Wednesday 11 June 2014

ಕಾಫರ್‍ನ ಕೊನೆಯ ಪತ್ರಗಳು(Khawaja Ahemad Abbas)


K A Abbas with Jahana Ara
          1948 ರಲ್ಲಿ India Weekly ಯಲ್ಲಿ ಕೆ.ಎ.ಅಬ್ಬಾಸರು  ಕವಿ “ಸಾಹೀರ್‍ಗೊಂದು ಜಾಹೀರ್ ಪತ್ರ” ಎಂಬ ಶೀರ್ಷಿಕೆ ಅಡಿಯಲ್ಲಿ ಪತ್ರ ಬರೆದರು. ಆ ಪತ್ರದ ಒಕ್ಕಣಿಕೆ ಹೀಗಿತ್ತು.

ಪ್ರೀತಿಯ ಸಾಹೀರ್,
        ನೀನು ಯಾವ ಕಾಲಕ್ಕೂ ಭಾರತವನ್ನು ಬಿಟ್ಟು ಬಂದೆ ಎಂದುಕೊಳ್ಳಲಾಗದು. ಭಾರತದ ಪಂಚನದಿಗಳ ಪಂಜಾಬದ ಮಣ್ಣಿನ ವಾಸನೆಯ ನಿನ್ನ ಕವಿತೆ ಇಂದಿಗೂ ಅವಿಶ್ರಾಂತಿ ಆತ್ಮದಂತೆ ಇಲ್ಲಿಯೇ ಸುತ್ತುತ್ತಿದೆ. ನೀನು ಯಾವ ಕಾಲಕ್ಕೂ ಪಾಕಿಸ್ಥಾನಿಯನಾಗಲು ಸಾಧ್ಯವೇ ಇಲ್ಲ. ಕನಿಷ್ಟ ನಿನ್ನ ಹೆಸರಿನೊಂದಿಗೆ ಅಂಟಿಕೊಂಡ ಆ “ಲುಧಿಯಾನಾ” ಎಂಬ ಪದ ಇರುವವರೆಗೂ ಆದರು. ನೀನು ಪ್ರಪಂಚದ ಯಾವುದೇ ಮೂಲೆಯಲ್ಲಿರು, ನಿನ್ನ ಹೆಸರು ನೀನು ಬದಲಾಯಿಸಿಕೊಳ್ಳುವವರೆಗೂ ನೀನು ಭಾರತೀಯನೆ. ‘ಭಾರತದ ಕವಿಯೆ’ ಎಂಬುದನ್ನು ಮರೆಯಬೇಡ. ಒಂದು ವೇಳೆ ನೀನು ಪಾಕಿಸ್ಥಾನಿಯನೇ ಆಗಬೇಕಾದರೆ ನಿನ್ನ ಪಾಕಿಸ್ಥಾನ ಭಾರತದ ಲುದಿಯಾನಾವನ್ನು ಗೆಲ್ಲಬೇಕಷ್ಟೆ. ಅದು ಪಾಕಿಸ್ಥಾನಕ್ಕೆ ಈ ಜನ್ಮದಲ್ಲಿ ಸಾಧ್ಯವಾಗದ ಮಾತು. ಪ್ರೀತಿಯಿಂದ ಕರೆಯುತ್ತೇನೆ. ನೀನು ಮರಳಿ ಬಂದುಬಿಡು.
                                                                                  ಇಂತಿ ನಿನ್ನ
                                                                                   ಖ್ವಾಜಾ
       ಹಿಂದಿ, ಇಂಗ್ಲೀಷ್ ಹಾಗೂ ಉರ್ದು ಭಾಷೆಗಳಲ್ಲಿ ಎಪ್ಪತ್ತಕ್ಕು ಹೆಚ್ಚು ಕೃತಿಗಳನ್ನು ರಚಿಸಿ, ‘ಸನ್ ಆಫ್ ಇಂಡಿಯಾ’ ಕೃತಿ ಬರೆದು ರಷ್ಯಾದಲ್ಲಿ ಎಂಬತ್ತು ಸಾವಿರ ಪ್ರತಿಗಳ ಮಾರಾಟದ ದಾಖಲೆಯನ್ನು ನಿರ್ಮಿಸಿ, ತಮ್ಮ ಅನೇಕ ಕೃತಿಗಳನ್ನು ಜಗತ್ತಿನ ಒಂಬತ್ತು ಭಾಷೆಗಳಲ್ಲಿ ಪ್ರಕಟಿಸಿ, ಪದ್ಮಭೂಷಣದಂಥ ಪ್ರಶಸ್ತಿಯನ್ನು ಪಡೆದೂ ಬದುಕಿನ ಕೊನೆಯ ದಿನಗಳಲ್ಲಿ ತಮ್ಮ ಅಕೌಂಟಿನಲ್ಲಿ ಕೆಲವು ಸಾವಿರ ಹಣವನ್ನು ಹೊಂದಿರದ ಈ ಅಬ್ಬಾಸ್ ಎಂಥ ವಾಸ್ತವವಾದಿಯಾಗಿದ್ದ ಮತ್ತು ಈ ನೆಲವ ನಂಬಿದ ಮಹಾನ್ ವ್ಯಕ್ತಿಯಾಗಿದ್ದ ಎನ್ನುವುದಕ್ಕೆ ಈ ಮೇಲಿನ ಪತ್ರ ಒಂದು ಅದ್ಭುತ ನಿದರ್ಶನ. ಹಲವು ಭ್ರಮೆಗಳ ಬೆನ್ನೇರಿ ದೇಶ ಬಿಟ್ಟು ಹೋಗಿದ್ದ ಶ್ರೇಷ್ಠ ಸಾಹಿತಿ ಸಾಹಿರ್ ಲುಧಿಯಾನ್ವಿಗೆ ಬರೆದ ಅಬ್ಬಾಸರ ಈ ಪತ್ರ ಇಂದಿಗೂ ದೇಶ ತೊರೆಯುವವರಿಗೆ ಒಂದು ಮಾನವೀಯ ಕರೆಯೇ.
Abbas with his Adapted Daughter

1903 ಜೂನ್ 7 ರಂದು ಪಾಣೀಪತ್ತದಲ್ಲಿ ಜನಿಸಿದ ಖ್ವಾಜಾ ಅಹಮ್ಮದ್ ಅಬ್ಬಾಸರ ತಂದೆ, ಆಯುರ್ವೇದ ಔಷಧಿಗಳ ವ್ಯಾಪಾರಿ. ಇಸ್ಲಾಂನ ಸರಳ ಜೀವನ ಹಾಗೂ ಸಿದ್ಧಾಂತಗಳಲ್ಲಿ ಅಪಾರ ವಿಶ್ವಾಸ ಇರಿಸಿಕೊಂಡವರು. ಒಡೆಯ, ಆಳುಮಗ ಎನ್ನುವ ವ್ಯತ್ಯಾಸದ ಕಾರಣ ಯಾರನ್ನೇ ಕೀಳಾಗಿ ಕರೆಯುವುದನ್ನು, ಮದುವೆ ಮುಂಜಿವೆಗಳಲ್ಲಿ ಧರ್ಮದ ಹೆಸರಿನಲ್ಲಿ ಮಾಡುವ ದುಂದುವೆಚ್ಚವನ್ನು ಮತ್ತು ಅಂದಿನ ದಿನಗಳಲ್ಲಿ ಸಂಪ್ರದಾಯಸ್ಥ ಮುಸ್ಲಿಂರಲ್ಲಿ ಹಾಗೂ ರಜಪೂತರಲ್ಲಿ ರೂಢಿಯಲ್ಲಿದ್ದ ಪರದಾ ಪದ್ಧತಿಯನ್ನು ಉಗ್ರವಾಗಿ ಖಂಡಿಸಿದ ಪ್ರಗತಿಪರ ವಿಚಾರವಾದಿ ಅಬ್ಬಾಸರ ತಂದೆ. ಮೆಟ್ರಿಕ್ಯುಲೇಶನ್‍ವರೆಗೆ ಪಾಣಿಪತ್‍ನಲ್ಲೇ ಓದಿದ ಅಬ್ಬಾಸನಿಗೆ ನಗುನಗುತ್ತಲೇ ನೇಣುಗಂಬ ಏರಿದ ಭಗತ್‍ಸಿಂಗ್ ಹಾಗೂ ಹಿರಿಯ ಮಿತ್ರ ಬಾಲ್ಯಸ್ನೇಹಿತರು.
1935 ರಲ್ಲಿ ಅಲೀಘಡ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರಾಗಿ ಹೊರಬಂದ ಅಬ್ಬಾಸರು ಇಂಗ್ಲಿಷ್ ಸಾಹಿತ್ಯವನ್ನು ತೆಗೆದುಕೊಂಡು ಎಂ.ಎ.ಓದಲು ಮುಂದುವರಿಸಿದರಾದರೂ ಅಲೀಘಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಕಟ್ಟಡದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ ಆಪಾದನೆಯ ಮೇಲೆ ಹೊರಹಾಕಲ್ಪಟ್ಟರು. ವಿದ್ಯಾರ್ಥಿ ಜೀವನದಲ್ಲಿ ಅವರ ಈ ತರಹದ ಕಾರ್ಯಗಳು ಹಲವಾರು. ದೇಶಭಕ್ತಿಯ ದೊಡ್ಡ ಸಂಪ್ರದಾಯದ ಹಿನ್ನಲೆಯಲ್ಲಿ ಬೆಳೆದ ಅಬ್ಬಾಸರ ಹೆಜ್ಜೆಗಳು, ನಡೆ-ನುಡಿಗಳು ಸ್ಪಷ್ಟ ಹಾಗೂ ನೇರ. ಅವರ ಬಾಲ್ಯದ ಇನ್ನೊಂದು ಘಟನೆ ಹೀಗಿದೆ : ಪ್ರಾಥಮಿಕ ಶಾಲಾ ಮೇಲ್ವಿಚಾರಣೆಗೆ ಬಂದ ಆಂಗ್ಲ ಅಧಿಕಾರಿಯೊಬ್ಬ ಕೇಳಿದ ‘ಭಾರತಕ್ಕೆ ಬ್ರಿಟೀಷ್ ಸಾಮ್ರಾಜ್ಯ ನೀಡಿದ ವರಗಳೇನು?’ ಎಂದು. ರೈಲ್ವೇ, ಸಡಕೇಂ, ಢಾಕಖಾನೇಂ, ದವಾಖಾನೇಂ....ಎಂದು, ಮುಂದಿನ ಇನ್ನೊಂದು ಖಾನೇಂ ಹೇಳದೆ ಕುಳಿತ ಇನ್ನೊಬ್ಬ ಹುಡುಗ. ತಕ್ಷಣ ಅಬ್ಬಾಸ್ ಎದ್ದು ನಿಂತು ಉತ್ತರಿಸಿದ ‘ಬಂಧೀಖಾನೆ’ ಎಂದು.
ಶಿಕ್ಷಣದ ನಂತರ ಅಬ್ಬಾಸ್ ಆಯ್ದುಕೊಂಡ ವೃತ್ತಿ ಪತ್ರಿಕೋದ್ಯಮ. ಪತ್ರಕರ್ತನೋರ್ವ ಆ ಅನಿಶ್ಚಿತ ಬದುಕನ್ನು ಎಷ್ಟೊಂದು ಪ್ರೀತಿಸಿರುತ್ತಾನೆ ಎನ್ನಲು ಅಬ್ಬಾಸರ ಜೀವನ ಒಂದು ಶ್ರೇಷ್ಠ ನಿದರ್ಶನ. 50 ರೂ. ಸಂಬಳದೊಂದಿಗೆ ಪ್ರಾರಂಭವಾದ ಅವರ ಪತ್ರಿಕೋದ್ಯಮದ 61 ವರ್ಷದ ದೀರ್ಘ ಜೀವನದಲ್ಲಿ ಮಾಡಿದ ಸಾಹಸಗಳು, ಇಂದು ಕೋಟ್ಯಾಂತರ ರೂಪಾಯಿಗಳಿರುವ ವ್ಯಕ್ತಿಗೂ ಸಾಧ್ಯವಿಲ್ಲ. ತಮಗೆ ಸಿಗುತ್ತಿದ್ದ 50 ರೂ.ದೊಂದಿಗೆ ಮಾನವ ಹೃದಯಗಳ ವೈಶಾಲ್ಯವನ್ನು ನಂಬಿಕೊಂಡಿದ್ದ ಅಬ್ಬಾಸರಿಗೆ ಯಾವ ಸಾಹಸಗಳೂ ಸಮಸ್ಯೆಯಾಗಲಿಲ್ಲ. ಅವರು ಜೇಬಿನಲ್ಲಿ ದುಡ್ಡಿರದಿದ್ದರೂ ವಿಶ್ವವಿಹಾರದ ಕನಸಿನ ನಕ್ಷೆ ಹಾಕುತ್ತಿದ್ದರು. ತಮಗೆ ಊಟಕ್ಕೆ ಇಲ್ಲದ ಸಮಯದಲ್ಲಿಯೂ ಅತಿಥಿಗಳಿಗೆ ಭಾರೀ ಭೋಜನದ ಆಮಂತ್ರಣ ಪತ್ರ ನೀಡುತ್ತಿದ್ದರು. ತಮಗೇ ನೆಲ ಇಲ್ಲದ ಅನಿಶ್ಚಿತ ಕಾಲದಲ್ಲಿಯೂ ರಷ್ಯಾದೊಂದಿಗೆ ಜಂಟಿ ಚಿತ್ರ ನಿರ್ಮಾಣಕ್ಕೆ ಸಹಿ ಹಾಕುತ್ತಿದ್ದರು. ಯಾಕೆಂದರೆ ‘ದಾರಿ ಸಾವಿರ ಉಂಟು ಬೆಳಕಿನರಮನೆಗೆ’ ಎಂಬುದು ಅವರ ವಾದ.
          ರೈಲ್ವೆ ಸ್ಟೇಶನ್‍ಗಳಲ್ಲಿ, ಬಸ್‍ಸ್ಟ್ಯಾಂಡ್‍ಗಳಲ್ಲಿ, ವಿಮಾನಯಾನದಲ್ಲಿ, ಕಿಕ್ಕಿರಿದ ಫುಟ್‍ಪಾತ್ ಬೆಂಚುಗಳ ಮೇಲೆ, ಉಳಿದುಕೊಂಡ ಲಾಡ್ಜಗಳಲ್ಲಿ ಎಲ್ಲೆಂದರಲ್ಲಿ ಕುಳಿತು ಸಾಹಿತ್ಯ ರಚಿಸುತ್ತ ಹೋದ ಅಬ್ಬಾಸ್ ನಮ್ಮಂತೆ ಪಂಚತಾರಾ ಹೋಟೆಲುಗಳಲ್ಲಿ ಸೃಷ್ಠಿಯಾಗುವ ಕೂದಲು ಸೀಳುವ ಸಾಹಿತ್ಯವನ್ನು ರಚಿಸಲಿಲ್ಲ. ಸಾಮಾನ್ಯರ ಮಧ್ಯ, ಸಾಮಾನ್ಯರಂತೆ, ಸಾಮಾನ್ಯನ ಸಮಸ್ಯೆಗಳನ್ನು ಕುರಿತು ಬರೆದರು.
          ವೃತ್ತಿ ಭರವಸೆ ಇಲ್ಲದೆ ಕೆಲವೊಮ್ಮೆ ಪತ್ರಕರ್ತ, ಕೆಲವೊಮ್ಮೆ ಚಿತ್ರ ನಿರ್ದೇಶಕ, ನಿರ್ಮಾಪಕ, ಕೆಲವೊಮ್ಮೆ ರಾಜಕೀಯ ಸಲಹೆಗಾರ, ಕೆಲವೊಮ್ಮೆ ಸಾಹಿತಿ ಹೀಗೆ ಅಬ್ಬಾಸರದು ಬಹುರೂಪಿಯ ಬದುಕು. ದೇಶ ವಿಭಜನೆಯ ನಂತರ ಕುಲಬಾಂಧವರೆಲ್ಲ ಪಾಕಿಸ್ತಾನಕ್ಕೆ ಹೋದರು. ಇನ್ನೂ ಮೂವತ್ತು ವರ್ಷಗಳ ಬದುಕು ಬಾಕಿ ಇರುವಾಗ ಪ್ರೀತಿಯ ಹೆಂಡತಿ ಮುಜ್ಜಿ ತೀರಿಹೋದರು. ಅಬ್ಬಾಸರಿಗೆ ಮಕ್ಕಳಂತೂ ಆಗಲೇ ಇಲ್ಲ. ಪಾಣಿಪತ್ತಿನಿಂದ ದೆಹಲಿ, ದೆಹಲಿಯಿಂದ ಮುಂಬೈ ಎಂದು ಅಲೆದಾಡಿಕೊಂಡಿದ್ದ ಅಬ್ಬಾಸರಿಗೆ ಒಂದು ನೆಲೆ ಎಂಬುದೂ ಇರಲಿಲ್ಲ. ಅಬ್ಬಾಸ್ ಕಮ್ಯುನಿಸ್ಟರಲ್ಲಿ ಕಾಂಗ್ರೆಸಿಗನಂತೆ, ಕಾಂಗ್ರೆಸಿಗರಲ್ಲಿ ಕಮ್ಯುನಿಸ್ಟರಂತೆ ಕಂಡರು. ಸಾಹಿತಿಗಳಲ್ಲಿ ಸಿನಿಮಾದವರಂತೆ, ಸಿನಿಮಾದವರಿಗೆ ಸಾಹಿತಿಯಂತೆ ದೂರ ಉಳಿದವರಾದರು. ಎಂಷ್ಟೆ ವಿಶಾಲ, ಮಾನವೀಯ ಬದುಕನ್ನು ಬದುಕಿದರೂ ಅಬ್ಬಾಸ್ ಹಿಂದೂಗಳಿಗೆ ಮುಸ್ಲಿಂರಂತೆ, ಮುಸ್ಲಿಂರಿಗೆ ಕಾಫಿರ್‍ನಂತೆ ಕಂಡರು. ಆದರೆ ಅಂತರಂಗದಲ್ಲಿ ಇವೆರಡೂ ಅಲ್ಲದ ಅಬ್ಬಾಸ್ ಒಬ್ಬ ಫಕೀರನಾಗಿದ್ದ, ಸೂಪಿಯಾಗಿದ್ದ ಲೋಕದ ಸಂತೆಯಲ್ಲಿ ನಿಂತ ಸಂತರಾಗಿದ್ದರು.
       ಕಾಲನ ಕೈ ಯಾರನ್ನೂ ಬಿಡುವುದಿಲ್ಲ. ಅದು ಅಬ್ಬಾಸರನ್ನೂ ಬಿಡಲಿಲ್ಲ. ಬೊಂಬಾಯಿಯ ಭೀಷಣ ಬದುಕಿನಲ್ಲಿ ಪ್ರೀತಿಯ ಹೂ ಆಗಿದ್ದ ಅಬ್ಬಾಸ್ ಕೊನೆಕೊನೆಗೆ ಪಾಶ್ರ್ವವಾಯುವಿನಿಂದ ಬಳಲಿದರು. ಮುಪ್ಪಾವಸ್ಥೆಯ ಮಂದವಾದ ಕಣ್ಣಿನ ಬೆಳಕಿನಿಂದಾಗಿ ಕನಲಿದರು. ಅಬ್ಬಾಸರ ದೇಹಕ್ಕೆ ಮುಪ್ಪು ಬಂತು. ಆದರೆ ಮನಸ್ಸಿಗೆ ಯೌವ್ವನವೇ ಇತ್ತು. ಭಾರತ ಎನ್ನುವ ‘ವೇಸ್ಟ್‍ಲ್ಯಾಂಡ್’ ನಲ್ಲಿ ‘ಥೈರಾಸಸ್’ನಂತೆ ಉಳಿದುಕೊಡಿದ್ದ ಅಬ್ಬಾಸರು ಬೊಂಬಾಯಿಯ ಜುಹುದ ದಂಡೆಯ ಮೇಲೆ ಕುಳಿತು ಮಾನವ ಮನಸ್ಸುಗಳ ಬಿಸುಪಿಗಾಗಿ ಕಾತರಿಸುತ್ತಿದ್ದರು. ಯಾಕೆಂದರೆ ಮಾನವ ಸಂಬಂಧಗಳಿಲ್ಲದ ಒಂದು ದಿನದ ಬದುಕೂ ಅಬ್ಬಾಸರಿಗೆ ಬಂಜರು ಎನ್ನಿಸುತ್ತಿತ್ತು.
       ಹೀಗೆ ದೇಶಪ್ರೇಮ, ಮಾನವ ಪ್ರೇಮ, ಪತ್ರಿಕಾ ಪ್ರೇಮದ ಪೂಜಾರಿಯಾಗಿದ್ದ ಅಬ್ಬಾಸ್ ಹಲವಾರು ರಂಗಗಳಲ್ಲಿ ತಾವೇ ‘ಮೊದಲ ಪುಟ’ವಾಗಿ ಆರಂಭಿಸಿದರು. ಮತ್ತು ತಾವೇ ‘ಕೊನೆಯ ಪುಟ’ವಾಗಿ ಹೋದರು. ಮರೆವಿನ ಮಾಯೆ ಅನಂತರ ಎಲ್ಲವನ್ನೂ ಮುಚ್ಚಿ ಹಾಕಿದಳು. ಆದರೆ ಅವರ ಕೊನೆಯ ಈ ಪುಟವನ್ನು ಮಾತ್ರ ಮರೆಸುವಲ್ಲಿ ಸೋತು ಹೋದಳು. ಅಬ್ಬಾಸ್ ತಮ್ಮ ಮರಣೋತ್ತರ ಪತ್ರದಲ್ಲಿ ಹೀಗೆ ಬರೆಯುತ್ತಾರೆ:
        “ನನ್ನ ಶವಯಾತ್ರೆಯ ಮುಂದೆ ನನ್ನ ಮೆಚ್ಚಿನ ಮಹಾರಾಷ್ಟ್ರದ ಲೇಝಿಮ್ ಯುವಕರ ಗುಂಪಿರಲಿ, ಅದರ ಸದ್ದು ನನ್ನ ಆದರ್ಶ ಮಹಾತ್ಮ ಗಾಂಧಿಯ ಮೂರ್ತಿಯ ಸಮೀಪ ಬರುವವರೆಗೆ ಮಾತ್ರ ಕೇಳುತ್ತಿರಲಿ. ಬದುಕೆಲ್ಲ ಸಮಯದ ಕೊರತೆಯಿಂದ ನಾನು ಪೂರ್ತಿ ಪ್ರೀತಿ ಕೊಡಲಾಗದ ನನ್ನ ಹೆಂಡತಿ ‘ಮುಜ್ಜಿ’ಯ ಪಕ್ಕದ ಗೋರಿಯೇ ನನ್ನದಾಗಿರಲಿ. ಜೀವನವಿಡೀ ನಿರೀಶ್ವರವಾದಿಯಾಗಿದ್ದ ನನ್ನ ಸಾವಿನ ದಿನಕ್ಕೆ ಒಬ್ಬ ಪಾದ್ರಿ, ಬೌದ್ಧಗುರು, ಇನ್ನೊಬ್ಬ ಜೈನಗುರು ಉಪಸ್ಥಿತರಿರಲಿ. ಪತ್ರಿಕಾ ಜೀವನದ 47 ವರ್ಷದ ನನ್ನ ಪ್ರೀತಿಯ ‘ಕೊನೆಯ ಪುಟ’ದ ಎಲ್ಲ ಲೇಖನಗಳೂ ನನ್ನ ಸಮಾಧಿಯೊಳಗಿನ ಹಾಸಿಗೆಯಾಗಿರಲಿ, ನನ್ನ ದೇಹದ ಮೇಲೆ ಹೆಣದ ಬಟ್ಟೆಯಾಗಿರಲಿ, ಇಲ್ಲಿ ಮರುಜನ್ಮ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ನಿಮ್ಮನ್ನೆಲ್ಲ ಮರಳಿ ಕಾಣುವ ಭರವಸೆಯಿಲ್ಲ. ಹಾಗೇನಾದರೂ ನನ್ನನ್ನು ಕಾಣುವ ಆಶೆ ನಿಮಗಾದರೆ ನನ್ನ ಎಪ್ಪತ್ತು ಪುಸ್ತಕಗಳನ್ನು ಓದಿ ಆನಂದಿಸಿ ನನ್ನ ಮೂವತ್ತು ಚಿತ್ರಗಳನ್ನು ನೋಡಿ ಸಂತೋಷ ಪಡಿ. ಅಲ್ಲಿದೆ ನನ್ನ ಚೇತನ.
                                                                    ಇಂತು                                                                                         ಕೆ.ಎ.ಎ.

No comments:

Post a Comment