“ಸಖಿಯೆ,
ನಿನ್ನೂರಿನಲ್ಲಿ
ನಾನೊಬ್ಬನೆ
ನಿನ್ನ ಹೆಜ್ಜೆಗಳ
ಹಾದಿ ಹಿಡಿದು
ಎಲ್ಲವೂ ಬಿಟ್ಟು
ಬಂದಿದ್ದೇನೆ ಸುಮ್ಮನೆ
ದಾರಿಹೋಕನಿಗಿಂತ ಕೇಳು,
ದೊಡ್ಡ ಗೌರವವೇನೂ ಬೇಡ
ಕಪ್ಪಿಟ್ಟ ಮಲ್ಲಿಗೆಯ
ಮಾತ್ರ ಕೊಡಬೇಡ
ಹೊತ್ತು ಮುಳುಗುತ್ತಿದೆ ಹೌದು,
ನನಗಾಗಿಯೇ ದೀಪ ಹೊತ್ತಿಸಬೇಡ
ನಿನ್ನ ಕಣ್ಣಾಲೆಗಳ
ಬೆಳಕು ಮಾತ್ರ ನಂದಿಸಬೇಡ.
ಮನೆಯಿಲ್ಲದವನೊಡನೆ ಹೀಗೆ,
ಮಾತೇನು? ಎನಬೇಡ.
ಮನದೊಳಗೇ ಉಳಿದವನ
ಮನೆಗೋಡೆ ಕೆಡವಬೇಡ.
ನನಗೆ,
ಗೊತ್ತಿತ್ತು ಸಖಿಯೆ
ಶೆರೆಯ ಮಿಂದೇಳುವುದು
ಸಾವಲ್ಲವೆಂದು
ನಿಶೆಯೊಡಲ ಹಾಡುಗಳು
ಬೆಳಕಲ್ಲವೆಂದು
ಬಾ
ಬಂದಿದ್ದೇನೆ ನಾನೊಬ್ಬನೆ
ಇಂಗುತ್ತೇನೆ ಮಾತಾಗಿ
ನಿನ್ನೊಳಗೆ ಸುಮ್ಮನೆ”

ಇದು ಅವಳ ಕುರಿತು ಎಂದೋ ಬರೆದು, ಇನ್ನೆಂದೋ ಓದಿದ ಕವಿತೆ. ಕಾವ್ಯದಂತೆ ಕಮನೀಯವಾಗಿ ಬದುಕಿದವರ ಸುತ್ತ ಮಾತ್ರ ಕವಿತೆ ಸಾಧ್ಯ. ನಮ್ಮ ಬಾಳಿನ ದಾರಿಯಲ್ಲಿ ಬೆಳಕಿದ್ದವರ ಬೆನ್ನುಹತ್ತಿ ಬಹಳಷ್ಟು ಹೆಂಗಸರು ಬರುತ್ತಾರೆ. ಬಂದವರು ಮೈಯಲ್ಲಿ ಮುಳುಗಿ, ಮಾತಲ್ಲಿ ಅರಳಿ, ಮತ್ಯಾವುದೋ ವಿನಾಕಾರಣ ಕಾರಣಕ್ಕೆ ಕೆರಳಿ, ಇದುವರೆಗಿನ ಈ ಬದುಕೇ ಸುಳ್ಳು ಎನ್ನುವಂತೆ ಎಲ್ಲ ಕಿತ್ತೆಸೆದು ಹೊರಟು ಹೋಗುತ್ತಾರೆ. ಕೆಲವರು, ಕೆಲವೇ ಕೆಲವರು ಮಾತ್ರ ಹೆಳೆಯ ಹಾಡಿನಂತೆ, ಗಂಟೆಯ ರಿಂಗಣದಂತೆ, ಮಧುರ ವಾಸನೆಯಂತೆ ಅವರ ನಿಧನದ ನಂತರವೂ ಉಳಿದು ಬಿಡುತ್ತಾರೆ. ಇಂಥವರ ನೆನಪೆಂದರೆ ಹುಚ್ಚು ಹುಚ್ಚಾಗಿ ಕೆನ್ನೆ ಕಚ್ಚುವ ಕೂಸಿನ ಮಾತೇ ಅಲ್ಲವೇ? ಹೀಗೆ ನೆನಪಾಗಿ ಉಳಿದವಳು ಅವಳು.
ಅವಳ ನೆನಪು ಬಿಕ್ಕಳಿಸಿದ್ದು ಆ ದಿನದಂದು( ದಿ. ೦೬/೦೪/೨೦೧೩ ರಂದು) ತಾಳಿಕೋಟಿಯಲ್ಲಿ. ಅಂದು ಸ್ಥಳಿಯ ಕಾಲೇಜೊಂದರಲ್ಲಿ ‘ಗಾಂಧಿ ಮತ್ತು ಗೂಂಡಾ’ ನನ್ನ ನಾಟಕ ಪ್ರದರ್ಶನ. ಹಿರಿಯ ರಂಗಮಿತ್ರ ಪ್ರೊ. ಶೇಷಾಚಲ ಹವಾಲ್ದಾರ್ ನನ್ನ ನಾಟಕವನ್ನು ರಂಗಕ್ಕಳವಡಿಸಿದ್ದರು. ಅನಿರೀಕ್ಷಿತ ಆಮಂತ್ರಣ ಅವರಿಂದ. ಇಷ್ಟು ಸಾಕಿತ್ತು ಅಲೆಮಾರಿಯ ಯಾತ್ರೆಗೆ. ಗೆಳತಿಯೊಂದಿಗೆ ಹೊರಟೇಬಿಟ್ಟೆ. ಅಲ್ಲಿ ಹೋಗುವುದರೊಳಗಾಗಿ ಎಷ್ಟೊಂದು ಪ್ರೀತಿಯ ಬಳಗ!(ಪ್ರೊ.ವೀರಭದ್ರ ಕೌದಿ, ಪ್ರೊ,ಗುರುಪಾದ ಘಿವಾರಿ, ಶಿಷ್ಯ ವಿರೇಶ್ ಬಡಿಗೇರ್ ಎಲ್ಲ ಇಲ್ಲಿಯೇ ಇದ್ದಾರೆ.) ಇಷ್ಟಾಗಿದ್ದರೆ ಮಹತ್ವದ್ದೇನೂ ಘಟಿಸುವುದಿಲ್ಲ. ನೆನಪುಗಳ ನಂಟು ಮಾತ್ರ ನಮ್ಮ ಹಳೆಯ ಗಂಟಗಳನ್ನು ಬಿಡಿಸಿಕೊಳ್ಳಲು ಕಾರಣವಾಗುತ್ತವೆ. ಅಂಥಹ ಪ್ರೀತಿಯ ಗಂಟು ಮತ್ತು ಹೃದಯದ ನಂಟು ಆ ನನ್ನ ಗೆಳತಿ.
ಇನ್ನೂ ನೆಟ್ಟಗೆ ಮೀಸೆ ಮೂಡದ ಕಾಲ. ಅವು ನನ್ನ ಪಿಯುಸಿ ದಿನಗಳು. ಹೊಸದಾಗಿ ಲುಂಗಿ ಉಟ್ಟು ನೆಟ್ಟಗೆ ನಡೆಯಲು ಹೋಗಿ ಮುಗ್ಗರಿಸುವ ಯವ್ವೌನದ ಹಂಗಾಮು. ಆ ಬಿಸಿಯುಸಿರಿನಲ್ಲಿಯೇ ಹುಡುಗಿಯರ ಹೈರಾಣಾಗಿಸಿ ಬಿಡುವ ಹುಂಬತನ. ಈಗ ನಡು ವಯಸ್ಸಿನ ಹಂಗಸರೂ ಈ ಕಾಮದ ಕಣ್ಣುಗಳಿಗೆ ಕಡುಬಣ್ಣದ ಗೆಳತಿಯರಂತೆಯೇ ಕಾಣುತ್ತಾರೆ. ಸೃಷ್ಟಿಯಲ್ಲಿ ಮುಟ್ಟಿದೆಲ್ಲವೂ ಮೈ ನೆರೆದ ಹುಡುಗಿಯಂತೆಯೇ ಮೃದುವಾಗುತ್ತದೆ. ಮಾತೆಲ್ಲವೂ ಕವಿತೆ, ಮೌನವೆನ್ನುವುದು ಕಾಡುಕಲ್ಪನೆಗಳ, ನೆನಪುಗಳ ಅವಿಶ್ರಾಂತ ಅಲೆದಾಟ. ಈಗ ಕಣ್ಣು ಖಾಲಿ ಇರುವುದಿಲ್ಲ. ತಣ್ಣಗೆಲ್ಲ ಮನಸ್ಸು, ಮುಗಿಯದ ಹಳಿಯ ಮೇಲೆ ಗೂಡ್ಸ್ ಗಾಡಿಯಂತೆ ಓದುವ ಆಲೋಚನೆಗಳಿಗೆ ಒಂದೇ ಗಂತವ್ಯವಿರುವುದಿಲ್ಲ, ಅಲ್ಲವೇ?
ಅವಳು ಆಗ ಹೈಸ್ಕೂಲಿನಲ್ಲಿ ಓದುತ್ತಿದ್ದ ನೆನಪು. ಯಾವ ಕ್ಲಾಸು? ಈಗ ಸ್ಪಷ್ಟವಾಗಿ ನೆನಪಾಗುತ್ತಿಲ್ಲ. ಬೆಳ್ಳಗೆ ಹಾಲು ಬೆಳದಿಂಗಳಂಥ ಅವಳು ತನ್ನ ಗೆಳತಿಯೊಬ್ಬಳನ್ನು ಹುಡುಕಿಕೊಂಡು ನಮ್ಮ ವಠಾರಕ್ಕೆ ಬರುತ್ತಿದ್ದಳು. ಹಾಗೆ ನೋಡಿದರೆ ದುಂಡು ದುಂಡಾದ ಇಂಥ ಹುಡುಗಿಯರ ದಂಡೇ ನಮ್ಮ ವಠಾರದಲ್ಲಿತ್ತು. ಬರೀ ಇವರ ಮಾತಿನಲ್ಲಿಯೇ ದಿನಕ್ಕೆ ಮುಪ್ಪು ಬಂದು ಮುಸ್ಸಂಜೆಯ ಚಂದಿರನ ಮುಸಿ ನಗೆ ಪ್ರಾರಂಭವಾಗುತ್ತಿತ್ತು. ಎರಡು ಹೆಳಲುಗಳ ಈ ಹುಡುಗಿ ಮಾತು ಹರಡಿ ತನ್ನ ಮನೆಗೆ ಹೊರಡುವಾಗ ಮನೆಗಳೊಳಗೆ ದೀಪ ಬೆಳಗುವ ಸಮಯ.
ಅವಳನ್ನು ನಾನು ನಿತ್ಯ ನೋಡುತ್ತಿದ್ದೆ. ನಮ್ಮ ಕಾಲೇಜು, ಅವಳ ಹೈಸ್ಕೂಲು ಒಂದೇ ಕಡೆಗೆ ಇದ್ದುದ್ದರಿಂದ ಅವಳ ಹೆಜ್ಜೆಗಳೊಳಗೆ ಹೆಜ್ಜೆ ಇರಿಸಿಕೊಂಡು ಹೋಗಲು ನಿತ್ಯ ಕಾತರಿಸುತ್ತಿದ್ದೆ. ಆಗಲೇ ನನ್ನ ಬರಹ-ಭಾಷಣಗಳ ಪರ್ವ ಪ್ರಾರಂಭವಾಗಿತ್ತು. ಸಾಮಾನ್ಯವಾಗಿ ಇವರ ಹೈಸ್ಕೂಲಿನ ಸಭಾಂಗಣದಲ್ಲಿಯೇ ನದೆಯುತ್ತಿದ್ದ ನಮ್ಮ ಕಾರ್ಯಕ್ರಮಗಳಲ್ಲಿ ಅವಳ ಉಪಸ್ಥಿತಿ ಇದ್ದೇ ಇರುತ್ತಿತ್ತು. ಸಾರ್ವಜನಿಕವಾದ ನನ್ನ ಸಾಹಸಗಳಿಗೆ ನೋಟದಲ್ಲಿಯೇ ಅವಳ ಬೆಂಬಲ ರವಾನೆಯಾಗುತ್ತಿತ್ತು. ಆದರೆ ಈ ನೋಟ,ಮೌನ ಸಮ್ಮತಿ, ಒಳಗೊಳಗೆ ಮಿಡುಕಾಟ ಸಾಕಾಗಿ ನಮ್ಮ ಪ್ರೀತಿಗೊಂದು ಫಲಿತಾಂಶ ಬೇಕಾಗಿತ್ತು. ಹಾಗಿದ್ದಾಗ ಪರೀಕ್ಷೆಗೂ ಒಳಪಡಿಸಿಕೊಳ್ಳಬೇಕಲ್ಲವೇ?
ಒಂದು ದಿನ ಕಾಲೇಜಿಗೆ ಹೋಗುವ ಸಮಯ, ಮನೆದೇವರಿಗೆ ಹತ್ತು ಬಾರಿ ನಮಸ್ಕರಿಸಿ ಪ್ರಥಮ ಪ್ರೇಮ ಪತ್ರವನ್ನು ಈಕೆಯ ಕೈಗೆ ಕೊಟ್ಟೆ. ರಾತ್ರಿಯೆಲ್ಲಾ ನಿದ್ದೆಗೆಟ್ಟು, ಓದು-ಬರಹ ಬದಿಗಿಟ್ಟು ಬರೆದ ಈ ಪ್ರೇಮ ಪತ್ರಕ್ಕೆ ದೈವ ಸಮ್ಮತಿ ಬರಲೆಂದು ಪತ್ರ ಕೊಟ್ತ ಮರುಕ್ಷಣವೇ ನಾನು ಓಡಿದ್ದು ನೇರ ದೇವಸ್ಥಾನಕ್ಕೆ. ಯಾವುದೋ ಘೋರ ಅಪರಾಧ ಮಾಡಿದಂತೆ ಕೈ-ಕಾಲುಗಳು ಥರಗುಟ್ಟುತ್ತಿದ್ದವು. ಅದು ಭಯವೆನ್ನುವುದಕ್ಕಿಂತ ಅನೀರಿಕ್ಷಿತತೆಯ ಸುತ್ತಲಿನ ಆತಂಕ ಎಂದುಕೊಳ್ಳುವುದೇ ಸೂಕ್ತ. ಆನಂತರದ ನಾಲ್ಕು ದಿನಗಳ ಹಿಂಸೆ ಆ ದೇವರಿಗೂ ಬೇಡ. ಆಗ ಆನ್ನಿಸಿದ್ದು ಈ ಪ್ರೀತಿಯ ಸಹವಾಸವೇ ಬೇಡ.
ನನ್ನ ಪತ್ರದ ಪ್ರಹಸನಕ್ಕೆ ಮೊದಲು ತಣ್ಣಗಿನ ಗಾಳೀಯಂತೆ ನನ್ನ ವಠಾರದಲ್ಲಿ ಸುಳಿದು ಹೋಗುತ್ತಿದ್ದ ಈ ಹುಡುಗಿ ಆನಂತರ ಬರುವುದನ್ನೇ ನಿಲ್ಲಿಸಿಬಿಟ್ಟಳು. ನನ್ನ ಕಾಲೇಜಿನ ರಸ್ತೆಯಲ್ಲಿಯೂ ಅವಳ ಸುಳಿವಿಲ್ಲ. ಆ ಮಾತು, ಕಳ್ಳನೋಟ, ನಗೆ ಎಲ್ಲವೂ ನನ್ನಿಂದ ದೂರ. ಯಾಕಾದರೂ ಆ ಹಾಳು ಪ್ರೇಮ ಪತ್ರ ಕೊಟ್ಟೆ ಎಂಬ ಬೇಸರ ಮನಸ್ಸಿನಲ್ಲಿ ಮಡುಗಟ್ಟಲು ಪ್ರಾರಂಭಿಸಿತು. ಕುಳಿತು ಅಳುವುದೊಂದೇ ಬಾಕಿ. ಜೊತೆಗೆ ಮಹಾಕವಿಯೊಬ್ಬನಿಗೆ ಆದ ಅಪಮಾನದ ಭಾರ. ಆದರೆ ಇದು ಧೀರ್ಘವಾಗಿರಲಿಲ್ಲ.

ಹೆಚ್ಚು-ಕಡಿಮೆ ನಾನು ಪತ್ರ ಕೊಟ್ಟ ಸಮಯವೇ. ಒಂದು ದಿನ ಅವಳು ನನ್ನ ಮನೆಗೇ ಬಂದು ತನ್ನ ಲಿಖಿತ ಸಮ್ಮತಿಯನ್ನು ನನ್ನ ತಂಗಿಯ ಕೈಗಿಟ್ಟು ‘ಇದೇನು ಅಕ್ಕಾ?’ ಎಂದು ಕೇಳಿದಾಗ ‘ನಿಮ್ಮ ಅಣ್ಣನಿಗೆ ಕೊಡು’ ಎಂದು ಹೇಳಿ ಒಂದು ಹೂ ಮುತ್ತ ನನ್ನ ತಂಗಿಗೆ ಕೊಟ್ಟು ಹೋಗಿದ್ದಳು. ನನ್ನ ಬದುಕಿನ ಆ ದಿನದ, ಆಕ್ಷಣದ ಖುಷಿ ಬಹುತೇಕ ಮುಂದೆ ಮತ್ತೆಲ್ಲಿಯಾದರೂ ಸಾಧ್ಯವಾದೀತೇ? ಸಂಶಯವಿದೆ ನನಗೆ.
ಹೀಗೆ ಹುಚ್ಚು ಹಾಡಾದ ಪ್ರೀತಿ. ವಾರಕ್ಕೆ ಒಂದೇ ಭೆಟ್ಟಿ, ಅದೂ ಅವಳ ಮನೆಯಲ್ಲಿಯೇ. ದೊಡ್ಡ ಪ್ರಮಾಣದ ಮಿಠಾಯಿ ವ್ಯಾಪಾರಿಗಳಾಗಿದ್ದ ಅವರ ಮನೆಗೆ ಅವರ ಮನೆಯಲ್ಲಿ ಯಾರೂ ಇಲ್ಲದಾಗ ನನ್ನನ್ನು ಬಿಟ್ಟು ಬರಲು, ನಾವು ಒಳಗಡೆ ಕೂಡಿ ಇದ್ದಾಗ ಕೂಗಿ ಹೇಳಲು ಜೊತೆಗೊಬ್ಬ ಗೆಳೆಯನೂ ಇದ್ದ. ಅವನ ಈ ಪರಿಚಾರಿಕೆಗೆ ಆತನಿಗೊಂದಿಷ್ಟು ಸ್ವೀಟ್ ಕೊಟ್ಟರೆ ಮುಗಿಯಿತು. ಮನೆಯೊಳಗೆ ಆಕೆಯ ಅಂಗೈಯೊಳಗೆ ಕೈಯಿಟ್ಟು ಒಮ್ಮೊಮ್ಮೆ ಅವಳ ಕಾಲುಗಳನ್ನೇ ದಿಂಬವಾಗಿಸಿಕೊಂಡು ಮಾತಾಡಿದ ಆ ಖುಷಿಯೇ ಅಪೂರ್ವ. ಅವಳದು ನಿರಂತರ ಮೌನ, ಮುಗುಳ್ನಗೆ. ನನ್ನದು ಮಾತು, ಮಾತು, ಮಾತು ಮತ್ತು ಮಾತು. ಹೀಗೆ ಎರಡು ವರ್ಷ ಉರುಳಿತೇ? ಎಷ್ಟೆಲ್ಲಾ ಪ್ರೀತಿ ಅನುರಾಗದ ವಿನಿಮಯವಾಯಿತು. ನಗುವಾಯಿತು. ಈಗ ಎಲ್ಲ ನೆನಪಿಲ್ಲ. ಕಾಲಕ್ಕೆ ಎಲ್ಲದರ ಅಥವಾ ಯಾವುದರ ಹಂಗೂ ಇಲ್ಲವಲ್ಲ.
ಬೇಸಿಗೆಯ ರಜೆ ಬಂತು. ಎರಡು ತಿಂಗಳ ರಜೆಗೆ ವಾಡಿಕೆಯಂತೆ ಅಜ್ಜನ ಅಥವಾ ಸೋದರ ಮಾವನ ಊರಿಗೆ ರಜೆ ಕಳೆಯಲು ನಾವು ಹೋಗಲೇಬೇಕಾದುದು ನಮ್ಮ ಮನೆಯ ಅಲಿಖಿತ ನಿಯಮ. ಈ ಸಾರಿಯ ರಜೆಯನ್ನು ಸೋದರ ಮಾವನ ಊರಾದ ಶ್ರೀಶೈಲದಲ್ಲಿ ಕಳೆಯುವುದು ಎಂದಾಯಿತು. ತಂದೆ-ತಾಯಿಗಳೊಂದಿಗೆ ಊರಿಗೆ ಹೋಗಲು ಮನಸ್ಸಿಲ್ಲ. ಹಾಗಂತ ಅವಳನ್ನು ಬಿಟ್ಟು ಬರುವುದಿಲ್ಲ ಎನ್ನುವ ವಯಸ್ಸಲ್ಲ. ಎಲ್ಲವೂ ಕಳ್ಳದಾರಿಯಲ್ಲಿ ನಡೆದದ್ದು ತಾನೇ? ನಮ್ಮದೇನು ಸಲೀಂ-ಅನಾರ್ಕಲಿಯಂತೆ ಬಯಲಿಗೆ ಬಿದ್ದ ಕತೆಯೇ? ಅವಳನ್ನು ಊರಿಗೆ ಹೊರಡುವ ಮುಂಚೆ ಒಮ್ಮೆ ಭೆಟ್ಟಿಯಾಗಿ ಏನೋ ಹೇಳುವ ಆಸೆ. ಅವಳು ಬಿಕ್ಕಳಿಸಿ ಅಳುತ್ತಿದ್ದಳು. ನಾನೆರಡು ಮುತ್ತು ಕೊಟ್ಟೆ. ಅಂದು ನಾನವಳಿಗೆ ಹೇಳಿದ್ದು ಮಾತ್ರ ಇಂದಿಗೂ ನೆನಪಿದೆ. ಆಕೆಗೆ ನೀಡಿದ್ದ ಆ ವಚನವನ್ನು ನನಗಿಂದಿಗೂ ಮರೆಯಲಾಗಿಲ್ಲ. ಹೇಳಿದ್ದೆ, “ನಾನು ಬಹಳಾ ದೊಡ್ಡ ಮನುಷ್ಯನಾಗುತ್ತೇನೆ, ತುಂಬಾ ಪ್ರಸಿದ್ಧನಾಗುತ್ತೇನೆ. ನೀನೊಂದು ದಿನ ನನ್ನನ್ನು ಪತ್ರಿಕೆಗಳಲ್ಲಿ, ವೇದಿಕೆಗಳಲ್ಲಿ, ಮಧ್ಯಮಗಳಲ್ಲಿ ನೋಡಿ ಬೆರೆಗಾಗುತ್ತಿಯ. ನನ್ನ ಈ ಪ್ರೀತಿಯ ಬಗೆಗೆ ಅಭಿಮಾನ ಪಡುತ್ತಿಯ” ಇದು ಅವಳೊಂದಿಗಿನ ಕೊನೆಯ ಭರವಸೆಯ ನುಡಿ.
ರಜೆ ಕಳೆದು ಊರಿಗೆ ಬರುವುದರೊಳಗಾಗಿ ಅವಳು ಅಲ್ಲಿರಲಿಲ್ಲ. ಗೆಳೆಯನಿಗೆ ಕರೆದು ಕೇಳಿದಾಗ ಅವಳು ಮದುವೆಯಾಗಿ ತಾಳಿಕೋಟಿಗೆ ಹೋದಳೆಂದು ಗೊತ್ತಾಯಿತು. ಚೆಂದುಳ್ಳ ಹುಡುಗಿಯರ ಮದುವೆ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ಹಮ್ತಕ್ಕೆ ಮುಗಿದುಬಿಡುವುದು ಉತ್ತರ ಕರ್ನಾಟಕದಲ್ಲಿ ಇಂದಿಗೂ ಸಾಮಾನ್ಯ. ಅಂದಿಗಂತೂ ಚರ್ಚೆಯ ಸಂಗತಿಯೇ ಅಲ್ಲ. ಪಿಯುಸಿ ಮುಗಿಸಿದ್ದ ನಾನು ಪದವಿ ಶಿಕ್ಷಣಕ್ಕಾಗಿ ಮುಂದಿನ ಊರಿಗೆ ಹೋಗಬೇಕಾದದ್ದು ಅನಿವಾರ್ಯವಾಗಿತ್ತು. ಊರಿಂದ ಊರಿಗೆ ನಾನು ಹೋದೆ. ಈ ವಯಸ್ಸಿನಲ್ಲಿ ನಮ್ಮ ಸುತ್ತಲಿನ ಆಗು-ಹೋಗುಗಳೆಲ್ಲ ಕುಟುಂಬ ಹಾಗೂ ಸಮಾಜ ನಿರ್ಧಾರಿತ. ಇಲ್ಲಿ ಪ್ರತಿರೋಧದ ಭಾಷೆ ಎಲ್ಲಿ ಸಾಧ್ಯ?
ಹಾವು ಪೊರೆ ಕಳಚಿಕೊಳ್ಳುವಂತೆ, ತೆಂಗಿನ ಮರದ ಪೊಟರೆಗಳು ಉಚ್ಚಿ ಬೀಳುವಂತೆ ವರುಷಗಳ ಮೇಲೆ ವರುಷಗಳು ಉರುಳಿದವು. ಪದವಿಗಳ ಮೇಲೆ ಪದವಿಗಳು ಮುಗಿದವು. ಆದರೆ ನೆನಪಿನ ನಂಟು ಅಳಿಯಲಿಲ್ಲ. ಸಾಧನೆಯ ಬೆನ್ನು ಹತ್ತಿ ಹೋಗಿದ್ದ ನನ್ನ ಊರಿಗೆ ಅವಳು ಅದೆಷ್ಟು ಬಾರಿ ಬಂದು ಹೋಗಿದ್ದಳೋ ಗೊತ್ತಿಲ್ಲ. ಅವಳ ಆಗಮನ ನಿರ್ಗಮನದ ಕುರಿತು ಹೇಳಬೇಕಾದ ಅವಳ ಗೆಳತಿಯೂ ಈಗ ಮದುವೆಯಾಗಿ ಊರು ಖಾಲಿ ಮಾಡಿದಳು. ಸಾವಿಲ್ಲದ ನಮ್ಮೂರ ನಮ್ಮ ನೆನಪುಗಳ ಪಾಲಿಗೆ ಜಾಲಿಯ ನೆರಳಾಗಿತ್ತಷ್ಟೆ.
ಹಾಗೆ ಹೋದ ನಾನು ಅದೆಷ್ಟೋ ವರ್ಷ ಊರಿಗೆ ಮರಳಲೇ ಇಲ್ಲ. ಸಾಧನೆಯ ದೇಗುಲದ ಸುತ್ತ ಉರುಳು ಸೇವೆ ಮಾಡುತ್ತಿದ್ದ ಮನಸ್ಸಿಗೆ ಎಂಥ ವಿಚಿತ್ರ ಮಗ್ಗಲು ಅಂತೀರಾ. ಬಹಳ ವರ್ಷಗಳ ನಂತರ ಒಮ್ಮೆ ಬದಲಾದ ನನ್ನೂರನ್ನು ಬೆರಗುಗಣ್ಣಿನಿಂದ ನೋಡುತ್ತಾ ಹೊರಟಿರಬೇಕಾದರೆ ಆಕೆ ಧುತ್ತನೆ ಎದುರಾದಳು. ನಾನು ಅದು ರಸ್ತೆ ಎನ್ನುವುದನ್ನು ಮರೆತು ಒಂದು ಕ್ಷಣ ನಿಂತುಕೊಂಡೆ. ಮನಸ್ಸು ಮುಳ್ಳುಮುಳ್ಳಾಗಿತ್ತು. ಯಾವುದೇ ತಪ್ಪು ಮಾಡಿದಂತಹ ಅಪರಾಧಿ ಭಾವ. ಹಿಂದೆ ನನ್ನೆಡೆಗೆ ನೋಡುತ್ತಾ ಮುಂದೆ ಹೋದ ಅವಳ ಬೆರಳಿಗೆ ಒಂದು ಕೂಸೂ ಇರಲಿಲ್ಲ. ಆಕೆಯ ಮೈ ಮೂಲೆ ಮೂತಿಯನ್ನು ಮಗುವಂತೆ ಹಿಡಿದಾಡಿದ್ದ ನನ್ನೊಂದಿಗೆ ಅವಳು ಅಂದು ಮಾತಾಡಲಿಲ್ಲ. ಅಂದೇ ಅಲ್ಲ, ಅಂದು ಮಾತಾಡದವಳು ಇನ್ನೆಂದೂ ಮಾತಾಡಲಿಲ್ಲ.
ಆಮೇಲೆ ಗೊತ್ತಾಯಿತು. ಈಗವಳು ತಾಳಿಕೋಟಿ ಬಿಟ್ಟಿದ್ದಳು. ಗಂಡನೊಂದಿಗೆ ಬಂದು ತನ್ನ ತವರಿನಲ್ಲಿ ಅಂದರೆ ನಮ್ಮೂರಲ್ಲಿಯೇ ಉಳಿದುಬಿಟ್ಟಿದ್ದಳು. ಮಕ್ಕಳ ವಿವರವಿಲ್ಲ. ವಯಸ್ಸಿನ ಹದಿನಾರಕ್ಕೆ ಮದುವೆಯಾಗಿ ಹೋಗಿದ್ದ ಈಕೆಯನ್ನು ನಾನು ಈಗ ನೋಡುವಾಗ ಇಪ್ಪತ್ತೆಂಟರ ಅಕ್ಕ-ಪಕ್ಕ ಇದ್ದಳೆನೋ. ಅಂದಿಗೂ ಅವಳ ಮುಖದಲ್ಲಿಯ ಶಾಂತ, ಮಂದಹಾಸ, ನಿಧಾನದ ನಡಿಗೆ, ವಿಶಾಲ ಕಣ್ಣುಗಳ ಹೊಳಪು ಯಾವುದೂ ಕಳೆಗುಂದಿರಲಿಲ್ಲ. ದುಖಃದ ಸಂಗತಿಯೆಂದರೆ ನಾನು ಅವಳಿಗೆ ತಿಳಿಸಿದಂತೆ ದೊಡ್ಡ ವ್ಯಕ್ತಿಯೇ ಆಗಿರಲಿಲ್ಲ.
ಮತ್ತೆ ಹೀಗೆಯೇ ವರ್ಷಗಳ ಲೆಕ್ಕ. ನಿಷ್ಕರುಣಿ ಜೀವನಕ್ಕೆ ಕ್ರಮಿಸುವ ಹಂಬಲವಷ್ಟೇ. ಕ್ರಶರ್ ಬಾಯಿಗೆ ಸಿಕ್ಕ ಕಬ್ಬಿನಂತೆ ಕರುಳ ಕನಸುಗಳನೆಲ್ಲಾ ಕತ್ತರಿಸಿ ಎಸೆಯುತ್ತದೆ ಬದುಕು. ದೊಡ್ಡ ದೊಡ್ಡದಾಗಿ ಕಾಣಿಸಿಕೊಂಡು ನಾನು ಅವಳ ಪಾಲಿಗೆ ಏನೋ ಆಗುತ್ತೇನೆ ಎಂದುಕೊಂಡದೆಲ್ಲ ಸುಳ್ಳು ಎನ್ನಿಸಲಾರಂಭಿಸಿತು. ಹೀಗೆ ಸೋಲಿನ ದಾರಿಯಲಿ ಮುದ್ದೆಯಾದ ಮನಸ್ಸಿಗೆ ಮದುವೆ ಬಿಟ್ಟರೆ ಇನ್ಯಾವ ಗಂತವ್ಯ? ನನ್ನದೂ ಮದುವೆಯಾಯಿತು. ಹೆಂಡತಿಯೊಂದಿಗೆ ಕೈ ಹಿಡಿದುಕೊಂಡು ಅವಳ ಮನೆಯ ಮುಂದಿನಿಂದ ಹೋಗುವುದು ಹೇಗೆ ಎನ್ನುತ್ತ ಕಾರಿನಲ್ಲಿ ಹೋದೆ. ಆದರೆ ಹೋಗುವಾಗ ಅವಳ ಮನೆಯೆಡೆಗೆ ಒಂದು ಕಳ್ಳ ನೋಟ ಬೀರದೇ ಇರಲಾಗಲಿಲ್ಲ.
ಬೇಸರದ ಸಂಗತಿ ಅವಳ ಮನೆಯ ಕದ ಮುಚ್ಚಿಕೊಂಡಿತ್ತು. ಮತ್ತೆ ದುಗುಡ, ಪ್ರಶ್ನೆ. ಏನಾಯಿತು ಎಂಬ ತವಕ. ಹೆಂಡತಿಯನ್ನು ಮನೆಗೆ ಬಿಡುತ್ತಲೇ ಮತ್ತೆ ಒಬ್ಬನೇ ಬಂದು ಕಳ್ಳನೋಟ ಬೀರುತ್ತಲೇ ಆ ಮನೆಯನ್ನು ಗಮನಿಸಿದೆ. ಕೀಲಿ ಹಾಕಿದ ಕದ, ರಂಗೋಲಿ ಇಲ್ಲದ ಅಂಗಳ. ಮನೆ ಬಳಸುತ್ತಿರುವ ಕುರುಹೇ ಇಲ್ಲ. ಆನಂತರ ವಿಷಯ ತಿಳಿಯಿತು.ನನ್ನ ಕನಸುಗಳ ಕಣ್ಣರೆಪ್ಪೆಯಿಂದ ಜಾರಿ ಹೋದ ಅವಳು ತೀರಿಹೋಗಿದ್ದಳು. ಅವಳಿಲ್ಲದ ಆ ಊರಲ್ಲಿ ಇರುವುದಕ್ಕೆ ಯಾವ ಅರ್ಥವೂ ಇಲ್ಲ ಎಂದು ಅವಳ ನೆನಪುಗಳ ಅರಸುತ್ತಾ ಗಂಡ ಮರಳಿ ಮತ್ತೆ ತನ್ನೂರಿಗೆ ಹೋಗಿದ್ದ. ಇಲ್ಲಿ ಎಲ್ಲ ಬಯಲಾಗಿತ್ತು.
ನಾನೀಗ ದೊಡ್ಡವನಾಗಿದ್ದೇನೆ. ಕೂದಲು ನೆರೆತಿವೆ, ಸೊಂಟ ನೋವು ಪ್ರಾರಂಭವಾಗಿವೆ, ಮಕ್ಕಳಾಗಿವೆ. ಕನ್ನಡಕ ಬಂದು ನಿಂತ ನೆಲವೇ ಕಾಲ್ತೊಡಕಾಗಿದೆ. ಮಣ್ಣಲ್ಲಿ ಮಲಗಿದವಳೊಂದಿಗೆ, ಈಗ ಅವಳೂರಲ್ಲಿಯೇ ಮಾತಾಡಿಸಲು ಈ ಕವಿತೆಯೊಂದನ್ನು ಹೊರತುಪಡಿಸಿ ನನ್ನ ಬಳಿ ಎನೂ ಇಲ್ಲ.ನಾನೀಗ ದೊಡ್ಡವನಾಗಿದ್ದೇನೆ. ಯಾಕೆಂದರೆ, ಅವಳ ಕುರಿತು ನಾನೀಗ ಕವಿತೆ ಓದುವಾಗ ಕನಿಷ್ಟ ಎರಡು ಸಾವಿರ ಕಿವಿಗಳು, ಒಂದು ಸಾವಿರ ಹೃದಯ ನನ್ನೊಂದಿಗಿವೆ. ಆದರೆ ಅವಳು, ಅವಳೊಬ್ಬಳನ್ನು ಹೊರತುಪಡಿಸಿ.
No comments:
Post a Comment