Friday 27 June 2014

ಈ ಸಾವೂ ಒಂದು ಸುಂದರ ಪಯಣ

   ಅಥೇನ್ಸ್‍ನಲ್ಲಿ ಹುಟ್ಟಿದ ಸಾಕ್ರೆಟೀಸ್ ಶ್ರೇಷ್ಠ ತತ್ವಜ್ಞಾನಿ. ತನ್ನ ಜೀವನಾವಧಿಯ ಕೊನೆಯ ಮೂವತ್ತು ವರ್ಷಗಳನ್ನು ಅಥೇನ್ಸ್‍ದ ಪ್ರಜೆಗಳಿಗೆ ಕೆಲವು ಸತ್ಯಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಕಳೆದಿದ್ದಾನೆ. ಪ್ರಪಂಚ ಕಂಡ ಅದ್ಭುತ ಚಿಂತಕ ಸಾಕ್ರೆಟಿಸ್. ತನ್ನ ಜನರ ಅಜ್ಞಾನದಿಂದಾಗಿ ವಿಷಪ್ರಾಶಾಣಕ್ಕೊಳಗಾಗಿ ಮರಣ ಹೊಂದಿದ. ಆದರೆ ಸಾವಿನ ಕೊನೆಯ ಕ್ಷಣದವರೆಗೂ ಸತ್ಯದೊಳಗಿನ ಆಸಕ್ತಿಯನ್ನು ಎಂದೂ ಕಳೆದುಕೊಳ್ಳಲಿಲ್ಲ. ಬದುಕನ್ನು ಪಣಕ್ಕೊಡ್ಡಿ ಸತ್ಯವನ್ನೇ ಸ್ಥಾಪಿಸಲು ಹೆಣಗಾಡಿದ. ಇನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಸಾಯಲಿದ್ದ ಸಾಕ್ರಟಿಸ್, ಕೊನೆಗೆ ಸಾವನ್ನೂ ಕುರಿತು ತನ್ನ ಜನರಿಗೆ ತಿಳುವಳಿಕೆ ನೀಡಲು ಯತ್ನಿಸಿದ. 
   ಈತ ಯುವಕನಾಗಿದ್ದಾಗ, ಯಾವುದನ್ನು ನಾವು ನಿಸರ್ಗದ ಪರಿಶೋಧ ಎಂದು ಕರೆಯುತ್ತೇವೆಯೋ ಆ ಕುರಿತು ಅತ್ಯಂತ ಕುತೂಹಲಭರಿತನಾಗಿದ್ದ. ಪ್ರಪಂಚದ ಎಲ್ಲ ವಸ್ತುಗಳ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳುವುದು ಮಹತ್ವದ ಸಾಧನೆಯೆಂದು ಆತನ ನಂಬಿಕೆಯಾಗಿತ್ತು. ಈ ಜೀವ ಜಗತ್ತಿನಲ್ಲಿ ಯಾಕೆ ಪ್ರತಿಯೊಂದು ವಸ್ತು ಅಸ್ತಿತ್ವವನ್ನು ಪಡೆದುಕೊಳ್ಳುತ್ತದೆ? ಯಾಕೆ ನಶಿಸುತ್ತದೆ? ಮತ್ತೇ ಯಾಕೆ ಬಾಳುತ್ತದೆ? ಎನ್ನುವ ಪ್ರಶ್ನೆಗಳು ಆತನನ್ನು ಬಳಲಿಸಿದ್ದವು.
  ಸಾಕ್ರೆಟಿಸ್‍ನನ್ನು ಸಂತೃಪ್ತಪಡಿಸಬಲ್ಲ ಗುರುವೊಬ್ಬ ಸಿಗಲಾರದಕ್ಕಾಗಿ ಆತ ತನ್ನದೇ ಆದ ರೀತಿಗಳನ್ನು ಹುಡುಕುವಲ್ಲಿ ತಲ್ಲೀನನಾಗಿದ್ದ. ಹಾಗಂತ ಆತನಿಗೆ ಯಾರದೋ ಗುರುವಾಗಬೇಕೆನ್ನುವ ಹಂಬಲವೂ ಇರಲಿಲ್ಲ. ಕೇಳಲು ಸಿದ್ಧನಿರುವ ಯಾರೊಂದಿಗೂ ಆತ ಸಂವಾದಿಸಲು ಸಿದ್ಧನಿದ್ದ. ತನ್ನಷ್ಟಕ್ಕೆ ತಾನು ಜಾಣ ಎಂದು ಎಂದೂ ಪರಿಗಣಿಸದ ಸಾಕ್ರಟಿಸ್ ತನಗಿಂತಲೂ ಜಾಣರು ಯಾರಾದರೂ ಇದ್ದಾರೆಯೆ? ಎಂದು ತಿಳಿದುಕೊಳ್ಳುವಲ್ಲಿ ಕುತೂಹಲಬರಿತನಾಗಿದ್ದ. ಹೀಗಾಗಿ ಯಾರು ಜಾಣರೆಂದು ಘೋಷಿಸಿಕೊಂಡಿದ್ದರೋ ಅಂಥವರ  ಮುಂದೆ ಸಾಕ್ರಟಿಸ್ ಪ್ರಶ್ನೆಯಿಡುತ್ತಲೇ ಹೋದ. ದೇವವಾಣಿಯಿಂದ ಧಿಕ್ಕರಿಸಲ್ಪಟ್ಟ ಆತನ ಈ ಶೋಧ ನಿಲ್ಲಲಿಲ್ಲ. ಜ್ಞಾನಿಗಳು ಯಾರೂ ಸಿಗದ ಕಾರಣ ತನ್ನ ಶೋಧವನ್ನು ಮುಂದುವರಿಸಿದ ಸಾಕ್ರೆಟಿಸ್, ಅದನ್ನು ಪ್ರಪಂಚದಲ್ಲಿ ಅತ್ಯಂತ ಪವಿತ್ರಕಾರ್ಯ ಎಂದು ಪರಿಗಣಿಸಿದ. ಹೀಗಾಗಿ ಜ್ಞಾನದ ಅನ್ವೇಷಣೆಗೆ ಸಾಕ್ರೆಟಿಸ್ ಕೊರಳೊಡ್ಡಿದ.
      ವಿಷ ಸೇವಿಸುವ ಮುಂಚೆ ಆತ ಹೇಳುತ್ತಾನೆ- "ಬಂಧುಗಳೇ, ನೀವೀಗ ಚರಿತ್ರೆಯನ್ನು ದುಷ್ಪ್ರೇರಿತ ಜನಗಳ ಕೈಯಲ್ಲಿ ಕೊಡುತ್ತಿದ್ದೀರಿ. ನಾನು ಜಾಣನಲ್ಲನೆಂದು ನಾನೇ ಘೋಷಿಸಿಕೊಂಡಾಗಿಯೂ 'ಜಾಣತನದ ದುರಹಂಕಾರದಲ್ಲಿ ಮೆರೆಯುತ್ತಿದ್ದಾನೆ ಸಾಕ್ರೆಟಿಸ್' ಎಂದು ಸುಳ್ಳಾಡಿದವರ ಕೈಗೆ ನೀಡುತ್ತಿದ್ದೀರಿ. ಈಗ ಯಾವುದನ್ನೂ ತಡೆಯದಷ್ಟು ಪರಿಸ್ಥಿತಿ ಮುಂದುವರೆದಿದೆ. ಆದರೆ ನಮ್ಮ ಮುಂದುವರಿಕೆ ಬದುಕಿನೆಡೆಗೆ ಅಲ್ಲ, ಸಾವಿನೆಡೆಗೆ. ನೋಡಿ ಜೀವನದಲ್ಲಿ ಎಷ್ಟೊಂದು ಮುಂದೆ ಬಂದು ಬಿಟ್ಟಿದ್ದೇವೆ. ಅದೂ ಬದುಕಿನೆಡೆಗೆ ಅಲ್ಲ ಸಾವಿನೆಡೆಗೆ.
     ನನ್ನ ಭಾಂದವರೇ, ವಾದಕ್ಕೆ ನನ್ನನ್ನೇ ನಾನು ಅರ್ಪಿಸಿಕೊಂಡಿದ್ದೇನೆ. ಅದೇ ನನಗೆ ಈ ಜೀವನದ ಶಿಕ್ಷೆಯಿಂದ ಮುಕ್ತಿಯೆನಿಸಿದ್ದು. ಅದು ಉದ್ಧಟತನವೆಂದು ನಾನೆಂದೂ ಅಂದುಕೊಂಡಿಲ್ಲ. ಆದರೆ ಸತ್ಯದ ನನ್ನ ಮಾತುಗಳು ನಿಮ್ಮ ಕಿವಿಗಳಿಗೆ, ಮನಸ್ಸಿಗೆ ಮುದನೀಡುವುದು ಸಾಧ್ಯವಿಲ್ಲ.
ನಾನು ಬದುಕುವುದಕ್ಕಿಂತಲೂ ಈ ಸಾವನ್ನು ಪ್ರೀತಿಸಿದ್ದೇನೆ. ಸತ್ವ ಪರೀಕ್ಷೆಯಲ್ಲಾಗಲೀ, ಯುದ್ಧದಲ್ಲಾಗಲಿ: ನಾನಾಗಲಿ, ಇನ್ನಾವುದೇ ಯೋಧನಾಗಲಿ ಸಾವನ್ನು ಧಿಕ್ಕರಿಸುವ, ಅದರಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಬಹುದೆ? ಯುದ್ಧ ಭೂಮಿಯಲ್ಲಿ ರಕ್ಷಿಸಿಕೊಳ್ಳಬೇಕೆನ್ನುವವ ಆಯುಧಗಳನ್ನು ಬದಿಗಿಟ್ಟು ತನ್ನ ಜೀವದ ಬೆನ್ನಟ್ಟಿದವನಿಗೆ ಮೊರೆಹೋಗಬೇಕಷ್ಟೆ. ಗಂಡಾಂತರಗಳಲ್ಲಿ ಅನೇಕ ಬಗೆಗಳಿವೆ. ಸತ್ಯವನ್ನು ಹೇಳಬೇಕೆನ್ನುವವ ಅದರ ಒಂದಿಲ್ಲ ಒಂದು ಪ್ರಕಾರವನ್ನು ಎದುರಿಸಲೇಬೇಕು.
      ಸಾವಿನಿಂದ ಪಾರಾಗುವುದು ಕಷ್ಟದ ಕೆಲಸವೇನಲ್ಲ ಗೆಳೆಯರೆ. ಆದರೆ ಎದೆಗುಂದುವಿಕೆಯಿಂದ ಪಾರಾಗುವುದು ಅತ್ಯಂತ ಕಷ್ಟಕರ.  ಹಿಂಜರಿಕೆ ಸಾವಿಗಿಂತ ವೇಗವಾಗಿ ಆವರಿಸಿಕೊಳ್ಳುತ್ತದೆ. ನಾನು ನಿಮ್ಮಿಂದ ಮರಣದಂಡನೆಗೆ ಒಳಗಾಗಿರುವುದರಿಂದ ಸತ್ಯದಿಂದ ದೂರವಾಗುತ್ತಿದ್ದೇನೆ ಮತ್ತು ಅನ್ಯಾಯದ ಬಾಹುಗಳಲ್ಲಿದ್ದೇನೆ. ಯಾರು ನನ್ನ ಈ ಶಿಕ್ಷೆಗೆ ಕಾರಣರಾದರೋ ಅವರಿಗೆ ಭವಿಷ್ಯ ಏನಾಗಬಹುದು ಎಂದು ಹೇಳಲಿಚ್ಚಿಸುತ್ತೇನೆ. ನನ್ನ ಸಾವಿನ ಮರುಕ್ಷಣವೇ ಇಂತಹದೇ ಪರಿಸ್ಥಿತಿ ನಿಮ್ಮದೂ ಆಗಲಿದೆ. ಹಾಗೇ ನೋಡಿದರೆ ಇದಕ್ಕಿಂತಲೂ ಗಂಭೀರವಾಗಲೂಬಹುದು.
     ನನ್ನ ಮೇಲೆ ಹೊರಿಸಿದ ಆಪಾದನೆಯೆಲ್ಲವೂ ನಿಮ್ಮ ಮೇಲಿನವೂ. ನೀವು ಇಂದು ಈ ಕ್ರಿಯೆಯನ್ನು ಮಾಡುತ್ತಿದ್ದೀರಿ, ಯಾಕೆಂದರೆ ಇಂದು ನೀವು ವಿವರಣೆಗಳನ್ನು ಕೊಡಬೇಕಿಲ್ಲ. ಆದರೆ ಮುಂದೊಂದು ದಿನ ನೀವು ಇದರಿಂದ ಓಡಿಹೋಗುವಂತಿಲ್ಲ. ನಿಮ್ಮನ್ನು ಆಪಾದಿಸುವರ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಅವರಿನ್ನೂ ಭಯಾನಕರಾಗುತ್ತಾರೆ. ನನ್ನನ್ನು ಸಾವಿಗೆ ದೂಡುವುದರ ಮೂಲಕ ಇವರನ್ನು ನೀವು ತಡೆದು ನಿಲ್ಲಿಸಬಹುದು ಅಂದುಕೊಂಡಿದ್ದರೆ ಅದೂ ನಿಮ್ಮ ತಪ್ಪು ಕಲ್ಪನೆ. ಈ ತರಹದ ಪಲಾಯನ ಅಸಾಧ್ಯವಾಗಿದೆ, ಅಗೌರವದಿಂದ ತುಂಬಿಕೊಂಡಿದೆ. ಹೀಗಾಗಿ ಈ ಸಾವು ಅದೆಷ್ಟೋ ಗೌರವಾನ್ವಿತವಾಗಿದೆ. ನಿಮ್ಮ ಕರ್ತವ್ಯ ಇನ್ನೊಬ್ಬರ ಮೇಲೆ ನಿಗಾಯಿಡುವುದಲ್ಲ, ಬದಲಾಗಿ ನಿಮ್ಮೊಳಗೇ ನೀವು ಇಳಿಯುವುದು. ಈ ಭವಿಷ್ಯವಾಣಿಯನ್ನು ನಿಮ್ಮ ಮುಂದೆ ಇಡುವುದರ ಮೂಲಕ ವಿದಾಯವನ್ನು ಬಯಸುತ್ತೇನೆ.


 ಸಾಕ್ರೆಟಸ್ ಚರ್ಚಿಸಿರುವಂತೆ ಮನುಷ್ಯನ ಸಾವಿನಲ್ಲಿ ಎರಡು ಸಾಧ್ಯತೆಗಳಿವೆ. ಒಂದು ಸತ್ತ ವ್ಯಕ್ತಿ ಈ ಪ್ರಪಂಚದ ಲೆಕ್ಕಾಚಾರದಿಂದ ಹೊರತಾಗುತ್ತಾನೆ, ಪ್ರತ್ಯೇಕಿಸಲ್ಪಡುತ್ತಾನೆ ಅಥವಾ ಆತ್ಮಕ್ಕೊಂದು ದಾರಿ ತೆರೆದುಕೊಳ್ಳುತ್ತಾನೆ. ಅದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ, ದೇಹದಿಂದ  ಮತ್ತೊಂದು ದೇಹಕ್ಕೆ, ಆತ್ಮಕ್ಕೆ ದಾರಿಯಾಗುತ್ತದೆ. ಆತನ ಪ್ರಕಾರ "ಎಲ್ಲ ಅನುಭೂತಿಗಳಿಂದ ಸಾವು ಒಂದು ಪ್ರತ್ಯೇಕತೆಯ ಮಾರ್ಗ ಎನ್ನುವದಾದರೆ ಅದೊಂದು ನಿದ್ರೆ. ಅಲ್ಲಿ ನಿದ್ರಿಸುವವನಿಗೆ ಕನಸುಗಳಿಲ್ಲ. ಕನಸು ಕಾಣುವವನೊಬ್ಬ ಬೇರೆಯೇ. ಇಲ್ಲಿ ಸಾವು ಒಂದು ಅದ್ಭುತ ಗಳಿಕೆ. ನಾನು ಅಂದುಕೊಳ್ಳುತ್ತೇನೆ, ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಕನಸುಗಳಿಲ್ಲದೇ ಅತ್ಯಂತ ಸುಖವಾಗಿ ಎಷ್ಟು ರಾತ್ರಿಗಳು ನಿದ್ರಿಸಿದ? ಹಾಗೂ ಉಳಿದ ರಾತ್ರಿ ಮತ್ತು ಹಗಲುಗಳಿಗಿಂತಲೂ ಅದೆಷ್ಟು ಉತ್ತಮವಾಗಿತ್ತು ಎನ್ನುವುದನ್ನು ಲೆಕ್ಕಕ್ಕಿಡುವುದಾದರೆ ಆತ ಈ ಗಳಿಕೆಯನ್ನು ಕೂಡ (ಸಾವಿನ) ಲೆಕ್ಕಕ್ಕೆ ತೆಗೆದುಕೊಳ್ಳಲೇಬೇಕು. ಇದು ನಾನು ಸಾಮಾನ್ಯ ಪ್ರಜೆಗಳಿಗಷ್ಟೇ ಸೂಚಿಸುತ್ತಿಲ್ಲ. ಅರಸನಿಗೂ ಕೂಡ. ಸಾವು ಇಂತಹ ಒಂದು ಲೆಕ್ಕಾಚಾರದ ವಸ್ತು. ನಿಜಕ್ಕೂ ಅದೊಂದು ಲಾಭವೇ. ಅದರ ಮುಂದೆ ಭವಿಷ್ಯದ ಯಾವ ದಿನಗಳೂ ನನಗೆ ಅದ್ಭುತವೆನಿಸುತ್ತಿಲ್ಲ. ಆದರೆ ಸಾವನ್ನು ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಯಣ ಎನ್ನುವುದಾದರೆ ಎಲ್ಲ ತೀರಿಹೋದವರು ಬದುಕಿದ್ದಾರೆ ಎಂದೇ ಅರ್ಥ. ಹೀಗೆಂದ ಮೇಲೆ ಇದಕ್ಕಿಂತಲೂ ದೊಡ್ಡ ಲಾಭ ಇನ್ನೇನು ಬೇಕು ಹೇಳಿ? ಈ ಸಾವು ಸತ್ತ, ಅಗಣಿತ, ಸಾಯದ ಪ್ರತಿಭೆಗಳ ಲೆಕ್ಕಕ್ಕೆ ನನ್ನನ್ನು ಸೇರಿಸುವುದಾದರೆ ನಾನು ಮತ್ತೆ ಮತ್ತೆ ಸಾಯಲು ಇಚ್ಛಿಸುತ್ತೇನೆ." ಸಾಕ್ರೆಟಿಸ್ ಹೇಳುತ್ತಾನೆ, "ನಮ್ಮ ಅನ್ಯಾಯದ ಲೆಕ್ಕಾಚಾರಕ್ಕೆ ಬಲಿಯಾದ ಅನೇಕ ಚಿಂತಕರ ಜೊತೆ ತಾನಿರಲು ಬಯಸುತ್ತೇನೆ" ಎಂದು. ಆತ ಹೇಳುತ್ತಾನೆ, "ನನ್ನ ಬದುಕಿನ ಅತ್ಯಂತ ಶ್ರೀಮಂತ ಗಳಿಗೆ ಯಾವುದಾಗಿತ್ತು ಎಂದು ನೀವು ಪ್ರಶ್ನಿಸುವುದಾದರೆ ನಿಮ್ಮೊಂದಿಗೆ ವಾದಿಸುವ ಘಳಿಗೆಯೇ ಆಗಿತ್ತು"’ಎಂದು. 
ಜನರನ್ನು ಪ್ರಶ್ನಿಸುವುದು, ಪರೀಕ್ಷಿಸುವುದು, ಅತ್ಯಂತ ಜಾಣನಾದವನನ್ನು ಹುಡುಕುವುದು ಎಲ್ಲವೂ ತನಗೆ ಪ್ರಿಯವಾದವುಗಳೇ. ಆದರೆ ಯಾವ ಬೆಲೆಯನ್ನು ತೆತ್ತು? ಅದೇನೆಯಾಗಿರಲಿ, ಅದೊಂದು ಖುಷಿಯ ಕೆಲಸ ಸಾಕ್ರೆಟಿಸನಿಗೆ. ಹೀಗಾಗಿ ಸಾವೂ ಶಿಕ್ಷೆ ಎನ್ನಿಸಲಿಲ್ಲ ಆತನಿಗೆ. ಆತನ ಪ್ರಕಾರ ತನ್ನ ಸುತ್ತಲೂ ಸಾವಿನ ಮೋಜನ್ನು ನೋಡಲು ಸೇರಿದವರಿಗಿಂತಲೂ ಸಾವಿನಲ್ಲಿ ಬದುಕುತ್ತಿರುವವರು ಹೆಚ್ಚು ನಿಶ್ಚಿಂತರಾಗಿದ್ದಾರೆ, ಸುಖವಾಗಿದ್ದಾರೆ ಮತ್ತು ಅಮೃತ ಪುತ್ರರಾಗಿದ್ದಾರೆ. ಆ ಕಾರಣಕ್ಕಾಗಿ ಅವರು ಶಾಶ್ವತವೂ ಮತ್ತು ಸತ್ಯವೂ ಆಗಿದ್ದಾರೆ.
ಆದ್ದರಿಂದ ಸಾವಿನ ಕೆಲವು ಕ್ಷಣಗಳ ಮುನ್ನ ತನ್ನ ಜನರನ್ನು, "ಓ ನನ್ನ ನ್ಯಾಯಾಧೀಶರೆ, ನೀವೆಲ್ಲರೂ ಸಾವಿನೊಂದಿಗಿನ ಆ ನಿರೀಕ್ಷೆಗಳನ್ನು ಆನಂದಿಸಬೇಕು. ಒಬ್ಬ ಒಳ್ಳೆಯ ಮನುಷ್ಯನಿಗೆ ಕೆಟ್ಟದ್ದೆನ್ನುವುದು ಯಾವುದೂ ಇಲ್ಲ. ಅದು ಆತನ ಬದುಕಿನ ಜೀವಿತಾವಧಿಯಲ್ಲಿರಬಹುದು ಅಥವಾ ಆತನ ಸಾವಿನ ನಂತರದಾಗಿರಬಹುದು. ದೇವರೊಂದಿಗಿನ ಆತನ ಕಾಳಜಿಗಳನ್ನು ನೀವು ಪ್ರಶ್ನಿಸಲಾಗದು. ನನಗೆ ಗೊತ್ತಿದೆ. ಇಂದು ನನ್ನೊಂದಿಗೆ ನಡೆದಿರುವುದೆಲ್ಲವೂ ಆಕಸ್ಮಿಕವಲ್ಲ. ಎಲ್ಲವೂ ನನಗೆ ಸ್ಪಷ್ಟವಾಗಿದೆ. ಈ ಸಾವು ನನ್ನನ್ನು ಕಾಳಜಿಗಳಿಂದ ಮುಕ್ತಗೊಳಿಸುತ್ತದೆ ಅಷ್ಟೇ. ನಿಮ್ಮ ಯಾವ ಆಪಾದನೆಗಳು ನನ್ನೆಡೆಗೆ ಗುರಿಮಾಡಿದವು ಅಲ್ಲ. ನನ್ನನ್ನು ಆಪಾದಿಸಿದವರ ವಿರುದ್ಧ ನಾನು ಯಾವುದೇ ತಿರಸ್ಕಾರ ಭಾವ ತಾಳಿಲ್ಲ. ನನ್ನನ್ನು ಭಗ್ನಗೊಳಿಸುವುದಕ್ಕೋಸ್ಕರ ಅವರು ಎಷ್ಟೇ ಉದ್ದೇಶಪೂರಿತವಾಗಿ ವರ್ತಿಸಿದ್ದರೂ ಅವರು ನನ್ನನ್ನು ನಾಶಪಡಿಸಲಾಗಿಲ"್ಲ’ಎಂದು ಸ್ಪಷ್ಟಿಕರಿಸುತ್ತಾನೆ.

ಗುಡಿಸಲಲ್ಲಿ, ದೇವಾಲಯದಲ್ಲಿ ದೀಪ ಹಚ್ಚಿಟ್ಟಂತೆ ಮಾತನಾಡಿದ ಸಾಕ್ರೆಟಿಸನಿಗೆ, ಮಾತು ವ್ಯಸನವಾಗಿರಲಿಲ್ಲ. ಹೀಗಾಗಿ ಸಾವೂ ಆತನನ್ನು ಸಾಯಿಸಲಾಗಲಿಲ್ಲ. ಬದಲಾಗಿ ಸಾಕ್ರೆಟಿಸನಿಂದ ಚರ್ಚಿಸಲ್ಪಟ್ಟ ಸಾವೂ ಕೂಡ ಹೊಸ ಅರ್ಥ ಸಾಧ್ಯತೆಯೊಂದಿಗೆ ಮರು ಹುಟ್ಟು ಪಡೆದಿದೆ. ಆತನ ಸಾವು ಚರಿತ್ರೆಯ ಪುಟವಾಗಿದೆ.

No comments:

Post a Comment