Saturday 14 June 2014

ವರ್ತಮಾನದ ಬಿಕ್ಕಟ್ಟುಗಳು

ದಿನಾಂಕ: 14/06/2014    ಸ್ಥಳ: ಶ್ರೀರಂಗ ಸಭಾಂಗಣ, ರಂಗಾಯಣ

ಹಸಿವೆಗೆ ನಾನು ಮೈ ಮಾರಿಕೊಂಡೆ
ಆದರೆ ನಿನಗೆ ಆತ್ಮ ಮಾರಿಕೊಳ್ಳುವಂಥದ್ದೇನಾಗಿತ್ತು?

ಬಿಕ್ಕಟ್ಟು 1: ನೋಬೆಲ್ ಪ್ರಶಸ್ತಿಯನ್ನು ಪಡೆಯುತ್ತ ಕೆಲವು ಮಹತ್ವದ ಮಾತುಗಳನ್ನಾಡಿದ ವಿಲಿಯಂ ಫಾಕ್‍ನರ್ ಅಕ್ಷರ ಲೋಕದ ನಮ್ಮಗಳಿಗೆ ಮಹತ್ವದ ಪ್ರಶ್ನೆಯೊಂದನ್ನು ಕೇಳುತ್ತ ಸೃಜನಲೋಕದ ಬಿಕ್ಕಟ್ಟಿಗೆ ಸಮಾಧಾನ ನೀಡಿದ್ದಾನೆ. ಬರಹಗಾರರು ಬಳಲುತ್ತಿರುವ ಉಭಯ ಭ್ರಷ್ಟತೆಯ ಬಿಕ್ಕಟ್ಟಿಗೆ ದಾರಿ ತೋರಿಸಿದ್ದಾರೆ. .
    ಇಂದು ನಮ್ಮೆಲ್ಲರ ದುರಂತವೂ ಸಾಮಾನ್ಯವಾದದು ಹಾಗೂ ಸಾರ್ವತ್ರಿಕವಾದದು. ಶಾರೀರಕವೂ, ಸಾರ್ವತ್ರಿಕವೂ ಆದ ಈ ದುರಂತವನ್ನು ನಾವು ಸಹಿಸಿಕೊಳ್ಳುತ್ತಾ ಬಂದಿದ್ದೇವೆ, ಮುಂದೆಯೂ ಸಹಿಸಿಕೊಳ್ಳಬಹುದೇನೊ. ಆತ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳೇ ಇಲ್ಲವೇನೊ ಎನ್ನುವಷ್ಟು ಭೌತಿಕ ಜಗತ್ತಿನಲ್ಲಿ ನಾವು ಮುಳುಗಿ ಹೋಗಿದ್ದೇವೆ. ಈಗ ನಿತ್ಯವೂ ನಮ್ಮ ಮುಂದಿನ ಸಮಸ್ಯೆಯೊಂದೆ - ನಾವು ಯಾವ ಕ್ಷಣದಲ್ಲಿ ಸ್ಪೋಟಗೊಳ್ಳುತ್ತೇವೆ? ಈ ಸಮಸ್ಯೆಯನ್ನು ಮುಂದಿರಿಸಿಕೊಂಡು ಈ ಬಾಹ್ಯ ಒತ್ತಡದ ಅಡಿಯಲ್ಲಿ ಸಾಹಿತ್ಯವನ್ನು ರಚಿಸುತ್ತಿರುವ ಬಹುಪಾಲು ಯುವ ಬರಹಗಾರರು ಮನುಷ್ಯ ಹೃದಯದೊಳಗಿನ ಆಂತರಿಕ ತುಮುಲವನ್ನು ಮರೆತೇ ಬಿಟ್ಟಿದ್ದಾರೆ. ಆದರೆ ಚಿರಕಾಲವೂ ಉಳಿಯಬಹುದಾದ, ಬಾಳಬಹುದಾದ, ದಾಖಲೆಗೆ ಅರ್ಹವಾದ ಸಾಹಿತ್ಯ ಆಂತರಿಕ ತುಮುಲದಿಂದ ಮಾತ್ರ ಹುಟ್ಟುತ್ತದೆ. ವರ್ತಮಾನದ ಬರಹಗಾರ ಇದನ್ನು ಚೆನ್ನಾಗಿ ತಿಳಿಯಬೇಕಾಗಿದೆ. ಭಯದಲ್ಲಿರುವುದೇ ಎಲ್ಲ ಬರಹಗಳ ಬುನಾದಿ. ಲೇಖಕನಾಗುವವನು ಇದನ್ನು ಅರಿಯಬೇಕಾದದು ಅವಶ್ಯ. ಹೃದಯ ಸಂಬಂಧಿ ಪುರಾತನ ಮೌಲ್ಯಗಳಾದ ಪ್ರೀತಿ, ಗೌರವ, ದುಃಖ, ದುರಹಂಕಾರ, ಸಹಾನುಭೂತಿ ಹಾಗೂ ತ್ಯಾಗಗಳಂಥ ಅಂಶಗಳಿಲ್ಲದ ಯಾವ ಸಾಹಿತ್ಯವೂ ತಾತ್ಕಾಲಿಕವಾಗಿರುತ್ತದೆ ಹಾಗೂ ಹುಟ್ಟುತ್ತಲೇ ಅವಸಾನದ ಹಂತದಲ್ಲಿರುತ್ತದೆ. ಇವುಗಳನ್ನು ಚರ್ಚಿಸದ ಲೇಖಕ ಶಾಪಗ್ರಸ್ಥನಂತೆ. ಇವುಗಳ ಹೊರತಾಗಿ ಸಾಹಿತ್ಯವನ್ನು ರಚಿಸಲು ಹೊರಟ ಸಾಹಿತಿ ದೇಹವನ್ನು ಕುರಿತು ಮಾತ್ರ ಬರೆಯುತ್ತಾನೆ. ಅಂತಯೇ ಅಂತಿಮವಾಗಿ ಬದುಕಿನಲ್ಲಿ ಸಹಾನುಭೂತಿ ಹಾಗೂ ಸುಜೀವನದ ಆಶಾಕಿರಣವನ್ನು ಕಾಣದೇ ಹೊರಗುಳಿಯುತ್ತಾನೆ. ಇಂತಹ ಸಾಹಿತಿ ಪ್ರಪಂಚದ ಎಲ್ಲ ಜನರನ್ನು ಭಾದಿಸಿದ ಯಾವ ನೋವನ್ನು ಕುರಿತು ಬರೆಯಲಾರ, ಅಂತೆಯೇ ಯಾವ ನೆನಪನ್ನು ಉಳಿಸಿ ಹೋಗಲಾರ. ಇವನ ಬರಹದಲ್ಲಿ ಹೃದಯ ಕುರಿತಾದ ಸಾಲುಗಳಿರುವುದಿಲ್ಲ. ಬರೀ ಗ್ರಂಥಗಳ ಕುರಿತು ಚರ್ಚೆಯಿರುತ್ತದೆ.

ಬಿಕ್ಕಟ್ಟು 2: ನಾಲ್ಕು ನೂರು ವರ್ಷಗಳ ಗುಲಾಮಿ ಇತಿಹಾಸ ಈ ದೇಶದಲ್ಲಿ ಏನೆಲ್ಲ ಆಗಿದ್ದರೂ ಅನ್ನ, ಶಿಕ್ಷಣ ಮತ್ತು ಧರ್ಮದ ಮಾರಾಟವಾಗಿರಲಿಲ್ಲ. ಆದರೆ ಕೊಳ್ಳುಬಾಕ ಸಂಸ್ಕøತಿಯ ಈ ದಿನಗಳಲ್ಲಿ ಈಗ ಇದೆಲ್ಲವೂ ಜರುಗಿದೆ. ನಯವಂಚಕರನ್ನು, ಜೊಳ್ಳುಗಳನ್ನು ಸೃಷ್ಠಿಸುತ್ತಿರುವ ನಮ್ಮ ಶಿಕ್ಷಣ ನಮ್ಮ ಯುವಕರನ್ನು ಎತ್ತ ನಡೆಯಿಸಿಕೊಂಡು ಹೊರಟಿದೆ ಎನ್ನುವುದನ್ನು ಜೆ.ಕೃಷ್ನಮೂರ್ತಿ ಈ ತೆರನಾಗಿ ವಿವರಿಸುತ್ತಾರೆ.
      ಆಧುನಿಕ ಶಿಕ್ಷಣ ನಮ್ಮನ್ನು ವಿಚಾರಹೀನರನ್ನಾಗಿಸುತ್ತಿದೆ. ನಾವು ನಾವಾಗುವುದರ ಬಗೆಗೆ ಅಲ್ಲಿ ದಾರಿಗಳಿಲ್ಲ. ಕೆಲವು ಪರೀಕ್ಷೆಗಳನ್ನು ಪಾಸಾಗುತ್ತೇವೆ. ದೈವಲೀಲೆಯಿಂದಾಗಿ ಒಂದು ನೌಕರಿ ಸಿಗುತ್ತದೆ. ಅದು ನಮ್ಮ ನಿತ್ಯದ ಯಥಾವತ್ತಾದ ಜೀವನವಾಗುತ್ತದೆ. ನಾನು ನೌಕರಿಯನ್ನು ಇಷ್ಟಪಡದೇ ಇರುತ್ತಿರಬಹುದು, ಆದರೆ ಹೊಟ್ಟೆಪಾಡಿಗೆ ಬೇರೆ ದಾರಿ ಕಾಣದೆ ಅದನ್ನೇ ಮುಂದುವರೆಸಿಕೊಂಡು ಹೋಗುವ ಒತ್ತಡಕ್ಕೆ ಸಿಲುಕುತ್ತೇನೆ. ನನಗೇನೋ ಸಂಪೂರ್ಣ ಹೊಸದಾಗಿರುವದನ್ನು ಮಾಡಬೇಕೆಂಬ ಹಂಬಲವಿರಬಹುದು.  ಆದರೆ ಜವಾಬ್ದಾರಿ ಮತ್ತು ಬದ್ಧತೆಗಳು ಅದರಿಂದ ಮುಕ್ತಗೊಳಿಸುತ್ತಿಲ್ಲ. ಹೋಗುತ್ತೇನೆ ನಿರಾಶಗೊಂಡ ನಾನು ಕಾಮದಲ್ಲಿ, ಕುಡಿತದಲ್ಲಿ, ರಾಜಕೀಯದಲ್ಲಿ, ಆಡಂಬರದ ಧರ್ಮಾಚರಣೆಯಲ್ಲಿ ಪಲಾಯನಗೈಯುತ್ತೇನೆ.

ಬಿಕ್ಕಟ್ಟು 3: ಮೇಲ್ನೊಟಕ್ಕೆ ಪ್ರಜಾಪ್ರಭುತ್ವದಂತೆ ತೋರಿಸಿಕೊಳ್ಳುವ, ಆದರೆ ಇನ್ನೊಂದು ರೀತಿಯಲ್ಲಿ ಇಡೀ ರಾಷ್ಟ್ರವನ್ನು ಒಂದು ಕೋಮಿನ, ಒಂದು ಆಲೋಚನಾ ಕ್ರಮದ, ಅಧಿಕಾರ ಶಾಹಿಯ ಈ ದೇಶದಲ್ಲಿ ಪ್ರಜಾಪ್ರಭುತ್ವವೂ ಆತಂಕದಲ್ಲಿದೆ. ಯಾವು ಅತಿಕ್ರಮಣದ ರಾಜಕೀಯ ವಿಚಾರಧಾರೆ ಅಲ್ಲ ಎಂದು ಇ ರಾಷ್ಟ್ರ ಒಪ್ಪಿಕೊಂಡಿತೊ ಅದು ಈಗ ಎಲ್ಲ ಮೇರೆಗಳನ್ನು ಮೀರಿದೆ, ಚುನಾವಣೆ ಎನ್ನುವುದು ಒಂದು ವ್ಯಂಗ್ಯವಾಗಿದೆ. ಈ ಕುರಿತು ಹೆರಾಲ್ಡ ಮ್ಯಾಕ್‍ಮಿಲನ್ ಹೇಳುತ್ತಾನೆ-
      ಎಲ್ಲ ರಾಷ್ಟ್ರಗಳು ಒಂದು ಇನ್ನೊಂದನ್ನು ಆಧರಿಸಿವೆ ಮತ್ತು ಇದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಾವೆಲ್ಲರೂ ಮನಗಂಡ ಮಾತಾಗಿದೆ. ಯಾರು ಇಂದು ಪ್ರಜಾಸತ್ತಾತ್ಮಕವಾಗಿ ಅಥವಾ ಪ್ರಜಾಸತ್ತ್ಯೆಯ ದಯೆಯಿಂದ ಅಧಿಕಾರದಲ್ಲಿರುವರೋ ಅವರು ತಾತ್ಕಾಲಿಕವಾಗಿ ನಮ್ಮನ್ನು ಆಳುತ್ತಿರುತ್ತಾರೆ. ಅದು ನಿಮ್ಮ ದೇಶದಲ್ಲಿ ಇರಬಹುದು ಅಥವಾ ನಮ್ಮ ದೇಶದಲ್ಲಿ ಇರಬಹುದು. ಆದರೆ ಇತಿಹಾಸದ ಯಾವುದೇ ಪ್ರಮುಖ ಹಂತದಲ್ಲಿ ತಾತ್ಕಾಲಿಕವಾಗಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಒಂದೇ ಒಂದು ಕಾರಣಕ್ಕಾಗಿ ಯಾರು ಯಾರನ್ನೂ ಅತಿಕ್ರಮಿಸುವಂತಿಲ್ಲ, ನಾವು ಇಷ್ಟಪಟ್ಟಿರುವುದೆಂದ ಮಾತ್ರಕ್ಕೆ ನಮ್ಮಿಚ್ಛೆಯಂತೆ ನಾವು ಏನನ್ನೂ ಚಲಾಯಿಸುವಂತಿಲ್ಲ. ಈ ಪ್ರಪಂಚ ಬದುಕಿದವರ ಪಾಲಿಗೆ ಎಷ್ಟು ಅವಶ್ಯ ಮತ್ತು ಅನಿವಾರ್ಯವೋ ಅಷ್ಟೇ ಪ್ರಮಾಣದಲ್ಲಿ ಸತ್ತವರಿಗಾಗಿ ಮತ್ತು ಹುಟ್ಟಿ ಬರುವವರಿಗೂ ಕೂಡಾ.

ಬಿಕ್ಕಟ್ಟು 4: ಜಾಗತೀಕರಣ ಆರ್ಥಿಕತೆಯ ಒಂದು ವಿಚಿತ್ರ ಮನೋರೋಗಕ್ಕೆ ಹುಟ್ಟುಹಾಕಿತು, ಹಣಗಳಿಸುವುದು ಬದುಕಿನ ಅತಿ ಮುಖ್ಯ ಗುರಿಯಾಯಿತು. ಕಾರ್ಪೊರೇಟ್ ವ್ಯವಸ್ಥೆಗಳು ಯುವಕರನ್ನು ಆತ್ಮವಂಚನೆಯ ದಾರಿಗೆಳೆದು ಅವರಲ್ಲೊಂದು ಭಯವನ್ನು ಸೃಷ್ಠಿ ಮಾಡಿತು. ಅದನ್ನು ಪ್ರಗತಿ, ಸಾಧನೆ ಮತ್ತು ಸಮೃದ್ಧಿ ಎಂದು ಬಿಂಬಿಸಿತು. ಆದರೆ ಪಶ್ಚಿಮ ಪ್ರಣೀತ ಈ ಆಲೋಚನೆ ಎಷ್ಟರಮಟ್ಟಿಗೆ ಈ ದೇಶಕ್ಕೆ ಸೂಕ್ತ ಎನ್ನುವುದನ್ನು ಆಲೋಚಿಸುತ್ತ ಬಹಳ ಹಿಂದೆಯೇ ರವೀಂದ್ರನಾಥ ಟ್ಯಾಗೋರ ಒಂದು ಮಹತ್ವದ ವಿಚಾರ ಹೇಳಿದ್ದಾರೆ.
    ನಾವು ಕಳೆದ ಒಂದು ಶತಮಾನದಿಂದ ಪಶ್ಚಿಮದ ‘ಸಮೃದ್ಧಿ’ ಎಂಬ ರಥದ ಸೆಳೆತಕ್ಕೊಳಗಾಗಿದ್ದೇವೆ. ಅದರ ಧೂಳಿಗೆ ಬೆರಗಾಗಿದ್ದೇವೆ. ಅದರ ಶಬ್ಧಕ್ಕೆ ಮರುಳಾಗಿದ್ದೇವೆ. ನಮ್ಮ ವಿವಶತೆಗೆ ಪಾಮರರಾಗಿದ್ದೇವೆ. ಅದರ ರಭಸದಿಂದ ಪುಳಕಿತರಾಗಿದ್ದೇವೆ. ಈ ರಥದೊಳಗಿನ ಪಯಣವನ್ನು ನಾವು ಪ್ರಗತಿ ಎಂದು ಗುರ್ತಿಸಿದ್ದೇವೆ. ಈ ಪ್ರಗತಿಯನ್ನು ‘ನಾಗರಿಕತೆ’ (ಅiviಟizಚಿಣioಟಿ) ಎಂದಿದ್ದೇವೆ. ಈಗೊಂದು ವೇಳೆ ಪ್ರಗತಿ ಎಂದರೇನು? ಯಾರ ಪ್ರಗತಿ? ಎಂದು ಪ್ರಶ್ನಿಸಿಕೊಂಡರೆ ಈ ನಮ್ಮ ಪ್ರಗತಿಯ ಬುಡವೇ ಅಲ್ಲಾಡಿ ಬಿಡುತ್ತದೆ. ಬಹಳ ತಡವಾಗಿ ನಮಗೊಂದು ತಿಳುವಳಿಕೆ ಬಂದಿದೆ, ಅದರ ಪ್ರಕಾರ ನಮಗೆ ಪ್ರಗತಿ ಎಂದರೆ ರಥದ ವೈಜ್ಞಾನಿಕ ಪರಿಪೂರ್ಣತೆ ಅಷ್ಟೇ ಅಲ್ಲ ಬದಲಾಗಿ ಅದು ಸಾಗುವ ದಾರಿಯಲ್ಲಿಯ ತಗ್ಗು ದಿಣ್ಣೆಗಳನ್ನು ಗಮನಿಸುವುದಾಗಿದೆ. ಪ್ರಗತಿ ಬರೀ ರಥಕ್ಕಲ್ಲ, ದಾರಿಗೂ ಅನ್ವಯಿಸುತ್ತದೆ.


     ಗುರುಕುಲಗಳಾಗಿದ್ದ, ಮಠಗಳಾಗಿದ್ದ ದಿಕ್ಕೆಟ್ಟವರ ಪಾಲಿನ ದ್ವಂದಿಗಳಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಈಗ ಮಹಾ ಮೌನಕ್ಕೆ ಶರಣಾಗಿವೆ. ತ್ಯಾಗದ ಕೇಂದ್ರಗಳೆಲ್ಲ ಭೋಗ ವಿಲಾಸದ ಕೇಂದ್ರಗಳಾಗಿವೆ. ಸರ್ವಧರ್ಮ ಸಮಾನತೆಯ ಕೇಂದ್ರಗಳು ಸರ್ವ ರೀತಿಯ ವಿಭಜನೆಯ ಸ್ಥಳಗಳಾಗಿವೆ. ಆತ್ಮ ಗೌರವವಿಲ್ಲದ, ಅಂತರ್ ದೃಷ್ಟಿ ಇಲ್ಲದ ಮಾಧ್ಯಮಗಳ ಹೊಣಗೇಡಿತನ ಸಮಾಜವನ್ನು ನಗ್ನಗೊಳಿಸುವುದಲ್ಲದೆ ನಗ್ನತೆಯ ಮುಗ್ಧತೆಯನ್ನೂ ಹಾಳು ಮಾಡಿದೆ. ಬೆಳಗಾದರೆ ನಾವು ಮಾಧ್ಯಗಳ ಮೂಲಕ ಕುಡಿಯುವ ರಕ್ತ ನಿತ್ಯ ಬಳಕೆಯ ನೀರಿಗಿಂತಲು ಅಧಿಕವಾಗಿದೆ, ಅಧಮವಾಗಿದೆ.
        ನಮ್ಮ ಸುತ್ತಲಿನ ಸತ್ಯವನ್ನು ದೂರಿಕರಿಸಿ ದೂರದ ಅವಾಸ್ತವವನ್ನು ನಂಬುವ ವರ್ತಮಾನದ ಯುವ ಜನಾಂಗ, ಕಾರ್ಪೊರೇಟ್ ವಲಯದ ಬಳಸಿ ಬಿಸಾಡುವ ಸಿದ್ಧಾಂತಕ್ಕೆ ಮರುಳಾಗಿದ್ದಾರೆ. ಅವಕಾಶಗಳ ಭ್ರಮೆಯನ್ನು ಹುಟ್ಟಿಸುವ ಈ ಬಿಕ್ಕಟ್ಟು, ಅದೇ ಕಾರ್ಪೊರೇಟ್ ವಲಯದಿಂದ, ಮತ್ತೆ ಅದೇ ಸಿದ್ಧಾಂತದಿಂದ ಮೋಸಕ್ಕೆ ಹೋಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ. ಓಡಿಹೋಗಲಾಗದ, ನಿಂತು ಬದುಕಲಾಗದ ಆದರೆ ನಿರಂತರ ಹುಚ್ಚು ಹುಡುಕಾಟಕ್ಕೆ ಹಚ್ಚುವ ಈ ಹವ್ಯಾಸ, ಎಲೆಕ್ಟ್ರಾನಿಕ್ ಮಾದ್ಯಮಗಳನ್ನು ನಂಬಿಕೊಂಡಿರುವವರಿಗೆ ಹುಡುಗಾಟವೆನ್ನಿಸಿದೆ. ಕಣ್ಣು ಕೋರೈಸುವ ಟ್ಯಾಬ್, ಮೋಬೈಲ್, ಕಂಪ್ಯೂಟರ್‍ಗಳು ಕಣ್ಣೀರೊರೆಸುವುದಿಲ್ಲ. ಫ್ಯಾಶನ್‍ನನ್ನು ಕುರಿತು ಮಾತಾಡುವ ಈ ಲೋಕ ಪ್ಯಾಶೆನ್ ಕುರಿತು ಮನುಷ್ಯನನ್ನು ಕೇಂದ್ರಿಕರಿಸುವುದಿಲ್ಲ. ಸಹನೆಯಂತೂ ಸತ್ತುಹೋದ ವಿಚಾರ. ಸಾಮಾಜಿಕ ತಾಣಗಳೆಂದು ಗುರುತಿಸಲ್ಪಡುವ ಈ ಅಂತರ್‍ಜಾಲ ತಾಣಗಳು ನಿಜವಾದ ಸಾಮಾಜಿಕತೆಯ ಮನುಷ್ಯ ಸೌಂದರ್ಯವನ್ನು ಕೊಂದು ಇರುವ ಮನೆಯಲ್ಲಿಯೇ ಒಬ್ಬ ಇನ್ನೊಬ್ಬನೊಂದಿಗೆ ಮಾತನಾಡದಂತೆ ಮಾಡಿ ಆತನನ್ನು ಭ್ರಮೆಗಳಿಂದ ತುಂಬುತ್ತದೆ. ನಾವು ಹೇಗೆ ಕಾಣಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಈ ಮಾರ್ಗ ನಾನು ಏನಾಗಬೇಕು ಎನ್ನುವುದಕ್ಕೆ ಕನ್ನಡಿ ಹಿಡಿಯುವುದಿಲ್ಲ. ಎಲೆಕ್ಟ್ರಾನಿಕ್ ಜಗತ್ತು ನಮ್ಮಲ್ಲಿ ಧೈರ್ಯವನ್ನು ಬೆಳೆಸಲಿಲ್ಲ, ಹೇಸಿ ಧೈರ್ಯವನ್ನ, ಭಂಡ ಧೈರ್ಯವನ್ನ ಬೆಳೆಸಿತು. ಆಳ ಅಧ್ಯಯನದ ಅವಶ್ಯಕತೆಯನ್ನು ದೂರಿಕರಿಸಿ ಮುಂಜಾನೆ ಕುಡಿಯುವ ಚಹಾ ಕುರಿತಾದ ತಿಳುವಳಿಕೆಗೂ ತನ್ನನ್ನು ಮೊರೆ ಹೋಗುವಂತೆ ಮಾಡಿತು. ದುಡ್ಡು, ಅವಕಾಶ ಎನ್ನುವ ಪದಗಳ ಬೆನ್ನು ಹತ್ತಿ ಆತ್ಮವನ್ನು ಧಿಕ್ಕರಿಸಿ ಅನ್ಯರ ಭಾವನೆಗಳನ್ನು ಅವಹೇಳಿಸಿ ಓಡಿಹೋಗುವ ನಿರ್ಲಜ್ಜತೆಯನ್ನು ಬೆಳೆಸಿತು. ಮುಂದಿನ ಮರೀಚಿಕೆಯನ್ನು ಮೆಚ್ಚಿಕೊಂಡವರು ಹಿಂದಣ ಅನಂತವನ್ನು ಅಸಹ್ಯಗೊಳಿಸುವ ಆತ್ಮ ಭ್ರಷ್ಟತೆಯನ್ನು ಬೆಳೆಸಿತು. ಈ ರೀತಿ ಬುಡವಿಲ್ಲವಾಗಿರುವ ಈ ನನ್ನ ಎಳೆಯ ಜಗತ್ತನ್ನು ನಾನು ವಾಟೆವರ್ ಜನರೇಶನ್ ಎನ್ನುತ್ತೇನೆ, ಎನ್ನುತ್ತಾರೆ ನನ್ನೊಂದಿಗಿದ್ದ ಗೆಳೆಯ ನವೀನ್. ಇದೊಂದು ಶೇಮ್‍ಲೆಸ್ ಸೋಸಾಯಿಟಿ ಎನ್ನುತ್ತಾರೆ ಹಿರಿಯ ಚಿಂತಕಿ ಡಾ.ಇಂದಿರಾ. ಈ ಬಿಕ್ಕಟ್ಟೆ ನಮ್ಮ ಮೂಲ. ಏಕೆಂದರೆ ವರ್ತಮಾನದ ಹೂಗಳನ್ನು ಧಿಕ್ಕರಿಸಿ ಭವಿಷ್ಯದ ಹಣ್ಣುಗಳ ಕನಸು ಕಾಣಲಾಗುವುದಿಲ್ಲ ಹಾಗೆಯೇ ನಮ್ಮ ಮುಂದೆಯೇ ನಾಶವಾಗುವ ಯುವಜನಾಂಗವನ್ನು ನಿರ್ಲಕ್ಷಿಸಿ ಭವಿಷ್ಯದ ಭವ್ಯ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.

No comments:

Post a Comment