಓಡಿದ್ದಾನೆ. ಮಧ್ಯರಾತ್ರಿ ಮಹಿಳೆಯೊಬ್ಬಳು ಭಯ ಮುಕ್ತಳಾಗಿ ತಿರುಗಾಡುವಂತಾದಾಗ ತನ್ನ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದುಕೊಳ್ಳುತ್ತೇನೆ, ಎಂದಿದ್ದ ಗಾಂಧಿಯ ಈ ಕತ್ತಲೆಯ ಕಥೆ ಕೇಳಿ.  

         ಹೊಸದಾಗಿ ಮದುವೆಯಾದ ಆ ದಿನಗಳಲ್ಲಿ ಕಸ್ತೂರಿ ಬಾ ಆತನಿಗೆ ಧೈರ್ಯ ತುಂಬಿದ ರೀತಿಯನ್ನು ನೋಡಿ ನನ್ನಗಂತೂ ನಗೆ ಬಂದಿದೆ. ಆತ ಬರೆಯುತ್ತಾನೆ “ರಾತ್ರಿಯಲ್ಲಿ ಹೊರಗೆ ಇಣಿಕಿ ನೋಡುವ ಧೈರ್ಯವಿರಲಿಲ್ಲ. ಕತ್ತಲೆಯೆಂದರೆ ನನಗೆ ಮೈನಡುಕ, ದೀಪವಿಲ್ಲದೆ ಕತ್ತಲೆಯಲ್ಲಿ ಮಲಗುವುದೆ ಅಸಾಧ್ಯ. ನನಗೆ ಒಂದೆಡೆಯಿಂದ ಹಾವು, ಇನ್ನೊಂದೆಡೆಯಿಂದ ಭೂತ, ಮತ್ತೊಂದೆಡೆಯಿಂದ ಕಳ್ಳರು ಬರುತ್ತಿರುವಂತೆ ತೋರುತ್ತಿತ್ತು. ಆದುದರಿಂದ ದೀಪವಿಲ್ಲದೆ ಮಲಗುತ್ತಿರಲಿಲ್ಲ. ಹತ್ತಿರವೇ ಮಲಗಿರುವ ಹೆಂಡತಿಗೆ ಈ ಹೆದರಿಕೆಯನ್ನು ಹೇಗೆ ಹೇಳುವದು? ಅವಳು ಇದೀಗ ತಾರುಣ್ಯದಲ್ಲಿ ಹೆಜ್ಜೆ ಇಡುತ್ತಿರುವ ಎಳೆಯ ಹುಡುಗಿ; ನನಗಿಂತ ಎದೆಗಾರ್ತಿ. ಆದ್ದರಿಂದ ನನ್ನನ್ನು ಕಂಡರೆ ನನಗೇ ನಾಚಿಕೆ. ಆಕೆ ಪಿಶಾಚಿಗೂ ಹೆದರುತ್ತಿರಲಿಲ್ಲ. ಹಾವಿಗೂ ಹೆದರುತ್ತಿರಲಿಲ್ಲ. ಕತ್ತಲೆಯಲ್ಲಿ ಬೇಕಾದಲ್ಲಿ ಹೋಗಬಲ್ಲಳು.” ಹೀಗೆ ಬದುಕಿನಲ್ಲಿ ವಾಸ್ತವವನ್ನು ಎದುರಿಸುವ ಒಂದು ಹಂತದ ಪಾಠವನ್ನು ಕಲಿಸಿಕೊಟ್ಟವಳು ಕಸ್ತೂರಿ ಬಾ. 

                       ಗಾಂಧಿಯ ಬದುಕನ್ನು ಕೆದಕುತ್ತ ಹೋದರೆ ಮತ್ತೆ ಮತ್ತೆ ಕಾಡುವ ಪಾತ್ರ ಹೆಣ್ಣು. ತನ್ನ ತಾಯಿಯ ಕುರಿತು ಮೆಲಕುತ್ತಾನೆ. “ನಮ್ಮ ತಾಯಿಯ ವಿಷಯದಲ್ಲಿ ನನ್ನ ಮನಸ್ಸಿನಲ್ಲಿ ನಿಂತ ಸ್ಪಷ್ಟವಾದ ಭಾವನೆ ಅವಳು ಸಾಧ್ವಿ, ಸಚ್ಚರಿತ್ರಳೆಂಬುದು. ಅವಳು ಬಹಳ ಧಾರ್ಮಿಕಳು. ನಿತ್ಯ ಪೂಜೆ ಪ್ರಾರ್ಥನೆಗಳಾಗುವವರೆಗೆ ಆಕೆಗೆ ಊಟದ ವಿಚಾರವೇ ಬರದು. ಹವೇಲಿಗೆ ವೈಷ್ಣವ ದೇವಸ್ಥಾನಕ್ಕೆ ಹೋಗುವುದು ದಿನದ ಒಂದು ಕೆಲಸ. ಆಕೆ ಚಾತುರ್ಮಾಸ ಮಾಡದಿದ್ದುದು ಎಷ್ಟು ಜ್ಞಾಪಿಸಿಕೊಂಡರೂ ನನಗೆ ನೆನಪಾಗುವುದಿಲ್ಲ. ಅತಿ ಕಠಿಣವಾದ ವ್ರತಗಳನ್ನು ಅವಳು ಕೈಕೊಳ್ಳುತ್ತಿದ್ದಳು. ಎಳ್ಳಷ್ಟೂ ಹಿಂಜರಿಯದೆ ಅವನ್ನು ಪೂರೈಸುತ್ತಿದ್ದಳು. ಬೇನೆ ಬಂದರೂ ಕೈಗೊಂಡ ವ್ರತಗಳನ್ನು ಬಿಡುತ್ತಿರಲಿಲ್ಲ. ಒಮ್ಮೆ ಚಾಂದ್ರಾಯಣ ವ್ರತ ಕೈಗೊಂಡಾಗ ಆಕೆ ಬೇನೆ ಬಿದ್ದದ್ದು, ಆದರೂ ಅದನ್ನು ಪೂರೈಸಿ ಕೊನೆಗಾಣಿಸಿದುದು ಇನ್ನೂ ನನಗೆ ನೆನಪಿದೆ.” 


         ಜೋಹಾನ್ಸ್ ಬರ್ಗದ ಆತನ ಟಾಲ್‍ಸ್ಟಾಯ್ ಫಾರ್ಮ ಹೌಸಿನಿಂದ ಆತನ ಅಂತಿಮ ದಿನಗಳ ಬಿರ್ಲಾ ಹೌಸಿನವರೆಗೂ ಆತ ಮತ್ತೆ ಮತ್ತೆ ಪ್ರಯೋಗಕ್ಕೊಡ್ಡಿಕೊಂಡದ್ದು ಈ ಹೆಣ್ಣು ಎಂಬ ಹಠದೊಂದಿಗೆ. ಇತ್ತೀಚೆಗೆ ಅಬಾ ಬರೆದಿಟ್ಟ ಗಾಂಧಿಯ ಕಾಮದೊಂದಿಗಿನ ಪ್ರಯೋಗಗಳ ಕುರಿತು ದೊಡ್ಡ ಗುಲ್ಲಾಯಿತು. ಆದರೆ ಈ ಗುಲ್ಲಿನ ಕುರಿತು ಗಲ್ಲಿ ಗಲ್ಲಿಯೂ ಸುತ್ತಾಡಿ ಮಾಧ್ಯಮಗಳ ಮುಂದೆ ಕುಳಿತು ಮಾತನಾಡಿದವರಿಗೆ ಅದೇನು ಅರ್ಥವಾಗಿತ್ತೊ ನನಗೀಗಲು ತಿಳಿದಿಲ್ಲ. ಗಾಂಧಿಯಂತು ಹಂತ ಹಂತಕ್ಕೆ ಅವಳ ವಿಶ್ವಾಸಕ್ಕೆ ಪಾತ್ರನಾಗುವ, ಅವಳನ್ನು ರಮಿಸುವ, ಆರಾಧಿಸುವ, ಅವಳನ್ನು ಹಾಡಿ ತಾನೇ ಸಮಾಧಾನಗೊಳ್ಳುವ ಅನೇಕ ಪ್ರಸಂಗಗಳನ್ನೂ ಹಾಗೆಯೇ ಅವಳೊಂದಿಗೆ ಜಗಳವಾಡಿ ತನ್ನದೆನ್ನನ್ನೋ ಕಲಿಸಲು ಯತ್ನಿಸಿದ ಸಂದರ್ಭಗಳನ್ನು ಸಾಕಷ್ಟು ದಾಖಲಿಸಿದ್ದಾನೆ. ಹೆಣ್ಣಿನೊಂದಿಗಿನ ತನ್ನ ಪ್ರಯೋಗಗಳನ್ನು ಹೇಳಿಕೊಂಡು ಆತ ಮುಕ್ತ. ಅದನ್ನು ಓದಿ ಒದ್ದಾಡುತ್ತಿರುವ ನಾವು ಮಾತ್ರ ಬಂಧಿತ. 

                           ಡರ್ಬನ್ನಿನಲ್ಲಿ ನಡೆದ ಒಂದು ಪ್ರಸಂಗ. ತನ್ನೊಂದಿಗೆ ವಾಸಿಸುವ ಅಸ್ಪೃಶ್ಯನೊಬ್ಬನ ಕೊಠಡಿಯನ್ನು ಸ್ವಚ್ಚಗೊಳಿಸಲಿಲ್ಲವೆಂದು ಗಾಂಧಿ ಕಸ್ತೂರಿ ಬಾಳನ್ನು ತೋಳು ಹಿಡಿದೆಳೆದು ಮನೆಯಿಂದ ಹೊರ ದಬ್ಬುತ್ತಾನೆ. ಅಸಹಾಯಕಳಾಗಿ ಹೊರಬಿದ್ದ ಕಸ್ತೂರಿ ಬಾ ಮನೆಯ ಕದತಟ್ಟಿ, “ನಿಮಗೆ ನಾಚಿಕೆ ಇಲ್ಲವೇ? ತಿಳುವಳಿಕೆ ಸ್ವಲ್ಪವೂ ಬೇಡವೆ? ನಾನು ಎಲ್ಲಿಗೆ ಹೋಗಲಿ? ಈ ಪರಸ್ಥಳದಲ್ಲಿ ನನ್ನನ್ನು ನೋಡಿಕೊಳ್ಳುವವರಾರು? ನಿಮ್ಮ ಒದೆ, ಪೆಟ್ಟು ತಿಂದುಕೊಂಡಿರಬೇಕೆಂದು ನಿಮ್ಮ ಇಚ್ಛೆ. ಏಕೆಂದರೆ ನಾನು ನಿಮ್ಮ ಹೆಂಡತಿ! ನಿಮ್ಮ ದಮ್ಮಯ್ಯ! ಸ್ವಲ್ಪ ಸುಮ್ಮನಿರಿ. ಬಾಗಿಲು ತೆರೆಯಿರಿ. ಇಂಥಹ ಹುಚ್ಚಾಟ ಜನರಿಗೆ ತಿಳಿದರೆ ಏನು ಗತಿ!”.
Mahatma Gandhi with Kastur Ba


              ಹೆಂಡತಿಯೊಂದಿಗಿನ ಈ ಹಗ್ಗದೆಳೆದಾಟ, ಎತ್ತು ಎಮ್ಮೆಯ ಜಗ್ಗಾಟ ಗಾಂಧಿಯ ಬದುಕಿನಲ್ಲಿಯೂ ಇತ್ತು ಎನ್ನುವುದೇ ಆತನನ್ನು ನಮಗೆ ಸಮೀಪವಾಗಿಸುವ ವಿಚಾರ. ಅನೇಕ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಗಾಂಧಿಗಾಗಬಹುದಾದ ಅನಾಹುತಗಳಿಂದ ರಕ್ಷಿಸಿದವರು ಮಹಿಳೆಯರೇ. ಅವನ ಹೋರಾಟಕ್ಕೆ ಆತ್ಮಸ್ಥೈರ್ಯ ತುಂಬಿ ನಟಲ್‍ನಿಂದ ನೌಖಾಲಿಯವರೆಗೆ ಕರುನಾಳು ಬೆಳಕಂತೆ ನಡೆಸಿಕೊಂಡು ಹೋದವರೂ ಮಹಿಳೆಯರೆ. ಆದರೆ ಇಂಥ ಗಾಂಧಿ ಸಂಸಾರಿಕ ಆರಂಭಿಕ ದಿನಗಳಲ್ಲಿ ದುಷ್ಟ ಸ್ನೇಹಿತನೊಬ್ಬನ ಪ್ರೇರಣೆಯಿಂದ ತನ್ನ ಹೆಂಡತಿಯೊಂದಿಗೆ ತಾನು ವರ್ತಿಸಿದನ್ನು ಕುರಿತು ಸ್ತ್ರೀಯನ್ನು ನಿಂದಿಸಿದ್ದನ್ನು ಕುರಿತು ತಪ್ಪೊಪ್ಪಿಗೆಯನ್ನು ನೀಡುತ್ತಾನೆ, “ಹೆಂಡತಿಯ ಬಗೆಗೆ ಆರಂಭದಲ್ಲಿ ನನಗೆ ಸಂದೇಹವಿತ್ತು. ಒಳಗಿನ ಸಂಶಯಕ್ಕೆ ಈ ಸ್ನೇಹಿತನಿಂದ ಇನ್ನಷ್ಟು ಪುಟ ದೊರೆಯಿತು. ಸ್ನೇಹಿತನ ಮಾತು ನನಗೆ ವೇದವಾಕ್ಯ. ಅವನ ಮಾತನ್ನು ನಂಬಿ ಅವಳನ್ನು ಹಿಂಸೆಪಡಿಸಿದೆ, ಈ ತಪ್ಪಿಗಾಗಿ ನಾನು ಎಂದಿಗೂ ಕ್ಷಮಿಸಿಕೊಳ್ಳುವಂತಿಲ್ಲ. ಗಂಡನ ಹಿಂಸೆಯನ್ನು ಹಿಂದೂ ಸ್ತ್ರೀ ಮಾತ್ರ ನುಂಗಿಕೊಳ್ಳಬಲ್ಲಳು. ಹೆಂಗಸು ತಾಳ್ಮೆಯ ಪ್ರತ್ಯಕ್ಷ ಅವತಾರವೆಂದು ನಾನು ತಿಳಿದುದು ಅದಕ್ಕಾಗಿಯೆ. ಯಜಮಾನ ಕಾರಣವಿಲ್ಲದೆ ಸಂದೇಹಗೊಂಡರೆ ಅವಳು ದುಡಿಯುವುದನ್ನು ಬಿಡಬಹುದು; ಹೆಂಡತಿ ಗಂಡನಲ್ಲಿ ಸಂದೇಹಗೊಂಡರೆ ಮನದಲ್ಲಿಯೇ ಮರುಗುವಳು. ಆದರೆ ಹೆಂಡತಿಯ ವಿಷಯದಲ್ಲಿ ಗಂಡನಿಗೆ ಸಂದೇಹ ಬಂದರೆ ಅವಳ ಪಾಡು ನಾಯಿ ಪಾಡು. ಆಮೇಲೆ ಅವಳು ಎಲ್ಲಿಗೆ ಹೋಗುವುದು? ಹಿಂದೂ ಸ್ತ್ರೀಗೆ ಸಾಮಾನ್ಯವಾಗಿ ಬಿಡುಗಡೆಗೆ, ದಾಂಪತ್ಯ ವಿಚ್ಛೇದನೆಗೆ ದಾರಿ ಇಲ್ಲ. ಕಟ್ಟಳೆ ಇವಳ ಬೆಂಬಲಕ್ಕೆ ಬರುವುದಿಲ್ಲ. ಅಂತೂ ನಾನು ಬುಡವಿಲ್ಲದ ಸಂದೇಹದಿಂದ ಹೆಂಡತಿಯನ್ನು ಬಹಳ ಕಾಡಿದೆ. ಇದನ್ನು ನಾನು ಎಂದಿಗೂ ಮರೆಯಲಾರೆ, ಕ್ಷಮಿಸಿಕೊಳ್ಳಲಾರೆ.


               "ಅಹಿಂಸಾ ತತ್ವವನ್ನು ನಾನು ಚೆನ್ನಾಗಿ ಅರಿತ ಮೇಲೆ ಹೆಂಡತಿಯಲ್ಲಿ ಸಂದೇಹಗೊಳ್ಳುವ ಈ ರೋಗ ಬೇರಿನೊಂದಿಗೆ ಕಿತ್ತುಹೋಯಿತು. ಬ್ರಹ್ಮಚರ್ಯೆಯ ಮಹತ್ವ ಆಗ ನನಗೆ ತಿಳಿಯಿತು. ಹೆಂಡತಿ ಗಂಡನ ತೊತ್ತಲ್ಲ. ಅವಳು ಅವನ ಒಡನಾಡಿ. ಸಹಚಾರಿಣಿ, ಸಹಧರ್ಮಿಣಿ; ಅವನ ಸುಖದುಃಖಗಳಲ್ಲಿ ಸಮಭಾಗಿನಿ. ತನ್ನ ಇಚ್ಛೆಯಂತೆ ನಡೆಯಲು ಗಂಡನು ಹೇಗೆ ಸ್ವತಂತ್ರನೊ ಹಾಗೆ ಅವಳೂ ಸ್ವತಂತ್ರಳು.”

              ಮಹಾತ್ಮನಲ್ಲದ ಈ ಗಾಂಧಿಗೂ ಬಹುತೇಕ ಸಾವಿನ ಮೊದಲ ದರ್ಶನವಾದದ್ದು ಮಗನಿಗಿಂತಲೂ ಹೆಚ್ಚಾಗಿದ್ದ ಮಹಾದೇವ ದೇಸಾಯಿ ತೀರಿಕೊಂಡಾಗ. 1944ರ ಆಸುಪಾಸಿನಲ್ಲಿ ಜರುಗಿದ ಈ ಘಟನೆಗೆ ಸಮಾಧಾನವನ್ನು ಹುಡುಕಿ ಗಾಂಧಿ ಆಗ ಮಾಕ್ರ್ಸ್, ಯಂಗೆಲ್ಸ್, ಲೆನಿನ್, ಷೇಕ್ಸ್‍ಪಿಯರುಗಳ ಬರಹಗಳನ್ನು ಓದಲಾರಂಭಿಸಿದ. ಪ್ರೀತಿಯ ಮಡದಿ ಕಸ್ತೂರಿಬಾಳಿಗೆ ನಿರಂತರ ಪಾಠ-ಪ್ರವಚನವನ್ನು ಮಾಡುವುದರ ಮೂಲಕ ದುಃಖದಿಂದ ಹೊರಬರಲು ಯತ್ನಿಸಿದ.

           ಗಾಂಧಿ ಎಂಬ ದೊಡ್ಡ ಬದುಕಿನ ಮನಸ್ಸನ್ನೇ ಆಕ್ರಮಿಸಿಕೊಂಡಿದ್ದ ಮಹಾದೇವ ದೇಸಾಯಿಯ ಸಾವು ಕಸ್ತೂರಿಬಾಳಿಗಂತೂ ಮತ್ತೆಂದೂ ಸರಿಪಡಿಸಲಾಗದ ಆಘಾತವಾಗಿತ್ತು. ಸತ್ಯಾಗ್ರಹ, ಸ್ವಾತಂತ್ರ್ಯ, ಅಹಿಂಸೆ, ಸಾಮರಸ್ಯ ಎಂಬ ಆದರ್ಶಗಳ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಗಾಂಧಿಯನ್ನು ಅಲ್ಲಲ್ಲಿ ತಡೆದು ನಿಲ್ಲಿಸಿ, ಅವನೊಳಗಿದ್ದ ಗಾಂಧಿ ಎಂಬ ಸಾಮಾನ್ಯ ಮನುಷ್ಯನನ್ನು ಮತ್ತೆ ಮತ್ತೆ ಮಾತಾಡಿಸಿದವಳು ಕಸ್ತೂರಿ ಬಾ. ಮಹಾದೇವ ದೇಸಾಯಿಯ ಸಾವಿನಿಂದ ಓಡಿ ಹೋಗಿ ಸಾಹಿತ್ಯ ಮತ್ತು ಶಿಕ್ಷಣದ ಆಸರೆ ಬಯಸಿದ್ದ ಗಾಂಧಿಯನ್ನು ಕಸ್ತೂರಿ ಬಾ ಎಳೆದು ತಂದು ಸಾವಿನೊಂದಿಗೆ ಮುಖಾಮುಖಿಯಾಗಿಸಿದಳು. ಈಗ ಆತನ ಬದುಕೇ ಬಾ ಆಗಿತ್ತು. 

                ಹೀಗೆ ಇಷ್ಟೊಂದು ದೀರ್ಘ ಹೋರಾಟದ ದಾರಿಯನ್ನು ಕ್ರಮಿಸಿಕೊಂಡು ಬಂದಿದ್ದ ಬಾ ಈಗ ಸಾವಿಗೆ ಹತ್ತಿರವಾದಳು. ಇಷ್ಟರಲ್ಲಿಯೇ ಕಸ್ತೂರಿ ಬಾ ಹಾಸಿಗೆ ಹಿಡಿದಳು. ಆಗಾಖಾನ್ ಅರಮನೆಯಲ್ಲಿ ಬಂಧಿಯಾಗಿರುವಾಗಲೇ ರೋಗಗ್ರಸ್ತಳಾದ ಬಾ ಆರೋಗ್ಯ ನೋಡಿಕೊಳ್ಳುತ್ತಿದ್ದ ಪೂನಾದ, ಡಾ.ದೀನ್ ಷಾ ಮೆಹ್ತಾ ಅವರನ್ನು ಕರೆಯಿಸಿಕೊಳ್ಳುವಷ್ಟು ಸ್ವಾತಂತ್ರ್ಯ ಗಾಂಧಿಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಗಾಂಧಿ ಎಂಬ ವ್ಯಕ್ತಿಯ ಸ್ವಾತಂತ್ರ್ಯವೇ ಪರಾತಂತ್ರವನ್ನು ಅನುಭವಿಸುತ್ತಿತ್ತು. ಈ ತ್ರಿಶಂಕು ಸ್ಥಿತಿಯಲ್ಲಿ ವಿವ್ಹಲನಾಗಿದ್ದ ಗಾಂಧಿಯನ್ನು ಕಸ್ತೂರಿ ಬಾ ನೋಡುವಂತಿರಲಿಲ್ಲ. ಗಂಡನ ತೊಡೆಯ ಮೇಲೆಯೇ ಸಾಯಬೇಕೆಂಬ ಮಹದಾಸೆಯನ್ನಿಟ್ಟುಕೊಂಡಿದ್ದ ಕಸ್ತೂರಿ ಬಾಳಿಗೆ ಕೊನೆಗೆ ಗೆಲುವು ಸಿಕ್ಕಿತು. 1944ರ ಫೆಬ್ರವರಿ 22ನೇ ತಾರೀಖು ಅವಳು ಸ್ವತಂತ್ರಳಾದಳು. 62 ವರ್ಷದ ಗಾಂಧಿಯೊಂದಿಗಿನ ದೀರ್ಘ ದಾಂಪತ್ಯದ ದಾರಿಯನ್ನು ಕ್ರಮಿಸಿದ್ದ ಕಸ್ತೂರಿ ಬಾ ನಿಧನಳಾದಳು. ‘ಬಾ’ ತನ್ನ ಸ್ವಾತಂತ್ರ್ಯವನ್ನು ಗಳಿಸಿಬಿಟ್ಟಳು. ಮಹಾತ್ಮ ಎಂದು ಪೂಜಿಸಲ್ಪಟ್ಟ ಕೋಟಿ-ಕೋಟಿ ಭಾರತೀಯರ ಮಧ್ಯ ಗಾಂಧಿ ಇಂದು ಶಬ್ಧಶಃ ಒಂಟಿಯಾದ. ಸಾಕಿಯರನ್ನು ಕಳೆದುಕೊಂಡು ನನ್ನಂತವರ್ಯಾರೂ ಹಾಡಿಕೊಳ್ಳುವಂತೆ ಈಗ ಈ ಗಾಂಧಿಯೂ ಹಾಡಿಕೊಂಡಿರಬಹುದೇ?



ನಿನ್ನ ಚಿತೆ ಸುಡುವಲ್ಲಿ
ನನ್ನ ಕನಸುಗಳಿಲ್ಲ
ಕಳೆದ ಬದುಕೆಲ್ಲವೂ
ಬೇವು ಬೆಲ್ಲ

ನಿನ್ನ ರಾತ್ರಿಯ ಎದೆಗೆ
ನನ್ನ ನೆನಪುಗಳಿಲ್ಲ
ಉಳಿದ ಉಸಿರೆಲ್ಲವೂ
ಉರಿದ ಹುಲ್ಲು

ನಿನ್ನ ಮನದುಗುಡದಲಿ
ನನ್ನ ಹಾಡುಗಳಿಲ್ಲ
 ನಿನ್ನೆ ಎಂಬುವುದೊಂದೆ
ಬೆಳಕು ಎಲ್ಲ

ಹಾರಿದರೆ ಹರುಷ
ಹುದುಗಿದರೆ ಹಸಿರು.
ಹೇಗಿದ್ದರೂ ಸರಿಯೆ
ಹರಕೆಯಾಗಿ
ನನ್ನೆದೆಯ ತೋಟದ 
ಕರಕಿಯಾಗಿ