Sunday 14 April 2013

ಸೋಕಿದ ಕೈಗಳ ಸುಖವ ನೆನೆದು



"ನೀನಿರಬೇಕಮ್ಮ ಬಾಗಿಲೊಳಗೆ

ಶಾಲೆ ಜೈಲಿಂದ ಹೊರ ಬಂದ

ಹೈದಗೆ ರೆಕ್ಕೆ ಮೂಡಿ, ಹಾತೊರೆದು ಬರುವವನ

ಎದೆಯೊಳಗೆ ಇಂಗಿಸಿಕೊಳ್ಳಲು

ನೀನಿರಬೇಕಮ್ಮ ಬಾಗಿಲೊಳಗೆ

ಮರೆತು ಹೋಗುವ ಸೂರ್ಯ

ಚಂದ್ರ, ನಕ್ಷತ್ರ, ಮಿಂಚು ಹುಳುಗಳ ಕರೆದು

ಮನೆಯ ಮೊಮ್ಮಗಳೊಡನೆ ಮಾತಾಡ ಹೇಳಲು"


ಇದು ಅವ್ವನನ್ನು ಕುರಿತು ನಾನೇ ಬರೆದ ದೀರ್ಘ ಕವಿತೆಯ ಆಯ್ದ ಎರಡು ಪದ್ಯಗಳಷ್ಟೆ. ಮೇಲ್ನೋಟಕ್ಕೆ ಇದು ಅಮ್ಮನನ್ನು ಕುರಿತು ಬರೆದ ಕವಿತೆಯಂತೆ ಓದಿಸಿಕೊಂಡರೂ ಅದರೊಳಗೆ ಅನಾವರಣಗೊಂಡಿರುವುದು ಮಾತ್ರ ತಾಯಿಯ ಕೈಗಳ ಸುಖ, ಶಕ್ತಿ ಮತ್ತು ಜೀವ ಸಂಚಾರ. 

ನಿಮಗೆ ಕೈಗಳ ಬಗೆಗೆ ಅದೇಷ್ಟು ಗೊತ್ತಿದೆಯೊ. ನನ್ನ ಬದುಕೆನ್ನುವುದು ಮಾತ್ರ ಈ ಕೈಗಳ ಕಥೆಯನ್ನುವುದು ಬಿಟ್ಟು ಮತ್ತೆನೂ ಅಲ್ಲ. ಹರಸುವ ಕೈ, ಹಂಬಲಿಸುವ ಕೈ, ಚಿವುಟುವ ಕೈ, ಸುಖನೀಡುವ ಕೈ, ಮೈ ಮರೆಸುವ ಕೈ, ಎತ್ತಾಡಿಸಿದ ಕೈ, ಕತ್ತು ಹಿಚುಕುವ ಕೈ, ನಮ್ಮ ಕೆತ್ತುವ ಕೈ, ಅಬ್ಬಬ್ಬಾ!!! ಎಷ್ಟೊಂದು ಭಾವಗಳು ಅಷ್ಟೊಂದು ಕೈಗಳು ಮನುಷ್ಯನಿಗೆ. ಹಾಗೆ ನೋಡಿದರೆ ಮನುಷ್ಯನ ಮೈ ಎಲ್ಲವೂ ಕೈ.

ನಾನು ಬಹಳ ಅದ್ಭುತ ಕೈಗಳ ಸುಖ ಉಂಡಿದ್ದೇನೆ. ಕೈ ತುತ್ತು ಉಂಡು ಬೆಳೆದಿದ್ದೇನೆ. ‘ಈ ಕೈಯ ಕಥೆ ಆ ಕೈಗೆ ಗೊತ್ತಾಗಬಾರದು’ ಎಂಬ ನಮ್ಮ ಜನಪದರ ಜಾಣ್ಣುಡಿಗೆ ಎಷ್ಟೊಂದು ಚಿಂತಿಸಿದ್ದೇನೆ. ‘ಅಯ್ಯೋ!! ಅದ್ಯಾವ ಘಳಿಗೆಯಲ್ಲಿ ಈ ಹಾಳು ಕೈ ಹಚ್ಚಿದೆನೋ ಕೂಸಿಗೆ ಹೀಗಾಯಿತು’ ಎಂದು ಕನವರಿಸುವ ಅವ್ವಂದಿರನ್ನು ನೋಡಿದ್ದೇನೆ. ನನ್ನ ಕೈಗೂ ಬಾ ಕೂಸೆ, ನನ್ನನ್ನು ಉದ್ದರಿಸು ಎಂದು ಕರೆದ ಶೋಡಷಿಯರು, ಕೆನ್ನೆ ರಂಗಾಗಿಸಿಕೊಂಡಿದ್ದನ್ನು ನೋಡಿದ್ದೇನೆ. ರಾಮನ ಕೈ ಹಿಡಿದು ಸೀತೆ, ಲವನ ಕೈ ಹಿಡಿದು ಕುಶ, ಸಂಜೆಯನನ್ನ ಕೈ ಹಿಡಿದು ದೃತರಾಷ್ಟ್ರ, ಕೃಷ್ಣನ ಕೈ ಹಿಡಿದು ಗೊಲ್ಲರು, ಗೋಪಿಯರು, ಗುರು ಗೋವಿಂದನ ಕೈ ಹಿಡಿದು ಶರೀಫ, ಬುದ್ಧನ ಕೈ ಹಿಡಿದು ಬಿಂದುಸಾರ, ಅಬ್ಬಾ! ಈ ದೇಶದ ಇತಿಹಾಸವೆನ್ನುವುದು ಬರೀ ಕೈಗಳ ಕಥೆಯಲ್ಲವೇ? 

ನನಗೆ ಎರಡು ಚಿತ್ರಗಳು ಹುಚ್ಚು ಹಿಡಿಸುತ್ತವೆ. ದಿನಬೆಳಗಾದರೆ ನೀವೂ ಇದನ್ನು ನೋಡುತ್ತೀರಿ, ಅನುಭವಿಸುತ್ತೀರಿ, ಬರೆಯಲಿಲ್ಲವಷ್ಟೆ. ಮೊದಲ ಚಿತ್ರ ಅವ್ವ, ಅಕ್ಕ, ಅಣ್ಣ ಗೆಳೆಯರ ಕೈ ಹಿಡಿದು ಶಾಲೆಗೆ ಹೋಗುವ ಆ ಕೂಸುಗಳನ್ನು ಕಂಡೀರಾ! ಎಂಥ ಭರವಸೆಯ ನಡಿಗೆ ಅದು. ಅದರಲ್ಲೂ ಬೆಟ್ಟದಂಥ ಅವ್ವಂದಿರ ಕೈ ಹಿಡಿದು ಪುಟಾಣಿಗಳು ಹೋಗುವುದನ್ನು ನೋಡಿದರೆ ನಿತ್ಯ ಸಾವಿರ ಕವಿತೆ ಬರೆಯಬಹುದು. ನನ್ನದೊಂದು ಕವಿತೆ ಈ ಕೈ ಮತ್ತು ಕರುಳಿನ ಸಂವಾದದ್ದೆ-

"ಈ ನೆರಳ ಸೊಬಗೇ ಸೊಬಗು

ಈ ಮರುಳು ಮತ್ತೆ ಕರುಳು

ಹುಟ್ಟಬೇಕು ಇಲ್ಲಿಯೇ ಗೋವರ್ಧನ ಬೆರಳು

ಮತ್ತೆ ಕರೆದೊಯ್ಯಬೇಕು

ಮಣ್ಣಿಗೆ, ಇದುವೆ ನಮಗೂ ನಿಮಗೂ"

ಮತ್ತೊಂದು ಚಿತ್ರ ಭಕ್ತ ಮತ್ತು ಭಗವಂತನದ್ದು. ನಮ್ಮ ಆದ್ಯರು ಎಷ್ಟೊಂದು ಪುಣ್ಯವಂತರು. ಅವರು ಭಕ್ತನ ಕೈ ಹಿಡಿದು ಬಂದು ಬಾಲಕನಾದ, ಸೇವಕನಾದ, ಸಂಗಾತಿಯಾದ ಭಗವಂತನ ಕಥೆಗಳು ಬರೆದರು. ಇದೆಲ್ಲವೂ ಈ ದೇಶದಲ್ಲಿ ಮಾತ್ರ ಸಾಧ್ಯ. ಕೆಲವೊಮ್ಮೆ ಈ ಕೈಗಳಿಗಾಗಿ ನಾನಂತೂ ಬಾಲ್ಯದಲ್ಲಿ ಗೆಳೆಯರೊಂದಿಗೆ ತುಂಬಾ ಜಗಳವಾಡಿದ್ದೇನೆ. ಹೆಗಲು ಹೆಗಲಿಗೆ ಕೈ ಹಾಕಿ ಕೂಡಿ ಶಾಲೆಗೂ, ಮನೆಗೂ ಅಷ್ಟೆ ಅಲ್ಲ ಉಚ್ಚೆಗೂ ಹೋಗುತ್ತಿದ್ದ ಆ ಚಿತ್ರಗಳು ಈಗ ಕಾಣುವುದಿಲ್ಲ ಬಿಡಿ. ನಾನಂತೂ ಹೋಗುತ್ತಾ ಹೋಗುತ್ತಲೇ ಇಬ್ಬರ ಗೆಳೆಯರ ಹೆಗಲ ಮೇಲೆ ಕೈ ಹಾಕಿ, ಕಾಲು ಸೋತಾಗ ಜೋತು ಬಿದ್ದು ರೆಸ್ಟು ತೆಗೆದುಕೊಂಡರೂ ಪಾಪ ಆ ನನ್ನ ಗೆಳೆಯರು ಒಂದಿಷ್ಟೂ ಕೋಪಿಸಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ಈ ಕೈಗಳ ಕಂತ್ರಾಟದಿಂದಾಗಿ ಜಗಳವೂ ಆಗುತ್ತಿತ್ತು. ಎತ್ತರವಾಗಿರುವ ಗೆಳೆಯರ‍್ಯಾರಾದರು ಹೆಗಲ ಮೇಲೆ ಕೈ ಹಾಕಿದರೆ ವಾಮನ ಮೂರ್ತಿಗಳಾದ ನಮಗೆ ಎಲ್ಲಿಲ್ಲದ ಸಿಟ್ಟು. ನಮ್ಮನ್ನು ಗಿಡ್ಡನನ್ನಾಗಿ ಮಾಡುವ ಸಲುವಾಗಿಯೇ ನಮ್ಮ ಹೆಗಲ ಮೇಲೆ ಕೈ ಇಡುತ್ತಾನೆ ಬೋ..ಮಗ ಎಂದು ಆಕ್ರೋಶ. ನೀವು ಗೆಳೆಯರ ಕೈ ಮೇಲೆ ಗಣಪತಿಯಾಗಿದ್ದೀರಾ?! ಕೈ ಕೈ ಕೂಡಿಸಿ ಮಳೆರಾಯನನ್ನು ಕರೆದಿದ್ದೀರಾ?! ನಾಲ್ಕು ಕೈಗಳ ಮೇಲೆ ಬಿದ್ದು ರಾಕೆಟ್ ಆಗಿದ್ದೀರಾ?! ಹಾಗೊಂದು ವೇಳೆ ಆಗಿದ್ದರೆ ನೀವು ಶ್ರೀಮಂತರಾಗಿದ್ದೀರಿ ಬಿಡಿ. 

ನಮ್ಮಪ್ಪ ನನ್ನನ್ನು ಕೂಡ್ರಿಸಿಕೊಂಡು ಈ ಕೈಗಳ ಕುರಿತು ಏನೆಲ್ಲ ಹೇಳಿದ್ದಾನೆ. ನನ್ನ ದೊಡ್ಡಪ್ಪನಂತೂ ನನ್ನ ಅಂಗಾಲು ಅಂಗೈಗಳ ದೊಡ್ಡ ಅಭಿಮಾನಿ. ನನ್ನ ದೂರದ ತಾಯಿಯೊಬ್ಬಳು ಹೇಳುತ್ತಿದ್ದಳು, ‘ಕೈ ಎತ್ತಿ ಮಾತನಾಡು’. ನಮ್ಮ ಕುವೆಂಪು ಹೇಳಿದ್ದು ಇದೆ ತಾನೆ, ‘ಕನ್ನಡಕ್ಕಾಗಿ ಕೈ ಎತ್ತು  ಕಲ್ಪವೃಕ್ಷವಾಗುವುದು, ಕಿರುಬೆರಳೆತ್ತಿದರೂ ಸಾಕು ಅದು ಗೋವರ್ಧನ ಗಿರಿ ಆಗುವುದು’. ಮನೆಯಲ್ಲಿ ಕೇಳುತ್ತಿದ್ದ ಭಜನ್‌ದ ಈ ಸಾಲು ನೋಡಿ, ‘ಖಾಲಿ ಹಾಥ ಆಯೆಗಾ ಖಾಲಿ ಹಾಥ ಜಾಯೆಗಾ.’ ಈ ಒಂದು ಸಾಲು ನನಗೆ ಅಲೆಗ್ಘಾಂಡರ್‌ನ ಕೈಯ ಕಥೆಯನ್ನು ನೆನಪಿಸುತ್ತದೆ. ಪ್ರಪಂಚವನ್ನು ಗೆಲ್ಲಲು ಹೊರಟ ಅಲೆಗ್ಘಾಂಡರ್ ಹಿಂದೂಖುಷ್ ಪರ್ವತಾವಳಿಗಳ ಅಕ್ಕ-ಪಕ್ಕದಲ್ಲೆಲ್ಲೊ ತೀರಿಕೊಂಡ. ತಾನು ಹೆಣವಾಗುವ ಮುಂಚೆ ತನ್ನ ಸೇವಕರಿಗೆ ಆತ ಒಂದು ಮಾತನ್ನು ಹೇಳಿದ್ದ, ತಾಯಿನಾಡಿಗೆ ನನ್ನ ಹೆಣವನ್ನು ಒಯ್ಯುವಾಗ ನನ್ನ ದೇಹವನ್ನೆಲ್ಲ ಮುಚ್ಚಿಡಿ ಪರವಾಗಿಲ್ಲ ಆದರೆ ನನ್ನ ಬಲಗೈಯನ್ನು ಮಾತ್ರ ಹಾಗೆಯೆ ಬಿಟ್ಟಿರಿ. ಈ ಪ್ರಪಂಚಕ್ಕೆ ಗೊತ್ತಾಗಲಿ ಜಗತ್ತನ್ನು ಗೆಲ್ಲಲು ಹೊರಟ ಅಲೆಗ್ಘಾಂಡರ್ ಹೋಗುವಾಗ ಖಾಲಿ ಕೈಯಿಂದ ಹೊರಟು ಹೋದ ಎಂದು. ಇದೊಂದು ಕಥೆಯಾದರೆ ರೈ ದಾಸನದು ಮತ್ತೊಂದು ಕಥೆ. ಆತ ದಾನ ಮಾಡುವಾಗ ತನ್ನ ಕೈಗಳೆಡೆಗೆ ನೋಡುತ್ತಿರಲಿಲ್ಲ. ಮಾಡಿದೆನ್ನೆನ್ನುವುದು ಮನದಲಿ ಹೊಳೆದು ಭಕ್ತಿಯ ಹದ ಕೆಡಬಾರದೆನ್ನುವುದು ಆತನ ಹಟ. ನಮ್ಮ ಪರಂಪರೆ ನಮ್ಮ ಕೈಗಳಿಗೆ ಬಹಳಷ್ಟು ಸಂಸ್ಕಾರ ನೀಡಿದೆ. ಮುಟ್ಟುವ ಕೈಗಳಲ್ಲಿ ಅಮೃತ ಧಾರೆಯಾಗದಿದ್ದರೆ ಹೆತ್ತ ಮಗುವನ್ನೂ ಮುಟ್ಟಬಾರದೆಂದು ಎಚ್ಚರಿಕೆ ನೀಡಿದ್ದರು ಹಿರಿಯರು. ನೀರಡಿಸಿ ಬರುವ ದಾರಿ ಹೋಕನ ಕೈಗಳಿಗೆ ಶುದ್ಧ ಮನಸ್ಸಿನಿಂದಲೇ ನೀರೆರೆಯಬೇಕೆಂದು ಹೇಳಿದ್ದಾರೆ. ಯಾರಿಗೆ ಗೊತ್ತು ಕೈ ಮುಂದೆ ಮಾಡಿಕೊಂಡು ನೀರು ಕುಡಿಯುವ ಆ ಮನುಷ್ಯ ಪಂಪನೇ ಆಗಿರಬಹುದು. ನಿಮ್ಮ ಶುದ್ಧ ಭಾವದ ಬಿಸುಪು ತಟ್ಟಿ-

"ನೆನಪಾಯಿತು ತಾಯೆ

ನನ್ನೂರು ನನಗೆ ಇಂದು

ನನ್ನನ್ನು ಕರೆಯುವರು

ಪಂಪನೆಂದು"

ಎಂದು ಹಾಡಿಬಿಡಬಹುದು.

ನಮ್ಮಪ್ಪ ನಮ್ಮೊಂದಿಗೆ ಸಿನಿಮಾಗಳನ್ನು ನೋಡಲಿಲ್ಲ. ತನ್ನ ಸಿನಿಮಾಗಳ ಮುಂದೆ ನಮ್ಮ ಸಿನಿಮಾಗಳು ಕಳಪೆ ಎನ್ನುವ ಸಾತ್ವಿಕ ಸೊಕ್ಕು ಅವನಿಗೆ. ಆದರೆ ಒಮ್ಮೆ ಮಾತ್ರ ನನ್ನನ್ನು ನನ್ನ ತಮ್ಮನ್ನನ್ನು ಅತ್ಯಂತ ಉತ್ಸುಕತೆಯಿಂದ ಊರ ಜಾತ್ರೆಯಲಿ ಬಂದಿದ್ದ ಶೋಲೆ ಸಿನಿಮಾಕೆ ಕರೆದುಕೊಂಡು ಹೋಗಿದ್ದ. ಅದರಲ್ಲಿ ನಮ್ಮಪ್ಪನಿಗೆ ಪೋಲಿಸ ಅಧಿಕಾರಿಯಾಗಿ ಸಂಜುಕುಮಾರ, ದರೋಡೆಕೊರ ಗಬ್ಬರ್ ಸಿಂಗ್‌ನನ್ನು ಬರೀ ಒಂದು ರಟ್ಟೆಯಲ್ಲಿ ಎಳೆದುಕೊಂಡು ಬರುವುದನ್ನು ತೋರಿಸಬೇಕಾಗಿತ್ತು. ‘ಎ ಹಾಥ ನಹೀ ಗಬ್ಬರ್ ಲೋಹೆಕೆ ಪಂಜಾ ಹೈ’ ಎನ್ನುವ ಡೈಲಾಗ್‌ನ್ನು ಕೇಳಿಸಬೇಕಾಗಿತ್ತು. ಕುಸ್ತಿಯಲ್ಲಿ ಕೈಗಳಲ್ಲಿ ಭಯಂಕರ ಶಕ್ತಿಯಿರಬೇಕೆನ್ನುವುದು ನಮ್ಮಪ್ಪನ ಪಾಠ. ಯೌವ್ವನಕ್ಕೆ ತಿರುಗುತ್ತಿದ್ದ ನಾನು ನಮ್ಮಪ್ಪನೊಂದಿಗೆ ಕುಸ್ತಿಯಾಡಿ ಆತನ ಕತ್ತನ್ನು ನನ್ನ ರಟ್ಟೆಯಲ್ಲಿ ಹಿಚ್ಚುಕಿದರೆ ಆ ಯಾತನೆಯಲ್ಲಿಯೂ ಎಷ್ಟೊಂದು ಖುಷಿ ಆತನಿಗೆ. 

ಈ ಕೈಗಳ ಕುರಿತು ನಾನೊಂದು ಕಥೆ ಕೇಳಿದ್ದೆ. ಅದು ಇಂಗ್ಲೀಷನದು. ಮೂಲ ಈಗ ಮರೆತಿದ್ದೆನೆ. ವರುಷಗಳವರೆಗೆ ಪ್ರೇಮಿಗಳಿಬ್ಬರು ಅಗಲಿದ್ದಾರೆ. ಪ್ರಿಯಕರ ಸೈನಿಕ. ಯುದ್ಧ ನಡೆದಿದೆ. ಆತನಿಗೆ ಹೆಂಡತಿಯ ಹಸಿವು. ಆದರೆ ಯುದ್ಧ. ಆಕೆಗೂ ಆತನ ಬರುವಿಕೆಯದೇ ಧ್ಯಾನ- 

"ನಿಮ್ಮ ಬರುವಿಕೆ ನಲ್ಲ 

ಎದೆಗೆ ಬೇವು-ಬೆಲ್ಲ"

ಎನ್ನುವುದೊಂದೆ ಆಕೆಯ ಕನವರಿಕೆ. ಅಂತು ಇಂತು ಯುದ್ಧ ನಿಂತಿತು. ಆತ ಹಂಬಲಿಸಿ ಊರಿಗೆ ಬಂದ. ಮನೆಗೆ ಬಂದರೆ, ಮನೆ ತುಂಬ ಜನಗಳು, ಆತನ ಪರಾಕ್ರಮದ ಗುಣಗಾನ, ವಿಜಯಕ್ಕೊಂದು ಅಭಿನಂದನೆ, ಅವರಿವರ ಕಣ್ಣೀರಿನ ಹೈ ಡ್ರಾಮಾ. ಊಹುಂ, ಆತನಿಗೆ ಇದಾವುದು ನೆಮ್ಮದಿ ನೀಡುತ್ತಿಲ್ಲ. ಆತ ಕೈಗಳಿಗಾಗಿ ಹುಡುಕಾಡುತ್ತಿದ್ದಾನೆ. ಅವಳು ಅಲ್ಲೆ ಇದ್ದಾಳೆ, ಸುಟ್ಟ ಬತ್ತಿಯ ಹಾಗೆ ಸುಮ್ಮನೆ. ವರುಷಗಳ ಬರ ಉಂಡ ಎದೆಗೆ ಪ್ರೀತಿಯ ಸಿಂಚನವಾಗಬೇಕಾಗಿದೆ. ಕೈಗೆ ಕೈ ಹೊಸೆದು ಅವರಿನ್ನೆಂದು ಅಗಲದಂತೆ ಬಾಚಿ ತಬ್ಬಿಕೊಳ್ಳಬೇಕಾಗಿದೆ. ಆದರೆ ಇದೆಲ್ಲವು ಸಂತೆಯಲ್ಲಿ ಸಾಧ್ಯವೆ? ಅವರಿಬ್ಬರು ಊರ ಹೊರಗಿನ ತೋಟಕ್ಕೆ ಹೋಗಬೇಕೆಂದು ನಿರ್ಧರಿಸಿಕೊಂಡರು, ಹೋಗಿಯೇ ಬಿಟ್ಟರು. 

ಆತ ಗದ್ದೆಯ ಬದುವಿನ ಮೇಲೆ ಕುಳಿತುಕೊಂಡ. ಆಕೆ ಆತನ ಮೊಳಕಾಲುಗಳ ಮೇಲೆ ಇಟ್ಟ ಕೈಗಳ ಮೇಲೆ ಮೊಗವಿಟ್ಟು ಅವನನ್ನೇ ದಿಟ್ಟಿಸಿದಳು. ಕೇಳಿದಳು, ನನ್ನನ್ನು ಪ್ರೀತಿಸುತ್ತೀರಾ?

ಆತ ಹೇಳಿದ ಇಲ್ಲ.

ಆಕೆಗೆ ದಿಗ್ಭ್ರಮೆ, ದಿಗಿಲು ಮತ್ತೆ ಪ್ರಶ್ನೆ, ಹಾಗಾದರೆ?

ಆತ ಉತ್ತರಿಸಿದ. ನಿನೊಂದು ಕವಿತೆ. ನನಗೆ ನಿನ್ನ ಹುಚ್ಚು.

ತಟ್ಟನೆ ಮೊಗ ಹೊರಳಿಸಿ, ಮೈ ಅರಳಿಸಿ, ಆತನ ಮೊಳಕಾಲಿಗೆ ಬೆನ್ನು ತಾಗಿಸಿ ದೂರದಲ್ಲಿ ದೃಷ್ಠಿ ನೆಟ್ಟು, ವಿರಹದ ಆ ಬೆಂಕಿಯೊಳಗೆ ತಾನು ಸಾಗಿ ಬಂದ ರೀತಿಯನ್ನು ಕಥೆಯಾಗಿಸಲಾರಂಭಿಸಿದಳು. ಎಲ್ಲ ಕೇಳುತ್ತ ಆತ ಆಕೆಯ ಹೆಳಲಿನಲ್ಲಿ ಕೈಯಾಡಿಸುತ್ತ, ಎರಡು ಜಡೆಗಳ ಎಳೆದು, ಹಾಗೆ ಆಕೆಯ ಕತ್ತು ಸವರಿ ಎರಡು ಜಡೆಗಳ ಒಂದಾಗಿಸುತ್ತ ಕಥೆ ಕೇಳುತ್ತಿದ್ದ. ಆಕೆಯದು ಮುಗಿಯಿತು. ಈತನ ಯುದ್ಧದ ಕಥೆ ಶುರುವಾಯಿತು. ಅವಳು ಕೇಳುತ್ತಾ ಹ್ಞೂಂಗುಟ್ಟುತ್ತಿದ್ದಳು. ಗಂಟೆಗಳವರೆಗೆ ಕಥೆ ಹೇಳುತ್ತಲೇ ಇದ್ದ. ಆತ ನೇವರಿಸುತ್ತಿದ್ದ ಕೈಗಳು ಆಕೆಯನ್ನು ಯುದ್ಧ ಭೂಮಿಗೆ ಕರೆದ್ಯೊಯ್ದಿದ್ದವು. ಎಲ್ಲ ಮರೆತು ಆ ಕೈಗಳ ನಂಬಿ ಆಕೆ ಹ್ಞೂಂಗುಟ್ಟುತ್ತಲೇ ಇದ್ದಳು. ಆತನ ಕಥೆ ಮುಗಿಯಿತು. ಆದರೆ ಹ್ಞೂಂಗುಟ್ಟುವ ಧ್ವನಿ ನಿಂತು ಹೋಗಿತ್ತು. ಅಯ್ಯೋ!! ಹಾಗಲ್ಲ, ಆಕೆಯ ಉಸಿರೇ ನಿಂತು ಹೋಗಿತ್ತು. ನೋಡುತ್ತಾನೆ, ಪ್ರೇಯಸಿ ಸತ್ತುಹೋಗಿದ್ದಾಳೆ. ಆತ ಹಾಕಿದ ಹೆಳಲು ಆಕೆಯ ಕತ್ತು ಬಿಗಿದು, ಸಾವನ್ನೇ ತಂದಿಟ್ಟಿದೆ. ಕೈ ಸುಖದಲ್ಲಿ ಮೈ ಮರೆತವಳು, ಮಸಣಕ್ಕೆ ಹೋಗಿದ್ದಾಳೆ. 

ಅಬ್ಬಬ್ಬಾ!!! ಈ ಕೈಗಳಲ್ಲಿ ಎಷ್ಟೊಂದು ಭಯಾನಕ ಸುಖವಿದೆಯಲ್ಲಾ! 

ನೀವು ಅಮೇರಿಕಾದ ಶ್ರೇಷ್ಠ ಕಾದಂಬರಿಕಾರ ಹೆಮಿಂಗ್ವೆಯ ‘ಫೇರವೆಲ್ ಟು ಆರ್ಮ್ಸ್’ ಓದಿದ್ದೀರಾ. ಅದು ಮತ್ತೇನು ಅಲ್ಲ ಸೂಳೆಯರ ಗಲ್ಲಿಯಲ್ಲಿ ಅಪರೂಪಕ್ಕೆ ಸಿಕ್ಕ ಸಂಗಾತಿಯೊಬ್ಬಳ ಆಕಸ್ಮಿಕ ಸಾವನ್ನು ಸ್ವೀಕರಿಸಲಾಗದ ಮನಸ್ಸೊಂದರ ತಳಮಳ. ಆಕೆಯ ಆ ಕೈಗಳಿಗೆ ವಿದಾಯ ಹೇಳಲು ಆತ ಒಪ್ಪುತ್ತಿಲ್ಲ. ಒಂದು ಕ್ಷಣ ಕಲ್ಪಿಸಿಕೊಳ್ಳಿ, ಅವೆಂಥ ಅದ್ಭುತ ಕೈಗಳಿರಬಹುದು! 

ನನ್ನ ಬಾಲ್ಯ ಶ್ರೀಶೈಲದಲ್ಲಿ ಕಳೆಯಿತು. ಹತ್ತಿಪ್ಪತ್ತು ಪೂಜಾರಿಯ ಮನೆಗಳನ್ನು ಬಿಟ್ಟರೆ, ಆಗ ಶ್ರೀಶೈಲ ನಿರ್ಜನ. ಮುಂಜಾನೆ ಮತ್ತು ಸಾಯಂಕಾಲ ದೇವಸ್ಥಾನದ ಸುತ್ತ ಎಲ್ಲ ನಲ್ಲಿಗಳ ಮುಂದೆ ವಿಚಿತ್ರ ವಿಚಿತ್ರವಾದ ಸನ್ಯಾಸಿಗಳು, ಸನ್ಯಾಸಿನಿಯರು, ಅಘೋರಿಗಳು ಸ್ನಾನ ಮಾಡುತ್ತಿದ್ದರು. ಅದೆಲ್ಲಿಂದ ಬಂದು ಮತ್ತೆ ಅದೇಲ್ಲಿ ಮಾಯವಾಗುತ್ತಿದ್ದರೊ. ಇದೆಲ್ಲ ಬಿಡಿ. ನಾನು ಹೇಳಬೇಕಾದುದು ಅವರು ತಮ್ಮ ಕೈಗಳಿಗೆ ಬೂದಿ ಬಳೆದುಕೊಳ್ಳುವುದನ್ನು ಕುರಿತು. ಒಬ್ಬ ಸನ್ಯಾಸಿಯಂತೂ ತನ್ನ ತಲೆಯನ್ನೂ ನೆಲಕ್ಕೆ ತಾಗಿಸದೇ ಎರಡೂ ಕೈಗಳ ಮೇಲೆ ಕಾಲು ಮೇಲೆ ಮಾಡಿ ನಿಂತು ಬಿಡುತ್ತಿದ್ದ. ಸಾಯಂಕಾಲವಾಗುತ್ತಲೇ ಆ ಮಂದ ಕತ್ತಲೆಯಲ್ಲಿ ತಾಯಿ ಕಾರುಣ್ಯದ ಒಬ್ಬ ಸನ್ಯಾಸಿ ಬರುತ್ತಿದ್ದ. ಆತನ ಕೈಯಲ್ಲಿ ಒಂದು ಬಿಕ್ಷಾ ಪಾತ್ರೆ, ದೊಡ್ಡದೊಂದು ವಿಭೂತಿ ಉಂಡೆ ಬಿಟ್ಟರೆ ಮತ್ತೇನೂ ಇರುತ್ತಿರಲಿಲ್ಲ. ಅಂದಹಾಗೆ ಅವನನ್ನು ನಾವೆಲ್ಲ ವಿಭೂತಿ ಮುತ್ಯಾ ಅಂತಲೆ ಕರೆಯುತ್ತಿದ್ದೇವು. ಆತನ ಮುಖ ಸ್ಪಷ್ಟವಾಗಿ ನೆನಪಿಲ್ಲ ನನಗೆ. ಆದರೆ ಅವನ ಆ ಕೈಗಳನ್ನು ಮರೆಯುವುದಾಗಿಲ್ಲ. ನಾವು ಹಾಕುವ ಬಿಕ್ಷೆಯನ್ನು ಮುಗುಳ್ನಗುತ್ತಾ ಪ್ರೀತಿಯಿಂದ ಸ್ವೀಕರಿಸಿ, ತನ್ನ ಮೂರು ಬೆರಳಿಗೂ ವಿಭೂತಿಯನ್ನು ಸವರಿ ನಮ್ಮ ಹಣೆಗಿಟ್ಟು ನೆತ್ತಿಯಿಂದ ಬೆನ್ನಿನವರೆಗೂ ಕೈಯಾಡಿಸಿದರೆ ಅಬ್ಬಾ! ಎಂಥ ಸುಖವೆನಿಸುತ್ತಿತ್ತು. ಅದ್ಯಾವುದೋ ಶಕ್ತಿ ಸಾಗರ ನಮ್ಮ ಮೈಯೊಳಗೆ ಧುಮಿಕ್ಕಿ ಹರಿದಂತೆ ಭಾಸವಾಗುತ್ತಿತ್ತು. ಅಂಥ ತಾಕತ್ತಿನ ಕೈ, ಈ ನನ್ನ ತಲೆಯ ಮೇಲೆ ಅದ್ಯಾವ ಸನ್ಯಾಸಿಯೂ ಇಡಲಿಲ್ಲ.

ನಾನು ಚಿಕ್ಕವನಿದ್ದೆ. ಯಾರದೋ ಮದುವೆಗೆ ಹೊರಟಿದ್ದೇವು. ದನಗಳನ್ನು ತುಂಬುವ ಟ್ರಕ್ಕಿನಲ್ಲಿ ಮನುಷ್ಯರನ್ನು ಕೂಡ್ರಿಸಿ ಮೇಲೆ ಹೊದಿಸಿ, ಪೋಲಿಸರ ಕಣ್ ತಪ್ಪಿಸಿ, ದಿಬ್ಬಣಕ್ಕೆ ಹೋಗುವುದು ಆಗ ಸಾಮಾನ್ಯ. ನನಗೆ ಸ್ವಲ್ಪ ನಿದ್ರೆಯ ಮಂಪರು. ಯಾರೋ ಎಳೆದು ತೊಡೆಯ ಮೇಲೆ ಹಾಕಿಕೊಂಡತಾಯಿತು. ನಾನು ಮಲಗಿದೆ. ಆ ತಾಯಿ ನನ್ನ ತಲೆ ಸವರುತ್ತಲೇ ಇದ್ದಳು. ಅದೆಷ್ಟು ಗಂಟೆ ಹಾಗೆ ನಡೆಯಿತೋ. ನಸುಕಿನ ಜಾವ ನಾನೆದ್ದು ನೋಡಿದರೆ, ಅವಳಿರಲಿಲ್ಲ. ಆದರೆ ಇಂದಿಗೂ ಆಕೆಯ ಆ ಕೈ ಅನುಭವವನ್ನು ನನಗೆ ಮರೆಯುವದಾಗಿಲ್ಲ. ನಮ್ಮೂರಲ್ಲೊಂದು ಅಜ್ಜಿ ಇತ್ತು. ಅಯ್ಯೋ, ನನ್ನ ಪಾಲಿಗಂತೂ ಅಜ್ಜಿಯರ ದೊಡ್ಡ ದಂಡೇ ಇತ್ತು. ಒಬ್ಬ ಅಜ್ಜಿಗೆ ಆರು ಬೆರಳುಗಳ ಒಂದು ಕೈ ಇತ್ತು. ಮುಪ್ಪಾದಂತೆ ಸೊಟ್ಟಾದ ತನ್ನ ಕೈಯಿಂದ ನಮ್ಮ ಬಾಯಿ ಒರೆಸುವಾಗ, ನನ್ನ ಕಣ್ಣು ಆ ಆರನೆಯ ಬೆರಳಿನ ಮೇಲೆ ಇರುತ್ತಿತ್ತು. ಅದೆಂಥ ನೆರಳಿನ ಕೈ ಎನ್ನುತ್ತೀರಿ, ಈಗಲೂ ನನ್ನ ಮೈತುಂಬಾ ಮಾತನಾಡುತ್ತದೆ. ಇಂಥ ಕೆಲವು ಕೈಗಳು ಕೊನೆಯುಸಿರೆಳೆದಾಗ ನಾನು ಬಹಳ ನೊಂದಿದ್ದೇನೆ. ಹೆಚ್ಚು ಕಡಿಮೆ ಊರ ಎಲ್ಲ ಹುಡುಗಿಯರ ಹೆರಿಗೆಯನ್ನು ತನ್ನ ಕೈಯಿಂದಲೇ ಮಾಡಿ, ಪ್ರತಿ ಕೂಸಿಗೂ ಹಚ್ಚಡ ಹೊದಿಸಿದ ಅಜ್ಜಿಯಂದಿರ ಕೈಗೆ ಶುಗರ್ ಆಗಿ ಕತ್ತರಿಸಬೇಕಾದ ಸಂದರ್ಭ ಬಂದಾಗ ಆಕಾಶವೇ ಕಳಚಿಬಿದ್ದ ಕಷ್ಟ ಅನುಭವಿಸಿದ್ದೇನೆ. ಈ ಪ್ರಪಂಚದಲ್ಲಿ ಏನಾದರೂ ಆಗಲಿ ಇಂಥ ಕೈಗಳಿಗೆ ರೋಗ ಬರಬಾರದು ದೇವರೇ! ಮದರ್ ಥೇರೆಸಾ ಅವರ ಕೈಗಳ ಬಗ್ಗೆ ನಾನು ಎಷ್ಟೊಂದು ಓದಿದ್ದೇನೆ. ಇಡೀ ಪ್ರಪಂಚವನ್ನೇ ಎತ್ತುವ ಶಕ್ತಿ ಆ ಕೈಗಳಿಗೆ. 

ಈಗ ಕಾಲ ಬದಲಾಗಿದೆ. ಮೇಹೆಫಿಲ್‌ಗಳು ಸತ್ತು ಹೋಗಿವೆ. ಅದರೊಂದಿಗೆ ಕೈಗಳೂ ಸತ್ತು ಹೋಗಿವೆ. ನಮ್ಮ ಮೇಹೆಫಿಲ್ ಇತಿಹಾಸದ ಸೂಳೆಯರ ಕೈಗಳು ನಮ್ಮ ಮಧ್ಯದ ಸಂತ, ರಾಜಕಾರಣಿ, ಚಿಂತಕನಿಗಿಂತಲೂ ಅರ್ಥಪೂರ್ಣ ಕೆಲಸಗಳನ್ನು ಮಾಡಿವೆ. ರಸವತ್ತಾದದ್ದನ್ನು ಕಟ್ಟಿಕೊಟ್ಟಿವೆ. ಬದುಕನ್ನು ಜೀವಂತವಾಗಿಟ್ಟಿವೆ. ಗಾಲಿಬ್, ಖಯಾಮ್, ಹಾಲಿ, ಹರೀವಂಶರಾಯ್, ನೆಪಕ್ಕಾಗಿ ಕೆಲವು ಹೆಸರುಗಳು ಮಾತ್ರ. ಆದರೆ ಇಡೀ ಕಾವ್ಯವನ್ನು ಕಟ್ಟಿಕೊಟ್ಟದ್ದೆ, ನಮ್ಮೊಳಗೊಂದು ವಿದ್ರೋಹದ ಬೆಂಕಿಯನ್ನು ಹೊತ್ತಿಸಿದ್ದೇ, ನಮ್ಮ ಗ್ಲಾಸುಗಳಿಗೆ ಸೇರೆಯನ್ನು ಸುರಿಯುತ್ತ ಪ್ರಪಂಚವನ್ನು ಇಂಚು ಇಂಚಾಗಿ ಅನುಭವಿಸುವ ಪಾಠ ಕಲಿಸಿದ್ದೇ ಈ ಸಾಕಿಯರ ಕೈಗಳು. ಏನಾದರೂ ಸರಿ, ಈ ಕೈಗಳು ಮಾತ್ರ ಸಾಯಬಾರದು. 

ನನಗಂತೂ ಹೀಗನ್ನಿಸಿದೆ. ನನ್ನ ಮಕ್ಕಳಿಗೆ ನಾನೇನನ್ನೂ ಕೊಡಲಾಗದಿದ್ದರೂ ಚಿಂತೆ ಇಲ್ಲ. ಇಂಥ ಕೈಗಳ ಆಸರೆ ಮಾತ್ರ ತಪ್ಪಿಸಬಾರದು. ಒಂದೊಂದು ಕೈಗೂ ಸಾವಿರ ವರ್ಷದ ತಪಸ್ಸಿದೆ. ಈ ದೇಶದ ಮಂದಿರ, ಮಸೀದಿ, ಇಗರ್ಜಿ, ಚರ್ಚು, ಸಮಾಧಿಗಳಲ್ಲಿ ಮತ್ತು ಅವುಗಳ ಮುಂದೆ ನಿಂತ ಕೈಗಳಿಗೆ ತಲೆಬಾಗಿ ಕೈ ಸಾವರಿಸಿಕೊಂಡು ಒಂದಿಷ್ಟು ಮಣ್ಣು ಹಣೆಗೆ ಒತ್ತಿಕೊಂಡರೂ ಸಾಕು, ನನ್ನ ಸಂತಾನ ದೇಶದ್ರೋಹಕ್ಕೆ ಸಾಕ್ಷಿಯಾಗುವುದಿಲ್ಲ. ಕರುಣಾಳು ಕೈಗಳು ನಡೆಯಿಸುವ ರೀತಿಯೇ ಅದು. ಈ ಬದುಕಿನಲ್ಲಿ ಕೈ ತೊಳೆಯುವುದು ಅನಿವಾರ್ಯ, ಆದರೆ ಕೈ ತೊಡೆಯುವುದು ತುಂಬಲಾರದ ಹಾನಿ.  




No comments:

Post a Comment