“Oh!
lightly, lightly tread!
A holy thing is sleep,
on the
worm spirit shed
And
eyes that wake to weep.’’
- Mrs
Hemans
ಕವಿ ಇ. ಬಿ. ಬ್ರೌನಿಂಗ್ ಬರೆದ ಪದ್ಯವೊಂದನ್ನೂ
ನಾನು ಬಹಳ ಹಿಂದೆ ಕನ್ನಡಿಸಿದ್ದೆ. ಪ್ರಿಯ ಗೆಳತಿಯನ್ನು ಮುಂದೆ ಕೂಡ್ರಿಸಿಕೊಂಡು, ಕಣ್ಣಲ್ಲಿ ಕಣ್ಣಿಟ್ಟು,
ತನ್ನ ಬಿಸಿಯುಸಿರ ಆಕೆಯ ಕೆನ್ನೆ ತಾಗಿಸುತ್ತ, ಆಕೆಯ ಕಿವಿಗಳಲ್ಲಿ ಪಿಸುಗುಡುತ್ತಾನೆ-
ನಾ ಹೇಗೆ ಪ್ರೀತಿಸಲಿ ನಿನ್ನ
ಎಣಿಸಬಿಡು ದಾರಿಗಳ ಚಿನ್ನ............
ನಾ ನಿನ್ನ ಪ್ರೀತಿಸುವೆ
ನನ್ನ ಮುಪ್ಪಿನ ಅಳಲು, ಬಾಲ್ಯದ ಬಳಲು
ಯೌವ್ವನದ ಹುಚ್ಚು ಕನಸುಗಳೊಂದಿಗೆ,
ನಾ ನಿನ್ನ ಪ್ರೀತಿಸುವ ಪ್ರೀತಿಯೊಂದಿಗೆ
ಬಿಡುವ ನನ್ನ ಆತ್ಮದ ಕೊನೆಯುಸಿರಿನೊಂದಿಗೆ
ನಾ ನಿನ್ನ ಪ್ರೀತಿಸುವೆ ಸಾವಿನಾಚೆಯೂ ಚಿನ್ನ
ಬದುಕಲ್ಲಿ ಪ್ರೀತಿಸಿದಕ್ಕಿಂತ ನಿನ್ನ.............
![]() |
K A Abbas |
ಈ ಮೇಲಿನ ಪದ್ಯ ಓದಿದಂತೆ, Earnest
Hemingway ಯ “Farewell to Arms” ಕಾದಂಬರಿ ಹಾಗೂ ಅದರೊಳಗಿನ ನಾಯಕ ಮತ್ತು ನಾಯಕಿಯ ಅನನ್ಯ ಪ್ರೀತಿಯ ಕುರಿತು ಓದಿದಾಗಲೆಲ್ಲ
ನನಗೆ ನೆನಪಾದುದು ಅಬ್ಬಾಸರ ದಾಂಪತ್ಯದ ಪುಟಗಳು. ಈ ಫಕೀರ ಬೆಳ್ಳಿ ಪರದೆಯ ಮೇಲೆ ಬೆಳಕು ಹೊತ್ತಿಸುವಂತೆ
ಮಾಡಿದವಳೆ ಅವರ ಪ್ರೀತಿಯ ಪತ್ನಿ ಮುಜ್ಜಿ, ಅಲಿಯಾಸ್ ಮುಜತಾಬಾಯಿ ಖಾತೂನ್. ಮುಜ್ಜಿಯ ಬಗೆಗೆ ಬರೆಯದೇ
ಹೋದಲ್ಲಿ ಅಬ್ಬಾಸರ ಸಿನಿಮಾ ಗಾಥೆ ಅಪೂರ್ಣ ಎನ್ನಿಸಿದೆ ನನಗೆ. ಯಾಕೆಂದರೆ ಈ ಮುಜ್ಜಿಯೇ ಅಬ್ಬಾಸರಿಗೆ
“ಡಾಕ್ಟರ್ ಕೊಟ್ನಿಸ್ ಕಿ ಅಮರ್ ಕಹಾನಿ” ಚಿತ್ರಕ್ಕೆ ಕಥೆ ಆಯ್ದುಕೊಟ್ಟವಳು.
![]() |
Dr.Kotnis ki amar Kahani |
ಅಬ್ಬಾಸ್ ಬಹುಪಾಲು ಚಿತ್ರಗಳ ಚಿತ್ರೀಕರಣ ಸಂದರ್ಭದಲ್ಲಿ ಸೆಟ್ ಮೇಲಿನ ಕಲಾವಿದರಿಗೆಲ್ಲ ಊಟ ಬಡಿಸಿ ಅನ್ನಪೂರ್ಣೆಯಾದವಳು. “ನೀವೆಂದಿಗೂ ಸ್ಟಾರ್‌ಗಳನ್ನು ಹಾಕಿಕೊಂಡು ಸಿನಿಮಾ ಮಾಡಬಾರದು, ಬದಲಾಗಿ ನಿಮ್ಮಿಂದ ಸ್ಟಾರ್‌ಗಳು ಹುಟ್ಟಬೇಕು” ಎಂದು ಅಬ್ಬಾಸರನ್ನೇ ನಿರ್ದೇಶಿಸಿದವಳು ಈ ಮುಜ್ಜಿ. ಈಕೆ ದಾಸಿಯಾಗಿ ಬಂದಳು. ದಾಸಿಯಂತೆಯೇ ಬದುಕಿದಳು ಆದರೂ ಅಬ್ಬಾಸರ ಜೀವನ ಪುಟಗಳಲ್ಲಿ ಮಾತ್ರ ದೇವತೆಯಂತೆ, ತಾಯಿಯಂತೆ, ಕತ್ತಲಲ್ಲಿ ದಾರಿ ತೋರಿದ ಬೆಳಕಿನಂತೆ ಚಿತ್ರಿಸಲ್ಪಟ್ಟ್ಟಿದ್ದಾಳೆ.ಹಾಗಂತ ಇವಳೇನು ಬಹಳ ದೊಡ್ಡ ಹಿನ್ನೆಲೆಯಿಂದ ಬಂದವಳು ಎಂದುಕೊಳ್ಳಬೇಡಿ. ಆಕೆಯ ಹಿನ್ನಲೆ ಮಾನವ ಮೌಲ್ಯಗಳ ಓದಿನ ಸಹನೆಯ ಸಂಸ್ಕಾರವಷ್ಟೆ. ಸಾಧಾರಣ ಸುಂದರಿ, ಅತೀ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಬಂದಿತ್ತು. ಈಕೆಯ ಅಕ್ಕನನ್ನು ನೋಡಿ ಹುಚ್ಚರಾಗಿದ್ದ ಅಬ್ಬಾಸ ಅವಳನ್ನು ಮದುವೆಯಾಗಬೇಕು ಅಂದುಕೊಂಡವರು. ಅವಳ ಮದುವೆಯಾಯಿತು ಎಂದು ಕೇಳಿದಾಗ ಅಬ್ಬಾಸ್ ಒಳಗೊಳಗೇ ಕಣ್ಣೀರು ಸುರಿಸಿದ್ದರು. ಮುಜ್ಜಿಯ ತಂದೆ ಪೋಲೀಸ್ ಅಧಿಕಾರಿ. ಆದರೆ ಹೆಸರಿಗಷ್ಟೆ. ನಡು ಯೌವ್ವನದಲ್ಲಿಯೇ ಈ ಎರಡು ಹೆಣ್ಣು ಮಕ್ಕಳ ಜನನದ ನಂತರ ಹೆಂಡತಿಯನ್ನು ಕಳೆದುಕೊಂಡು ವಿಧುರನಾದ ಈ ಮನುಷ್ಯ ಸದಾ ಸೂಫಿ ಹಾಗೂ ಹಿಂದೂ ಯೋಗಿಗಳ ಸಂಪರ್ಕದಲ್ಲಿದ್ದ. ಇಡೀ ಬದುಕನ್ನು ಯೋಗ ರಹಸ್ಯವನ್ನು ಅರಿಯುವಲ್ಲಿ ಕಳೆದುಬಿಟ್ಟ.
ಸೇವೆ ಮುಜತಾಬಾಯಿಯ ಭಾಷೆಯಾಗಿತ್ತು. ಈ ಸೇವೆಯ ಅಬ್ಬಾಸರು ಈಕೆಯತ್ತ ಆಕರ್ಷಣೆಗೊಳ್ಳಲು ಕಾರಣವಾಗಿತ್ತು. ಅಬ್ಬಾಸರ ತಂದೆ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಾಗ ಸೇವೆ ಮಾಡಿ ಮೌನ ಕ್ರಾಂತಿಯನ್ನೇ ಮಾಡಿದಳು. ಈಗಷ್ಟೇ ಆಕೆ ಅಲಿಘರ್ ಗರ್ಲ್ಸ್ ಕಾಲೇಜಿನ ಪಿ.ಯು.ಸಿ.ಯ ಷೋಡಶಿ ಈಕೆಯೊಂದಿಗೆ ಮದುವೆಯಾದಾಗ ಅಬ್ಬಾಸರಿಗೆ ೨೮ ವರ್ಷ. ಮುಜ್ಜಿಗೆ ೧೮ ವರ್ಷಗಳಷ್ಟೆ. ಮುಜ್ಜಿ ಅಲೀಘರ್ ವಿಶ್ವವಿದ್ಯಾಲಯದಿಂದ ಬಿ.ಎ. ಪಡೆದ ಪ್ರಗತಿಶೀಲ ಮುಸ್ಲಿಂ ಮಹಿಳೆ. ಆಗಲೇ ಹೇಳಿದೆನಲ್ಲ ಮುಜ್ಜಿ ಶ್ವೇತ ಸುಂದರಿಯಾಗಿರಲಿಲ್ಲ. ಸದಾ ಕನ್ನಡಕ, ಕೈ ಮೇಲೊಂದು ಕಪ್ಪು ಕಲೆ, ಕೃಷದೇಹ. ಆದರೆ ಶಿಕ್ಷಣವೇ ಅವಳ ಸೌಂದರ್ಯವಾಗಿತ್ತು. ಇಂಥ ಹುಡುಗಿಗೆ ಅಬ್ಬಾಸ್ ಮದುವೆಗೂ ಮುಂಚೆ ಪತ್ರ ಬರೆದು ಹೀಗೆ ಹೇಳಿದ್ದರು- “ಆದಾಗ್ಯೂ ನಾನು ನಿನ್ನನ್ನು ಈ ಬದುಕಿನಲ್ಲಿ ನನ್ನ ಸಾಹಸಗಳ, ಸೋಲು-ಗೆಲುವುಗಳ, ಸುಖ-ದುಃಖಗಳ ಸಂಗಾತಿಯಾಗಿ ಬರುವಿಯಾದರೆ ಬಂದುಬಿಡು ಎಂದು ಆಮಂತ್ರಿಸುತ್ತೇನೆ” ಎಂದು ಬರೆದಿದ್ದರು. ವಾರದ ನಂತರ ಉತ್ತರ ಬಂದಿತು- “ಒಪ್ಪಿದ್ದೇನೆ, ಇದೇ ತಾನೆ ಜೀವನ, ಇದೇ ಇದೇ ಅಲ್ಲವೆ ನಾನು ಬಯಸಿದ್ದು. ಆದರೆ ನಾನು ಸ್ವಾವಲಂಭಿ ಹಾಗೂ ಸಮಾನಳಾಗಿರಬೇಕೆಂಬ ನನ್ನ ಹಕ್ಕನ್ನು ನಾನು ಪ್ರತಿಪಾದಿಸುತ್ತೇನೆ” ಎಂದು ಬರೆದಳು. ಮದುವೆಯಾಗಿ ಮುಜ್ಜಿ ದೆಹಲಿಯಿಂದ ಬೊಂಬಾಯಿಗೆಬರುತ್ತ ಟ್ರೇನಿನಲ್ಲಿ ಬುರ್ಖಾ ಕಿತ್ತಿಸೆದವಳು ಇನ್ನೆಂದೂ ತೊಡಲಿಲ್ಲ. ಬೊಂಬಾಯಿಯ ವಿಕ್ಟೋರಿಯಾ ಗಾರ್ಡನ್ ಬಳಿಯ ಅಬ್ಬಾಸರು ಆನಂತರ ಎಂಬತ್ತು ರೂಪಾಯಿಯ ಬಾಡಿಗೆ ನೀಡಿ ಶಿವಾಜಿ ಪಾರ್ಕ್ ಬಳಿ ದೊಡ್ಡಮನೆ ಮಾಡಿದರು. ಬಾಡಿಗೆ ಬಹಳವಾಯಿತು ಎಂದು ಅಬ್ಬಾಸ್ ಚಿಂತಿತರಾದಾಗ ಮುಸಿನಕ್ಕು ಮುಜ್ಜಿ ಹೇಳಿದರು “ನಾನಿದ್ದೇನೆ, ಸಾಧ್ಯವಾದರೆ ಯಾವುದಾದರೂ ನೌಕರಿ ಮಾಡುತ್ತೇನೆ, ಚಿಂತೆ ಮಾತ್ರ ಬೇಡ” ಎಂದಳು. ಈಗ ಅಬ್ಬಾಸ್ Indian Peoples Theatre Association ಗಾಗಿ “ಜುಬೈದಾ” ನಾಟಕ ಬರೆಯುತ್ತಿದ್ದರು. ಪದೇ ಪದೇ ಚಹ ಕುಡಿದರೆ ಪಿತ್ತವಾದೀತು ಎಂದು ಮುಜ್ಜಿ ಲೆಮನ್ ಚಹಾದ ಮಗ್ಗ್ ಹಿಡಿದುಕೊಂಡೇ ಕುಳಿತಿರುತ್ತಿದ್ದರು.
ಹೀಗಿತ್ತು ಅಬ್ಬಾಸರ ಸಂಸಾರ. ಅವರಿಗೆ ಮಕ್ಕಳಾಗಿರಲಿಲ್ಲ. ಆದರೆ ಅವರಂತೆ ಉದ್ಯೋಗ ಅರಸುತ್ತ ಬಂದ ದೇವಾನಂದ, ಇಂದರ್ ರಾಜ್ ಆನಂದ ಹಾಗೂ ಇತರರಿಗೆ ಅದೇ ಮನೆಯಲ್ಲಿ ಇಟ್ಟುಕೊಂಡು ಬೆಳೆಸು ಭಾಗ್ಯ ಮುಜ್ಜಿಯ ಹಣೆಬರಹದಲ್ಲಿ ಇತ್ತಲ್ಲ. ಹೀಗೆ ಮುಜ್ಜಿ ಎಂದರೆ ಪ್ರೀತಿ, ಸಾಯಂಕಾಲದ ವಾಯು ವಿಹಾರ, ಸಿನಿಮಾ, ಮಾತು ಮತ್ತು ಕಾಡುವ ಮೌನ, ಸುಮ್ಮಾನ.
![]() |
K A Abbas- Pardesi |
ಅಬ್ಬಾಸರ “ಪರದೇಶಿ” ಮುಗಿಯುವುದರೊಳಗಾಗಿ ಮುಜ್ಜಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯೊಂದು ಉಲ್ಭಣಿಸಿತು. ಹೀಗಾಗಿ ಅಬ್ಬಾಸ್ ಆಕೆಯ ಆರೈಕೆ ಮಾಡುತ್ತ ನಾಲ್ಕು ತಿಂಗಳು ಮಾಸ್ಕೋದಲ್ಲಿ ಉಳಿಯಬೇಕಾಗಿದ್ದರೂ ಅವಳೊಬ್ಬಳನ್ನೇ ಬಿಟ್ಟು ಭಾರತಕ್ಕೆ ಬಂದರು. ಪ್ರತಿಕ್ಷಣವೂ ವಿರಹದ ದೀರ್ಘ ಪ್ರವಾಸ. ನಾಲ್ಕು ತಿಂಗಳ ನಂತರ ಅವಳಿಗಾಗಿ ಕಾಯುತ್ತ ಗಾಲಿ ಖುರ್ಚಿಯನ್ನು ಹಿಡಿದುಕೊಂಡು ಅಬ್ಬಾಸ್ ಬಾಂಬೆ ಏರ್‌ಪೋರ್ಟ್‌ನಲ್ಲಿ ನಿಂತರು. ಮುಜ್ಜಿ ಬಂದಳು. ಆದರೆ ಪ್ರೇತಕಳೆ ಆಗಲೇ ಆಕೆಯ ಮುಖವನ್ನು ಆವರಿಸಿತ್ತು. ಜೋರಾಗಿ ನಗಲು ಯತ್ನಿಸಿದಳು. ಆದರೆ ಅಬ್ಬಾಸ್‌ರನ್ನು ತಬ್ಬಿ ಮೌನವಾದಳು. ಅಬ್ಬಾಸ್ ಮಾತ್ರ ಕಣ್ಣೀರ ಹೊಳೆಯಲ್ಲಿ ಕೈ ತಪ್ಪಿದ ಕೂಸಾದರು. ಮುಜ್ಜಿ ಅಬ್ಬಾಸ್‌ರನ್ನು ಸಮಾಧಾನಿಸುತ್ತ, ಗಾಲಿಖುರ್ಚಿಯನ್ನು ಧಿಕ್ಕರಿಸಿ ನಡೆಯುತ್ತ ಹೊರಬಂದರು.ಮುಜ್ಜಿಯ ಹೃದಯಕ್ಕೆ ರಕ್ತ ಪೂರೈಸುವ ಒಂದು ಮುಖ್ಯ ರಕ್ತನಾಳ ದಿನೆ ದಿನೆ ಸಂಕುಚಿತವಾಗುತ್ತ ಹೊರಟಿತ್ತು. ಸರಿಯಾಗಿ ರಕ್ತ ಸಂಚಲನವಾಗದೆ ಮುಜ್ಜಿ ದಿನೇ ದಿನೇ ಕರಗಿದ ಹಿಮಗಡ್ಡೆಯಾಗಲಾರಂಭಿಸಿದ್ದಳು. ಮಾತೂ ಬೇಸರವಾಗಲಾರಂಭಿಸಿತ್ತು ಆಕೆಗೆ. ಈಗ ಆಕೆಯ ವಯಸ್ಸು ಮೂವತ್ತೈದರ ಆಸುಪಾಸು ಅಷ್ಟೆ. ಮುಜ್ಜಿ ಪ್ರಯಾಸದೊಂದಿಗೆ ಮಾತಿಗಿಳಿದರು-
![]() |
K A Abbas- Char dil Char Rahen |
ಚಿತ್ರದ ಕೊನೆಯ ಭಾಗ. ರಾಜಕಪೂರ್ ಎತ್ತಿನ ಬಂಡಿಯಲ್ಲಿ ಹಾಡುತ್ತ ಸಾಗುವ ಒಂದು ದೃಶ್ಯ. ಈಗ ಷೂಟಿಂಗ್ ಬಾಂಬೆಯಿಂದ ಎಪ್ಪತ್ತು ಕಿಲೋಮೀಟರ್ ದೂರದ ಇಗತಾಪುರಿ ಎಂಬ ಹಳ್ಳಿಯಲ್ಲಿ. ಮುಜ್ಜಿ ಕೆಮ್ಮ ಆಸ್ಪತ್ರೆಯಲ್ಲಿ. ಅಬ್ಬಾಸ್ ನಿತ್ಯವೂ ಷೂಟಿಂಗ್ ಸ್ಪಾಟ್‌ದಿಂದ ಬಂದು ಮುಜ್ಜಿಗೆ ವರದಿ ಒಪ್ಪಿಸಬೇಕು. ಇಂದರ್ ಹಾಗೂ ಟೀನೂ ಆನಂದ, ಶ್ಯಾಂ ಹಾಗೂ ವ್ಹಿ. ಪಿ. ಸಾಠೆ ದಿನಾಲು ಆಕೆಯೊಂದಿಗೆ ಮಾತಾಡಲೇಬೇಕು. ಇದು ಒತ್ತಾಯವಲ್ಲ ಅನುರೋಧ. ಅಬ್ಬಾಸ್ ಪ್ರತಿ ಸಾಯಂಕಾಲವೂ ಹೇಳಬೇಕು- “ನೀನು ಮಗುವಂತೆ ಮಲಗು”
ಅತ್ಯಂತ ಸೂಕ್ಷ್ಮವಾಗಿದ್ದರೂ ಕೂಡಾ ಆಪರೇಷನ್ ಯಶಸ್ವಿಯಾಯಿತು. ಈ ಮಧ್ಯೆ ತಾನು ಆಪರೇಶನ್ ಬೆಡ್ ಮೇಲಿರುವಾಗ ತನಗಾಗಿ ಒಂದು ಪತ್ರ ಬರೆದುಕೊಂಡು ಬರಲು ಮುಜ್ಜಿ ಅಬ್ಬಾಸರಿಗೆ ಅನುರೋಧಿಸಿದ್ದಳು. ಬದುಕುಳಿದರೆ ಮೊದಲಿಗೆ ಅದನ್ನೇ ಓದುವ ಆಸೆ ಆಕೆಗೆ. ಅಬ್ಬಾಸ್ ಬರೆದಿದ್ದರು. “ಮುಜ್ಜಿ ನನ್ನ ಮಗುವೆ ನೀನು ಬದುಕಲೇ ಬೇಕು." You must live, live, LIVE!" ಅಬ್ಬಾಸ್ ಪತ್ರದೊಂದಿಗೆ ಓಡೋಡಿ ಬಂದರು. ಮುಜ್ಜಿಯನ್ನು ಬಿಗಿದಪ್ಪಿದರು. ಮತ್ತೆ ಆ ಬಾಹುಬಂಧನ ಸಡಿಲಾಗುವವರೆಗೆ. ಮುಜ್ಜಿ ಪತ್ರ ಓದಿ ಹೇಳಿದಳು. “Thank you for telling such beautiful lies, But I needed them.”
No comments:
Post a Comment